ನಮ್ಮ ಜೀವನದಲ್ಲಿ ನಾವು ಎಷ್ಟೊಂದು ಕೆಲಸ ಮಾಡುತ್ತೇವೆ, ಎಷ್ಟೊಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಅಲ್ಲವೇ ? ಕೆಲವೊಮ್ಮೆ ಇಂತಹ ಕೆಲಸಗಳು ಅಥವಾ ನಿರ್ಧಾರಗಳು ನಮ್ಮದಾಗಿರುವುದಿಲ್ಲ . ಯಾವುದೊ ಕಟ್ಟುಪಾಡಿಗಾಗಿ ಅಥವಾ ಸಂಧರ್ಭದ ಒತ್ತಾಯಕ್ಕೆ ನಾವು ಆ ಕೆಲಸ ಮಾಡಿರುವ ಸಾಧ್ಯತೆ ಇರುತ್ತದೆ . ಕೆಲವೊಂದು ನಿರ್ಧಾರಗಳು ನಮ್ಮ ಮನಸ್ಸಿಗೆ ಒಪ್ಪಿಗೆಯಾಗದಿದ್ದರೂ ಅದಕ್ಕೆ ನಮ್ಮ ಒಪ್ಪಿಗೆಯ ಮುದ್ರೆಯಂತೂ ಬಿದ್ದಿರುತ್ತದೆ . ನಾವೆಷ್ಟೇ ನಿಯಮಬದ್ದರಾದರೂ ಜೀವನದಲ್ಲಿ ಒಂದಲ್ಲ ಒಂದು ಬಾರಿ ಹೀಗೆ ‘ ನಮ್ಮದಲ್ಲದ ‘ ನಡವಳಿಕೆ ನಮ್ಮಿಂದಲೇ ಆಗಿ ಹೋಗಿರುತ್ತದೆ . ಇದರಿಂದ ಆಗುವ ಪರಿಣಾಮ ಒಳಿತಾಗಿದ್ದರೆ ಅದರಿಂದ ಕೆಡುಕಿಲ್ಲ ಅಕಸ್ಮಾತ್ ಇಂತಹ ಘಟನೆಗಳಿಂದ ಆಗುವ ಪರಿಣಾಮ ಕೆಡುಕಿನದಾಗಿದ್ದರೆ ಮಾತ್ರ ಮುಗಿಯಿತು . ! ನಮ್ಮೊಂದಿಗೆ ನಮ್ಮ ಆ ನಡವಳಿಕೆಗೆ ಅಪರೋಕ್ಷವಾಗಿ ಜೊತೆ ನೀಡಿದ್ದ ನಮ್ಮವರು ಮಾತ್ರ ಅಲ್ಲಿಂದ ಮಾಯವಾಗಿರುತ್ತಾರೆ . ಇಂತಹ ಸನ್ನಿವೇಶಗಳನ್ನ ನಮ್ಮ ಹಿರಿಯರು ಅನುಭವಿಸಿದ್ದರು ಮತ್ತು ತಮ್ಮಿಂದಾದ ತಪ್ಪು ನಮ್ಮ ನಂತರದ ತಲೆಮಾರು ಮಾಡದಿರಲಿ ಎನ್ನುವ ಉದ್ದೇಶದಿಂದ ‘ ನಿಮ್ಮ ನಿರ್ಧಾರಗಳಿಗೆ ಅಥವಾ ನಿಮ್ಮ ಕಾರ್ಯಕ್ಕೆ ನೀವೇ ಹೊಣೆಗಾರರು ‘ ಎನ್ನುವುದನ್ನ ಅವರವರ ತಲೆಗೆ ಅವರವರದೇ ಕೈ ಎಂದರು .
ಸುಖದ ವಿಷಯ ಬೇರೆ ಕಷ್ಟದ ವಿಷಯದಲ್ಲಿ ಮಾತ್ರ ಅವರವರ ತಲೆಗೆ ಅವರವರದೇ ಕೈ ಹೆಚ್ಚು ಹೊಂದುತ್ತದೆ . ಮಾಡಿದುಣ್ಣೋ ಮಹರಾಯ ಎನ್ನುವ ಇನ್ನೊಂದು ಕನ್ನಡ ಗಾದೆ ಕೂಡ ಹೆಚ್ಚು ಕಡಿಮೆ ನಮ್ಮ ಕರ್ಮಕ್ಕೆ ತಕ್ಕ ಫಲ ನಾವೇ ಅನುಭವಿಸಬೇಕು ಎನ್ನುವುದನ್ನ ಹೇಳುತ್ತದೆ .
ಸ್ಪಾನಿಷ್ ಗಾದೆ ‘Con su pan se lo coma.’ ( ಕೋನ್ ಸು ಪಾನ್ ಸೆ ಲೊ ಕೊಮ ) ಅರ್ಥ ನಮ್ಮ ಬ್ರೆಡ್ಡು ನಾವೇ ತಿನ್ನಬೇಕು ಎನ್ನುತ್ತದೆ . ನಮ್ಮ ಕನ್ನಡ ಗಾದೆ ಮಾಡಿದುಣ್ಣೋ ಮಹರಾಯ ಇದಕ್ಕೆ ಹೆಚ್ಚು ಸೂಕ್ತವಾಗಿ ಹೊಂದುತ್ತದೆ . ಅರ್ಥದಲ್ಲಿ ಕೂಡ ಎಳ್ಳಷ್ಟೂ ವ್ಯತ್ಯಾಸವಿಲ್ಲ . ನಿಷ್ಠೆಯಿಂದ ಗಮನವಿಟ್ಟು ಬ್ರೆಡ್ಡು ತಯಾರಿಸದರೆ ಬ್ರೆಡ್ಡು ಅತ್ಯಂತ ಉತ್ತಮ ಗುಣಮಟ್ಟದಾಗಿರುತ್ತದೆ . ಮಾಡುವ ಕೆಲಸದಲ್ಲಿ ಶ್ರದ್ದೆ ಇರದೇ ಹೋದರೆ ಮಾಡಿದ ಬ್ರೆಡ್ಡು ಗಬ್ಬೆದ್ದು ಹೋಗಬಹದು ಆದರೇನು ಅದನ್ನೇ ತಿನ್ನಬೇಕಾಗುತ್ತದೆ . ಹೀಗಾಗಿ ಇದರಲ್ಲಿ ಎರಡು ಸಂದೇಶಗಳನ್ನ ರವಾನಿಸಿದ್ದಾರೆ . ಒಂದು ಮಾಡುವ ಕೆಲಸ ಸರಿಯಾಗಿ ಮಾಡಬೇಕು . ಎರಡು ಸರಿಯಾಗಿ ಕೆಲಸ ಮಾಡದಿದ್ದರೆ ಅದರ ಫಲವನ್ನ ಅನುಭವಿಸಬೇಕು ಮತ್ತು ಇದರಿಂದಾದ ಕೆಟ್ಟ ಪರಿಣಾಮ ಮಾತ್ರ ನಾವೇ ಅನುಭವಿಸಬೇಕು ಅದನ್ನ ಮತ್ತ್ಯಾರೂ ಅನುಭವಿಸಲು ಸಿದ್ಧರಿರುವುದಿಲ್ಲ .
ಇಂಗ್ಲಿಷ್ ಭಾಷಿಕರಲ್ಲಿ It’s his / her own lookout ಎನ್ನುವುದು ಸಾಮಾನ್ಯ . ಜೊತೆಯಲ್ಲಿ ನಮ್ಮ ಗಾದೆಯಲ್ಲಿರುವಂತೆ ಕೆಟ್ಟ ಕೆಲಸ ಮಾಡಿದವನು ಶಿಕ್ಷೆ ಅನುಭವಿಸಲಿ ಎನ್ನುವ ಅರ್ಥ ಕೊಡುವ “may he (the thief) choke on it” ಎನ್ನುವ ವಾಕ್ಯವನ್ನ ಕೂಡ ಬಹಳವಾಗಿ ಬಳಸುತ್ತಾರೆ .
ಶತಮಾನಗಳೇ ಕಳೆದರೂ ನಮ್ಮ ಕ್ರಿಯೆಗೆ ನಾವೇ ಜವಾಬ್ಧಾರರು ಎನ್ನುವುದು ಮಾತ್ರ ಸುಳ್ಳಲ್ಲ .
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
con : ಜೊತೆಗೆ ಎನ್ನುವ ಅರ್ಥ , ಕೋನ್ ಎನ್ನುವುದು ಉಚ್ಚಾರಣೆ .
su : ಅವರವರ ಅಥವಾ ನಿಮ್ಮ ಎನ್ನುವ ಅರ್ಥ ಕೊಡುತ್ತದೆ . ಸು ಎನ್ನುವುದು ಉಚ್ಚಾರಣೆ .
pan : ಬ್ರೆಡ್ಡು ಎನ್ನುವ ಅರ್ಥ . ಪಾನ್ ಎನ್ನುವುದು ಉಚ್ಚಾರಣೆ .
se : ಅವರೇ , ಅಥವಾ ನೀವೇ ಎನ್ನುವ ಅರ್ಥ ಸೆ ಎನ್ನುವುದು ಉಚ್ಚಾರಣೆ .
lo : ಇಂಗ್ಲಿಷ್ ನ ದಿ ಎನ್ನುವ ಅರ್ಥ . ಲೊ ಎನ್ನುವುದು ಉಚ್ಚಾರಣೆ .
coma : ತಿನ್ನುವುದು , ತಿನ್ನು ಎನ್ನುವ ಅರ್ಥ ಕೊಡುತ್ತದೆ . ಕೊಮ ಎನ್ನುವುದು ಉಚ್ಚಾರಣೆ .
Facebook ಕಾಮೆಂಟ್ಸ್