X
    Categories: ಕಥೆ

ಬಾಲಿಶತನ

“ಮೇಡಂ, ಸ್ವಲ್ಪ ’ಪರ್ಸನಲ್’ನ ಸ್ಪೆಲ್ಲಿಂಗ್ ಹೇಳ್ತೀರಾ?” ಫೈಲಿನಲ್ಲಿ ಕಾಗದಗಳನ್ನು ಜೋಡಿಸುತ್ತಿದ್ದವಳು ತಬ್ಬಿಬ್ಬಾಗಿ ಪ್ರಿನ್ಸಿಪಾಲರತ್ತ ನೋಡಿದೆ. ಅವರು ತಲೆ ತಗ್ಗಿಸಿ ತಮ್ಮ ಕ್ಯಾಜುವಲ್ ಲೀವ್ ಫಾರ್ಮ್ ತುಂಬುತ್ತಿದ್ದರು. ಅಪ್ರಯತ್ನವಾಗಿ ನನ್ನಿಂದ ಉತ್ತರ ಹೊರಬಂತು. ” P E R S O N A L“. ಪ್ರಿನ್ಸಿಪಾಲರು ಬರೆದು ಮುಗಿಸಿದರು. ಒಂದು ಥಾಂಕ್ಸ್ ಕೂಡ ಹೇಳದೆ, ನನ್ನತ್ತ ತಿರುಗಿಯೂ ನೋಡದೆ ತಮ್ಮ ಕೆಲಸದಲ್ಲೇ ಮಗ್ನರಾಗಿದ್ದರು. ನನ್ನದೋ ವಿಚಿತ್ರ ಮನಸ್ಥಿತಿಯಾಗಿತ್ತು. ನನ್ನ ಕೆಲಸವನ್ನು ಪಟಪಟನೆ ಮುಗಿಸಿ ಫೈಲನ್ನು ಯಥಾಸ್ಥಾನದಲ್ಲಿರಿಸಿ ಪ್ರಿನ್ಸಿಪಾಲ್ ಛೇಂಬರಿನಿಂದ ಹೊರಬಂದೆ. ಅಲ್ಲಿಯವರೆಗೆ ಹತ್ತಿಟ್ಟಿಕೊಂಡಿದ್ದ ‘ಪ್ರಿನ್ಸಿಪಾಲರಿಗೆ ’ಪರ್ಸನಲ್’ ಸ್ಪೆಲ್ಲಿಂಗೂ ಗೊತ್ತಿಲ್ಲ ಎಂಬ ಬ್ರೇಕಿಂಗ್ ನ್ಯೂಸನ್ನೂ ಯಾರಿಗಾದರೂ ಹೇಳಿ ಬಾಯಿಚಪಲ ತೀರಿಸಿಕೊಳ್ಳುವ ಬಯಕೆ. ಕಾಲೇಜಿನ ವೇಳೆ ಮುಗಿದು ಆಗಲೇ ಅರ್ಧ ಗಂಟೆಯಾಗಿತ್ತು. ನಾನೇನೋ ನನ್ನದೊಂದು ಫೈಲ್ ಕಂಪ್ಲೀಟ್ ಮಾಡುವುದಿತ್ತೆಂದು ಉಳಿದಿದ್ದೆ. ಈಗ ಅದೂ ಮುಗಿದಿತ್ತು. ಆದರೀಗ ಮನದಲ್ಲಿರುವ ಗುಟ್ಟನ್ನು ಯಾರಲ್ಲಿಯಾದರೂ ಹೇಳಿಕೊಳ್ಳುವ ತನಕ ಸಮಾಧಾನವಿಲ್ಲ. ಅತ್ತಿತ್ತ ನೋಡಿದೆ. ಮನೆಗೆ ಹೋಗುವ ಧಾವಂತದಲ್ಲಿದ್ದ ಅನೇಕರು ಕಂಡರೂ ಈ ಥರದ ಹರಟೆ ಹೊಡೆಯುವಷ್ಟು ಆತ್ಮೀಯರಲ್ಲ. ಪರ್ಸ್ ತೆಗೆದುಕೊಂಡು ಮೆಟ್ಟಿಲಿಳಿಯುತ್ತಿದ್ದಂತೆ ದೂರದಲ್ಲಿ ಆಶಾ ಕಂಡಳು. ಅವಳಿಗೆ ನನ್ನತ್ತ ಗಮನವಿರಲಿಲ್ಲ. ಜೋರಾಗಿ ಕೂಗಿ ಎಲ್ಲರ ಗಮನಸೆಳೆಯುವುದಕ್ಕಿಂತ ಒಂದು ಕಾಲ್ ಮಾಡಿದರಾಯಿತು ಎಂದು ಪರ್ಸಿನಿಂದ ಮೊಬೈಲ್ ಹೊರತೆಗೆದೆ. ಇನ್ನೇನು ಡಯಲ್ ಮಾಡಬೇಕೆನ್ನುವಾಗಲೇ ಮನದ ಮೂಲೆಯಲ್ಲೊಂದು ಅಳುಕು. ‘ಬೇಡ, ಆಶಾಗೆ ಹೇಳುವುದು ಬೇಡ. ಅವಳು ಗಾಸಿಪ್ಪಿಂಗ್‍ನಲ್ಲಿ ಎತ್ತಿದ ಕೈ. ಅವಳಿಗೆ ಹೇಳುವುದೂ ಒಂದೇ, ಎಫ್. ಎಮ್.ನಲ್ಲಿ ಅನೌನ್ಸ್ ಮಾಡೋದೂ ಒಂದೆ. ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಾ ಹೋಗಿ ನಾನು ಹೇಳಿದ ಮಾತು ಇನ್ನೇನೋ ಆಗಿ ಪ್ರಿನ್ಸಿಪಾಲರ ಗೌರವಕ್ಕೆ ಧಕ್ಕೆಯಾದರೆ?’ ಕಣ್ಣಮುಂದೆ ಪ್ರಿನ್ಸಿಪಾಲರ ಮುಗ್ಧ ಮುಖ ಕಂಡುಬಂದಿತು. ‘ಪಾಪ, ಯಾವುದೋ ಟೆನ್ಶನ್ನಿನಲ್ಲಿದ್ದಂತೆ ಕಂಡರು. ಲೀವ್‍ಲೆಟರ್ ಬರೆಯುತ್ತಿದ್ದರು. ಅನ್ಯಮನಸ್ಕರಾಗಿದ್ದರಿಂದ ಸ್ಪೆಲ್ಲಿಂಗ್ ಹೊಳೆದಿರಲಿಕ್ಕಿಲ್ಲ. ಯಾವುದೇ ವಿಚಾರ ಮಾಡದೆ ಎದುರಿಗಿದ್ದ ನನ್ನನ್ನು ಕೇಳಿದರು, ಅಷ್ಟೇ. ಅದನ್ನು ತಮಗಾದ ಅವಮಾನ ಎಂದು ಅವರು ಭಾವಿಸಲಿಲ್ಲ. ಅವರದನ್ನು ಮರೆತು ಬಿಟ್ಟಿರಲೂಬಹುದು. ನನ್ನದೇ ತಪ್ಪು. ಇಷ್ಟು ಸಣ್ಣ ವಿಷಯವನ್ನೇ ದೊಡ್ಡದು ಮಾಡಿ ಅವರಿಗೆ ಸ್ಪೆಲ್ಲಿಂಗೇ ಗೊತ್ತಿಲ್ಲಾಂತ ಸುದ್ದಿ ಹರಡಿಬಿಡುತ್ತಿದ್ದೆನಲ್ಲ.’

ಮೇಲಧಿಕಾರಿಗಳ ಒಂದು ಸಣ್ಣ ತಪ್ಪನ್ನು ಇತರರ ಮುಂದೆ ಆಡಿಕೊಂಡು ‘ಅವನಿಗೆ ಅಷ್ಟೂ ಗೊತ್ತಿಲ್ಲ, ಅದು ಹ್ಯಾಗೆ ಆ ಸೀಟಿಗೆ ಹೋದನೋ’ ಎಂದು ಹೇಳುವುದು ತೀರ ಬಾಲಿಶತನ. ಇದಕ್ಕೆ ಸಂಬಂಧಪಟ್ಟಂತೆ ಕೆಳದಿನಗಳ ಹಿಂದೆ ಓದಿದ್ದು ನೆನಪಿಗೆ ಬಂದಿತು.

ಪ್ರಖ್ಯಾತ ವಿಜ್ಞಾನಿ ನ್ಯೂಟನ್‍ನ ಮನೆಯಲ್ಲಿ ಬೆಕ್ಕೊಂದಿತ್ತು. ಅದು ಒಂದು ಮರಿ ಹಾಕಿದಾಗ, ನ್ಯೂಟನ್ ಒಬ್ಬ ಬಡಗಿಯನ್ನು ಕರೆದು ಅವುಗಳಿಗಾಗಿ ಒಂದು ಮನೆಯನ್ನು ತಯಾರಿಸಿಕೊಡುವಂತೆ ಕೇಳಿದ. ಮನೆಯ ರೂಪು ರೇಷೆಯನ್ನು ಹೇಳುವಾಗ ಎರಡು ಬಾಗಿಲುಗಳು ಬೇಕೆಂದನು. ಒಂದು ದೊಡ್ಡದು, ದೊಡ್ಡ ಬೆಕ್ಕಿಗಾಗಿ,ಇನ್ನೊಂದು ಚಿಕ್ಕದು, ಮರಿಗಾಗಿ. ಆಗ ಬಡಿಗನು ಒಂದೇ ಬಾಗಿಲು ಸಾಕೆಂದು ಹೇಳಿದರೂ ನ್ಯೂಟನ್ ಕೇಳಲಿಲ್ಲ. ಕೊನೆಗೆ ಮನೆ ತಯಾರಾದಾಗ, ದೊಡ್ಡ ಬಾಗಿಲಿನಿಂದಲೇ ಮರಿಯೂ ಒಳಹೋಗಿದ್ದು ನೋಡಿ ನ್ಯೂಟನ್ ವಿಸ್ಮಯಗೊಂಡನು.

ಈ ವಿಚಾರದಲ್ಲಿ ಮನೆ ತಲುಪಿದ್ದೇ ಗೊತ್ತಾಗಲಿಲ್ಲ. ಕಾಲಿಂಗ್‍ಬೆಲ್ ಒತ್ತುತ್ತಿದ್ದಂತೆಯೇ ಓಡಿಬಂದ ಆರು ವರ್ಷದ ಮಗಳು ಹೇಳಿದಳು, “ಏನಮ್ಮಾ, ಬಾಗಿಲು ತೆಗೆದೇ ಇದೆ. ಅಷ್ಟೂ ಗೊತ್ತಾಗಲ್ವಾ, ಅದು ಹ್ಯಾಗೆ ಕಾಲೇಜಲ್ಲಿ ಪಾಠ ಮಾಡ್ತೀಯೋ?”

ನನ್ನನ್ನು ಅಣಕಿಸಿ ಓಡಿಹೋದ ಮಗಳನ್ನೇ ನೋಡುತ್ತಿದ್ದೆ. ಕೆಲ ನಿಮಿಷಗಳ ಹಿಂದೆ ನಾನೂ ಹೀಗೇ ವರ್ತಿಸುತ್ತಿದ್ದೆನೋ ಏನೋ, ನ್ಯೂಟನ್ ಬಗ್ಗೆ ಓದಿದ್ದು ನೆನಪಾದ್ದರಿಂದ ನನಗೆ ನಾನೇ ಪ್ರೌಢಳಾದಂತೆ ಭಾಸ.

 

Facebook ಕಾಮೆಂಟ್ಸ್

Usha Jogalekar: ಉತ್ತರ ಕರ್ನಾಟಕದ ಗದಗಿನಲ್ಲಿ ಬೆಳೆದಿದ್ದು. ಸದ್ಯಕ್ಕೆ ಪುಣೆಯಲ್ಲಿ ವಾಸ. ಕಂಪ್ಯೂಟರ್ ಎಂಜಿನಿಯರಿಂಗ್ ಮಾಡಿ ಕಾಲೇಜೊಂದರಲ್ಲಿ ಅಸಿಸ್ಟಂಟ್ ಪ್ರೊಫೆಸರ್. ಓದು, ಭರತನಾಟ್ಯ, ಪ್ರವಾಸ ಆಸಕ್ತಿಯ ವಿಷಯಗಳು. ಚಿಕ್ಕ ಕಥೆ, ಲೇಖನ ಬರೆಯುವ ಹವ್ಯಾಸ.
Related Post