X

ಪುರುಷರಲ್ಲಿ ನಪುಂಸಕತೆ

ಇತ್ತೀಚಿನ ಯುವಕ ಯುವತಿಯರು ಮದುವೆಯಾಗುವುದೇ ತಡವಾಗಿ, ಮದುವೆಗೆ ಸರಿಯಾದ ಸಂಗಾತಿ ಸಿಗುವುದೇ ಕಷ್ಟ, ಹಾಗೆ ಸಿಕ್ಕರೂ ಮದುವೆಯಾಗಿ ಸಂಸಾರ ಅಭಿವೃದ್ಧಿಯಾಗಲಿ ಎಂದು ಬಯಸಿದಾಗ ಆ ಪುರುಷನಲ್ಲೋ ಅಥವಾ ಸ್ತ್ರೀಯಲ್ಲೋ ಸಮಸ್ಯೆಗಳು ಕಂಡುಬಂದು ಮಕ್ಕಳಾಗಲು ಒದ್ದಾಡಬೇಕಾಗುತ್ತದೆ. ಹಲವಾರು ಚಿಕಿತ್ಸೆಯ ಮೂಲಕ ಕೆಲವರಿಗೆ ಮಾತ್ರ ಮಕ್ಕಳಾಗುತ್ತದೆ. ಈ ಚಿಕಿತ್ಸೆಗಳಿಂದ ನಮ್ಮ ದೇಹಕ್ಕೆ ವಿಪರೀತ ಪೀಡೆಯನ್ನು ಅನುಭವಿಸಬೇಕಾಗುತ್ತದೆ. ಇತ್ತೀಚೆಗೆ ಪುರುಷರಲ್ಲಿ ವೀರ್ಯಾಣುವಿನ ಕೊರತೆ ಅನೇಕರನ್ನು ಕಾಡುತ್ತಿದೆ. ಇದಕ್ಕೆ ನಮ್ಮಜೀವನಕ್ರಮದಲ್ಲಾದ ಬದಲಾವಣೆಯೇ ನೇರ ಹೊಣೆಯಾಗುತ್ತದೆ. ಇದು ಮನುಕುಲಕ್ಕೆ ತಟ್ಟಿರುವ ಆಧುನೀಕೀಕರಣದ ಒಂದು ಶಾಪ. ಇದರ ಪರಿಣಾಮ ಅದೆಷ್ಟೋ ಮಂದಿ ವಿವಾಹವಾದ ನಂತರ ಮಕ್ಕಳನ್ನು ಪಡೆಯಲು ಒದ್ದಾಡುವುದನ್ನು ನೋಡುತ್ತಿದ್ದೇವೆ.

ನಾವು ತಿನ್ನುವ ಆಹಾರ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ತಿಂದ ಆಹಾರವು ಶರೀರಕ್ಕೆ ಹೋಗದಿದ್ದಲ್ಲಿ ಇದು ಕಷ್ಮಲ ರೂಪವಾಗಿ ದೇಹದಲ್ಲಿ ಪರಿವರ್ತನೆಯಾಗುತ್ತದೆ. ಇದರಿಂದದೇಹದ ತಾಪಮಾನ ಕೃತಕವಾಗಿ ವೃದ್ಧಿಸುತ್ತದೆ. ಹೆಚ್ಚಿದ ತಾಪಮಾನದಲ್ಲಿ ವೀರ್ಯಾಣುಗಳು ಬದುಕುಳಿಯುವುದು ಕಷ್ಟ. ಅದಲ್ಲದೇ ಈಗಿನ ಉಡುಗೆ ನೋಡಿ.ದಪ್ಪವಾಗಿರುವ ಜೀನ್ಸ್‌ಪ್ಯಾಂಟುಗಳು ಅಥವ ಸರಿಯಾಗಿ ಗಾಳಿ ಓಡಾಡದಂತಹ ಬಿಗಿಯಾದ ಒಳಉಡುಪುಗಳು ಧರಿಸುತ್ತೇವೆ. ಇದು ವೃಷಣ ಪ್ರದೇಶದಲ್ಲಿನ ತಾಪಮಾನವನ್ನು ಹೆಚ್ಚಿಸಿ ಅಲ್ಲಿ ಬೆಳೆಯುವಂತಹ ವೀರ್ಯಾಣುಗಳ ಆಯಸ್ಸನ್ನು, ಗುಣಮಟ್ಟ ಹಾಗು ಆರೋಗ್ಯವನ್ನು ಕುಂಠಿಸುತ್ತದೆ. ಹೀಗಾಗಿ ಕೆಲವರಲ್ಲಿ ವೀರ್ಯಾಣು ಉತ್ಪಾದನೆಯಾದರೂ  ಪರೀಕ್ಷೆ ಮಾಡಿನೋಡಿದಾಗ ಸತ್ತವೀರ್ಯಾಣುಗಳೇ, ವಿಕಾರವಾಗಿ ಬೆಳೆದಿರುವ ವೀರ್ಯಾಣುಗಳೇ, ಚಲಿಸದ ವೀರ್ಯಾಣುಗಳೇ, ಅಲ್ಪ ವೀರ್ಯಾಣುಗಳೇ ಪತ್ತೆಯಾಗುತ್ತದೆ.

ಇದಕ್ಕೆ ಮತ್ತೊಂದುಕಾರಣ ಮಲಬದ್ಧತೆ. ಮಲಬದ್ಧತೆಯಿಂದ ಕರುಳಿನ ಮೇಲಾಗುವ ಒತ್ತಡ. ಈ ಒತ್ತಡವು ಕರುಳಿನ ಹತ್ತಿರ ಹರಿಯುವ ನರಗಳ ಮೇಲೆ ಪ್ರಭಾವ ಬೀರಿ, ಅಲ್ಲಿಗೆ ರಕ್ತ ಸಂಚಾರವು ಸರಿಯಾಗಿ ಆಗದೆ, ವೃಷಣದಿಂದ ಹೊರ ಹರಿಯುವ ರಕ್ತವೂ ಒತ್ತಡದಿಂದಾಗಿ ಸರಿಯಾಗಿ ಸಂಚಾರವಾಗುವುದಿಲ್ಲ. ಇದರ ಪರಿಣಾಮವಾಗಿ ವೃಷಣದ ನರಗಳಲ್ಲಿ ಬಾವು ಉಂಟಾಗಿ ವೀರ್ಯಾಣುಗಳ ಉತ್ಪತ್ತಿ ಆಗುವುದಿಲ್ಲ. ಇದನ್ನು ‘ವೆರಿಕೋಸೀಲ್’ಎಂದು ಕರೆಯಲಾಗುತ್ತದೆ. ಮಲಗಳ ಶೋಧನೆ ಸರಿಪಡಿಸಿ ವೀರ್ಯಾಣುಗಳ ಬಲವನ್ನು ವೃದ್ಧಿಸುವುದೇ ಪರಿಹಾರ.

ಇನ್ನು ಕೆಲವರಿಗೆ ಶೀಘ್ರಸ್ಖಲನ ಅಥವ ಅಸ್ಕಲನದ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಮಾನಸಿಕ ಹಾಗು ಮಲಬದ್ಧತೆಗಳೇ ಮುಖ್ಯ ಕಾರಣವಾಗಿದೆ. ಅಪಾನವಾಯುವಿನ ಮುಖ್ಯಕಾರ್ಯವೇನೆಂದರೆ, ಮಲ, ಮೂತ್ರ, ವಾಯು, ಶುಕ್ರ, ಮುಟ್ಟುಸ್ರಾವ ಹಾಗು ಗರ್ಭಸ್ಥ ಶಿಶುವಿನ ಕೆಳಮುಖ ಚಲನೆಗಳನ್ನು ಸರಿಯಾಗಿ, ಸರಿಯಾದ ಸಮಯಕ್ಕೆ, ತ್ರಾಸವಿಲ್ಲದೆ ಹೊರಹಾಕುವುದು. ಮಲಬದ್ಧತೆಯಿಂದ ಅಪಾನವಾಯು ಕುಪಿತಗೊಂಡು, ಶುಕ್ರವನ್ನು ಒಂದೇ ಬೇಗನೆ ಸ್ಖಲನವಾಗುವಂತೆ, ಸ್ಖಲನವೇ ಆಗದಂತೆಅಥವ ಮೇಲ್ಮಾರ್ಗವಾಗಿ ಮೂತ್ರಕೋಶಕ್ಕೆ ಹೋಗುವಂತೆ ಮಾಡಿ ಶೀಘ್ರಸ್ಖಲನ ಅಥವ ಅಸ್ಖಲವಾಗುತ್ತದೆ ಅಥವಾ ಮೂತ್ರದೊಂದಿಗೆ ಶುಕ್ರ ಹೋಗುವಂತೆ ಮಾಡುತ್ತದೆ.

ನಮ್ಮ ಆಹಾರ-ವಿಹಾರಗಳನ್ನು ಸರಿಪಡಿಸುವುದೇ ಇದಕ್ಕೆ ಮುಖ್ಯ ಪರಿಹಾರ. ನಾರುಯುಕ್ತ, ನೀರುಯುಕ್ತ ಸುಲಭಜೀರ್ಣವಾಗುವ ಆಹಾರಗಳನ್ನು ತಿನ್ನಬೇಕು. ಹಣ್ಣುಗಳಲ್ಲಿ ದಾಳಿಂಬೆ, ಪಪ್ಪಾಯ, ಸೀತಾಫಲ, ಬಾಳೆಹಣ್ಣು, ಸೀಬೆ ಹಣ್ಣುಗಳು ಶುಕ್ರವೃದ್ಧಿಗೆ ಸಹಾಯಮಾಡುತ್ತದೆ. ತರಕಾರಿಗಳಲ್ಲಿ ಸೋರೆಕಾಯಿ, ಹೀರೆಕಾಯಿ, ಬೆಳ್ಳುಳ್ಳಿ, ದಂಟಿನ ಹರಿವೆ, ಮೆಂತೆ ಸೊಪ್ಪು, ನುಗ್ಗೆ ಸೊಪ್ಪುಗಳು ಸಹಾಯ ಮಾಡುತ್ತದೆ.ಎಣ್ಣೆ ಸ್ನಾನ, ವ್ಯಾಯಾಮ ಮತ್ತು ಕಟಿಸ್ನಾನಗಳು ಕೂಡ ಶುಕ್ರ ಉತ್ಪತ್ತಿಗೆ ಸಹಾಯಕರವಾಗಿದೆ. ತಡರಾತ್ರಿ ಊಟ, ಹಗಲು ನಿದ್ರೆ ಹಾಗು ರಾತ್ರಿಜಾಗರಣ, ಖಾರವಾದಆಹಾರ, ಎಣ್ಣೆಯಲ್ಲಿ ಕರಿದ ಆಹಾರ, ತರಕಾರಿಗಳಾದ ಟೊಮ್ಯಾಟೊ, ಹೂಕೋಸು, ಕ್ಯಾಬೇಜ್, ಮೆಣಸಿನಕಾಯಿ ಶುಕ್ರಹರವಾಗಿ ಕೆಲಸ ಮಾಡುತ್ತದೆ.

-ಡಾ. ಶ್ರೀವತ್ಸಭಾರದ್ವಾಜ್

ಕೃಪೆ : ವಿಕ್ರಮ ವಾರಪತ್ರಿಕೆ

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post