X

ಉಪವಾಸಕ್ಕಿಂತ ಬೇರೆ ಔಷಧಿಯಿಲ್ಲ ! ಲಂಘನಮ್ ಪರಮೌಷಧಮ್ !. Comer hasta enfermar y ayunar hasta sanar.

ನಮ್ಮ ಪೂರ್ವಜರ ಬದುಕು ಅವರ ಚಿಂತನೆಗಳು ಅಂದಿನ ನುಡಿಗಟ್ಟುಗಳಲ್ಲಿ ಗಾದೆಗಳಲ್ಲಿ ಅನುರಣಿಸುತ್ತವೆ . ಅಂತಹ ಗಾದೆಗಳನ್ನ ಹೇಳಿದ ಅವರ ಅನುಭವ ಎಷ್ಟಿರಬಹದು ? ಎಲ್ಲಕ್ಕೂ ಮಿಗಿಲಾಗಿ ಅವುಗಳ ಸರ್ವಕಾಲಿಕತೆ ಹುಬ್ಬೇರುವಂತೆ ಮಾಡುತ್ತದೆ . ನಮ್ಮ ಹಿಂದೂ ಸಂಸ್ಕೃತ್ತಿಯಲ್ಲಿ  ಹಸಿವಾಗದೆ ತಿನ್ನುವುದು ವಿಕೃತಿ ಎನ್ನಲಾಗಿದೆ . ಏನು ತಿನ್ನಬೇಕು ಎಷ್ಟು ತಿನ್ನಬೇಕು ಎನ್ನುವುದು ನಮ್ಮ ಹಿರಿಯರಿಗೆ ಚನ್ನಾಗಿ ಗೊತ್ತಿತ್ತು . ಸ್ಪೇನ್ ದೇಶದಲ್ಲಿ ಮೆಜಾರಿಟಿ ಇರುವುದು ರೋಮನ್ ಕ್ಯಾಥೊಲಿಕ್ ಜನ ಆದರೇನು ಅಂದಿನ ಅವರ ಮನೋಭಾವ , ಚಿಂತನೆಗಳು ನಮ್ಮ ಹಿಂದೂ ಸಂಸ್ಕೃತಿಯನ್ನೇ ಹೋಲುತ್ತಿದ್ದವು ಎನ್ನುವುದಕ್ಕೆ ಹತ್ತಾರು ಉದಾಹರಣೆಗಳು ಗಾದೆಗಳಲ್ಲಿ ಸಿಗುತ್ತದೆ .

ಹೊಟ್ಟೆ ತುಂಬಾ ತಿಂದರೆ ರೋಗ ಬರುತ್ತದೆ ಎನ್ನುವುದು ಇಂದಿಗೂ ಸ್ಪಾನಿಷರಲ್ಲಿ ಅವ್ಯಕ್ತವಾಗಿ ಬೇರೂರಿದೆ . ಒಂದು ಊಟ ಹೆಚ್ಚಾದರೆ ಇನ್ನೊಂದು ಊಟವನ್ನ ಕಡಿಮೆ ಮಾಡುವುದು ಇಲ್ಲಿನ ಜನರು ಸಾಮಾನ್ಯವಾಗಿ ಅನುಸರಿಸಿಕೊಂಡು ಬಂದಿರುವ ಪರಿಪಾಠ . ಆಕಸ್ಮಾತ್ ಊಟ ಹೆಚ್ಚಾಗಿ ಖಾಯಿಲೆ ಬಂದರೆ ಉಪವಾಸ ಮಾಡಿ ಗುಣಮಮುಖನಾಗು ಎನ್ನುವುದು ಗಾದೆಯ ಭಾವಾರ್ಥ .  ನಮ್ಮಲ್ಲಿ ಲಂಘನಮ್ ಪರಮೌಷಧಮ್ ಅನ್ನುವ ಮಾತಿದೆ , ಇದು ಕೇವಲ ದೇಹಾರೋಗ್ಯದ ದೃಷ್ಟಿಯಿಂದಲ್ಲ, ಮಾನಸಿಕ ಆರೋಗ್ಯದ ದೃಷ್ಟಿಯಿಂದಲೂ ಸಾಬೀತಾಗಿರುವ ಮಾತು. ಮೆದುಳಿನಲ್ಲಿರುವ ಸಂದೇಶವಾಹಕಗಳು ಮತ್ತು ಭಾವನೆಗಳನ್ನು ನಿಯಂತ್ರಿಸುವ ‘ನ್ಯೂರೊ ಟ್ರಾನ್ಸ್ ಮಿಟರ್’ಗಳ ಮೇಲೆ ಉಪವಾಸವು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಉಪವಾಸವು ಮೆದುಳಿನ ಎಂಡೊರ್ಫಿನ್ ಹರಿವನ್ನು ಪ್ರಚೋದಿಸುತ್ತದೆ. ಇದರ ಪರಿಣಾಮವಾಗಿ ಮನಸ್ಸು ಹಗುರವಾದ ಸ್ಥಿತಿಯಲ್ಲಿರುತ್ತದೆ. ಹಿಂದೂ ಧರ್ಮದಲ್ಲಿ ಸಮಯದಿಂದ ಸಮಯಕ್ಕೆ ಯಾವುದಾದರೂ ವಿಧಿ ವಿಧಾನದ ಹೆಸರಿನಲ್ಲಿ ನಮ್ಮ ಹಿರಿಯರು ಉಪವಾಸ ನೆಡೆಸುತ್ತಲೆ ಬಂದಿದ್ದಾರೆ . ಹಾಗೆ ನೋಡಲು ಹೋದರೆ ಈ ವಿಷಯದಲ್ಲಿ ಎಲ್ಲಾ ಧರ್ಮಗಳ ಆಶಯವೂ ಒಂದೆ! ಭಗವಂತನ್ನ ಕಾಣುವುದು ಅದಕ್ಕೂ ಮೊದಲು ತನ್ನ ತಾನು ಅರಿತುಕೊಳ್ಳುವುದು. ಮೌನ , ಏಕಾಂತ ಮತ್ತು ಉಪವಾಸ ಮತ್ತು ಪ್ರಾರ್ಥನೆ  ಎಲ್ಲಾ ಧರ್ಮಗಳಲ್ಲಿ ಕಾಣಸಿಗುವ ಸಾಮಾನ್ಯ ದಾರ . ನಮ್ಮ ಹಿರಿಯರ ಧರ್ಮ ಯಾವುದೇ ಇದ್ದಿರಲಿ ಅವರು ಬದುಕುತ್ತಿದ್ದ ರೀತಿ ಮಾತ್ರ ಒಂದೇ ಆಗಿತ್ತು .

One  who eats till he is sick must fast till he is well. ಎನ್ನುವುದು ಇಂಗ್ಲಿಷ್ ಬಳಸುವ ದೇಶಗಳಲ್ಲಿ ಹೆಚ್ಚಾಗಿ ಕೇಳಿ ಬರುವ ಮಾತು . ಭಾಷೆ ಬದಲಾದರೇನು ಭಾವವೊಂದೇ ! .
ಇಂದಿನ ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :  

೧) comer  : ತಿನ್ನುವುದು , ತಿನ್ನು . ಉಚ್ಚಾರಣೆ ಕೊಮೆರ್ .

೨)Hasta  :  until ಅಥವಾ ವರೆಗೆ .., ಎಲ್ಲಿಯವರೆಗೆ . ಉಚ್ಚಾರಣೆ ; ಹಸ್ತ

೩)Enfermar  : ರೋಗ , ರೋಗ ಬರುವವರೆಗೆ .., ಉಚ್ಚಾರಣೆ ; ಎನ್ಫಾರ್ಮರ್

೪) y  :  ಅಂದರೆ and, ಅಥವಾ ಮತ್ತು ಎನ್ನುವ ಅರ್ಥ ನೀಡುತ್ತದೆ . ಉಚ್ಚಾರಣೆ : ಯೀ

೫)Ayunar  : ಉಪವಾಸ  . ಉಚ್ಚಾರಣೆ : ಆಯುನಾರ್

೬)sanar.  : ಗುಣಮುಖ.    ಉಚ್ಚಾರಣೆ : ಸಾನರ್

– ರಂಗಸ್ವಾಮಿ ಮೂಕನಹಳ್ಳಿ

<mookanahalli@gmail.com>

 

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post