X
    Categories: ಕಥೆ

ಸುಪ್ತ ಮನಸು

ಅನಿತಾ ರೆಡಿ ಆದ್ಯಾ?” ಕೇಳುತ್ತ ರೂಮಿನೊಳಗೆ ಬಂದಳು ಅಂಕಿತಾ. “ಸಾಕೆ ಮಾರಾಯ್ತಿ, ಫೇಸ್ ಬುಕ್ಕಲ್ಲಿ ಫೋಟೋ ನೋಡಿದ್ದು, ಇನ್ನೊಂದು ಸ್ವಲ್ಪ ಹೊತ್ತಿಗೆ ಅವರೆಲ್ಲಾ ಬಂದ್ಬಿಡ್ತಾರೆ. ಅವನೂ ನಿನ್ನ ಫೇಸ್ ಬುಕ್ ಫೋಟೋನೇ ನೋಡಿರೋದು, ಫೊಟೋ ನೋಡಿ ಮೋಸಹೋದೇಂತ ಅನಿಸೋದ್ಬೇಡ, ಏಳು ರೆಡಿ ಆಗು.”

“ಅಕ್ಕ..” ಅನ್ಯಮನಸ್ಕತೆಯಿಂದ ಅನಿತಾ ಹೇಳಿದಳು, “ಈ ಹುಡುಗನ್ನ ಎಲ್ಲೋ ನೋಡಿದ ಹಾಗೆ ಅನ್ನಿಸ್ತದೆ. ಪೂರ ಪ್ರೊಫೈಲ್ ನೋಡಿದ್ರೂ ಏನೂ ಕ್ಲೂ ಸಿಗ್ತಾ ಇಲ್ಲ. ಕಾಮನ್ ಫ್ರೆಂಡ್ ಸಹ ಯಾರೂ ಇಲ್ಲ”.

ಪಕಪಕನೆ ನಕ್ಕುಬಿಟ್ಟಳು ಅಂಕಿತಾ “ಇದನ್ನೇ ಪ್ರೇಮ ಅನ್ನೋದು, ಜನ್ಮ ಜನ್ಮಾಂತರದ ಸಂಬಂಧ ಅನಿಸೋದು, ಇಟ್ಸ್ ವೆರಿ ನ್ಯಾಚುರಲ್, ನಿಮ್ಮ ಭಾವನ್ನ ಮೊದಲ ಸಲ ನೋಡಿದಾಗ ನನಗೂ ಹೀಗೇ ಅನಿಸಿತ್ತು.”

“ಹಾಗಲ್ಲಕ್ಕ, ಅವನನ್ನ ನೋಡ್ತಾ ಇದ್ರೆ ಒಳ್ಳೆ ಭಾವನೆಗಳೇ ಬರ್ತಾಇಲ್ಲ. ನೆಗೆಟಿವ್ ವಿಚಾರಗಳೆ ಬರ್ತಿವೆ. ನನ್ನ ಸಿಕ್ಸ್ತ್ ಸೆನ್ಸ್ ಹೇಳ್ತಾ ಇದೆ, ಈ ಸಂಬಂಧ ಯಾಕೋ ಸರಿಬರಲ್ಲಾಂತ”

ಈಗ ಮಾತ್ರ ಅಂಕಿತಾ ಸಿಟ್ಟಾದಳು, ” ಅದನ್ನ ಆಮೇಲೆ ನೋಡ್ಕೊಳ್ಳೋಣ, ಈಗ ಅಮ್ಮನ ಹತ್ರ ಬೈಸಿಕೊಳ್ಳಬೇಡ. ಒಂದೇ ದಿನದಲ್ಲಿ ಮದುವೆ ಮಾತುಕತೆ ಆಗಲ್ಲ. ಅವರದ್ದು ಈಗಷ್ಟೇ ಫೋನ್ ಬಂದಿತ್ತು, ಹೊರಟಿದಾರಂತೆ, ಅರ್ಧ ಗಂಟೆಯೊಳಗೆ ಬಂದ್ಬಿಡ್ತಾರೆ. ನಾನು ಹೊರಗೆಲ್ಲ ಅರೇಂಜ್ ಮಾಡ್ತೀನಿ, ನೀನು ಬೇಗ ಡ್ರೆಸ್ ಮಾಡ್ಕೊ.”

ಅನಿತಾ ಮತ್ತೆ ಫೇಸ್ ಬುಕ್ಕಿನ ಫೋಟೋಗಳತ್ತ ನೋಡುತ್ತ, ಒಲ್ಲದ ಮನಸ್ಸಿನಿಂದಲೇ ರೆಡಿಯಾಗತೊಡಗಿದಳು.

ಸರಿಯಾಗಿ ಅರ್ಧಗಂಟೆಯಲ್ಲಿ ಕರೆಗಂಟೆ ಬಾರಿಸಿತು. ಮನೆಯಲ್ಲಿ ಒಮ್ಮೆಲೇ ಗಡಿಬಿಡಿಯ ವಾತಾವರಣ. ಅನಿತಾಳ ತಾಯಿ ಒಮ್ಮೆ ರೂಮಿನಲ್ಲಿ ಇಣುಕಿ ಮಗಳು ರೆಡಿಯಾಗಿದ್ದನ್ನು ನೋಡಿ ಸಮಾಧಾನಗೊಂಡು ಹೋದರು.

ಅನಿತಾ ರೂಮಿನಲ್ಲಿ ಕುಳಿತೇ ಅವರ ಮಾತುಗಳನ್ನು ಕೇಳತೊಡಗಿದಳು. ಅಷ್ಟರಲ್ಲೇ ಅಂಕಿತಾ, ” ಅನಿತಾನ್ನ ಕರ್ಕೊಂಡ್ಬರ್ತೀನಿ ” ಎಂದಿದ್ದು ಕೇಳಿ ಅನಿತಾಳ ಎದೆಬಡಿತ ಜಾಸ್ತಿಯಾಯಿತು. ಮತ್ತೊಮ್ಮೆ ಕನ್ನಡಿಯತ್ತ ನೋಡಿಕೊಂಡು ಹೊರಡಲು ಸಿದ್ಧಳಾದಳು. ಅಷ್ಟರಲ್ಲಿ ಒಳಗೆ ಬಂದ ಅಂಕಿತಾ, ಅನಿತಾಳ ತೋಳು ಹಿಡಿದು” ಹುಡುಗ ಫೋಟೋಗಿಂತ ಸ್ಮಾರ್ಟಾಗಿದಾನೆ” ಎಂದು ಮೃದುವಾಗಿ ಚಿವುಟಿದಳು.

ಅನಿತಾ ಅವಳಿಂದ ಕೊಸರಿಕೊಂಡು ಹೊರಗೆ ಬಂದಳು. ಬಂದಿದ್ದವರು ಹುಡುಗ ಮತ್ತವನ ತಂದೆ ತಾಯಿ. ಮುದ್ದಾಗಿ ಬೆಳೆದ ಒಬ್ಬನೇ ಮಗ. ಸಾಫ್ಟ್ ವೇರ್ ಎಂಜಿನಿಯರ್. ಒಳ್ಳೆಯ ಕೆಲಸ. ಅವನ ತಾಯಿಗಂತೂ ಮಗನನ್ನು ಹೊಗಳಿದಷ್ಟೂ ಸಾಲದು. ಅನಿತಾಳ ತಾಯಿ ಸಹ ತಮ್ಮ ಮಗಳೂ ಏನೂ ಕಮ್ಮಿಯಿಲ್ಲವೆಂಬಂತೆ ” ನಮ್ಮ ಅನಿತಾನೂ ರ‍್ಯಾಂಕ್ ಸ್ಟೂಡೆಂಟ್. ಸಂಗೀತ ಕಲ್ತಿದಾಳೆ. ಮನೆ ಕೆಲಸದಲ್ಲೂ ಮುಂದೆ. ಹೋದ ವರ್ಷ ಅವಳಿಗೆ ಬೆಸ್ಟ್ ಮ್ಯಾನೇಜರ್ ಅವಾರ್ಡ್ ಸಹ ಬಂದಿದೆ ಆಫೀಸಲ್ಲಿ.” ಪಟ್ಟಿ ಮುಂದುವರಿದಿತ್ತು.

ಅನಿತಾ ಆಗಾಗ ಹುಡುಗನತ್ತ ನೋಡುವ ಪ್ರಯತ್ನ ಮಾಡಿದರೂ ಆತನ ದೃಷ್ಟಿ ತನ್ನತ್ತಲೇ ಇರುವುದನ್ನು ನೋಡಿ ಎದುರಿಸಲಾಗದೇ ತಲೆ ತಗ್ಗಿಸಿದಳು. ಅವಳಿಗೇಕೋ ಅಲ್ಲಿ ಕೂತಿರಲು ಸಾಧ್ಯವಾಗದೇ ಎದ್ದು ಒಳಗೆ ಹೋಗುವುದಕ್ಕೂ ಆಗದೆ ಚಡಪಡಿಸ ತೊಡಗಿದಳು. ಅಷ್ಟರಲ್ಲಿ ಆ ಹುಡುಗ ಹೇಳಿದ ” ನಾನು ಅವರ ಜೊತೆ ಸ್ವಲ್ಪ ಮಾತಾಡಬೇಕು”. ಹುಡುಗನ ತಂದೆ ನಗುತ್ತಾ ಹೇಳಿದರು “ಬೇಕಾದ್ರೆ ಇಬ್ರೂ ಬೈಕ್ ಮೇಲೆ ಒಂದು ರೌಂಡ್ ಹೋಗಿಬನ್ನಿ” ಎಲ್ಲರೂ ಆಶ್ಚರ್ಯದಿಂದೆಂಬಂತೆ ಅವರತ್ತ ನೋಡಿದರು. ಆಗ ಹುಡುಗನ ತಾಯಿ ಅನಿತಾಳ ತಾಯಿಯತ್ತ ತಿರುಗಿ ಹೇಳಿದರು “ನನ್ನ ಮಗನಿಗೆ ಅವನ ಬೈಕ್ ಅಂದ್ರೆ ತುಂಬಾ ಇಷ್ಟ. ಅದನ್ನವನು ತನ್ನ ಮೊದಲನೆ ಸಂಬಳದಲ್ಲಿ ತಗೊಂಡಿದ್ದು. ನಾವು ಇಷ್ಟು ವರ್ಷ ಅವನನ್ನು ಸಾಕಿದ್ದಕ್ಕಿಂತಲೂ ಬಹಳ ಮುತುವರ್ಜಿಯಿಂದ ನೋಡಿಕೊತಾನೆ. ಈಗ್ಲೂ ನಾವು ಕಾರಲ್ಲಿ ಬಂದ್ವಿ, ಅವನು ಬೈಕ್ ಮೇಲೆ ಬಂದ. ಮದುವೆ ಆದ್ಮೇಲೆ ಹೆಂಡ್ತಿಗಿಂತ ಜಾಸ್ತಿ ಬೈಕನ್ನೇ ಪ್ರೀತಿಸ್ತಾನೇಂತ ಕಾಣ್ಸತ್ತೆ.”

ಅನಿತಾ ತಟ್ಟೆಂದು ಹುಡುಗನ ಕಡೆ ನೋಡಿದಳು. ಆತನೂ ಅವಳನ್ನೇ ನೋಡುತ್ತಿದ್ದರೂ, ಅವನ ನಗು ತಾಯಿಯಾಡಿದ ಮಾತಿಗೆ ನಾಚಿಕೊಂಡಂತಲ್ಲದೆ ಅದನ್ನು ಅನುಮೋದಿಸುವಂತಿತ್ತು. ತತ್ ಕ್ಷಣ ಏನೋ ಹೊಳೆದಂತಾಗಿ ಅನಿತಾ ಒಮ್ಮೆಲೇ ಎದ್ದು ರೂಮಿಗೆ ಹೋದಳು.

ಹಿಂದೆಯೇ ಬಂದ ಅಂಕಿತಾ ” ಏನೇ, ಬೈಕ್ ಮೇಲೆ ಹೋಗೊದಂತ ಡ್ರೆಸ್ ಚೇಂಜ್ ಮಾಡೋಕೆ ಬಂದ್ಯ? ” ಚುಡಾಯಿಸುವವಳಂತೆ ಕೇಳಿದಳು.

“ಅಕ್ಕ, ನನಗೀ ಮದುವೆ ಇಷ್ಟ ಇಲ್ಲ. ಅವರಿಗೆ ಹೇಳಿಬಿಡು.”

“ಯಾಕೇ ಏನಾಯ್ತು?” ನಂಬಲಾರದವಳಂತೆ ಕೇಳಿದಳು.

“ನಿನಗ್ಗೊತ್ತಿಲ್ಲ, ಅಪ್ಪನ್ನ ಕರಿ” ಒರಟಾಗಿ ಹೇಳಿದಳು.

ಅನಿತಾಳ ತಂದೆ ಗಾಬರಿಗೊಂಡು ಒಳಗೆ ಬಂದರು. ಎಲ್ಲರೂ ಒಳಗೆ ಹೋದರೆ ಚೆನ್ನಾಗಿರುವುದಿಲ್ಲವೆಂದು ತಾಯಿ ಹೊರಗೇ ಉಳಿದರು.

ತಂದೆಯನ್ನು ನೋಡುತಿದ್ದಂತೇ ಅನಿತಾಳ ದನಿ ಮೃದುವಾಯಿತು. “ಅಪ್ಪ, ನಾನು ಹೇಳಿದ್ನಲ್ಲ, ನಾನು ಮಾರ್ಕೆಟ್ಟಿಗೆ ಹೋಗೋವಾಗ, ಆ ಬೈಕ್  ಹುಡ್ಗ, ಅವನೇ ಇವನು. ನಾನವನ್ನ ಮದುವೆ ಆಗಲ್ಲ.” ಅವರ ಮುಖ ಒಮ್ಮೆಲೇ ಕಪ್ಪಿಟ್ಟಿತು. ಅಂಕಿತಾ ಏನೂ ಅರ್ಥವಾಗದವಳಂತೆ ತಂದೆಯನ್ನು ಅಲುಗಿಸಿ ಕೇಳಿದಳು “ಯಾಕಪ್ಪ ಏನಾಯ್ತು, ಆ ಹುಡುಗ ಏನ್ಮಾಡಿದ?”

“ನಿನಗೆಲ್ಲ ಆಮೇಲೆ ಹೇಳ್ತೀನಿ, ಹೋಗಿ ಅಮ್ಮನ್ನ ಕಳಿಸು” ಕೊಂಚ ಸುಧಾರಿಸಿಕೊಂಡು ಹೇಳಿದರು. ಆಂಕಿತಾ ಅಸಮಾಧಾನದಿಂದಲೇ ಹೊರಗೆ ಹೋದರೂ ಮುಖದ ಮೇಲೆ ಏನೂ ತೋರಿಸಿಕೊಳ್ಳದೇ ನಗುತ್ತಲೆ ತಾಯಿಯನ್ನು ಕರೆದಳು. ಹುಡುಗನ ತಂದೆ ತಾಯಿಯರಿಗೆ ಸ್ವಲ್ಪ ಕಸಿವಿಸಿಯಾದರೂ ಅಂಕಿತಾಳೊಂದಿಗೆ ಲೋಕಾಭಿರಾಮವಾಗಿ ಮಾತಾಡುತ್ತ ಕುಳಿತರು. ಆತ ಮಾತ್ರ ಏನೂ ಆಗದವರಂತೆ ಮೊಬೈಲ್ನಲ್ಲಿ ಗೇಮ್ ಆಡತೊಡಗಿದ.

ಕೆಲ ಹೊತ್ತಿನಲ್ಲೇ ಅನಿತಾಳ ತಂದೆ ಹೊರಬಂದು, “ಏನೂ ತಪ್ಪು ತಿಳಿದುಕೊಳ್ಳಬೇಡಿ, ಈ ಸಂಬಂಧಕ್ಕೆ ಋಣಾನುಬಂಧವಿಲ್ಲಾಂತ ಕಾಣುತ್ತೆ.”

ಒಮ್ಮೆಲೇ ಯಾರಿಗೂ ಏನು ಮಾತಾಡುವುದೆಂದು ಹೊಳೆಯಲಿಲ್ಲ. ಇದ್ದುದರಲ್ಲಿ ಹುಡುಗನ ತಂದೆ ಸುಧಾರಿಸಿಕೊಂಡು ಕೇಳಿದರು “ಯಾಕೆ ಏನಾಯ್ತು? ಒಮ್ಮೆಲೇ ಇಂಥ ಡಿಸಿಜನ್?”

“ನಮ್ಮ ಮಗಳಿಗೆ ಇಷ್ಟವಿಲ್ಲ, ನಾವು ಬಲವಂತ ಮಾಡಲ್ಲ”

“ಏನೋಪ್ಪ, ಕಾಲ ಬದಲಾಯಿಸಿಬಿಟ್ಟಿದೆ. ಮದುವೆ ಇಷ್ಟವಿರಲಿಲ್ಲಾಂದ್ರೆ ನಮ್ಮನ್ಯಾಕೆ ಕರೆಸ್ಬೇಕಿತ್ತು? ಏನೊ ನಮ್ಮ ಭಟ್ರು ಹೇಳಿದ ಸಂಬಂಧಾಂತ ಬಂದ್ರೆ,…” ಹುಡುಗನ ತಾಯಿಯ ಗೊಣಗಾಟ ನಡೆದೇ ಇತ್ತು.
“ಕಾರಣ ಕೇಳಬಹುದಾ?” ಸೋಲೊಪ್ಪಿಕೊಳ್ಳಲು ತಯಾರಿಲ್ಲದ ಹುಡುಗ ಕೇಳಿದ. ಆದರೆ ಯಾರೂ ಉತ್ತರಿಸಲಿಲ್ಲ.

ಅವರೆಲ್ಲ ಹೊರಗೆ ಹೋದಮೇಲೆ ಅಂಕಿತಾ ಕೇಳಿದಳು “ಇಲ್ಲಿ ಏನು ನಡೀತಿದೇಂತ ಯಾರದ್ರೂ ಹೇಳ್ತೀರ?”

ಸುಸ್ತಾದವರಂತೆ ಬೆವರು ಒರೆಸಿಕೊಳ್ಳುತ್ತ ಸೋಫಾದ ಮೇಲೆ ಕುಳಿತು ತಂದೆ ಹೇಳಿದರು “ಏನಂಥ ದೊಡ್ಡ ವಿಷಯವಲ್ಲ, ಅನಿತಾ, ನೀನೂ ಇಲ್ಲೇ ಬಾರಮ್ಮ, ಕೂತು ಮಾತಾಡೋಣ.”

“ಸ್ವಲ್ಪ ಕಾಫಿ ಇದ್ರೆ ಕೊಡ್ತೀಯ?” ಹೆಂಡತಿಯತ್ತ ತಿರುಗಿ ಹೇಳಿದರು.

ಅಷ್ಟರಲ್ಲಿ ಅನಿತಾ ಬಂದು ತಂದೆಗೆ ಒರಗಿ ಕುಳಿತಳು. ಆತ ಪ್ರೀತಿಯಿಂದ ಅವಳ ತಲೆಯಮೇಲೆ ಕೈಯಾಡಿಸಿದರು.  ಅಂಕಿತಾ ಮಾತ್ರ ಇಬ್ಬರನ್ನೂ ದುರುಗುಟ್ಟಿ ನೋಡುತ್ತ ಎದುರಿನ ಕುರ್ಚಿಯ ಮೇಲೆ ಕುಳಿತಳು.  ತಾಯಿ ಕಾಫಿ ತರುವ ತನಕ ಎಲ್ಲರೂ ಹಾಗೆಯೇ ಕುಳಿತಿದ್ದರು.

ಕಾಫಿ  ಕುಡಿಯುತ್ತ ಅನಿತಾ ಹೇಳಿದಳು, “ಅಕ್ಕ, ನಾನು ಹೋದವಾರ ಮಾರ್ಕೆಟ್ಟಿಗೆ ಹೋಗಿದ್ದೆ. ಹೋಗುವಾಗ ನಡಕೊಂಡೇ ಹೋಗಿ ವಾಪಾಸು ಬರುವಾಗ ಆಟೋದಲ್ಲಿ ಬರಬೇಕೆಂದಿದ್ದೆ. ನಾನು ಫುಟ್ ಪಾತ್ ಮೇಲೆ ನಡೆಯುತ್ತಿದ್ದೆ. ಆವಾಗ,”

ಅಷ್ಟರಲ್ಲಿ ಮೊಬೈಲ್ ರಿಂಗಾಯಿತು. ತಂದೆಯೇ ಎತ್ತಿದರು “ಶಂಕರ ಭಟ್ಟರ ಫೋನು” ಎನ್ನುತ್ತ. ಮಧ್ಯೆ ಮಧ್ಯೆ ’ಹೌದು, ಸರಿ, ನಾನು ಹೇಳ್ತೀನಿ, ಭೇಟಿಯಾಗೋಣ’ ಬಿಟ್ರೆ ಅವರೇನೂ ಮಾತಾಡಲಿಲ್ಲ. ಫೋನ್ ಇಟ್ಟು ಅನಿತಾ ಕಡೆಗೆ ತಿರುಗಿ ಹೇಳಿದರು, “ಆ ಹುಡುಗ ಹೊರಗೆ ಹೋಗ್ತಿದ್ದಂತೇ ಭಟ್ಟರಿಗೆ ಫೋನ್ ಮಾಡಿ ಬಯ್ದನಂತೆ, ಪಾಪ ಬಹಳ ಬೇಜಾರು ಮಾಡಿಕೊಂಡರು.”

ಅನಿತಾ ಸಿಟ್ಟಿನಿಂದ “ಅದಕ್ಕೇ ನಾನು ಹೇಳಿದ್ದು, ಅವರಿಗೆಲ್ಲ ಸ್ಪಷ್ಟವಾಗಿ ಹೇಳಿಬಿಡೋಣಾಂತ, ನೀವಿಬ್ರೂ ಬೇಡಾಂದ್ರಿ”

“ಹಾಗೆಲ್ಲ ಒರಟಾಗಿ ಮಾತಾಡಿದ್ರೆ ಚೆನ್ನಾಗಿರಲ್ಲ.” ಅಮ್ಮನ ಸಮಜಾಯಿಸುವಿಕೆ.

“ಅಮ್ಮ, ನಾನೂ ಒಬ್ಳು ಇಲ್ಲಿದೀನಿ. ನನಗೂ ಸ್ವಲ್ಪ ಹೇಳಿ” ಅಂಕಿತಾ ಮಧ್ಯೆಯೇ ಮಾತಾಡಿದಳು.

ಅನಿತಾ ಅವಳ ಕಡೆಗೆ ತಿರುಗಿ ಹೇಳಿದಳು “ಅದೇ ಅಕ್ಕ ನಾನು ಹೇಳ್ತಾ ಇದ್ನಲ್ಲ, ಮಾರ್ಕೆಟ್ಟಿಗೆ ಹೋಗೋವಾಗ ಒಬ್ಬ ಮುದುಕ ರಸ್ತೆ ಕ್ರಾಸ್ ಮಾಡ್ತಾ ಇದ್ರು, ಅವರ ಕೈಯಲ್ಲಿ ತರಕಾರಿ ತುಂಬಿದ ಚೀಲ ಇತ್ತು. ಅವರು ಅತ್ತಿತ್ತ ನೋಡ್ತಾ ಸಾವಕಾಶವಾಗಿ ನಡೀತಿದ್ರು. ಅಷ್ಟರಲ್ಲಿ ಈ ಹುಡುಗ ಬೈಕ್ ಮೇಲೆ ಜೋರಾಗಿ ಹಾರ್ನ್ ಬಾರಿಸುತ್ತ ಫುಲ್ ಸ್ಪೀಡಲ್ಲಿ ಬಂದ. ಆ ಮುದುಕರು ಪಾಪ ಒಮ್ಮಿಗ್ಲೇ ಹೆದ್ರಿ ರಸ್ತೆ ಮಧ್ಯದಲ್ಲೇ ನಿಂತುಬಿಟ್ರು. ಅವರ ಕೈಚೀಲ ಕೆಳಗೆ ಬಿದ್ದು ಒಂದಿಷ್ಟು ಟೊಮ್ಯಾಟೊ, ಆಲುಗಡ್ಡೆಗಳು ಉರುಳಿದವು. ನಾನು ಮತ್ತು ಹತ್ತಿರ ಇದ್ದ ಕೆಲವರು ತಕ್ಷಣ ಅವರಿಗೆ ಹೆಲ್ಪ್ ಮಾಡ್ಲಿಕ್ಕೆ ಹೋದ್ವಿ. ಆ ಹುಡುಗ ಕೊನೇ ಗಳಿಗೇಲಿ ಬ್ರೇಕ್ ಹಾಕಿದ, ಇಲ್ಲಾಂದ್ರೆ ಅವರಿಗೆ ಹೊಡೆದೇ ಬಿಡುತ್ತಿದ್ದ.ಇಲ್ಲಿ ತನಕ ಎಲ್ಲ ಸರಿಯಾಗೇ ಇತ್ತು. ಒಂದಿಷ್ಟು ಜನ ಕೂಡಿದರು, ಕೆಲವರು ಆ ಹುಡುಗನಿಗೆ ಸ್ವಲ್ಪ ಬುದ್ಧಿಮಾತು ಹೇಳೋ ತವಕದಲಿದ್ದರು.

ಆದರೆ ಆ ಹುಡುಗ ಒಮ್ಮೆಲೇ ಆ ಮುದುಕನ ಶರಟಿನ ಕಾಲರ್ ಹಿಡಿದು “ಏನೊ ಮುದುಕಾ, ರಸ್ತೆ ಮಧ್ಯದಲ್ಲಿ ಯಾಕೋ ನಡಿಯೋದು? ನನ್ನ ಬೈಕಿಗೆ ಏನಾದ್ರು ಅಗಿದ್ರೆ? ಅಂತ ಏಕವಚನದಲ್ಲಿ ಏನೇನೋ ಕೆಟ್ಟ ಮಾತು ಬೈದ. ಅವನು ಮಾತಾಡೋ ರೀತಿಗೆ ಎಲ್ಲರೂ ಗಾಬರಿಯಾಗಿ ನಿಂತಿದ್ರು. ಆತ ಮಾತ್ರ ಏನೂ ಆಗೇ ಇಲ್ಲದಂಗೆ ಬೈಕ್ ಹತ್ತಿ ಹೊರಟುಹೋದ.

Facebook ಕಾಮೆಂಟ್ಸ್

Usha Jogalekar: ಉತ್ತರ ಕರ್ನಾಟಕದ ಗದಗಿನಲ್ಲಿ ಬೆಳೆದಿದ್ದು. ಸದ್ಯಕ್ಕೆ ಪುಣೆಯಲ್ಲಿ ವಾಸ. ಕಂಪ್ಯೂಟರ್ ಎಂಜಿನಿಯರಿಂಗ್ ಮಾಡಿ ಕಾಲೇಜೊಂದರಲ್ಲಿ ಅಸಿಸ್ಟಂಟ್ ಪ್ರೊಫೆಸರ್. ಓದು, ಭರತನಾಟ್ಯ, ಪ್ರವಾಸ ಆಸಕ್ತಿಯ ವಿಷಯಗಳು. ಚಿಕ್ಕ ಕಥೆ, ಲೇಖನ ಬರೆಯುವ ಹವ್ಯಾಸ.
Related Post