ನಟ್ಟಿರುಳ ರಾತ್ರಿ. ನಿಶ್ಯಬ್ಧ ವಾತಾವರಣ. ದೂರದಲ್ಲಿ ನಾಯಿಗಳ ಗೂಳಿಡುವ ಸದ್ದು. ನೆರಳೇ ಕಾರಣ ಇರಬೇಕು ಕೂಗಲು. ಅಲ್ಲೊಂದು ಇಲ್ಲೊಂದು ಮಿಣುಕು ದೀಪ. ಯಕ್ಷಗಾನ ಮುಗಿಸಿಯೊ ಅಥವಾ ನಿದ್ದೆಯನ್ನು ತಡೆಯಲಾಗದೆಯೊ ಅಥವಾ ಛೆ, ಇದು ಯಾಕೊ ಭಾಗವತ ಹಾಡುವವನು ಸರಿ ಇಲ್ಲವೆಂದೊ ಮನೆ ಕಡೆ ದಾರಿ ಹಿಡಿದಿರುವ ಮಂದಿಯ ಕೈಯಲ್ಲಿ ಮಾತಿನ ಜೊತೆ ಒಂದು ಬೆಳಕಿನ ಸಲಕರಣೆ. ಸೂಡಿ ಹಿಡಿದವನ ಕೈ ಆಗಾಗ ಬೀಸುವುದು ಆರದಿರಲೆಂದು. ದೂರದಿಂದ ನೋಡುವವರ ಕಣ್ಣಿಗೆ ಬೆಂಕಿಯ ಚೆಲ್ಲಾಟ. ಆ ರಾತ್ರಿಯ ನೀರವತೆ ಪಿಸು ಮಾತೂ ಕೂಡ ಜೋರಾಗಿ ಕೇಳುವಷ್ಟು ಮೌನ. ಪ್ರಶಾಂತ, ತಂಪು ಗಾಳಿ. ಹಳ್ಳಿಯ ರಾತ್ರಿಯ ಸೊಗಡು ವರ್ಣಿಸಲಾಧ್ಯ!
ಹಳೆಯ ನೆನಪುಗಳ ವಿಷ ಸಾಮಾನ್ಯವಾಗಿ ಮರೆಯಾಗುವುದು ಅಪರೂಪ. “ನೆನಪು ಸುಖವನ್ನೂ ಕೊಡುತ್ತದೆ ಅಷ್ಟೆ ದುಃಖವನ್ನೂ ಕೊಡಬಲ್ಲದು. ” ಎಲ್ಲಿರಲಿ ಹೇಗಿರಲಿ ಇಡೀ ಮನಸ್ಸು ದೇಹ ಆವರಿಸಿಕೊಂಡು ಒಂದೊಂದೆ ರೋಮವನ್ನು ಆಗಾಗ ಕೀಳುತ್ತಿರುತ್ತದೆ ರಕ್ತ ಪಿಶಾಚಿಯಂತೆ. ಕೊನೆ ಕೊನೆಗೆ ನೆನಪುಗಳೆ ಒಂಟಿತನವನ್ನು ದೂರ ಮಾಡುವ ಸಂಗಾತಿಯಾಗಿ ಇರುಳ ಸಾಮ್ರಾಜ್ಯ ಆಳಲು ಶುರುಮಾಡುತ್ತವೆ. ಯಾಕೆಂದರೆ ನೋವನ್ನು ಯಾರೂ ಹಂಚಿಕೊಳ್ಳಲು ಸಾಧ್ಯವೆ ಇಲ್ಲ. ಅವರವರ ನೋವಿಗೆ ಅವರವರೆ ಜವಾಬ್ದಾರಿ.
ಮನೆಯ ಹಂಚಿನ ಮಾಡಿನ ಮೇಲೆ ಕುಳಿತು ಆಕಾಶವನ್ನೆ ತದೇಕ ಚಿತ್ತದಿಂದ ನೋಡುತ್ತಿದ್ದಾನೆ ನಕ್ಷತ್ರಗಳನ್ನು ಲೆಕ್ಕ ಮಾಡುವಂತೆ. ಅಲ್ಲಿ ಯಾವಾಗಲೂ ನಕ್ಷತ್ರಗಳು ಒಟ್ಟಾಗೆ ಇರುತ್ತವೆ. ಎಂತಹ ಅನ್ಯೋನ್ಯತೆ ಅಲ್ಲಿ. ಮನುಷ್ಯನ ಬುರುಡೆಗೆ ಬಂದಂಥಹ ಹೆಸರು ಇಟ್ಟರೂ ಯಾವ ತಕರಾರಿಲ್ಲದೆ ಏಣಿಸಿ ನೋಡೋಣ ನಮ್ಮನ್ನು ಅನ್ನುವ ಸವಾಲಿನಲ್ಲಿ! ನೋಡುತ್ತ ಅದೆಷ್ಟು ಹೊತ್ತು ಹಾಗೆ ಕುಳಿತಿದ್ದನೊ ಗೊತ್ತಿಲ್ಲ. ಮಂಜು ಮುತ್ತಾಗಿ ಎಲೆಗಳ ಮೇಲೆ ಕುಳಿತಾಗಲೆ ಅರಿವಾಗಿದ್ದು, ಓ! ನಭೋ ಮಂಡಲದಲ್ಲಿ ಸೂರ್ಯೋದಯದ ಆಗಮನ.
ಬೆಳಗಿನ ಕಾರ್ಯಕ್ರಮ ಸದ್ದಿಲ್ಲದೆ ಮುಂದುವರಿಯುತ್ತಿದೆ.
ದೇಹ ದಂಡನೆ ಸಾಮಾನ್ಯವಾಗಿ ವಾರದ ಏಳೂ ದಿನಗಳು ತಪ್ಪದೆ ಮಾಡುತ್ತಾನೆ, ದೇವಸ್ಥಾನಕ್ಕೆ ಹೋದಷ್ಟು ಭಕ್ತಿ ಯಿಂದ. ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ. ಹಲವಾರು ವರ್ಷಗಳಿಂದ ರೂಢಿಸಿಕೊಂಡು ಬಂದಿರುವ ರೂಢಿ.
ಹೌದು ಅವನೊಬ್ಬ ಭಾವ ಜೀವಿ. ಏನು ಮಾಡಲಿ, ನೋಡಲಿ ಅಲ್ಲೊಂದು ಸೌಂದರ್ಯ ಕಾಣುವ ವ್ಯಕ್ತಿ. ಬಟ್ಟೆ ಕೊಳಕಾಯಿತೆಂದು ನಿರ್ಲಕ್ಷದಿಂದ ಬಿಸಾಕುವ ಮನಸ್ಥಿತಿಯವನಲ್ಲ. ಒಪ್ಪ ಓರಣ ಮಾಡಿ ಅಲ್ಲೊಂದು ಹೊಸತನ ಕಾಣುವ ಪೃವೃತ್ತಿ. ಪ್ರೀತಿ ಅನ್ನುವ ಹೆಸರಿಗೆ ಅನ್ವರ್ಥ ನಾಮ ಅವನು.
ಇಬ್ಬರೂ ಹೊಳೆಯ ದಂಡೆಯ ಮೇಲೆ ನಡೆಯುತ್ತಿದ್ದಾರೆ ಮನದೊಳಗಿನ ಮಾತು ಆಡಿಕೊಂಡು. ಜಗವೆಲ್ಲ ನಮ್ಮದೆ ಅನ್ನುವಷ್ಟು ಸುಂದರವಾದ ಗಳಿಗೆ ಆ ಕ್ಷಣ ಅವರಿಗೆ. ಮಾತು ಮಾತು ಮಾತು. ಮುಗಿಯದ ಮಾತು. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ.
ಬಹುಶಃ ಪ್ರೀತಿಯ ಸೆಳೆತ ಅವರಿಬ್ಬರಲ್ಲಿ ಹುಚ್ಚು ಧೈರ್ಯ. ಲೋಕದ ಹಂಗು ತೊರೆದು ಮಾತಿನಲ್ಲಿ ಮುಳುಗಿ ಹೋಗಿತ್ತು ಪ್ರೀತಿಸುವ ಹೃದಯ. ಜಗತ್ತೇ ಮರೆಯಾಗಿ.
ಸುತ್ತೆಲ್ಲ ಕುಕ್ಕುವ ಕಣ್ಣು
ಕುರುಡಾಗಲಿ ಬಿಡು
ಆಗಿರುವ ನಾವು
ಹಾಯಾಗಿ
ಈ ಲೋಕದಲ್ಲಿ!
ಎಂಬಂತೆ ದಾರಿ ಸಾಗುತ್ತಿತ್ತು. ಬಯಕೆಗಳ ತೊರೆದ ಹೃದಯದ ಪ್ರೀತಿಯ ಮಾತುಗಳು.
“ಇಬ್ಬರೂ ಒಂದಾಗಿ ಅನ್ಯೋನ್ಯತೆ ಬದುಕು ಕೊನೆಯವರೆಗು ಉಳಿಯಲು ಈ ಮಾತುಗಳು ಅದೆಷ್ಟು ಮುಖ್ಯ.” ಇದು ಗೊತ್ತಾಗಿದ್ದು ಅವಳ ಒಡನಾಟದಲ್ಲಿ.
“ಏ ಶಾಮಿ, ಈ ಜನ್ಮ ಎಲ್ಲ ಹೀಗೆ ಮಾತಾಡುತ್ತಲೆ ಕಳೆದುಬಿಡೋಣ ಕಣೆ. ಬಹುಶಃ ನಾವಿಬ್ಬರೂ ಒಳ್ಳೆ ಫ್ರೆಂಡ್ಸ್ ಆಗಿರುತ್ತೇವೆ, ಅಲ್ವಾ. ” “ಹೂ ಕಣೋ ಜೀವನದಲ್ಲಿ ನಾ ಯಾರ ಹತ್ತಿರ ಇಷ್ಟು ಮಾತಾಡಿಲ್ಲ. ಸಮಯ ಕಳೆದಿದ್ದೆ ಗೊತ್ತಾಗುತ್ತಿಲ್ಲ. ಹ್ಯಾಗೊ ಸಾಧ್ಯ ಇದೆಲ್ಲ. ಆಶ್ಚರ್ಯ ಆಗುತ್ತಿದೆ.” ” ಸರಿ ಬಾ ಹೋಗೋಣ.” “ಅಲ್ಲ ಈಗ ಮಾಡುತ್ತಿರುವುದು ಏನು? ಅದೆ ತಾನೆ. ಕಾಲುದಾರಿಗೆ ಬಂದಾಯಿತಲ್ಲೊ, ಇನ್ನೇನು ನಮ್ಮಿಬ್ಬರ ಮನೆ ದಾರಿ ಇಲ್ಲೆ ಕವಲೊಡೆಯೋದು ಅಲ್ವಾ. ಸರಿ ನಾಳೆ ಸಿಗುತ್ತೇನೆ.”
“ನೆನಪುಗಳು ಗರಿಗೆದರಿದಾಗ ಮುಂದಿರುವುದನ್ನೂ ಮರೆತು ಅದರಲ್ಲಿ ಮುಳುಗಿ ಹೋಗುತ್ತದೆ ಮನಸ್ಸು. ಸಮಯದ ಅರಿವು ಅದಕ್ಕಿಲ್ಲ. ನಿಟ್ಟುಸಿರು, ಹತಾಷೆಯ ಮನೋಭಾವಕ್ಕೆ ಹಿಡಿದ ಕನ್ನಡಿ. ಅರಿವಿಲ್ಲದೆ ಜೊತೆಯಾಗಿ ಬರುವ ಎಲ್ಲರ ಸಂಗಾತಿ.”
ಶಾಮಲ ಅಕಸ್ಮಾತ್ ಪರಿಚಯವಾದವಳು ದೂರದ ಮಂಗಳೂರಿನಲ್ಲಿ. ಅದೂ ಒಂದೂ ಬಸ್ ಸ್ಟ್ಯಾಂಡಿನಲ್ಲಿ. ಕಾಲೇಜಿಗೆ ಹೊಗಲು ಬಸ್ ಕಾಯುತ್ತಿದ್ದಳು. ನಾನೋ ಉಡುಪಿಗೆ ವ್ಯಾಪಾರದ ನಿಮಿತ್ತ ಹೋಗಬೇಕಿತ್ತು. ಬಸ್ ಸ್ಟ್ಯಾಂಡಿನ ಹತ್ತಿರ ನನ್ನ ಕಾರು ಬರುತ್ತಿದ್ದ ಹಾಗೆ ಕೈ ಬೀಸಿ ಡ್ರಾಪ್ ಕೇಳಿದ ಅವಳು ಅರಿವಿಲ್ಲದಂತೆ ನನ್ನ ಕಾರು ಕೂಡ ನಿಲ್ಲಬೇಕೆ. ಇದೆ ಇರಬೇಕು ಜನ್ಮದ ನಂಟು! ಅಗ ಅನಿಸಿರಲಿಲ್ಲ ಹೀಗೆ. ಆದರೆ ನೆನಪಿಸಿಕೊಂಡರೆ ಮುಖದಲ್ಲಿ ತಿಳಿ ನಗು. ಪರಿಚಯಿಸಿಕೊಂಡಾಗ ಗೊತ್ತಾಗಿದ್ದು ಪಕ್ಕದೂರಿನವಳೆ. ಒಂಥರಾ ಖುಷಿಯಾಗಿತ್ತು. ಅವಳು ನನ್ನ ಮನ ಸೆಳೆದ ಸುಂದರಿ!
ಕಾಲೇಜು ಹತ್ತಿರವಾಗುತ್ತಿದ್ದಂತೆ, ” ತುಂಬಾ ಥ್ಯಾಂಕ್ಸ್ ಕಣ್ರೀ. ಇವತ್ತು ಎಕ್ಸಾಮ್. ನಿಮ್ಮಿಂದ ತುಂಬಾ ಸಹಾಯ ಆಯಿತು. ಊರಿಗೆ ಬರುತ್ತೇನೆ. ಆಗ ಸಿಗುತ್ತೇನೆ. ಬೈ.”
ಅದೇನೊ ಸೆಳೆತ ಅವರಿಬ್ಬರಲ್ಲಿ ಅಂದಿನಿಂದ.
ಚಿಕ್ಕಪ್ಪನ ಮನೆಯಲ್ಲಿ ಓದಲು ನೆಲೆಸಿದ್ದಳು. ಪರೀಕ್ಷೆ ಮುಗಿದು ಒಂದು ತಿಂಗಳು ರಜೆ. ಬಂದವಳೆ ಇವನ ಕಾಣುವ ತವಕ. ಮೊದಲ ಸಲ ಭೇಟಿಯಲ್ಲಿ ಎಷ್ಷೊಂದು ಮಾತಾಡಿಬಿಟ್ಟೆವಲ್ಲ; ಆಶ್ಚರ್ಯ ಅವನಿಗೆ. ಆದರೆ ಏನು ಮಾತನಾಡಿದೆವು ಅಂತ ಯೋಚಿಸುತ್ತಾನೆ. ಅಂತ ಹೇಳಿಕೊಳ್ಳುವ ಮಾತೇನು ಇಲ್ಲ, ಆದರೆ ಬರಿ ಮಾತು. ಅದರಲ್ಲೂ ತನ್ನದೆ ಮಾತು ಜಾಸ್ತಿ. ಅವಳೊ ಅಲ್ಲೊಂದು ಇಲ್ಲೊಂದು. ಆದರೆ ಆವಳಾಡಿದ ಮಾತು ಜೀವನ ಪೂರ್ತಿ ನೆನಪಿಸಿಕೊಳ್ಳಬೇಕಾದ ಮಾತು. ದಿನವೂ ಭೇಟಿ ಮುಂದುವರೆದಿತ್ತು. ಅದೆಷ್ಟೋ ಮಾತುಗಳು ಅವನ ಇರುವನ್ನೇ ಬದಲಾಯಿಸಿಬಿಟ್ಟಿತ್ತು.
“ಸರಿ ಕಣೊ ನಾ ನಾಳೆ ಹೊರಡುತ್ತೇನೆ. ಇನ್ನು ಯಾವಾಗ ಬರುತ್ತೇನೆ ಗೊತ್ತಿಲ್ಲ. ಇನ್ನೊಮ್ಮೆ ಸಿಗೋಣ.”
ಇರುವಷ್ಟು ದಿನ , ದಿನ ಕಳೆದಿದ್ದೆ ಗೊತ್ತಾಗಲಿಲ್ಲ. ಆದರೆ ನನ್ನಲ್ಲಿ ತುಂಬಾ ಬದಲಾವಣೆ ಆಗಿದೆ ಮೊದಲಿನ ಸಿಟ್ಟು ಕೋಪ ಇಲ್ಲ ಈಗ. ಮನಸ್ಸು ಸಮಾಧಾನವಾಗಿದೆ ಆದರೆ ಅವಳ ನೆನಪು ಎಷ್ಟು ಕಾಡುತ್ತಿದೆ. ಯಾಕೆ?
ಮನಸ್ಸು ಯಾಕೊ ಸಿಕ್ಕಾಪಟ್ಟೆ ಗೊಂದಲಮಯವಾಗಿದೆ. ಓದುವ ಮನಸ್ಸು ಕುಳಿತು ತಡಕಾಡಿದೆ ಹತ್ತಾರು ಪುಸ್ತಕ. ಆದರೆ ಯಾವ ಪುಸ್ತಕವನ್ನೂ ಒಂದು ನಾಲ್ಕು ಸಾಲು ಓದಲು ಸಾಧ್ಯವಾಗಲಿಲ್ಲ. ಯಾಕೆ ನೀನಿಷ್ಟು ಕಾಡುತ್ತಿದ್ದಿಯಾ? ನಿನ್ನ ಮರಿಬೇಕು ಅನಿಸುತ್ತದೆ. ಯಾವತ್ತೂ ನನಗೆ ಸಿಗೋದಿಲ್ಲ; ನನಗೆ ಗೊತ್ತು. ಆದರೂ ನಿನ್ನ ಮರೆಯೊಕೆ ಸಾಧ್ಯವಾಗುತ್ತಿಲ್ಲ. “ಶಮೀ.. ಐ ಲವ್ ಯು”
ಇನ್ನೊಮ್ಮೆ ನೀನು ಊರಿಗೆ ಬಂದಾಗ ನಿನ್ನಿಂದ ದೂರವಾಗಿರಬೇಕು. ನೀನು ಚೆನ್ನಾಗಿ ಓದಿದ ಪಟ್ಟಣದ ಹುಡುಗಿಯಾಗಿದಿಯಾ, ನಾನು ಹಳ್ಳಿ ಗಮಾರ. ಅನಿವಾರ್ಯವಾಗಿ ನನ್ನ ಓದು ಹತ್ತನೆ ಕ್ಲಾಸಿಗೆ ಮುಗಿದೋಯಿತು. ಆದರೂ ಓದೋದು, ಬರಿಯೋದು ಅದು ಹೇಗೆ ಅಂಟಿಕೊಂಡಿತೊ ಗೊತ್ತಿಲ್ಲ. ಗದ್ದೆ ತೋಟ ಅಂತ ಇಲ್ಲೆ ಕಾಲ ಕಳಿತಾ ಇದ್ದೇನೆ. ನನಗೂ ನಿನಗೂ ಏನಿದೆ ಸಾಮ್ಯ. ನೀನಿನ್ನು ಚಿಕ್ಕ ಹುಡುಗಿ. ನಿನ್ನ ಕಂಡರೆ ನನಗೂ ತುಂಬಾ ಇಷ್ಟ ಕಣೆ. ನಿನ್ನ ಗುಣ, ನಡತೆ , ಮಾತನಾಡುವ ರೀತಿ, ನಿನ್ನಷ್ಟಕ್ಕೆ ಇರುವ ಸ್ವಭಾವ ನಾನು ತುಂಬಾನೆ ಇಷ್ಟ ಪಡುತ್ತೇನೆ. ಊಹಿಸಲೂ ಕಷ್ಟ ಕಣೆ ನೀನಿಲ್ಲದ ದಿನಗಳು. ನಿನ್ನ ಕಳೆದುಕೊಳ್ಳೋದು. ಆದರೆ ನಾವು ವಾಸ್ತವದಲ್ಲಿ ಒಪ್ಪಿಕೊಳ್ಳಲೇ ಬೇಕು. ಒಮ್ಮೊಮ್ಮೆ ಹೀಗನಿಸುತ್ತೆ..…
ಈ ಪ್ರೀತಿ
ಅನ್ನೊ ಮಾಯೆ
ಆ ಭಗವಂತ
ಯಾಕಾದ್ರೂ
ಸೃಷ್ಟಿ ಮಾಡಿದನೊ
ಸಿಗಲಾರದ್ದರಲ್ಲೇ
ಆಸೆ ಹುಟ್ಟಿಸಿ
ಜೀವಂತ ಶವ
ಮಾಡಿಬಿಡುತ್ತಾನೆ.
ಈಗೀಗ ಅವನು ತುಂಬಾ ಯೋಚಿಸಲು ಶುರು ಮಾಡಿದ್ದಾನೆ ಜವಾಬ್ದಾರಿಯುತವಾಗಿ. ವಾಸ್ತವದಲ್ಲಿ ಎಲ್ಲವೂ ಅಸಾಧ್ಯ ಅನ್ನಿಸಲು ಶುರುವಾಗಿದೆ. ಈ ಸಮಾಜದಲ್ಲಿ ತಮ್ಮಿಬ್ಬರ ಓಡಾಟ ಆಗಲೆ ಜನ ಗಮನಿಸುತ್ತಿದ್ದಾರೆ. ಇದು ಸ್ವಾಭಾವಿಕ. ಆದರೆ ನನ್ನ ಶಾಮಿ ಇವರೆಲ್ಲರ ಮಾತಿಗೆ ಬಲಿಯಾಗಬಾರದು. ಸಿಗಲಾರದಕ್ಕೆ ಪರಿತಪಿಸುವುದರಲ್ಲಿ ಯಾವ ಪ್ರಯೋಜನ ಇಲ್ಲ.
ಅನುಭವಿಸುವ ನೋವು
ನನಗಿರಲಿ
ಆದರೆ
ಆನುಭವಿಸಲಾಗದ ನೋವು
ನಿನಗೆ
ಬರುವುದು ಬೇಡ!
ಊಟ ಮಾಡುತ್ತಿದ್ದ ಕೈ ತಟ್ಟೆಯ ಅನ್ನದಲ್ಲಿ ತಡಕಾಡುತ್ತಿತ್ತು. ಮನಸ್ಸು ಮಂಗಳೂರಿನ ಕಡೆ ವಾಲಿತ್ತು. “ಮಗಾ, ಯಾಕೊ ಏನು ಯೋಚನೆ ಮಾಡುತ್ತಿದ್ದಿಯಾ? ಊಟ ಮಾಡು” ಅಮ್ಮ ಅಂದಾಗಲೆ ಯೋಚನೆಯಿಂದ
ಈಚೆ ಬಂದು ಊಟದ ಶಾಸ್ತ್ರ ಮುಗಿಸಿ ಎದ್ದು ಹಿತ್ತಲ ಕಡೆ ಕೈ ತೊಳೆಯಲು ಹೋಗಿ ಉಂಡಿರೋದೆಲ್ಲ ಕಕ್ಕಿದ್ದು. ರಾತ್ರಿಯ ಜಾಗರಣೆ ಪ್ರಭಾವ. ತಲೆಯೆಲ್ಲ ಭಾರ.
ನಿದ್ದೆಯಿಂದ ಎದ್ದಾಗ ಸಂಜೆ ಆರು ಗಂಟೆ. ಸೂರ್ಯ ತನ್ನ ಡ್ಯೂಟಿ ಮುಗಿಸಿ ಹೊರಡುವ ಹೊತ್ತು. ಮನಸ್ಸಿನ ಯೋಚನೆಗೆ ಹೇಗಾದರೂ ಕಡಿವಾಣ ಹಾಕಿ ಏನಾದರು ಬೇರೆ ಕೆಲಸದಲ್ಲಿ ತೊಡಗದಿದ್ದರೆ ಗತಿ ಇಲ್ಲ. ಇದ್ದ ಅಲ್ಪ ಸ್ವಲ್ಪ ಜಮೀನು ನಡೆಸಿಕೊಂಡು ಹೋಗಬೇಕಾದ ಮಗ. ಅಪ್ಪ ನಡೆಸಿಕೊಂಡು ಬಂದ ಸಣ್ಣ ವ್ಯಾಪಾರ. ಕೂತರೆ ಜೀವನ ಸಾಗಬೇಕಲ್ಲ. ಏನೇನೊ ಲೆಕ್ಕಾಚಾರದ ಹೊಂದಾಣಿಕೆಯಲ್ಲಿ ಜೀವನ ಇಷ್ಟೇ ಅನ್ನುವ ಮನಸ್ಥಿತಿ ಒಮ್ಮೊಮ್ಮೆ.
ಆದರೆ ಶಾಮಿಯ ಆಗಮನ ಅವನಲ್ಲಿ ಹೊಸ ಉತ್ಸಾಹ ಉಂಟುಮಾಡಿತ್ತು. ಅದೆಂತಹ ಖುಷಿಯಿತ್ತು ಅವಳೊಂದಿಗಿನ ಒಡನಾಟ. ಅವಳ ತುಟಿಯ ನಗು ಯಾವತ್ತೂ ಮರೆಯೋಕೆ ಸಾಧ್ಯ ಇಲ್ಲ. ‘” ಏ ಶಾಮಿ, ನಿನ್ನ ತುಟಿ ತುಂಬ ಚೆನ್ನಾಗಿದೆ, ಎಲ್ಲಿಂದ ತಂದೆ” ನಾಚಿಕೆಯಿಂದ ತುಟಿ ಇನ್ನೂ ಕೆಂಪಾಗಿತ್ತು. ಆದರೆ ಯಾವತ್ತೂ ಅವಳನ್ನು ಆಸೆಪಟ್ಟವನಲ್ಲ.
ಆ ಖುಷಿಯ ದಿನಗಳಲ್ಲಿ ಅದೆಷ್ಟು ಬರೆದೆ ನನ್ನೊಳಗಿನ ಮಾತುಗಳನ್ನು. ನೆನಪಿನ ಪುಟಗಳು ಅವೆಲ್ಲ. ಅದೆ ನೆನಪಲ್ಲಿ ನಾನು ಖುಷಿಯಿಂದ ಬದುಕಬೇಕು. ನನ್ನಂಥ ಓದಿಲ್ಲದ ಹಳ್ಳಿಯ ಗುಗ್ಗುನಿಗೆ ಅವಳನ್ನು ಪಡೆಯುವ ಯೋಗ್ಯತೆ ಇಲ್ಲ. ನಾನು ಯಾವತ್ತೂ ಅವಳನ್ನು ಬಯಸಬಾರದು. ಅವಳು ಚಿನ್ನದಂತ ಹುಡುಗಿ. ಅವಳ ಬಗ್ಗೆ ಇರುವ ಪ್ರೀತಿ ಹೀಗೆ ಪವಿತ್ರವಾಗಿರಲಿ. ಯಾವ ಕಲ್ಮಶ ತಟ್ಟಬಾರದು. “ನಿಜವಾದ ಪ್ರೀತಿ ಪ್ರೀತಿಯ ವ್ಯಕ್ತಿ ಯ ಒಳಿತನ್ನೇ ಬಯಸುತ್ತದೆ” ಅದೆಷ್ಟು ನಿಜ. ಅವಳ ಕೂದಲು ಕೊಂಕಿದರೂ ನೋವಾಗುತ್ತದೆ. “ದೇವರೇ ಅವಳನ್ನು ಯಾವಾಗಲೂ ಸುಃಖವಾಗಿ ಇರಿಸು” ಸದಾ ಅವನ ಪಾರ್ಥನೆ ಕಾಣದ ದೇವರಲ್ಲಿ!
ಸುಮಾರು ಒಂದುವರೆ ತಿಂಗಳೆ ಆಗಿರಬಹುದು. ಇದ್ದಕ್ಕಿದ್ದಂತೆ ಶಾಮಿಯ ಆಗಮನ.
“ಹಾಯ್ ಸಂತು, ಹೇಗಿದಿಯಾ?” ತೋಟಕ್ಕೇ ಬಂದುಬಿಟ್ಟಿದ್ದಾಳೆ. ” ಇದೇನು ಇದು, ಯಾವಾಗ ಬಂದೆ?” “ನಿನ್ನೆ ರಾತ್ರಿ ಬಂದೆ.” “ಹೇಳು ಹೇಗಿದಿಯಾ?
ಏನ್ ಸಮಾಚಾರ?,” “ನಿನಗೊಂದು ಸರರ್ಪ್ರೈಸ್, ಏನು ಗೊತ್ತಾ?” ” ನೀ ಹೇಳಿದರೆ ತಾನೆ ಗೊತ್ತಾಗೋದು.”
“ಅದೆ ಕಣೊ ನನಗೆ ಮೆಡಿಕಲ್ ಸೀಟು ಸಿಕ್ಕಿದೆ ಕಣೊ. ನಂಗೆಷ್ಟು ಖುಷಿ ಆಗುತ್ತಿದೆ ಗೊತ್ತಾ? ನಿನ್ನ ಹತ್ತಿರ ಯಾವಾಗ ಹೇಳ್ತೀನೊ ಅಂತ ಓಡೋಡಿ ನೀನಿದ್ದಲ್ಲಿಗೆ ಬಂದೆ. ಬಾಯಾರಿಕೆ ಆಗುತ್ತಿದೆ, ನೀರಿದೆಯೇನೊ?”
“ಬೇಡ ಈ ತೋಟದ ನೀರು ಕುಡಿಬೇಡ, ಇರು ಎಳ್ನೀರು ಕೊಯಿದು ಕೊಡುತ್ತೀನಿ.”
ಮನಸ್ಸೆಲ್ಲ ಮುದುಡಿತ್ತು. ಅವಳು ಆಕಾಶದಲ್ಲಿ ಹಾರಾಡುತ್ತಿರುವ ಹಕ್ಕಿ. ನಾನು ಮೇಲೆ ನೋಡುತ್ತ ಸಂತೋಷಪಡಬೇಕಷ್ಟೆ. ಇದೆ ಸರಿಯಾದ ಸಮಯ. ಇವಳಿಗೆ ಎಲ್ಲ ಹೇಳಿಬಿಡಬೇಕು.
“ಶಾಮಿ, ಬಾ ಇಲ್ಲಿ ಕೂತುಕೊ. ನಾನು ನಿನ್ನ ಹತ್ತಿರ ಸ್ವಲ್ಪ ಮಾತಾಡಬೇಕು.” “ಸರಿ ಹೇಳು.”
“ನೋಡು ನಾ ಹೇಳೊದೆಲ್ಲ ಹೇಳಿದಿನಿ. ಅರ್ಥ ಮಾಡಿಕೊ. ಪದೆ ಪದೆ ನನ್ನ ಕಾಣೋಕೆ ಬರಬೇಡ.” ಹೀಗೆ ಮಾತಾಡುತ್ತಲೆ ಇದ್ದ ಮನಸ್ಸಿಲ್ಲದ ಮನಸ್ಸಿನಿಂದ ಎತ್ತಲೊ ನೋಡುತ್ತ! ಆದರೆ ಅವಳು ಯಾವಾಗ ಎದ್ದು ಹೋದಳು ಅವನಿಗೆ ಗಮನಕ್ಕೆ ಬರಲಿಲ್ಲ. ಪಾಪ ಅನ್ನಿಸಿತು. ಆದರೆ ಒಂದಲ್ಲಾ ಓಂದು ದಿನ ಅರ್ಥ ಮಾಡಿಕೊಳ್ಳುತ್ತಾಳೆ ಅನ್ನುವ ಭರವಸೆ ಮನೆ ಮಾಡಿತು.
ಆಗಲೆ ಹದಿಮೂರು ವರ್ಷ ಕಳೆದಿದೆ ಅವಳನ್ನು ದೂರ ಮಾಡಿಕೊಂಡು. ಎಲ್ಲಿದ್ದಾಳೊ, ಹೇಗಿದ್ದಾಳೊ. ಮದುವೆ ಮಾಡಿಕೊಂಡು ಸುಖವಾಗಿ ಇರಬೇಕು. ಚೆನ್ನಾಗಿ ಇರಲಿ. ಆದರೆ ನನ್ನ ಮನದಲ್ಲಿ ಕಲ್ಲಾಗಿ ಕುಳಿತುಬಿಟ್ಟಿದ್ದಾಳೆ. ಹೆಜ್ಜೆ ಹೆಜ್ಜೆಗೂ ನೆನಪಾಗುತ್ತಾಳೆ!
ಮುಂದುವರಿಯುವುದು…
-ಗೀತಾ ಹೆಗಡೆ
Facebook ಕಾಮೆಂಟ್ಸ್