X
    Categories: ಕಥೆ

ನೆನಪುಗಳಲ್ಲೊಂದು ಪ್ರೇಮಕಥೆ…

ಹಾಯ್ ಸೃಷ್ಟಿ…

ಯಾವಾಗ್ಲೂ ಹೇಳ್ತಿದ್ಯಲ್ಲಾ, “ಹೇ ರಕ್ಷಿತ್, ಏನೇನೋ ಕಲ್ಪನೆ ಮಾಡಿ ವಿಚಿತ್ರ ಕಥೆ ಬರೀತಾ ಇರ್ತಿಯಾ, ಅದೇ ತರ ನಮ್ ಕಥೆನೂ ಬರಿಬಾರ್ದಾ?” ಅಂತ. ಅಷ್ಟು ಹೇಳೋದಲ್ದೆ ತಲೆ ಮೇಲೆ ಬೇರೆ ಹೊಡಿತಾ ಇದ್ದೆ, ಇವತ್ತು ಬರಿಬೇಕು ಅಂದ್ಕೊಂಡಿದೇನೆ. ನೀನೇ ಬರೆಯೋಕೆ ಹೇಳಿದ್ರಿಂದ, ನಿನಗೆ ಕಥೆ ಹೇಳೋ ತರನೇ ಬರೆಯೋ ಹಂಬಲ. ಶುರುಮಾಡಲಾ? ಹಾಗೇ ಕತ್ತೆತ್ತಿ ಜೇಡ ಕಟ್ಟಿರೋ ಮೂಲೆ ನೋಡು…

ನೆನಪಿದೆಯಾ ನಿನಗೆ, ಆ ದಿನ ಕಾಲೇಜಿನಲ್ಲಿ ನಿನ್ನ ಮೊದಲ ಬಾರಿ ನೋಡಿದ್ದೆ. ಆಗ ನೀನು ನಗುತ್ತಿದ್ದೆ. ಅದು ನಿಜಕ್ಕೂ ಅತಿ ಮೋಹಕ ನಗುವಾಗಿತ್ತು. ವಯಸ್ಸಿನ ಹುಡುಗನ ಎದೆಯ ಬರಗಾಲ ತಣಿಸಲು ಆ ನಗೆಯ ಮಳೆ ಸಾಕಾಗಿತ್ತು. ನಗುತ್ತಲೇ ನನ್ನತ್ತ ತಿರುಗಿದ ನೀನು ತಕ್ಷಣ ನಗುವುದನ್ನೇ ನಿಲ್ಲಿಸಿದೆ. ನನಗೋ, ನನ್ನ ಮುಖದಲ್ಲಿ ಅಂತಹ ಭಯಂಕರ ಕಳೆ ಇದೆಯೇ? ನಿನ್ನ ನಗುವೇ ನಿಂತುಹೋಗುವಷ್ಟು!!! ಅನ್ನಿಸಿಬಿಟ್ಟಿತು. ಆದರೂ ಈ ದಿಲ್, ಹೃದಯ, ಹಾರ್ಟ್ ಅಂತಾರಲ್ಲ ಅದು ನಿನ್ನ ನಗುವಿಗೆ ತನ್ನೆಲ್ಲ ಶಸ್ತ್ರಾಸ್ತ್ರ ತ್ಯಾಗ ಮಾಡಿ ಶರಣಾಗಿತ್ತು. ಎಲ್ಲ ಪ್ರೇಮಕಥೆಗಳಂತೆ ಒಂದು ವಾರ ಎಲ್ಲೆಲ್ಲೋ ಮರೆಯಲ್ಲೇ ನಿಂತು ನೀನು ನಗುವುದನ್ನೇ ಕಾಯುವ ಕೆಲಸ ನಡೆಯಿತು. ಕಡೆಗೊಂದು ದಿನ ಸ್ವಲ್ಪ ಧೈರ್ಯ ಮಾಡಿ ನಿನ್ನ ಹಿಂದೇ ಹೊರಟೆ. ಅಂದು ನೀನು ನನ್ನ ನೋಡಿ ನಗುವನ್ನೇ ನಿಲ್ಲಿಸಿದ್ದೆ; ಇನ್ನು, ನಿಮ್ಮ ಅಪ್ಪ ನನ್ನ ನೋಡಿ ನಿನ್ನ ಕಾಲೇಜಿಗೆ ಕಳಿಸುವುದೇ ನಿಲ್ಲಿಸಿಬಿಟ್ಟರೆ? ಎಂಬ ಸಣ್ಣ ಭಯವೂ ಇತ್ತು, ಅದು ಬೇರೆ ವಿಷಯ. ಹಿಂಬಾಲಿಸುತ್ತಾ ಹೋದ ನನಗೆ “ಲಡ್ಡು ಬಂದು ಬಾಯಿಗೆ ಬಿತ್ತಾ?” ಎಂಬಂತಾಗಿತ್ತು. ಕಾರಣ ಇಷ್ಟೇ, ನೀನು ನಿನ್ನ ಮನೆ ಒಳಹೋದಾಗ,  ನಾನು ನಮ್ಮ ಮನೆ ಎದುರಿಗಿದ್ದೆ. ಅಂದರೆ ನಮ್ಮಿಬ್ಬರದು ಅಕ್ಕ ಪಕ್ಕದ ಮನೆ. ನಾವು ಒಂದು ವಾರದ ಹಿಂದಷ್ಟೇ  ಈ ಹೊಸ ಬಾಡಿಗೆ ಮನೆಗೆ ಬಂದಿದ್ದೆವು. ಕಾಲೇಜಿಗೆ ಸಮೀಪ ಎಂಬ ಕಾರಣಕ್ಕೆ ಮನೆ ಬದಲಾಯಿಸಿದ್ದೆವು. ನೀನು ನಮ್ಮ ಪಕ್ಕದ ಮನೆಯವಳೆಂದು ತಿಳಿದ ಆ ದಿನದಿಂದ ನನ್ನ ಪ್ರೇಮಕಥೆಗೆ ಹೊಸ ಬಣ್ಣ ಬಂದಿತ್ತು.

“ಮೇರೆ ಬಾಜುವಾಲೆ ಕಿಟಕಿ ಮೆ, ಎಕ್ ಚಾಂದ್ ಕಾ ಟುಕಡಾ ರೆಹೆತಾ ಹೆ” ಎಂದು ಹಾಡುವ ಖಯಾಲಿ ಶುರುವಾಯಿತು ನನಗೆ. ಒಂದೆರಡು ವಾರ ಆಗುವಾಗ ನನ್ನ ಅಮ್ಮ ಹಾಗೂ ನಿನ್ನ ಅಮ್ಮನ ನಡುವೆ ಒಂದು ಕಪ್ ಸಕ್ಕರೆ, ಮೊಸರು ಇವೆಲ್ಲ ವಿನಿಮಯವಾಗುವಷ್ಟು ಸಲಿಗೆ ಬೆಳೆದಿತ್ತು. “ಓಹ್ ನಿಮ್ ಮಗಳೂ ಅದೇ ಕಾಲೇಜಾ? ನಮ್ ಮಗ ಕೂಡ ಅಲ್ಲೇ ಓದ್ತಿರೋದು” ಎಂಬೆಲ್ಲ ಸುದ್ದಿ ಇಬ್ಬರ ಮನೆಯಲ್ಲೂ ಬ್ರೇಕಿಂಗ್ ನ್ಯೂಸ್’ಗಳಾದವು. ಮನೆಯವರೇ ಸ್ನೇಹಿತರಾದ ಮೇಲೆ ಇನ್ನು ನಾವು ವಯಸ್ಸಿನ ಹುಡುಗರು ಸ್ನೇಹಿತರಾಗದೇ ಇರಲ್ಲಿಕ್ಕಾಗತ್ಯೇ? ಖಂಡಿತ ಇಲ್ಲ. ಇಬ್ಬರೂ ಸ್ನೇಹಿತ-ಸ್ನೇಹಿತೆಯರಾದ್ವಿ. ಹಾಗೆಯೇ ನನ್ನ ನೋಡಿದ ಕೂಡಲೇ ನಗು ನಿಲ್ಲಿಸುವ ನಿನ್ನ ಖಾಯಿಲೆ ಕೂಡ ಈಗ ಸ್ವಲ್ಪ ಕಡಿಮೆಯಾಯಿತು. ಹಾಗಾಗಿ “ಅಪ್ಪಿ ತಪ್ಪಿ ಎದುರು ಬದುರು ನಾನು ನೀನು ಸಿಕ್ರೆ, ನೀನೇನಾರ ನಕ್ರೆ, ಎದೆಯೆಂಬ ಗೋಡೌನ್’ನಲ್ಲಿ ಕ್ವಿಂಟಾಲ್ ಕ್ವಿಂಟಾಲ್ ಸಕ್ರೆ”  ಎಂಬ ಭಟ್ಟರ ಸಾಲುಗಳನ್ನು ನಾನು ಕೂಡ ಒಳಗೊಳಗೇ ಗುನುಗುವಂತಾಯಿತು.   ಹೀಗೆ ದಿನಗಳು ಕಳೆದವು. ಬಹುಶಃ ಅವು ನನ್ನ ಬದುಕಿನ ಚಂದದ ದಿನಗಳ ಮೊದಲ ಭಾಗ ಎನ್ನಬಹುದು. ಬರಿ ನಗು ನೋಡಿ ಇಷ್ಟಪಟ್ಟಿದ್ದ ನಾನು ನಿನ್ನ ಜೊತೆಗಿನ ಸ್ನೇಹದ ಒಡನಾಟದ ಆ ದಿನಗಳಲ್ಲಿ ನಿನ್ನ ಕುರಿತು ತುಂಬಾ ತಿಳಿದುಕೊಂಡೆ. ಕೊನೆಕೊನೆಗೆ ನಿನ್ನ ನಗುವಿನ ಅಂದಕ್ಕಿಂತ ಅದರ ಹಿಂದಿನ ಆ ನಿನ್ನ ಮುಗ್ಧ, ತರಲೆ ಮನಸು ಸೆಳೆಯುತ್ತಿತ್ತು. ಒಂದು ರೀತಿ ವಯಸ್ಸಿನ ಆಕರ್ಷಣೆಗೆ ಒಳಗಾಗಿಯೇ ನಿನ್ನ ಹಿಂದೆ ಸುತ್ತುತ್ತಿದ್ದ ನಾನು ನನಗೇ ಅರಿವಿಲ್ಲದೇ ತುಂಬಾ ಜವಾಬ್ದಾರಿಯುತವಾಗಿ ಪ್ರೀತಿಸತೊಡಗಿದೆ.

ಇನ್ನು, ಚಂದದ ಬದುಕಿನ ಭಾಗ ಎರಡು; ಅಂದರೆ ನಾವಿಬ್ಬರೂ ಪ್ರೇಮಿಗಳಾದ ನಂತರ. ಆ ಪ್ರೀತಿಯ ನಿವೇದನೆಯೂ ವಿಚಿತ್ರವಾಗಿತ್ತು ಅಲ್ವಾ? ನೆನಪಿಸಿಕೊ. ನಾನು ಆ ದಿನ ಕಾಲೇಜ್ ಮುಗಿಸಿ ಬರುವಾಗ ನಿನ್ನ ಜೊತೆ ಪ್ರೀತಿ ವಿಷಯ ಹೇಳಬೇಕು ಅಂತ ಎಣಿಸಿ ಹೊರಟಿದ್ದೆ. ಆದರೇನು? ಜಯಂತ್ ಕಾಯ್ಕಿಣಿಯವರ ಸಾಲಿನಂತೆ “ನಾ ನೇರ ಹೃದಯದ ವರದಿಗಾರನು, ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು” ಎಂಬಂತಾಗಿತ್ತು ನನ್ನ ಸ್ಥಿತಿ. ಹಾಗಂತ ಬೇರೆ ದಿನಗಳಲ್ಲಿ ಮಾತು ಮರೆಯುತ್ತಿರಲಿಲ್ಲ ಬಿಡು, ಆ ದಿನಕ್ಕೆ ಮಾತ್ರ ಈ ಸಾಲು ಅನ್ವಯ. ಅಂತೂ ಬಾಯಿ ಬಿಡದೆ ಅರ್ಧ ದಾರಿ ಸವೆಸಿದ್ದಾಯಿತು‌. ದಿನವೂ ಎಡೆಬಿಡದೆ ಮಾತಾಡುತ್ತಿದ್ದವನು ಯಾಕೆ ವಿಚಿತ್ರವಾಗಿ ಆಡ್ತಿದಾನೆ ಅಂತ ನಿನಗೂ ಅನುಮಾನ ಬಂದಿರಬೇಕು. “ಏನಾಯ್ತೋ, ಯಾಕೆ ಮಾತಾಡ್ತಿಲ್ಲ? ಡಾಟಾ ಸ್ಟ್ರಕ್ಚರ್ಸ ಹೋಯ್ತಾ ಏನ್ ಕಥೆ?” ಅಂತ ಕೇಳಿದೆ ನೀನು. ನಾನು ಏನು ಹೇಳ್ಬೇಕೋ ಗೊತ್ತಾಗದೇ “ಹಾಗೇನಿಲ್ಲ, ನಮ್ ಹುಡುಗಿಗೆ ಪ್ರೋಪೋಸ್ ಮಾಡಬೇಕು, ಆದ್ರೆ ಭಯ ಆಗ್ತಿದೆ” ಅಂದುಬಿಟ್ಟೆ. ತಕ್ಷಣ ಬಾಣದಂತೆ ಒಂದು ಮರುಪ್ರಶ್ನೆ ಹಾಕಿದೆ ನೀನು, “ನಾನಿರೋವಾಗ, ಇನ್ಯಾರನ್ನ ಪ್ರೀತಿಸ್ತಿದ್ದಿಯೋ?” ಅಂತ. ಅಷ್ಟೇ! ಅಲ್ಲಿಗೆ ನಮ್ಮಿಬ್ಬರ ಪ್ರೇಮನಿವೇದನೆ ಸುಖಾಂತ್ಯ ಕಂಡಂತಾಗಿತ್ತು. “ಎದೆಯೆಂಬ ಖಾಲಿ ಡಬ್ಬಕ್ಕೆ ಒಂದು  ಸಣ್ಣ ಕಲ್ಲು ಬಿದ್ದಂಗಾಯ್ತು” ಎಂಬ ಅನುಭವ. ಮರುದಿನ ಬೆಳಿಗ್ಗೆ ನಿನಗೇ ಅರಿಯದೆ ನೀ ನಡೆಸಿದ ಪ್ರೇಮ ನಿವೇದನೆಯ ಪರಿಯ ಕುರಿತು ನಾನು ನಕ್ಕಿದ್ದೂ ನಕ್ಕಿದ್ದೇ, ನೀನು ನನ್ನ ಹೊಡೆದಿದ್ದೂ ಹೊಡೆದಿದ್ದೇ. ಎಣಿಸಿದರೆ ಈಗಲೂ ನಗು ಬರ್ತದೆ. ನನಗೆ ಗೊತ್ತು, ನೀನೂ ನಗ್ತಿದ್ದೀಯಾ ಅಂತ.

ಇದಾದ ನಂತರದ ಬದುಕು ಇನ್ನೊಂದೆ ರೀತಿಯ ಚಂದ. ಮೊಬೈಲ್’ಗಳೆಲ್ಲ ಅಷ್ಟಾಗಿ ಬಳಕೆಯಾಗದ ದಿನಗಳವು. ಮನೆಯಲ್ಲಿದ್ದಾಗ ನೀನು ನಿಮ್ಮ ಮನೆಯ ಮಾಳಿಗೆಯ ಕಿಟಕಿಯ ಪಕ್ಕ ಕೂತು ಓದುತ್ತಿದ್ದೆ. ಗಾಳಿಗೆ ಕಿಟಕಿಯಿಂದಾಚೆಗೆ ಇಣುಕುವ ನಿನ್ನ ಮುಂಗುರುಳು ನೋಡುವಾಗೆಲ್ಲ ಅದು ನನ್ನ ಸೋಕುವುದಕ್ಕೆ ತವಕಿಸುತ್ತದೇನೋ ಅನ್ನಿಸುತ್ತಿತ್ತು. ನಿನ್ನ ಬಳಿ ಒಮ್ಮೆ ಹೀಗೆ ಹೇಳಿದಾಗ “ಸ್ವಲ್ಪ ಓವರ್ ಆಗ್ಲಿಲ್ವಾ” ಅಂತ ವಿಚಿತ್ರವಾಗಿ ‘ಎಕ್ಸ್‌ಪ್ರೆಶನ್’ ಕೊಟ್ಟಿದ್ದೆ. “ನಾನು ಕವಿ ಕಣೇ, ಕಲ್ಪನೆಗಳಿಗೆ ಮಿತಿಯಿಲ್ಲ” ಅಂತ ಇನ್ನೂ ಸ್ವಲ್ಪ ಜಾಸ್ತಿನೇ ‘ಓವರ್’ ಅನ್ನಿಸುವ ‘ಡೈಲಾಗ್’ ಹೊಡೆದಿದ್ದೆ. ತಲೆಗೆ ಒಂದು ಜೋರಾದ ಏಟು ಸಹ ಬಿತ್ತು ನಿನ್ನ ಕೈಯಿಂದ. ಆ ಏಟಿನಿಂದ ಕವಿತ್ವದ ಹುಚ್ಚು ಸ್ವಲ್ಪ ಜಾಸ್ತಿಯೇ ಆಯಿತು ಅಂದರೂ ತಪ್ಪಿಲ್ಲ.

“ನೀನೇ ತಾನೇ ತಲೆ ಮೇಲ್ ಹೊಡೆದ ಚೋರಿಯು?

ನನ್ನನೊಬ್ಬ ಕವಿಯಾಗಿಸಿದ ಮಾಯೆಯು!”

ಎಂಬ ಹೊಸ ಕವಿತೆಯ ಸಾಲು ತಯಾರಾಗಿತ್ತು. ಇನ್ನೊಂದು ದಿನ ನೆನಪಿದೆಯಾ, ನಮ್ಮ ಎರಡು ಮನೆಯವರು ಕೂಡಿ ಅಲ್ಲೇ ಸಮೀಪದ ಜಾತ್ರೆಯೊಂದಕ್ಕೆ ಹೋಗಿದ್ದೆವು. ಅಲ್ಲೊಂದು ಬಳೆ ಅಂಗಡಿಯಲ್ಲಿ ಝುಮುಕಿಯೊಂದು ನನ್ನ ತುಂಬಾ ಆಕರ್ಷಿಸಿತ್ತು. ಅದನ್ನು ನವಿಲುಗರಿಯಂತೆ ಚಿತ್ರಿಸಲಾಗಿತ್ತು. ನಿನಗೆ ಕೊಡಿಸುವ ಆಸೆ, ಆದರೆ ಅದಂತೂ ಸಾಧ್ಯವಿರಲಿಲ್ಲ. ನೀನೇ ನಿಮ್ಮ ಅಪ್ಪನಿಗೆ ಹೇಳಿಯಾದರೂ ಅದನ್ನ ತಗೊಳ್ಳಲಿ ಎಂದು ಯೋಚಿಸಿದೆ. ನೀನು ನನ್ನತ್ತ ತಿರುಗಿದಾಗ ಕಿವಿ ತೋರಿಸಿ ಝುಮುಕಿ ತಗೋ ಎಂಬುದನ್ನಂತೂ ಮನವರಿಕೆ ಮಾಡಿಸಿದೆ. ನವಿಲು ಅಂತ ಹೇಗೆ ತೋರಿಸಲಿ? ಜಾಸ್ತಿ ಆ್ಯಕ್ಟಿಂಗ್ ಮಾಡಿದ್ರೆ ಮನೆಯವರೆದುರು ಸಿಕ್ಕಿ ಹಾಕೊಳೋ ಭಯ. ನನ್ನ ಯಾವ ಸನ್ನೆಗಳೂ ನಿನಗೆ ಅರ್ಥ ಆಗಲಿಲ್ಲ. ಕೊನೆಗೆ ಮೊಬೈಲ್ ನೆನಪಾಯಿತು. ಈಗಿನ ವಾಟ್ಸಾಪ್ ಇರಲಿಲ್ಲ. ಇದ್ದಿದ್ದರೆ ಒಂದು ಮೆಸೇಜ್ ಮಾಡಿದ್ದರೆ ಆಗಿತ್ತು. ಪುಣ್ಯಕ್ಕೆ ಒಂದು ಬೇಸಿಕ್  ಮ್ಯೂಸಿಕ್ ಪ್ಲೇಯರ್‌ ಇತ್ತು ಅದರಲ್ಲಿದ್ದ ಹಂಸಲೇಖರ “ಹೇ ನವಿಲೇ… ಹೆಣ್ ನವಿಲೇ…” ಎಂಬ ಅತಿ ಸುಂದರ ಹಾಡನ್ನು ಪ್ಲೇ ಮಾಡಿದೆ. ಆಮೇಲೆ ಅದೇ ನನ್ನ ಮೊಬೈಲ್ ಕರೆಯ ರಿಂಗಣ ಎನ್ನುವ ಭಾವನೆ ಬರಿಸಿ, ಹಾಡನ್ನು ನಿಲ್ಲಿಸಿ, ಫೋನ್ ರಿಸೀವ್ ಮಾಡಿದಂತೆ ನಟಿಸಿ “ಹಲೋ…” ಎನ್ನುತ್ತ ಸ್ವಲ್ಪ ದೂರ ನಡೆದೆ. ಆ ನನ್ನ “ಎದೆಯ ದೂರವಾಣಿಯ ಕರೆಯ ರಿಂಗಣ” ನಿನಗೆ ಕೇಳಿಸಿತ್ತು. ತಿರುಗಿ ಬರುವಾಗ ಆ ನವಿಲುಗರಿಯ ಝುಮುಕಿ ನಿನ್ನ ಕಿವಿಗಳನ್ನಲಂಕರಿಸಿತ್ತು.

ಅದೆಷ್ಟು ಸುಂದರ ನೆನಪುಗಳು ಇವೆಲ್ಲ. ಚಿಕ್ಕ ಚಿಕ್ಕ ಸಂತಸಗಳನ್ನು ಪಡೆಯಲು ನಡೆಸುತ್ತಿದ್ದ ಮುದ್ದಾದ ಒದ್ದಾಟಗಳು ನಿಜಕ್ಕೂ ಆತ್ಮೀಯವಾದ ಕ್ಷಣಗಳನ್ನು ಕಟ್ಟಿಕೊಡುತ್ತಿದ್ದವು. ಇಂದಿನ ಆಧುನಿಕತೆಯ ಸೋ ಕಾಲ್ಡ್ ‘ಆ್ಯಪ್ಸ್’ಗಳು ನಮ್ಮನ್ನು ಹತ್ತಿರವಾಗಿಸಿವೆ ನಿಜ, ಆದರೆ ಆತ್ಮೀಯತೆಯನ್ನು ಕಿತ್ತುಕೊಳ್ಳುತ್ತಿವೆಯೋ ಅನಿಸುತ್ತದೆ ಒಮ್ಮೊಮ್ಮೆ. ಅದೇನೆ ಇರಲಿ ಅವುಗಳಿರದೆ ಬದುಕುವುದು ಸಹ ಅಸಾಧ್ಯವೇ ಆಗಿ ಹೋಗಿದೆ ಈಗ. ನನ್ನ ಪ್ರಕಾರ ಎಲ್ಲಿ ಪ್ರೀತಿಸುವ ಹೃದಯಗಳ ನಡುವೆ ಒಂದು ಸವಿಯಾದ ಅಂತರ ಇರುತ್ತದೋ, ಗೆಳೆಯ/ಗೆಳತಿಯನ್ನು ಮಾತಾಡಿಸಲು ಒಂದು ತವಕವಿರುತ್ತದೋ ಅಲ್ಲಿ ಸುಂದರ ನೆನಪುಗಳು ಅರಳುತ್ತವೆ. ಬೇಕೆಂದಾಗಲೆಲ್ಲ ಮೆಸೇಜ್ ಮಾಡುವ ಇಂದಿನ ಯುಗ ಅಂದು ನಮ್ಮ ನಡುವಿರುತ್ತಿದ್ದ ತವಕವನ್ನು ಇಲ್ಲದಂತೆ ಮಾಡಿದೆ. ಮೆಸೇಜ್’ನಲ್ಲಿರುವ  ಸ್ಮೈಲಿಗಳ ಆಧಾರದ ಮೇಲೆ ಮಾತಿನ ಭಾವಗಳನ್ನು ಅಳೆಯುತ್ತಿದ್ದೇವೆ ನಾವು. ಆದರೆ ಎದುರಿಗೆ ಕೂತ ಜೋಡಿ ಕಣ್ಣುಗಳು ಸ್ಪುರಿಸುವ ಭಾವಗಳ ಕಾಲುಭಾಗವನ್ನೂ ಈ ಸ್ಮೈಲಿಗಳು ವ್ಯಕ್ತಪಡಿಸಲಾರವು. ನೀನೇನಂತಿಯಾ ಸೃಷ್ಟಿ?

ಹಾ ಇನ್ನೊಂದು ವಿಷಯ ಮರೆತೇಬಿಟ್ಟೆ. ಅದು ನಿನ್ನ ಹೆಸರಿನ ಕುರಿತಾದ್ದು. ‘ಸೃಷ್ಟಿ’ ಆಹ್ ಅದೆಷ್ಟು ಸುಂದರ ಹೆಸರು ಅದು. ಪ್ರೇಯಸಿಯನ್ನು ಪ್ರೀತಿಯಿಂದ ಅಡ್ಡ ಹೆಸರಿಟ್ಟು ಕರೆಯುವವರೇ ಹೆಚ್ಚು. ಆದರೆ ನಿನಗೊಂದು ಮರುನಾಮಕರಣ ಮಾಡುವ ಆಸೆಯೇ ಹುಟ್ಟಲಿಲ್ಲ ನನಗೆ. ಕಾರಣ ಆ ನಿನ್ನ ಹೆಸರಿನಲ್ಲಿರುವ ಸೊಗಸು. ಸೃಷ್ಟಿಯೇ ನಿನ್ನ ಹೆಸರಲ್ಲಿರುವಾಗ ಇನ್ಯಾವ ಚಂದದ ಹೆಸರಿಡಲಿ ನಾನು? ನೀನೇ ಹೇಳು.

ಅಂತೂ ಇಂತೂ ನೋಡ ನೋಡುತ್ತಾ ನಮ್ಮದೂ ಒಂದು ಲವ್ ಸ್ಟೋರಿ ಆಗೇ ಹೋಯಿತು. ಕಾಲೇಜ್ ಮುಗಿಯುತ್ತಿದ್ದಂತೆ ಇಬ್ಬರಿಗೂ ಕೆಲಸ ಸಿಕ್ಕಿತು. ಮನೆಯವರಿಗೆ ವಿಷಯ ತಿಳಿಸುವ ಕಾರ್ಯಕ್ರಮವೂ ನಡೆಯಿತು. ನಮ್ಮಿಬ್ಬರ ಮನೆಯವರು ಸಹ ಆತ್ಮೀಯರೇ ಆಗಿದ್ದರಿಂದ ಒಪ್ಪಿಗೆ ನಾವು ಎಣಿಸಿದ್ದಕ್ಕಿಂತ ಸುಲಭದಲ್ಲೇ ಸಿಕ್ಕಿತು. ವಿಲನ್’ಗಳಿಲ್ಲದ, ನಿನ್ನ ಕೈ ಹಿಡಿದು ಬೆಟ್ಟದ ನಡುವೆಲ್ಲ ಓಡುವ ಸೀನ್ ಇರದ, ಎಲ್ಲೊ ಒಂದು ದೇವಸ್ಥಾನದಲ್ಲಿ ಅರಿಶಿಣ ದಾರ ಕಟ್ಟಿ ಮದುವೆ ಆಗುವ ಸಂದರ್ಭ ಬರದ, ಚಂದದ ಲವ್ ಸ್ಟೋರಿ ನಮ್ಮದಾಗಿತ್ತು. ನನಗಾಗಿ ನನ್ನ ಈ ಸೃಷ್ಟಿಯನ್ನ ಸೃಷ್ಟಿಸಿದ ನಿಮ್ಮ ಅಪ್ಪ- ಅಮ್ಮನಿಗೂ ಹಾಗೂ ಅಷ್ಟೇ ಚಂದದ ಪ್ರೇಮಕಥೆ ಹೆಣೆದ ಆ ಸೃಷ್ಟಿಕರ್ತನಿಗೂ ಒಂದು ಧನ್ಯವಾದ ಹೇಳಲೇಬೇಕು ನಾನು. ಹಾಗೆಯೇ ನನ್ನೆಲ್ಲ ಭಾವಗಳಿಗೆ ಬಣ್ಣ ಬಳಿದ ನಿನ್ನ ಕಣ್ಣ ಕುಂಚಗಳಿಗೂ ನನ್ನ ಹೃತ್ಪೂರ್ವಕ ಧನ್ಯವಾದ ಗೆಳತಿ. ನೀನಿಲ್ಲದೇ ಈ ಪಯಣ ಕೇವಲ ಕಪ್ಪು-ಬಿಳುಪಿಗೆ ಸೀಮಿತ ಆಗಿಬಿಡುತ್ತಿತ್ತೇನೋ. ಬಹುಷಃ ನಮ್ಮ ಇಲ್ಲಿವರೆಗಿನ ಈ ಚಂದದ ಬದುಕು ಪದಗಳಿಗೆ ನಿಲುಕದ್ದು. ಅತ್ಯಂತ ಆತ್ಮೀಯ ಮಾತುಕತೆಗಳು, ತಲೆಹರಟೆಗಳು, ತುಂಟಾಟಗಳು, ಹುಸಿ ಮುನಿಸುಗಳು, ಒಂದಷ್ಟು ಆಧುನಿಕತೆಯ ಟಚ್ ಕೂಡ ಇರುವ ಸೆಲ್ಫಿಗಳು, ಮೆಸೇಜ್ಗಳು, ನಡುನಡುವೆ ಬಂದು ಹೋಗುವ ಕವಿತೆಗಳು ಇವೆಲ್ಲ ತುಂಬಿರುವ ಭಾವಯಾನ ನಮ್ಮದು.

“ಕವಿಯೆನ್ನುವ ಭ್ರಮೆಯಲ್ಲಿಹ

ನನಗಿದೋ ಪದಗಳ ಬಡತನವು ಕಾಡುತಿದೆ!!!

ಈ ಚಂದದ ಪ್ರೇಮಕಥೆಯ

ಕವಿತೆಯ ಸಾಲಲಿ

ವರ್ಣಿಸೋ ಯತ್ನದಿ ನಾನೀಗ ಸೋಲುತಿಹೆ!!!”  

ಎನ್ನುತ್ತಾ ಅಸಹಾಯಕನಾಗಿ ನಮ್ಮ ಈ ಕಥೆ ಅಲ್ಲ ಜೀವನವನ್ನ ಪದಗಳಲ್ಲಿ ಹಿಡಿದಿಡುವ ವಿಫಲ ಪ್ರಯತ್ನಕ್ಕೊಂದು ಮಂಗಳ ಹಾಡಲೇ ಗೆಳತಿ? ಈ ಸುಖಾಂತ್ಯ ಇನ್ನೊಂದಷ್ಟು ವರ್ಣಮಯ ನಾಳೆಗಳಿಗೆ ನಾಂದಿ ಹಾಡಲಿ ಎಂಬ ಆಸೆಯ ಬಳ್ಳಿಗೆ ನಮ್ಮ ಕನಸುಗಳ ನೀರೆರೆದು ಹಸಿರಾಗಿರಿಸುವ ಬಯಕೆ ನನ್ನದು.  

ಅಬ್ಬಾ!!! ಅಂತೂ ಮುಗಿಸಿದೆ. ಇನ್ನು ಮೇಲೆ ನಮ್ಮ ಕಥೆ ಬರಿ ಅಂತ ನೀನು ತಲೆ ಮೇಲೆ ಹೊಡೆಯೋದು ತಪ್ಪಿತು… ಮತ್ತೆ ನಗ್ತಿದ್ದೀಯಾ? ನಗು…ನಗು… ನೀನು ನಕ್ಕಾಗೆಲ್ಲ ಎದೆಯ ಗೋಡೌನ್’ಗೆ ಬೀಳುವ ಕ್ವಿಂಟಾಲ್-ಕ್ವಿಂಟಾಲ್ ಸಕ್ಕರೆಯಿಂದ ನನಗೆ ಮೂವತ್ತರ ಹರೆಯದಲ್ಲೇ ಸಕ್ಕರೆ ಖಾಯಿಲೆ ಬಂದರೆ ಅದಕ್ಕೆ ನೀನೇ ಹೊಣೆ ಆಗ್ತಿಯಾ ಅಷ್ಟೇ.

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post