X
    Categories: ಕಥೆ

ಪಾರಿ ಭಾಗ-೧೨

   “ನಿಮ್ ಗೌಡನ್ ಮನಿಗೆ ನಾವ್ಯಾಕ  ಬರ್ಬೆಂಕತ? ನಮ್ ಪಾರಿ ಒದ್ದಾಡಿದ್ ಸಾಕ್ ಹೋಗು..ನಾವ್ಯಾರ್ ಮನಿಗೂ ಬರಲ್ಲ..ನಿಮ್ ಗೌಡಗ ಹೇಳ್ ಹೋಗ ಬಿಕನಾಸಿ..ನಾವ್ ಬರಲ್ಲಂತ…ಇನ್ನ ಗೌಡ ಈ ಕಡಿ ತೆಲಿ ಹಾಕಿದ ಅಂದ್ರ ಆಗುದ ಬ್ಯಾರೆ..ಎಷ್ಟಂತ ತಡ್ಕೊಳೋನು. ಹೋಗ ಭಾಡ್ಯಾ..ಬಂದ್ಬಿಟ್ಟ ಕರಿಯಾಕ..!!” ಎಂದು ಗೌಡರ ಆಳು ಮರಿಯಪ್ಪನನ್ನು ಮಲ್ಲವ್ವ ತರಾಟೆಗೆ ತೆಗೆದುಕೊಂಡದ್ದೇ ತಡ ಇಲ್ಲಿ‌ ನಿಂತರೆ ತನಗೆ ಉಳಿಗಾಲವಿಲ್ಲವೆಂದು ಮರಿಯಪ್ಪ ಅಲ್ಲಿಂದ ಹೆಜ್ಜೆ ಕಿತ್ತ..ಗೌಡರು ಇನ್ನು ಅವರ ಸಹವಾಸ ಬೇಡವೆಂದು ಸುಮ್ಮನಾದರು..

    ಪಾರಿ ಮೌನವಾಗಿ ಆಕಾಶದತ್ತ ನೋಡುತ್ತ ಕುಳಿತಿದ್ದನ್ನು ಕಂಡು ಮಲ್ಲವ್ವನ ಕರುಳು ಕಿತ್ತು ಬಂದಂತಾಯಿತು.” ಆ ಗೌಡ ಮಾಡಿರ ಹಲ್ಕಾ ಕೆಲ್ಸಕ್ಕ  ಬಾಯಾಗ ಹುಳಾಬಿದ್ದ ಸಾಯ್ತಾನ ಬಿಡ ಪಾರಿ..ನೀ ಹಿಂಗ ಹಳೆದು ನೆನಸ್ಕಂಡು ಕೊರಗಬ್ಯಾಡ..ನಿನ್ ಅಷ್ಟ ಉರುಸ್ಕಂಡು ತಿಂದ್ನಲ್ಲ ಆ ಮಾದೇವಸ್ವಾಮಿ‌ ಜೀವ್ನ ಹೆಂಗಾಗೇತಿ ಗೊತ್ತನು?ಹೆಂಡ್ತಿಗೆ ಇರಬರ ರೋಗ ಎಲ್ಲಾ ಅದಾವು..ಒಂದ್ ಮಗಾನೂ ಹಂಗ ಹುಟ್ಟೇತಿ..ಹಲ್ಕಟ್ ಭಾಡ್ಯಾ ಮಾಡಿದ್ದು ಉಣ್ಣಾಕತ್ತಾನ..!! ಏಳ..ಏಳ ಪಾರಿ ಅಕಾ ಅಲ್ಲೇ ಕೂಸು ಬಂತು..ನಿಮ್ಮನಿಯವರೂ ಬಂದ್ರು…ಚಾ ಕೊಡು ಏಳು..”ಎನ್ನುತ್ತಾ ದೂರದಿಂದ ಜಾತ್ರೆಗೆ ಹೋಗಿ ಬರುತ್ತಿದ್ದ ಅಳಿಯ,ಗಂಡನನ್ನು ನೋಡಿ ತಲೆಯ ಮೇಲೆ ಸೆರಗು ಹೊದ್ದು ಒಳಗೆ ಹೋದಳು.ಪಾರಿ ಮರುಮಾತಾಡದೇ ತಾಯಿಯನ್ನು ಹಿಂಬಾಲಿಸಿದಳು..ಒಂದು ಕ್ಷಣ ಸುಬ್ಬಣ್ಣನವರ ಬಗ್ಗೆ ಕೇಳೋಣವೆನಿಸಿದರೂ ಪಾರಿ ಯಾಕೋ ಕೇಳಲಿಲ್ಲ..

    ಪಾರಿ ಹಳ್ಳಿಗೆ ಬಂದು ಎಂಟು ದಿನಗಳು ಉರುಳಿದ್ದವು..ಮರುದಿನ ವಾಪಸ್ಸು ಬೆಂಗಳೂರಿಗೆ ಹೊರಡುವ ತಯಾರಿ ನಡೆಯುತ್ತಿತ್ತು.ಹುಟ್ಟಿದ ಊರು ಬಿಟ್ಟು ಹೋಗಲು ಎರಡೂ ಹಿರಿಜೀವಗಳಿಗೆ ಮನಸ್ಸಿರಲಿಲ್ಲವಾದರೂ ಮುದ್ದು ಮೊಮ್ಮಗಳ ಮಾತುಗಳನ್ನು ಕೇಳುತ್ತಾ ಇಷ್ಟು ದಿನಗಳ ನೋವು ಮರೆತರಾಯಿತೆಂದುಕೊಂಡರು..ಚಂದನಾ ಅಂತೂ ಮಲ್ಲವ್ವನ ತೊಡೆಯ ಮೇಲೆ ತಲೆ ಇಟ್ಟೇ ನಿದ್ದೆ ಮಾಡುತ್ತಿದ್ದಳು..

    ಹಿರಿ ಜೀವಗಳೆರಡೂ ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನೊಮ್ಮೆ ತಿರುತಿರುಗಿ ನೋಡಿ ಕಾರು ಹತ್ತಿದರು..ಧೂಳೆಬ್ಬಿಸುತ್ತಾ ಹೋದ ಕಾರನ್ನು ಊರ ಜನ ನಿಂತು ನೋಡುತ್ತಿದ್ದರು.”ಕಾರ್ ನಿಲ್ಲಿಸ್ರಿ..ನಿಲ್ಲಿಸ್ರಿ..”ಅಂದ ದುರುಗಪ್ಪನ ಧ್ವನಿಗೆ ಆತಂಕಿತಳಾದಳು ಪಾರಿ..” ಇನ್ನ ಮತ್ತ ಊರ್ಗೆ ಬರುದು ಯಾವಾಗ ಏನ..ಒಂದ್ ಸಾರಿ ದ್ಯಾಮವ್ವಗ ಕೈ ಮುಗುದು ಹೋಗುನು ನಡಿ ಪಾರಿ..”ಎಂದಾಗ ಓಹ್..! ಎಂದು ನಿಟ್ಟುಸಿರು ಬಿಟ್ಟಳು ಪಾರಿ..ಕಾರಿಳಿದು ಬಂದ ಪಾರಿಯನ್ನು ಜನರೆಲ್ಲ ಮನೆ ಬಾಗಿಲಿಗೆ ಬಂದು ನಿಂತು ನೋಡುತ್ತಿದ್ದರು.ಮಹದೇವಸ್ವಾಮಿ ದ್ಯಾಮವ್ವನ ಪೂಜೆ ಮುಗಿಸಿ ಮನೆಗೆ ಹೊರಡಲುನುವಾಗುತ್ತಿದ್ದ..ಪಾರಿಯನ್ನು ನೋಡಿ ಒಂದು ಕ್ಷಣ ಉಸಿರು ಬಿಗಿ ಹಿಡಿದು ನಿಂತುಬಿಟ್ಟ…!!! ಪಾರಿಯ ಮುಖದಲ್ಲಿ ನಿರಾಶೆ,ನೋವು,ಸಿಟ್ಟು,ಅಸಹ್ಯ ಎಲ್ಲ ಮಿಶ್ರಣವಾದ ಭಾವವೊಂದು ಹಾದು ಹೋದದ್ದನ್ನು ಕಂಡು ತಲೆಕೆಳಗೆ ಹಾಕಿ ನಡೆದು ಹೋದ..

   ದ್ಯಾಮವ್ವ ತಾಯಿಗೆ ಕೈ ಮುಗಿದ ಪಾರಿ “ಇಲ್ಲಿ ತನ್ಕ ನೀ ನನ್ ಕಾಪಾಡಿಯವ್ವಾ ..ಇನ್ ಮುಂದನೂ ನನ್ ಕೈ ಹಿಡಿ..”ಎಂದು ಬೇಡಿಕೊಂಡು ಮುನ್ನೆಡೆದಳು.ಸುಬ್ಬಣ್ಣನವರು ಮನೆಯ ಹೊರಗಿನ ಕಟ್ಟೆಯ ಮೇಲೆ ಕುಳಿತಿದ್ದರು.ನೇರ ಹೋದವಳೇ ಪಾರಿ ಸುಬ್ಬಣ್ಣನವರ ಮುಂದೆ ಕೈಜೋಡಿಸಿ ನಿಂತಳು ಪಾರಿ.ಸುಬ್ಬಣ್ಣನವರ ಕಣ್ಣು ಹನಿಗೂಡಿದ್ಯಾಕೆಂದು ಅವರ ಹೆಂಡತಿ ಅರಿಯದಾದಳು..! ಸುಬ್ಬಣ್ಣನವರಿಗೊಂದು ವಿದಾಯ ಹೇಳಿ ಮತ್ತೊಮ್ಮೆ ತಿರುಗಿ ನೋಡಿದಳು ಪಾರಿ.ಇಡೀ ಊರೇ “ಪಾರೀ ಇನ್ನರ ನಕ್ಕಂತ ಇರು..” ಎಂದು ಹೇಳುತ್ತ ಬೀಳ್ಕೊಡುತ್ತಿದೆಯೇನೋ ಎನ್ನುವಂತೆ ಭಾಸವಾಯಿತವಳಿಗೆ..ಇಣುಕಿ ನೋಡಿದ ಸಾವಿತ್ರಮ್ಮನವರನ್ನು ಕಂಡು ಪಾರಿ ಮುಗುಳ್ನಗು ಬೀರಿದ್ದರ ಮರ್ಮ ಅವರರಿಯದಾದರು..!

   ಇತ್ತ ಗೌರಮ್ಮ ಮಾತ್ರ “ಗೌಡ ಎಷ್ಟ್ ಛಲೋವಾ ಅಂತ ಇವತ್ ಗೊತ್ತಾತು ನೋಡ ಯವ್ವಾ..!! ಪಾರಿ ಇಲ್ಲೆ ಇದ್ರ ಈ ಸಾವಿತ್ರಮ್ಮ ಹುರುದು ಮುಕ್ಕಿ ಆಕಿ ಜೀವಾನಾ ಬಲಿ ತಗೊಂತಾಳಂತ ಪಾರೀನ ಯಾರ್ಗೂ ಗೊತ್ತಿಲ್ದಂಗ ಬೆಂಗ್ಳೂರ್ಗೆ ಕರ್ಕಂಡು ಹೋಗಿ, ಈಗ್ ಕರ್ಕಂಡು ಹೋದ್ನಲ್ಲ ಆ ಹುಡುಗಗ ಮದುವಿ ಮಾಡ್ಸಿದ್ರಂತ..ಮತ್ತ ಸುಬ್ಬಣ್ಣಗ ಪಾರಿ ಸತ್ತಿಲ್ಲ ಅನ್ನುದು ಗೊತ್ತಿತ್ತಂತ..ಗೌಡನ ಹೆದ್ರಿಕಿಗೆ ಪಾಪ ಬಾಯ್ಬಿಡ್ಲಿಲ್ಲಂತ..ಹೆಂಗ ಒಟ್ನಾಗ ಪಾಪಾ ಪಾರಿ ಬಾಳು ಚಂದ ಆತು ನೋಡ..ಆ ದ್ಯಾಮವ್ವ ತಾಯಿ ಆಕಿ ಬೆನ್ನ ಹಿಂದ ಅದಾಳ..” ಎಂದು ಬಾಯಿಗೆ ಬಂದದ್ದನ್ನು ಊರ ಹೆಂಗಳೆಯರ ಕಿವಿಗೆ ಊದಿ ಪಾರಿಯ ಬಾಳು ಅಲ್ಲೋಲಕಲ್ಲೋಲವಾಗಲು ಕಾರಣನಾದ ಮಲ್ಲಪ್ಪಗೌಡರನ್ನು ಒಳ್ಳೆಯವರನ್ನಾಗಿ ಬಿಂಬಿಸಿಬಿಟ್ಟಳು..!

   ಕಾರು ಧೂಳೆಬ್ಬಿಸುತ್ತ ಮುಂದೆ ಚಲಿಸತೊಡಗಿತು.ಈ ದಿನ ಮಹೇಶನ ಕಣ್ಣುಗಳಿಗೆ ಪಾರಿ ವಿಶೇಷವಾಗಿ ಕಂಡಳು.ಹಳ್ಳಿಗೆ ಮತ್ತು ಹಳೆಯ ನೆನಪುಗಳಿಗೆ ಪೂರ್ಣ ವಿದಾಯವೆನ್ನುವಂತೆ ಪಾರಿ ಕಾರಿನ ಗಾಜಿಳಿಸಿ,ನಿಂತು ನೋಡುತ್ತಿದ್ದ ಜನರಿಗೆ ಬಾಗಿ ಕೈ ಮಾಡಿದಳು..ಗಂಡ ಹೇಳಿದ ಜೋಕಿಗೆ ನಗುತ್ತಿದ್ದ ಪಾರಿಯ ನಗುವನ್ನು ಹಿಂದಿನ ಸೀಟಿನಲ್ಲಿ ಕುಳಿತು ಮೊಮ್ಮಗಳೊಡನೆ ಮಾತುಕತೆಯಲ್ಲಿ ಮಗ್ನರಾಗಿದ್ದ ಹಿರಿ ಜೀವಗಳು ಕಣ್ತುಂಬಿಕೊಂಡವು..ಮಹದೇವಸ್ವಾಮಿ ಕಾರು ಮರೆಯಾಗುವವರೆಗೂ ನೋಡುತ್ತಲೇ ಇದ್ದ..ಅವನ ಮುಖದಲ್ಲಿ ವಿಷಾದವೊಂದು ಹಾದು ಹೋಯಿತು..!

ಮುಗಿಯಿತು

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post