X
    Categories: ಕಥೆ

ಊರುಗೋಲು ಅಜ್ಜಿ

ಹೌದು.. ಅವಳು ನನ್ನ ಮುದ್ದಿನ ಅಜ್ಜಿ, ಊರೆಲ್ಲಾ ಊರುಗೋಲು ಅಜ್ಜಿ ಅಂತಾನೇ ಮನೆಮಾತು. ನಮ್ಮನೆಗಂತೂ ಮಹಾರಾಣಿ, ಅಜ್ಜಿಯ ಕುಡುಗೋಲು ಅವಳ ಆಸ್ತಿಯೆನ್ನುವಂತೆ ಅವಳ ಜೊತೆಯೇ ಇರುತಿತ್ತು. ಏಳು ಮಕ್ಕಳ ತಾಯಿ ಆಕೆ, ಅವಳು ಕಾಡುತ್ತಲೇ ಇದ್ದಾಳೆ.. ಇರುತ್ತಾಳೆ ಕೂಡ! ಅಜ್ಜಿಯ ಅರವತ್ತೈದರ ಹರೆಯಕ್ಕೆ ನಮ್ಮಜ್ಜ ಅವಳ ಪ್ರೀತಿಯ ಕೈ ಬಿಟ್ಟು ದೇವರ ಸಾನಿಧ್ಯ ಸೇರಿದ್ದ. ಅವಾಗ ಅಜ್ಜಿ ಒಬ್ಬಳೆ ಒಂದಷ್ಟು ದಿನ ಕಳೆದ ನೋವಿನ ನರಳುವಿಕೆ ಅವಳ ನಿರ್ಲಿಪ್ತ ಕಣ್ಣುಗಳು, ದುಃಖ ಮಡುಗಟ್ಟಿದ ಮುಖದ ಛಾಯೆ ಹೇಳುತಿತ್ತು, ಅವಳು ಅನುಭವಿಸಿದ ನೋವಿನ ಪರಿ.

ಮೂರು ದಿನಕ್ಕೆ ಮುರಿದು ಬೀಳೋ, ಅರ್ಥ ಮಾಡಿಕೊಳ್ಳುವುದರೊಳಗೆ ಎಂಜಿನ್ ಕೈ ಕೊಟ್ಟು ಎಲ್ಲೆಂದರಲ್ಲಿ ನಿಲ್ಲೊ ಅಂಬಾಸಿಡರ್ನಂತೆ ಯಾವಗೆಂದರಾಗ ಮೋಸ, ಬ್ರೇಕಪ್, ಡೈವರ್ಸ್ ಅನ್ನೋ ನವ ಯುವಕ ಯುವತಿಯರಿಗೆ ನಮ್ಮಜ್ಜಿ ಅಜ್ಜನ ಪ್ರೀತಿ ಮಾದರಿಯೇ ಸರಿ. ಅವಳದ್ದು ತುಸು ಗಾಂಭೀರ್ಯದ ವ್ಯಕ್ತಿತ್ವ, ಯಾರಿಗೂ ಯಾವುದಕ್ಕೂ ಜಗ್ಗದ ಅಜ್ಜಿಯ ಮನಸ್ಸು ಕರಗಿ ನೀರಾಗ್ತಿದ್ದದ್ದು ಅವಳನ್ನ ಪ್ರೀತಿಸೋರಿಗೆ. ಆಡಂಬರವಿಲ್ಲದ ಜೀವನ, ತುಸು ಹೆಚ್ಚೆ ಸಹನಾಶೀಲೆ. ಅಜ್ಜಿಯದು ನನ್ನೊಟ್ಟಿಗೆ ಅವಿನಾಭಾವ ಸಂಬಂಧ. ಅಜ್ಜಿಯ ಕೆಣಕೋ ನನ್ನ ಸ್ವಭಾವಕ್ಕೆ ಆಕೆ ಎಂದಿಗೂ ಸಿಟ್ಟಾಗಿದ್ದಿಲ್ಲಾ. ” ಏನ್ ಅಜ್ಜಿ, ಅಜ್ಜ ಕನಸಲ್ಲಿ ಬಂದಿದ್ನಾ? ರೋಮ್ಯಾನ್ಸ್ ಮಾಡಿದ್ರಾ?” ಅಂತ ಕೇಳ್ತಿದ್ದಂಗೆ ಅಜ್ಜಿಯ ಕೈಯಲ್ಲಿನ ಊರುಗೋಲು ನನ್ನ ಅರಸಿ ಬಂದು ಬಿಡ್ತಿತ್ತು. ” ಬಾ ಗುಲಾಮ, ನಾಚಿಕೆ ಇಲ್ದೋನೆ” ಅಂತ ಅವಳು ನಗ್ತಾ ಪ್ರೀತಿಯಿಂದ ಬೈಯ್ಯೋವಾಗ ಮನೆ ಮಂದಿಯೆಲ್ಲಾ ನಗೆಯ ಕಡಲಲ್ಲಿ ಮಿಂದು ಏಳುತಿದ್ದರು.

ನಮ್ಮಜ್ಜಿಗೆ ಮುಪ್ಪಿನಲ್ಲೂ ನೀಳವಾದ ಕೇಶರಾಶಿ, ನಂಗೆ ಆ ಕೂದಲು ನೋಡಿಯೇ ಒಂಥರ ಸ್ವೀಟ್ ಹೊಟ್ಟೆ ಕಿಚ್ಚು. ಇದೆಂಗೆ ಅಜ್ಜಿ ಇಷ್ಟೆಲ್ಲಾ ಕೂದಲಿದೆ ಅಜ್ಜ ಅವಾಗ್ಲೆ ನಿಂಗೆ ಶಾಂಪೂ ತಂದ್ಕೊಡ್ತಿದ್ನಾ? ಅಂತಾ ಆಗಾಗ ರೇಗಿಸ್ತಿದ್ದೆ.
ಅವಳು.. ” ಶಾಂಪೂ ಗೀಂಪೂ ಏನು ಇಲ್ಲಾ ಯಾವುದೋ ಕೈಗೆ ಸಿಕ್ಕಿದ ಸಾಬೂನು, ಅಟ್ಲೆಕಾಯಿ ಹಚ್ಚಿ ಮಿಂದು, ಕೊಬ್ಬರಿ ಎಣ್ಣೆ ಹಚ್ಚಿ ಚೆನ್ನಾಗಿ ಬಾಚ್ಕೊತೊದ್ದಿದ್ದು, ಅದಕ್ಕೆ ಇನ್ನೂ ಉಳ್ಕೊಂಡವೇ”. ನಿನ್ ತಲೆ ನೋಡು ಮದ್ವೇಗ್ ಮುಂಚೆ ಬೊಕ್ಕ ಆಗ್ತಿಯ!! ಸುಡುಗಾಡ್ ಶಾಂಪೂ ಹಚ್ಚಿ ಕೂದಲೆಲ್ಲ ತಿರುಪತಿ ಸೇರಿದ್ವು ಅಂತ ಅವಳು ಅಂಗಳದಲ್ಲಿ ಕೂರಿಸ್ಕೊಂಡು ಕೊಬ್ಬರಿ ಎಣ್ಣೆ ಹಚ್ಚಿ ಕೂದಲು ಮಾಲಿಶ್ ಮಾಡ್ತಿದ್ರೆ ಹಾಗೆ ನಿದ್ದೆ ಮಾಡ್ಬಿಡ್ತಿದ್ದೆ.

ಬೇಸಿಗೆಯಲ್ಲೂ ಬಿಡದೆ ತಲೆ ಮೇಲೆ ಚೊಂಬುಗಟ್ಟಲೆ ಬಿಸಿ ನೀರು ಸುರಿಯುತ್ತಿದ್ದಾಗ ಅಜ್ಜೀನಾ ಹಿಗ್ಗಾ ಮುಗ್ಗಾ ಬೈತಿದ್ದೆ. ಅಜ್ಜೀನಾ ಬೈದಾಗೆಲ್ಲಾ ನಮ್ಮಪ್ಪನ ಬಾಯಲ್ಲಿ ಸಹಸ್ರನಾಮ ಕೇಳಿ ಮತ್ತೆ ಮೆತ್ತಗಾಗುತ್ತಿದ್ದೆ. ನಮ್ಮನೆ ಮಹಾರಾಣಿ ಅಜ್ಜಿನೇ ಎಲ್ಲಾ ವಿಷ್ಯದಲ್ಲೂ ಮುಖ್ಯಸ್ಥೆ!! ಮನೆಯ ಎಲ್ಲಾ ನಿರ್ಧಾರಗಳಿಗೆ ಕೊನೆಯ ಅಂಕಿತ ಅವಳದ್ದೇ. ಆದ್ದರಿಂದ ನಮ್ಮನೆಯ ರಾಷ್ಟ್ರಪತಿ ಅವಳು. ಚಿಕ್ಕಂದಿನಿಂದಲೂ ಅಜ್ಜಿಯ ಕಾಲಮೇಲೆ ಮಲಗೋ ಅಭ್ಯಾಸ ಹಾಗೆ ಇತ್ತೂ. ನಮ್ಮಜ್ಜಿ ಕಾಲಮೇಲೆ ಮಲ್ಕೋಂಡು ರಾಜ ಮಹಾರಾಣಿಯರ ಕಟ್ಟು ಕಥೆಗಳನ್ನ ಕೇಳ್ತಾ ಕೇಳ್ತಾ ನಿಜವಾದ ಸನ್ನಿವೇಶವನ್ನೇ ಕಣ್ಮುಂದೆ ತಂದ್ಕೊಂಡು ಬಿಡ್ತಿದ್ದೆ. ಹಾಗೆ ನಿದ್ದೆ ಹೋಗಿ ಬಿಡ್ತಿದ್ದೆ. ಕಥೆಯಲ್ಲಿ ಬರೋ ಹೀರೋ ನಾನೆ ಆಗಿರ್ತಿದ್ದೆ ಬಿಡಿ.

ನಮ್ಮೂರಿನ ಬಜಾರಿ ಹೆಣ್ಣು ದ್ಯಾಮವ್ವ, ಸಾರಾಯಿ ಕೊಟ್ಟೆ ಮಾರುವ ಹೆಂಗಸು. ಸರ್ಕಾರಿ ಪ್ಯಾಕೆಟು ಇನ್ನೂ ಚಾಲ್ತಿಯಲ್ಲಿದ್ದ ಕಾಲ ಅದು. ಒಮ್ಮೆ ನಮ್ಮಜ್ಜಿ ಅವಳ ಗ್ರಹಚಾರ ಬಿಡಿಸಿದ್ದಕ್ಕೆ ದ್ಯಾಮವ್ವ ಗಪ್ ಚುಪ್!! ಜೊತೆಗೆ ಸಾರಾಯಿ ಪಾಕೆಟ್ ಮಾರೋದನ್ನು ನಿಲ್ಲಿಸಿ ಬಿಟ್ಟಿದ್ದಳು. ಊರಿನ ಪಂಚರಿಗೂ ನಮ್ಮ ಊರುಗೋಲು ಅಜ್ಜಿಯ ಮೇಲೆ ಎಲ್ಲಿಲ್ಲದ ಪ್ರೀತಿ, ಗೌರವ. ಊರಿನ ಎಲ್ಲರ ಮಾತಿಗೆ ಒಂದು ತೂಕವಾದರೆ ನಮ್ಮಜ್ಜಿಯ ಮಾತಿಗೆ ಇನ್ನೊಂದು ತೂಕ. ಅಜ್ಜಿ ಮಾತೆಂದರೆ ವೇದ ವಾಕ್ಯ ಎನ್ನುವಂತೆ ಕಣ್ಣಿಗೊತ್ತಿಕೊಳ್ಳುವವರ ಸಂಖ್ಯೆಯೆ ಬಹಳ ಇತ್ತು. ಅಜ್ಜಿಗೆ ಒಂದು MLA ಟಿಕೆಟ್ ಕೊಡಿಸೋ ಆಸೆ ಇತ್ತು ನಂಗೆ. ಅವಳು ನಮ್ಮೂರಿನ ಹೆರಿಗೆ ಡಾಕ್ಟರ್ ಕೂಡ ಆಗಿದ್ದಳು ಅನ್ನೋದು ಮತ್ತೊಂದು ಆಶ್ಚರ್ಯ. ಊರುಗೋಲು ಅಜ್ಜಿಯ ಕೈನಲ್ಲಿ ಬಸುರಿ ಹೆಂಗಸು ಇದ್ದರೆ ಯಾರಿಗೂ ಭಯವಿಲ್ಲ. ಹೆರಿಗೆ ಆಸ್ಪತ್ರೆ ಬಿಲ್ ಉಳೀತು ಅನ್ನೋ ಸಂತೋಷ ಕೂಡ. ನೆಗಡಿ, ಕೆಮ್ಮು, ಜ್ವರ, ವಾಂತಿ ಬೇಧಿ ಹೀಗೆ ಎಲ್ಲದಕ್ಕೂ ನಮ್ಮಜ್ಜಿ ಮಾಡ್ತಿದ್ದ ಮನೆ ಔಷಧಿಗಳಿಗೆ ಮಮ್ಮೂರಿಗೆ ವರ್ಲ್ಡ್ ಫೇಮಸ್ಸು.

ಈಗ ಮನೆಗೆ ಹೋದಾಗಲೆಲ್ಲಾ ಅಜ್ಜಿ ನೆನಪಾಗ್ತಾಳೆ. ಬರೀ  ಅವಳ ಊರುಗೋಲು ನಮ್ಮನೆಯ ದೇವರ ಕೋಣೆಯಲ್ಲಿ ಇದೆ. ಅವಳ ದೇಹ, ಮುಗುಳುನಗು ಎಲ್ಲವೂ ಗೋಡೆಯ ಮೇಲೆ ಅಜ್ಜನ ಫೋಟೋ ಪಕ್ಕದ ಫ್ರೇಮಿನೊಳಗೆ ಬಂಧಿಯಾಗಿದೆ. ತುಳಸಿ ಕಟ್ಟೆ ಎದುರು ಅಂಗಳದ ಮೇಲೆ ಕುಳಿತಾಗಲೆಲ್ಲಾ, ಬಚ್ಚಲು ಮನೆಯ ಹಂಡೆಯ ಕಾವು ತಗುಲಿದಾಗಲೆಲ್ಲಾ ಊರುಗೋಲು ಅಜ್ಜಿ ನೆನಪಾಗ್ತಾಳೆ. ಮಳೆಯಲ್ಲಿ ನೆನೆದು ಬಂದಾಗ ಬೈಯುತ್ತಲೇ ತಲೆ ಒರೆಸುವ ನನ್ನ ಮುದ್ದು ಅಜ್ಜಿ ಈಗಿಲ್ಲ. ಅದಾಗಲೇ ಎಂಟು ವರ್ಷಗಳು ಕಳೆದು ಹೋಗಿದೆ. ಆದರೆ ಅವಳ ನೆನಪುಗಳು ನನ್ನ ಜೊತೆ ಜೊತೆಗೆ ಸಾಗಿ ಬರುತ್ತಿದೆ. ಜಡ್ಡು ಗಟ್ಟಿದ ರಾಜಕೀಯ ಮತ್ತು ರಾಜಕಾರಣಿಗಳನ್ನ ನೋಡಿ ನನ್ನಜ್ಜಿ ಇನ್ನೂ ಇರಬಾರದಿತ್ತೆ, ಅಧಿಕಾರ ಕೊಡ್ಸಿದ್ರೆ ಚೆನಾಗಿರ್ತಿತ್ತಲ್ಲ ಅನ್ಸುತ್ತೆ. ಬರೀ ನೂರು ರೂಪಾಯಿಗೆ ೧೦ ಗುಂಟೆ ಜಾಗ ಕೊಟ್ಟಿದ್ಲು ಅಜ್ಜಿ ನಮ್ಮೂರಿನ ಬೈಲುಮನೆ ತಿಮ್ಮಕ್ಕನ ಸಂಸಾರಕ್ಕೆ. ಅವರೋ ನಮ್ಮಜ್ಜಿನಾ ಇನ್ನೂ ದೇವರು ಅಂತಾನೆ ನೆನಪಿಸುತ್ತಾರೆ. ನಮ್ಮಜ್ಜಿ ಕೈಯಿಂದ ಕೈ ಕಾಲು ನೋವಿಗೆ ಔಷಧ ತೆಗೆದುಕೊಂಡವರು ನಮ್ಮ ಆಯಸ್ಸು ಗಟ್ಟಿಗಿರಲಿ ಅಂತ ಹಾರೈಸೋವಾಗ ಅಜ್ಜಿ ನಮಗೆ ಕೊಟ್ಟ ದೊಡ್ಡ ಉಡುಗೊರೆಗಳೆಲ್ಲಾ ನೆನಪಾಗುತ್ತೆ. ಅವಳಿಲ್ಲದೆ ಕಳೆದ ಎಂಟು ವರ್ಷಗಳು ನಿಜಕ್ಕೂ ಕಠಿಣ ದಿನಗಳು. ಪ್ರೀತಿಸುವ ಮುಗ್ಧ ಹೃದಯವೊಂದು ಜೊತೆಗಿಲ್ಲವಲ್ಲ ಎಂಬ ನೋವಿನ ವೇದನೆ ಹೇಗೆ ತಾನೆ ಮಾಯವಾದೀತು ಅಲ್ವಾ??

  • ತಿರು ಭಟ್ಕಳ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post