ಮಂದಾಕಿನಿಯ ಕೂಗು ಕೇಳಿ ಟೀ.ವಿ.ಯಿಂದ ತಲೆ ಎತ್ತಿದ ರಘುರಾಂ.
“ಬೀರೂನಲ್ಲೇ ಇರಬೇಕು ನೋಡು”ಯಾವ ಆಸಕ್ತಿಯೂ ಇಲ್ಲದೇ ನುಡಿದ.ಅವಳೇ ಅಲ್ಲವೇ,ತನ್ನ ಏಕೈಕ ಚಿನ್ನದೊಡವೆಯನ್ನು ಯವಾಗಲೂ
ಧರಿಸುವವಳು ಒಳಗೆತ್ತಿಡುವವಳೂ ಎರಡೂ .
“ಆಗಲೇ ನಾಲ್ಕು ತೊಲ ಅಂತಿದ್ದರು.ಎಷ್ಟೇ ಸವೆದಿದ್ದರೂ ಮೂರಾದರೂ ಇರಬಹುದಲ್ಲ.”ಒಡವೆ ಕಣ್ಣಮುಂದೆ ಹಿಡಿದು ಕೇಳಿದಳು.
“ಇರಬಹುದೇನೋ ಯಾಕೀಗ ?”
ಗಂಡ ಅಷ್ಟು ಕೇಳಿದ್ದೇ ಪೀಠಿಕೆಗೆ ಸಾಕಾಯ್ತು.”ಸಾಹುಕಾರ ರಾಜಯ್ಯ ಶೆಟ್ಟರು ಹತ್ತು ಗ್ರಾಮ್ ಬಂಗಾರಕ್ಕೆ ಐವತ್ತು ಸಾವಿರ ಕೊಡ್ತಾರಂತೆ ಕಣ್ರೀ.ನಿಂಗಮ್ಮ ಹೇಳಿದಳು.
ರಾಜಯ್ಯ ಶೆಟ್ಟರು ಇವರಿಗೆ ಅಪರಿಚಿತರೇನಲ್ಲ.ಹಿಂದಿನ ಬೀದಿಯಲ್ಲೇ ಇದ್ದವರು.ಬಡ್ಡಿ ವ್ಯವಹಾರ ಮಾಡುತ್ತಿದ್ದರು.ಅವರ ಮಗ ಫೈನಾನ್ಸ್ ಒಂದನ್ನೂ ನಡೆಸುತ್ತಿದ್ದ.
ಹೆಂಡತಿಯ ಮಾತು ಎನೂ ಅರ್ಥವಾಗದೆ ಅವಳ ಮುಖ ನೋಡಿದ ರಘುರಾಂ.
“ಹೊರಗಡೆ ಮಾರ್ಕೆಟ್ನಲ್ಲಿ ಹತ್ತು ಗ್ರಾಂ ಚಿನ್ನಕ್ಕೆ ಇಪ್ಪತ್ತೈದು ಸಾವಿರ.ಆದರೆ ಇವರು ಒಂದಕ್ಕೆರಡು ಕೊಡ್ತಾರೆ.”ಅವಳ ಕಣ್ಣುಗಳು ಮಿನುಗುತ್ತಿದ್ದವು.
“ಈಗ ನಿನಗೆ ಚಿನ್ನ ಮಾರೋಂಥಾ ದುರ್ಗತಿ ಏನೇ ಬಂದಿದೆ.ಹಿರಿಯರ ನೆನಪು ಇದು.ಮದುವೆಯಲ್ಲಿ ನಿಮ್ಮ ತಾಯಿ ಕೊಟ್ಟ ಒಡವೆ ತಾನೇ?”
ಮದುವೆಯಲ್ಲಿ ಅವಳತಾಯಿ ಕೊಟ್ಟ ಏಕೈಕ ಒಡವೆ.
“ಈಗ ಒಂದಕ್ಕೆರಡು ಬೆಲೆ ಬರೋ ಹೊತ್ನಲ್ಲಿ ಅದನ್ನೂ ಅಮ್ಮನ ಆಶಿರ್ವಾದ ಅಂತಲೇ ತಿಳ್ಕೋಬೇಕು ಕಣ್ರೀ.ಬಂದ ದುಡ್ನಲ್ಲಿ ಹೊಸದಾಗಿ ಅಂಥದ್ದೇ ಒಂದು ಗೊಲಸೂ ಮತ್ತೆ ಒಂದು ಜೊತೆ ಮೆಣಸಿನ ಬಳೆ ಮಾಡಿಸ್ಕೋತೀನಿ.”ಅವಳ ಕಣ್ಣಲ್ಲಿ ಆಸೆ ಕುಣಿಯುತ್ತಿತ್ತು.
“ಒಂದಕ್ಕೆರಡು ಬೆಲೆ ಕೊಡಲಿಕೆ,ಅವರಿಗೇನು ಹುಚ್ಚೇನು ?ಆ ಮನೆಗೆಲಸದ ನಿಂಗಮ್ಮ ಬುದ್ದಿ ಇಲ್ಲದೆ ಏನೋ ಹೇಳಿದಳೂಂತ ನೀನ್ಯಾಕೆ ನಂಬ್ತಿಯೇ ?”ಬೇಸರದಿಂದ ನುಡಿದರೂ ಮಂದಾಳ ಉತ್ಸಾಹಕ್ಕೇನೂ ಭಂಗಬರಲಿಲ್ಲ.
“ಸ್ವತಃ ಅವಳೇ ತನ್ನ ಎರಡು ಸವರನ್ ಚಿನ್ನ ಮಾರಿದ್ದಾಳೆ ಕಣ್ರೀ.ಅವಳ ಗುಡಿಸಲಿನ ಅಕ್ಕ ಪಕ್ಕದ ಬಹಳಷ್ಟು ಜನಗಳೂ ಮಾರಿದ್ದಾರೆ.ಶೆಟ್ಟರೊಬ್ಬರೇ ಅಲ್ಲ,ಇನ್ನೂ ಬಹಳ ಜನ ಇದ್ದಾರಂತೆ ಹೀಗೆ ಕೊಳ್ಳೋರು.”ಅವಳ ಕಣ್ಣುಗಳು ಮಿನುಗುತ್ತಿದ್ದವು.
ರಘುವಿಗೆ ವಿಷಯವೇನೆಂದು ಸುಳಿವು ಸಿಕ್ಕಿತು.”ನಮಗೆ ಇದೆಲ್ಲ ಬೇಡ.”
“ಇದರಲ್ಲಿ ನಮಗೇನಿದೆ ತೊಂದರೆ ? ಹಳೇ ನೋಟು ಕೊಡ್ತಾರೆ ಅಷ್ಟೇ.ಅದನ್ನ ನಮ್ಮ ಅಕೌಂಟಿಗೆ ಹಾಕ್ಕೊಂಡರಾಯ್ತಲ್ವಾ? “
“ಆಮೇಲೆ ಇದು ಎಲ್ಲಿಂದ ಬಂತು ಅನ್ನೋದಕ್ಕೇನು ಉತ್ತರ ಕೊಡ್ತಿಯಾ ?
“ನಮ್ಮ ಹತ್ತಿರ ಅಂತಹಾ ಮಹಾ ಲಕ್ಷಾಂತರ ಎಲ್ಲಿದೆ , ಯಾರ ಕಣ್ಣಿಗಾದರೂ ಬೀಳೋಷ್ಟು ?ಹಾಗೂ ಕೇಳಿದರೆ ಮನೆಯಲ್ಲಿಯ ಉಳಿತಾಯ ಅಂತ ಹೇಳಿದರಾಯ್ತು.”
ಯಾರದ್ದೋ ಕಪ್ಪು ಹಣ ಬಿಳುಪು ಮಾಡಲು ತಾನು ದುರಾಸೆಗೀಡಾಗುವ ಹೆಂಡತಿಯ ಬಗ್ಗೆ ಜಿಗುಪ್ಸೆ ಬಂದರೂ ಅವನೇನೂ ಮಾಡದಾದ.
ಗಂಡನ ಪ್ರಬಲ ವಿರೋಧದ ನಡುವೆಯೂ ಮಂದಾಕಿನಿ ತನ್ನ ಗೊಲಸು ಮಾರಿ ಹಣ ಪಡೆದಳು.
ಬ್ಯಾಂಕಿಗೆ ಹೋದ ಮಂದಾಕಿನಿಗೆ ಆಘಾತ ಕಾದಿತ್ತು.ಅವಳು ಜಮಾ ಮಾಡಿದ ನೋಟುಗಳನ್ನು ಕೌಂಟಿಂಗ್ ಮಷೀನ್ಗೆ ಹಾಕಿದ ಕ್ಯಾಷಿಯರ್ ದುರುಗುಟ್ಟಿ ನೋಡಿದ್ದ.ಆ ಕಂತೆ ಬಿಸಾಡಿ “ನೆಕ್ಸ್‌ಟ್ ಎಂದು ಮುಂದಿನವರನ್ನು ಕೂಗಿದ್ದ. ಕ್ಯೂ ಚಲಿಸಿ ಇವಳನ್ನು ಸರಿಸಿ ಮುಂದಿನಾಕೆ ನುಗ್ಗಿದ್ದಳು.
“ಯಾಕ್ರೀ ? ವಾಪಸ್ ಯಾಕೆ ಕೊಟ್ರೀ.”ಇವಳ ಪ್ರಶ್ನೆಗೆ ಉತ್ತರಿಸುವ ಸಹನೆಯಾಗಲೀ ವ್ಯವಧಾನವಾಗಲೀ ಅವನಲ್ಲಿರಲಿಲ್ಲ.
“ನನ್ನ ಅಕೌಂಟ್ಗೆ ಯಾಕೆ ಹಾಕಲಿಲ್ಲ ? “ಅವಳ ಧ್ವನಿ ಏರಿತ್ತು.
ಅವನೂ ಆಕ್ರೋಶದಿಂದ “ಖೋಟಾನೋಟು ಕೊಡೋದಲ್ದೇ ರೋಪ್ ಹಾಕ್ತಿರೇನ್ರೀ ?ಹೆಣ್ಮಗಳೂಂತ ಸುಮ್ಮನೆ ಬಿಟ್ಟಿದೀನಿ.ಬೇರೆ ಯಾರಾದ್ರೂ ಹೀಗೆ ಮಾಡಿದ್ದರೆ ಪೋಲೀಸರನ್ನ ಕರೆಸ್ತಿದ್ದೆ ಅಷ್ಟೇ.”ಅಬ್ಬರಿಸಿದ.
ಅಕ್ಕ ಪಕ್ಕದವದವರ ಕುಹಕ ವ್ಯಂಗ್ಯದ ನೋಟಗಳನ್ನು ಎದುರಿಸದಾದಳು.
ಮನೆಗೆ ಬಂದು ಗಂಡನ ಮುಂದೆ ಗೋಳಾಡಿದಳು.ರಘು ನಿರ್ಲಿಪ್ತನಾಗಿದ್ದ.
“ನಾನು ಮೊದಲೇ ಬೇಡಾಂದಿದ್ದೆ.ನಿನಗ್ಯಾಕೆ ಬೇಕಿತ್ತು ಆ ವಂಚಕರ ಸಹವಾಸ.ಅತಿಯಾಸೆಗೆ ಬಿದ್ದಿ,ಅದರ ಫಲವೂ ಅನುಭವಿಸು.”
“ನೀವೊಬ್ಬರು,ಸದಾ ನನ್ನ ಹಂಗಿಸೋಕೇ ಕಾಯ್ತಿರಿರಿ.ಏನಾದರೂ ಮಾಡಿ ಅವರಿಗೆ ಬುಧ್ಧಿ ಕಲಿಸೀಂದ್ರೆ.”
“ಏನು ಮಾಡಿದರೇನು ನಿನ್ನ ಹಣ ತಿರುಗಿ ಬರ್ತದಾ?”ಅಚನ ಪ್ರಶ್ನೆಗೆ ಅವಳ ಗೋಳಾಟವೇ ಉತ್ತರವಾಯ್ತು.
ಕೂಲಂಕಷವಾಗಿ ಪರಿಶೀಲಿಸಿದಾಗ ಒಂದೂವರೆ ಲಕ್ಷದಲ್ಲಿ,ಐವತ್ತು ಸಾವಿರದಷ್ಟು ಅಸಲೀ ನೋಟುಗಳಾದರೆ ಉಳಿದ ಒಂದು ಲಕ್ಷ ನಕಲೀ.
ಒಂದಕ್ಕೆರೆಡು !ವಿಷಾದದಿಂದ ನಕ್ಕ.ಜನಗಳ ದುರಾಸೆಯನ್ನೇ ಬಂಡವಾಳ ಮಾಡಿಕೊಂಡು,ಇಂಥಾ ಸಂದರ್ಭದಲ್ಲೂ ಒಂದಕ್ಕೆರಡು ಲಾಭ ದೋಚಿದ ಮೋಸಗಾರರು.
ಐ.ಟಿ. ಡಿಪಾರ್ಟ್ಮೆಂಟ್ಗೆ ಮಾಹಿತಿ ಕೊಡುವುದೂ ತಡವಾಗಲಿಲ್ಲ,ಶೆಟ್ಟರ ಮನೆ ಮೇಲೆ ಆಧಾಯ ತೆರಿಗೆ ದಾಳಿ ನಡೆಯುವುದೂ ತಡವಾಗಲಿಲ್ಲ.ಇವರ ಹಣ ಸಿಗದಿದ್ದರೂ ಸೇಡು ತೀರಿಕೊಂಡ ತೃಪ್ತಿಯಂತೂ ಇತ್ತು.
– ಜಿ.ಸುದರ್ಶನ್
Facebook ಕಾಮೆಂಟ್ಸ್