X

ಉಪಗ್ರಹಗಳಿಗೂ ಉಪದ್ರವಿಗಳು…!

(ಇವತ್ತು ಸರಿಯಾಗಿ ಡ್ರೈವಿಂಗ್ ಮಾಡಲೇ ಅರ್ಧದಷ್ಟು ಜನ ಕಂಗಾಲಾಗುತ್ತಾರೆ. ಇನ್ನು ಐದು ಸಾವಿರಕ್ಕೂ ಮಿಗಿಲಾದ ಕಾಂಬಿನೇಶನ್‍ಗಳನ್ನು ನಿಖರವಾಗಿ ಲೆಕ್ಕಾಚಾರ ಹಾಕಿ ಪ್ರತಿ ಉಪಗ್ರಹಗಳು ಇಲ್ಲಿ ಕೂತಿದ್ದಲ್ಲಿಂದಲೇ ನಮ್ಮ ಮಾತು ಕೇಳುವಂತೆ ಮಾಡುವ ಲಾಜಿಕ್ ಇದೆಯಲ್ಲ, ಹೆಚ್ಚಿನವರಿಗೆ ಅದೊಂದು ರಮ್ಯ ರೋಚಕ ಕಥಾನಕದಂತೆಯೇ ಹೊರತಾಗಿ ಅರಿವಿಗೇ ನಿಲುಕುವುದಿಲ್ಲ. ಆದರೆ ಈ ಸಾಧನೆಯ ಹಾದಿಯಲ್ಲಿ ಸಾಗಿ ಬಂದವರ ಬೆನ್ನಿಗೆ ಒಂದು ಪ್ರೀತಿಯ ಕೈ ಇಡಲಾಗದ ನಮ್ಮಲ್ಲಿ ಹಾರಿ ಬಿಟ್ಟ ಉಪಗ್ರಹಗಳಿಗೂ ಕಾಟ ಕೊಡುವ ಕುದ್ರಹ್ರಗಗಳಂತಾಡುತ್ತಿದ್ದಾರಲ್ಲ ಇವರಿಗೆಲ್ಲ ದೇಶ, ಆತ್ಮ ಯಾವುದೂ ಇಲ್ಲವಾ..? )

ವಿರೋಧಿಸಲೇ ಬೇಕು ಎನ್ನುವ ಹುಕಿಗೆ ಬಿದ್ದ ಮನಸ್ಥಿತಿಯ ಅಂತಿಮ ಹಂತ ಯಾವುದೆಂದರೆ ಬೇಕೋ ಬೇಡವೋ ಎಲ್ಲದರಲ್ಲೂ ಹುಳುಕು ಹುಡುಕುವುದೇ ಆಗಿರುತ್ತದೆ ಮತ್ತು ಅದರ ಕಾಮಾಲೆ ಕಣ್ಣಿಗೆ ಯಾವ ಸೈದ್ಧಾಂತಿಕ, ಆರ್ಥಿಕ, ಅಧ್ಬುತ ಜಾಗತಿಕ ಪ್ರಗತಿಯ ಅಪರೂಪದ ಸಾಧನೆಗಳೂ ಕೆಸರಾಗಿಯೇ ಕಾಣಿಸುತ್ತದೆ. ಕಾರಣ ಅಂಥವರ ಮನಸ್ಥಿತಿಯೇ ಕೆಸರಾಗಿರುತ್ತದೆ. ಇದೆಲ್ಲಾ ಯಾಕೆ ಹೇಳಬೇಕಾಯಿತೆಂದರೆ ಮೊನ್ನೆ ಭಾರತದ ವಿಜ್ಞಾನಿಗಳು ಸಾಲು ಸಾಲಾಗಿ ಮುತ್ತಿನ ಮಾಲೆಯ ರೀತಿಯಲ್ಲಿ 104 ಉಪಗ್ರಹಗಳನ್ನು ಹಾರಿ ಬಿಟ್ಟರಲ್ಲ ಅದರಲ್ಲಿ ವಿದೇಶಿ ನಿರ್ಮಿತ ಉಪಗ್ರಹಗಳೇ ಸರಿ ಸುಮಾರಿ ಶೇ. 98 ರಷ್ಟಿದ್ದವು. ಉಳಿದಂತೆ ನಮ್ಮವು ಎರಡ್ಮೂರು. ತಗಳ್ಳಪಾ ಇಷ್ಟೆ ಸಾಕಾಯಿತು ಇವತ್ತು ಭಾರತೀಯ ವಿವಿಧ ರಂಗದ ಅಧ್ಬುತ ಸಾಧನೆಗಳನ್ನು ಎಲ್ಲೆ ಹೋಗಲಿ ಆದು ಈ ದೇಶದ ಪ್ರಧಾನಿಗೆ ತಳುಕು ಹಾಕಿಕೊಳ್ಳುತ್ತಿರುವ ಕಾರಣ ವಿರೋಧಕ್ಕೊಂದು ನೆಲೆ ಗಟ್ಟಿಯಾಗಿ ಹೋಯಿತು.

ಪ್ರತಿಬಾರಿಯೂ ಟೌನ್‍ಹಾಲ್‍ನ ಎದುರಿಗೆ ಟವಲ್ಲು ಹಾಕಲು ನೆಪ ಹುಡುಕುವ ಮಂದಿಗೆ, ಭಾರತೀಯರದ್ದು ಬರೀ ಬಿಟ್ಟಿ ಕೆಲಸ, ಹೀಗೆ ಬೇರೆಯವರ ಉಪಗ್ರಹ ಹಾರಿಸಿದ್ರೆ ನಮಗೆ ಸಿಕ್ಕಿದ್ದೇನು..? ನಾವು ಬಡ ಭಾರತೀಯನ ಬಗ್ಗೆ ಚಿಂತಿಸದೆ ಇದೆಲ್ಲಾ ಮಾಡ್ತಾ ಇದ್ರೆ ಉಪಗ್ರಹವೇನು ಹೊಟ್ಟೆ ತುಂಬಿಸುತ್ತಾ..? ನಮ್ಮ ನೆಲದಲ್ಲೇ ಮುಗಿಯದ ರಂಕುಗಳಿವೆ (ಕರೆಕ್ಟೇ.. ರಂಕುಗಳನ್ನು ಮುಗಿಸಲು ನಿಮ್ಮಂಥವರು ಬಿಡುತ್ತೀರಾದರೂ ಎಲ್ಲಿ..?) ಅಂತಹದ್ದರಲ್ಲಿ ವಿದೇಶಿ ಉಪಗ್ರಹ ಹಾರಿಸುವ ಧಿಮಾಕು ನಮಗೆ ಬೇಕಿತ್ತಾ ಇತ್ಯಾದಿ ಅಪ್ಪಟ ಅವೈಜ್ಞಾನಿಕ ಮತ್ತು ಪಿಸಣಾರಿಗಳ ಲೊಚಗುಟ್ಟುವಿಕೆಯ ಕೊರೆತವನ್ನು ಜಾಲತಾಣದಲ್ಲಿ ಓತಪ್ರೋತವಾಗಿ ಹರಿ ಬಿಡತೊಡಗಿದ್ದಾರೆ. ಅಲ್ಲಿಗೆ ಒಂದು ವಿಷಯ ಮೊನ್ನೆಯ ಸಂಜೆಯೇ ನನಗೆ ಮನದಟ್ಟಾಗಿ ಹೋಗಿತ್ತು. ಅದೆಂದರೆ ಹೀಗೆ ಹಲುಬುತ್ತಿರುವ ಹೆಚ್ಚಿನವರಿಲ್ಲಿ ಯಾರಿಗೂ ಉಪಗ್ರಹಗಳನ್ನು ಹಾರಿಸುವ ತಂತ್ರಜ್ಞಾನ, ವಿದೇಶಿ ಉಪಗ್ರಹ ಹಾರಿಸುವುವದರಿಂದಾಗುವ ಪ್ರಯೋಜನ, ಪರೋಕ್ಷವಾಗಿ ನಮಗೆ ಆಗುವ ಅನಾಮತ್ತು ಲಾಭಗಳು, ನಾವ್ಯಾಕೆ ಹಾಗೆ ಇನ್ನೊಬ್ಬರ ಉಪಗ್ರಹ ಹಾರಿಸುತ್ತೇವೆ ಉಹೂಂ…ಯಾವೆಂದರೆ ಯಾವುದೂ ಬೇಸಿಕ್ ಎನ್ನುವ ಮಾಹಿತಿಗಳೇ ಇವರಿಗಿರಲಿಲ್ಲ.

ಬೇರೇನೂ ಬೇಡ ಸರಿಯಾಗಿ ಬಾಟಲಿಯಲ್ಲಿ ನಿಲ್ಲಿಸಿ ನಿರ್ದಿಷ್ಟ ದಿಕ್ಕಿಗೆ ದೀಪಾವಳಿ ರಾಕೇಟ್ಟು ಹಾರಿಸಲಿ ನೋಡೊಣ, ಹೊಟ್ಟೆಯಲ್ಲೊಂದು ಅರಿವೆಯ ಉಂಡೆ ಕಟಿಕೊಂಡು ಬೆಂಕಿ ಇಕ್ಕಿಸಿಕೊಂಡು ಹಾರುವ ಗೂಡು ದೀಪವನ್ನು ಸರಿಯಾದ ದಿಕ್ಕಿಗೇ ಹಾರಿಸಿ ತೋರಿಸಿ ನೋಡೊಣ. ಉಹೂಂ.. ನಮ್ಮ ಕೈಯ್ಯಲ್ಲಿ ಪುಟಗೋಸಿ ದೀಪಾವಳಿ ರಾಕೇಟ್ಟಿಗೇ ಪಥ ನಿರ್ದೇಶಿಸಿ ಹಾರಿಸಲು ಅಸಾಧ್ಯವಾಗಿರುವಾಗ ಕರಾರುವಾಕ್ಕಾಗಿ ಅನಾಮತ್ತು 104 ಉಪಗ್ರಹಗಳನ್ನು ಒಂದರ ಹಿಂದೊಂದರಂತೆ ಭೂಸ್ಥಿರ ಕಕ್ಷೆಯ ಹೊರಾವರಣದ ನಿರ್ದಿಷ್ಟ ಪಥದ ಪರಿಭ್ರಮಣೆಗೆ ಎಳೆಸುತ್ತಾ, ಒಂದೊಂದಾಗಿ ಪ್ರತಿಯೊಂದನ್ನು ನಿಯಮಿತವಾಗಿ ರಾಕೆಟ್ಟಿನಿಂದ ಜಾರಿಸಿ ಆಯಾ ಜಾಗಕ್ಕೆ ತೂರಿಸುತ್ತಾ ಹೋಗುವುದು ಮತ್ತು ಅದನ್ನು ಇಲ್ಲಿಯವರೆಗೂ ಮನುಷ್ಯನೊಬ್ಬ ಕಾಣದೇ ಇರುವ ಅಪರಿಚಿತ ಅಂತರಿಕ್ಷದಲ್ಲಿ ಅಂಗೈಯಗಲದ ರಿಮೋಟ್ ಮೂಲಕ ನಿಯಂತ್ರಿಸುವುದಿದೆಯಲ್ಲ ಅದು ಕಲ್ಲು ಕಂಬದ ಕಟ್ಟೆಯ ಮೇಲೆ ಕೂತು ತೌಡು ಕುಟ್ಟಿದಂತಲ್ಲ. ನಿಮಗೆ ಗೊತ್ತಿರಲಿ ಪೂರ್ತಿ ನೂರ ನಾಲ್ಕು ಉಪಗ್ರಹಗಳಿಗಾಗಿ ಒಂದು ವಿಫಲವಾದರೆ ಇನ್ನೊಂದಿರಲಿ ಎಂದು ಅಲ್ಟರ್‍ನೇಟ್ ಕಾಂಬಿನೇಶನ್‍ಗಳನ್ನು ವಿಜ್ಞಾನಿಗಳು ಲೆಕ್ಕ ಹಾಕಿರುತ್ತಾರಲ್ಲ, ಹಾಗೆ ಬರೆದ ಲಾಜಿಕಲ್ ಕಾಂಬಿನೇಶನ್ನುಗಳ ಸಂಖ್ಯೆಯೇ ಐದು ಸಾವಿರ ದಾಟಿತ್ತು. ಅಷ್ಟೆ ನಿಖರವಾಗಿದ್ದವು ಕೂಡಾ.

ಇದ್ಯಾಕೆ ಎಂದರೆ, ಭೂ ಸ್ಥಿರ ಕಕ್ಷೆಯ ಹೊರಗೆ ಹೋಗಿ ಕಾರ್ಯ ನಿರ್ವಹಿಸುವಾಗ ಅಕಸ್ಮಾತಾಗಿ ಯಾವುದಾದರೊಂದು ತಾಂತ್ರಿಕತೆ ಕೈಕೊಡುವ ಮತ್ತು ನಮ್ಮ ಅರಿವಿಗೆ ಬಾರದೆ ಆಗುವ ಕಾಂಬಿನೇಶನ್ ಫೇಲ್ಯೂರ್‍ನಿಂದ ಅದರ ನಂತರದ ನಿರಂತರವಾದ ಕಾರ್ಯದ ವ್ಯಾಪ್ತಿಯನ್ನೇ ಬದಲಿಸಿ ಬಿಡುವ ಅಪಾಯವಿರುತ್ತದೆ. ಹಾಗಾಗದಂತಿರಲು ಒಂದು ವಿಫಲವಾದಲ್ಲಿ ಅದನ್ನು ಗೈಡ್ ಮಾಡಿ ಕೆಲಸ ನಿಲ್ಲದಂತೆಯೂ, ನಿಗದಿತ ಗುರಿಯತ್ತ ಸಾಗುವ ಹಾದಿಯಲ್ಲಿ ಪಥ ಬದಲಾಗದಂತೆಯೂ ನೋಡಿಕೊಳ್ಳಲು ಈ ಮುತುವರ್ಜಿ ವಹಿಸಿರಲಾಗುತ್ತದೆ.

ಒಂದು ನೆನಪಿರಲಿ, ಇವತ್ತು ಭಾರತ ಹಾರಿಸಿರುವ ಉಪಗ್ರಹದ ಅಪರೂಪದ ಸಾಧನೆ, ಜಾಗತಿಕವಾಗಿ ಯಾವ ದೇಶಗಳೂ ಈ ರೀತಿ ಮಿತವಾದ ವೆಚ್ಚ ಮತ್ತು ವೇಗವಾಗಿ ನಿರ್ವಹಿಸುವ ಸಮಯದಲ್ಲಿ ಇಲ್ಲವೇ ಇಲ್ಲ. ಇಲ್ಲದಿದ್ದರೆ ಅದ್ಯಾಕಾದರೂ ಆ ಅಮೇರಿಕನ್ನರು ನಮ್ಮ ಕೈಗೆ ಅನಾಮತ್ತಾಗಿ 93 ಉಪಗ್ರಹಗಳನ್ನು ಕೊಟ್ಟು ಹಾರಿಸಿಕೊಡಿ, ಇಂಥಿಂಥಾ ಎತ್ತರ ಮತ್ತು ವರ್ತುಲದ ಭೂಸ್ಥಿರ ಕಕ್ಷೆಯಲ್ಲಿ ನಮ್ಮ ಉಪಗ್ರಹಗಳನ್ನು ನಿಲ್ಲಿಸಿ ಕೊಡಿ ಎಂದು ಕೈ ಕಟ್ಟಿ ನಿಲ್ಲುತ್ತಿದ್ದರು. ಹಾಗೆ ಅವರ ಪ್ರತಿ ಹೊಸ ಉಪಗ್ರಹದ ಜೊತೆಗೆ ನಮಗೇ ಗೊತ್ತಿಲ್ಲದ ಕರಾರುವಾಕ್ಕಾದ ವಿನ್ಯಾಸದ ನಕ್ಷೆಯೂ ನಮ್ಮ ವಿಜ್ಞಾನಿಗಳ ಕೈ ಸೇರುತ್ತದೆ ನೆನಪಿರಲಿ. ಕಾರಣ ಒಂದು ಉಪಗ್ರಹವನ್ನು ಹಾರಿಸುವಾಗ ಅದರ ವಿನ್ಯಾಸ ಮತ್ತು ಸಂಪೂರ್ಣ ತಾಂತ್ರಿಕ ಮಾಹಿತಿಯೂ ನಮ್ಮವರ ಕೈಯ್ಯಲ್ಲಿರುತ್ತದೆ. ಹಾಗೆ ಸಿಕ್ಕುವ ಮಾಹಿತಿಯ ಅಂದಾಜು ಇಲ್ಲಿ ಕೂತು ತೌಡು ಕಟ್ಟುವವರಿಗೆ ವಿವರಿಸಿದರೂ ಅರ್ಥವಾಗಲಾರದು.

ಪ್ರತಿ ಉಪಗ್ರಹವೂ ಭಿನ್ನವಾಗಿರುವಾಗ ಅದರ ಪ್ರತಿ ವಿನ್ಯಾಸವೂ ಅಧ್ಬುತವಾಗಿರುತ್ತದೆ. ಅದರಲ್ಲೂ ತಂತ್ರಜ್ಞಾನದಲ್ಲಿ ಕ್ರಯೋಜೆನಿಕ್‍ನ್ನೇ ಕೈಗೆಟುಕಿಸಿಕೊಂಡಿದ್ದ ಅಮೇರಿಕನ್ನರು ಯಾವತ್ತೂ ಅದನ್ನೂ ಇತರರಿಗೆ ಪೂರೈಸದೆ ಉಳಿದುಕೊಂಡವರು. ಆದರೆ ಅದ್ಯಾವ ಮುಲಾಜೂ ಇಲ್ಲದೆ ಭಾರತೀಯ ವಿಜ್ಞಾನಿಗಳು ನಮ್ಮದೇ ತಂತ್ರಜ್ಞಾನದಲ್ಲಿ ರಾಕೇಟ್ಟು ಹಾರಿಸತೊಡಗಿದರು ನೋಡಿ. ಅಮೇರಿಕೆಯ ಬಜೆಟ್ಟೇ ಏರು ಪೇರಾಗಿಬಿಟ್ಟಿತ್ತು. ಕಾರಣ ನಮ್ಮ ಖರ್ಚು ತೀರ ಬೈಟು ಟೀ ಕುಡಿದಂತೆ. ಅವರದ್ದು ಭರ್ತಿ ತಿಂಗಳ ಪಗಾರವೇ ಇಟ್ಟಂತೆ.

ಹಾಗಾಗಿ ತಮ್ಮ ರಾಕೆಟ್‍ನ್ನು ಗೋಡಾನಿನಲ್ಲಿ ಒಪ್ಪವಾಗಿ ಜೋಡಿಸಿಟ್ಟು ಭಾರತಕ್ಕೆ ಪೂರ್ತಿ ಕಾಂಟ್ರಾಕ್ಟು ವಹಿಸಿಕೊಟ್ಟ ನಂ. 1 ದೇಶ ಸುಮ್ಮನೆ ಪಿಳಿಪಿಳಿ ನೋಡುತ್ತಾ ಕೂತಿತ್ತು. ಅದರೊಂದಿಗೆ ಇತರ ದೇಶಗಳೂ ಕೂಡಾ. ಹಾಗೆ ಭಾರತದೊಳಕ್ಕೆ, ಇಸ್ರೋದ ರಾಕೇಟ್ಟಿನ ಪೊಟರೆಯೊಳಗೆ ಸೇರಿಕೊಂಡ ವಿದೇಶಿ ಉಪಗ್ರಹಗಳ ಜತೆಗೆ ಅವುಗಳ ವಿದೇಶಿ ತಂತ್ರಜ್ಞಾನದ ಬಹುಪಾಲು ವಿನ್ಯಾಸವೂ ಭಾರತೀಯ ವಿಜ್ಞಾನಿಗಳ ಕೈಗೆ ದೊರಕಿರುತ್ತದೆ. ಇದೆಲ್ಲಾ ಪರದೆಯ ಹಿಂದಿನ ಹಲವು ರೋಚಕ ಮಾಹಿತಿಗಳು ಇವತ್ತು ಬುಡಬುಡಿಕೆಯ ಲೇಖಕರ ಲೇಖನಿ ಮತ್ತು ತಲೆ ಎರಡಕ್ಕೂ ದಕ್ಕಿರುವುದಿಲ್ಲ. ಆಗಿರುವ ಆರ್ಥಿಕ ಲಾಭದ ವಿಷವನ್ನೇ ಕೇಳಿ ನೋಡಿ. ಇವರೆಲ್ಲಾ ಊಟಕ್ಕೆ ಗತಿಯಿಲ್ಲ ಎಂದು ಕೆ.ಜಿ.ಲೆಕ್ಕದ ಅಕ್ಕಿಗೆ ಬೆರಳು ಮಡಚುತ್ತಾ ಕೂತಿರುತ್ತಾರೆ. ಅಷ್ಟು ಸಾವಿರ ಕೋಟಿ ಲೆಕ್ಕದ ಲಾಭಾಂಶ ಇಸ್ರೋಗೆ ದಕ್ಕಿದೆ. ಆದರೆ ಇವರ ಕರ್ಮ ನೋಡಿ, ನಮ್ಮ ಬಡವರ / ರೈತರ ಹೊಟ್ಟೆಗೆ ಹಿಟ್ಟಿಲ್ಲ ಮತ್ತೆ ಉಪಗ್ರಹ ಬೇಕಾ ಎಂಬ ಅದೇ ವರಾತ. ಕಾರಣ ಇಷ್ಟೆ ಇಂತಹ ಅತೀವ ಬುದ್ಧಿವಂತಿಕೆಯ ತಂತ್ರಜ್ಞಾನದ ಸಾಧನೆಯ ಮಹತ್ವದ ಅರಿವೇ ಇವರಿಗಾಗುತ್ತಿಲ್ಲ.

ಅರೇ.. ಆಯಿತು ಬಡವರ ರೈತರ ಕಾಳಜಿ ಇರುವ ನೀವು ಅದೆಷ್ಟು ಸರ್ತಿ ರೈತರ ಮನೆಗೂ ಬಡವರ ಹಾಡಿಗಳಿಗೂ ಎಡತಾಕಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದೀರಿ..? ಈ ಉತ್ತರಕ್ಕೂ ಬಟ್ಟು ಮಡಚುವುದೇ ವಿನ: ಧನಾತ್ಮಕ ಪ್ರತಿಕ್ರಿಯೆ ಎಂಬುವುದು ಇವರ ಜನ್ಮದಲ್ಲೇ ಬರೆದಿಲ್ಲ. ಏನು ಮಾಡೊಣ..? ಅಸಲಿಗೆ ರಾಕೇಟ್ ಉಡಾವಣೆ ತಂತ್ರಜ್ಞಾನ ಮತ್ತು ಅಷ್ಟು ಕರಾರುವಾಕ್ಕಾಗಿ ಕಕ್ಷೆಯ ವಿವಿಧ ಸ್ಥಾನದಲ್ಲಿ 104 ಉಪಗ್ರಹಗಳನ್ನು ಕೂರಿಸುವುದಿದೆಯಲ್ಲ ಕತೆ ಹೇಳಿದಂತಿಲ್ಲ ಆ ಕೆಲಸ. ಒಂದೇ ಒಂದು ಫ್ರಾಕ್ಷನ್ ಮಿಸ್ಟೇಕೂ ಪೂರ್ತಿ ಯೋಜನೆಯನ್ನೇ ಎಡವಟ್ಟಾಗಿಸುತ್ತದೆ.

ರಾಕೇಟ್ಟಿಗೆ ಬೇಕಾದ ಇಂಧನ, ಅದರ ಪ್ರತಿ ಸೆಕೆಂಡಿಗೂ ಮೊದಲೇ ದಿಕ್ಕು ನಿರ್ದೇಶಿಸಬೇಕಾದ ನಾವಿಗೇಟರ್‍ಗಳು, ಪ್ರತಿ ಉಪಗ್ರಹವನ್ನು ಕಳಚಿಕೊಳ್ಳುವಾಗಲೂ ಬೇಕಾಗುವ ನಿರ್ದಿಷ್ಟ ಟೈಮಿಂಗೂ, ಉರಿಯುತ್ತಲೇ ಭೂ ಗುರುತ್ವವವನ್ನು ಒದೆಯುತ್ತಾ ಹಾರುವ ರಾಕೇಟ್ಟು ಕಕ್ಷೆಯನ್ನು ಸೇರುತ್ತಿದ್ದಂತೆ ತಿರುಗಿಕೊಳ್ಳುವ ಪ್ರಕ್ರಿಯೆ ತೀವ್ರ ಪರಿಕ್ಷೆಗೊಡ್ಡುವ ಸಮಯ. ರಾಕೆಟ್ಟು ಒಂದೇ ಒಂದು ಮಿಲಿ ಸೆಕೆಂಡ್ ವ್ಯತ್ಯಾಸ ಹೊಂದಿದರೂ ಪೂರ್ತಿ ಕಾರ್ಯಾಚರಣೆ ಗೋವಿಂದ. ಅಂತಹದರಲ್ಲಿ ಅಪರೂಪದ ಸಾಧನೆಯನ್ನು ಬೆನ್ತಟ್ಟಿ ಜಾಗತಿಕವಾಗಿ ಒಂದು ಹಂತದಲ್ಲಿ ಉನ್ನತಿಗೂ ಆರ್ಥಿಕ ಸುಸ್ಥಿತಿಗೂ ಕಾರಣವಾಗುವ ಅಂಶದತ್ತ ಧನಾತ್ಮಕ ಒಲವು ಬೆಳೆಸಿಕೊಳ್ಳದೇ ಇದಕ್ಕೂ ದಕ್ಕಿದ ವೇದಿಕೆಯಲ್ಲೆಲ್ಲಾ, ಬರೆಯಲು ಸಿಕ್ಕಿದಲ್ಲೆಲ್ಲಾ, ಮಾತಾಡಲು ಕಾರಿಕೊಳ್ಳಲು ಅವಕಾಶ ಇರುವಡೆಯಲ್ಲೆಲ್ಲಾ ಇಸ್ರೋಗೆ ಯಾಕೆ ಬೇಕಿತ್ತು ಈ ವ್ಯವಹಾರ, ಇದರಿಂದ ನಮಗೇನು ಲಾಭ..? ಎನ್ನುತ್ತಾ ಯಾವ ಸಾಧನೆಗೂ ಅಡ್ಡಿಪಡಿಸುತ್ತಾ ಕೂತಿದ್ದರೆ ಇವತ್ತು ನಮ್ಮ ಸೈನಿಕರಿಂದ ಸರ್ಜಿಕಲ್ ಸ್ಟ್ರೈಕ್, ಕಾರ್ಗಿಲ ಕದನ ತರಹದ ವಿಜಯಗಳು ಸಾಧ್ಯವಿದ್ದವೇ..?

ತಂತ್ರಜ್ಞಾನ ಮತ್ತು ಆರ್ಥಿಕ ಸದೃಢತೆಯೇ ಇವತ್ತು ದೇಶದ ಬೆನ್ನೆಲುಬಾಗಿದ್ದು ಪ್ರಧಾನಿ ಎಡಬಿಡದೆ ಅದಕ್ಕೆಲ್ಲಾ ಉತ್ತೇಜನ ಕೊಡುತ್ತಿದ್ದಾರೆ. ಆದರೆ ನಮ್ಮಲ್ಲಿ ನೋಡಿ ಎಲ್ಲೆಲ್ಲಿ ಕ್ಯಾಂಪಸ್ಸುಗಳನ್ನು ನಿಷ್ಪ್ರಯೋಜಕ ಅಡ್ಡೆಯನ್ನಾಗಿಸಬೇಕು, ಯಾವಾಗ ಟೌನ್‍ಹಾಲ್‍ಗೆ ಟವಲ್ಲು ಹಾಕಬೇಕು ಇದೇ ಲೆಕ್ಕಾಚಾರದಲ್ಲೇ ದಿನಗಳೆಯುತ್ತಿದ್ದಾರೆ. ಒಬ್ಬೆ ಒಬ್ಬ ಇಂಥ ಎಡಬಿಡಂಗಿಯನ್ನು ಇವತ್ತು ನಿಲ್ಲಿಸಿ ಕೇಳಿ ನೋಡಿ. ರಾಕೆಟ್ಟು ಹಾರಿ ಬಿಡಲು ಬಳಸುವ ತಾಂತ್ರಿಕತೆ ಸಾಯಲಿ, ವಿಧಾನ ಮತ್ತು ಸರಳ ಸೂತ್ರವಾದರೂ ಗೊತ್ತಿರುತ್ತಾ..? ಗೊತ್ತಿರುವವನಾದರೆ ಅದರ ಮಹತ್ವದ ಅರಿವಿರುವವನಾರೂ ಹೀಗೆ ಹಾಗಲಲ್ಲೆ ತೆಲುಗಣ್ಣು ಬಿಟ್ಟು ಹಲುಬಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ಇನ್ನಾದರೂ ಬದುಕು ಮತ್ತು ಯೋಚನಾ ವಿಧಾನ ಬದಲಾಗಲಿ. ಕಾರಣ ಸಾಧನೆ ಎನ್ನುವುದು ವೇದಿಕೆಗೆ ಅತುಕೊಂಡು ವರಾತ ಹಚ್ಚಿಕೊಂಡಂತಲ್ಲವಲ್ಲ.

ಉಡ್ಡಯನ ಎನ್ನುವುದೇ ಅಧ್ಬುತ ಕಾರ್ಯಾಚರಣೆ

ಮೊನ್ನೆ ನಡೆದ ಉಡ್ಡಯನದಲ್ಲಿ ಉಡ್ಡಯನಗಳ ಸಂಖ್ಯೆಯೊಂದು ವಿಶೇಷತೆ ಅಲ್ಲವೇ ಅಲ್ಲ. ಕಾರಣ ಅದಕ್ಕಿಂತಲೂ ಎರಡು ಪಟ್ಟು ಬೇಕಾದರೂ ಉಪಗ್ರಹಗಳನ್ನು ಒಂದೇ ರಾಕೆಟ್ಟಿನಲ್ಲಿ ಹಾರಿಸಿಯಾರು. ಆದರೆ ಪ್ರತಿ ಗಂಟೆಗೆ 2700 ಕಿ.ಮೀ. ವೇಗದಲ್ಲಿ ಹಾರುವ ರಾಕೆಟ್ಟು ಅದರ ಗತಿಯನ್ನು ದಿಕ್ಕನ್ನೂ ಕಾಯ್ದುಕೊಳ್ಳುವುದರೊಂದಿಗೆ, ಪ್ರತಿ ಮಿಲಿ ಸೆಕೆಂಡಿನ ಕಾಲಾವಧಿಯಲ್ಲೂ ಒಂದು ನಿರ್ದಿಷ್ಟ ಆವರ್ತನಕ್ಕೆ ಬೇಕಾದ ಕೋನದಲ್ಲಿ ತಿರುವನ್ನು ತೆಗೆದುಕೊಳ್ಳುತ್ತಲೇ ಭೂಮಿಯ ಕಕ್ಷೆಯನ್ನು ಸೇರುವುದಿದೆಯಲ್ಲ ಅದು ಅತಿ ದೊಡ್ಡ ಹಂತವಾದರೆ ನಂತರದ್ದೇ ಒಂದು ರೀತಿಯಲ್ಲಿ ಕತೆಯಂತೆ ಭಾಸವಾಗುವ ಅವಿಷ್ಕಾರ.

ಹೆಚ್ಚಿನ ತೂಕದ ( ಕಾರ್ಟೋ ಸ್ಯಾಟ್ 714 ಕೆ.ಜಿ ಸುಮಾರು 505 ಕಿ.ಮೀ. ಎತರದಲ್ಲಿ ಭೂಸ್ಥಿರ ಕಕ್ಷೆಯಲ್ಲಿ ಸುತ್ತಲಿದೆ) ಉಪಗ್ರಹದ ಜೊತೆಗೆ ಬೂಟಿನ ಆಕಾರದ ಒಂದೂವರೆ ಕೆ.ಜಿ ತೂಕದ ಉಪಗ್ರಹ ಕೂಡಾ ಕೇವಲ ಹತ್ತೆ ನಿಮಿಷದ ಅಂತರದಲ್ಲಿ ಸೆಕೆಂಡಿಗೆ 7.5 ಕಿ.ಮೀ. ವೇಗದಲ್ಲಿ ಕಕ್ಷೆಗೆ ಇಳಿಯುತ್ತಿದ್ದವು. ಇದರಲ್ಲಿ ಒಂದು ಜೋಡಿ ನ್ಯಾನೋ ಉಪಗ್ರಹ ಫ್ಯಾಂಕೋ ಮ್ಯಾಟ್ರಿಕ್ ಕ್ಯಾಮೆರಾ ಹೊಂದಿದ್ದು ಬಾಹ್ಯಾಕಾಶದ ಕತ್ತಲಲ್ಲೂ ಚಿತ್ರಗಳನ್ನು ಸೆರೆಹಿಡಿಯಬಲ್ಲ ಸಾಮರ್ಥ್ಯದವು.

ಪ್ರತಿ ಉಪಗ್ರಹವೂ ಇಳಿಯುವ ಮೊದಲು ನಿರ್ದಿಷ್ಠ ಸಮಯದವರೆಗೂ ಹೈಬರ್‍ನೇಟ್ (ನಿದ್ರಾಸ್ಥಿತಿ- ಇದನ್ನು ಮಂಗಳಯಾನದಲ್ಲೂ ಬಳಸಲಾಗಿದೆ) ಆಗಿರುತ್ತವೆ. ಅವಕ್ಕೆ ನೀಡಲಾದ ಸೂಚನೆಯ ಲಾಜಿಕ್ ಅನುಸರಿಸಿ ಕಕ್ಷೆಯ ಗುರಿಯ ಸಮೀಪ ಬರುತ್ತಿದ್ದಂತೆ ಅವುಗಳಲ್ಲಿ (ಆಕ್ಟಿವ್)ಕ್ರಿಯೆಗಳು ಆರಂಭಗೊಂಡು ದೂಡು ಬಲದ ವೇಗದಲ್ಲಿ ತಮ್ಮ ಆವರ್ತನವನ್ನು ಕಂಡುಕೊಳ್ಳುತ್ತಲೇ ಕಕ್ಷೆಯ ನಿರ್ದಿಷ್ಠ ಜಾಗಕ್ಕೆ ತಲುಪುತ್ತಲೇ ರಾಕೆಟ್ಟಿನಿಂದ ಬೇರ್ಪಡೆಯಾಗುತ್ತವೆ.

ಈ ನಿರಂತರತೆ ಪೂರ್ತಿ ನೂರ ನಾಲ್ಕು ಉಪಗ್ರಹಗಳೂ ಕಕ್ಷೆ ಸೇರುವವರೆಗೂ ನಡೆಯುತ್ತಲೇ ಇರುತ್ತದೆ. ಅಂದರೆ ಪ್ರತಿ ಉಪಗ್ರಹವೂ ಒಂದೊಂದು ಲಾಜಿಕಲ್ ಕಾಲ್ಕುಲೆಟೆಡ್ ಪ್ಯಾರಾಮೀಟರ್ ಮೇಲೆ ಅವಲಂಭಿಸಿದ್ದು ದಿಕ್ಕು, ವೇಗ, ಪ್ರತಿ ಉಪಗ್ರಹಗಳ ಮಧ್ಯದ ಆವರ್ತನಾ ಅಂತರ, ಸಮಯದ ವ್ಯತ್ಯಾಸ ಹಾಗು ಕಕ್ಷೆಯ ಆವರ್ತನದ ಎತ್ತರ ಮತ್ತು ರಾಕೆಟ್ಟಿನಿಂದ ಬೇರ್ಪಡುವಾಗ ಅದರ ಮುಖ ಯಾವ ಕಡೆಗಿರಬೇಕೆನ್ನುವ ಕೋನದ ದಿಗ್ದರ್ಶನ ಎಲ್ಲವೂ ಮೊದಲೇ ಕರಾರುವಾಕ್ಕಾಗಿ ರೂಪಿಸಲಾಗಿದ್ದು, ಸಮಯದ ಲೆಕ್ಕಾಚಾರ ಮಿಲಿಮಿಲಿ ಸೆಕೆಂಡುಗಳ ಅಂತರದಲ್ಲಿ ನಡೆಯುತ್ತಿರುತ್ತದೆ. ಕೇವಲ ದಿಕ್ಸೂಚಿ ನಿರ್ವಹಿಸುವ, ವೇಗ ವರ್ಧಕ ಮತ್ತು ವೇಗ ಕಾಯ್ದುಕೊಳ್ಳುವ, ಪ್ರತಿ ಮಿಲಿ ಸೆಕೆಂಡಿಗೂ ಬದಲಾಗುವ ಕೋನದ ನಿಖರ ಬದಲಾವಣೆ, ಇವೆಲ್ಲದರ ಜೊತೆಗೆ ಆಯಾ ಉಪಗ್ರಹಗಳಿಗೆ ವಹಿಸಲಾದ ಹೊಣೆಗಾರಿಕೆ ಅರಿತು ಅವುಗಳನ್ನು ಬೇರಾವ ಉಪಗ್ರಹಗಳಿಗೆ ಎದುರಾಗದಂತೆಯೂ ಅಥವಾ ಹಿಂಬದಿಯಿಂದ ದಾಳಿಗೀಡಾಗದಂತೆಯೂ  ಮತ್ತು ಬಾಹ್ಯಾಕಾಶದ ಕ್ಷುದ್ರಗ್ರಹಗಳ ಇತ್ಯಾದಿಗಳ ಅಪಘಾತಕ್ಕೆ ಸಿಲುಕದಂತೆ ರಕ್ಷಿಸಿಕೊಳ್ಳುವ ಗುರುತರ ಹೊಣೆಗಾರಿಕೆ ಕೂಡಾ ಇರುತ್ತದೆ. ಇಷ್ಟೆಲ್ಲಾ ಮುತುವರ್ಜಿ ವಹಿಸಲು ಕಾರಣ ಇವ್ಯಾವುದೇ ವ್ಯವಸ್ಥೆಯನ್ನು ಮರು ಜೋಡಿಸಿ ಅಥವಾ ರಿಪೇರಿ ಮಾಡಲು ನಂತರದಲ್ಲಿ ನಿಯಂತ್ರಣ ನಮ್ಮ ಕೈಯಲ್ಲಿ ಇರುವುದಿಲ್ಲ. ಒಮ್ಮೆ ಬಿಟ್ಟರೆ ಮತ್ತೆ ಕೈಗೆ ಸಿಕ್ಕದ ಉಪಗ್ರಹಗಳ ನಿಯಂತ್ರಣಕ್ಕೆ ಪ್ರತಿ ಹಂತದಲ್ಲೂ ನಿಖರತೆಯನ್ನು ಹೊಂದುವ ಪ್ರಕ್ರಿಯೆಯಲ್ಲಿದ್ದರೆ, ಇತ್ತ ನಮ್ಮ ಉಪಗ್ರಹಗಳಿಗೂ ಇವರು ಉಪದ್ರವಿಗಳಾಗುತ್ತಿದ್ದಾರಲ್ಲ.. ಏನು ಮಾಡೊಣ. ಸಾಧನೆಯನೂ ಸಹಿಸದವರು ದೇಶದ ಉನ್ನತಿ, ದೇಶ ಆತ್ಮವನ್ನು ಕಾಯ್ದು ಕೊಂಡಾರೆಯೇ..? ದೇಶದ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತಿಸಲೇಬೇಕಿದೆ.

Facebook ಕಾಮೆಂಟ್ಸ್

Santoshkumar Mehandale: ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.