X

ಅಧ್ಯಾತ್ಮ ರಾಮಾಯಣ-1

ರಾಕ್ಷಸ ರಾವಣ, ಆತನ ಸೇನೆಯಿಂದ ನಿರಂತರ ತೊಂದರೆ. ರಾಕ್ಷಸರ ಮಿತಿ ಮೀರಿದ ಅಟ್ಟಹಾಸ ಸಹಿಸಲಾಗದೇ ಭೂದೇವಿ ಗೋವಿನ ರೂಪದಲ್ಲಿ ಋಷಿ, ದೇವಗಣದೊಂದಿಗೆ ಬ್ರಹ್ಮಲೋಕಕ್ಕೆ ತೆರಳುತ್ತಾಳೆ. ಕಮಲದ ಮೇಲೆ ಆಸೀನಾಗಿದ್ದ ಬ್ರಹ್ಮ ದೇವರೆದುರು ಭೂದೇವಿ, ದೇವಗಣ, ಋಷಿಗಳು ಮೊರೆ ಇಡುತ್ತಾರೆ. ಭೂದೇವಿಯ ಸಂಕಟವನ್ನು ಆಲಿಸಿದ ಬ್ರಹ್ಮ ಒಂದೆರಡು ಕ್ಷಣ ಯೋಚಿಸಿ ಸಮಸ್ಯೆಯ ಪರಿಹಾರಕ್ಕೆ ವಿಷ್ಣುವಿನ ಬಳಿ ಹೋಗದೇ ಪರ್ಯಾಯ ಮಾರ್ಗವಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾನೆ. ಭೂದೇವಿಗೆ ಉಂಟಾಗಿರುವ ಸಂಕಟದ ಬಗ್ಗೆ ನೊಂದ ಬ್ರಹ್ಮದೇವ ಭೂದೇವಿ, ದೇವತೆಗಳು, ಋಷಿಗಳೊಂದಿಗೆ ಭಗವಾನ್ ವಿಷ್ಣುವನ್ನು ದರ್ಶಿಸಲು ಕ್ಷೀರ ಸಾಗರವನ್ನು ಪ್ರವೇಶಿಸಿ. ವಿಷ್ಣುವನ್ನು ಪ್ರಾರ್ಥಿಸುತ್ತಾನೆ.

ಬ್ರಹ್ಮ, ದೇವತೆ, ಭೂದೇವಿಗಳನ್ನು ಕುರಿತು ವಿಷ್ಣುವನ್ನು ಈ ರೀತಿಯಾಗಿ ಹೇಳಿದ:
“ಹಿಂದೊಮ್ಮೆ ಪುತ್ರ ಸಂತಾನದ ಅಪೇಕ್ಷೆಯಿಂದ ಕಶ್ಯಪ ಪ್ರಜಾಪತಿ ಶುದ್ಧ ಮನಸ್ಸಿನಿಂದ ನನ್ನ ಸೇವೆ ಮಾಡಿದ್ದ, ಆತನ ಮನೋಭಿಲಾಶೆಯನ್ನು ನಾನು ಸಂತೋಷದಿಂದ ಈಡೇರಿಸಲಿದ್ದು, ಈಗ  ಕಶ್ಯಪ ಪ್ರಜಾಪತಿಯ ಮನೋಭಿಲಾಶೆ ಈಡೇರಲಿದೆ. ಕಶ್ಯಪ ಪ್ರಜಾಪತಿ ದಶರಥನೆಂಬ ರಾಜನಾಗಿದ್ದಾನೆ. ಕಶ್ಯಪ ಪ್ರಜಾಪತಿಯ ಪತ್ನಿ ಅದಿತಿ ದಶರಥನ ಪತ್ನಿ ಕೌಸಲ್ಯೆಯಾಗಿದ್ದಾಳೆ. ಈಗ ಆ ದಂಪತಿಗಳ ಪುತ್ರನಾಗಿ ನಾನು ಜನ್ಮಿಸುತ್ತೇನೆ, ನನ್ನೊಂದಿಗೆ ಸಹೋದರರು ಜನ್ಮಿಸಲಿದ್ದಾರೆ. ತಾಯಿಯಿಂದ ಜನ್ಮ ಪಡೆಯದೇ ಇರುವವರಿಂದಲೇ ರಾಕ್ಷಸರ ನಾಶ ಸಾಧ್ಯವಾಗುವುದರಿಂದ  ದೈವಾಂಶ ಸಂಭೂತೆಯಾಗಿ ವಿಶ್ವದ ದೇವತೆ, ನನ್ನ ಗೆಳತಿ, ಯೋಗ ಮಾಯಾ ಜನಕ ಮಹಾರಾಜನ ಮನೆಗೆ ಸೇರಲಿದ್ದಾಳೆ. ಇನ್ನು ಭೂದೇವಿಯ ಸಂಕಷ್ಟವನ್ನು ನಿವಾರಿಸಲು ದೇವತೆಗಳು ವಾನರ ಸೇನೆಯಾಗಿ ಜನ್ಮ ಪಡೆಯಲಿದ್ದಾರೆ”. ವಿಷ್ಣುವಿನ ಅಭಯದ ನಂತರ ದೇವತೆಗಳು ಅದೃಷ್ಯರಾದರು. ಬ್ರಹ್ಮ ವಿಷ್ಣುವಿಗೆ ಅತ್ಯಂತ ಭಕ್ತಿಯಿಂದ ನಮಿಸಿದ, ನಾವೂ ಅದೇ ರೀತಿಯಲ್ಲಿ ವಿಷ್ಣುವಿಗೆ ನಮಿಸೋಣ…

(ಮುಂದುವರೆಯಲಿದೆ….ನಾಳೆ ಆಧ್ಯಾತ್ಮ ರಾಮಾಯಣದ 2 ನೇ ಸಂಚಿಕೆ ಪ್ರಕಟವಾಗಲಿದೆ.)

Facebook ಕಾಮೆಂಟ್ಸ್

ಶ್ರೀರಾಮದಾಸ ಮನೀಶ್: ಶ್ರೀರಾಮದಾಸರೆಂದೇ ಪ್ರಸಿದ್ಧರಾಗಿರುವ ಡಾ.ಮನೀಷ್ ಮೋಕ್ಷಗುಂಡಂ, ಪಿಹೆಚ್ ಡಿ, ಶ್ರೀರಾಮನ ದಾಸತ್ವವೇ ತಮ್ಮ ಗುರುತು ಎಂದು ಸಾರಿದ್ದು, ಧ್ಯಾನ ಗುರು, ಆಧ್ಯಾತ್ಮಿಕ ಬೋಧಕ, ಪತ್ರಕರ್ತ, ವಿಶ್ಲೇಷಕ, ಜೀವನ ಮತ್ತು ನಾಯಕತ್ವದ ಕೋಚ್ , ಚಿತ್ರ ನಿರ್ಮಾಪಕ, ನಿರ್ದೇಶಕ, ಮಾಧ್ಯಮ ಲಹೆಗಾರ, ತಂದೆ,ಪತಿ, ಶಿಕ್ಷಕ ಮುಂತಾದವು ತಾವು ನಿರ್ವಹಿಸುವ ಪಾತ್ರಗಳಷ್ಟೇ ಎಂದು ನಂಬಿದ್ದಾರೆ.