X
    Categories: ಕಥೆ

ಬೀಡಿ ಬಿಡದ ಸಾಧಿಯಾ ಅಮ್ಮ

ಅದು ನನ್ನಮ್ಮನ ಕೈ ತುತ್ತಿನಷ್ಟೆ ಅದ್ಭುತ, ಅವರದು ಅಮ್ಮನ ಮಡಿಲಿನಷ್ಟೆ ಪ್ರೀತಿ ತುಂಬಿದ ದೇಗುಲ. ಹೆತ್ತ ಅಮ್ಮನಷ್ಟೆ ಪ್ರೀತಿಯಿಂದ ಎತ್ತಿ ಆಡಿಸಿದ ಕೈಗಳವು. ಗುಡಿಸಲು ಮನೆಯಲ್ಲಿಯೆ ದೇವರು ಇರೋದು ಅನ್ನೋವಂತೆ ಆ ಪ್ರೀತಿ ತುಂಬಿದ ಗುಡಿಸಲ ಅರಮನೆಯಲ್ಲಿ  ಆಡಿ ಬೆಳೆದ ನೆನಪಿನ್ನು ಮಾಸದೆ ಉಳಿದಿದೆ. ಅದ್ಯಾರೋ ಮಹರ್ಷಿ ಹೇಳಿದ ನೆನಪು ” ದೇವರು ತುಂಬಾ ಒಳ್ಳೆಯವರಿಗೆ ಕಷ್ಟಗಳ ಸರಮಾಲೆ ಕೊಡೋದು” ಅಂತ, ನನಗನ್ನಿಸೋದು ದೇವರು ಆ ಕಷ್ಟ ಕೊಡೊದನ್ನ ಅನುಭವಿಸೋ ವೇಳೆಗಾಗಲೆ ನಾವು ತುಂಬಾ ಒಳ್ಳೆಯವರಾಗ್ಬಿಟ್ಟಿರ್ತೀವಾ ಅಂತ. ಅದೇನೆ ಇರಲಿ,

  ಸಾಧಿಯಾ ಅಮ್ಮನೂ ನನ್ನಮ್ಮನಷ್ಟೆ ದೇಹ ಸೌಂದರ್ಯ ಹೊಂದಿದ್ದರಿಂದಲೇ ಅನಿಸುತ್ತೆ ವ್ಯಕ್ತಿ ಚಿತ್ರ ಇನ್ನು ಕಣ್ಣಿಗೆ ಅಂಟಿಕೊಂಡೆ ಇದೆ. ತುಂಬಾ ವ್ಯತ್ಯಾಸ ಇಲ್ಲದಕ್ಕೋ ಏನೋ ಚಿಕ್ಕವನಿದ್ದಾಗಿನಿಂದಲೂ ಅವರ ಮಡಿಲಲ್ಲಿ ಅಳದೆ ಮಲಗಿ ಬಿಡುತಿದ್ದೆ. ಅನ್ನ ಉಣ್ಣೋವಾಗ ಬಾಯಿಗಂಟಿದ ಅಗಳು ಅವರ ಸೀರೆ ಸೆರಗಲ್ಲೇ ಒರೆಸಿ ತಲೆ ನೇವರಿಸಿದ ಸಾಧಿಯಾ ಅಮ್ಮ ಆಗಾಗ ನೆನಪಾಗಿದ್ದೂ ಇದೆ.

  ಕಾಲವೇ ಹಾಗೆ. ಎಲ್ಲರನ್ನೂ ಎಲ್ಲವನ್ನೂ ಒಂದಷ್ಟು ಕಾಲಕ್ಕೆ ಅನ್ನೋವಂತೆ ಮರೆಸಿ ಬಿಡುತ್ತೆ!! ಮತ್ತೆ ನೆನಪಿಸಿ ಕಾಡುತ್ತಲೂ ಇರುತ್ತೆ. ನನಗೆ ಕೈಯಲ್ಲಿ ಮೊಂಡು ಬೀಡಿ ಹಿಡಿದು ಕಟ್ಟಿಗೆ ಒಲೆಯ ಮುಂದೆ ಕೆಮ್ಮುತ್ತಾ ಗಾಳಿ ಊದುತ್ತಾ ಕುಳಿತಿರುತ್ತಿದ್ದ ಅವರು ಮತ್ತೆ ಮತ್ತೆ ಎದುರು ಬಂದಂತೆ ನೆನಪಾಗಿ ಕಾಡುತ್ತಲೆ ಇದ್ದರು.

 ಅರೇ!! ಇದೇನೂ.. ಮುದ್ದಾಡಿ ಬೆಳಸಿದ ಅಮ್ಮನ ಕಥೆಯಲ್ಲಿ ಬೀಡಿಯ ಪರಿಚಯವಾಗುತ್ತಿದೆಯಲ್ಲ ಅನ್ನೋ ಗೊಂದಲವಾ??

  ಹೌದು, ಅದೊಂದು ಹೆಮ್ಮಾರಿ, ಕೀಳು ಥರದ ವಾಸಿ ಮಾಡಲು ಕಷ್ಟ ಸಾಧ್ಯವೆನಿಸುವಂತ ರೋಗ. ಸಾಧಿಯಾ ಅಮ್ಮನಿಗೂ ಆಂಟಿಕೊಂಡು ಬಿಟ್ಟಿತ್ತು. ದಿನಕ್ಕೆ ಎಷ್ಟು ಸೇದುತ್ತಾರೆ ಅನ್ನೋದನ್ನ ಎಣಿಸಲು ನಿಂತಾಗ ಪ್ರತಿದಿನವೂ ಒಂದೊಂದು ಲೆಕ್ಕ. ಒಂದಿನ ಕಡಿಮೆ, ಒಂದಿನ ಹೆಚ್ಚು, ಸೇದದೆ ಇದ್ದ ದಿನವಂತೂ ಇಲ್ಲ ಅನ್ನೋದು ವಿಪರ್ಯಾಸ.  ನಾ ಬೈಯುತ್ತಿದ್ದ ಬೀಡಿಯೇನೋ ಸುಟ್ಟು ಹೋಗುತ್ತಿತ್ತು, ನಾ ಇಷ್ಟ ಪಡೋ ಸಾಧಿಯಾ ಅಮ್ಮ ತಾವು ಒಳಗೆ ಸುಡುತ್ತಿರುವುದರ ಪರಿವೆಯೇ ಇಲ್ಲದೆ ಸೇವಿಸುತ್ತಲೇ ಹೋದರು.

ನನ್ನ ಹೆತ್ತಮ್ಮ ಬೈದರೂ, ಹೊಡೆದರು ” ಏನೇ ಶಾರದ, ನನ್ನ ಮಕ್ಕಳಿಗ್ಯಾಕೆ ಬೈತೀಯಾ? ಅಂತ ಅವರು ಕೇಳೊವಾಗಲೇ ಸಾಧಿಯಾ ಅಮ್ಮನ ಮಾತೃ ವಾತ್ಸಲ್ಯ ಅರ್ಥವಾಗಿ ಬಿಡುತಿತ್ತು.

ಅವರಿಗೆ ಮಕ್ಕಳಿಲ್ಲದಕ್ಕೋ ಅಥವಾ ಅವರ ಹೃದಯ ವೈಶಾಲ್ಯತೆಗೋ ಅವರಿಗೆ ನಾನಂದರೇ ಎಲ್ಲಿಲ್ಲದ ಪ್ರೀತಿ. ಸಾಧಿಯಾ ಅಮ್ಮ ಹಂಚಿನ ಮೇಲೆ ಅಕ್ಕಿ ಹಿಟ್ಟು ಹಾಕಿ ಸುಟ್ಟು ಕೊಟ್ಟ ಹಂಚಿನ ರೊಟ್ಟಿ, ಬಸಳೆ ಸಾರು ತಟ್ಟೆ ತುಂಬಿಸಿಕೊಂಡು ಅಂಗಳದ ಬದಿಯಲ್ಲಿನ ರೇತಿಯ ರಾಶಿಯ ಮೇಲೆ ಕುಳಿತು ತಿನ್ನುತ್ತಿದ್ದ ಸ್ವರ್ಗದಂತ ಅನುಭವ ಮತ್ಯಾರಿಗೂ ಸಿಗದೆ ಇರಲಿ ಅನ್ನೋ ಸ್ವಾರ್ಥ ತುಂಬಿದ ಸ್ವೀಟ್ ಹೊಟ್ಟೆಕಿಚ್ಚು ನಂದು.

 ಈ ಭಾವನಾತ್ಮಕ ಸಂಬಂಧಕ್ಕೆ ಮತೀಯ ಬೇಲಿಯಾಗಲಿ, ಧರ್ಮದ ತೊಡುಕಾಗಲಿ ಕಾಣಿಸಲೇ ಇಲ್ಲ, ಆದರೇ ಮಹಾಮಾರಿ ಬೀಡಿಯ ಸುಟ್ಟ ತಂಬಾಕಿನ ಧೂಳು ಸಾಧಿಯಾ ಅಮ್ಮನ ಎದೆ ಗೂಡನ್ನೆಲ್ಲಾ ಕಪ್ಪಾಗಿಸಿದ್ದರೂ, ತುಟಿಯ ಕೆಂಪು ಕಡೆಗೊಮ್ಮೆ ನೀಲಿ- ಕಪ್ಪಾಗಿಸಿದ್ದರೂ ಅರಿವಾಗಲೇ ಇಲ್ಲ. ಈಗಲೂ ಅವರದು ಮರೆಯದ ಅಪರೂಪದ ಬೇಟಿ ನಮ್ಮನೆಗೆ, ಇಪ್ಪತ್ಮೂರಕ್ಕೂ ಅಧಿಕ ವರ್ಷದ ನಮ್ಮಮ್ಮನ ಗೆಳೆತನ, ಸಾರಿ-ಬುರ್ಖಾದ ಅವಿನಾಭಾವ ಸಂಬಂಧ ಹಳಸಲೇ ಇಲ್ಲಾ. ಬಂದಾಗೊಮ್ಮೆ ತಲೆ ನೇವರಿಸಿ ಹರಸುವ ಸಾಧಿಯಾ ಅಮ್ಮನ ಕೈಗಳ ಸ್ಪರ್ಶ, ದುಡಿದು ದಣಿವಾಗಿರೋ ಮತ್ತು ಮಕ್ಕಳ ಪ್ರೀತಿಗೆ ಹಾತೊರೆಯೋ ವಾತ್ಸಲ್ಯಮಯಿ ಅಮ್ಮನ ಆಸೆಯಂತೆ ಭಾಸವಾಗಿತ್ತು.

 ಅವರಿಗೊಬ್ಬ ಸಾಕುಮಗ, ಅವನೋ ಮದರಸಾದ ಅಧ್ಯಯನದಲ್ಲಿ ಅವಸರದಲ್ಲಿ. ಹಾದಿ ಕಾಯುತ್ತಾ ಕುಳಿತುಕೊಳ್ಳೊ ಸಾಧಿಯಾ ಅಮ್ಮನಿಗೆ ಆಗಾಗ ನೆನಪಾಗೋದು ಗೆಳತಿ ಶಾರದಾಳ ಮಕ್ಕಳು.

 ಆ ಹಾಳು ಬೀಡಿ ಯಾಕೆ ಸೆದ್ತೀಯಾ, ಆರೋಗ್ಯ ಕೆಡಿಸಿಕೊಳ್ಳೋಕಾ? ಬಿಡೊಕ್ಕಾಗಲ್ವ ಅಂತ ನಮ್ಮಮ್ಮ ಬೈದು ಬುದ್ಧಿ ಹೇಳಿ ಸುಸ್ತಾಗಿ ಹೋಗಿದ್ದರು. ಈ ಹಾಳು ಚಟವೇ ಹಾಗೆ ಬರುವಾಗ ಕೇಳಿ ಬರಲ್ಲ, ಅಮೇಲೆ ಹೋಗು ಎಂದರೂ ಹೋಗಲ್ಲ, ಜೊತೆ ಜೊತೆಗೆ ಇದ್ದು ಕೊನೆಗೊಮ್ಮೆ ನಮ್ಮ ಜೊತೆಯೆ ಮಣ್ಣಾಗಿ ಬಿಡುತ್ತೆ.

ಮೊನ್ನೆ ಅಮ್ಮನ ಜೊತೆ ಮಾತಾಡಲು ಫೊನಾಯಿಸಿದ್ದೆ. ಆ ಕಡೆಯಿಂದ ಅಮ್ಮನ ಬಾಯಿಂದ ಕೇಳಿದ ಸಂಗತಿ ಒಂದು ಕ್ಷಣ ಯೋಚನೆಗೀಡು ಮಾಡಿತ್ತು. ಹಾಳು ಬೀಡಿ ಸಾಧಿಯಾ ಅಮ್ಮನಿಗೆ ಕೊನೆಗೂ ದೊಡ್ಡ ಮೋಸವನ್ನೇ ಮಾಡಿತ್ತು. ಹೃದಯ ಸಂಬಂಧಿ ಖಾಯಿಲೆಯೊಂದಕ್ಕೆ ಸಾಧಿಯಾ ಅಮ್ಮ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕೇಳಿಸಿಕೊಳ್ಳುತ್ತಲೇ ಎದೆ ಝಲ್ಲೆಂದಿತ್ತು. ಹೌದು, ಅದು ಮಕ್ಕಳಿಗಾಗಿ, ನೆರೆ ಹೊರೆಯವರಿಗಾಗಿ ಮರುಗೋ ಹೃದಯ, ಸಮಾಜ ಏನೆನ್ನುತ್ತದೆ ಎನ್ನುವುದರ ಪರಿವೆಯೇ ಇಲ್ಲದೆ ಹಿಂದು ಗೆಳತಿಯ ಮಕ್ಕಳಿಗೆ ಕೈ ತುತ್ತು ಕೊಟ್ಟು ಬೆಳಸಿದ ಆ ಅಮ್ಮನ ಪ್ರೀತಿ ತುಂಬಿದ ಹೃದಯವೀಗ ವೈಧ್ಯರ ಹರಿತವಾದ ಕತ್ತರಿಯಿಂದ ಘಾಸಿಗೊಂಡಿತ್ತು.

 ನಮ್ಮಮ್ಮನ ಭೇಟಿ ಸಾಧಿಯಾ ಅಮ್ಮನ ಮನೆಗೆ ಹಣ್ಣು ಕೊಟ್ಟು ಸಾಂತ್ವನ ಹೇಳೋದಕಾದರೂ ಮಕ್ಕಳನ್ನೆಲ್ಲಾ ಬಿಟ್ಟು ನೀನೊಬ್ಬಳೆ ಯಾಕೆ ಬಂದೆ ಎನ್ನೋ ಬೈಗುಳ ತಿನ್ನೋದಕ್ಕೇನೆ ಆಗಿತ್ತು ಅನ್ನೋದು ವಾಸ್ತವ. ಹೌದು, ಸಾಧಿಯಾ ಅಮ್ಮನಿಗೆ ತಿಂಗಳುಗಟ್ಟಲೇ ಬೆಡ್ ರೆಸ್ಟ್ ಹೇಳಿ ಮಲಗಿಸಿದ್ದರು. ಶಾರದ ಬಂದರು ಶಾರದಾಳಾ ಮಕ್ಕಳ ಹುಡುಕಾಟದಲ್ಲಿತ್ತು ಸಾಧಿಯಾ ಅಮ್ಮನ ಕಣ್ಣುಗಳು. ಮತ್ತೆ ಬರೋವಾಗ ಕರ್ಕೊಂಡು ಬರ್ತೀನಿ, ನೀ ಹೇಗಿದ್ದೀಯಾ ಕೇಳಿದಾಗ, ಮತ್ತೇ ಬರೋದು ಲೇಟ್ ಆದರೇ ನಾನೆ ಬಂದು ಬಿಡ್ತೀನಿ ಅನ್ನೋ ಗಟ್ಟಿ ಮಾತುಗಳಿಗೆ ನನ್ನಮ್ಮ ಮೂಕ ವಿಸ್ಮಿತರಾಗಿ ಮುಗುಳ್ನಗುತ್ತಿದ್ದರು. ಹೌದು, ಆ ಪ್ರೀತಿನೆ ಹಾಗೆ, ಅದಕ್ಕೊಂದು ಎಗ್ಗಿಲ್ಲ, ತಾರ್ಕಿಕ ಆಲೋಚನೆಗಳಿಲ್ಲ, ವಾಸ್ತವಕ್ಕೂ ಮೀರಿದ ಭವಿಷ್ಯ ಭೂತಗಳಿಂದ ವಿಚಲಿತವಾಗದ ನಂಟು, ಸಾಗರದಷ್ಟು ಭಾವಗಳ ಸಂಗ್ರಹ, ವಸಂತ ಮಾಸದ ಮಾವಿನ ಮರದ ಚಿಗುರಿನಷ್ಟೇ ಸೂಕ್ಷ್ಮ, ತುಂತುರು ಮಳೆಯಷ್ಟೇ ನುಣುಪು, ಇಬ್ಬನಿಯಷ್ಟೇ ಸ್ವಾದ.

 ಸಾಧಿಯಾ ಅಮ್ಮನ ಹೃದಯ ಗಟ್ಟಿಗಿರಲಿ, ಅವರು ನೂರ್ಕಾಲ ಬಾಳಲಿ, ಅನ್ನೋ ಆಸೆಯಲ್ಲೆ ಯೋಚಿಸುತ್ತಾ ಕುಳಿತು ಮಂಚಕ್ಕೊರಗಿದೆ. ಈ ಬರಹ ಬರೆದು ಮುಗಿಸುವ ವೇಳೆಗೆ ಪ್ರೀತಿಯ ಮಾರುತ ಮೈ ಮೇಲೆ ಬಂದಂತೆ ಬಿಕ್ಕಿ ಅಳುವಷ್ಟು ಮನಸ್ಸು ಭಾರವೆನಿಸಿತ್ತು, ಇನ್ನೊಂದೆಡೆ ಹಾಳು ಬೀಡಿಗೆ ಭಾಷೆಯ ಭಂಡಾರವನ್ನೆಲ್ಲಾ ಹುಡುಕಾಡಿ ಬೈಯಬೇಕೆನಿಸಿತು.

 ಮತ್ತೆ ತೊದಲು ನುಡಿಯುತ್ತಾ, ನನ್ನಮ್ಮ ಹೊಡೆದಾಗಲೆಲ್ಲಾ ಜಾರಿ ಬೀಳೊ ಚಡ್ಡಿಯನ್ನ ಒಂದು ಕೈಯಿಂದಾ ಮೇಲೆ ಎಳೆದುಕೊಳ್ಳುತ್ತಾ ಸಾಧಿಯಾ ಅಮ್ಮನ ಹತ್ತಿರ ಹೋಗಿ ಚಾಡಿ ಹೇಳೊ ಆಸೆ, ತಟ್ಟೆ ಹಿಡಿದು ಹಂಚಿನ ರೊಟ್ಟಿ, ಮೀನು ಸಾರಿಗೆ ಕಾಯುತ್ತಾ ಕೂರೋ ಆಸೆ, ಅಂಗಳದ ರೇತಿಯ ಒಳಗೆ ಒಂದು ಕಾಲು ಮುಚ್ಚಿಟ್ಟು ಗುಬ್ಬಿಗೆ ಅರಮನೆ ಕಟ್ಟಿ ಕೊಡೊ ಆಸೆ.

 ಸಾದಿಯಾ ಅಮ್ಮನ ಕಿವಿಯಲ್ಲಿ ನಿಧಾನವಾಗಿ..

  ” ಅಮ್ಮಾ ಬೀಡಿ ಬಿಡು ಅಯ್ತಾ” ಅಂತ ರಿಕ್ವೆಸ್ಟ್ ಮಾಡ್ಕೋಳೊ ಆಸೆ.. !!

ತಿರು ಭಟ್ಕಳ

tirumalnaikbkl@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post