X
    Categories: ಕಥೆ

ಹೀಗೊಂದು ಪ್ರೀತಿಯ ಕಥೆ-1

Happy couple outdoor, summertime

 “ಏನೇ..ಮಾಡ್ತಿದ್ದೀಯಾ ಇಷ್ಟೊತ್ತು..!! ನಿನ್ನ ಅಲಂಕಾರ ಇನ್ನೂ ಮುಗಿದಿಲ್ವಾ..” ಎನ್ನುತ್ತಾ ರೂಮಿನ ಒಳಗೆ ಬಂದ ಗೌತಮ್ ಕನ್ನಡಿಯ ಮುಂದೆ ನಿಂತಿದ್ದ ಮುದ್ದು ಮಡದಿಯನ್ನು ನೋಡಿ ಹಾಗೆ ನಿಂತು ಬಿಟ್ಟ. ಗೋಲ್ಡನ್ ಕಲರ್ ಬಾರ್ಡರಿನ ಹಸಿರು ಬಣ್ಣದ ಸೀರೆ ಉಟ್ಟಿದ್ದು ಮಿಂಚುತ್ತಿದ್ದಾಳೆ..ಪಲ್ಲವಿ!! ಅಪ್ಸರೆಯಂತಹ ಚೆಲುವೆ.. ತಲೆಗೂದಲನ್ನು ಹಿಂದಕ್ಕೆ ಹರಡಿಕೊಂಡಿದ್ದು ಅದಕ್ಕೆ ಹಾಕಿದ್ದ ಕ್ಲಿಪ್ನಲ್ಲಿ ಒಂದು ಗುಲಾಬಿ ಹೂ ಮುಡಿದಿದ್ದಾಳೆ..!! ಕನ್ನಡಿಯ ಮುಂದೆ ನಿಂತು ಕಿವಿಗೆ ಓಲೆ ಹಾಕುದರಲ್ಲಿ ಮಗ್ನಳಾಗಿದ್ದಾಳೆ.. ಗೌತಮ್ ಸದ್ದು ಮಾಡದೆ ನಡೆದು ಹಿಂದಿನಿಂದ ಬಳಸಿದ.. “ಏನ್ರೀ..ಇದು..ಬಿಡೀ.. ಹೋಗೋಕೆ ಲೇಟಾಗುತ್ತೆ ಅಂತ ಹೇಳಿ ಈಗ ಏನ್ ಮಾಡ್ತಿದ್ದೀರಾ..?!” ಬಳಸಿದ್ದ ಅವನ ಕೈಗಳನ್ನು ಬಿಡಿಸಲು ನೋಡಿದಳು.. “ಪಲ್ಲು ಹೋಗ್ಲೇ ಬೇಕಾ..!? ನಿನ್ನ ನೋಡ್ತಿದ್ದರೆ ಹೊರಡೋಕೆ ಮನಸ್ಸೇ ಆಗ್ತಿಲ್ಲ..” ಅವಳ ಕಿವಿಯಲ್ಲಿ ಪಿಸುಗುಟ್ಟಿದ..ಪಲ್ಲವಿಯ ಹಾಲಿನ ಕನೆ ಬಣ್ಣದ ಕೆನ್ನೆಗಳು ನಾಚಿಕೆಯಿಂದ ಕೆಂಪಾಗಿತ್ತು.. “ಏನ್ರೀ ಇದು ಹುಡುಗಾಟ..!! ಬಿಟ್ಬಿಡಿ..ಪ್ಲೀಸ್!!” ಕನ್ನಡಿಯಲ್ಲಿ ಅವನ ಮುಖ ನೋಡುತ್ತಾ ಗೋಗರೆದಳು..ಗೌತಮ್ “ಒಂದು ಸ್ವೀಟ್ ಕಿಸ್ ಕೊಡು..ಬಿಡ್ತೀನಿ..” ಎಂದ ಕನ್ನಡಿಯನ್ನು ನೋಡುತ್ತಾ.. “ಬೇಡ..ಯಾರಾದ್ರೂ ನೋಡಿದ್ರೆ..!?” “ಯಾರು ನೋಡ್ತಾರೆ..!? ಇಲ್ಲಿ ನಮ್ಮಿಬ್ಬರನ್ನು ಬಿಟ್ಟು ಯಾರೂ ಇಲ್ಲ.. ಸ್ ಕೊಡದೆ ಬಿಡುವ ಪ್ರಶ್ನೆಯೇ ಇಲ್ಲ” “ನಿಮ್ದು ಒಳ್ಳೆ ಕಥೆಯಾಯ್ತು..” ಎಂದವಳು ಅವನ ಕೆನ್ನೆಗೆ ಹೂ ಮುತ್ತನ್ನಿತ್ತಳು.. “ಈಗಲಾದ್ರೂ ಬಿಡಿ..” “ಓ.ಕೆ..ಬಿಟ್ಟೆ..” ಎಂದವನು ಅವಳನ್ನು ಬಿಟ್ಟು ದೂರದಲ್ಲಿ ನಿಂತ.. ಪಲ್ಲವಿ, “ಈ ಹುಡುಗಾಟಕ್ಕೇನು ಕಮ್ಮಿಯಿಲ್ಲ..” ಹಣೆಗೆ ಸ್ಟಿಕ್ಕರ್ ಅಂಟಿಸುತ್ತಾ ನುಡಿದಳು..!!

ಗೌತಮ್ ತಲೆ ಕೆರದುಕೊಳ್ಳುತ್ತಾ ಮುಗುಳ್ನಕ್ಕ.. “ನಾನು ರೆಡಿ..ಹೋಗೋಣ..” ಅವಳು ರೆಡಿಯಾಗಿ ನಿಂತಳು.. ಆಗ ಬೆಳಗ್ಗಿನ ಆರು ಗಂಟೆ..!! ಸೂರ್ಯನ ಉದಯ ಇನ್ನೂ ಆಗಿರಲಿಲ್ಲ..ಹಕ್ಕಿಗಳ ಮಧುರವಾದ ನಿನಾದದ ಜೊತೆಗೆ ರಸ್ತೆಯಲ್ಲಿ

ಆಗೊಮ್ಮೆ ಈಗೊಮ್ಮೆ ಹೋಗುವ ವಾಹನಗಳ ಕರ್ಕಶ ಸದ್ದು ಜೋರಾಗಿಯೇ ಇತ್ತು..!! ತಣ್ಣಗೆ ಬೀಸುವ ತಂಗಾಳಿ ಮೈಯೆಲ್ಲ ಚಳಿಯಿಂದ ನಡುಗುವಂತೆ ಮಾಡುತ್ತಿತ್ತು..ಮನೆಗೆ ಬೀಗ ಹಾಕಿ ಅವರಿಬ್ಬರೂ ಹೊರಟರು.. ಇನ್ನು ಎರಡು ದಿನ ಕಳೆದರೆ ದೀಪಾವಳಿ ಹಬ್ಬ..!! ಹಾಗಾಗಿ ಪಲ್ಲವಿಯ ತವರು ಊರಾದ ಪುತ್ತೂರಿಗೆ ಹೊರಟಿದ್ದರು..ಅಲ್ಲದೆ ಇನ್ನೊಂದು ಪ್ರಮುಖ ಕಾರಣವಿತ್ತು..ಅದೇನೆಂದರೆ ಅವರಿಗೆ ಮದುವೆಯಾಗಿ ಆರು ತಿಂಗಳಾಗಿತ್ತಷ್ಟೆ.. ಹಾಗಾಗಿ ನವ ದಂಪತಿಗಳು ಪಲ್ಲವಿಯ ಊರಲ್ಲಿ ದೀಪಾವಳಿ ಸೆಲೆಬ್ರೇಟ್ ಮಾಡಲು  ತೀರ್ಮಾನಿಸಿ ಹೊರಟಿದ್ದರು..ಈಗಿರುವ ಜಯನಗರ 4ನೇ ಬ್ಲಾಕ್’ನಿಂದ ಸ್ಟೇಶನ್ ತಲುಪಲು ಕನಿಷ್ಟ 1 ಗಂಟೆಯಾದರೂ ಬೇಕಿತ್ತು..ಬೇಗ ತಲಪಲು ಟ್ಯಾಕ್ಸಿ ಹಿಡಿದರು..ಪಲ್ಲವಿ ಮುಖದಲ್ಲಿ ಸಂತಸ ಕಾಣಿಸದ್ದನ್ನು ಗೌತಮ್ ಗಮನಿಸಿದ..ಚಿಂತಾಕ್ರಾಂತಳಾಗಿ ಕುಳಿತಿದ್ದ ಮಡದಿಯನ್ನು ಪ್ರಶ್ನಿಸಿದ..”ಯಾಕೆ ಬೇಜಾರಲ್ಲಿದ್ದೀಯಾ..!?

ಏನಾಯಿತು..!?” ಅದಕ್ಕವಳು ನಗುತ್ತಾ “ನಂಗೇನಾಗಿದೆ..ಚೆನ್ನಾಗಿದ್ದೀನಿ..” ಎಂದಳು..ಬೆಳಗಿನ ಹೊತ್ತಾಗಿದ್ದರಿಂದ ಟ್ರಾಫಿಕ್ ಕಡಿಮೆಯಿದ್ದ ಕಾರಣ ಬೇಗನೆ ರೈಲ್ವೇ ನಿಲ್ದಾಣವನ್ನು ತಲುಪಿದರು..ಅದಾಗಲೇ ಯಶವಂತಪುರ ರೈಲ್ವೇ ನಿಲ್ದಾಣ ಜನರಿಂದ ತುಂಬಿ ಹೋಗಿತ್ತು..  ಬೇರೆ ಬೇರೆ ರಾಜ್ಯಗಳಿಗೆ,ಊರುಗಳಿಗೆ ಹೋಗುವ ಪ್ರಯಾಣಿಕರು ತಮ್ಮ ತಮ್ಮ ಲಗೇಜುಗಳೊಂದಿಗೆ  ನಿಂತಿದ್ದು ಬರುವ ಟ್ರೈನ್ಗಾಗಿ ಕಾಯುತ್ತಿದ್ದರು.. “ಟೀ..ಕಾಫೀ..”ಕೂಗುವ ಹುಡುಗರ ಜೊತೆ “ಇಡ್ಲೀ..ಮದ್ದೂರು ವಡೆ..ಪಲಾವ್..” ಎಂದು ತಿಂಡಿ ಮಾರುವವರ ಕೂಗು ಅಲ್ಲೆಲ್ಲ ಜೋರಾಗಿ ಕೇಳಿಸುತ್ತಿತ್ತು..”ರೀ..ನಾವು ಊರಿಗೆ ಹೋಗ್ಲೇ ಬೇಕಾ..!?” ಪಲ್ಲವಿ ಗಂಡನೊಡನೆ ಕೇಳಿದಳು..ಅವಳ ಮುಖದಲ್ಲಿ ಅದಾಗಲೇ ಬೇಸರ ಇಣುಕಿತ್ತು..”ಇದ್ಯಾಕೆ ಹೀಗೆ ಹೇಳ್ತಿದ್ದೀಯಾ..!? ಅಲ್ಲ ಮನೆಯಿಂದ ಹೊರಡುವಾಗ ಸರಿಯಾಗಿದ್ದೆಯಲ್ಲ..ಈಗ ಏನಾಯಿತು..!? ಅಚ್ಚರಿಯಿಂದ ಪ್ರಶ್ನಿಸಿದ ಗೌತಮ್..ಅವಳು ಹೇಳಲು ಬಾಯಿ ತೆರೆಯುವಷ್ಟರಲ್ಲಿ ಟ್ರೈನ್ ಬರುವುದು ಕಾಣಿಸಿತ್ತು..ಜನರ ಗದ್ದಲ..ನೂಕುನುಗ್ಗಲು ಶುರುವಾಯಿತು..”ಬೇಗ ಬಾರೆ..ಪಮ್ಮು..” ಎಂದು ಲಗೇಜನ್ನು ಎತ್ತಿಕೊಂಡು ಟ್ರೈನ್ನತ್ತ ಓಡಿದ..ಅವಳು ಅನಿವಾರ್ಯವಾಗಿ ಅವನನ್ನು ಹಿಂಬಾಲಿಸಿದಳು..ಅಷ್ಟು ಜನರ ನಡುವೆ ನುಗ್ಗಿ ತಮ್ಮ ಬೋಗಿ ಮತ್ತು ಸೀಟ್ ನಂಬರ್ ಹುಡುಕಿ ಕುಳಿತ ಮೇಲೇನೇ ಅವರಿಗೆ ಸಮಾಧಾನವಾಗಿದ್ದು..!! “ಈಗ ಹೇಳು..ಏನು ನಿನ್ನ ಪ್ರಾಬ್ಲಂ..” ಕೇಳಿದ..”ಇನ್ನು ಯಾಕೆ ಕೇಳ್ತೀರಾ..!? ಏನಿಲ್ಲ ಬಿಡಿ..” ಎಂದು ಮುಖ ಊದಿಸಿಕೊಂಡವಳು ಕಿಟಿಕಿಯ ಮೂಲಕ ಹೊರಗೆ ನೋಡತೊಡಗಿದಳು..”ಏನು ಹುಡ್ಗೀರಪ್ಪಾ..ಮನಸ್ಸಲ್ಲಿದ್ದದ್ದನ್ನು ಹೇಳಲ್ಲ..” ಎಂದು ತನಗೆ ತಾನೆ ಗೊಣಗಿಕೊಂಡ ಗೌತಮ್..!! ಸ್ವಲ್ಪ ಹೊತ್ತಲ್ಲಿ ರೈಲು ಹೊರಟಿತು..ಪಲ್ಲವಿ

ಹೊರಗೆ ಕಾಣಿಸುತ್ತಿರುವ ಪ್ರಕೃತಿ ಸೌಂದರ್ಯವನ್ನು ಸವಿಯವುದರಲ್ಲಿ ಮಗ್ನಳಾದರೆ ಗೌತಮ್ ತನ್ನ ಪಾಡಿಗೆ ತಾನು ಅಂದಿನ ದಿನ ಪತ್ರಿಕೆ ಓದುತ್ತಿದ್ದ..ಕಿಟಿಕಿಯ ಮೂಲಕ ಬೀಸುತ್ತಿರುವ ತಂಪಾದ ಗಾಳಿ ಮನಸ್ಸಿಗೆ ಒಂಥರಾ ಮುದ ನೀಡುತ್ತಿತ್ತು..ಅವಳು ಹಾಗೆ ನಿದ್ದೆ ಹೋದವಳು ಗೌತಮ್ನ ಭುಜಕ್ಕೆ ವಾಲಿಕೊಂಡಳು..ಅವನು ನಿದ್ರಿಸುತ್ತಿರುವ ಅವಳ ಚಂದ್ರನಂತೆ ದುಂಡಗೆ ಬೆಳ್ಳಗಿರುವ ಸುಂದರ ವದನವನ್ನು ನೋಡಿದ..ಅವಳ ಮುಗ್ಧ ಮುಖದ ಮೇಲೆ ತೊಂದರೆ ಕೊಡುತ್ತಿರುವ ಮುಂಗುರುಳನ್ನು ಸರಿಸಿದವ ಕೈಯಿಂದ ಅವಳನ್ನು ಬಳಸಿ ತನ್ನ ಎದೆಗೆ ಒರಗಿಸಿಕೊಂಡ..ಅವರ ಎದರು ಕುಳಿತಿರುವ ವೃದ್ಧ ದಂಪತಿಗಳು ಇವರತ್ತಲೇ ನೋಡುತ್ತಿದ್ದವರು ನಕ್ಕರು..ಇದಾವುದರ ಪರಿವೆಯೇ ಇಲ್ಲದೆ ರೈಲು ತನ್ನ ಪಾಡಿಗೆ ತಾನು ಗಮ್ಯ ಸೇರಲು ಚಲಿಸುತ್ತಿತ್ತು..ಸಂಜೆ ನಾಲ್ಕು ಗಂಟೆಯಾಗುತ್ತ ಬಂತು..ಗೌತಮ್ ಮತ್ತು ಪಲ್ಲವಿಯು ಇಳಿಯುವ ಸ್ಥಳ ಹತ್ತಿರ ಬಂದಿತ್ತು..

ಪುತ್ತೂರು..!! ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳಲ್ಲಿ ಒಂದಾಗಿದ್ದು ಮಂಗಳೂರು ನಗರದಿಂದ ಸುಮಾರು 52 ಕಿಲೋ ಮೀಟರ್ ದೂರದಲ್ಲಿತ್ತು..ಇಲ್ಲಿನ ಜನರು ಜಾತಿ ಮತವೆನ್ನದೆ ಆರಾಧಿಸುತ್ತಾ ಬರುತ್ತಿರುವ ಮಹಾಲಿಂಗೇಶ್ವರ ದೇವರು ಇಲ್ಲಿನ ಪ್ರಮುಖ ಆಕರ್ಷಣೆ..!! ಯಾವುದೇ ಹೊಸ ಕಾರ್ಯಗಳನ್ನು ಆರಂಭಿಸುವ ಮೊದಲು ಕಾರಣಿಕ ಪುರುಷ ಮಹಾಲಿಂಗೇಶ್ವರ ದೇವರ ಆಶೀರ್ವಾದ ಪಡೆಯದೆ ಯಾರೂ ಮುಂದುವರಿಯುತ್ತಿರಲಿಲ್ಲ..!! ಅಲ್ಲದೆ ಸಮುದ್ರ ಮಟ್ಟದಿಂದ ಸುಮಾರು 1000 ಅಡಿ ಎತ್ತರದಲ್ಲಿರುವ ಸುಂದರ ಪ್ರವಾಸಿ ತಾಣ ಬೀರಮಲೆ ಬೆಟ್ಟ..ಎಲ್ಲರೂ ಇಷ್ಟ ಪಡುವ ಕಾರಂತಜ್ಜರ ಬಾಲವನ..ಶಾಂತಿನೆಲೆಸಿರುವ

ಪ್ರಾರ್ಥನಾ ಸ್ಥಳ ಗೋಥಿಕ್ ಶೈಲಿಯ ಚರ್ಚ್..!! ಎಲ್ಲವೂ ಪುತ್ತೂರಿನ ಹೆಸರನ್ನು ಹೆಚ್ಚಿಸುವಂತೆ ಮಾಡಿತ್ತು..ತೆಂಗು,ಅಡಿಕೆ ಮರಗಳು..!! ಹಚ್ಚ ಹಸಿರು ಹೊಲ ಗದ್ದೆಗಳು..ವಿಶಾಲವಾದ ಹಿರು ಮೈದಾನಗಳು.!! ಎಲ್ಲವೂ ಗಮ್ಯ ಸ್ಥಳ ಬಂತೆಂದು ತೋರಿಸತೊಡಗಿದವು..ಪುತ್ತೂರು ರೈಲ್ವೇ ಸ್ಟೇಶನ್ ಎಂದು ಹಳದಿ ಬಣ್ಣದ ಬೋರ್ಡ್ ಕಾಣಿಸಿತ್ತು..ಟ್ರೈನ್ ಸ್ಲೋ ಆಗಿ ನಿಲ್ಲತೊಡಗಿತ್ತು..ಗೌತಮ್ ಮತ್ತು ಪಲ್ಲವಿ ಇಳಿದರು..ಪುತ್ತೂರು ರೈಲ್ವೇಸ್ಟೇಶನ್ ನಲ್ಲಿ ಜನರು ತುಂಬ ವಿರಳವಾಗಿದ್ದರು..ಹಾಕಲಾಗಿದ್ದ ಬೆಂಚುಗಳ ಮೇಲೆ ಕುಳಿತಿದ್ದ ಕೆಲವು ಹೆಂಗಸರು ಮಕ್ಕಳು ಕಾಣಿಸಿದ್ದಲ್ಲದೆ..ಸಿಗರೇಟ್ ಸೇದುತ್ತಾ ಹರಟೆ ಹೊಡೆಯುತ್ತಿರುವ ಕೆಲವು ಮದ್ಯ ವಯಸ್ಕರು ಕಾಣಿಸಿದರು.ಸೂರ್ಯ ಅದಾಗಲೇ ತನ್ನ ಕೆಲಸ ಮುಗಿಸಿ ಹೊರಡುವ ತಯಾರಿಯಲ್ಲಿದ್ದ..ಇದ್ದಕ್ಕಿದ್ದಂತೆ ಆಕಾಶದಲ್ಲಿ ಕಾಣಿಸಿಕೊಂಡ ಮೋಡಗಳು ಮಳೆ ಬರುವ ಸೂಚನೆಯನ್ನು ನೀಡಿತು..ಇಬ್ಬರೂ ಬೇಗನೆ ನಡೆದು ಸ್ಟೇಶನ್ನ ಹೊರ ಭಾಗಕ್ಕೆ ಅಲ್ಲಿಂದ ಆಟೋವನ್ನು ಹಿಡಿದರು..ಪುತ್ತೂರಿನ ಮುಖ್ಯ ಪೇಟೆಯಲ್ಲಿ ಆಟೋ ಹೋಗುತ್ತಿರಬೇಕಾದರೆ ಪಲ್ಲವಿಯು ಅಲ್ಲಿ ನಿಲ್ಲಿಸಲಾಗಿದ್ದ ಆಟೋ ಸ್ಟಾಂಡಿನತ್ತ ನೋಡಿದಳು..ಸಾಲಾಗಿ ಆಟೋಗಳನ್ನು ನಿಲ್ಲಿಸಲಾಗಿತ್ತು..ಅವಳಿಗರಿವಿಲ್ಲದಂತೆ ಅಲ್ಲೆಲ್ಲಾ ಅವಳ ಕಂಗಳು ಅರಸತೊಡಗಿದವು..ಮೋಹನ ಕಾಣಿಸಲಿಲ್ಲ..!! ಬಾಡಿಗೆಗೆ ಹೋಗಿರಬೇಕೆಂದು ಅಂದುಕೊಳ್ಳುತ್ತಿರಬೇಕಾದರೆ ಎದುರಿನಿಂದ ಒಂದು ಆಟೋ ಬರುತ್ತಿರುವುದು ಕಾಣಿಸಿತ್ತು..ಅದರ ಮುಂದೆ ‘ಮೋಹನ ತರಂಗ’ ಎಂದು ಬರೆದಿತ್ತು..ಮನಸ್ಸಲ್ಲಿ ಏನೋ ಉದ್ವೇಗ..ತಳಮಳ..!! ಅವನ ಆಟೋ ಪಾಸ್ ಆಗುತ್ತರಬೇಕಾದರೆ ನೋಡಿದಳು..ಡ್ರೈವ್ ಮಾಡುತ್ತಿರುವ ಮೋಹನ ಕೂಡ ಇತ್ತ ಕಡೆ ನೋಡಿದ..ಇಬ್ಬರ ಕಂಗಳು ಒಂದು ಸಲ ಬೆರೆತವು..ಒಂದು ಸ್ಮೈಲ್ ಕೂಡ ಮಾಡಲಿಲ್ಲ..ಹಾಗೆ ಆಟೋ ಹೋಗಿತ್ತು..ಮೊದಲಿಗಿಂತ ಈಗ ಸ್ವಲ್ಪ ದಪ್ಪವಾಗಿದ್ದಾನೆ..ಅಲ್ಲದೆ ಸ್ಟೈಲ್ ಆಗಿ ಕಾಣಿಸುತ್ತಿದ್ದಾನೆ ಎಂದು ಅನಿಸಿತು ಅವಳಿಗೆ..ಛೆ!..ಏನಾಗಿದೆ ನನಗೆ..ನಾನ್ಯಾಕೆ ಅವನ ಬಗ್ಗೆ ಚಿಂತೆ ಮಾಡ್ತಿದ್ದೇನೆ..ಯಾರನ್ನು ಇನ್ನು ಈ ಜನ್ಮದಲ್ಲಿ ನೋಡಬಾರದೆಂದು..ನೆನಪು ಸಹ ಬರಬಾರದೆಂದು ಬೆಂಗಳೂರಿಗೆ ಹೋದೆನೋ..ಈಗ ಪುನಃ ಬಂದಾಗಿದೆ..ಅವನನ್ನು ನೋಡಿದ್ದಾಗಿದೆ..!! ತಲೆ ನೋವು ಶುರುವಾಗಿದ್ದು ಕೈಗಳಿಂದ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡಳು ಪಲ್ಲವಿ.. “ಏನಾಯಿತು ಪಲ್ಲು..” ಗೌತಮ್ ಗಾಬರಿಯಿಂದ ಪ್ರಶ್ನಿಸಿದ..”ಏನಿಲ್ಲ..ಸ್ವಲ್ಪ ತಲೆ ನೋವು..ಅಷ್ಟೆ!!”ಎಂದಳು..”ಟ್ರಾವೆಲ್ ಮಾಡಿದ್ದರಿಂದ ಹೀಗಾಗಿರ್ಬೇಕು..ಮನೆಗೆ ಹೋಗಿ ರೆಸ್ಟ್ ತೆಗೋ ಎಲ್ಲ ಸರಿ ಹೋಗುತ್ತೆ..” ಎಂದ..ಗೌತಮ್ಗೇನು ಗೊತ್ತು ಅಸಲಿ ವಿಷಯ..ತಲೆ ನೋವಿಗೆ ಕಾರಣ ಬೇರೆ ಇದೆ ಅಂತ..!! ಅವಳೇನು ಹೇಳದೆ ತಲೆಯಾಡಿಸಿದಳು..ಪಲ್ಲವಿಯ ತವರು ಮನೆಯ ಗೇಟಿನ ಮುಂದೆ ಆಟೋ ನಿಂತಿತು..ಕೂಡಲೇ ಆಟೋದಿಂದ ಇಳಿದು ಡ್ರೈವರಿಗೆ ದುಡ್ಡು ಕೊಟ್ಟು ಮನೆಯ ಕಡೆ ಹೆಜ್ಜೆ ಹಾಕಿದರು ಇಬ್ಬರೂ..ಪಲ್ಲವಿಯ ತಮ್ಮ ಪ್ರಕಾಶ್ ವರಾಂಡದಲ್ಲಿ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಸಾಂಗ್ ಕೇಳುತ್ತಿದ್ದ..

ಅಕ್ಕ ಮತ್ತು ಭಾವ ಬಂದಿದ್ದು ನೋಡಿ ಖುಷಿಯಿಂದ ಬರಮಾಡಿಕೊಂಡ..”ಅಮ್ಮ ಇಲ್ಲಿ ಯಾರು ಬಂದಿದ್ದಾರೆ ನೋಡು..!?” ಜೋರಾಗಿ ಬೊಬ್ಬೆ ಹಾಕಿದ..ಹಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳಮ್ಮ ಗಾಬರಿಯಿಂದ ಓಡಿ ಬಂದವರು ಮಗಳು ಅಳಿಯನನ್ನು ಕಂಡು ಸಂತಸಗೊಂಡರು..”ಅಮ್ಮ ನಂಗೆ ವಿಪರೀತ ತಲೆ ನೋವು..ಸ್ವಲ್ಪ ಹೊತ್ತು ರೆಸ್ಟ್ ಮಾಡ್ಬೇಕು” ಅಂದಳು ಪಲ್ಲವಿ.. ಕೋಣೆಯೊಳಗೆ ಹೋದವಳೇ ಮಂಚದಲ್ಲಿ ದೊಪ್ಪೆಂದು ಕುಳಿತಳು.. ಶಾಂತವಾಗಿದ್ದ ನೀರಿಗೆ ಕಲ್ಲೊಂದು ಹಾಕಿದಾಗ ಹೇಗೆ ನೀರು ಅಲ್ಲೋಲ ಕಲ್ಲೋಲವಾಗುತ್ತೋ ಅದೇ ಪರಿಸ್ಥಿತಿ ಅವಳದ್ದು..ಮೋಹನ ಕಾಣಿಸಿಕೊಂಡು ಅವಳ ಮನಸ್ಸನ್ನು ಅಲುಗಾಡಿಸಿದ್ದ..!! ಹಾಗೆ ಮಂಚಕ್ಕೆ ಒರಗಿ ಕುಳಿತವಳಿಗೆ ಬೇಡ ಬೇಡವೆಂದರೂ ಹಿಂದಿನ ನೆನಪುಗಳು ಒಂದೊಂದಾಗಿ ಕಾಡತೊಡಗಿದ್ದವು..

                             ****************************

“ಪಲ್ಲವಿ..ಇವ್ನು ನನ್ನ ಫ್ರೆಂಡ್ ಮೋಹನ್..!! ಮೋಹನ್ ಇವ್ಳು ನನ್ನ ತಂಗಿ ಪಲ್ಲವಿ..” ಪ್ರದೀಪ ಇಬ್ಬರಿಗೂ ಪರಿಚಯ ಮಾಡಿಸಿದ..ಮೋಹನ ಅವಳ ಕಡೆ ನೋಡಿದ..ಆಗ ತಾನೆ ಸೂರ್ಯನ ಸ್ಪರ್ಶಕ್ಕೆ ಅರಳಿ ನಿಂತ ಹೂವಿನಂತೆ

ಕಂಡಳು ಪಲ್ಲವಿ..!! ನಸು ಹಸಿರು ಬಣ್ಣದ ಹಳದಿ ಬಾರ್ಡರಿನ ಚೂಡಿದಾರ ದರಿಸಿದ್ದವಳು..ದುಂಡನೆಯ ಚಂದ್ರನಂತಿರುವ ಮುಖ..ಕಾಮನ ಬಲ್ಲಿನಂತೆ ಬಾಗಿರುವ ಹುಬ್ಬುಗಳ ನಡುವೆ ಹೊಳಪಿನ ಚಂಚಲ ಕಣ್ಣುಗಳು..ಸ್ವಲ್ಪ

ಉದ್ದವೆನಿಸುವ ಮೂಗಿನಲ್ಲಿ ಹೊಳೆಯುತ್ತರುವ ಮೂಗುತ್ತಿ..ಮುಖಕ್ಕೆ ಮೆರಗು ನೀಡಿದ ಕೆಂಪಗಿನ ತುಟಿಗಳು..ಆಕರ್ಷಕ ಮೈ ಮಾಟದ ಹಾಲು ಬಿಳುಪಿನ ಸುಂದರಿ..!!

ಮೋಹನ ಅವಳನ್ನು ನೋಡುತ್ತಾ ನಿಂತು ಬಿಟ್ಟ..ಪಲ್ಲವಿಯೂ ಅವನ ಕಡೆ ನೋಡಿದಳು..ಸುಮಾರು ಆರು ಅಡಿ ಎತ್ತರ..ದುಮಡಗಿನ ಮುಖ..ತುಂಟತನವನ್ನು ಸೂಚಿಸುತ್ತಿರುವ ಕಣ್ಣುಗಳು..ಬಿಲ್ಲಿನಂತೆ ಬಾಗಿರುವ ಮೀಸೆಯ

ನಸು ಬಿಳುಪಿನ ಯುವಕ..!! ಆಟೋ ಯುನಿಫಾರಂ ಧರಿಸಿದ್ದವನು ಕಣ್ಣಿಗೆ ಸುಂದರವಾಗಿ ಕಂಡ..ಇಬ್ಬರ ನೋಟಗಳು ಬೆರೆತವು..

“ಮೋಹನ್ ನಿನ್ನಿಂದ ಒಂದು ಹೆಲ್ಪ್ ಆಗ್ಬೇಕಿತ್ತು..?!” ಪ್ರದೀಪನ ಧ್ವನಿಗೆ ಇಬ್ಬರೂ ಎಚ್ಚೆತ್ತರು.. “ಹೇಳು..ಪ್ರದೀಪ್..?!” ಮೋಹನ ಹೇಳಿದ..”ಇವ್ಳು ಎಸ್.ಎಸ್.ಎಲ್.ಸಿ ಓದುತ್ತಿದ್ದಾಳೆ..ಅಲ್ಲಿ ಶಾಲೆಯಲ್ಲಿ ಕೆಲವು ಪುಂಡು

ಪೋಕರಿಗಳು ಇವಳಿಗೆ ತೊಂದರೆ ಕೊಡ್ತಿದ್ದಾರೆ..ಅವರನ್ನು ಒಮ್ಮೆ ನೀನು ವಿಚಾರಿಸಬೇಕಿತ್ತು..ನನಗೆ ಹಾಸನಕ್ಕೆ ಹೋಗಲು ಇರುವುದರಿಂದ ಈ ಕೆಲಸವನ್ನು ನಿನಗೆ ವಹಿಸಿದ್ದೇನೆ..ಪ್ಲೀಸ್..” ಅವನ ಮಾತಿಗೆ ಮೋಹನ

“ಅಯ್ಯೋ..ನಿನ್ನ ಫ್ರೆಂಡ್ ಆಗಿ ಅಷ್ಟೂ ಮಾಡಲ್ವಾ..?! ನೀನು ಆ ಯೋಚನೆ ಬಿಡು..ನಾನಿದ್ದೀನಿ..” ಭರವಸೆ ಕೊಟ್ಟ..ಪ್ರದೀಪ್ ತಂಗಿಯ ಕಡೆಗೆ ನೋಡಿ,”ಪಲ್ಲವಿ..ಮೋಹನ್ ತುಂಬ ಒಳ್ಳೆಯವ..ನೀನು ಏನೇ ತೊಂದರೆಯಾದ್ರೂ

ಅವನಿಗೆ ಹೇಳು..ಅವ್ನು ಹೆಲ್ಪ್ ಮಾಡ್ತಾನೆ..” ಪಲ್ಲವಿ ತಲೆಯಲ್ಲಾಡಿಸಿದಳು..ಮೋಹನ ಅವಳ ಕಡೆ ನೋಡಿ ತನ್ನ ಚಿಗುರು ಮೀಸೆಯನ್ನು ತಿರುವುತ್ತಾ ಮುಗುಳ್ನಕ್ಕ..ಮರುದಿನ ಪಲ್ಲವಿಯನ್ನು ಶಾಲೆಗೆ ಕರೆದುಕೊಂಡು ಹೋಗಲು

ಮೋಹನ ಅವಳ ಮನೆಗೆ ಬಂದ..!!

ಸುಮಾರು ನಾಲ್ಕು ಎಕರೆ ಸ್ಥಳದಲ್ಲಿ ಒಂದೆರಡು ಎಕರೆ ಅಡಿಕೆ ತೋಟ..ಒಂದು ಎಕರೆ ತೆಂಗಿನ ತೋಟ..ಸ್ವಲ್ಪ ಗೇರು ಬೀಜ,ಹಲಸು,ಮಾವು ಮರಗಳಿರುವ ಗುಡ್ಡ..ಹಾಲಿನ ವ್ಯಾಪಾರಕ್ಕಾಗಿ ಏಳೆಂಟು ಹಸುಗಳು..ಹೊಂದಿರುವ ಮಧ್ಯಮ ವರ್ಗದ ಕುಟುಂಬ ರಾಜಶೇಖರಯ್ಯನವರದ್ದು..!! ಪತಿ ಹಾಕಿದ ಗೆರೆಯನ್ನು ಎಂದೂ ದಾಟದ ಆದರ್ಶ ಪತ್ನಿ ಮಂಗಳಮ್ಮ..ಅವರಿಗೆ ಮೂವರು ಮಕ್ಕಳು..!! ದೊಡ್ಡವನು ಪ್ರದೀಪ.. ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಾನೆ..ಮನೆಯಲ್ಲಿ ಇರುವುದೇ ಕಡಿಮೆ..ಬೇರ ಬೇರೆ ಊರುಗಳಿಗೆ ಲಾರಿಯಲ್ಲಿ ಸರಕು ಸಮಾನುಗಳನ್ನು ತೆಗೆದುಕೊಂಡು ಹೋಗುತ್ತಿರುತ್ತಾನೆ..ಎರಡನೆಯವಳು

ಪಲ್ಲವಿ..ಹತ್ತನೆಯ ಕ್ಲಾಸ್ನಲ್ಲಿ ಕಲಿಯುತ್ತಿದ್ದರೆ ಚಿಕ್ಕವನು ಪ್ರಕಾಶ್..ಏಳನೇ ಕ್ಲಾಸ್ನಲ್ಲಿ ಕಲಿಯುತ್ತಿರುತ್ತಾನೆ..ಕೃಷಿ,ಹಾಲು ವ್ಯಾಪಾರ ಕಸುಬು ಮಾಡಿಕೊಂಡಿರುವ ರಾಜಶೇಖರಯ್ಯನವರದ್ದು ಸುಖೀ ಕುಟುಂಬ..!!”ಯಾರಪ್ಪಾ ನೀನು..ಏನಾಗಬೇಕಿತ್ತು..?!” ಆಗ ತಾನೆ ತೋಟದ ಕಡೆಯಿಂದ ಬಂದಿದ್ದ ರಾಜಶೇಖರಯ್ಯ ಮನೆಯ ಮುಂದೆ ನಿಂತಿದ್ದ ಮೋಹನನಿಗೆ ಪ್ರಶ್ನಿಸಿದರು..ಅವನು,” ಅದು..ಪ್ರದೀಪ..!!” ಅವನು ಹೇಳುತ್ತಿರಬೇಕಾದರೆ ಅವರು “ಅವನು ಇಲ್ಲ..ನಿನ್ನೆ ರಾತ್ರಿನೇ ಹಾಸನಕ್ಕೆ ಹೋದ..ಏನಾಗಬೇಕಿತ್ತು..?!” ಗಂಭೀರವಾಗಿ ಕೇಳಿದರು..”ಅದು ಗೊತ್ತು..ಸಾರ್..ಅವನೇ ಬರುವುದಕ್ಕೆ ಹೇಳಿದ್ದು..ನಿಮ್ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬಾ ಅಂತ.” ಅದಕ್ಕವರು ಗಾಬರಿಯಾಗಿ, “ಯಾವಾಗಲೂ ಅವಳು ಬಸ್ಸಲ್ಲಿ ತಾನೇ ಶಾಲೆಗೆ ಹೋಗುವವಳು..ಈವತ್ತು ಏನಾಯಿತು..?! ಪಲ್ಲವಿ..ಪಲ್ಲವಿ..” ಎಂದು ಮಗಳನ್ನು ಕರೆದರು..ಪಲ್ಲವಿ ಮನೆಯೊಳಗಿನಿಂದ ಓಡಿ ಬಂದು “ಏನಪ್ಪಾ..” ಎಂದವಳಿಗೆ ಮೋಹನ ಕಾಣಿಸಿಕೊಂಡಿದ್ದು ಮುಂದೆ ಮಾತನಾಡಲು ನಾಚಿಕೆಯಿಂದ ಬಾಯಿ ಬರದಾಯಿತು..ಮೋಹನ ಅವಳ ಕಡೆ ನೋಡಿದ..ಕೆಂಪು ಬಿಳುಪು ಬಣ್ಣದ ಯುನಿಫಾರಂ ದರಿಸಿದವಳು ಮುದ್ದಾಗಿ ಕಂಡಳು..”ಪಲ್ಲವಿ ಈವತ್ತು ಯಾಕೆ ಆಟೋದಲ್ಲಿ ಹೋಗ್ತಿದ್ದಿಯ..ಏನಾಗಿದೆ ನಿನಗೆ..?!” ತಂದೆಯ ಗಡುಸು ಸ್ವರಕ್ಕೆ ಪಲ್ಲವಿ, “ಅದು..ಅದು..ಶಾಲೆಯಲ್ಲಿ..” ಮುಂದಕ್ಕೆ ಹೇಳಲು ಹಿಂಜರಿದಳು..ಅವಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಮೋಹನ ಪ್ರದೀಪ ಹೇಳಿದ ವಿಷಯವನ್ನು ತಿಳಿಸಿದ..ಅದಕ್ಕವರು ಮಗನ ಮೇಲೆ ಅಸಮಧಾನ ಹೊರ ಹಾಕಿದರು..”ನನಗೆ ಒಂದು ಮಾತು ಹೇಳುದಲ್ವಾ ಅವನು..ಅಟ್ಲೀಸ್ಟ್ ನಿನಗಾದರೂ ನನ್ನತ್ರ ಹೇಳ್ಬಹುದಿತ್ತಲ್ವಾ..” ಮಗಳ ಕಡೆ ನೋಡಿದವರು ಬೈದರು..”ಬಿಡಿ ಸಾರ್..ನೀವು ಏನೂ ಚಿಂತೆ ಮಾಡ್ಬೇಡಿ..ನಾನೇ ನಿಮ್ಮ ಮಗಳನ್ನು ಸೇಫಾಗಿ ಕರೆದುಕೊಂಡು ಹೋಗಿ ವಾಪಾಸ್ ಮನೆಗೆ ಸೇಫಾಗೇ ಬಿಡುವ ಜವಾಬ್ಧಾರಿ ನನ್ನದು..ಡೋಂಟ್ ವರಿ ಸಾರ್..” ಅಂದ..ಕೊನೆಗೆ ರಾಜಶೇಖರಯ್ಯ ಒಪ್ಪಿದರು..”ಅಪ್ಪ ನಾನು ಅಕ್ಕನೊಡನೆ ಹೋಗ್ತೇನೆ..” ಸ್ಕೂಲ್ ಬ್ಯಾಗ್ ಹಾಕಿಕೊಂಡು ಬಂದ ಪ್ರಕಾಶ ಹೇಳಿದ..ಇವನೊಡನೆ ಒಬ್ಬನೇ ಹೇಗಪ್ಪ ಹೋಗೂದು ಎಂದು ಆಲೋಚಿಸುತ್ತಿದ್ದವಳಿಗೆ ತಮ್ಮ ಬರುತ್ತೇನೆಂದು ಹೇಳಿದ್ದು ಖುಷಿಯಾಗಿತ್ತು..ಪ್ರಕಾಶ ಹೋಗುತ್ತಿರುವ ಶಾಲೆ ಪಲ್ಲವಿಯ ಹೈಸ್ಕೂಲ್ಗೆ ಸಮೀಪನೇ ಇತ್ತು..ಹಾಗಾಗಿ ಅಕ್ಕ ತಮ್ಮ ಒಟ್ಟಿಗೆ ಶಾಲೆಯ ಬಳಿಯಲ್ಲಿ

ಇಳಿದರು..ಮುಂದೆ ನಡೆಯುತ್ತಿದ್ದವಳು ಹಿಂದೆ ತಿರುಗಿ ನೋಡಿದಳು..ಮೋಹನ ಅವಳು ಹೋಗುತ್ತಿರುವುದನ್ನೇ ನೋಡುತ್ತಿದ್ದ ತನ್ನ ಚಿಗುರು ಮೀಸೆಯನ್ನು ತಿರುವುತ್ತಾ ಮುಗುಳ್ನಕ್ಕ..ಅವಳೂ ಹೂ ನಗೆ ಚೆಲ್ಲಿದಳು..ಅಲ್ಲಿಂದ ಆರಂಭವಾಗಿತ್ತು ಅವರಿಬ್ಬರ ಪ್ರೀತಿಯ ಕಥೆ..!! ಮೋಹನ ಪಲ್ಲವಿಯನ್ನು ಚುಡಾಯಿಸುವ ಬೀದಿ ಕಾಮಣ್ಣರಿಗೆ ಸರಿಯಾಗಿ ಬೆಂಡೆತ್ತಿದ್ದ..ಅಲ್ಲದೆ ದಿನಾ ಅವಳನ್ನು ಶಾಲೆಗೆ ಬಿಟ್ಟು ಸಂಜೆ ವಾಪಾಸ್ ಮನೆಗೆ ಕರೆದುಕೊಂಡು ಬಂದು ಬಿಡುವುದು ಅವನ ದಿನನಿತ್ಯದ ಕೆಲಸವಾಗಿತ್ತು..ಕೆಲವೊಮ್ಮೆ ಪ್ರಕಾಶ ಇವರೊಡನೆ ಬರುತ್ತಿಲ್ಲವಾದ್ದರಿಂದ ಇಬ್ಬರಿಗೂ ಮಾತನಾಡಲು ಅವಕಾಶ ಸಿಗುತ್ತಿತ್ತು.. ಆದರೆ ಇಬ್ಬರೂ ಮೌನಕ್ಕೆ ಶರಣಾಗುತ್ತಿದ್ದರು..ಮೋಹನ ಆಟೋದಲ್ಲಿದ್ದ ಮಧ್ಯಭಾಗದ ಕನ್ನಡಿಯಲ್ಲಿ ಹಿಂದೆ ಕುಳಿತಿದ್ದ ಚೆಲುವೆಯನ್ನು ಕದ್ದು ಕದ್ದು ನೋಡುತ್ತಿದ್ದನೇ ಹೊರತು ಮಾತನಾಡಲು ಭಯ..!! ಅವಳು ಅಷ್ಟೇ..ಅವನಾಗೇ ಮಾತನಾಡಿಸಲೀ ಅಂತ ಕಾಯುತ್ತಿದ್ದಳು..

ಪಲ್ಲವಿಯದು ಹೇಳಿ ಕೇಳಿ ಹದಿ ಹರೆಯದ ವಯಸ್ಸು..!!ಸುತ್ತ ಮುತ್ತಲ ಎಲ್ಲವೂ ಸುಂದರವಾಗಿ ಕಾಣುವ..ಕನಸು ಬಯಕೆಗಳು ಅರಳುವ ವಯಸ್ಸು ಅದು..!! ಅವಳ ಚಂಚಲ ಮನಸ್ಸು ಮೋಹನನ ಸುತ್ತಲೇ ಸುತ್ತುತ್ತಿತ್ತು..ಅವನು ತಾನು, ಸಮುದ್ರ ತೀರ,ಹೋಟೆಲ್,ಪಾಕರ್್ ಎಲ್ಲೆಲ್ಲೋ ಒಟ್ಟಿಗೆ ತಿರುಗಾಡಿದ ಹಾಗೆ..ಅವನಿಗೂ ತನಗೂ ಮದವೆಯಾದ ಹಾಗೆ..ಇನ್ನು ಏನೇನೋ ಕನಸುಗಳು..ಆಸೆಗಳು..ಮನಸ್ಸಲ್ಲಿ ಹುಟ್ಟಿಕೊಳ್ಳುತ್ತಿತ್ತು..ಅದಕ್ಕೆ ಉಪ್ಪು ಖಾರ ಬೆರೆಸುತ್ತಿದ್ದವರು ಗೆಳತಿಯರು.. “ನೋಡೇ ಅವನು ನಿನ್ನ ನೋಡುವ ಮಾತನಾಡುವ ರೀತಿ ನೋಡಿದರೆ ಗ್ಯಾರೆಂಟಿ ನಿನ್ನ ಲವ್ ಮಾಡ್ತಾನೆ ಅಂತ

ಕಾಣುತ್ತೆ” ಅವರ ಮಾತು ಮೋಹನನ್ನು ನೋಡಿದರೆ ನಿಜವೇನೋ ಎಂದೆನಿಸುತ್ತಿತ್ತು..”ಏ ಹೋಗ್ರೋ ಹಾಗೇನೂ ಇರಲ್ಲ” ಎಂದು ಸಬೂಬು ಹೇಳಿ ಅವರಿಂದ ತಪ್ಪಿಸಿಕೊಂಡರೂ ಮನಸ್ಸು ಮಾತ್ರ ಮೋಹನನ ಸುತ್ತುತ್ತಾ ಅವನು ತನ್ನ ಪ್ರೀತಿಸುತ್ತಿರವುದು ನಿಜವೆಂದೆನಿಸಿತ್ತು..ಇತ್ತ ಮೋಹನನ ಸ್ಥಿತಿನೂ ಅಷ್ಟೇ..”ಅವಳನ್ನು ನೋಡುತ್ತಿದ್ದರೆ ಖಂಡಿತ ನಿನ್ನ ಲವ್ ಮಾಡ್ತಿದ್ದಾಳೆ ಮಚ್ಚಾ..ನಿಮ್ಮಿಬ್ಬರದು ಸೂಪರ್ ಜೋಡಿ..” ಎಂದೆಲ್ಲ ಉಳಿದ ಆಟೋ ಗೆಳೆಯರು ಅವನ ಮನಸ್ಸಲ್ಲಿ ಅರಳಿದ್ದ ಪ್ರೀತಿಗೆ ನೀರೆರೆದಿದ್ದರು..ಇದರ ನಡುವೆ ಪಲ್ಲವಿಯ ಹೈಸ್ಕೂಲ್ ವಿದ್ಯಭ್ಯಾಸ ಮುಗಿದು ಕಾಲೇಜು ಮೆಟ್ಟಿಲು ಹತ್ತಿದ್ದಳು..ಮೋಹನ ನೇರವಾಗಿ ಪ್ರದೀಪನೊಡನೆ ತಾನು ಪಲ್ಲವಿಯನ್ನು ಪ್ರೀತಿಸುವುದಾಗಿ ಹೇಳಲು ತೀರ್ಮಾನಿಸಿದ..ಅವನು ಖಂಡಿತ ನಮ್ಮಿಬ್ಬರನ್ನೂ ಒಂದು ಮಾಡುತ್ತಾನೆ ಎಂಬ ನಂಬಿಕೆ ಅಚಲವಾಗಿದ್ದು ಹೇಳಿಯೇ ಬಿಟ್ಟ..!!

ಪ್ರದೀಪನಿಗೆ ಶಾಕ್ ಆಗಿತ್ತು..!! ಅವನಿಗೆ ತನ್ನ ಗೆಳೆಯನ ಬಗ್ಗೆ ಒಳ್ಳೆಯ ಅಭಿಪ್ರಾಯವಿತ್ತು..ಹಾಗಾಗಿ ಪಲ್ಲವಿಯ ಅವನ ಜೊತೆ ಸುಖವಾಗಿವಾಗಿರಬಹುದೆಂದು ಅನಿಸಿತ್ತು..ಇನ್ನು ಮನೆಯಲ್ಲಿ ಏನು ಹೇಳುತ್ತಾರೋ ಇದನ್ನು ಒಪ್ಪುತ್ತಾರೋ ಇಲ್ಲವೋ ಎಂಬ ಗೊಂದಲು ಶುರುವಾಗಿತ್ತು..ಅಪ್ಪ ಅಮ್ಮನಿಗೆ ಈ ವಿಷಯವನ್ನು ಹೇಳಲು ಮನೆಗೆ ಬೇಗನೆ ಬಂದ..ಆದರೆ ಮನೆಯಲ್ಲಿ ಅದಾಗಲೇ ಈ ವಿಷಯ ಗೊತ್ತಾಗಿ ದೊಡ್ಡ ರಂಪಾಟವೇ ನಡೆದಿತ್ತು..ಅದಕ್ಕೆ ಕಾರಣ ಶಿವರಾಮಯ್ಯ..!! ರಾಜಶೇಖರಯ್ಯರ ಒಡ ಹುಟ್ಟಿದ

ತಮ್ಮ..!! ಆಸ್ತಿ ವಿಚಾರದಲ್ಲಿ ಅಣ್ಣ ತಮ್ಮನ ಮಧ್ಯೆ ಮನಸ್ತಾಪ ಉಂಟಾಗಿದ್ದು ಮಾತುಕತೆ ಎಷ್ಟು ಬೇಕೋ ಅಷ್ಟೇ ಎಂದಾಗಿತ್ತು.. ಹೀಗಾಗಿ ರಾಜಶೇಖರಯ್ಯರ ಮೇಲೆ ಕೋಪವಿದ್ದ ಶಿವರಾಮಯ್ಯ ಈ ಸಂದರ್ಭವನ್ನು ಚೆನ್ನಾಗಿಯೇ ಬಳಸಿಕೊಂಡರು..ಇಲ್ಲದ ಕಥೆಗೆ ರೆಕ್ಕೆ ಪುಕ್ಕ ಸೇರಿಸಿ ಪೇಟೆಯಲ್ಲಿ ಸಿಕ್ಕಿದಾಗ ಹೇಳಿದ್ದರು..”ಪಲ್ಲವಿ ಯಾರ ಜೊತೆ ಊರೂರು ಸುತ್ತುತಾ ಇದ್ದಾಳೆ ಅಂತಾ ಗೊತ್ತಾ ನಿಂಗೆ..ಒಬ್ಬ ಆಟೋ ಡ್ರೈವರ್ ಜೊತೆ..!! ಇಡಿ ಊರಲ್ಲಿ ಈಗ ಇದೇ ಸುದ್ದಿ..!! ಇದರಿಂದ ನಮ್ಮ ಮಾನ,ಮನೆತನದ ಗೌರವ,ಮರ್ಯಾದೆ ಏನಾಗಬೇಡ..ನೀನೇ ಹೇಳಣ್ಣ..?!” ರಾಜಶೇಖರಯ್ಯರಿಗೆ ಇದು ಆಘಾತಕಾರಿ ಸುದ್ದಿಯಾಗಿತ್ತು..ಅದೂ ಈ ವಿಷಯ ತಮ್ಮನ ಬಾಯಿಯಿಂದ ಕೇಳಿದ್ದು ಸಿಟ್ಟು ಇನ್ನೂ ಹೆಚ್ಚಾಗುವಂತೆ ಮಾಡಿತ್ತು..ಮನೆಗೆ ಬಂದವರೇ ಪಲ್ಲವಿಗೆ ಸರಿಯಾಗಿ ಬೈದರು..ಅವಳ ಮನಸ್ಸು ಮಾತ್ರ ಸತ್ಯ ಹೇಳು ಎಂದು ಹೇಳಿದರೂ ಬಾಯಿಯಿಂದ ಬಂದಿದ್ದು ಸುಳ್ಳು..!! “ಇಲ್ಲಪ್ಪ ಹಾಗೇನು ಇಲ್ಲ ಎಲ್ಲ ಸುಳ್ಳು..” ಎಂದು ಅತ್ತಳು..”ಇಷ್ಟೆಲ್ಲ ಮಾಡಿದ್ದು ನಿಮ್ಮ ತಮ್ಮನೇ..ಹೋಗಿ ಅವನನ್ನ ಬೈಯುವುದು ಬಿಟ್ಟು ಮಗಳನ್ನ ಯಾಕೆ ಬೈತೀರಿ..ಹಾಗೇನು ಇಲ್ಲಾಂತ ಅಂತ ಅವಳೇ ಹೇಳಿದ್ಳಲ್ಲಾ,.” ಮಂಗಳಮ್ಮ ಮಗಳನ್ನು ಬೆಂಬಲಿಸಿದರು..”ನೀನು ಸುಮ್ನಿರು..” ಎನ್ನುತ್ತಿದ್ದಂತೆ ಪ್ರದೀಪ ಬಂದಿದ್ದ..ಪಲ್ಲವಿ ಅಳುತ್ತಾ ನಿಂತಿದ್ದು ಕಾಣಿಸಿತ್ತು..”ಏನಾಯಿತು..?!” ಎಂದು ಪ್ರಶ್ನಿಸಿದ..ಅದಕ್ಕೆ ರಾಜಶೇಖರಯ್ಯ ನಡೆದ ವಿಷಯವನ್ನು ಹೇಳಿದರು..”ನಾನು ಇದನ್ನೇ ಮಾತನಾಡೋಣ ಅಂತಿದ್ದೆ..” ಎಂದವ ಮೋಹನ ಹೇಳಿದ್ದನ್ನು ತಿಳಿಸಿದ..ಪಲ್ಲವಿಗೆ ಎಲ್ಲಿಲ್ಲದ ಸಂಭ್ರಮ..!! ಅಂದ್ರೆ ಮೋಹನ ನನ್ನ ಪ್ರೀತಿಸುತ್ತಿದ್ದಾನೆ ಅಂತ ಆಯಿತು..ಖುಷಿಯಿಂದ ಅವಳಿಗೆ ಅಲ್ಲೇ ಕುಣಿದಾಡುವ ಅನಿಸಿದರೂ ಎಲ್ಲರೂ ಇದ್ದ ಕಾರಣ ಸುಮ್ಮನಾದಳು..!! ರಾಜಶೇಖರಯ್ಯ ಕುಳಿತಿದ್ದ ಕುರ್ಚಿಯಿಂದ ಧಡಕ್ಕನೆ ಎದ್ದು ನಿಂತವರು ಸಿಟ್ಟಿನಿಂದ ಅಬ್ಬರಿಸಿದರು..”ಏನು ಅವನಿಗೆ ನನ್ನ ಮಗಳನ್ನು ಮದುವೆ ಮಾಡಿ ಕೊಡಬೇಕ. ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ..ಬೇಕಾದರೆ ಅವಳನ್ನು ಕೊಂದು ತೋಟದಲ್ಲಿ ಹೂತು ಹಾಕಿಯೇನು..ಆದರೆ ಅವನಿಗೆ ಮಾತ್ರ ಕೊಡಲ್ಲ..ಏನು ತಿಳಿದುಕೊಂಡಿದ್ದಾನೆ ಅವ್ನು..” ಪ್ರದೀಪ ತಂದೆಯ ಕೋಪವನ್ನು ನೋಡಿ ಬೆಪ್ಪಾಗಿ ನಿಂತ..!! “ಬೇಡ ಇದು ಸರಿಯಾಗಲ್ಲ” ಎಂದವರು ತೋಟದ ಕಡೆ ಹೆಜ್ಜೆ ಹಾಕಿದರು..ತಂದೆಗೆ ವಿರುದ್ಧ ಹೋಗಲು ಪ್ರದೀಪನಿಗೆ ಇಷ್ಟವಾಗಲಿಲ್ಲ..ಅಲ್ಲಿಗೆ ಈ ವಿಷಯವನ್ನು ಬಿಟ್ಟು ಬಿಟ್ಟ..ಪಲ್ಲವಿಗೆ ನಿರಾಸೆಯಾಗಿತ್ತು..ತನ್ನ ಪ್ರೀತಿಗೆ ಎಲ್ಲರ ಸಪೋರ್ಟ್ ಸಿಗಬಹುದೆಂದು ಕೊಂಡರೆ ಆರಂಭದಲ್ಲೇ ವಿಘ್ನ..!!

ಮೋಹನನಿಗೆ ಕಾಲ್ ಮಾಡಿದರೆ ನಾಟ್ ರೀಚೆಬಲ್ ಬರುತ್ತಿತ್ತು..ಇನ್ನೇನು ಮಾಡುವುದು..?!..ಎಷ್ಟೇ ಕಷ್ಟ ಬರಲಿ..ಯಾರು ಏನು ಹೇಳಿದರೂ ಕೇಳಲ್ಲ..ಎಷ್ಟು ವರ್ಷ ಬೇಕಾದರೂ ನಿನಗಾಗಿ ನಾನು ಕಾಯವೆ ಎಂಬ ಸಾಲುಗಳೊಂದಿಗೆ ಪತ್ರ ಬರೆದು ಧೈರ್ಯ ಮಾಡಿ ಮೋಹನನಿಗೆ ತಮ್ಮನ ಮೂಲಕ ಕಳುಹಿಸಿದಳು..ದಿನ ಹೋಗಿ ಒಂದು ವಾರ ಕಳೆದರೂ ಅವನಿಂದ ಉತ್ತರ

ಬರಲಿಲ್ಲ..!! ಈ ಪ್ರಕರಣದಿಂದ ಕಾಲೇಜಿಗೆ ಹೋಗುತ್ತಿಲ್ಲವಾದ್ದರಿಂದ ಪತ್ರಕ್ಕೆ ಯಾಕೆ ಉತ್ತರ ಬರಲಿಲ್ಲ..ಏನಾಗಿರಬಹುದು ಎಂಬ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ..ತಮ್ಮನ ಬಳಿ ವಿಚಾರಿಸಿದರೂ ಏನೂ ತಿಳಿಯಲಿಲ್ಲ..ಅಣ್ಣನೊಡನೆ ಕೇಳಲು ಹೆದರಿಕೆ..!! ಚಡಪಡಿಕೆಯೊಂದಿಗೆ ದಿನ ಕಳೆಯತ್ತಿರಬೇಕಾದರೆ ಒಂದು ಆಘಾತಕಾರಿ ಸುದ್ಧಿ ಅವಳನ್ನು ಅರಸಿ ಬಂದಿತ್ತು..!!

ಓದಿ: ಹೀಗೊಂದು ಪ್ರೀತಿಯ ಕಥೆ-1

-ವಿನೋದ್ ಕೃಷ್ಣ

vinodkrishna210@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post