ಇದು ಹಳ್ಳಿಗಳಲ್ಲಿ ಗೊಬ್ಬರ ಗುಂಡಿ ಎಂದು ಕರೆಸಿಕೊಳ್ಳುವ ಪ್ರತಿ ಮನೆಯಲ್ಲೂ ಆ ಮನೆಯ ಸೊತ್ತಾಗಿ ಅನಾದಿ ಕಾಲದಿಂದ ಅಂಟಿಕೊಂಡು ಬಂದಿದೆ. ಈ ಗುಂಡಿ ಇಲ್ಲದ ಮನೆಗಳೇ ಇಲ್ಲ. ಅದರಲ್ಲೂ ಮಲೆನಾಡಿನ ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ದೀಪ ಇಡಿಸಿ ಕೊಳ್ಳುವ ಗುಂಡಿ ಇದು ಎಂದರೂ ತಪ್ಪಾಗಲಾರದು. ಇದರ ವಿಸ್ತೀರಣ ಸುಮಾರು ಹದಿನೈದು ಅಡಿ ಆಳ ಅಷ್ಟೇ ಅಗಲ. ಅವರವರ ಮನೆಗೆ ಬೇಕಾದಂತೆ ಮಾಡಿಕೊಂಡ ಮಣ್ಣಿನ ಗುಂಡಿ. ಒಂದಂಚಿನಲ್ಲಿ ಇಳಿಯಲು ಮಣ್ಣಿನಲ್ಲಿ ಒಂದಡಿ ಅಗಲ ಕೊರೆದ ಮೆಟ್ಟಿಲುಗಳು ಇರುತ್ತವೆ.
ಮಲೆ ನಾಡಿನ ಹಳ್ಳಿಗಳಲ್ಲಿ ಹೊಲಸು ಅನ್ನುವುದು ಏನೂ ಇರುವುದಿಲ್ಲ ಶಹರದಂತೆ. ಕಾರಣ ಪ್ರತಿ ಮನೆಯಲ್ಲಿ ಹಸುವಿನ ಕೊಟ್ಟಿಗೆಯಲ್ಲಿ ಬೀಳುವ ಸಗಣಿ ಗೊಬ್ಬರ ಗುಂಡಿಗೆ ಹಾಕು ಅನ್ನುವ ವಾಡಿಕೆ. ಹಸು ಎಮ್ಮೆ ಅವರ ಆಂತರ್ಯದಲ್ಲಿ ಅತ್ಯಂತ ಪೂಜನೀಯ ಸ್ಥಾನ ಪಡೆದಿದೆ. ಅದರಂತೆ ಅವುಗಳ ಮಲ ಮೂತ್ರ ಕೂಡ ಪವಿತ್ರತೆ ಹೊಂದಿದೆ. ಆದುದರಿಂದ ಅವುಗಳನ್ನು ಶೇಖರಿಸುವ ಜಾಗ ಕೂಡ ಅಷ್ಟೇ ಪವಿತ್ರತೆ ಹೊಂದಿದೆ. ಈ ಗುಂಡಿಗೆ ಇಷ್ಟೇ ಅಲ್ಲದೆ ಹಸಿ ಸೊಪ್ಪು, ತರಕಾರಿಗಳ ಸಿಪ್ಪೆ, ತೋಟದಿಂದ ತಂದ ಬಾಳೆ ಎಲೆಗಳು ಇನ್ನಿತರ ಯಾವುದೇ ರೀತಿಯ ಹಸಿ ವಸ್ತುಗಳನ್ನು ಹಾಕುತ್ತಾರೆ. ಇಲ್ಲಿ ಉಂಡ ಎಲೆ, ಎಂಜಲು, ಅನ್ನ ಯಾವುದನ್ನೂ ಹಾಕದಂತೆ ಕಾಳಜಿ ವಹಿಸುತ್ತಾರೆ. ಮನೆಯಲ್ಲಿ ಮಾಡಿದ ಉಳಿದ ಅಡಿಗೆ, ಅಕ್ಕಿ ತೊಳೆದ ನೀರು ಇನ್ನಿತರ ಯಾವುದೆ ತಿನ್ನುವ ವಸ್ತು ಉಳಿದಲ್ಲಿ ಅಕ್ಕೊಚ್ಚಿನ ಬಾನಿ (ದೊಡ್ಡ ಬಕೆಟ್)ಗೆ ತಂದು ಸುರಿಯುತ್ತಾರೆ. ಇದನ್ನು ಹಸುಗಳಿಗೆ ಕುಡಿಯಲು ಕೊಡುತ್ತಾರೆ.
ಏಕೆಂದರೆ ಅನ್ನ ಮುಸುರೆ, ಊಟ ಮಾಡಿದ ಎಲೆ ಎಂಜಲು ನಿಶಿದ್ದ ಅನ್ನುವ ಶಾಸ್ತ್ರ ಕೂಡಾ ಇದೆ. ಅನ್ನ ಮುಟ್ಟಿದರೆ ಕೈ ತೊಳೆಯ ಬೇಕು. ಏನೇ ತಿಂದರೂ ಕೈ ಬಾಯಿ ತೊಳೆಯ ಬೇಕು. ಊಟ ಮಾಡಿದ ಜಾಗ ಒರೆಸ ಬೇಕು. ಹಬ್ಬ ಹುಣ್ಣಿಮೆ ಬಂತೆಂದರೆ ಮನೆಯೆಲ್ಲ ಸ್ವಚ್ಛ. ಅಂಗಳ ಮುಂಗಟ್ಟು ಸಗಣಿಯ ನೀರಿನಿಂದ ಪೊರಕೆಯಲ್ಲಿ ತೊಡೆದು ಒಪ್ಪ ಮಾಡುತ್ತಾರೆ. ಯಾವುದೇ ಕ್ರಿಮಿ ಕೀಟಗಳು ಮನೆ ಹತ್ತಿರ ಸುಳಿಯುವುದಿಲ್ಲ. ದೀಪ ಹಚ್ಚುವ ಹೊತ್ತಲ್ಲಿ ಧೂಪದ ಹೊಗೆ ಮನೆಯೆಲ್ಲ ಆವರಿಸಿ ಸೊಳ್ಳೆಗಳೂ ನಾಶ. ಅಲ್ಲಿ ಪಟ್ಟಣಗಳಲ್ಲಿಯ ವಾತಾವರಣ ಇಲ್ಲ. ಇಲ್ಲಿಯಂತೆ ದೇಹಕ್ಕೆ ಕೋಲ್ಡ ಕ್ರೀಂ, ಸನ್ ಬರ್ನ್ ಕ್ರೀಂ ಬೇಕಾಗಿಲ್ಲ. ಇನ್ನೇನು ಚಳಿಗಾಲದಲ್ಲಿ ಮೈ ಸ್ವಲ್ಪ ನವೆ ತಡೆಯಲು ಶುದ್ಧ ಕೊಬ್ಬರಿ ಎಣ್ಣೆ ಸ್ನಾನದ ನಂತರ ತಿಳುವಾಗಿ ಸವರಿಕೊಳ್ಳುತ್ತಾರೆ ಕೆಲವರು. ಪೊಲ್ಯೂಷನ್ ಅಂತೂ ಇಲ್ಲವೇ ಇಲ್ಲ. ಹಳ್ಳಿಗೆ ಹೋಗಿ ಒಂದು ವಾರ ಇದ್ದರೆ ಸಾಕು ಮೈಯ್ಯೆಲ್ಲ ಸ್ಮೂತ್ ಆದ ಅನುಭವವಾಗುತ್ತದೆ.
ಇನ್ನು ಊರಿಗೊಂದು ಬೇಡವಾದ ಕಸ ಒಗೆಯುವ ಜಾಗ ಇದ್ದೇ ಇರುತ್ತದೆ. ಇದು ತಿಪ್ಪೆ ಎಂದು ಕರೆಸಿ ಕೊಳ್ಳುತ್ತದೆ. ಅಲ್ಲಿ ಊರವರೆಲ್ಲ ಬೇಡಾದ ಕಸ ಹಾಕುತ್ತಾರೆ. ಈ ಕಸದ ಗುಡ್ಡೆ ಜಾಸ್ತಿ ಆದಾಗ ಊರವರೆ ಎಲ್ಲ ಸೇರಿ ಕೆಲಸಗಾರರ ಸಹಾಯದಿಂದ ಅದಕ್ಕೊಂದಷ್ಟು ಮಣ್ಣು ಸುರಿದು. ಸಾಯಂಕಾಲ ಸೂರ್ಯ ಮುಳುಗುವ ಹೊತ್ತಲ್ಲಿ ಅದಕ್ಕೆ ಬೆಂಕಿ ಹಾಕಿ ಕೋಲಿನ ಸಹಾಯದಿಂದ ಅಲ್ಲಲ್ಲಿ ಕುಕ್ಕಿ ಪೂರ್ತಿ ಸುಡುವಂತೆ ನೋಡಿಕೊಳ್ಳುತ್ತಾರೆ. ಎಲ್ಲ ಉರಿದು ಬೂದಿಯಾದ ಮೇಲೆ ಅಗಲವಾಗಿ ಹರಡಿ ಪೂರ್ತಿ ಆರಿದ ಮೇಲೆ ಇದು ಸುಡು ಮಣ್ಣು ಎಂದು ಪರಿಗಣಿಸಲಾಗುತ್ತದೆ. ಉರಿವ ಬೆಂಕಿ, ಸೇವಿಸುವ ಗಾಳಿ, ಹರಿವ ನೀರಿಗೆ ಯಾವ ಶಾಸ್ತ್ರವೂ ಇಲ್ಲ ಅನ್ನುವ ನಂಬಿಕೆ ಜನರಲ್ಲಿ. ಈಗ ಇದು ಅತ್ಯುತ್ತಮವಾದ ಸುಡು ಮಣ್ಣು. ಗದ್ದೆ ತೋಟಗಳ ಬೆಳೆಗಳಿಗೆ ಹಾಕಲು ಊರವರು ಹಂಚಿಕೊಳ್ಳುತ್ತಾರೆ. ಇಲ್ಲಿಗೆ ಊರಲ್ಲಿ ಬೇಡಾದ ಕಸದ ವಿಲೇವಾರಿಯಾಯಿತು.
ಇನ್ನು ಗೊಬ್ಬರ ಗುಂಡಿಯ ವಿಚಾರ. ಇಲ್ಲೂ ಕೂಡ ವರುಷಕ್ಕೆ ಒಮ್ಮೆ ಏಪ್ರಿಲ್’ನಿಂದ ಜೂನ್ ತಿಂಗಳಲ್ಲಿ ಊರಿನ ಪ್ರತಿಯೊಬ್ಬ ಮನೆಯವರು ಅವರವರ ಮನೆಯ ಗೊಬ್ಬರ ಗುಂಡಿಯನ್ನು ಸುಮಾರು ಹತ್ತು ಹದಿನೈದು ಜನ ಆಳುಗಳ ಸಹಾಯದಿಂದ ತೆಗೆಸಿ ಅಡಿಕೆ ತೋಟಕ್ಕೆ ಹಾಕಿಸುತ್ತಾರೆ. ಈ ಗೊಬ್ಬರ ಗುಂಡಿಯಲ್ಲಿ ಹಸುಗಳ ಸೆಗಣಿ ಗಂಜಲು ಸೊಪ್ಪು ಇನ್ನಿತರ ಹಸಿ ವಸ್ತುಗಳ ಸಮ್ಮಿಶ್ರಣ ಕೊಳೆತು ಉತ್ತಮ ಗೊಬ್ಬರವಾಗಿ ಪರಿವರ್ತನೆ ಹೊಂದಿರುತ್ತದೆ. ತೋಟದ ಬೆಳೆಗೆ, ತರಕಾರಿ, ಹೂವು ಹಣ್ಣು ಯಾವುದೆ ಗಿಡಗಳಿಗೆ ಹಾಕಿದರೂ ಸಮೃದ್ಧಿಯ ಬೆಳೆ ಕೊಡುತ್ತದೆ. ಒಮ್ಮೆ ಹಾಕಿದರೆ ವರ್ಷವೆಲ್ಲ ಇದರ ಸತ್ವ ಭೂಮಿ ಸೇರಿ ವಲವತ್ತಾದ ಮಣ್ಣಾಗಿ ಗಿಡಗಳು ನಳನಳಿಸುತ್ತವೆ. ಇದು ಉತ್ತಮ ಸಾವಯವ ಗೊಬ್ಬರ.
ಗೊಬ್ಬರ ತೆಗೆಯುವ ದಿನ ಇಲ್ಲೊಂದು ಸಂಭ್ರಮ ಮನೆ ಜನಕ್ಕೂ, ಊರವರಿಗೂ ಮತ್ತು ಕೆಲಸದಾಳುಗಳಿಗೂ. ಅದೇನೆಂದರೆ ಈ ದಿನ ಅಪರೂಪದ ಪಾನಕದ ಸಮಾರಾಧನೆ ಎಲ್ಲರಿಗೂ. ಗೊಬ್ಬರ ತೆಗೆಯುವ ಮೊದಲನೇ ದಿನ ರಾತ್ರಿ ಹೆಸರು ಕಾಳು ನೀರಲ್ಲಿ ನೆನೆಸಿ ಮಾರನೆ ದಿನ ಅದನ್ನು ತೊಳೆದು ರುಬ್ಬುವ ಕಲ್ಲಿನಲ್ಲಿ ನುಣ್ಣಗೆ ರುಬ್ಬುತ್ತಾರೆ. ಅದಕ್ಕೆ ನೀರು ಬೆರೆಸಿ ಸೋಸಿ ಜೋನಿ ಬೆಲ್ಲ ( ಮಲೆನಾಡಿನಲ್ಲಿ ಸಿಗುವ ನೀರು ಬೆಲ್ಲ) ಹಾಕಿ ಕರಡಿ ಏಲಕ್ಕಿ ಪುಡಿ ಬೆರೆಸುತ್ತಾರೆ. ಇದಕ್ಕೆ ಹೆಸರು ಕಾಳಿನ ತಂಪು ಎಂದು ಕರೆಯುತ್ತಾರೆ. ಈ ತಂಪು ದೇಹಕ್ಕೆ ಪುಷ್ಟಿದಾಯಕ. ದಣಿವನ್ನು ಇಂಗಿಸುತ್ತದೆ. ಏಕೆಂದರೆ ಒಮ್ಮೆ ಬೆಳಿಗ್ಗೆ ಗೊಬ್ಬರ ತೆಗೆಯಲು ಶುರು ಮಾಡಿದರೆ ಗೊಬ್ಬರ ಗುಂಡಿ ಖಾಲಿ ಆಗುವವರೆಗೂ ಕೈ ಬಿಡುವಿಲ್ಲ. ಊಟ ಇಲ್ಲ. ಆಗಾಗ ಈ ತಂಪು ಕುಡಿದು ದಣಿವಾರಿಸಿಕೊಳ್ಳುತ್ತಾರೆ. ಒಬ್ಬೊಬ್ಬರ ಮನೆಯಲ್ಲಿ ಎರಡು ಮೂರು ಲಾರಿ ಗೊಬ್ಬರ ಶೇಖರಣೆ ಆಗಿರುತ್ತದೆ. ತೆಗೆಯಲು ಎಷ್ಟು ಸಮಯ ಬೇಕು? ತೋಟದ ಗಿಡಗಳಿಗೆ ಮನೆ ಜನರೂ ಸೇರಿ ಗೊಬ್ಬರ ಹರಡುವ ಕಾಯಕ. “ಹಾ.. ಪಾನಕ ಮಾಡಿದ್ರನೊ? ಬರ್ತಿ ತಡಿ ಕುಡಿಯಲ್ಲೆ” ಅಲ್ಲೊಂದು ಊರವರ ತಮಾಷೆ. ಎಲ್ಲರೂ ಒಟ್ಟಾಗಿ ತಮಾಷೆ ಮಾಡಿಕೊಂಡು ಕಳೆಯುವ ದಿನ ಅವರವರ ಮನೆ ಗೊಬ್ಬರ ತೆಗೆಯುವ ದಿನ. ನಾವು ಶಾಲೆಗೆ ಹೋಗುವಾಗ ಆ ದಿನ ಶಾಲೆಗೆ ಚಕ್ಕರ್ ಹಾಕಿದ್ದೂ ಇದೆ.
ಗೊಬ್ಬರ ಎಲ್ಲ ತೆಗೆದಾದ ಮೇಲೆ ಎಲ್ಲರೂ ಕೈ ಕಾಲು ತೊಳೆದು ಟೀ ಸೇವನೆ ಎಲೆ ಅಡಿಕೆ ಮರ್ಯಾದೆ ಆದ ಮೇಲೆ ಗೊಬ್ಬರ ಗುಂಡಿಯಲ್ಲಿ ಕರ್ಪೂರ ಹಚ್ಚಿ ತೆಂಗಿನ ಕಾಯಿ ಒಡೆದು ಪೂಜೆ ಮಾಡುವ ಪದ್ದತಿ ಇದೆ. ಇಲ್ಲಿ ಎಲ್ಲ ಆಳುಗಳಿಗೆ ದಕ್ಷಿಣೆ ಇದ್ದವರು ವಸ್ತ್ರ ದಾನದ ರೂಪದಲ್ಲಿ ಕೊಡುತ್ತಾರೆ. ಪಾಪ! ಎಷ್ಟು ಶ್ರಮ ವಹಿಸಿ ಗೊಬ್ಬರ ತುಂಬಿದ ಬುಟ್ಟಿ ತಲೆಯ ಮೇಲೆ ಹೊತ್ತು ಅದೆಷ್ಟು ಸಾರಿ ಮನೆಯಿಂದ ತೋಟಕ್ಕೆ ತೋಟದಿಂದ ಮನೆಗೆ ನಡೆಯುತ್ತಾರೊ ಏನೋ! ಶ್ರಮ ಜೀವಿಗಳು ಇವರು.
ಇವೆಲ್ಲ ಪದ್ಧತಿ, ಆಚರಣೆಗಳು ಈಗೀಗ ಬದಲಾದರೂ ಗೊಬ್ಬರ ಗುಂಡಿಗಳು ಆಧುನಿಕತೆಯ ದಾರಿ ಹಿಡಿದರೂ ಹಳ್ಳಿಗಳಲ್ಲಿ ಗೊಬ್ಬರದ ಗುಂಡಿ ಇದ್ದೇ ಇದೆ. ಇದು ತಿಪ್ಪೆಯಲ್ಲ ಭೂಮಿಯ ಮಣ್ಣು ಫಲವತ್ತಾಗಿ ಮಾಡುವ ಸಾವಯವ ಗೊಬ್ಬರ.
ಇನ್ನು ಹಳ್ಳಿಗಳಲ್ಲಿ ಮೊದಲು ಮಾನವನ ದಿನ ನಿತ್ಯದ ಕರ್ಮಗಳಿಗೆ ಶೌಚಾಲಯ ಇರಲಿಲ್ಲ. ಬಯಲು ಜಾಗಕ್ಕೆ ಹೋಗುವ ರೂಢಿ ಇತ್ತು. ಈಗ ಪ್ರತಿಯೊಂದು ಮನೆಯಲ್ಲಿ ಶೌಚಾಲಯವಿದೆ. ವೈಜ್ಞಾನಿಕ ರೀತಿಯಲ್ಲಿ ಗುಂಡಿ ತೋಡಿ ಮೇಲೆ ಕಾಂಕ್ರೀಟನಿಂದ ಮುಚ್ಚಲಾಗುತ್ತಿದೆ. ನೈರ್ಮಲ್ಯಗಳು ಮಣ್ಣಿನಲ್ಲಿ ಮಣ್ಣಾಗಿಬಿಡುತ್ತವೆ.
ಬೆಳೆದ ಪೈರು ಕೈಗೆ ಬಂದ ಮೇಲೆ ತೋಟ ಗದ್ದೆ ಎಲ್ಲ ಕಡೆ ಬೇಡಾದ ಕಸ ಕಡ್ಡಿ ತೆಗೆದು ಅವರವರ ಜಾಗಕ್ಕೆ ಸಂಬಂಧಪಟ್ಟಲ್ಲಿ ಶೇಖರಿಸಿ ಮಣ್ಣು ಹಾಕಿ ಬೆಂಕಿ ಹಚ್ಚಿ ಸುಡು ಮಣ್ಣಾಗಿ ಪರಿವರ್ತಿಸುತ್ತಾರೆ. ತೋಟಕ್ಕೆ ಸಂಬಂಧಪಟ್ಟ ಬೆಟ್ಟಗಳಲ್ಲಿ ವಿಶಿಷ್ಟವಾದ ಗಿಡದ ಟೊಂಗೆಯಿಂದಲೇ ಮಾಡಿದ ಪೊರಕೆಯಲ್ಲಿ ಒಣಗಿದ ಎಲೆ ಎಲ್ಲ ಗುಡಿಸಿ ತಂದು ಖಾಲಿ ಮಾಡಿದ ಗೊಬ್ಬರ ಗುಂಡಿಗೆ ಸುರಿಯುತ್ತಾರೆ. ಒಣಗಿದ ಎಲೆಗಳನ್ನು ತುಂಬಿಕೊಂಡು ಬರಲು ಸೊಣಬಿನ ದಾರದಿಂದ ಮಾಡಿದ ಹೆಣಿಕೆ ರೂಪದ ಚೀಲ. ಇದಕ್ಕೆ ಚೌಳಿ ಎಂದು ಹೇಳುತ್ತಾರೆ. ಇದು ಕಂಡರೆ ಮಾಣಿ ಉಂಡರೆ ಗೋಣಿ ಅನ್ನುವಂತೆ ತುಂಬಾ ಎಲೆಗಳನ್ನು ಇದರಲ್ಲಿ ತುಂಬ ಬಹುದು.
ಈಗ ಹೇಳಿ. ಹಳ್ಳಿ ಅಂದರೆ ಅಲ್ಲಿ ವಾತಾವರಣ ಚಂದ, ಅವರ ಸಂಪ್ರದಾಯ ಚಂದ, ಅವರ ಪದ್ದತಿ,ಆಚರಣೆ ಎಷ್ಟು ಚಂದ. ಅನಾದಿ ಕಾಲದಿಂದ ರೂಢಿಸಿಕೊಂಡು ಬಂದ ರೂಢಿ. ಈಗ ಕೆಲಸದವರು ಸಿಗದೆ ಪರದಾಡುವಂತಾಗಿದೆ. ಕೆಲವು ಕೆಲಸ ಮಾಡದೇ ಇದ್ದರೆ ಗತಿ ಇಲ. ಆಧುನಿಕ ಉಪಕರಣ ಬಳಸಿಯೊ ಇಲ್ಲ ಊರವರೆಲ್ಲ ಸೇರಿ ಮುರಿ ಆಳು ಲೆಕ್ಕ (ಅಂದರೆ ಇವತ್ತು ನೀನು ಪಕ್ಕದ ಮನೆಗೆ ಹೋದರೆ ಇನ್ನೊಂದು ದಿನ ಅವನು ನಿಮ್ಮ ಮನೆಗೆ ಬರಬೇಕು. ಸಂಬಳ ಇಲ್ಲ )ದಲ್ಲಿ ಕೆಲಸ ಪೂರೈಸಿಕೊಳ್ಳುತ್ತಿದ್ದಾರೆ.
ಪಟ್ಟಣ ಪ್ರದೇಶದಲ್ಲೂ ನಿಯಮಿತವಾಗಿ ತಮ್ಮ ಪ್ರದೇಶ ಸ್ವಶ್ಚ ಮಾಡುವ ಪದ್ದತಿ ಜನರ ಮನಸ್ಸಿನಲ್ಲಿ ಮೂಡಿದಲ್ಲಿ ಇಲ್ಲೂ ಕೂಡಾ ತಿಪ್ಪೆಯನ್ನು ತೊಲಗಿಸಬಹುದು. ಸರ್ಕಾರ ಮಾಡುತ್ತಿರುವ ಸುಧಾರಿತ ಪದ್ಧತಿಗೆ ಜನ ಕೈ ಜೋಡಿಸಬೇಕಷ್ಟೆ. ಎಲ್ಲಂದರಲ್ಲಿ ಕಸ ಎಸೆಯುವ ಬುದ್ಧಿ ಬದಲಾಗಬೇಕು. ಆಗ ಮೋದಿ ಕಂಡ ಸ್ವಚ್ಛ ಭಾರತ ನಿರ್ಮಾಣ ಖಂಡಿತಾ ಆಗಲು ಸಾದ್ಯ!
-ಗೀತಾ ಹೆಗಡೆ
geeta.kalmane@gmail.com
Facebook ಕಾಮೆಂಟ್ಸ್