X
    Categories: ಕಥೆ

ಲಾಲಿಪಾಪ್

ಅದು ನಗರದ ಹೊರವಲಯದಲ್ಲಿದ್ದ ಐಷಾರಾಮಿ ಅಪಾರ್ಟ್ಮೆಂಟ್ ’ಸ್ಕೈ ಲೈನ್’. ಹೆಸರೇ ಸೂಚಿಸುವ೦ತೆ ಆಕಾಶದೆತ್ತರ ಎದ್ದು ನಿ೦ತಿತ್ತು. ಅದರ ಹತ್ತನೇ ಮಹಡಿಯ ಫ್ಲಾಟ್ ಒಂದರಲ್ಲಿ ವಾಸವಾಗಿದ್ದಳು ಕರುಣಾ. ಸಮಯ ಬೆಳಗ್ಗೆ ಎಂಟು ಗಂಟೆ ಕಳೆದು ಐದು ನಿಮಿಷ. ಗಂಡ ಇನ್ನೂ ರಾತ್ರಿ ಶಿಫ್ಟ್ ಮುಗಿಸಿ ಬರಬೇಕಷ್ಟೆ. ಕರುಣಾಳು ಬೆಳಗ್ಗಿನ ಶಿಫ್ಟ್ ಗೆ ಹೊರಡುತ್ತಿದ್ದಳು. ಗಂಡ, ಹೆಂಡತಿ ಇಬ್ಬರೂ ಸಾಫ್ಟ್ವೇರ್ ಕಂಪನಿಗಳಲ್ಲಿ  ದುಡಿಯುತ್ತಿದ್ದರಿಂದ ಕೆಲವೊಮ್ಮೆ ಮುಖನೋಡುವುದು ವೀಕೆಂಡ್ ನಲ್ಲಿ ಮಾತ್ರ ಎಂಬಂತಾಗಿತ್ತು.  ಮನೆಗೆಲಸದ ಕನಕ ಇನ್ನೂ ಬಂದಿಲ್ಲ. ಇತ್ತೀಚೆಗೆ ಮಗನಿಗೆ ಹುಷಾರಿಲ್ಲವೆಂದು ಆಗಾಗ ರಜೆ ಹಾಕುತ್ತಿರುವುದು ಕರುಣಾಳಿಗೆ ಸಂಕಷ್ಟ ತಂದೊಡ್ಡಿತ್ತು. ಬೆಳಗ್ಗೆ ಅಡುಗೆ ಮಾಡಿ ತಾನೂ ಹೊರಟು ಮಗ ರಾಹುಲ್ ನನ್ನು ಹೊರಡಿಸಿ ಕೆಜಿ ಸ್ಕೂಲಿಗೆ ಕಳುಹಿಸುವಷ್ಟರಲ್ಲಿ  ಹೈರಾಣಾಗುತ್ತಿದ್ದಳು. ಕನಕಳಿಗೊಮ್ಮೆ ಫೋನ್ ಮಾಡಲೇ ಎಂದು ಯೋಚಿಸಿದಳು. ಅದೇ ಸವಕಲು ಕಾರಣ ಕೊಡುತ್ತಾಳೆ ಎಂದು ಬೇಡವೆಂದುಕೊಂಡಳು. ಅವಳು ಯಾಕೋ ಸುಳ್ಳು ಹೇಳಿ ರಜ ಹಾಕುತ್ತಿರಬಹುದೇ ಎಂದು ಸಂಶಯ ಮನದ ಮೂಲೆಯಲ್ಲಿ ಮೂಡದೆ ಇರಲಿಲ್ಲ. ಬೇರೆ ಯಾರಾದರು ಸಿಕ್ಕಿದರೆ ಇವಳನ್ನು ಬಿಡಬೇಕೆಂದು ಕೊಳ್ಳುತ್ತಾ ಬೇಗಬೇಗನೆ ಅಡುಗೆ ಮಾಡಿ, ಟಿಫಿನ್ ರೆಡಿ ಮಾಡಿ  ಬೆಳಗ್ಗಿನ ತಿಂಡಿಯನ್ನು ರಾಹುಲ್ ಗೂ ತಿನ್ನಿಸಿ ತಾನು ತಿಂದು ಹೊರಡಲನುವಾದಳು.

ಸ್ವಲ್ಪ ಹಠಮಾರಿ ಸ್ವಭಾವದ ರಾಹುಲ್ ಗೆ ತಿಂಡಿ ತಿನ್ನಿಸಿ ಹೊರಡಿಸುವಷ್ಟರಲ್ಲಿ ಸಾಕು ಸಾಕಾಗಿತ್ತು ಅವಳಿಗೆ. ಗಂಟೆ ಈಗಾಗಲೇ ಎಂಟು ಐವತ್ತು, ಇನ್ನು ಹತ್ತೇ ನಿಮಿಷದಲ್ಲಿ ರಾಹುಲ್ ನ ಸ್ಕೂಲ್ ಬಸ್ ಹಾಗೂ ತನ್ನ ಕಂಪನಿ ಬಸ್ ಎರಡೂ ಬಂದು ನಿಂತಿರುತ್ತೆ ಅಂತ ಲಗುಬಗೆಯಿಂದಲೇ ಮನೆ ಲಾಕ್ ಮಾಡಿ ಧಾವಿಸಿದಳು ಲಿಫ್ಟ್ ಪಕ್ಕ.

ಲಿಫ್ಟ್ ಇನ್ನೂ ಕೆಳಗಡೆಯಿಂದ ಬರಬೇಕಷ್ಟೇ, ಅಸಹನೆಯಿಂದಲೇ ಕಾದಳು ಪದೇ ಪದೇ ಲಿಫ್ಟ್ ಬಟನ್ ಒತ್ತುತ್ತಾ. ರಾಹುಲ್ ಅಂತೂ ನಿಂತಲ್ಲಿ ನಿಲ್ಲುವವನಲ್ಲ. ಅಲ್ಲಿ ಇಲ್ಲಿ ಓಡಲು ಯತ್ನಿಸುತ್ತಾ ಆಗಾಗ ಅವಳ ಕೈಯನ್ನು ಜಗ್ಗುತ್ತಿದ್ದ.

ಲಿಫ್ಟ್ ಬಂದು ಓಪನ್ ಆಯಿತು. ಕೂಡಲೇ ರಾಹುಲ್ ಅಮ್ಮನ ಕೈಯಿಂದ ಬಿಡಿಸಿಕೊಂಡು ಒಳಗೆ ಓಡಿದ. ತಾನು ಹಿಂದಿನಿಂದ ಲಿಫ್ಟನ್ನೇರಿದಳು. ಇಬ್ಬರೂ ಲಿಫ್ಟಿನ ಹಿಂದಿನ ಅಂಚಲ್ಲಿ ನಿಂತರು. ಲಿಫ್ಟ್ ಅಪರೇಟರ್ ನ ಸ್ಟೂಲ್ ನಲ್ಲಿ ಯಾರೋ ಒಬ್ಬ ಹುಡುಗ ಕೂತಿದ್ದ. ತಲೆ ತಗ್ಗಿಸಿ ತನ್ನ ಕೆಲಸದಲ್ಲಿ ಮಗ್ನ ನಾಗಿದ್ದ.

“ಸೀದಾ  ಗ್ರೌಂಡ್ ಫ್ಲೋರ್ ಗೆ ಹೋಗಪ್ಪ, ಲೇಟಾಯ್ತು. ” ಅಂತಂದ್ಲು ಕರುಣಾ.

“ಆಯಿತು ಮ್ಯಾಡಮ್” ಅಂತಂದ ತನ್ನ ಕ್ಷೀಣ ಸ್ವರದಲ್ಲಿ.

“ಲಿಫ್ಟ್ ಆಪರೇಟರ್ ಎಲ್ಲಿ” ಎಂಬ ಅವಳ  ಪ್ರಶ್ನೆ ಗೆ “ತಂದೆಗೆ ಜ್ವರ” ಎಂದು ಅದೇ ನಿರ್ಲಿಪ್ತ ಭಾವದೊಂದಿಗೆ.

ಸ್ವಲ್ಪಾನೂ ಬುದ್ದಿ ಇಲ್ಲದ ಜನಗಳು ಚಿಕ್ಕ ಮಕ್ಕಳನ್ನೆಲ್ಲ ಯಾಕೆ ಹೀಗೆ ಕೆಲಸಕ್ಕೆ ಹಚ್ಚುತ್ತಾರೆ ಅಂತ ಮನಸ್ಸಿನಲ್ಲೇ ಬೈದುಕೊಂಡಳು.

“ನೀನು ಯಾಕೆ ಶಾಲೆಗೆ ಹೋಗಿಲ್ಲ, ಸಣ್ಣ ಮಕ್ಳು ಕೆಲಸ ಮಾಡಬಾರದು ಅಂತ ಗೊತ್ತಿಲ್ವಾ ನಿನ್ನ ತಂದೆಗೆ? ” ಅಂತ ಸ್ವಲ್ಪ ಗದರಿಸುವ ಸ್ವರದಲ್ಲಿ ಕೇಳಿದಳು .

ಈ ಪ್ರಶ್ನೆ ತನಗಲ್ಲವೆಂಬಂತೆ ಅವನು ತನ್ನ ಕಿಸೆಯಿಂದ ಒಂದು ಲಾಲಿಪಾಪ್ ತೆಗೆದು ಬಾಯಿಗಿಟ್ಟ. ಲಾಲಿಪಾಪ್ ನೋಡುತ್ತಲೇ ಅಷ್ಟು ಹೊತ್ತು ಸುಮ್ಮನಿದ್ದ ರಾಹುಲ್ ” ಅಮ್ಮ ನಂಗೆ ಆ ಲಾಲಿಪಾಪ್ ಬೇಕು” ಅಂತ ಕೂಗುತ್ತಾ ಹಠ ಮಾಡಲು ಶುರುವಿಟ್ಟ.

ರಾಹುಲ್ ನ ಕೈಯನ್ನು ಬಲವಾಗಿ ಹಿಡಿದಿಟ್ಟಿದ್ದರೂ ಆ ಹುಡುಗನ ಕಡೆ ಎಳೆಯ ತೊಡಗಿದ. ಇದನ್ನು ಗಮನಿಸಿದ ಆ ಹುಡುಗ ತನ್ನ ಕಿಸೆಯಲ್ಲಿದ್ದ ಇನ್ನೊಂದು ಲಾಲಿಪಾಪ್ ತೆಗೆದು ರಾಹುಲ್ ನತ್ತ  ಎಸೆದ. ಅದು ರಾಹುಲ್ ನ ಮುಂದೆ ನೆಲದ ಮೇಲೆ ಬಿತ್ತು. ರಾಹುಲ್ ಕೂಡಲೇ ಅದನ್ನು ಹೆಕ್ಕಲು ಬಗ್ಗಿದ. ಕರುಣಾಳಿಗೆ ಬಂತು ಎಲ್ಲಿಲ್ಲದ ಕೋಪ. ರಪರಪನೆ ಎರಡೇಟು ಬಿಗಿದು

“ಕೆಳಗೆ ಬಿದ್ದಿದ್ದನ್ನು ಹೆಕ್ಕಿ ತಿನ್ನಬಾರದೆಂದು ಎಷ್ಟು ಸಲ ಹೇಳ ಬೇಕು ನಿಂಗೆ ?”  ಅಂತ ಬೈಯುತ್ತಾ ಅವನನ್ನು ಎತ್ತಿಕೊಂಡಳು. ಅವನ ಅಳು ತಾರಕಕ್ಕೇರಿತ್ತು.

ಕರುಣಾಗೆ ಈಗ ಆ ಹುಡುಗನ ಮೇಲೆ ವಿಪರೀತ ಕೋಪ ಬಂದಿತ್ತು. ಲಾಲಿಪಾಪ್ ನೇರವಾಗಿ ಕೈಯಲ್ಲಿ ಕೊಡಬಾರದಿತ್ತೆ, ಹಾಗೆ ನಾಯಿಗೆ  ಎಸೆದಂತೆ ಯಾಕೆ ಎಸೆದ? ಸ್ವಲ್ಪ ಕೂಡ ಮ್ಯಾನರ್ಸ್ ಇಲ್ಲ, ಅಂತಂದುಕೊಳ್ಳುತ್ತಿರುವಾಗ ಲಿಫ್ಟ್ ಗ್ರೌಂಡ್ ಪ್ಲೋರ್ ಗೆ ಬಂದು ನಿಂತಿತ್ತು. ಸಿಟ್ಟಿನಿಂದ ಹೊರ ಬರಬೇಕಾದರೆ ಆ ಹುಡುಗ ಸ್ಟೂಲಿನಿಂದ ಇಳಿದು ತನ್ನ ಪೋಲಿಯೋ ಪೀಡಿತ ಕಾಲು ಎಳೆದುಕೊಂಡು ಕೆಳಗೆ ಬಿದ್ದಿದ್ದ ಲಾಲಿಪಾಪ್ ಹೆಕ್ಕುವುದು ಕಾಣಿಸಿತು.

ಲಿಫ್ಟ್ನ ಬಾಗಿಲು ಮುಚ್ಚುತ್ತಿರುವಾಗಲೇ ಕಂಡ ಈ ದೃಶ್ಯ ನೋಡಿ ಕರುಣಾಳ ಕೋಪ ತಾಪವೆಲ್ಲ ಜರ್ರನೆ ಇಳಿದು ಹೋಯಿತು. ಮಗನನ್ನ ಶಾಲೆ ಬಸ್ಸಿಗೆ ಹತ್ತಿಸಿ ತನ್ನ ಬಸ್ ಏರಿ ಕುಳಿತಳು. ಮನಸ್ಸು ತುಂಬಾ ಅದೇ ದೃಶ್ಯ ಪದೇ ಪದೇ ಮೂಡಿ ಮರೆಯಾಗುತಿತ್ತು. ಯಾವತ್ತಿನ ಹಾಗೆ ಬಸ್ ಏರಿದ ಕೂಡಲೇ ಹಾಡು ಕೇಳಲು ಮನಸ್ಸೇ ಬರಲಿಲ್ಲ. ಈ ಯಾಂತ್ರಿಕ ಜೀವನದಲ್ಲಿ ತಾನೆಷ್ಟು  ಇನ್ಸೆನ್ಸಿಟಿವ್  ಆಗಿದ್ದೆ ಎಂಬುದರ ಅರಿವಾಗಿತ್ತು. ವಿಷಯ ಗೊತ್ತಿಲ್ಲದೇ ಉಳಿದವರ ಬಗ್ಗೆ ತನ್ನ ಮನಸ್ಸಿನಲ್ಲಿ ಮೂಡಿದ ಭಾವನೆಗಳು ಎಷ್ಟು ಕ್ರೂರವಾಗಿತ್ತು ಎಂದು ನೆನೆಸಿ ಪಶ್ಚಾತ್ತಾಪ ಪಡುತಿತ್ತು. ಅಟ್ಲೀಸ್ಟ್ ತನ್ನ ಸುತ್ತಮುತ್ತಲಿನವರ ಬಗ್ಗೆಯಾದರೂ ಸ್ವಲ್ಪ ಕಾಳಜಿ ವಹಿಸಬೇಕೆಂದುಕೊಂಡಳು. ಈ ನಿಟ್ಟಿನಲ್ಲಿ ಮೊದಲು ಕನಕ ಮತ್ತು ಲಿಫ್ಟ್ ಆಪರೇಟರ್ ನ ಕುಟುಂಬಕ್ಕೆ ಸಹಾಯ ಮಾಡಬೇಕು, ಅದಕ್ಕೆ ತನ್ನ ಪತಿರಾಯನನ್ನು ಹೇಗಾದರು ಒಪ್ಪಿಸಬೇಕು ಅಂತ ನಿರ್ಧಾರ ಮಾಡಿದಾಗಲೇ ಮನಸ್ಸು ತುಂಬಾ ಹಗುರವಾದಂತಿತ್ತು. ಬಸ್ಸು ಟ್ರಾಫಿಕ್ ಎಂಬ ಮಹಾಸಾಗರದಲ್ಲಿ ಮುಳುಗಿ ಮರೆಯಾಯಿತು.

– Harikiran H

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post