“ನಾಲ್ಕು ದಿನ ನಾವು ಯಾರೂ ಊರಲ್ಲಿರುವುದಿಲ್ಲ, ನೀನೇ ಮನೆ ಕಾವಲು ಕಾಯಬೇಕು. ಈ ಬಾರಿ ಪಕ್ಕದಲ್ಲಿರುವ ಅಣ್ಣ ತಮ್ಮಂದಿರ ಮನೆಯವರಿಗಾಗಲೀ, ಕೆಲಸದವರ ಮನೆಯವರಿಗಾಗಲೀ ಯಾರಿಗೂ ಮನೆಯಲ್ಲಿ ಉಳಿಯಲು ಹೇಳುವುದಿಲ್ಲ. ಬೆಳಿಗ್ಗೆ ಸಂಜೆ ತಮ್ಮನ ಹೆಂಡತಿ ಬಂದು ಹಾಲು ಕರೆದು ಹೋಗುತ್ತಾಳೆ. ಇದನ್ನು ಬಿಟ್ಟರೆ ಇನ್ಯಾರು ಬರಲಾರರು. ಆದ್ದರಿಂದ ನೀನೇ ತೋಟ ಮನೆ ಕಾಯಬೇಕು” ಎಂದು ಸಿಂಗಪ್ಪಯ್ಯ ಹಾಡ್ಯದ ಮಧ್ಯದಲ್ಲಿರುವ ‘ರಂಜದ ಮರ’ದ ಕೆಳಗಿನ ಪಂಜೂರ್ಳಿಯ ಕಲ್ಲಿಗೆ ಹೇಳುತ್ತಿದ್ದರು. ಅದೇ ಸಮಯಕ್ಕೆ ಸಿಂಗಪ್ಪಯ್ಯರ ಧರ್ಮಪತ್ನಿ ಮಡಿಯಲ್ಲೇ ಮಾಡಿದ ಬೆಲ್ಲದ ಅವಲಕ್ಕಿಯನ್ನು ತಂದರು. ಪ್ರತೀ ವರ್ಷ ಆಶಾಢ ಮಾಸದಲ್ಲಿ ಸಿಂಗಪ್ಪಯ್ಯರ ಹಾಡ್ಯದಲ್ಲಿರುವ ಪಂಜೂರ್ಳಿಗೆ ದೈವದ ಹರಕೆ ಸಂದಾಯವಾಗುತ್ತಿತ್ತು. ಇನ್ನೆರೆಡು ದಿನಗಳಲ್ಲಿ ಕರ್ಕಾಟಕ ಮಾಸ ಆರಂಭವಾಗುತ್ತಿತ್ತು. ಕರ್ಕಾಟಕ ಆರಂಭಕ್ಕೂ ಮುನ್ನವೇ ಪಂಜೂರ್ಳಿಗೆ ವರ್ಷದ ಬಾಬ್ತು ನೀಡಲೇಬೇಕು. ಇಲ್ಲದಿದ್ದರೆ ರಾತ್ರಿ ಮನೆಯ ಮುಂಭಾಗದಲ್ಲಿ ಗೆಜ್ಜೆಯ ಶಬ್ಧ ಮಾಡುತ್ತದೆ, ಬಾಗಿಲು ಬಡಿಯುತ್ತದೆ. ಇದರಿಂದ ಅದಕ್ಕೇನೋ ಹುಚ್ಚಾಟವೆಂದರೆ ಮನೆಯವರಿಗೆಲ್ಲಾ ಹೆದರಿಕೆ. ಇದಾದರೂ ಹಾಳಾಗಿ ಹೋಗಲಿ ಮತ್ತೂ ತಡಮಾಡಿದರೆ ದನಕರುಗಳನ್ನು ಕಾಣೆ ಮಾಡಿ ಬಿಡುತ್ತದೆ. ಎಷ್ಟು ಹುಡುಕಿದರೂ ಹರಕೆ ಒಪ್ಪಿಸುವತನಕ ಅವುಗಳು ಸಿಗಲಾರವು. ಇದೊಂದು ವಿಷಯದಲ್ಲಿ ಮಗುವಿನಂತೆ ಹಠ ಮಾಡುತ್ತದೆ ಎಂದು ಸಿಂಗಪ್ಪಯ್ಯ ದೈವಕ್ಕೆ ಹರಕೆ ತೀರಿಸುತ್ತಿದ್ದರು.
ಪಂಜೂರ್ಳಿಯೂ ಹಾಗೆಯೇ, ತನ್ನ ನಂಬಿದ ಕುಟುಂಬದ ರಕ್ಷಣೆಯ ವಿಷಯದಲ್ಲಿ ಯಾವತ್ತೂ ಒಂದು ಹೆಜ್ಜೆ ಮುಂದೆಯೇ. ‘ಘಟಾನುಘಟಿ ಪಂಜೂರ್ಳಿ’ಎಂದೇ ಸುತ್ತಮುತ್ತಲೆಲ್ಲಾ ಹೆಸರು ಪಡೆದಿತ್ತು. ಅದು ಸಿಂಗಪ್ಪಯ್ಯರ ಕುಟುಂಬದವರು ತಲೆತಲಾಂತರದಿಂದ ನಂಬಿಕೊಂಡು ಬಂದ ದೈವ. ಸಿಂಗಪ್ಪಯ್ಯರ ತಂದೆ ಕಾಲದಲ್ಲಿ ವರ್ಷಕ್ಕೊಮ್ಮೆ ಘಟ್ಟದ ಕೆಳಗಿನವರನ್ನು ಕರೆಸಿ ಭೂತದ ಕೋಲ ಮಾಡಿಸುತ್ತಿದ್ದರು. ವರ್ಷದಲ್ಲಿ ಎರೆಡು ಮೂರು ಬಾರಿ ಗಣವೂ ಬರುತ್ತಿತ್ತು. ಹೇಳಿಕೆ ಕೇಳಿಕೆಗೆಂದು ಸುತ್ತಮುತ್ತಲಿನವರೆಲ್ಲಾ ಸೇರುತ್ತಿದ್ದರು. ಸಿಂಗಪ್ಪಯ್ಯರ ತಂದೆಯವರ ಮಾತೆಂದರೆ ಅದಕ್ಕೆ ವೇದ ವಾಕ್ಯ. ಯಜಮಾನನ ಆಜ್ಞೆಯನ್ನು ಶಿರಸಾ ವಹಿಸಿ ಪಾಲಿಸುತ್ತಿತ್ತು. ಸಿಂಗಪ್ಪಯ್ಯರ ತಂದೆ ಕಾಲಕ್ಕೆ ಸಂಬಂಧಿಸಿದ ಪಂಜೂರ್ಳಿಯ ಹಲವಾರು ಕತೆಗಳು ಇನ್ನೂ ಜೀವಂತವಾಗಿದ್ದವು.
ಪ್ರತಿನಿತ್ಯ ಸಿಂಗಪ್ಪಯ್ಯ ತಂದೆ ಬೆಟ್ಟದ ಆಚೆಗಿನ ಗದ್ದೆಯಿಂದ ಕತ್ತಲಾದ ಮೇಲೆ ಒಬ್ಬರೇ ನಡೆದುಕೊಂಡು ಬರುವಾಗ ತಾನೂ ಅವರನ್ನು ಹಿಂಬಾಲಿಸುತ್ತಿದ್ದೇನೆಂದು ಅವರಿಗೆ ತಿಳಿಸಲು ಮನುಷ್ಯರಂತೆಯೇ ಹೆಜ್ಜೆಯ ಶಬ್ದ ಮಾಡುತ್ತಿತ್ತು. ಸಿಂಗಪ್ಪಯ್ಯರ ತಂದೆ ಮನೆಯ ಅಂಗಳಕ್ಕೆ ಕಾಲಿಟ್ಟ ನಂತರವೇ ತಾನು ನಿರ್ಗಮಿಸುತ್ತಿದ್ದದ್ದು. ಹೊರಡುವ ಸೂಚನೆಯಾಗಿ ಅಂಗಳದ ಆಚೆಗಿನ ಮಾವಿನ ಮರದ ರೆಂಬೆಯನ್ನೊಮ್ಮೆ ಗಲಗಲ ಅಲುಗಾಡಿಸುತ್ತಿತ್ತಂತೆ. ಆಗ ಸಿಂಗಪ್ಪಯ್ಯರ ತಂದೆಯೂ ಸಹ ಗತ್ತಿನಿಂದ “ಹೂಂ ಹೊರಡು” ಎನ್ನುತ್ತಿದ್ದರಂತೆ. ಇದನ್ನು ನೋಡಿದವರಿಗೆ ಸಿಂಗಪ್ಪಯ್ಯರ ತಂದೆ ಮತ್ತು ಕಣ್ಣಿಗೆ ಕಾಣದ ಪಂಜೂರ್ಳಿ ಇಬ್ಬರ ಮೇಲೂ ಗೌರವ, ಭಯ ಎರಡೂ ಮೂಡುತ್ತಿತ್ತು.
ಇದರ ಜೊತೆಗೆ ಸಿಂಗಪ್ಪಯ್ಯ ಕೂಡ ತಮ್ಮ ಚಿಕ್ಕಂದಿನ ಅನುಭವ ಹೇಳುತ್ತಿದ್ದರು. ತಾವು ಚಿಕ್ಕ ಹುಡುಗನಿದ್ದಾಗ ಯಾರೋ ಒಮ್ಮೆ ರಾತ್ರಿ ಚಪ್ಪರದಲ್ಲಿ ಹರಡಿದ ಅಡಕೆಯನ್ನು ಕದಿಯಲು ಬಂದನಂತೆ. ಅಡಕೆಯನ್ನು ಚೀಲಕ್ಕೆ ತುಂಬಿಸಿ ಏಣಿ ಇಳಿಯುವಾಗ ಇಳಿಯಲಾಗದೇ ಬೆಳಗಿನ ಜಾವದ ವರೆಗೆ ಏಣಿಯಲ್ಲೇ ನಿಂತು ಬಿಟ್ಟಿದ್ದನಂತೆ. ಯಾರೋ ಅವನ ಕಾಲುಗಳನ್ನು ಗಟ್ಟಿಯಾಗಿ ಹಿಡಿದ ಅನುಭವವಾಗಿತ್ತಂತೆ. ಪಂಜೂರ್ಳಿಯೇ ಅವನ ಕಾಲುಗಳನ್ನು ಹಿಡಿದದ್ದು ಎಂದು ಗೊತ್ತಾಗಿ ಜೋರಾಗಿ ಕಿರುಚಿಕೊಂಡು ಅವರ ತಂದೆಯ ಬಳಿ ಕ್ಷಮಾಪಣೆ ಕೇಳಿದನಂತೆ. ಅವರ ತಂದೆ “ಹೂಂ ಬಿಡು” ಎಂದ ಮೇಲೇ ಪಂಜೂರ್ಳಿ ಅವನ ಕಾಲ್ಗಳನ್ನ ಬಿಟ್ಟು ಅವನು ಏಣಿಯಿಂದ ಇಳಿಯಲು ಆಗಿದ್ದಂತೆ. ಹೀಗೆ ಪಂಜೂರ್ಳಿಯ ಶೌರ್ಯದ ಕತೆಗಳು ಹಲವಾರು ಸುತ್ತಮುತ್ತಲ ಜನರ ಬಾಯಲ್ಲಿ ಹರಿದಾಡುತ್ತಿತ್ತು.
ಆದರೆ ಸಿಂಗಪ್ಪಯ್ಯರ ತಂದೆಯ ನಿಧನದ ನಂತರ ಪಂಜೂರ್ಳಿಯ ಆರ್ಭಟ ಏಕೋ ಕಡಿಮೆಯಾಗಿತ್ತು. ಪಂಜೂರ್ಳಿಯ ಮೇಲಿನ ಭಯ ಭಕ್ತಿ ಮಾತ್ರ ಜನರ ಮನಸ್ಸಿನಿಂದ ಪೂರ್ಣವಾಗಿ ಮಾಸಿರಲಿಲ್ಲ. ಯಾರಾದರೂ ಇದರ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದರೆ ಸಿಂಗಪ್ಪಯ್ಯರಿಗೆ ತಡೆಯುವುದಕ್ಕಾಗುತ್ತಿರಲಿಲ್ಲ. “ಪೇಟೆ ಸೇರಿದ ಮಂದಿಯ ಹೊಸ ಪೀಳಿಗೆ ಇಂತಹ ವಿಷಯವನ್ನು ನಂಬುವುದಿಲ್ಲ, ಯಾಕೆಂದರೆ ಅಂತಹ ಅನುಭವಗಳು ಪೇಟೆಯಲ್ಲಿ ಅವರಿಗಾಗಿರುವುದಿಲ್ಲ. ಅನುಭವವಿಲ್ಲದೇ ಯಾವುದನ್ನೂ ತಿರಸ್ಕರಿಸಬಾರದು” ಎಂದು ಸಮಜಾಯಿಷಿ ನೀಡುತ್ತಿದ್ದರು. “ಯಾರೋ ಕೇರಳದ ಮಾಂತ್ರಿಕರ ಬಳಿ ಪಂಜೂರ್ಳಿಗೆ ಕಣ್ಣುಕಟ್ಟು ಮಾಡಿಸಿದ್ದಾರೆ” ಎಂದೂ, ಜೊತೆಗೆ “ಈ ಕರೆಂಟು ಬಂದ ಮೇಲೆ ದೈವಗಳ ಪ್ರಭಾವ ಕಡಿಮೆಯಾಗಿದೆ” ಎಂದು ಮನುಷ್ಯನ ದೀಪಕ್ರಾಂತಿಗೆ ಬುನಾದಿ ಹಾಡಿದ ವಿದ್ಯುತ್ತನ್ನೇ ದೂರುತ್ತಿದ್ದರು. ಆದರೆ ಕೆಲ ಪಂಜೂರ್ಳಿಯ ಭಕ್ತರು “ಈ ಸಿಂಗಪ್ಪಯ್ಯ ಭೂತದ ಕೋಲ ಮಾಡಿಸುವುದು ನಿಲ್ಲಿಸಿರುವುದೇ ಪಂಜೂರ್ಳಿಯ ಪ್ರಭಾವ ಕಡಿಮೆ ಆಗಿದ್ದಕ್ಕೆ ಕಾರಣ” ಎಂದು ಸಿಂಗಪ್ಪಯ್ಯರನ್ನು ದೂರುತ್ತಿದ್ದರು.
ಏನೇ ಆಗಲಿ ರಕ್ಷಣೆಯ ವಿಷಯದಲ್ಲಿ ಪಂಜೂರ್ಳಿಯ ಮೇಲೆ ಇಟ್ಟಂತಹ ನಂಬಿಕೆ ಮಾತ್ರ ಎಂದೂ ಸುಳ್ಳಾಗಿರಲಿಲ್ಲ. ಸಿಂಗಪ್ಪಯ್ಯ ಬೆಂಗಳೂರಿಗೆ ಹೊರಡುವುದಕ್ಕೆ ಕಾರಣ ತುರ್ತಾಗಿ ಮಗನಿಗೆ ಹುಡುಗಿ ನೋಡುವುದು. ಬೆಂಗಳೂರಿನಲ್ಲಿರುವ ಅವರ ಮಗಳು-ಅಳಿಯ ಮಗನಿಗೊಂದು ಹುಡುಗಿಯನ್ನು ಗೊತ್ತು ಮಾಡಿದ್ದರು. ಮೊದಲೇ ಬ್ರಾಹ್ಮಣರಲ್ಲಿ ಹುಡುಗಿಯರಿಗೆ ಬರ. ಇದ್ದಬದ್ದ ಹುಡುಗಿಯರೂ ಬೆಂಗಳೂರಿನ ಸಾಫ್ಟ್’ ವೇರ್ ಇಂಜಿನಿಯರೇ ಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದರು. ಹುಡುಗಿಗಿಂತಲೂ ಹುಡುಗಿಯ ತಂದೆ ತಾಯಿಯರ ಡಿಮ್ಯಾಂಡ್ ಹೆಚ್ಚಾಗಿರುತ್ತಿತ್ತು. ಹುಡುಗ ಬೆಂಗಳೂರಿನಲ್ಲಿ ಫ್ಲಾಟ್ ಅಥವಾ ಮನೆ ಹೊಂದಿರಬೇಕು. ಆದರೆ ಅವನ ತಂದೆ ತಾಯಿಗಳು ಮಾತ್ರ ಬೇರೆ ಊರಿನಲ್ಲಿರಬೇಕು. ಆಗಾಗ ಫಾರಿನ್ ಟ್ರಿಪ್ ಹೋಗುತ್ತಿದ್ದರೆ ಹುಡುಗನಿಗೆ ಇನ್ನೂ ಡಿಮ್ಯಾಂಡು. ತಮ್ಮ ಹುಡುಗಿಯ ಬಗ್ಗೆ ಕೇಳಿದರೆ ಏನೂ ಇಲ್ಲ. ಕಷ್ಟಪಟ್ಟು ಡಿಗ್ರೀ ಪಾಸು ಮಾಡಿರುತ್ತಾಳೆ. ಹೊರಗೆ ಹೋಗಿ ಬದುಕುವ ಧೈರ್ಯವೂ ಇರುವುದಿಲ್ಲ, ವ್ಯಕ್ತಿತ್ವವೂ ಇರುವುದಿಲ್ಲ. ಆದರೆ ಹುಡುಕುವುದು ಮಾತ್ರ ಟೆಕ್ಕಿಗಳನ್ನೇ. ಇದಕ್ಕೆ ಅಪವಾದವೆಂಬಂತೆ ಹಲವಾರು ಹುಡುಗಿಯರೂ ಸಹ ಸಾಫ್ಟ್ ವೇರ್ ಜಗತ್ತಿಗೆ ಕಾಲಿರಿಸಿ ತಮ್ಮ ಸರಿಸಮಾನವಾದ ಹುಡುಗನನ್ನೇ ಬಯಸುವುದು ಸಾಮಾನ್ಯವಾಗಿತ್ತು. ಹೀಗಿರುವಾಗ ಊರುಬದಿ ಇರುವ ಹುಡುಗರಿಗೆ ತೋಟಗದ್ದೆಗಳೇ ಹೆಂಡತಿ, ದನಕರುಗಳೇ ಮಕ್ಕಳೆಂದು ಭಾವಿಸಿಕೊಳ್ಳುವ ಕಾಲವಾಗಿ ಪರಿವರ್ತಿತವಾಗುತ್ತಿತ್ತು.
ಇಂತಹ ಕಾಲದಲ್ಲಿ ಹುಡುಗಿಯೋರ್ವಳು ಹಳ್ಳೀ ಮನೆಗೆ ಮದುವೆಯಾಗಿ ಹೋಗಲು ಒಪ್ಪುತ್ತಾಳಂತೆ, ಅವಳ ತಂದೆತಾಯಿಗಳಿಗೆ ಬೆಂಗಳೂರಿಗೆ ತಮ್ಮ ಮಗಳನ್ನು ಕಳುಹಿಸುವುದು ಇಷ್ಟವಿಲ್ಲಂತೆ ಎಂಬ ವಿಷಯವೊಂದು ಅವರ ಮಗಳ ಕಿವಿಗೆ ಬಿದ್ದಿತು. ತಕ್ಷಣ ಅವಳು ತನ್ನ ತವರಿಗೆ ಫೋನು ಹಾಯಿಸಿದಳು. “ಇಂತಹ ಹುಡುಗಿಯೊಬ್ಬಳು ತನ್ನ ತಂದೆತಾಯಿಯ ಜೊತೆ ಪಕ್ಕದ ಮನೆಯ ಕಾರ್ಯಕ್ರಮವೊಂದಕ್ಕೆ ಬರುತ್ತಿದ್ದಾಳೆ. ಅವರ ಹತ್ತಿರ ತಮ್ಮನ ವಿಷಯವಾಗಿ ಮಾತನಾಡಿದ್ದೇನೆ. ಎಲ್ಲರೂ ಹೊರಟು ಬನ್ನಿ ಮಾತನಾಡೋಣ” ಎಂದು ತಿಳಿಸಿದ್ದಳು. ಈ ವಿಷಯ ಸಿಂಗಪ್ಪಯ್ಯರಿಗೆ ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಿದಂತೆ ಅನ್ನಿಸಿತು.
ಸಿಂಗಪ್ಪಯ್ಯರ ಮಗನೂ ವಿದ್ಯಾವಂತನೇ. ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಉತ್ತಮವಾದ ಶಿಕ್ಷಣ ಸಿಗುವುದಿಲ್ಲ ಎಂದು ಚಿಕ್ಕಂದಿನಿಂದಲೂ ಬೋರ್ಡಿಂಗ್ ಸ್ಕೂಲ್ನಲ್ಲಿ ಬಿಟ್ಟು ಓದಿಸಿದ್ದರು. ಅವನೂ ಬೆಂಗಳೂರಿನಲ್ಲಿ ಒಳ್ಳೆಯ ನೌಕರಿಯಲ್ಲಿ ಇದ್ದವನೇ. ಆದರೆ ಅವನಿಗೆ ಬೆಂಗಳೂರಿನ ಮಾಯಾಲೋಕ್ಕಿಂತ ತನ್ನ ಗೊಂಡಾರಣ್ಯದ ಒಳಗಿನ ಮನೆಯೇ ಇಷ್ಟವಾಗಿದ್ದರಿಂದ ವರ್ಷದ ಹಿಂದೆಯೇ ಕೆಲಸ ಬಿಟ್ಟು ಊರಿಗೆ ಬಂದಿದ್ದನು. ತಲೆಗೆ ಮಾತ್ರ ಕೆಲಸ ಕೊಡುವ ತನ್ನ ನೌಕರಿಗಿಂತ ದೇಹಕ್ಕೂ ಕೆಲಸ ಕೊಡುವ ಜಮೀನಿನ ಕೆಲಸವೆಂದರೆ ಏನೋ ಒಂದು ರೀತಿಯ ಸೆಳೆತ ಅವನಿಗೆ. ಮಹಾನಗರದ ಬದುಕು ಸತ್ವವಿಲ್ಲದೇ ಯಾಂತ್ರಿಕವಾಗಿ ಕಾಣುತ್ತಿತ್ತು. ಅವನಿಗೆ ತೇಜಸ್ವಿಯವರ, ಕುವೆಂಪುರವರ ಬರವಣಿಗೆ ಎಂದರೆ ಅಚ್ಚುಮೆಚ್ಚು. ‘ಇದೇ ಅವನ ತಲೆ ಕೆಡಿಸಿ ಹಳ್ಳಿಗೆ ಬರಲು ಕಾರಣ’ ಎಂದು ಅವರಪ್ಪ ಕಂಡಕಂಡವರ ಬಳಿ ದೂರುತ್ತಿದ್ದರು. ಅವನಿಗೂ ಒಮ್ಮೆ ಇದರ ಸಲುವಾಗಿ ಉಪದೇಶ ಮಾಡಿದ್ದರು. “ಕುವೆಂಪುರವರು ತನ್ನೂರಿನ ಬಗ್ಗೆ ಎಷ್ಟೆಲ್ಲಾ ಬರೆದರೂ, ತನ್ನೂರನ್ನು ಎಷ್ಟೆಲ್ಲಾ ನೆನಪಿಸಿಕೊಂಡರೂ ಅವರು ಪುನಃ ತನ್ನೂರಿನಲ್ಲಿ ಬಂದು ನೆಲೆಸಲಿಲ್ಲ. ತನ್ನ ಬಾಲ್ಯದಲ್ಲಿ ಇದ್ದಂತಹ ಪರಿಸರವನ್ನು ಪುನಃ ಸೃಷ್ಟಿಸಲು ಪ್ರಯತ್ನಿಸಲಿಲ್ಲ. ಕಾರಣ ಅವರಿಗೆ ಜೀವನದ ನೈಜತೆ ತಿಳಿದಿತ್ತು. ಬರೆಯುವ ಬರವಣಿಗೆಯೇ ಬೇರೆ ಬದುಕುವ ವಾಸ್ತವವೇ ಬೇರೆ. ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳಬಹುದೇ ಹೊರತು ಅದರ ರೀತಿ ಪುನಃ ಜೀವನ ಮಾಡಲಾಗದು. ಈ ಸತ್ಯ ಅರಿತವನು ಯಶಸ್ವಿಯಾಗುತ್ತಾನೆ. ಅದನ್ನು ಬಿಟ್ಟು ಹಳ್ಳಿ ಎಂದು ವಾಪಾಸ್ಸು ಬಂದವನು ಎಂದಿಗೂ ಉದ್ಧಾರ ಆಗಲಾರನು” ಎಂದು ತನಗೆ ತಿಳಿದ ರೀತಿಯಲ್ಲೆಲ್ಲಾ ಬುದ್ಧಿವಾದ ಹೇಳಿದ್ದರು. ಆದರೆ ಇದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ.
ಅವರ ಮಗ ಮಾತ್ರ ಇದ್ಯಾವುದನ್ನೂ ಕೇಳುವ ಮನಸ್ಥಿತಿಯಲ್ಲಿರಲಿಲ್ಲ. ಅವರು ಕುವೆಂಪುರವರ ಉದಾಹರಣೆ ನೀಡಿದರೆ ಅವರ ಮಗ ಕುವೆಂಪುರವರ ಮಗನ ಉದಾಹರಣೆ ನೀಡುತ್ತಿದ್ದನು. “ತೇಜಸ್ವಿಯವರು ತಾವು ಬಯಸಿದಂತೆಯೇ ಬದುಕಿದವರು. ತನ್ನ ಬಗ್ಗೆ ಯಾರು ಏನು ಅಂದುಕೊಳ್ಳುತ್ತಾರೋ ಎನ್ನುವ ಗೋಜಿಗೇ ಹೋಗಲಿಲ್ಲ. ತನಗೆ ಸರಿ ಅನ್ನಿಸಿದ್ದನ್ನು, ತಾನು ಬಯಸಿದ್ದನ್ನು ಮಾಡಿದವರು. ಅಂತಹವರ ಜೀವನ ಮಾತ್ರವೇ ಅರ್ಥಪೂರ್ಣವಾಗಿರುತ್ತದೆ. ನಮ್ಮ ನೆಮ್ಮದಿಯೇ ನಮ್ಮ ಯಶಸ್ಸಿನ ಅಳತೆಗೋಲಾಗಬೇಕು ಹೊರತು ಬೇರೆಯವರ ದೃಷ್ಟಿಯಲ್ಲಿ ನಾವು ಯಶಸ್ವಿ ಎಂದು ತೋರಿಸಿಕೊಳ್ಳುವುದು ನಮ್ಮ ಗುರಿಯಾಗಬಾರದು. ನನಗೆ ಇಲ್ಲೆಯೇ ನೆಮ್ಮದಿ ಇದೆ ಹೊರತು ಮಹಾನಗರದ ನಾಲ್ಕುಗೋಡೆಯೊಳಗಿನ ಎ.ಸಿ.ರೂಮಿನಲ್ಲಿ ಅಲ್ಲ” ಎನ್ನುವುದೇ ಅವನ ವಾದವಾಗಿತ್ತು.
ಆದರೆ ಸಿಂಗಪ್ಪಯ್ಯರಿಗೆ ತನ್ನ ಹಳ್ಳಿ ಹಳಸಿ ಹೋಗಿ, ಬೆಂಗಳೂರಿನಂತಹ ಮಹಾನಗರದ ಹೊಸ ಪ್ರಪಂಚವನ್ನು ನೋಡುವ ತವಕವಿತ್ತು. ಅದೇ ತೋಟ ಗದ್ದೆ, ಅದೇ ಕೆಲಸ, ಅಜ್ಜನ ಕಾಲದ ಅದೇ ಹಂಚಿನ ಚೌಕೀ ಮನೆ, ಪಾಳು ಬಿದ್ದ ರಸ್ತೆ, ಅದೇ ದೇವಸ್ಥಾನ, ಅದೇ ಜಾತೀ ರಾಜಕೀಯ, ಅದೇ ಹಬ್ಬ ಹರಿದಿನಗಳು, ನಿಷ್ಕ್ರಿಯವಾಗಿ ನಿಂತಿರುವ ಮರಗಳು, ಸುತ್ತಲೂ ಹಬ್ಬಿರುವ ಕಾಡು, ಏರಿಳಿತದಿಂದ ಕೂಡಿದ ಬೆಟ್ಟಗುಡ್ಡಗಳು, ಬಹುಪಾಲು ವರ್ಷವಿಡೀ ಸುರಿಯುವ ಮಳೆ, ಯಾವಾಗಲೂ ಕೈಕೊಡುವ ಕರೆಂಟು, ಫೋನು ಎಲ್ಲವೂ ಜೀವನದ ಮೇಲೆ ವೈರಾಗ್ಯ ಉಂಟುಮಾಡಿದ್ದವು.
ಮಗ ಓದಿ ಕೆಲಸಕ್ಕೆ ಸೇರಿಕೊಂಡಾಗ ಹಲವು ರೀತಿಯ ಕನಸು ಕಂಡಿದ್ದರು. ಇಲ್ಲಿಯ ಮನೆ, ತೋಟ, ಗದ್ದೆ ಎಲ್ಲವನ್ನೂ ಮಾರಿ ಬೆಂಗಳೂರಿನಲ್ಲೊಂದು ಮನೆ ಖರೀದಿಸಿ ಮಗನಿಗೊಂದು ಮದುವೆ ಮಾಡಿ ಮೊಮ್ಮಕ್ಕಳನ್ನಾಡಿಸಿಕೊಂಡು ಆರಾಮಾಗಿ ಇನ್ನುಳಿದ ಜೀವನ ಕಳೆಯಬಹುದು. ಬೆಂಗಳೂರಿನಲ್ಲಿ ಮನೆಯ ಬಾಗಿಲಲ್ಲೇ ಎಲ್ಲವೂ ಸಿಗುತ್ತದೆ. ಬೇಕಾದಾಗ ಬೇಕೆಂದಲ್ಲಿಗೆ ಹೋಗಬಹುದು. ಯಾವ ಕಟ್ಟುಪಾಡುಗಳೂ ಇರುವುದಿಲ್ಲ ಎಂದೆಲ್ಲಾ ಏನೇನೋ ಕನಸು ಕಟ್ಟಿಕೊಂಡಿದ್ದರು. ಆದರೆ ಅವರ ಮಗ ಬೆಂಗಳೂರು ಬಿಟ್ಟುಬಂದು ಅವರ ಕನಸನ್ನೆಲ್ಲಾ ನುಚ್ಚುನೂರು ಮಾಡಿದ್ದ. ಪೂಜೆಗೆ ಬಂದ ಭಟ್ಟರು ಪೂಜೆಯ ಕೊನೆಯಲ್ಲಿ
“ಸರ್ವಸ್ಯಾಪ್ತಿ ಸರ್ವಸ್ಯಸಿದ್ಧಿ ಸರ್ವಮೇವತೆನಾಪ್ನೋತಿ ಸರ್ವನ್ಜಯತಿ |
ಶ್ರೀರ್ವರ್ಚಸ್ವಮಾಯುಶಮಾರೋಗ್ಯವಾಪಿ ರಾಚೋಭಾಮಾನಂ ಮಹೀಜತೇಹೆ |
ಧಾನ್ಯಂ ಧನಂ ಪಶುಂ ಬಹುಪುತ್ರ ಲಾಭಂ ಶತಸಂವತ್ಸರಂ ಧೀರ್ಘಮಾಯುಹು ||” ಎಂದು ಪ್ರಾರ್ಥನೆ ಮಾಡುತ್ತಿದ್ದದ್ದನ್ನು ನೆನೆಸಿಕೊಂಡು ಒಳಗೊಳಗೇ ಕುಪಿತಗೊಳ್ಳುತ್ತಿದ್ದರು.
ಅವರ ಪ್ರಕಾರ ಪಶುಗಳನ್ನು ಸಾಕುವುದು ಈಗಿನ ಕಾಲದಲ್ಲಿ ಸುಲಭವಲ್ಲ. ಅದೊಂದು ಹೊಣೆಗಾರಿಕೆಯೇ ಸರಿ. ಅವುಗಳಿಗೆ ಹುಲ್ಲು ಹಿಂಡಿ ಮುಂತಾದವುಗಳನ್ನು ತರಬೇಕು. ಹೊರಗೆ ಮೇಯಲು ಬಿಟ್ಟರೆ ನಮ್ಮ ಕೆಲಸವನ್ನೆಲ್ಲಾ ಬಿಟ್ಟು ಕಾಯಬೇಕು. ಪ್ರತಿನಿತ್ಯ ಹಾಲು ಕರೆಯಬೇಕು. ಎಲ್ಲಾದರೂ ಹೋಗಬೇಕೆಂದರೆ ಇದಕ್ಕೆಲ್ಲಾ ವ್ಯವಸ್ಥೆ ಮಾಡಿಟ್ಟು ಹೊರಡಬೇಕು. ಇದರ ಬದಲು ಡೈರಿಯಿಂದ ಹಾಲು ತರುವುದೇ ಉತ್ತಮ. ಇನ್ನು ‘ಬಹುಪುತ್ರ ಲಾಭಂ’ ಎನ್ನುವ ಪ್ರಾರ್ಥನೆ ಲಾಭದ ಮಾತು ಹೇಗಾಯಿತು? ಇಂದಿನ ಕಾಲದಲ್ಲಿ ಒಬ್ಬರು ಮಕ್ಕಳನ್ನು ಸಾಕುವುದೇ ಕಷ್ಟ. ಅವರ ಓದಿನ ಖರ್ಚಿನಲ್ಲಿ ನಮ್ಮ ಕಾಲದಲ್ಲಿ ಇಬ್ಬಿಬ್ಬರು ಜೀವನ ಸಾಗಿಸಬಹುದಿತ್ತು. ಇನ್ನು ಓದಿಸದೇ ಬಿಡೋಣವೆಂದರೆ ಇರುವುದು ತುಂಡು ಭೂಮಿ. ಅದರಲ್ಲಿ ಎಷ್ಟು ಎಂದು ಪಾಲುಮಾಡಲು ಸಾಧ್ಯ? ಹಿಂದಿನ ಕಾಲದ ಹಾಗೆ ಕಾಡು ಕಡಿದು ಜಮೀನನ್ನು ವಿಸ್ತಾರ ಮಾಡುವ ಹಾಗಿಲ್ಲ. ಅದಕ್ಕೆ ನೂರೆಂಟು ಕಾನೂನು ಮಾಡಿಟ್ಟಿದ್ದಾರೆ. ತುಂಡು ಭೂಮಿಯನ್ನು ಮಕ್ಕಳಿಗೆ ನೀಡಿದರೆ “ನಮ್ಮಪ್ಪ ಜೀವನ ಪೂರ್ತಿ ಮಕ್ಕಳು ಮಾಡಿದ್ದು ಬಿಟ್ಟರೆ ಆ ಮಕ್ಕಳಿಗೆಂದು ಯಾವ ಆಸ್ತಿಯನ್ನೂ ಮಾಡಿಟ್ಟಿಲ್ಲ” ಎಂದು ಸಾಯುವ ತನಕ ದೂರುತ್ತಾರೆ. ಹಾಗಾಗಿ ‘ಬಹುಪುತ್ರ ಲಾಭಂ’ ಎನ್ನುವುದು ಒಂದು ಅಸಂಬದ್ಧ ಪ್ರಾರ್ಥನೆ.
ಇನ್ನು ಶತಸಂವತ್ಸರ, ದೀರ್ಘಾಯಸ್ಸು ಇವೆರೆಡೂ ಈಗಿನ ಕಾಲಕ್ಕೆ ಶಾಪಗಳೇ ಸರಿ. ವಯಸ್ಸಾದ ಮೇಲೆ ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಮಕ್ಕಳಿಗೆ ಅವರವರ ಸಂಸಾರ ನಿಭಾಯಿಸುವುದೇ ಕಷ್ಟವಾಗಿರುತ್ತದೆ. ಅಂತಹುದರಲ್ಲಿ ತಂದೆ ತಾಯಿಗಳು ವಯಸ್ಸಿನ ಸಹಜತೆಯಿಂದ ನಿಃಶಕ್ತರಾಗಿ ಹಾಸಿಗೆ ಹಿಡಿದರೆ ನೋಡಿಕೊಳ್ಳುವವರಾರು? ಇಂದು ಒಮ್ಮೆ ಆಸ್ಪತ್ರೆಗೆ ಹೋದರೆ ತಿಂಗಳ ದುಡಿಮೆಯಲ್ಲಾ ತೆಗೆದಿಡಬೇಕು. ಅಂತಹುದರಲ್ಲಿ ಖಾಯಿಲೆ ಹಿಡಿದು ನೂರುವರ್ಷ ಮುಟ್ಟುವವರೆಗೆ ಬದುಕಿದ್ದರೆ “ಈ ಮುದಿ ಗೂಬೆಗಳು ಯಾವಾಗ ಸಾಯತ್ತವೋ ಏನೋ” ಎಂದು ಸೊಸೆ ಶಪಿಸುತ್ತಾಳೆ. ಮಗಳ ಮನೆಗೆ ಹೋದರೆ “ಒಂದು ನಯಾ ಪೈಸೆ ವರದಕ್ಷಿಣೆ ಕೊಟ್ಟಿಲ್ಲ, ಈ ಶನಿಗಳನ್ನು ಸಾಯುವ ತನಕ ನಾವೇ ನೋಡ್ಕೋಬೇಕು” ಎಂದು ಅಳಿಯ ಗೊಣಗುತ್ತಾನೆ. ಆದ್ದರಿಂದ ಪಶು, ಬಹುಪುತ್ರ ಲಾಭ, ಶತಸಂವತ್ಸರ, ದೀರ್ಘಾಯಸ್ಸು ಎಲ್ಲವೂ ಇಂದಿನ ಕಾಲದಲ್ಲಿ ಶಾಪಗಳೇ ಆಗಿದ್ದರೂ, ಇಂದಿಗೂ ಭಟ್ಟರು ಹಿಂದಿನ ಕಾಲದ ಮಂತ್ರವನ್ನೇ ಇನ್ನೂ ಒದರುತ್ತಾರೆ. ಕಾಲಮಾನಕ್ಕೆ ತಕ್ಕಂತೆ ಪ್ರಾರ್ಥನೆ ಮಾಡುವುದೇ ಇಲ್ಲ. ಬಹುಶಃ ಈ ತರಹದ ಪ್ರಾರ್ಥನೆ ಮಾಡಿಯೇ ನಮಗೆ ಈ ತೋಟ ಗದ್ದೆ ದನಕರುಗಳು ಈ ಹಳ್ಳಿ ಎಲ್ಲವೂ ಗಂಟುಬಿದ್ದಿದ್ದೇನೋ ಎನ್ನುವುದೇ ಅವರ ಕೋಪಕ್ಕೆ ಕಾರಣವಾಗಿತ್ತು.
ಇನ್ನು ಸಿಂಗಪ್ಪಯ್ಯರ ಮಗನಿಗೆ ಮದುವೆಯಾಗುವುದು ಇಷ್ಟವಿರಲಿಲ್ಲ. ಮದುವೆಯಾಗಲೇಬೇಕು ಎಂದರೂ ಇನ್ನೊಂದು ನಾಲ್ಕೈದು ವರ್ಷ ಬಿಟ್ಟು ಮದುವೆಯಾಗೋಣ ಎಂಬ ನಿಲುವಿತ್ತು. ಆದರೆ ಒಮ್ಮೆಲೇ ತನ್ನ ಅಕ್ಕ ಫೋನು ಮಾಡಿ ಹುಡುಗಿಯೊಬ್ಬಳನ್ನು ಗೊತ್ತು ಮಾಡಿ ಹೊರಟು ಬನ್ನಿ ಎಂದಾಗ ನಿಜಕ್ಕೂ ಅವನ ಮನಸ್ಸಿಗೆ ಹಿಂಸೆಯಾಗಿತ್ತು. ಮೊದಲೇ ಬೆಂಗಳೂರು ಬಿಟ್ಟು ಬಂದಿದ್ದು ಅಪ್ಪನಿಗೆ ಇಷ್ಟವಿಲ್ಲ, ಈಗ ಮದುವೆಯೇ ಬೇಡ ನಾ ಬರುವುದಿಲ್ಲ ಎಂದರೆ ಕೂಗಾಡುತ್ತಾರೆ. ಹಾಗಾಗಿ ಅಲ್ಲಿಗೆ ಹೋದ ಮೇಲೆ ನೋಡಿಕೊಳ್ಳೋಣ ಎಂದು ಹೊರಟನು. ಹುಡುಗಿ ನನ್ನ ಒಪ್ಪಬೇಕಲ್ಲಾ, ನಮ್ಮ ಮನೆಯನ್ನೊಮ್ಮೆ ನೋಡಬೇಕಲ್ಲಾ, ಅದೆಲ್ಲಾ ಆದ ಮೇಲೆ ತಾನೆ ಮುಂದಿನ ತೀರ್ಮಾನ. ಅಲ್ಲಿಯವರೆಗೂ ಯಾಕೆ ಸುಮ್ಮನೆ ತಲೆಕೆಡಿಸಿಕೊಳ್ಳಬೇಕು ಎಂದು ಬೆಂಗಳೂರಿಗೆ ಹೊರಡಲು ಸಮ್ಮತಿಸಿದನು.
ಪಂಜೂರ್ಳಿಗೆ ಮನೆ ಕಾವಲಿನ ಉಸ್ತುವಾರಿ ಹೊರೆಸಿ ಎಲ್ಲರೂ ಬೆಂಗಳೂರಿಗೆ ಹೊರಟು ಹೋದರು. ಪಕ್ಕದ ಮನೆಯವರ ಕಾರ್ಯಕ್ರಮ ಮುಗಿದ ಮೇಲೆ ಹುಡುಗಿ ನೋಡುವ ಕಾರ್ಯಕ್ರಮ ಇಟ್ಟುಕೊಳ್ಳುವುದು ಎಂದು ಮಗಳು ಹೇಳಿದ್ದಳು. ಅದರಂತೆ ಸಂಜೆ ಸಿಂಗಪ್ಪಯ್ಯರ ತುಂಬು ಕುಟುಂಬ ಮಗಳ ಪಕ್ಕದ ಮನೆಗೆ ಹೋಯಿತು. ಹುಡುಗ-ಹುಡುಗಿಯ ಕಡೆಯವರೆಲ್ಲಾ ಒಬ್ಬರಿಗೊಬ್ಬರು ಪರಿಚಯಿಸಿಕೊಂಡರು. ಹುಡುಗಿಯೂ ನೋಡುವುದಕ್ಕೆ ಸೌಂದರ್ಯವತಿಯಾಗಿದ್ದಳು. ಸಿಂಗಪ್ಪಯ್ಯರ ಮಗನೂ ಸ್ಫುರದ್ರೂಪಿ ಹುಡುಗ. ಆದ್ದರಿಂದ ಹುಡುಗಿಯ ಮನೆಯವರಿಗೆ ಹುಡುಗ ಇಷ್ಟವಾದನು. ಇನ್ನು ಸಿಂಗಪ್ಪಯ್ಯರ ಮನೆಯವರಿಗೆ ಖುಷಿ ಸ್ವಲ್ಪ ಹೆಚ್ಚಾಗಿಯೇ ಆಗಿತ್ತು. ಕಾರಣ ಇಂದಿನ ಕಾಲದಲ್ಲಿ ಹಳ್ಳಿ ಮನೆಗೆ ಹುಡುಗಿಯರು ಬರಲು ಒಪ್ಪದಿರುವುದರಿಂದ ಸಿಂಗಪ್ಪಯ್ಯರಿಗೆ ಹುಡುಗಿಯ ಅಂದ ಮುಖ್ಯವಾಗಿರಲಿಲ್ಲ. ಹುಡುಗಿ ವರ್ಚುಗಣ್ಣಿನವಳೇ ಆಗಿರಲಿ, ಹಲ್ಲುಬ್ಬಿಯೇ ಆಗಿರಲಿ, ಕರ್ರಗೆ ಕಾಗೆಯ ತರಹವೇ ಇರಲಿ, ಕುಳ್ಳಿಯೇ ಆಗಿರಲಿ, ಆನೆಯ ತರಹ ದೈತ್ಯ ಹೊಟ್ಟೆ ಇರುವವಳೇ ಆಗಿರಲಿ ಒಟ್ಟಿನಲ್ಲಿ ಹುಡುಗಿ ಒಪ್ಪಿದರೆ ಮದುವೆ ಮಾಡುವುದೇ ಸರಿ ಎಂದು ಮನೆಯಿಂದ ಹೊರಡುವಾಗಲೇ ನಿಶ್ಚಯಿಸಿಬಿಟ್ಟಿದ್ದರು. ಅಂತದ್ದರಲ್ಲಿ ಹುಡುಗಿ ಸೌಂದರ್ಯವತಿಯಾಗಿದ್ದರೆ ಕೇಳಬೇಕೇ, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರ ಪ್ರಕಾರ ಹುಡುಗಿ ನೋಡುವುದು ತಮ್ಮ ಕಾಲಕ್ಕೇ ಮುಗಿಯಿತು. ಈಗೇನಿದ್ದರೂ ಹುಡುಗನನ್ನು ಹುಡುಗಿಗೆ ತೋರಿಸುವುದು. ಹುಡುಗಿಯ ಒಪ್ಪಿಗೆಯೇ ಅಂತಿಮ ಎಂದು ಎಂದೋ ಲೆಕ್ಕ ಹಾಕಿದ್ದರು. ಮೊದಲ ಬಾರಿ ನೋಡಿದಾಗ ಏನೇನು ಮಾತಾಡಬೇಕೋ ಎಲ್ಲವೂ ಮಾತಾಡಿ ಮುಗಿದಿತ್ತು. ಇನ್ನೇನಿದ್ದರೂ ಹುಡುಗಿಯ ಮನೆಯವರು ಹುಡುಗನ ಮನೆಯನ್ನು ನೋಡಿಹೋದಮೇಲೇ ಮುಂದಿನ ಮಾತುಕತೆ. ಹಾಗಾಗಿ ಅವರನ್ನು ತಮ್ಮ ಮನೆ ನೋಡಲು ಹಳ್ಳಿಗೆ ಬರಲು ದಿನವೊಂದನ್ನು ಗೊತ್ತು ಮಾಡಿ ಕರೆದರು.
ಇತ್ತ ಮನೆಗೆ ಬಂದ ಕೂಡಲೇ ಮನೆಯ ಸಿಂಗಾರ ಆರಂಭವಾಯಿತು. ಮನೆಯ ಮಾಡಿಗೆ ಕಟ್ಟಿದ ಬಲೆಯನ್ನೆಲ್ಲಾ ಗುಡಿಸಿ, ಸಗಣಿಯಿಂದ ಅಂಗಳವನ್ನು ಸಾರಿಸಿ, ವರಲೆ ಹಿಡಿದ ಮಣ್ಣಿನ ಗೋಡೆಗೆ ಮಣ್ಣಿನ ತೇಪೇ ಹಚ್ಚಿ, ಅಲ್ಲಲ್ಲಿ ಸೋರುತ್ತಿದ್ದ ಹಂಚಿನ ತೂತಿಗೆ ಪ್ಲಾಸ್ಟಿಕ್ ಕವರ್ ಮುಚ್ಚಿ, ಕರಿ ಹಿಡಿದ ಅಡುಗೆ ಮನೆ ಸೇರಿದಂತೆ ಬಚ್ಚಲ ಒಲೆಯ ಬಳಿ ಸುಣ್ಣ ಬಳಿದು, ಮನೆಗೆ ಬರುವ ದಾರಿಯಲ್ಲೆಲ್ಲಾ ಕಳೆ ತೆಗೆಸಿ, ಯುಗಾದಿಗೆ ಕಟ್ಟಿದ ಒಣಗಿದ ತೋರಣವನ್ನು ತೆಗೆದು ಹೊಸದಾದ ಹಚ್ಚ ಹಸುರಿನ ತೋರಣ ಹಾಕಿ ಸಿಂಗರಿಸಿದ್ದರು. ಒಟ್ಟಾರೆಯಾಗಿ ರಾಯರ ಮನೆ, ಹಳೇ ಹಣ್ಣಣ್ಣು ಮುದುಕಿಗೆ ಅಲಂಕಾರ ಮಾಡಿದಂತೆ ಕಂಗೊಳಿಸುತ್ತಿತ್ತು.
ಇತ್ತ ಮೊದಲ ದಿನವೇ ತನ್ನ ಮತ್ತು ಹುಡುಗಿಯ ಮನೆಯವರಿಬ್ಬರೂ ಒಂದು ಹಂತಕ್ಕೆ ಸಮ್ಮತಿಸಿದ್ದನ್ನು ಕಂಡು ರಾಯರ ಮಗ ಚಿಂತಾಕ್ರಾಂತನಾಗಿದ್ದನು. ಇನ್ನು ತಡ ಮಾಡಿದರೆ ಆಗದು ಎಂದು ತಂದೆಯ ಬಳಿ ತನಗೆ ಇಷ್ಟು ಬೇಗ ಮದುವೆಯಾಗುವುದಕ್ಕೇ ಇಷ್ಟವಿಲ್ಲ ಎಂದು ಹೇಳಿಯೇ ಬಿಟ್ಟನು. ಇದನ್ನು ಕೇಳಿ ರಾಯರ ಜಂಘಾಬಲವೇ ಕುಸಿದು ಹೋಯಿತು. ನಿನಗೇನು ತಲೆ ಕೆಟ್ಟಿದೆಯೇ? ಹೇಳದೇ ಕೇಳದೇ ಪ್ರತಿ ತಿಂಗಳು ಆರಾಮಾಗಿ ಸಂಬಳ ಎಣಿಸುವ ಕೆಲಸ ಬಿಟ್ಟು ಬಂದೆ, ಈಗ ನೋಡಿದರೆ ಅಷ್ಟು ಸುಂದರವಾಗಿರುವ ಹುಡುಗಿಯನ್ನೇ ಮದುವೆ ಆಗುವುದಿಲ್ಲ ಎನ್ನುತ್ತಿದ್ದೀಯ. ಈ ಹಳ್ಳಿಯಲ್ಲೇ ಕೊಳೆಯುತ್ತಿದ್ದರೆ ನಿನಗ್ಯಾರು ಹೆಣ್ಣು ಕೊಡುತ್ತಾರೆ. ಮೊದಲೇ ಹೆಣ್ಣಿಗೆ ನಮ್ಮ ಜಾತಿಯಲ್ಲಿ ಬರ. ಅದರಲ್ಲೂ ಹಳ್ಳಿಯನ್ನು ಯಾವ ಹುಡುಗಿಯೂ ಒಪ್ಪುವುದಿಲ್ಲ. ಹೀಗಿರುವಾಗ ನಿನ್ನ ಯಾವ ಜನ್ಮದ ಪುಣ್ಯವೋ ಏನೋ ಅಂತಹ ಸೌಂದರ್ಯವತಿ ಹೆಣ್ಣು ಸದ್ಯಕ್ಕೆ ಒಪ್ಪಿದ್ದಾಳೆ, ಸುಮ್ಮನೆ ಒಪ್ಪಿಕೋ ಎಂದು ಗದರಿದರೂ ರಾಯರ ಮಗ ಸಮ್ಮತಿಸಲಿಲ್ಲ. ತನ್ನ ಸ್ವಾತಂತ್ರ್ಯದ ಹರಣವಾಗುತ್ತಿದೆ ಎಂದು ಅನ್ನಿಸಲು ಶುರುವಾಯಿತು ಅವನಿಗೆ. ಮಂದೆ ಬರುವ ಹೆಂಡತಿಯೂ ತನ್ನ ಸ್ವಾತಂತ್ರಕ್ಕೆ ಅಡ್ಡಿಯೇ. ತಂದೆಯ ಜೊತೆ ಅವಳೂ ನನ್ನನ್ನು ನಿಯಂತ್ರಿಸುತ್ತಾಳೆ. ಒಮ್ಮೆ ಅವರು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಿದರೆ ಜೀವನ ಪೂರ್ತಿ ಅವರ ಗುಲಾಮನಾಗಬೇಕಾಗಬಹುದು ಎಂದು ಯೋಚಿಸಿ “ನೀವೇನೆಂದರೂ ನನಗೆ ಇಷ್ಟು ಬೇಗ ಮದುವೆಯಾಗಲು ಇಷ್ಟವಿಲ್ಲ” ಎಂದು ಹೇಳಿ ಅಲ್ಲಿಂದ ಹೊರಟು ಹೋದನು.
ರಾಯರಿಗೆ ಮಂಡೆ ಬಿಸಿಯಾಯಿತು. ಇದಕ್ಕೆ ಏನು ಪರಿಹಾರವೆಂದೇ ತೋಚಲಿಲ್ಲ. ಮೊದಲು ಹುಡುಗಿಯ ಮನೆಯವರು ಬಂದು ಹೋಗಲಿ, ಅಲ್ಲಿಯವರೆಗೆ ಸಮಯವಿದೆಯಲ್ಲಾ, ಅಷ್ಟರೊಳಗೆ ಇವನಿಗೆ ಬುದ್ಧಿವಾದ ಹೇಳೋಣ ಎಂದು ಸಮಾಧಾನ ಪಟ್ಟರು. ದಿನ ಉರುಳಿದಂತೆ ಒಂದು ದಿನ ಹುಡುಗಿಯ ಮನೆಯವರೂ ಇವರ ಮನೆಗೆ ಬಂದರು. ಅಂದು ಎಲ್ಲರನ್ನು ಚೆನ್ನಾಗಿಯೇ ಉಪಚರಿಸಿದ್ದರು ರಾಯರು. ಬಂದವರು ಇವರ ಆಸ್ತಿಪಾಸ್ತಿಯನ್ನು ಕಣ್ಣಳತೆಯಲ್ಲಿಯೇ ತೂಗು ಹಾಕಿಕೊಂಡು ಹೋಗಿದ್ದರು. ಸ್ವಲ್ಪ ಮಟ್ಟಿಗೆ ಸ್ಥಿತಿವಂತರೇ ಆಗಿದ್ದರಿಂದ ಹಾಗು ರಾಯರ ಮಗ ನೋಡಲು ಆಕರ್ಷಕನಾಗಿದ್ದರಿಂದ ಹುಡುಗಿಯ ವಿರೋಧವೇನೂ ಇರಲಿಲ್ಲ. ಆದರೂ ಇತರೇ ವಿಷಯಗಳ ಬಗ್ಗೆ ಚರ್ಚಿಸಬೇಕಾದ್ದರಿಂದ ಅಂದು ತಮ್ಮ ನಿರ್ಧಾರದ ಬಗ್ಗೆ ಏನೂ ಹೇಳದೆ ಸಮಯಾವಕಾಶವನ್ನು ಕೇಳಿದ್ದರು. ರಾಯರಿಗೂ ಇದೇ ಬೇಕಾಗಿತ್ತು. ಅವರ ಮಗ ಮಾತ್ರ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡಿರಲಿಲ್ಲ. ಮನೆಯ ಸದಸ್ಯರೆಲ್ಲರೂ ತಮಗೆ ತಿಳಿದ ರೀತಿಯಲ್ಲಿ ಉಪದೇಶ ಮಾಡಿದ್ದರು. ಆದರೆ ಅದ್ಯಾವುದಕ್ಕೂ ಅವನು ಪ್ರತಿಕ್ರಿಯಿಸುತ್ತಿರಲಿಲ್ಲ. ಕೊನೆಗೆ ಹುಡುಗಿಯ ಮನೆಯವರು ತಮ್ಮ ಪರವಾಗಿ ಹಸಿರು ನಿಶಾನೆ ತೋರಿ ಇವರ ಉತ್ತರಕ್ಕಾಗಿ ಕಾಯುತ್ತಿದ್ದರು.
ರಾಯರು ಮಗನನ್ನು ಒಪ್ಪಿಸಲು ಸಾಕಷ್ಟು ಪ್ರಯತ್ನಿಸಿ ಪ್ರಯೋಜನವಾಗದೇ ಇದ್ದಾಗ ತನ್ನ ದುಃಖವನ್ನು ಯಾರ ಹತ್ತಿರವಾದರೂ ಹೇಳಿಕೊಳ್ಳಬೇಕೆಂದು ಅನ್ನಿಸಿತು. ಆದರೆ ಹೀಗೆ ಹೇಳಿಕೊಂಡರೆ ನನ್ನ ಬಳಿ ಸಮಾಧಾನದ ಮಾತನ್ನಾಡಿದರೂ ನಾಳೆ ದಿನ ಹಿಂದಿನಿಂದ ಆಡಿಕೊಳ್ಳುತ್ತಾರೆ ಎನ್ನುವ ಯೋಚನೆ ಬಂದಿತು. ಆಗ ಅವರಿಗೆ ನೆನಪಾಗಿದ್ದು ಮೂಕ ಪ್ರೇಕ್ಷಕನಾಗಿದ್ದ ಮನೆಯ ಭೂತ ಪಂಜೂರ್ಳಿ. ಹೇಗಿದ್ದರೂ ಮಗನನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ, ಅಂದ ಮೇಲೆ ಬೇರೆಯವರ ಬಳಿ ಹೇಳಿಕೊಂಡು ಯಾಕೆ ಚಿಕ್ಕವನಾಗಬೇಕು. ಆದ್ದರಿಂದ ಪಂಜೂರ್ಳಿಯ ಬಳಿ ಹೇಳಿಕೊಂಡರೆ ಬೇರೆಯವರಿಗೆ ತಿಳಿಯುವುದಿಲ್ಲ, ನನಗೂ ಸಮಾಧಾನ ಆಗುತ್ತದೆ ಎಂದು ಹಾಡ್ಯದೊಳಗಿನ ಪಂಜೂರ್ಳಿ ಕಲ್ಲಿನ ಬಳಿ ತನ್ನ ದುಃಖವನ್ನೆಲ್ಲಾ ಹೇಳಿಕೊಂಡರು. ಕೊನೆಗೆ ಸಮಾಧಾನ ಮಾಡಿಕೊಂಡು “ಇನ್ನೇನು ಮಾಡುವುದು, ಅವನ ಹಣೆಯಲ್ಲಿ ಬರೆದಂತೆ ಆಗುತ್ತದೆ. ನಾವಿರುವಷ್ಟು ದಿನ ಅವನಿಗೆ ತೊಂದರೆ ಇಲ್ಲ, ನಮ್ಮ ನಂತರದಲ್ಲಿ ಅವನ ಜೀವನವೂ ಕಷ್ಟ ನಿನ್ನ ಜೀವನವೂ ಕಷ್ಟ. ನಾ ಇರುವಷ್ಟು ದಿನ ಪ್ರತಿ ವರ್ಷ ನಿನಗೆ ಸಂದಾಯವಾಗಬೇಕಾಗಿದ್ದನ್ನು ನೀಡುತ್ತೇನೆ, ಅವನೂ ನೀಡಬಹುದು. ಆದರೆ ಅವನ ನಂತರದಲ್ಲಿ ನಮ್ಮ ವಂಶದ ಕುಡಿ ಯಾವುದೂ ಇರುವುದಿಲ್ಲವಲ್ಲಾ, ಆಗ ನಿನ್ನನ್ನೂ ಕೇಳಲು ಯಾರೂ ಗತಿ ಇರುವುದಿಲ್ಲ.” ಎಂದು ತಮ್ಮ ವಂಶದ ಬೆಳವಣಿಗೆ ನಿಂತರೆ ಪಂಜೂರ್ಳಿಯೂ ಅಂತ್ಯವಾದಂತೆ ಎಂದು ಪಂಜೂರ್ಳಿಗೇ ಬ್ಲಾಕ್ ಮೇಲ್ ಮಾಡಿದರು.
ಇತ್ತ ಸಿಂಗಪ್ಪಯ್ಯರ ಮಗ ಭತ್ತದ ಗದ್ದೆ ನೆಟ್ಟಿಗೆ ತಾನೇ ಹೋದನು. ಇದು ಅವನ ಮೊದಲ ಬಾರಿಯ ನೆಟ್ಟಿಯಾಗಿತ್ತು. ಹಿಂದೆಂದೂ ಅವನಿಗೆ ನೆಟ್ಟಿ ಮಾಡಿ ಗೊತ್ತಿರಲಿಲ್ಲ. ಹತ್ತಿರದಿಂದ ನೋಡಿಯೂ ಇರಲಿಲ್ಲ. ನೆಟ್ಟಿಗೆ ಹೆಚ್ಚಾಗಿ ಹೆಣ್ಣಾಳುಗಳು ಬರುವುದೇ ವಾಡಿಕೆ. ಮಳೆಗಾಲದಲ್ಲಿ ಮೈಯೆಲ್ಲಾ ಒದ್ದೆ ಮಾಡಿಕೊಂಡು, ಮೊಣಕಾಲು ಗಂಟಿನವರೆಗೆ ಹುಗಿಯುವ ಕೆಸರು ಗದ್ದೆಯಲ್ಲಿ ಭತ್ತದ ಸಸಿಗಳನ್ನು ಸಾಲಾಗಿ ಒಂದೊಂದೇ ನೆಡುವುದರ ಸ್ಪಷ್ಟ ಕಲ್ಪನೆ ಇರಲಿಲ್ಲ ಅವನಿಗೆ. ಗದ್ದೆಗೆ ಇಳಿಯುವ ಮುನ್ನ ಹೆಣ್ಣಾಳುಗಳೆಲ್ಲಾ ಸೀರೆಯನ್ನು ಗಾಲ್ಗಂಟಿನ ಮೇಲೆತ್ತಿ ಸೊಂಟಕ್ಕೆ ಕಟ್ಟಿಕೊಂಡರು. ಇದನ್ನು ನೋಡಿಯೇ ಒಮ್ಮೆ ಅವನಿಗೆ ಉಸಿರು ಮೇಲೆಕೆಳಗಾಯಿತು. ನೆಟ್ಟಿ ಆರಂಭವಾದ ನಂತರವಂತೂ ಅವನ ಗಮನ ಒಂದೇ ಕಡೆ ಸ್ಥಿಮಿತಗೊಳ್ಳಲೇ ಇಲ್ಲ. ಕೆಸರಾಗಬಾರದೆಂದು ಆದಷ್ಟು ಸೀರೆಯನ್ನು ಮೇಲಕ್ಕೆತ್ತುವ ಹೆಂಗಸರೇ ಸುತ್ತಮುತ್ತಲೂ ಆವರಿಸಿದ್ದರು. ತಾಳಕ್ಕೆ ತಕ್ಕ ಮೇಳ ಎಂಬಂತೆ ಜಿಟಿಜಿಟಿ ಮಳೆಯಲ್ಲಿ ಒದ್ದೆಯಾಗುತ್ತಿದ್ದ ಅವರ ಬಟ್ಟೆಯು ಅವನ ಮನಸ್ಸನ್ನು ಮತ್ತಷ್ಟು ಕದಡಿತು. ಮೂರು ದಿನಗಳ ಕಾಲ ನೆಟ್ಟಿ ಮಾಡಿ ಮುಗಿಸಿದರೂ ಕೂಡ, ಸಿಂಗಪ್ಪಯ್ಯರ ಮಗನಿಗೆ ಕೆಸರುಗದ್ದೆಯ ನಡುವೆ ಕಾಣುತ್ತಿದ್ದ ಬೆತ್ತಲೆ ಕಾಲುಗಳೇ ಪುನಃ ಪುನಃ ನೆನಪಾಗುತ್ತಿತ್ತು. ಹುಡುಗಿ ನೋಡುವ ಪ್ರಕ್ರಿಯೆಯು ಆರಂಭವಾದಾಗಿನಿಂದ ಯಾರಬ್ಬೊರ ಜೊತೆಯಲ್ಲೂ ಮಾತನಾಡದ ಅವನು ರಾತ್ರಿ ಊಟ ಮಾಡುವಾಗ ತಂದೆಯ ಬಳಿ ಮೆತ್ತನೆಯ ಧ್ವನಿಯಲ್ಲಿ “ಹುಡುಗಿಯ ಮನೆಯವರು ಏನೆಂದರು? ಹುಡುಗಿಗೆ ನಮ್ಮ ಮನೆ ಇಷ್ಟವಾದರೆ ಸರಿ, ಮದುವೆಗೆ ನನ್ನ ಅಭ್ಯಂತರವೇನೂ ಇಲ್ಲ” ಎಂದು ರಾಗವಾಗಿ ಹೇಳಿದನು.
*ಸಿಂಗಪ್ಪಯ್ಯರಿಗೆ ತಾನು ಪಂಜೂರ್ಳಿಯ ಬಳಿ “ನನ್ನ ಮಗನಿಗೆ ಮದುವೆಯಾಗದಿದ್ದರೆ ನಿನಗೆ ಪೂಜೆ ಮಾಡುವವರು ಗತಿ ಇರುವುದಿಲ್ಲ” ಎಂದು ಹೇಳಿದ್ದು ಒಮ್ಮೆಲೇ ನೆನಪಾಗಿ ಕುಳಿತಲ್ಲಿಯೇ ಪಂಜೂರ್ಳಿಯನ್ನು ನೆನೆದು ಕೈಮುಗಿದರು.*
– ವಿಕ್ರಮ್ ಜೋಯ್ಸ್
ಶಿವಮೊಗ್ಗ.
vikramjois89@gmail.com
Facebook ಕಾಮೆಂಟ್ಸ್