X
    Categories: ಕಥೆ

ಕಾಮಿತ ಫಲದೇ …

ಆಗಿನ್ನೂ ನಾನು ಚಿಕ್ಕವ .ನಾನೇಕೆ ಹೀಗಿದ್ದೇನೆ ಎಂಬುದು ನನಗೆ ವಿಚಿತ್ರವೆನಿಸುತ್ತಿತ್ತು. ನಾನು ನೋಡಿದ ಯಾವ ಮನುಷ್ಯರಿಗೂ ಕೋಡಿರಲಿಲ್ಲ. ನನ್ನಪ್ಪ ವಿಂಭಾಡಕ ಮುನಿಗಳ ಬಳಿ ಹೋಗಿ ಪೆದ್ದು ಪೆದ್ದಾಗಿ ‘ ನಾನೇಕೆ ಹೀಗೆ? ‘ ಎಂದು ಕೇಳುತ್ತಿದ್ದೆ. ಅವರಾದರೂ ಹೇಗೆ ಹೇಳಿಯಾರು? ನಾನು ಸ್ನಾನ ಮಾಡುತ್ತಿದ್ದಾಗ ನನ್ನ ಮುಂದೆ ಊರ್ವಶಿ ಬಂದಳು, ಅವಳನ್ನು ನೋಡಿ ನಾನು ಆಕರ್ಷಿತನಾಗಿ ವೀರ್ಯ ಸ್ಖಲಿಸಿದೆ. ನನ್ನ ವೀರ್ಯ ಸೇರಿದ ನೀರನ್ನು ಅಲ್ಲಿಯೇ ಕೆಳಗೆ ನಿಂತಿದ್ದ ಹೆಣ್ಣು ಜಿಂಕೆಯೊಂದು ಕುಡಿಯಿತು. ಅದರ ಹೊಟ್ಟೆಯಲ್ಲಿ ನೀನು ಬೆಳೆದೆ ಎಂದು ನಾಚಿಕೆ ಬಿಟ್ಟು ಹೇಗೆ ಹೇಳಲು ಸಾಧ್ಯ?. ಆದರೂ ನನ್ನಪ್ಪ ಕರುಣಾಮಯಿ .ಅಮ್ಮನನ್ನು ತನ್ನ ಆಶ್ರಮದಲ್ಲಿಯೇ ಇಟ್ಟುಕೊಂಡು ಪೋಷಿಸಿದ. ನನ್ನ ತಲೆಯ ಮೇಲೆ ಕೋಡು ಬೆಳೆಯುತ್ತಿರುವುದನ್ನು ಕಂಡು ‘ ಋಷ್ಯಶೃಂಗ ‘ ಎಂದು ಅಪ್ಪನೇ ನಾಮಕರಣ ಮಾಡಿದನಂತೆ.

ಪ್ರೀತಿ, ಪ್ರೇಮ, ಅಕ್ಕರೆ ಇವೆಲ್ಲವೂ ತಿಳಿಯಲು ನಾನೇನು ಮನುಷ್ಯನೇ? . ಆದರೂ ಆ ಅಂಗ ದೇಶದ ನರೇಶ ರೋಮಪಾದ ಕಳುಹಿಸಿದ ವಿಲಾಸಿನಿಯರನ್ನು ನೋಡಿ ನಾನೇಕೆ ಪುಳಕಿತನಾದೆ?

” ನೋಡು ಮಗನೇ, ನೋಟಕ್ಕೊಂದು ಭಾವವಿದೆ. ನಾನು ನಿನ್ನನ್ನು ನೋಡುತ್ತಿರುವ ಭಾವನೆಗೂ ಅವರು ನಿನ್ನನ್ನು ನೋಡುತ್ತಿರುವ ಭಾವನೆಗೂ ವ್ಯತ್ಯಾಸವಿದೆ. ಸಾಧನೆಯ ಹಾದಿಯಲ್ಲಿ ಇಂತಹ ಅಡಚಣೆಗಳು ಸಾಮಾನ್ಯ ” ಎಷ್ಟು ಸ್ಪಷ್ಟವಿತ್ತು ನಿನ್ನ ಮಾತುಗಳು ಅಪ್ಪ. ಅಷ್ಟೂ ಜನರನ್ನು ಎಡಗೈಯಲ್ಲಿ ನಿರಾಕರಿಸಿ ಮುನ್ನಡೆದಿದ್ದೆ.

ಮನುಷ್ಯ ಸಹಜ ಕಾಮನೆಗಳು ಇಲ್ಲದ ಕಗ್ಗಲ್ಲು ನಾನು. ಅದು ನನ್ನ ಹುಟ್ಟುಗುಣವಾಗಿರಬಹುದು ಅಥವಾ ನನ್ನಪ್ಪ ನನ್ನನ್ನು ಹಾಗೆ ಬೆಳೆಸಿರಬಹುದು. ನಿರಂತರವಾಗಿ ಹರಿಯುವ ನೀರು ಕಗ್ಗಲ್ಲನ್ನೂ ಕೊರೆದು ಪುಡಿಮಾಡಬಲ್ಲದು. ಅವಳು ಬಂದಳು, ‘ಶಾಂತೆ !’.ತದ್ವಿರುದ್ಧ ಹೆಸರು. ನನ್ನ ಶಾಂತ ಮನಸ್ಸಿನಲ್ಲಿ ಅಲೆ ಎಬ್ಬಿಸಿದವಳು. ಯಾರವಳು? ಎಲ್ಲಿಂದ ಬಂದವಳು? ಯಾವೊಂದೂ ನನಗೆ ಗೊತ್ತಿರಲಿಲ್ಲ. ಆದರೆ ಆಕೆ ನನ್ನ ನಿಸ್ವಾರ್ಥ ಸೇವೆ ಮಾಡಿದಳು. ಸೇವಕಿಯಾದಳು, ಸ್ನೇಹಿತೆಯಾದಳು ………..

ನಮ್ಮಿಬ್ಬರ ಮಧ್ಯೆ ಇದ್ದದ್ದು ಬರಿಯ ಸ್ನೇಹವಲ್ಲವೇ? .ನನಗೆಲ್ಲಿ ಪ್ರೀತಿ, ಕಾಮ ಗೊತ್ತಿರಲು ಸಾಧ್ಯ? .ಆದರೂ ನಾನೇಕೆ ಅವಳ ಜೊತೆ ಸಮಯ ಕಳೆಯಲು ಇಷ್ಟಪಡುತ್ತಿದ್ದೆ? ಕನ್ನಡಿಯ ಮುಂದೆ ಬೆತ್ತಲಾಗಿ ನಿಂತು ನನ್ನ ದೇಹದಲ್ಲಾಗುತ್ತಿರುವ ಬದಲಾವಣೆಗಳನ್ನು ಏಕೆ ಗಂಭೀರವಾಗಿ ಪರಿಗಣಿಸಲು ಶುರುಮಾಡಿದೆ? ಅವಳಿಲ್ಲದೆ ನಾನಿಲ್ಲ ಎಂಬ ಹಂತ ತಲುಪಿದ್ದೆ. ಪೂಜೆಗೆ ಕೂತಾಗ ಹೂವು ಎಂದೊಡನೆ ಶಾಂತೆ ನನ್ನೆದರು ಹೂವಿನ ಮಾಲೆ ಹಿಡಿದು ಬರಬೇಕು. ಅಭಿಷೇಕಕ್ಕೆ ಅವಳೇ ನೀರು ತಂದು ಕೊಡಬೇಕು. ನೈವೇದ್ಯಕ್ಕೆ ಅವಳೇ ಪಾಯಸ ಮಾಡಬೇಕು. ಆಕೆಯ ವಿನಃ ನನ್ನ ಆಶ್ರಮದ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ.

ಅಂತಹ ಅನಿವಾರ್ಯತೆಯಲ್ಲಿ ಅವಳೇಕೆ ನನ್ನನ್ನು ಬಿಟ್ಟು ಹೋದಳು? ಹೇಳದೆ -ಕೇಳದೆ ರಾತ್ರೋ ರಾತ್ರಿ ಓಡಿಹೋಗುವ ಅನಿವಾರ್ಯತೆ ಏನಿತ್ತು ? ನನ್ನಪ್ಪ ಇದೇ ಸಮಯದಲ್ಲಿ ಧ್ಯಾನಕ್ಕೆ ಕೂರಬೇಕೆ? ಅವನ ಬಳಿಯಾದರು ನಾನು ವಿಚಾರಿಸಬಹುದಿತ್ತು. ಆತನ ದಿವ್ಯದೃಷ್ಟಿಯಿಂದ ಶಾಂತೆಯ ಬಗ್ಗೆ ತಿಳಿದುಕೊಳ್ಳಬಹುದಿತ್ತು. ಕೊನೆಯ ಪಕ್ಷ ಒಂದೆರಡು ಸಮಾಧಾನದ ಮಾತುಗಳಾದರೂ ಸಿಗುತ್ತಿತ್ತು.

ಒಂದಷ್ಟು ದಿನ ನನ್ನ ಪಾಲಿಗೆ ಯಾರೂ ಇರಲಿಲ್ಲ. ಆಶ್ರಮದಲ್ಲಿ ನಾನು ಒಬ್ಬಂಟಿಯಾಗಿ ಬಿಕ್ಕುತ್ತಿದ್ದೆ. ಯಾಕೆ ಬಿಕ್ಕುತ್ತಿದ್ದೆ? ಉಹುಂ, ನನಗೂ ಗೊತ್ತಿಲ್ಲ. ಎಲ್ಲವನ್ನೂ ತ್ಯಜಿಸಿದ ಋಷಿಗೆ ಹೆಣ್ಣಿನ ಮೋಹವೇ? ಛೇ ! ಯೋಚಿಸಿದರೂ ಪ್ರಮಾದವಾದೀತು. ಆದರೆ ನನಗೆ ಶಾಂತೆ ಬೇಕು. ಅವಳ ಸಂಗಡ ಮಾತನಾಡಬೇಕು, ಅವಳ ಮಡಿಲಲ್ಲಿ ತಲೆಯಿಟ್ಟು ಮತ್ತೆ ಮಗುವಾಗಬೇಕು.

ಸಮುದ್ರ ಎಷ್ಟೇ ವಿಶಾಲವಾಗಿ ಇದ್ದರೂ ತೀರ ಎಂಬುದು ಇರಲೇಬೇಕು ತಾನೆ. ನನಗನ್ನಿಸಿದ ಹಾಗೆ ಶಾಂತೆಗೂ ಆಗಿದ್ದಿರಬಹುದು .ಅವಳೂ ಸಹ ಋಷ್ಯಶೃಂಗನಿಗಾಗಿ ಬಿಕ್ಕಿ ಊಟ, ತಿಂಡಿ ಬಿಟ್ಟು ಪರಿತಪಿಸಿರಬಹುದು. ಒಂದಿಷ್ಟು ಹನಿ ಕಣ್ಣೀರಿಗಾದರೂ ನಾನು ಬೆಲೆಬಾಳುತ್ತೇನೆ. ಮತ್ತೆ ಅವಳು ಬಂದಳು, ನನ್ನ ಶಾಂತೆ .ಅವಳನ್ನು ನೋಡಿ ನನ್ನ ಮೈಯ ಕಣ-ಕಣವೂ ಕುಣಿಯದಿದ್ದರೆ ಕೇಳಿ.

ಅವಳು ರೋಮಪಾದನ ಮಗಳಂತೆ, ಅಂಗ ದೇಶದ ರಾಜಕುಮಾರಿ. ನನ್ನಪ್ಪ ಒಪ್ಪುತ್ತಾನೆಯೇ? ಅವಳಿಗೇನು ಕೆಟ್ಟ ಉದ್ದೇಶವಿರಲಿಲ್ಲ. ನನ್ನ ಪಾದಸ್ಪರ್ಶದಿಂದ ಅಂಗ ದೇಶದಲ್ಲಿ ಕ್ಷಾಮ ಕಳೆದು, ಮಳೆ ಬರುತ್ತದೆ ಎಂದು ನಾರದರು ಹೇಳಿದರಂತೆ. ತನ್ನ ರಾಜ್ಯದ ಜನರಿಗಾಗಿ ನನ್ನಲ್ಲಿಗೆ ಬಂದಿದ್ದಾಳೆ. ಅಪ್ಪ ಒಪ್ಪಲೇಬೇಕು. ಅಷ್ಟು ಜನರಿಗೆ ಒಳ್ಳೆಯದಾಗುತ್ತದೆ ಎಂದಾದರೆ ನಾನೇಕೆ ಹೋಗಬಾರದು? .ಹೋಗಿಯೇ ಹೋಗುತ್ತೇನೆ. ಅಪ್ಪನ ಆರ್ಶೀವಾದ ಪಡೆದೇ ಹೋಗುತ್ತೇನೆ ……..

ನಾವಿಬ್ಬರೂ ದಂಪತಿಗಳಾದೆವು. ಅಂಗ ದೇಶದಲ್ಲಿ ಈಗ ಸಮೃದ್ಧಿ. ನಮ್ಮಿಬ್ಬರ ಮಧ್ಯೆ ಯಾವುದೇ ಮುಚ್ಚು ಮರೆಗಳಿಲ್ಲ. ಆದರೆ ಈ ವಿಷಯ ಹೇಗೆ ಹೇಳಲಿ? ನಿನಗೆ ಜನ್ಮ ಕೊಟ್ಟ ಅಪ್ಪನೇ ನನ್ನನ್ನು ಪುತ್ರಕಾಮೇಷ್ಟಿ ಯಾಗಕ್ಕೆ ಕರೆದಿದ್ದಾನೆ. ನಾನೇ ಆ ಯಾಗದ ಅಧ್ವರಿ. ಇಲ್ಲ, ದಶರಥನೇ ನಿನ್ನ ತಂದೆ ಎಂಬ ಸತ್ಯ ನನ್ನೊಂದಿಗೇ ಮಣ್ಣಾಗಲಿ. ಎಲ್ಲವನ್ನೂ ಮನಸ್ಸಿನಲ್ಲೇ ಮುಚ್ಚಿಟ್ಟು ದಶರಥನಿಗೆ ಹರಸುತ್ತೇನೆ.

” ಶೀಘ್ರ ಮೇವ ಸಂತಾನ ಪ್ರಾಪ್ತಿರಸ್ತು ” ……..

Facebook ಕಾಮೆಂಟ್ಸ್

Gurukiran: ನಿರುಪದ್ರವಿ ಸಾಧು ಪ್ರಾಣಿ. ಹುಟ್ಟಿದ್ದು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ. ಐದಡಿಯ ಮೇಲೆ ಆರಿಂಚು ಇದ್ದೇನೆ. ದೇಹದ ತೂಕಕ್ಕಿಂತ ಮಾತಿನ ತೂಕ ಹೆಚ್ಚು . ಗೋಧಿ ಬಣ್ಣ ಸಾಧಾರಣ ಮೈಕಟ್ಟು . ಸದ್ಯಕ್ಕೆ ಬರವಣಿಗೆ ಹವ್ಯಾಸ , ಮುಂದೆ ಗೊತ್ತಿಲ್ಲ.
Related Post