X

ಕರಾಳಗರ್ಭ ಭಾಗ- 10

೧೨

ಆಫೀಸಿಗೆ ಮರಳುತ್ತಲೇ ಕೂಲಾದ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತ ತಕ್ಷಣ, ಲೂಸಿ

” ಕಾಫಿ ಬೇಕಲ್ಲವೇ ?”ಎಂದಳು…ಅದಲ್ಲವೇ ಮಾತು!

“ಕಾಫಿ ಕುಡಿದು ಯಾವುದೋ ಯುಗವೇ ಆಯಿತು..ಕೊಡು, ಕೊಡು …ಈ ತೂಕಡಿಸುವ ಮಿದುಳಿಗೆ ಚಾಲನೆ ಕೊಟ್ಟು ಬೇಗ ಈ ಕೇಸಿನ ಪರಿಹಾರ ಹುಡುಕೋಣಾ…” ಎಂದೆ

“ ಇನ್ಯಾರಾದರೂ ಪ್ರಾಣ ಬಿಡುವ ಮುಂಚೆ ಅಂತಲೆ?” ಎಂದಳು ಕಾಫಿ ಬಗ್ಗಿಸುತ್ತಾ.

“ಇನ್ಯಾರೋ ಅಲ್ಲಾ, ಲೂಸಿ, ನನ್ನ ಪ್ರಾಣ!” ಎಂದೆ.

“ವಿಜಯ್,ಶಟಪ್!” ಎಂದಳು ತಕ್ಷಣ ಭಾವೋದ್ವೇಗದಿಂದ.

ಅವಳ ಕಂಗಳನ್ನು ನೋಡಿದೆ.ನನಗೆ ಅಷ್ಟು ಆಶ್ವಾಸನೆ ಸಾಕಾಗಿತ್ತು. ಆದರೂ ಅವಳಿಗೆ ತಿಳಿಹೇಳುವುದು ಅವಶ್ಯಕವಿತ್ತು

“ಲೂಸಿ, ನಾವಿಲ್ಲಿ ಕಳ್ಳ-ಪೋಲೀಸ್ ಆಟವಾಡುತ್ತಿಲ್ಲ..ಇಲ್ಲಿ ನಿಜಕ್ಕೂ ಅಪಾಯವಿದೆ..ಹಲವು ದಶಕಗಳಿಂದ ಕಾಪಾಡಿಕೊಂಡು ಬಂದ ರಹಸ್ಯವನ್ನು ನಾವು ಬಯಲು ಮಾಡಹೊರಟಿದ್ದೇವೆ…ಇದರಲ್ಲಿ ಈ ಊರಿನ ಹಲವು ಮಂದಿಯ ಮಾನ– ಅವಮಾನ, ಗೌರವ, ಹಣ ಎಲ್ಲಾ ಅಡಗಿದೆ…ಆಗಲೇ ಇಬ್ಬರನ್ನೂ ಯಾರೋ ಕೊಂದಿದ್ದಾರೆ. ಆದರೆ ನನಗೆ ಇಂತಾ ಜೀವನ ಹೊಸದಲ್ಲ…೦.೪೫ ರಿವಾಲ್ವರ್ ಸದಾ ನನ್ನ ಬಳಿಯಿರುತ್ತೆ….ಸುಮಾರು ಕೇಸ್’ಗಳಲ್ಲಿ ನನಗೆ ಇಂತದೇ ಪರಿಸ್ಥಿತಿಗಳು ಎದುರಾಗಿವೆ” ಎಂದೆ ಅವಳನ್ನೇ ಗಮನಿಸುತ್ತಾ.

“ನಿಮ್ಮ ಜತೆ ಇರಬೇಕಾದರೆ ಮುಂದೆ ಇದಕ್ಕೆಲ್ಲ ನಾನು ಹೊಂದಿಕೊಳ್ಳಬೇಕು ಅಂತಾ ತಾನೆ?” ಎಂದಳು ನನ್ನ ದೃಷ್ಟಿಗೆ ದೃಷ್ಟಿ ಸೇರಿಸುತ್ತಾ ಲೂಸಿ..ಎಂತಾ ಸೂಕ್ಷ್ಮಗ್ರಾಹಿ!

“ಮುಂದಿನ ವಿಷಯವನ್ನು ಈ ಕೇಸ್ ಬಗೆಹರಿಸಿದ ನಂತರ ಯೋಚಿಸೋಣಾ, ಬಿಡು…”ಎಂದು ನಾನು ಮತ್ತೆ ಕೇಸಿನ ತನಿಖೆಗೆ ವಾಪಸ್ ಬರುತ್ತಾ ಕೇಳಿದೆ:

“….ಈ ಸುಬ್ಬಮ್ಮ ಬರೆದ ಉತ್ತರ ,” ನದಿಯ ಬದಿ ಚಿತ್ರಣ, ಮಿಲನ “ ಅಂದರೇನಿರಬಹುದು ಲೂಸಿ?:”’

ಲೂಸಿ ಜಾಣ ನಗೆ ಬೀರುತ್ತಾ ತಲೆ ಕುಣಿಸಿದಳು:” ಇದನ್ನು ನೀವಾಗಲೇ ಪತ್ತೆ ಹಚ್ಚಿದ್ದೀರಿ, ವಿಜಯ್, ಸುಮ್ನೆ ನನ್ನನ್ನು ಪರೀಕ್ಷಿಸುತ್ತಿದ್ದೀರಾ?..ಇರಲಿ,ಆ ಕಾಲದಲ್ಲಿ ೧೬ ವರ್ಷದ ನವಯುವತಿ ರಚನಾ ನಂಬೂದರಿ ಪೆಯಿಂಟಿಂಗ್ ಹವ್ಯಾಸವಿದ್ದವಳು…. ಈ ಕರ್ಪೂರಿ ನದಿಯ ಬದಿಯಲ್ಲಿ ಚಿತ್ರ ಬರೆಯಲು ಹೋಗುತ್ತಿದ್ದಳೆನಿಸುತ್ತೆ….ಅಲ್ಲಿ ಈ ಕೊಳಲೂದುವ ಯುವಕನ ಪರಿಚಯವಾಗಿ ಇಬ್ಬರೂ ಪ್ರೀತಿಸಿರಬೇಕು..” ಎನ್ನುವಳು

“ ಕರೆಕ್ಟ್, ಲೂಸಿ!..ಆಕೆಯ ಅಂಗಡಿಯಲ್ಲಿದ್ದ ಆ ಕೊಳಲೂದುವ ಯುವಕನ ಪೆಯಿಂಟಿಂಗ್ಸ್ ನೋಡಿದ್ದುದರಿಂದ ನನಗೆ ಆಗಲೇ ಅನುಮಾನವಿತ್ತು…” ಎಂದು ಮುಂದೆ ಹೇಳು ಎಂದು ಸೂಚಿಸಿದೆ

“ಅವನು ಬಡವರ ಮನೆಯ ಹುಡುಗನಿರಬೇಕು, ವಿಜಯ್..ಆದರೂ ಕಲಾಪ್ರೇಮಿಗಳಾದ ಈ ಯುವ ಜೋಡಿ ಯಾರ ಭಯವೂ ಇಲ್ಲದೇ ಒಂದಾದರು ಅನಿಸತ್ತೆ… ರಚನಾ ಅಪ್ರಾಪ್ತ ವಯಸ್ಸಿನಲ್ಲಿ ಬಸುರಾದಳು…” ಎಂದು ಲೂಸಿ ’ಹೇಗಿದೆ ನನ್ನ ಉತ್ತರ ’ ಎನ್ನುವಂತೆ ನೋಡುವಳು

“ ಯಾರೋ ಬಡವರ ಹುಡುಗನಲ್ಲಾ, ಲೂಸಿ… ಶ್ರೀಲಂಕಾ ದ್ವೀಪದಿಂದ ಬಂದ ನಿರಾಶ್ರಿತರ ಕ್ಯಾಂಪಿನಲ್ಲಿದ್ದ ಒಬ್ಬ ಬಡ ತಮಿಳು ಯುವಕ ಎಂದು ನಾವು ಊಹಿಸಬಹುದು…” ಎಂದೆ, ಮುಂದೆ ಯೋಚಿಸು ಎನ್ನುವಂತೆ ನೋಡಿದೆ

ಲೂಸಿ ನನ್ನ ಪ್ರಶ್ನೋತ್ತರದ ಕಾಗದವನ್ನೆ ದಿಟ್ಟಿಸಿ ನೋಡುತ್ತಿದ್ದಳು…” ದೂರದಿಂದ ಬಂದವನು ಎನ್ನುವುದಕ್ಕೆ ಇದು ಸರಿ ಹೋಗುತ್ತದೆ….ಶ್ರೀಲಂಕಾದಿಂದ!…ಕರೆಕ್ಟ್!… ಆಮೇಲೆ ಮುಂದೆ ಬರೆದಿರುವುದು: ಇನ್ನೂ ದೂರಕ್ಕೆಹೋಗಿಬಿಟ್ಟ…. ಹಾಗಂದರೇನು, ವಿಜಯ್?..”

ನಾನು ಸುಮ್ಮನೆ ಮುಗುಳ್ನಕ್ಕೆ…”ನೀನೇ ಹೇಳು ಲೂಸಿ, ಜಾಣೆಯಲ್ಲವೆ?” ಎಂದೆ.

ಎರಡು ಕ್ಷಣ ನೀರವ ಮೌನ…

ಲೂಸಿ ಗಾಬರಿಯಿಂದ ನನ್ನತ್ತ ನೋಡಿದಳು:”ಅಂದರೆ ಅವನನ್ನು ಕೊಂದು ಬಿಟ್ಟರೆ ವಿಜಯ್?.. ’ಇನ್ನೂ ದೂರ” ಎಂದರೆ ವಾಪಸ್ ಬಾರದ ಜಾಗಕ್ಕೆ ಹೋಗಿ ಬಿಟ್ಟಾ ಅಂತಲ್ಲವೇ?” ಎಂದು ಕಣ್ಣು ಮಿಟುಗಿಸದೇ ನನ್ನತ್ತ ನೋಡಿ ”…ಓಹ್, ಹಾಗಾದರೆ ಇದೇ ಏನು ನಂಬೂದರಿ ಕುಟುಂಬದ ಬಹಿರಂಗವಾಗಬಾರದ ರಹಸ್ಯ?” ಎಂದು ಉಸುರಿದಳು.

ನಾನು ಒಪ್ಪುತ್ತಾ:” ಹೌದು, ಲೂಸಿ..ಮೃದುಲಾ ಹೆತ್ತಮ್ಮ ರಚನಾ ಮಾತ್ರ ಈಗ ಬದುಕಿದ್ದಾಳೆ..ಅವಳ ತಂದೆಯನ್ನು ಆಗಲೇ ಕೊಂದುಬಿಟ್ಟಿದ್ದರು…ಪಾಪ, ಆ ಸುಬ್ಬಮ್ಮನಿಗೆ ಅಂತಾ ಹುಚ್ಚು ಹಿಡಿದಿಲ್ಲಾ, ಅಲ್ಲವೆ?…ಎಷ್ಟೋ ತಲೆ ಸರಿಯಿರುವವರಿಗಿಂತಾ ಚೆನ್ನಾಗಿಯೇ ಹಳೆ ಕತೆಯನ್ನು ಜ್ಞಾಪಿಸಿಕೊಂಡೇ ನಮಗೆ ಉತ್ತರಿಸಿದ್ದಾಳೆ” ಎಂದೆ, ಇದು ಕೇಸಿನ ನಿರ್ಣಾಯಕ ಘಟ್ಟವೆನ್ನುವಂತಾ ಸ್ಥಿತಿ ಎಂದು ತೋಚಿತು.

“ಹಾಗಾದರೆ ಆ ಯುವಕನನ್ನು ಕೊಂದಿದ್ದು ಯಾರು?…ರಚನಾಗೆ ಗರ್ಭಪಾತ ಮಾಡಿಸ್ಲಿಲ್ಲಾ ಯಾಕೆ?…ಮತ್ತು ಜಾನಿ-ಶಾಂತಿಯನ್ನು ಯಾರು ಕೊಂದರು?” ಎಂದು ತಲೆಕೆರೆದುಕೊಂಡಳು ಲೂಸಿ.

ನಾನು ಗಡಿಯಾರ ನೋಡಿಕೊಂಡೆ: ” ಹನ್ನೊಂದು ಗಂಟೆಯಾಗುತ್ತಿದೆ, ಲೂಸಿ…ಇದಕ್ಕೆಲ್ಲಾ ರಚನಾ ಮಾತ್ರವೇ ಉತ್ತರಿಸಲು ಸಾಧ್ಯ..ಬಾ, ಹೋಗೋಣಾ…” ಎಂದೆ.

ಅವಳು ತಲೆಯೆತ್ತಿ ನನ್ನತ್ತ ನೋಡಿ ಬೇರೆ ದಾರಿಯೇ ಇಲ್ಲ ಎಂದು ಅರಿವಾದವಳಂತೆ ತಲೆಯಾಡಿಸಿದಳು.

೧೩

ಇಂದು ನಾವು ರಚನಾರ ಅಂಗಡಿಗೆ ಹೋದಾಗ ಆಕೆ ಒಬ್ಬರೇ ಇದ್ದರು.ನಮಗೀಗ ಬಹಳ ವಿಷಯಗಳು ಗೊತ್ತಿದ್ದರಿಂದ ಒಂದು ಹೊಸ ವಿಶ್ವಾಸವಿತ್ತು, ಈ ಬಾರಿಯ ವಿಚಾರಣೆಯಲ್ಲಿ.

ಮತ್ತೆ ಲೂಸಿ ಮತ್ತು ನನ್ನನ್ನು ನೋಡಿ ಆಕೆ ಸ್ವಲ್ಪ ವಿಚಲಿತರಾದರೂ ಹೋದ ಬಾರಿಯಂತೆ ಗಾಬರಿಯಾಗಲಿಲ್ಲ..ಏನೋ ಒಂದು ಸೋತು ಗೆದ್ದ ಶಾಂತಿಯಿತ್ತು ಆಕೆಯ ಮುಖದಲ್ಲಿ.

“ಬನ್ನಿ ಕುಳಿತುಕೊಳ್ಳಿ “ ಎಂದು ಒಳ ರೂಮಿಗೆ ಕರೆದೊಯ್ದರು..ಏ ಸಿ ಹಾಕಿದ್ದ ಒಂದು ಟೇಬಲ್ ಮತ್ತು ಮೂರು ಕುರ್ಚಿಯಿದ್ದ ಸಣ್ಣ ಕೋಣೆ…ಅಲ್ಲಿ ಹಳೆ ಪೆಯಿಂಟಿಗ್ಸ್ ಕ್ಯಾನ್’ವಾಸ್’ಗಳೂ,ಒಂದು ಕಂಪ್ಯೂಟರ್ ಮತ್ತು ಕೆಲವು ಅಕೌಂಟ್ಸ್ ಲೆಡ್ಜರ್’ಗಳು ಸುತ್ತಲೂ ಹರಡಿ ಬಿದ್ದಿದ್ದವು. ಇದು ಅವರ ಲೆಕ್ಕ-ಪತ್ರ ಮತ್ತು ಉಗ್ರಾಣದ ಕೋಣೆ ಇರಬೇಕು ಎನಿಸಿತು.

ಲೂಸಿ ಮೊದಲ ಹತ್ತು ನಿಮಿಷ ನಮಗೆ ಗೊತ್ತಿದ್ದ ಮೃದುಲಾ ಸಂಬಂಧಿತ ವಿಷಯವನ್ನೆಲ್ಲಾ ವಿವರಿಸಿದ ನಂತರ, ರಚನಾ ಏನೂ ಹೇಳದೆ ತೆಪ್ಪಗೆ ನೆಲ ನೋಡುತ್ತಾ ಯೋಚಿಸುತ್ತಾ ಕೂತರು.

ಆಕೆ ತನ್ನ ಆಂತರಿಕ ಗೊಂದಲಗಳೊಂದಿಗೆ ಹೋರಾಡುತ್ತಿದ್ದರೆಂದು ನಮಗೆ ಅರಿವಾಯಿತು.

“ನೀವು ಮಿಕ್ಕ ವಿಷಯಗಳನ್ನೆಲ್ಲಾ ಹೇಳುವುದಾದರೆ ಈ ಸಮಸ್ಯೆ ಬಗೆಹರಿದು…ಮೃದುಲಾಗೂ ನಿಮಗೂ ಪುನರ್ಮಿಲನವಾಗುವ ಅವಕಾಶವೂ ಇರುತ್ತೆ” ಎಂದು ನಾನು ಕುಮ್ಮಕ್ಕು ನೀಡಿದೆ.

ಕೊನೆಗೆ ನಿಟ್ಟುಸಿರು ಬಿಟ್ಟು ಏನೋ ನಿರ್ಧರಿಸಿದವರಂತೆ ರಚನಾ ಆರಂಭಿಸಿದರು: “ ಹೌದು, ವಿಜಯ್..ನೀವು ಹೇಳುವುದು ಸರಿಯಾಗೇ ಇದೆ.ಇನ್ನು ನಾನು ನನ್ನನ್ನೇ ಸುಡುತ್ತಿರುವ ಸತ್ಯವನ್ನು ಹೇಳಿಯೇ ಬಿಡುತ್ತೇನೆ…

“ ಅಪ್ಪ ಆಗ ಸುಮಾರು ನಲವತ್ತು ವರ್ಷ ವಯಸ್ಸಿನವರು, ನಾನೊಬ್ಬಳೇ ಮಗಳು, ೧೭ ವರ್ಷ ವಯಸ್ಸು…ಮೊದಲಿಂದಲೂ ಅಪ್ಪನಿಗೆ ಮುಂಗೋಪ ಹೆಚ್ಚು, ಈ ಪ್ರದೇಶಕ್ಕೆಲ್ಲಾ ತಾವೇ ಡಿಸ್ಟ್ರಿಕ್ಟ್ ಕಲೆಕ್ಟರ್ ಎಂಬ ಒಣದರ್ಪ ಬೇರೆ..ನನ್ನನ್ನೂ ಅಮ್ಮನನ್ನೂ ಬಹಳ ಹದ್ದು ಬಸ್ತಿನಲ್ಲಿಟ್ಟುಕೊಳ್ಳಲು ಯಾವಾಗಲೂ ಪ್ರಯತ್ನಿಸುತ್ತಿದ್ದರು. ನನ್ನ ಮೇಲೆ ಪ್ರೀತಿಯಿತ್ತಾದರೂ ,ಉಸಿರು ಕಟ್ಟಿಸುವಂತಾ ವಾತಾವರಣ ಮನೆಯಲ್ಲಿ ನಿರ್ಮಿಸಿದ್ದರು..ಅಮ್ಮನಿಗಂತೂ ವಿಧಿಯಿಲ್ಲಾ, ಸುಮ್ಮನಿರುತ್ತಿದ್ದಳು

..ನನಗೋ ಮೊದಲೇ ನಿಸರ್ಗ, ಸಂಗೀತ ಪೆಯಿಂಟಿಂಗ್ ಇಂತಾ ಕಲೆಯ ಕಡೆಗೆ ಒಲುಮೆಯಿತ್ತು..ನೀವು ಪ್ರಾಯಶಃ ಅಪ್ಪನನ್ನು ನೋಡಿರಬೇಕಲ್ಲಾ, ಅದೇ ನಾವಿದ್ದ ಮನೆ, ಕರ್ಪೂರಿ ನದಿಯ ಬದಿಯಲ್ಲಿ,..ನಾನು ಅ ವಯಸ್ಸಿನಲ್ಲಿ ಬಹಳ ಒಂಟಿತನ , ಬೇಸರವನ್ನು ಅನುಭವಿಸುತ್ತಿದ್ದೆ.. ಅಪ್ಪ ಮನೆಯಲ್ಲಿಲ್ಲದ ಸಮಯದಲ್ಲಿ ಆ ನದಿ ದಡಕ್ಕೆ ಸ್ವಲ್ಪ ಮನ:ಶಾಂತಿಗಾಗಿ ಸುತ್ತಾಡಿ, ಹಾಗೇ ಏನಾದರೂ ಚಿತ್ರ ರಚಿಸಲು ಹೋಗುತ್ತಿರುತ್ತಿದ್ದೆ.. ಶ್ರೀಲಂಕಾದಿಂದ ನಮ್ಮ ದೇಶಕ್ಕೆ ಓಡಿಬಂದ ತಮಿಳು ನಿರಾಶ್ರಿತರೂ ಆಗ ಅಲ್ಲೆ ಕ್ಯಾಂಪ್ ಮಾಡಿಕೊಂಡು ಮೀನು ಹಿಡಿಯಲು ನದಿಗೆ ಬರುತ್ತಿದ್ದರು..ನಾನು ದಿನಾಲೂ ಪೆಯಿಂಟಿಂಗ್ ಮಾಡುವುದನ್ನು ನೋಡಿದ ಒಬ್ಬ ನನ್ನ ವಯಸ್ಸಿನ ಯುವಕ ನನ್ನನ್ನು ಸಮೀಪಿಸಿದ..ಅವನ ಹೆಸರು ಕಣ್ಣನ್ ಎಂದು. ಅವನು ನನ್ನ ಪಕ್ಕದಲ್ಲಿ ಕುಳಿತು ಸುಶ್ರಾವ್ಯವಾಗಿ ಕೊಳಲು ನುಡಿಸುತ್ತಿದ್ದರೆ ನನಗೆ ಬಹಳೇ ಪ್ರಿಯವಾಗುತ್ತಿತ್ತು…ಪಾಪ, ಅವನ ಅಪ್ಪಮ್ಮ ಇಬ್ಬರೂ ತಾಯ್ನಾಡಿನ ಗಲಭೆಯಲ್ಲೇ ಸತ್ತು ಅವನು ತಬ್ಬಲಿಯಾಗಿ ರಾತ್ರೋ ರಾತ್ರಿ ಕದ್ದು ದೋಣಿಯಲ್ಲಿ ಇಲ್ಲಿಗೆ ಓಡಿ ಬಂದಿದ್ದ…ಅದೂ ಇದೂ ಮಾತಾಡುತ್ತಾ ಅವನು ಅಲ್ಲಿ ಕೊಳಲು ನುಡಿಸುವುದೂ ನಾನು ಪೆಯಿಂಟಿಂಗ್ ಮಾಡುತ್ತಾ ನಗು ನಗುತ್ತಾ ಸಮಯ ಕಳೆಯುವುದೂ ಅಭ್ಯಾಸವಾಗಿಬಿಟ್ಟಿತು

…..ನನ್ನ ಒಂಟಿತನ ಬೇಸರ ಕಳೆಯಲು ನನಗೊಬ್ಬ ಸಮವಯಸ್ಕ, ಸಮಮನಸ್ಕ ಸಂಗಾತಿ ಸಿಕ್ಕನೆಂದು ನಾನು ಬಹಳ ಸಂತಸ ಪಡುತ್ತಿದ್ದೆ.ಅಪ್ಪ ಅತ್ತ ಹೋಗುತ್ತಲೂ, ನನಗೆ ಸ್ಕೂಲ್ ಮುಗಿದ ಕೂಡಲೇ ಅಮ್ಮನಿಗೆ ಹೇಳಿ ಪೆಯಿಂಟಿಂಗ್ ಹೆಸರಿನಲ್ಲಿ ನಾವಿಬ್ಬರೂ ನಿರ್ಜನವಾದ ನದಿ ತೀರದಲ್ಲಿ ಒಂಟಿಯಾಗಿರುತ್ತಿದ್ದೆವು. ಆಗ ನಮಗೆ ಹದಿಹರೆಯದ ವಯಸ್ಸು. ಎಲ್ಲಾ ಆ ಪ್ರಕೃತಿಯಿಚ್ಚೆಯಂತೆ… ನಾವು ಒಬ್ಬರನ್ನೊಬ್ಬರು ಪ್ರೇಮಿಸಿದೆವು..ನನಗೂ ತಿಳುವಳಿಕೆ ಕಮ್ಮಿ,, ಅವನೂ ಓದಿದವನಲ್ಲಾ,..ಹಾಗಾಗಿ… ನಾವು…”ಎಂದಾಕೆ ಸಂಕೋಚದಿಂದ ನಿಲ್ಲಿಸಿದರು..

“ ಅರ್ಥವಾಯ್ತು ಹೇಳಿ, ನಾವೆಲ್ಲಾ ವಯಸ್ಕರೇ ಇಲ್ಲಿರುವುದು..”ಎಂದು ಲೂಸಿ ಪ್ರೊತ್ಸಾಹಿಸಿದಳು.

ರಚನಾಗೆ ಆ ಮಧುರ ಕಾಲವೇ ಕಣ್ಣಲ್ಲಿ ಕಟ್ಟಿದಂತೆ ತೋರುತ್ತಿತ್ತು: “…….ಸರಿ…ನಾನು ಗರ್ಭಿಣಿ ಎಂದು ನನಗೆ ತಿಳಿಯಲು ಮೂರು ತಿಂಗಳಾದವು..ಅಮ್ಮನು ಅಪ್ಪನ ಬಳಿ ಎಂದೂ ಏನೂ ಮುಚ್ಚಿಟ್ಟವಳಲ್ಲ..ನನ್ನ ವಿಷಯ ತಿಳಿದ ರಾತ್ರಿ ಅಪ್ಪ ಭೂಮಿ-ಆಕಾಶ ಒಂದು ಮಾಡಿದರು..ನಮ್ಮ ನಂಬೂದರಿ ಕುಲಗೌರವಕ್ಕೆ ಧಕ್ಕೆಯಾಯಿತೆಂದೂ, ಅದೂ ಒಬ್ಬ ತಮಿಳು ನಿರ್ಗತಿಕನಿಂದ ಎಂದು ಅವರಿಗೆ ಕೋಪ ಸಿಡಿದೆದ್ದಿತು..ನನಗೆ ಸಿಕ್ಕಾ ಪಟ್ಟೆ ಹಂಟರ್ ತೆಗೆದುಕೊಂಡು ಹೊಡೆದರು..ನನಗೆ ವಿಪರೀತ ಪೆಟ್ಟಾಯಿತು, ಅಮ್ಮಾ ನನ್ನ ಮೈ ಮೇಲೆ ಬಿದ್ದು “ನಿಲ್ಲಿಸಿ, ನಿಲ್ಲಿಸಿ” ಎಂದು ಬೇಡಿಕೊಂಡಳು. ಅಪ್ಪನ ಬೆಸ್ಟ್ ಗೆಳೆಯ ಅಂದರೆ ಆಗ ಇಲ್ಲಿನ ಪೋಲಿಸ್ ಇನ್ಸ್ಪೆಕ್ಟರ್ ಶ್ರೀನಿವಾಸನ್, ದಿನಾಲೂ ಬಂದು ಹೋಗಿ ಮಾಡುವವರು… ಅವರು ಅಪ್ಪ ನನ್ನನ್ನು ಚಚ್ಚುತ್ತಿದ್ದಾರೆ ಎಂಬ ವಿಷಯ ಕೇಳಿ ಓಡೋಡಿ ಬಂದರು..ಅವರ ಸಲಹೆ ಮೇಲೆ ನನ್ನನ್ನು ಡಾಕ್ಟರ್ ಸೋಮನ್ ಎಂಬವರ ಬಳಿ ಕರೆದೊಯ್ದರು, ಅಲ್ಲಿ ಅವರೂ, ಅವರ ನೌಕರಿಯಲ್ಲಿ ಒಬ್ಬ ಸೂಲಗಿತ್ತಿ ಸುಬ್ಬಮ್ಮ, ಇವರಿಬ್ಬರು ಮಾತ್ರವೇ ನಮಗೆ ತಿಳಿದವರೂ, ರಹಸ್ಯ ಬಾಯಿ ಬಿಡದವರೂ ಇದ್ದಿದ್ದು. ಆದರೆ ಅಪ್ಪನಿಂದ ಬಿದ್ದ ಹೊಡೆತಗಳಿಂದ ನನಗೆ ಗರ್ಭದಲ್ಲಿ ಏನೂ ಊನವಾಗಿ ಬಿಟ್ಟಿತಂತೆ..‘ಇವಳಿಗೀಗ ಗರ್ಭಪಾತ ಮಾಡಲಾಗುವುದಿಲ್ಲಾ, ಜೀವಕ್ಕೇ ಅಪಾಯ ‘ ಎಂದೂ ನನ್ನ ಮಗುವಿನ ಹೆರಿಗೆ ಆಗಲೇಬೇಕೆಂದೂ ಡಾಕ್ಟರ್ ಹೇಳಿಬಿಟ್ಟರು…

“ ಇದರಿಂದ ಅಪ್ಪನ ಕೋಪ ಮತ್ತೆ ತಾರಕಕ್ಕೇರಿತು.. ನನಗೆ ಮದುವೆಗೆ ಮುಂಚೆಯೇ ಮಗುವಾಗುವುದನ್ನು ತಡೆಯಲು ಆಗಲಿಲ್ಲವಲ್ಲಾ ಎಂಬ ಕುಲಗೌರವಕ್ಕಾದ ಅವಮಾನ ಅವರನ್ನು ರಾಕ್ಷಸರನ್ನಾಗಿಸಿತು.ಮನೆಯಿಂದ ಬಿರ್ರನೆ ಒಂದುರಿವಾಲ್ವರ್ ತೆಗೆದುಕೊಂಡು ನದಿಯ ತೀರಕ್ಕೆ ಹೋದರು..ಅವರಿಗೆ ಬಡಪಾಯಿ ಕಣ್ಣನ್ನನ್ನು ಹುಡುಕಲು ಕಷ್ಟವೇನಾಗಲಿಲ್ಲಾ..ಅವನು ನಾವು ದಿನಾ ಸೇರುತಿದ್ದ ನಿರ್ಜನ ಸ್ಥಳದಲ್ಲೇ ಕೊಳಲೂದುತ್ತಾ ಸಿಕ್ಕಿದನಂತೆ.ಏನೇನು ವಾಗ್ವಾದವಾಯಿತೋ ನನಗೆ ತಿಳಿಯದು…ಅಲ್ಲೇ ಅವನನ್ನು ಅಪ್ಪ ಗುಂಡಿಟ್ಟು ಕೊಂದರು. ನಂತರ ತಾವು ಮಾಡಿದ್ದ ಅಪರಾಧ ಅರಿವಾಗಿ ಹೆದರಿ ಗೆಳೆಯ ಪೋಲಿಸ್ ಇನ್ಸ್ಪೆಕ್ಟರ್ ಶ್ರೀನಿವಾಸನ್’ರವರ ಸಹಾಯ ಕೇಳಿದರು..ಇಬ್ಬರೂ ಸೇರಿ ಆ ಹೆಣದ ಕಾಲಿಗೆ ಕಲ್ಲು ಕಟ್ಟಿ ಕರ್ಪೂರಿ ನದಿ ಆಳವಾಗಿದ್ದಲ್ಲಿ ಹೋಗಿ ಬಿಸಾಕಿ ಬಂದರು..

… ಆಗಿನ ಕಾಲದಲ್ಲಿ ನಡೆದ “ ಆನರ್ ಕಿಲ್ಲಿಂಗ್”( ಗೌರವಕ್ಕಾಗಿ ಹತ್ಯೆ) ಇದು! …ಆದರೆ ಈ ಕೇಸಿಗೆ ಇನ್ಸ್ಪೆಕ್ಟರ್ ಅವರೇ ಐ.ಓ,(ಇನ್ವೆಸ್ಟಿಗೇಟಿಂಗ್ ಆಫೀಸರ್),ಅಪ್ಪನೇ ಆಗ ಕಲೆಕ್ಟರ್!..ಇಬ್ಬರೂ ಸೇರಿ ಅವನ ಕೊಲೆಯನ್ನೂ ತನಿಖೆಯೇ ಮಾಡದೇ ಮುಚ್ಚಿ ಹಾಕಿಬಿಟ್ಟರು..ಇದರ ಶಾಕ್’ನಿಂದ ನನಗೆ ಮತ್ತೆ ಎರಡು ದಿನಾ ಜ್ಞಾನವೇ ಇರಲಿಲ್ಲ. ಸುಬ್ಬಮ್ಮ ನಿದ್ದ ಪಕ್ಕದ ಹಳ್ಳಿಯ ಮನೆಯೊಂದರಲ್ಲಿ ನನ್ನನ್ನೂ ಅಮ್ಮನನ್ನೂ ಗುಪ್ತವಾಗಿಟ್ಟು ನನಗೆ ಅಲ್ಲಿಯೇ ಹೆರಿಗೆ ಮಾಡಿಸಿದರು..ಫ಼ೆಬ್ರವರಿ ೧೪, ವ್ಯಾಲೆನ್ಟೈನ್ಸ್ ಡೆ,, ಅದೇ ಆ ಮಗು ಹುಟ್ಟಿದ ದಿನ..ಎಂತಾ ವಿಪರ್ಯಾಸ, ನೋಡಿದಿರಾ….

“….ಮಗುವಿಗೆ ಮೂರು ತಿಂಗಳು ತುಂಬುತ್ತಿರುವಂತೆಯೇ ಈ ಊರಿಗೆ ಬಂದಿದ್ದ ಪ್ರವಾಸಿಗಳಾದ ಹೊಸಮನಿ ದಂಪತಿಗಳಿಗೆ ನನ್ನ ಮಗುವನ್ನು ದತ್ತು ಕೊಟ್ಟುಬಿಟ್ಟರು..ಇದೆಲ್ಲಾ ಅವರವರು ಗುಪ್ತವಾಗಿ ಮಾತನಾಡಿಕೊಂಡು ನಡೆಸಿದ್ದು…ನನ್ನ- ಅಮ್ಮನ ಮಾತು ಕಿಂಚಿತ್ತೂ ನಡೆಯಲಿಲ್ಲ. ಇನ್ನೆಂದೂ ನಾವು ಈ ಬಗ್ಗೆ ಯಾರೂ ಮಾತನಾಡಬಾರದೆಂದು ಅಪ್ಪ ವಚನ ತೆಗೆದುಕೊಂಡರು.

…ಅಂತೂ ನನ್ನ ಪಾಲಿಗೆ ಕರ್ಪೂರಿ ನದಿ ಕಪ್ಪು ನದಿಯಾಗಿತ್ತು..ನಾನು ಜೀವನವೆಲ್ಲಾ ಕಣ್ಣನ್’ನೊಂದಿಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಲೇ ಇದ್ದೇನೆ..ಅವೇ ಈ ಪೆಯಿಂಟಿಂಗ್ಸ್ ಅನ್ನು ಇನ್ನೂ ಜೀವಂತವಾಗಿಟ್ಟಿವೆ” ಎಂದು ಭಾವುಕರಾಗಿ ಕಣ್ಣೊರೆಸಿಕೊಂಡರು ರಚನಾ..

Facebook ಕಾಮೆಂಟ್ಸ್

Nagesh kumar: ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.