X

ಕರಾಳ ಗರ್ಭ -5

” ನೀವು ಪ್ರೈವೇಟ್ ಡಿಟೆಕ್ಟಿವ್, ಬೆಂಗಳೂರಿನಿಂದ ಬರುತ್ತಿದ್ದೇರೆಂದು ನನ್ನ ಗರ್ಲ್’ಫ್ರೆಂಡ್ ಹೇಳಿದಳು..ಏನೋ ಮುಖ್ಯ ವಿಷಯ ಇರಬೇಕೆಂದು ಫಾಲೋ ಮಾಡುತ್ತಿದ್ದೇನೆ, ನನಗೆ ಬಿಜಿನೆಸ್ಸ್ ಕಮ್ಮಿ ನೋಡಿ!” ಎಂದ. ಅರ್ಧ ಸತ್ಯದಂತಿತ್ತು ಅವನ ಮಾತು.

“ಅವಳಿಗೆ ಹೇಗೆ ಗೊತ್ತು?”… ರಿವಾಲ್ವರ್ ಮೇಲೆ ಕೆಳಕ್ಕೆ ಆಡುತ್ತಿದೆ.

“ಲೂಸಿಯಾ ಲಾಯರ್ ಮೇಡಮ್ ಆಫೀಸಿನಲ್ಲಿ ಕಸ ಗುಡಿಸುತ್ತಾಳೆ ಅವಳು..ಮೇಡಮ್ ನಿಮ್ಮ ಬಗ್ಗೆ ಮಾತಾಡಿದ್ದು ಕೇಳಿಸಿಕೊಂಡಳು..ಹಿಂದೆ ಹೀಗೆಲ್ಲಾ ಹೇಳಿ ನನಗೆ ಸ್ವಲ್ಪ ಕೆಲಸ ತಂದು ಕೊಟ್ಟಿದ್ದಾಳೆ… ಲಾಯರ್ ಕೆಲಸಕ್ಕೆ ಬಂದವರಿಗೆ ನನ್ನ ಬಳಿಯೂ ಕೆಲಸವಿರತ್ತೆ ಒಮ್ಮೊಮ್ಮೆ…..ನಿಮ್ಮ ಲಾಡ್ಜ್ ಪತ್ತೆಹಚ್ಚಿ ನಾನೇ ನಿಮ್ಮನ್ನು ಹಿಂಬಾಲಿಸುತ್ತಿದ್ದೇನೆ… ನನಗೆ ಗೊತ್ತಿಲ್ಲದು ಈ ಊರಿನಲ್ಲಿ ಏನಪ್ಪ ಕೇಸ್ ಇರಬಹುದು ಸಿಟಿ ಪತ್ತೇದಾರರಿಗೆ ಎಂದು ಕುತೂಹಲ…ಆದರೆ ನೀವು ನಾನು ಫಾಲೋ ಮಾಡುವುದನ್ನು ಹಿಡಿದು ಬಿಟ್ರಲ್ಲಾ..ಬಹಳ ಜಾಣರಿರಬೇಕು!” ಎಂದು ಹುಬ್ಬೇರಿಸಿದ, ಇದೊಂದು ದೊಡ್ಡ ಸಾಧನೆಯೆಂಬಂತೆ.

ನಾನು ಗನ್ ಮುಚ್ಚಿಟ್ಟು ನಕ್ಕೆ. “ನಿನ್ನನ್ನೆ?.. ಒಬ್ಬ ಎಸ್’ಎಸ್’ಎಲ್’ಸಿ ಓದುವ ಹುಡುಗ ಕೂಡಾ ಕಂಡುಹಿಡಿಯಬಹುದು..”

ಅವನ ಮುಖ ಪೆಚ್ಚಾಯ್ತು..

“ಅಷ್ಟು ಪೆದ್ದನೇ ನಾನು?..ಏನೋ, ನಾನು ಚಿಕ್ಕ ಊರಿನವನು ಸಾರ್, ಎಲ್ಲಿಗೆ ಹೋಗಲಿ?” ಎಂದ ದಯಾ ಭಿಕ್ಷೆ ಬೇಡುವಂತೆ.

“ಇನ್ನು ಮೇಲೆ ನನ್ನ ಹಿಂದೆ ಬರಬೇಡಾ, ಅಷ್ಟೆ!… ಈ ಊರಲ್ಲ, ಈ ಲೋಕವನ್ನೇ ಬಿಡಬೇಕಾಗುತ್ತದೆ…”ಎಂದು ಎಚ್ಚರಿಸಿ ಅಲ್ಲಿಂದ ಹೊರಬಿದ್ದೆ. ಅವನಿಂದ ಇನ್ನು ಹೆಚ್ಚು ತೊಂದರೆಯಾಗದು ಎಂದು ವಿಶ್ವಾಸವಿತ್ತು.

ಹೊರಗೆ ಬಂದು ಇನ್ನೊಂದು ಡಬ್ಬಾ ಅಂಗಡಿಯಲ್ಲಿ ಬ್ರೆಡ್ ಸ್ಯಾಂಡ್ವಿಚ್ ತಿಂದು ಕಾಫಿ ಕುಡಿದೆ,…ಅದರೇಕೋ ಇನ್ನೂ ಮನಸ್ಸಿಗೆ ಈ ತನಿಖೆಯಿಂದ ಅಷ್ಟು ಸಮಾಧಾನವಾಗಲಿಲ್ಲಾ..ಇಲ್ಲೇನೋ ಮಿಸ್ ಹೊಡೆಯುತ್ತಿದೆ ಅನಿಸಿತು.

ಅಲ್ಲೇ ಹೊರಗಡೆ ಕಾಯೋಣವೆನಿಸಿತು..ಬಿಲ್ಡಿಂಗ್ ಬಾಗಿಲಿಗೆ ಬೆನ್ನು ಮಾಡಿ ಪೇಪರ್ ಓದುತ್ತಾ ಕಾದೆ. ಸ್ವಲ್ಪ ಹೊತ್ತಿನ ನಂತರ ಒಬ್ಬ ಕಪ್ಪು ಯುವತಿ ಒಳಹೋದಳು, ಮತ್ತೈದು ನಿಮಿಷದಲ್ಲಿ ಜಾನಿ ಜತೆ ಮೆಟ್ಟಲಿಳಿದು ಹೊರಗೆ ಬರುತ್ತಿದ್ದಳು..ಅವನ ಗರ್ಲ್’ಫ್ರೆಂಡ್!..ಇವಳನ್ನು ನಾನು ಲೂಸಿಯಾ ಆಫೀಸಿನಲ್ಲಿದ್ದಾಗ ಗಮನಿಸಬೇಕಾಗಿತ್ತು, ಆದರೆ ಅವಳು ಬೇಕಂತಲೇ ಕಾಣಿಸಿರಲಿಲ್ಲವೋ ಅಥವಾ ನಾನು ಬರೇ ಲೂಸಿಯಾಳನ್ನೇ ನೋಡುತ್ತಿದ್ದೆನೋ ಗೊತ್ತಿಲ್ಲ.., ಆದರೆ ಈ ಊರಿನಲ್ಲೂ ಕೆಲವರು ನನಗಿಂತಾ ಜಾಣರಿದ್ದಾರೆಯೆ? ಎಂದು ಹೊಟ್ಟೆ ಉರಿಯಿತು

” ನಿನಗೆ ಎಷ್ಟು ಹೇಳಿಕೊಟ್ರೂ ಬುದ್ದಿ ಬರಲ್ಲಾ ಜಾನಿ..ಅದೇನು ಉದ್ದಾರ ಆಗುತ್ತೀಯೋ?” ಎಂದು ಅವಳು ಅವನ ಮೇಲೆ ಕೋಪಿಸಿಕೊಂಡು ನುಡಿಯುತ್ತಿದ್ದಂತೆ, ಇಬ್ಬರೂ ನನ್ನ ಪಕ್ಕ ಹಾದು ಹೋದರು. ನನ್ನ ಬಗ್ಗೆಯೇ ಮಾತಾಡಿಕೊಳ್ಳುತ್ತಿರಬೇಕು.

” ಸಾರಿ ಕಣೆ!..ನಿನ್ನನ್ನು ಇವಾಗ ಊರಾಚೆ ಇರುವ ಮೀನಿನ ಹೋಟೆಲ್’ಗೆ ಊಟಕ್ಕೆ ಕರೆದು ಕೊಂಡೋಗುತ್ತೀನಿ ಬಾ” ಎಂದು ಪುಸಲಾಯಿಸಿ ಕಾರ್ ಬಳಿಗೆ ನೆಡೆದ… ನನ್ನನ್ನು ಮತ್ತೆ ಗಮನಿಸಲೇ ಇಲ್ಲ!.ಈ ಜಾನಿಗೆ ಪತ್ತೇದಾರಿ ವಿದ್ಯೆ ಹೇಳಿಕೊಡಲು ಯಾರಿಗೂ ಸಾಧ್ಯವಿಲ್ಲ, ಎನಿಸಿತು.

” ಅದೊಂದೆ ನಿನಗೆ ಬಂದ ಒಳ್ಳೆ ಐಡಿಯಾ ಅಂದರೆ !” ಎಂದು ಉತ್ತರಿಸುತ್ತ ಆ ಯುವತಿ ಅವನ ಹಳದಿ ನ್ಯಾನೋ ಹತ್ತಿದಳು. ಅವನ ಕಾರ್ ಅಲ್ಲಿಂದ ಹೊರಟ ಮೇಲೆ ನಾನೂ ಹೊರಟೆ.

ನನ್ನ ಬಳಿ ಇದ್ದ ಹೆಣ್ಣು ದತ್ತು ಕೊಟ್ಟವರ ಲಿಸ್ಟ್’ನಲ್ಲಿ ಮಾರ್ಚ್’ನಲ್ಲಿ ಎರಡು ತಂದೆತಾಯಿಯರದಿದ್ದವು. ಮೇ ತಿಂಗಳ ಮುಂಚಿನವು, ಮೃದುಲಾದೇ ಅಲ್ಲದಿದ್ದರೂ ಸ್ವಲ್ಪ ಸಮಕಾಲೀನವಾದದ್ದು..ಅವರ ಅಡ್ರೆಸ್’ನ್ನು ಟೆಲೆಫೋನ್ ಡೈರೆಕ್ಟರಿ ವಿಚಾರಣೆಯಲ್ಲಿ ಕಂಡು ಹಿಡಿದೆ. ಒಬ್ಬರ ಮನೆ ಶ್ರೀಮತಿ ಶರ್ಮಿಲಾ ವಾಸುದೇವನ್’ರವರದು, ಅದೇ ಹತ್ತು ನಿಮಿಷಗಳ ದೂರದಲ್ಲಿತ್ತು. ಅವರೊಂದಿಗೆ ಫೋನ್ ಮಾಡಿ ಅಪಾಯಿಂಟ್ಮೆಂಟ್ ಪಡೆದೆ.

ಮನೆಯ ಮುಂದೆ ಗೇಟ್ ದೊಡ್ಡ ಬುಲ್ಡಾಗ್ ನಿಂತಿತ್ತು. ಗುರ್ರ್ ರ್ ಎನ್ನುವಂತಿತ್ತು.. ನಾನು ಮಿಲಿಟರಿ ಫೊಲಿಸ್’ನಲ್ಲಿದ್ದಾಗ ಕಲಿತ ಒಂದು ಟ್ರಿಕ್ ಪ್ರಯೋಗಿಸಿದೆ..ಒಂದು ವಿಶೇಷ ಬಗೆಯ ವಿಸೆಲ್  ಸಿಳ್ ಳ್ ಳ್ಳ್!! ಎಂದು ಸಿಳ್ಳೆ ಹೊಡೆದೆ..

ಅದು ತಕ್ಷಣ ಮೆತ್ತಗಾಗಿ ಕಿವಿಯಾಡಿಸುತ್ತಾ ನೆಲಕ್ಕೆ ಮಲಗಿತು ಕುಯ್ ಗುಟ್ಟುತ್ತಾ..

“ವಾ, ವಾಟ್ ಅ ಟ್ರಿಕ್!..ಅದು ಯಾರಿಗೂ ಬಗ್ಗಲ್ಲಾ… ಅಂತದರಲ್ಲಿ…!!” ಅಂದರು ಬಾಗಿಲಿನಲ್ಲಿ ನಿಂತ ಅರವತ್ತು ವಯಸ್ಸಿನ ದಢೂತಿ ಮಧ್ಯವಯಸ್ಕೆ.

“ಶರ್ಮಿಲಾ ವಾಸುದೇವನ್ ತಾನೆ?” ಅಂದೆ ತೆಪ್ಪಗಾಗಿದ್ದ ಆಕೆಯ ನಾಯಿ ಪಕ್ಕದಲ್ಲಿ ಒಳಹೋಗುತ್ತಾ.

” ಹೌದು ಬನ್ನಿ”ಎಂದು ಒಳಕರೆದರು. ಲಕ್ಷಣವಾದ ಶ್ರೀಮಂತರ ಬಂಗಲೆ…

ಅವರ ಕೈಯಲ್ಲಿ ಕುಕರಿ ಪುಸ್ತಕವಿತ್ತು. ಅವರ ಅಡಿಗೆ ಮನೆಯಿಂದ ಘಮಘಮ ವಾಸನೆ ಬರುತಿತ್ತು..

“ನನಗೆ ಊಟ ಅಂದರಿಷ್ಟ..ಹೊಸ-ಹೊಸ ಅಡಿಗೆ ಮಾಡುವುದು ನನ್ನ ಒಳ್ಳೇ ಹಾಬಿ” ಎಂದರು ನನಗೆ ವಿವರಿಸುತ್ತಾ.

ಇಂತಾ ಒಳ್ಳೆ ಹಾಬಿಯಿಂದ ಆಕೆ ದಢೂತಿಯಾಗಿ ಉಬ್ಬಸ ಪಡುವುದು ಎದುರಿಗೇ ಗೋಚರವಾಗುತ್ತಿತ್ತು.

“ನಾನೊಬ್ಬ ಖಾಸಗಿ ಪತ್ತೇದಾರ “ಎಂದ ತಕ್ಷಣವೇ,” ಓಹ್, ಎಷ್ಟು ರೋಮಾಂಚಕ…ಆ ಜೇಮ್ಸ್ ಬಾಂಡ್, ಜೇಸನ್ ಬೌರ್ನ್ ತರಹವೇ?..ಒಳ್ಳೊಳ್ಳೇ ಹೀರೋಯಿನ್ಸ್ ಇರುತ್ತಾರೆ ಅವರ ಜತೆ” ಅಂದರು. ಸಿನೆಮಾ ಟಿ.ವಿ ನೋಡಿ ಮಾರುಹೋಗದವರಿಲ್ಲ.

“ನಾನು ಅವರಷ್ಟು ಅದೃಷ್ಟವಂತನಲ್ಲಾ” ಅಂದೆ.

ಒಳಗಿನಿಂದ ಏಲಕ್ಕಿ ಚಹಾ ತಂದು ಕೊಟ್ಟರು. ಕುಡಿಯುತ್ತಾ,

” ನೀವು ಮೂವತ್ತೈದು ವರ್ಷದ ಹಿಂದೆ ಮಗುವನ್ನು ದತ್ತು ಕೊಟ್ಟಿದ್ದು ನಿಜವೇ..ಏಕೆ ಎಂದು ಕೇಳಬಹುದೆ?”

ಆಕೆ ಮುಖ ಸ್ವಲ್ಪ ಸಪ್ಪಗಾಯಿತು.”ಅದನ್ನು ಕೇಳದಿದ್ರೆ ವಾಸಿ, ನಾನು ಆಗ ಹದಿನೆಂಟು ದಾಟಿದ್ದೆ. ಅಪ್ಪನಿಗೆ ಎದುರುವಾದಿಸಿ ನಾನೊಬ್ಬ ಸೈನಿಕನನ್ನು ಮದುವೆಯಾಗಿದ್ದೆ..ಅವರು ಯುದ್ಧದಲ್ಲಿ ಸತ್ತು ಹೋದ್ರು. ಅಪ್ಪ ನನ್ನನ್ನು ವಾಪಸ್ ಮನೆಗೆ ಬರುವ ಮುನ್ನ ಆ ಮಗುವನ್ನು ಮಕ್ಕಳಿಲ್ಲದ ತಮ್ಮ ತಂಗಿ ಭಾವನಿಗೆ ದತ್ತು ಕೊಡಿಸಿದರು, ನನಗೆ ನಂತರ ಬೇರೆ ಮದುವೆ ಮಾಡಿದರು..ಈಗಿನ ನನ್ನ ಪತಿ ಹೋಗಿಬಿಟ್ಟು ಐದು ವರ್ಷವೇ ಆಯ್ತು.. ಈ ಪ್ರಶ್ನೆಯಾಕೆ ಈಗ?..ನನ್ನ ಮಗಳು ಚೆನ್ನಾಗಿಯೇ ಬೆಳೆಯುತ್ತಿದ್ದಾಳೆ..”ಎಂದರು ನನ್ನ ಮುಖ ನೋಡುತ್ತಾ, ಪ್ರಶ್ನಾರ್ಥಕವಾಗಿ. ನಾನು ಮತ್ತೆ ಇನ್ನೊಂದು ಹೆಸರನ್ನು ಮುಂದಿಟ್ಟೆ

ನನ್ನ ಬಳಿಯಿದ್ದ ಎರಡನೆ ಹೆಸರಿನಾಕೆ ಆಗಿನ ಕಾಲಕ್ಕೆ ಆಕೆಯ ಗೆಳತಿಯೇ ಅಂತೆ …ಹೆಸರು ಶ್ರೀಮತಿ ಸಿವರಾಮನ್ ಎಂದು.. ಆಕೆಯೂ ಹೆಣ್ಣು ಮಗು ದತ್ತು ಕೊಟ್ಟ ಅಮ್ಮ …ಆದರೆ ಆಕೆ ಸತ್ತು ಸ್ವಲ್ಪ ವರ್ಷಗಳೆ ಆಗಿತ್ತೆಂದೂ,…ಆಗ ನಾನು ವಿಧಿಯಿಲ್ಲದೇ ಕೊನೆಗೆ ಮೃದುಲಾ ಕೇಸ್ ಎತ್ತಿ, ಆಕೆ ಹುಟ್ಟಿದ್ದು ಮೇ ತಿಂಗಳಾದರೂ ಅದಕ್ಕಿಂತಾ ಹತ್ತಿರದ ಮಾಹಿತಿ ನನ್ನಲ್ಲಿಲ್ಲವಾದ್ದರಿಂದ ಏನಾದರೂ ಸುಳಿವು ಸಿಕ್ಕೀತು ಎಂದೇ ನಿಮ್ಮ ಬಳಿಗೆ ಬಂದಿದ್ದೇನೆ ಎಂದೆಲ್ಲಾ ವಿವರಿಸಬೆಕಾಯಿತು.

“ನಿಮಗೆಲ್ಲಾ ಆಗಿನ ಕಾಲದಲ್ಲಿ ಯಾವ ಆಸ್ಪತ್ರೆಯಲ್ಲಿ ಹೆರಿಗೆಯಾಗುತ್ತಿತ್ತು?” ಎಂದು ವಿಚಾರಿಸಿದೆ. ಆಗ ಹೆಚ್ಚು ಆಸ್ಪತ್ರೆಗಳಂತೂ ಇರಲಾರದು ಎಂಬಂತೆ.

” ಆಸ್ಪತ್ರೆಯೆ?… ಎಲ್ಲಿತ್ತು, ಈ ಸುಡುಗಾಡು ಊರಿನಲ್ಲಿ, ಆ ಕಾಲದಲ್ಲಿ? ಒಂದು ಸಣ್ಣ ಕ್ಲಿನಿಕ್’ನಲ್ಲಿ ಸೂಲಗಿತ್ತಿ ಸುಬ್ಬಮ್ಮ ಅನ್ನೋಳು ನಮಗೆಲ್ಲಾ ಹೆರಿಗೆ ಮಾಡುತಿದ್ಲು…”

ಸದ್ಯಾ ಒಂದು ಸುಳಿವು ! “ಆಕೆ ಇನ್ನೂ ಬದುಕಿದ್ದಾಳೆಯೆ?” ಎಂದೆ ಕುತೂಹಲದಿಂದ.

“ಇದ್ದಾಳಂತೆ… ಇಲ್ಲಿನ ಮೆಂಟಲ್ ಆಸ್ಪತ್ರೆಯಲ್ಲಿ…ಯಾರನ್ನೂ ಮಾತಾಡಿಸುವುದಿಲ್ಲಾ…ಹುಚ್ಚು ಹಿಡಿದಿದೆ ಅನ್ನುತ್ತಾರೆ” ಎಂದರು, ಇಂತಾ ಹುಚ್ಚಿಯರ ಬಗ್ಗೆ ವಿಚಾರಿಸಲು ಬಂದ ನಾನೆಂತಾ ಹುಚ್ಚನಿರಬೇಕೆಂದು ಆಕೆಯ ಮುಖಭಾವ ಸೂಚಿಸುತಿತ್ತು.

ಕೊನೆಗೆ ನನ್ನ ಹೊಸ ರುಚಿ ಅಡುಗೆ ತಿಂದೇ ಹೋಗಬೇಕೆಂದು ಬಲವಂತ ಮಾಡಿದರು ಆಕೆ..ನನಗೆ ಹೊಟ್ಟೆ ಸರಿಯಿಲ್ಲವೆಂದು ಹೇಳಿ ಧನ್ಯವಾದದೊಂದಿಗೆ ಅಲ್ಲಿಂದ ಮೆಲ್ಲಗೆ ಹೊರಬಿದ್ದೆ. ನನಗೆ ಹೊಟ್ಟೆ ತಲೆ ಎರಡೂ ಒಟ್ಟಿಗೆ ಕೆಡಬಾರದು ನೋಡಿ!

ನನ್ನ ಮುಂದಿನ ಹೆಜ್ಜೆ ಅಲ್ಲಿನ ಮಾನಸಿಕ ಆಸ್ಪತ್ರೆಯತ್ತ ಸಾಗಿತ್ತು. ಈಗ ನ್ಯಾನೋ ಕಾರ್ ನನ್ನ ಕಾರಿನ ಹಿಂದಿರಲಿಲ್ಲ, ಆ ಕದ್ದು ಕೇಳುವ ಗರ್ಲ್’ಫ್ರೆಂಡ್ ಜತೆ ಜಾನಿ ಹೊರಟು ಹೋಗಿದ್ದನಲ್ಲಾ!

ನಾನಂದುಕೊಂಡಂತೆಯೇ ನನಗೆ ಅಲ್ಲಿಯ ಮೆಂಟಲ್ ಆಸ್ಪತ್ರೆಯಲ್ಲಿ ರೋಗಿಯ ಬಳಿಗೆ ಪ್ರವೇಶ ಸಿಕ್ಕಲಿಲ್ಲ. ಆದರೆ ಲೂಸಿಯಾ ಹೆಸರೇಳಿ, ಕೊನೆಗೆ ಅವಳಿಂದ ಮುಖ್ಯ ಡಾಕ್ಟರಿಗೆ ಫೋನ್ ಮಾಡಿಸಿ, ಹೇಗೋ ಒಬ್ಬ ನರ್ಸ್ ಮೂಲಕ ಒಳಗೆ ಒಂದು ಸಂದೇಶ ಕಳಿಸಲು ಪುಸಲಾಯಿಸಿದೆ.

ಮೃದುಲಾ ತರಹ ಹೆಣ್ಣು ಮಗುವಿನ ಕೇಸ್ ನಿನಗೆ ಗೊತ್ತೆ, ೧೯೮೦ ರ ಮೇ ತಿಂಗಳಲ್ಲಿ ಹುಟ್ಟಿದ್ದು? “ಎಂದು ಪ್ರಶ್ನೆಯನ್ನು ಒಂದು ಖಾಲಿ ಪೇಪರ್’ನಲ್ಲಿ ಕೇಳಿ ಕಳಿಸಿದೆ, ಆ ಸೂಲಗಿತ್ತಿಗೆ..ಮೇ ತಿಂಗಳಲ್ಲಿ ಹುಟ್ಟಿದ ನಾಲ್ಕು ಕಂದಗಳಲ್ಲಿ ಒಬ್ಬಳಿಗಾದರೂ ಈಕೆ ಹೆರಿಗೆ ಮಾಡಿರಬಹುದೆಂದು ಗುಮಾನಿ…ಅದೂ ಒಬ್ಬ ಹುಚ್ಚಿಯಿಂದ, ಮೂವತ್ತೈದು ವರ್ಷದ ಹಳೇ ಕೇಸ್ ವಿಚಾರಣೆಗೆ ಸರಿಯಾದ ಉತ್ತರ ಬರಬಹುದೆಂಬ ಬಹಳ ಭರವಸೆಯೇನಿರಲಿಲ್ಲ..ಆದರೆ ನನಗೆ ಅಚ್ಚರಿಯಾಗುವಂತಾ ಉತ್ತರ ಬಂತು.

ನನ್ನ ಚೀಟಿಯಲ್ಲಿ ಹುಚ್ಚಿ ಸುಬ್ಬಮ್ಮ ಉತ್ತರ ಬರೆದು ಕಳಿಸಿದು ಹೀಗೆ:

ಯಾರನ್ನಾದರೂ ನಂಬಿ , ಆದರೆ ನಂಬೂದರಿಯನ್ನು ನಂಬಬಾರದು“…

ಹಿಂದಿಲ್ಲ, ಮುಂದಿಲ್ಲಾ..ಒಗಟಿನಂತಿದೆ!…ಏನಿದರ ಅರ್ಥ?..ಯಾರು ಈ ನಂಬೂದರಿ, ನಾನೇಕೆ ನಂಬಬಾರದು? ಮೃದುಲಾ ತರಹದ ಹೆಣ್ಣು ಮಗುವಿನ ಬಗ್ಗೆ ಏನಾದರೂ ಹೇಳು ಅಂದರೆ ಹುಚ್ಚಿಯ ಮನಸ್ಸಿನಲ್ಲಿ ಯಾರ ಬಗ್ಗೆ ಈ ಯೋಚನೆ ಬಂದಿರಬಹುದು?..ಈ ಒಗಟು ಮೃದುಲಾದೋ ಅಥವಾ ಮಿಕ್ಕ ಮೂರು ಹೆಣ್ಣು ಮಕ್ಕಳು ಆ ತಿಂಗಳು ಹುಟ್ಟಿದವಲ್ಲಾ ಅವರದೋ? ಎಂದು ತಲೆ ಜೇನುಗೂಡಿನಂತೆ ಗುಂಯ್ಗುಡುತ್ತಿರಲು ಅಲ್ಲಿಂದ ಹಿಂತಿರುಗಿ ಹೊರಟೆ.

ಇದೇಕೋ ಈ ಸಮಸ್ಯೆ ಬರುಬರುತ್ತಾ ಜಟಿಲವೇ ಆಗುತ್ತಾ ಹೋಗುತ್ತಿದೆ..ಎಲ್ಲಿಯೂ ಹೊಸ ಬೆಳಕು ಕಾಣುತ್ತಿಲ್ಲಾ ಎಂದು ಯೋಚಿಸುತ್ತಾ ಯಾವುದೋ ಒಂದು ರಸ್ತೆಗೆ ನಿಧಾನವಾಗಿ ಡ್ರೈವ್ ಮಾಡಿಕೊಂಡು ಬಂದಿದ್ದೆ..  ‘ಕಮಲಾನಗರ ನಾಲ್ಕನೇ ಕ್ರಾಸ್ ’ ಎಂದಿದೆ..ಓಹ್! ಜಾನಿಯ ಮನೆಯ ಅಡ್ರೆಸ್ ಇಲ್ಲಿಯೇ ಎಂದು ಲೂಸಿಯಾ ಹೇಳಿರಲಿಲ್ಲವೇ?….ಅಡ್ರೆಸ್ ತೆಗೆದು ನೊಡಿದೆ, ಹೌದು!

ಸರಿ, ಇದೊಂದು ಚಾನ್ಸ್ ನೋಡಿಯೇಬಿಡಬೇಕು…

ಆ ರಸ್ತೆಯಲ್ಲಿ ಅವನ ಮನೆ ಹುಡುಕಲು ಕಷ್ಟವೇನಾಗಲಿಲ್ಲ…ಅವನ ಮನೆಯ ಡೋರ್’ಲಾಕ್ ಕೂಡಾ ನನಗೆ ಬೆವರಿಳಿಸಲಿಲ್ಲ. ಖ್ಯಾತ ಪತ್ತೇದಾರನ ಕೈಚಳಕದಲ್ಲಿ ಕದ್ದು ಮುಚ್ಚಿ ಬೀಗ ಮುರಿಯುವುದೂ ಒಂದು.ಒಂದು ಚಿಕ್ಕ ಹೇರ್’ಪಿನ್ ಮತ್ತು ಎರಡು ನಿಮಿಷಗಳ ಕೆಲಸ!. ಸುಲಭವಾಗಿ ಅವನ ಮನೆಯ ಒಳಕ್ಕೆ ಹೋದೆ, ಅವನು ಇನ್ನೂ ಹೆಚ್ಚು ಹೊತ್ತು ತನ್ನ ಗರ್ಲ್ಫ್ರೆಂಡ್ ಜತೆಯಲ್ಲೇ ಕಳೆಯಲಿ ಎಂಬ ಆಶಯದಿಂದ.

ಆ ಮನೆಯ ಸಾಧಾರಣ ಹಾಲಿನಲ್ಲಿ ಸರ್ವೇ ಸಾಧಾರಣ ಮನೆಯ ಉಪಕರಣಗಳು..ಹರಿದಿದ್ದ ಸೋಫಾ ಕವರ್, ನೆಲದ ಮೇಲೆ ಅರೆ ಕುಡಿದ ಬಿಯರ್ ಬಾಟಲ್, ಖಾಲಿ ಚಿಪ್ಸ್ ಪ್ಯಾಕೆಟ್..ಮೂಲೆಯಲ್ಲಿ ಸಿಗರೇಟ್ ಪ್ಯಾಕೆಟ್ಸ್ ಕುಪ್ಪೆ.

ಈ ಜಾನಿ ಮಹಾ ಸೋಮಾರಿ ಬೇರೆ, ಪೆದ್ದನಲ್ಲದೇ!

ಹುಡುಕುತ್ತಾ ಹೋದಂತೆ ಬೆಡ್’ರೂಮಿನ ಸೈಡ್ ಶೆಲ್ಫಿನಲ್ಲಿ ಹಲವಾರು ಪತ್ರಗಳ ಫೈಲ್ ಕಾಣಿಸಿತು.ಅದರ ಪಕ್ಕದ ಗೋಡೆಯಲ್ಲಿ ಏನೋ ನ್ಯೂಸ್ ಪೇಪರ್ ಕಟಿಂಗ್ಸ್ ಅಂಟಿಸಿದ್ದಾನೆ..ಲೈಟ್ ಹಾಕಿಯೇ ನೋಡಿದೆ..

ನನಗೆ ದಿಗ್ಭ್ರಮೆಯಾಯಿತು.!! ಎಲ್ಲವೂ ನ್ಯೂಸ್ ಪೇಪರ್ಸ್ ಮತ್ತು ಮ್ಯಾಗಝಿನ್ಸ್’ನಲ್ಲಿ ಮೃದುಲಾ ಹೊಸಮನಿ ಬಗ್ಗೆ ಬಂದ ಲೇಖನಗಳ ಭಾಗಗಳೇ..ಆಕೆಯ ಹೆಸರನ್ನು ಕೆಂಪು ಇಂಕಿನಲ್ಲಿ ಸುತ್ತಿದ್ದಾನೆ, ಆಕೆಯ ಚಿತ್ರದ ಮೇಲೆ ಚೆಕ್ ಮಾರ್ಕ್ ಹಾಕಿದ್ದಾನೆ, ಪಕ್ಕದಲ್ಲಿ  ’ಪೋಸ್ಟ್ ಮಾಡಿದ ಡೇಟ್ಸ್ ’ ಎಂದು ಬರೆದಿದ್ದಾನೆ..ಅಂದರೆ ಏನಿದರ ಮರ್ಮ?,,

ಅವನ ಫೈಲ್ಸ್ ಎಲ್ಲಾ ಕಿತ್ತು ಅವನ ಕೊಳಕು ಹಾಸಿಗೆಯ ಮೇಲೆ ಹರಡಿದೆ..ಒಂದೊಂದಾಗಿ ಪರೀಕ್ಷಿಸುತ್ತಾ ಹೋದೆ.,ಮೊದಲ ಫೈಲ್ಸ್’ನಲ್ಲಿ ಅವನ ಫೋನ್ ಬಿಲ್ಸ್, ಅಂಗಡಿಗಳ ಬಿಲ್ಸ್ ಮತು ಆಫೀಸಿನ ಬಾಡಿಗೆ ಕಟ್ಟಿದ್ದರ ರಸೀತಿಗಳು… ಮತ್ತು ಶಾಂತಿ ಎಂಬ ಹೆಣ್ಣಿಗೆ ಕಳಿಸಿದ ಕೆಲವು ಚಿತ್ರಗಳು, ಪತ್ರಗಳ ಕಾಪಿಗಳು..ಮುಖ ನೋಡಿದರೆ ಈಗ ಅವನ ಜತೆಯಲ್ಲಿ ನೋಡಿದ್ದೆನಲ್ಲ, ಅವಳೇ, ಅನುಮಾನವಿಲ್ಲ..ಅದು ಹೋಗಲಿ ಬಿಡಿ..

ಅದರೆ ಎರಡನೆ ಫೈಲಿನಲ್ಲಿ ಬರೀ ಒಬ್ಬ ಲಾಯರ್ ಆಫೀಸಿಗೆ ಕಳಿಸಿದ ಪತ್ರಗಳು ಮತ್ತು ಆ ಆಫಿಸಿನಿಂದ ಇವನಿಗೆ ಬಂದ ಪೇಮೆಂಟ್ಸ್ ರಸೀತಿಗಳು..

ಆ ಲಾಯರ್ ಹೆಸರು ಫರ್ನಾಂಡೆಸ್!..ಮೃದುಲಾರ ಸ್ವಂತ ವಕೀಲರು! ನನ್ನ ಕಕ್ಷಿದಾರರೇ!

ಬೆಂಗಳೂರಿನ ಆಫೀಸ್ ಅಡ್ರೆಸ್, ನನಗೆ ಅವರು ಕೊಟ್ಟಿದ್ದ ವಿಸಿಟಿಂಗ್ ಕಾರ್ಡ್ನನಲ್ಲಿದ್ದಿದ್ದೇ!..

ಸುಮಾರು ಎರಡು ಸಲ ಈ ಹಿಂದಿನ ಒಂದೊಂದು ತಿಂಗಳಿಗೆ ಜಾನಿಗೆ ಚೆಕ್  ರೂ. ೫೦೦೦೦ ನೀಡಿದ್ದರ ಪುರಾವೆ ಇಲ್ಲಿದೆ.. ನನಗೆ ಈಗ ಬೆವರಿಳಿಯಿತು, ಈ ಡಿಸೆಂಬರ್ ರಾತ್ರಿಯಲ್ಲೂ…

….ತಕ್ಷಣ ಮತ್ತೆಲ್ಲ ಪೇಪರ್ಸ್ ಕಿತ್ತು ಬಿಸಾಕಿದೆ..ಅಲ್ಲಲ್ಲಿ ಕಪ್ಪು ಕೆಂಪು ಅಕ್ಶರದಲ್ಲಿ, “ಕಪ್ಪು ನದಿ=??” ಎಂದು ಅರ್ಧ ಬರೆದು ಬಿಟ್ಟಿದ್ದಾನೆ..ಇನ್ನು ಕೆಲವು ರಫ್ ಕಾಗದಗಳಲ್ಲಿ “ಮುಂದಿದೆ___ ಹಬ್ಬ???” ಎಂದು ಯೋಚಿಸಿ ಗೊತ್ತಾಗದೇ ಬಿಟ್ಟಿದ್ದಾನೆ..

ಹಾಗಾದರೆ ಅದೆಲ್ಲ ಇವನೇ ಆ ಬ್ಲ್ಯಾಕ್ ಮೈಲ್ ಪತ್ರಗಳನ್ನು ಬರೆಯಲು ನೆಡೆಸಿದ ಸಿದ್ಧತೆಗಳು…!! ಅಂದರೆ ಇವನು ಬ್ಲ್ಯಾಕ್ ಮೈಲ್ ಮಾಡಿದಾಗ ಯಾರಿದು ಎಂದು ನಮ್ಮವರಿಗೆ ಗೊತ್ತಿತ್ತು..ಅವನಿಗೆ ಕೇಳಿದಷ್ಟು ಎರಡೂ ಪತ್ರಗಳಿಗೆ ೫೦, ೫೦ ಸಾವಿರ ರೂ ಕೂಡಾ ಕೊಟ್ಟಿದ್ದಾರೆ ಅನಿಸುತ್ತೆ..ಅಂದ ಮೇಲೆ ಆದರೆ ನನ್ನ ಬಳಿ ಸುಳ್ಳು ಹೇಳಿ ಇಲ್ಲಿಗೆ ಕಳಿಸಿದ್ದಾರೆ!

ಯಾಕೆ?

ಮುಂದುವರಿಯುವುದು…

Facebook ಕಾಮೆಂಟ್ಸ್

Nagesh kumar: ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Related Post