X
    Categories: ಕಥೆ

ಉದ್ಯೋಗ

ಪದ್ಮಿನಿ ತಂದಿಟ್ಟ ಚಹಾವನ್ನು ಗುಟುಕರಿಸಿ ಕುರ್ಚಿಯಿಂದೆದ್ದರು ಮನೋಜ ರಾಯರು. ಬೆಳಗ್ಗಿನಿಂದ ಇದು ನಾಲ್ಕನೇ ಲೋಟ. ಖಾಲಿ ಲೋಟವನ್ನು ಮೇಜಿನ ಮೇಲಿಟ್ಟು ಅಪರಾಹ್ನದ ಕ್ಲಾಸುಗಳಿಗೆ ಹೊರಟಾಗ ಒಳಗಿನಿಂದ ಪದ್ಮಿನಿ “ಬರುವಾಗ ಸಕ್ಕರೆ ಮತ್ತು ಈರುಳ್ಳಿ ತನ್ನಿ” ಎಂದಿದ್ದು ಕೇಳಿಸಿತು. “ಅಯ್ಯೋ, ನನ್ನ ಕರ್ಮ! ಮನೇಲೇ ಇಡೀ ದಿನ ಬಿದ್ದಿರ್ತೀಯಾ. ನೀನೇ ತಗೊಂಡ್  ಬಾ” ಎಂದರು. ಬಾಗಿಲ ಹೊರಗೆ ಹೋಗುತ್ತಲೂ, “ಅಂಗಡಿಯವನಿಗೆ ಕನ್ನಡ ಬರತ್ತೆ. ಮತ್ತೆ , ಪ್ರಮಾಣ ಎಲ್ಲಾ ಸರಿಯಾಗಿ ಗೊತ್ತಾದೀತಲ್ಲೋ? ನಿನಗವರು ಮೋಸ ಮಾಡಿದರೆ ಕಷ್ಟ.” ಎಂದು ವ್ಯಂಗವಾಡಿದ್ದು ಪದ್ಮಿನಿಗೆ ಕೇಳಿಸಿತು.

ಪತ್ನಿ ಪದ್ಮಿನಿ ಬರೀ ಏಳನೇ ಇಯತ್ತೆಯವರೆಗೆ ಓದಿದುದು ಮನೋಜರಾಯರಿಗೆ ನಾಚಿಕೆಯ ಸಂಗತಿಯಾಗಿದ್ದಿತು. ಮೊದಮೊದಲು ಬಂಧುಗಳ ಮನೆಗೆ ಹೋದಾಗ “ಪದ್ಮಿನಿ ಏನು ಕೆಲಸ ಮಾಡುತ್ತಾಳೆ?” ಎಂಬ ಪ್ರಶ್ನೆಗೆ ಉತ್ತರಿಸಲು ಅವರಿಗೆ ಮುಜುಗರವಾಗುತ್ತಿತ್ತು. ಕಾಲೇಜು ಪ್ರೊಫ಼ೆಸರ್ ಆದ ತನಗೆ ಬರೀ ಏಳನೇ ಕ್ಲಾಸು ಓದಿದ, ‘ಹೌಸ್ ವೈಫ಼್’ ಆಗಿರುವ ಪದ್ಮಿನಿ ತಕ್ಕ ಹೆಂಡತಿಯಲ್ಲ ಎಂಬ ಭಾವನೆ ಅವರನ್ನು ಸದಾ ಕಾಡುತ್ತಿತ್ತು. ಪದ್ಮಿನಿ ಕಡಿಮೆ ಓದಿದ್ದರೂ ಜಾಣೆ, ಸುಶೀಲೆ. ಮನೆಗೆಲಸಗಳನ್ನೆಲ್ಲಾ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಹೆಣ್ಣು ಮಗಳು. ಮದುವೆಯಾಗುವಾಗ ಐವತ್ತಾರು ಕೆಜಿಯಿದ್ದ ಮನೋಜರಾಯರನ್ನು ವರುಷದಲ್ಲೇ ಎಪ್ಪತ್ತು ಮಾಡಿದ್ದಳು. ಸಿಹಿ ತಿನಿಸುಗಳ ತಯಾರಿಯಲ್ಲಿ ಪ್ರವೀಣೆ ಅವಳು. ಅವತ್ತೊಮ್ಮೆ ರಾಯರ ಸಹೋದ್ಯೋಗಿಗಳು ಬಂದಿದ್ದಾಗ ಶಾವಿಗೆ ಪಾಯಸ ಮಾಡಿದ್ದಳು ಪದ್ಮಿನಿ. ಅವಳ ಪಾಯಸಕ್ಕಂದು ಶ್ಲಾಘನೆಯ ಮೇಲೆ ಶ್ಲಾಘನೆ. ಮನೋಜರಾಯರು “ಇವಳು ಹುಟ್ಟಿರೋದೇ ಅಡುಗೆ ಮಾಡಕ್ಕೆ. ಅಷ್ಟು ಚೆನ್ನಾಗಿ ಮಾಡ್ತಾಳೆ.” ಎಂದು ನಕ್ಕಾಗ ಪದ್ಮಿನಿಯ ಕಣ್ಣಂಚಿನಲ್ಲಿ ನೀರಾಡಿದ್ದು ಯಾರಿಗೂ ಕಂಡಿರಲಿಲ್ಲ.

ಇವತ್ತು ಮನೆಯಲ್ಲಿ ಒಬ್ಬಟ್ಟು, ಹಲಸಿನ ಚಿಪ್ಸ್. ಅಮೆರಿಕೆಯಲ್ಲಿ ಉದ್ಯೋಗದಲ್ಲಿರುವ ಮಗ, ಮನೋಜರಾಯರ ಹೆಮ್ಮೆಯ ಪುತ್ರ, ಮನೆಗೆ ಬಂದಿದ್ದಾನೆ. ಯಾರಾದರೂ ಮಗನ ಬಗೆಗೆ ಕೇಳಿದರೆ ರಾಯರೆದೆ ಹೆಮ್ಮೆಯಿಂದ ಉಬ್ಬುತ್ತದೆ. ಯಾರೂ ಕೇಳದಿದ್ದರೂ ಅವರೇ ಮಗ ವಿದೇಶದಲ್ಲಿ ಕೆಲಸ ಮಾಡಿ ಗಂಟೆ ಗಂಟೆಗೆ ಡಾಲರುಗಳನ್ನು ಸಂಪಾದಿಸುವುದನ್ನು ಹೇಳುತ್ತಾರೆ. ಇಂತಿಪ್ಪ ಮಗರಾಯ ಟಿವಿ ನೋಡುತ್ತಿದ್ದ ರಾಯರ ಬಳಿ ಬಂದು, “ಡ್ಯಾಡ್! ನೀವು ಕಮಲಾ ಆಂಟಿ ಹತ್ರ ನಾನು ಎಷ್ಟೆಷ್ಟೋ ದುಡೀತೀನಿ ಅಂದ್ರಂತೆ! ನಾನು ಹೋಟೆಲ್ ವೆಯಿಟರ್ ಆಗಿ ಕೆಲ್ಸ ಮಾಡೋದು ನಿಮ್ಗೆ ಗೊತ್ತಿರೋದು ಹೌದಲ್ವಾ?” ಎಂದ. ಮನೋಜರಾಯರು ಅದಕ್ಕೆ, “ಯಾವ ಕೆಲ್ಸ ಆದ್ರೇನು? ಕಾಯಕವೇ ಕೈಲಾಸ. ಎಲ್ಲಾ ಕೆಲ್ಸಾನೂ ಒಂದೇ. ಕೆಲ್ಸ ಮಾಡೋದು ಮುಖ್ಯ.” ಎಂದರು. ಅಡುಗೆ ಕೋಣೆಯಲ್ಲಿ ಪಾತ್ರೆ ಬಿದ್ದ ಸದ್ದಾಯಿತು.

Facebook ಕಾಮೆಂಟ್ಸ್

Deepthi Delampady: Currently studying Information Science and Engineering (6th semester) at SJCE, Mysore.
Related Post