X
    Categories: ಕಥೆ

ಭಾವನಾ ತರಂಗ …

ಬೆಳಿಗ್ಗೆ ಎಂಟು ಗಂಟೆ, ಶನಿವಾರ, ಆಫೀಸಿಗೆ ರಜೆ ಬೇರೆ.. ನಿಧಾನವಾಗಿ ಏಳೋಣವೆಂದರೆ ಅದೇಕೋ ನಿದ್ರಾದೇವಿಗೆ ನನ್ನ ಮೇಲೆ ಸಿಟ್ಟು.. ಹೋಗಲಿ ಎಲ್ಲಾದರೂ ಹೊರಗೆ ಹೋಗೋಣವೆಂದುಕೊಂಡು ಎದ್ದು ಮನೆಯ ಬಾಗಿಲು ತೆಗೆದೆ.

ನಾವಿರುವ ಮನೆ ಮೊದಲನೆಯ ಮಹಡಿಯ ಮನೆ,ಒಂದು ವಾರದ ಹಿಂದೆಯಷ್ಟೇ ಈ ಮನೆಗೆ ಬಂದಿದ್ದರಿಂದ ಇದು ಮೊದಲ ವೀಕೆಂಡ್.

ಪ್ರತಿ ದಿನ ಆಫೀಸಿಗೆ ಹೋಗುವ ಅವಸರದಲ್ಲಿ ಅಕ್ಕ ಪಕ್ಕ ಮನೆಗಳಲ್ಲಿ ಯಾರಿದ್ದಾರೆ ಎಂದು ತಿಳಿಯುವುದಕ್ಕೂ ಸಮಯ ಇಲ್ಲದಿದ್ದರಿಂದ ಅಷ್ಟಾಗಿ ತಲೆ  ಕೆಡಿಸಿಕೊಂಡಿರಲಿಲ್ಲ.

ಆದರೆ ಇಂದು ಬಾಗಿಲು ತೆಗೆದೊಡನೆ ಅದೇಕೋ ನನ್ನ ದೃಷ್ಟಿ ಪಕ್ಕದ ಮನೆಯ ಮಹಡಿಯ ಮೇಲೆ  ಬಿತ್ತು.

ಅದೊಂದು ತೀರ ಹಳೆಯದೂ ಅಲ್ಲದೆ, ಹಾಗೆ ಹೊಸದೂ ಅಲ್ಲದ ಮಧ್ಯಮ ವರ್ಗದ ಶೈಲಿಯ ರೆಡ್ ಆಕ್ಸೈಡ್ ನೆಲದ ಮನೆ. ಮನೆಯ ಮುಂದೊಂದು ಪುಟ್ಟ ತುಳಸೀ ಕಟ್ಟೆ, ಸಂಪ್ರದಾಯದಂತೆ ತುಳಸಿ ಕಟ್ಟೆಯ ಸುತ್ತ ರಂಗೋಲಿ,ಪಕ್ಕದಲ್ಲಿ ಮಹಡಿಯ ಮೆಟ್ಟಿಲು,  ಮಹಡಿಯ ಮೇಲೆ ಕುಂಡಗಳಲ್ಲಿ ಹತ್ತಾರು  ಹೂವಿನ ಗಿಡಗಳು… ನಗರ ಪ್ರದೇಶಗಳಲ್ಲಿ ಈ ರೀತಿ ಮಹಡಿಯ ಮೇಲೆ ಹೂವಿನ ಗಿಡಗಳನ್ನು ಬೆಳೆಯುವುದು ಸರ್ವೇ ಸಾಮನ್ಯವಾಗಿದೆ,ಆದರೂ ಇದೆಲ್ಲದರ ಮಧ್ಯೆ ನನ್ನ ಗಮನ ಸೆಳೆದದ್ದು ಆ ಮಹಡಿಯ ಮೇಲಿದ್ದ ಅಜ್ಜಿ…..

ಅಜ್ಜಿಯಲ್ಲೇನು ವಿಶೇಷ, ಗಿಡಗಳಿಗೆ ನೀರು ಹಾಕಲೋ… ಸಮಯ ಕಳೆಯಲೋ ಬಂದಿರಬಹುದು ಅಂದರೆ, ಒಂದರ್ಥದಲ್ಲಿ ಸರಿ…ಆದರೆ ಅದಕ್ಕಿಂತ ಹೆಚ್ಚಿನ ವಿಶೇಷವೆಂದರೆ  ಅಜ್ಜಿಯು ಆ ಗಿಡಗಳ ಜೊತೆ  ಮಾತನಾಡುತ್ತಿದ್ದುದ್ದು…..

ಮೊದಲ ಬಾರಿಗೆ ಗಮನಿಸಿದಾಗ ಶ್ಲೊಕಗಳನ್ನೋ… ಹಾಡನೋ.. ಹೇಳಿಕೊಳ್ಳುತ್ತಿರಬಹುದು ಎನ್ನಿಸಿತು… ಆದರೆ ಸರಿಯಾಗಿ ಗಮನಿಸಿದಾಗಲೆ ಗೊತ್ತಾಗಿದ್ದು.. ಅಜ್ಜಿ ಗಿಡಗಳೊಡನೆ ಮಾತನಾಡುತ್ತಿದ್ದಾರೆ ಎಂದು…

ನಾನು ಹಾಗೇ ನೋಡುತ್ತಾ,ಅವರೇನು ಮಾತನಾಡುತ್ತಿದ್ದಾರೆ ಎಂದು ತಿಳಿಯಲು ಕುತೂಹಲದಿಂದ ಅವರೆಡೆಗೆ ಕಿವಿಯಿಟ್ಟು ಆಲಿಸತೊಡಗಿದೆ…

ಆ ಹೂ ಕುಂಡಗಳ ಮಧ್ಯದಲ್ಲೊಂದು ಗುಲಾಬಿ ಗಿಡ,ಗಿಡದಲ್ಲೆರಡು ಹೂವು…ಒಂದು ದೊಡ್ಡದಾಗಿ ಅರಳಿ ನಿಂತಿದೆ…. ಇನ್ನೊಂದು ಈಗಷ್ಟೇ ಅರಳುತ್ತಿರುವ ಪುಟ್ಟ ಮೊಗ್ಗು..

ಆ ಪುಟ್ಟ ಮೊಗ್ಗನ್ನು ನೋಡುತ್ತಾ..” ನೀನು ಹೀಗೆ ಇದ್ದಿಯಾ..?? ನಿಮ್ಮಪ್ಪ ಫೊನ್ ಮಾಡಿ ನನಗೊಬ್ಬ ಗಂಡು ಮಗ ಹುಟ್ಟಿದ ಅಂತ ಹೇಳಿದ್ದೇ ಕೊನೆ… ಆಮೇಲೆ ಫೊನು ಇಲ್ಲ .. ಏನು ಇಲ್ಲ,ಮರೆತೆಬಿಟ್ಟಿದ್ದಾನೆ ನನ್ನ..”,

ಆ ಮೊಗ್ಗಿನ ಮೇಲೆ  ಬಿದ್ದ ಮಂಜಿನ ಹನಿಯು ಸೂರ್ಯನ ಕಿರಣಗಳಿಗೆ  ಪಳ ಪಳ ಹೊಳೆಯುವುದನ್ನು ನೋಡಿ ,”ನೀನೂ ಈ ಥರನೇ ನಗ್ತಾ ಇದಿಯಾ..?  ನಿನ್ನ ನೋಡ್ಬೆಕು ಅಂತ ಆಸೆ ನಂಗೆ….  ನಿನ್ಗೆ ಏನು ಹೆಸರಿಟ್ಟಿದಾರೊ ನಂಗೊತ್ತಿಲ್ಲವಲ್ಲ… ನಿನ್ನ ಏನಂತ ಕರಿಲೀ…..?? ನಿನ್ನ ಎತ್ತಿ ಮುದ್ದಾಡಬೆಕು ಅಂತ ನನಗೂ ಆಸೆ ಇದೆ …. ನಿಮ್ಮಮ್ಮಂಗೆ ನನ್ನ ಮೇಲೆ ಯಾಕಷ್ಟು ಕೋಪ ಅಂತ ಗೊತ್ತಿಲ್ಲ …. ನಿಮ್ಮಪ್ಪನ್ನ ಮದುವೆ ಆದ ಮೇಲೆ ಸ್ವಲ್ಪ ದಿನ ನನ್ನ ಜೊತೆ ಚೆನ್ನಾಗೆ ಇದ್ದಳು…. ಮೊದಲೇ ಈಗಿನ ಕಾಲದ ಹುಡುಗಿ, ನನ್ನ ಗೊಡ್ಡು ಸಂಪ್ರದಾಯ ಅವಳಿಗೆಲ್ಲಿ ಇಷ್ಟ ಆಗುತ್ತೆ …. ಆಮೇಲೆ ನಿಮ್ಮಪ್ಪ ಕೆಲಸದ ಮೇರೆಗೆ ದೂರದ ಊರಿಗೆ ಹೋದ , ಸ್ವಲ್ಪ ದಿನದ ನಂತರ ಅವಳೂ ಹೋದಳು….. ಆಮೇಲೆ ನೀನು ಹುಟ್ಟಿದೆ….ನಿನ್ನನ್ನ ನೋಡುವುದಕ್ಕೂ ಬಿಡ್ದೆ… ಮುಟ್ಟುವುದಕ್ಕೂ ಬಿಡ್ದೆ… ಈ ಮುಳ್ಳಿನ ಥರ ಇದ್ದಾಳೆ….ಆಮೇಲೆ  ನಿಮ್ಮಪ್ಪನೂ ನನ್ನಿಂದ ದೂರ ಆದ….ನಾನೆ ಗಿಡ ನೆಟ್ಟು .. ನೀರು ಹಾಕಿ .. ಬೆಳೆಸಿ ದೊಡ್ದದು ಮಾಡಿ … ನೋಡು ಆ ದೊಡ್ದ ಗುಲಾಬಿ ಹೂವು .. ನಿಮ್ಮಪ್ಪನೂ ಹಾಗೆ ಅರಳಿ ನಿಂತಿದ್ದಾನೆ …ಆದ್ರೆ ನಮ್ಮಿಬ್ಬರ ಮಧ್ಯೆ ನಿಮ್ಮಮ್ಮ ಮುಳ್ಳಾಗಿದ್ದಾಳೆ …ನಂಗೂ ವಯಸ್ಸಾಗೋಯ್ತು , ಸಾಯೋದ್ರೊಳ್ಗೆ ನಿನಗೆ ಒಂದೆ ಒಂದು ಸಲ ಮುತ್ತಿಟ್ಟು ಸಾಯಬೇಕು ಅಂತ ಆಸೆ” ಅಂದರು.

ಅದನ್ನು ಕೇಳಿದಾಕ್ಷಣ ಒಮ್ಮೆಲೆ ಬೇಸರ ಮತ್ತು ಆಶ್ಚರ್ಯ ಒಟ್ಟಿಗೇ ಆಯಿತು.

ಅಜ್ಜಿ ಆ ದೊಡ್ದ ಗುಲಾಬಿ ಹೂವನ್ನು ನೋಡುತ್ತಾ “ನಿನ್ನ ಹೆಂಡತಿ ಇರಲಿ, ನೀನಾದ್ರು ಒಂದು ಸಲ ಬಂದು ಹೋಗೋ…ನಿನ್ನ ಮಗನ್ನ ಕರೆದುಕೊಂಡು ಬಾರೋ…. ಎಷ್ಟು ವರ್ಷ ಆಯ್ತೋ ನಿನ್ನ ನೋಡಿ … ಮೊದ್ಲು ಮೊದ್ಲು ಫೊನ್ ಆದ್ರು ಮಾಡ್ತಿದ್ದೆ, ಈಗ ಅದು ಇಲ್ಲ … ನಿನ್ನ ಮಗ ಹುಟ್ಟಿದ ಅಂತ ಹೇಳಿ ಆರು ತಿಂಗಳ ಹಿಂದೆ ಫೊನ್ ಮಾಡಿದ್ದು ಬಿಟ್ರೆ ಆಮೇಲೆ ಮಾಡೆ ಇಲ್ವಲ್ಲೊ… “, ಎಂದು ಆ ಹೂವನ್ನು ಮುಟ್ಟಲು ಹೋದೊಡನೆ ಜೋರಾಗಿ ಗಾಳಿ ಬೀಸಿ ಹೂವಿನ ಬುಡದಲ್ಲಿದ್ದ ಮುಳ್ಳೊಂದು ಅಜ್ಜಿಯ ಬೆರಳಿಗೆ ಚುಚ್ಚಿತು.

ಆ ಮುಳ್ಳನ್ನು ನೋಡಿ ,” ನನ್ನ ಕಂಡರೆ ನಿನಗ್ಯಾಕೇ ಅಷ್ಟೊಂದು ಕೊಪ??.. ಈ ಕಡೆಗಾಲದಲ್ಲಾದ್ರು ನನ್ನ ಮಗನ್ನ, ಮೊಮ್ಮಗನ್ನ ನೋಡಬೇಕು ಅನ್ನಿಸ್ತಿದೆ ಕಣೆ… ಒಂದೇ ಒಂದು ಸಲ ನನ್ನ ಮಗನ್ನು, ಮೊಮ್ಮಗನ್ನು ನನ್ನ ಹತ್ತಿರ ಕಳಿಸಿಕೊಡೆ …”ಎಂದು ಕಣ್ಣೀರಿಟ್ಟರು.

ಹಾಗೇ ತಂಪಾಗಿ ಬೀಸುತ್ತಿದ್ದ ಗಾಳಿಯನ್ನು ಕುರಿತು , “ನೀನಾದ್ರು ಎಲ್ಲಾ ಊರಿಗೂ ಹೋಗ್ತಿಯ.. ನನ್ಗೆ ಈ ಫೋನು ಗೀನು ಏನು ಮಾಡಕ್ಕೆ ಬರಲ್ಲ… ನೀನಾದ್ರು ನನ್ನ ಮಾತನ್ನು ನನ್ನ ಮಗ ಸೊಸೆಗೆ ತಿಳಿಸು … ನನ್ನ ಮೊಮ್ಮಗಂಗೆ ನಿಮ್ಮಜ್ಜಿ ಕೇಳಿದ್ಲು ಅಂತ ಹೇಳು… ಹಾಗೆ ಬಂದು ಅವರು ಏನು ಹೇಳಿದ್ರು ಅಂತನೂ ಹೇಳು “, ಎಂದು ಕುಡಿಕೆಯಲ್ಲಿದ್ದ ನೀರನ್ನು ಆ ಗುಲಾಬಿ ಗಿಡಕ್ಕೆ ಹಾಕಿ, ನಿಧಾನವಾಗಿ ಮೆಟ್ಟಿಲನ್ನು ಇಳಿಯತೊಡಗಿದರು ….

ಅದಷ್ಟು ಜನರ ಭಾವನೆಗಳು ಹೀಗೆ ಗಾಳಿಯ ತರಂಗಗಳಲ್ಲೇ ಸುತ್ತುತ್ತಿವೆಯೋ ಏನೋ , ಗಾಳಿಯ ತರಂಗಗಳಿಗೆ ಈ ಭಾವನೆಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವ ಶಕ್ತಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ  …

ಫಣೀಶ ದುದ್ದ
Phaneesha Dudda

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post