ಅದೊಂದು ಭಾನುವಾರದ ಮಧ್ಯಾನ, ಕಾಲೇಜಿಗೆ ರಜೆ ಇದ್ದರು ಗೆಳೆಯರೊಡನೆ ಕಾಲ ಕಳೆಯಲೆಂದು ಕಾಲೇಜಿಗೆ ಹೋದ ನೆನಪು. ಕ್ಲಾಸಿಗೆ ಹೋಗದಿದ್ದರೂ ಕ್ಯಾಂಟೀನಿಗೆ ತಪ್ಪದೆ attendance ಹಾಕುತಿದ್ದ ನಾವು, ಅಂದು ಸಹ ಕ್ಯಾಂಟೀನಿನಲ್ಲಿ ಕುಳಿತು ಭಟ್ಟರು ಕೊಟ್ಟ ಚಹಾ ಹೀರುತ್ತಾ, ಒಬ್ಬರೊಬ್ಬರ ಕಾಲು ಎಳೆಯುತ್ತ ಹರಟ ತೊಡಗಿದೆವು. ಅರುಣ, ನನಗೆ ಹೊಟ್ಟೆ ತಾಳ ಹಾಕುತ್ತಿದೆ ಎಂದಾಗಲೇ ಗೊತ್ತಾದದ್ದು ಗಂಟೆ ಮಧ್ಯಾನ ಒಂದೂವರೆ ಎಂದು. ಬೆಳಿಗ್ಗೆ ತಿಂದ ಕಾಂಕ್ರೀಟ್(ಉಪ್ಪಿಟ್ಟು) ಕರಿಗಿತಾ? ಎಂದು ಗೇಲಿ ಮಾಡುತ್ತಾ ಕಾಲೇಜಿನ ಪಕ್ಕದಲ್ಲೇ ಇದ್ದ ಹಾಸ್ಟೆಲಿನ ಕಡೆ ಕಾಲ್ಕಿತ್ತಿದೆವು. ನಾಲಿಗೆಗೆ ರುಚಿ ಸವಿಸದಿದ್ದರು ಹೊಟ್ಟೆ ತುಂಬಿಸುತ್ತಿದ್ದ ಹಾಸ್ಟೆಲ್ ಅಡುಗೆಯೇ ಆಗ ನಮ್ಮ ಪಾಲಿಗೆ ಮೃಷ್ಟಾನ್ನ.
ಕಾಲೇಜಿನ ಗೇಟಿನ ಬಳಿ ಬರುತ್ತಿದ್ದಂತೆ, ಎಕ್ಷಕ್ಯೂಸ್ ಮಿ ಎಂದು ಗಮನ ಸೆಳೆದ ವೆಕ್ತಿಯೊಬ್ಬ ಗುಂಪಿನಿಂದ ನನ್ನನ್ನು ಕರೆದ. ಸುಮಾರು 30 ವರ್ಷದ ಆಸು ಪಾಸಿನಲ್ಲಿದ್ದಿರಬೇಕು. ಜೀನ್ಸ್ ಪ್ಯಾಂಟು ಶರ್ಟ್, ಕಪ್ಪು ಕನ್ನಡಕ ಹಾಕಿದ್ದ ಆ ಯುವಕ, ಅವನೋರ್ವ ಚಿತ್ರದ ಸಹ ನಿರ್ದೇಶಕನೆಂದು, ಹೆಸರು ಸೆಂಥಿಲ್ ಎಂದು ಪರಿಚಯಿಸಿಕೊಂಡ, ತಮಿಳಿನ ಉದಯೋನ್ಮಕ ನಾಯಕ ನಟರೊಬ್ಬರ ಚಿತ್ರದ ಚಿತ್ರೀಕರಣವು ಬೆಂಗಳೂರಿನಲ್ಲಿ ಆಗುತ್ತಿರುವುದಾಗಿ ಮತ್ತು ನಾಯಕನ ಸ್ನೇಹಿತನ ಪಾತ್ರಕ್ಕೆ ಒಬ್ಬ ಸಹ ಕಲಾವಿದನನ್ನು ಹುಡುಕುತ್ತಿರುವುದಾಗಿ ಹೇಳಿ, ನನಗೇನಾದರು ನಟನೆಯಲ್ಲಿ ಅಸಕ್ತಿಯಿದೆಯೇ? ಎಂದು ಕೇಳಿದ. ತಮಿಳ್ ಭಾಷೆಯ ಗಂದ ಗೊತ್ತಿಲ್ಲದಿದ್ದರೂ, ಆಗಿಷ್ಟೇ ಬಂದ ಕಾದಲ್ ಕೊಂದೈನ್ ಚಿತ್ರ ನಮ್ಮ ಹಾಸ್ಟೆಲಿನ ಎಲ್ಲರ ಕಂಪ್ಯೂಟರಲ್ಲಿ ಸದ್ದು ಮಾಡಿದ್ದರಿಂದ ಆ ನಾಯಕನ ಬಗ್ಗೆ ಅವನಿಗಿರುವ ಜನಪ್ರಿಯತೆ ಬಗ್ಗೆ ಸ್ವಲ್ಪ ಅರಿವಿತ್ತು, ಆದರೂ ಅಭಿನಯದ ಮೇಲಿನ ನಿರಾಸಕ್ತಿಗೋ ಅಥವಾ ಮನಸ್ಸಿನಲ್ಲಿದ್ದ ರಂಗ ಭಯವೋ ಗೊತ್ತಿಲ್ಲ, ಒಟ್ಟಿನಲ್ಲಿ ಅವನ ಆಫರನ್ನು ತಿರಸ್ಕರಿಸಿದೆ. ಅಷ್ಟಕ್ಕೆ ಹಿಂತಿರುಗದ ಆ ವೆಕ್ತಿ, ನಿಮ್ಮ ಗೆಳೆಯರಲ್ಲಿ ಯಾರಾದರೊಬ್ಬರು ಸಿಗುವರೋ ಎಂದು ವಿಚಾರಿಸಿ ನಮ್ಮ ಜೊತೆ ಹಾಸ್ಟೆಲ್ ಕಡೆ ಬರಲಾರಂಬಿಸಿದ.
ಊಟದ ಸಮಯವಾದುದರಿಂದ ಹಾಸ್ಟೆಲ್ ಹುಡುಗರೆಲ್ಲ ಮೆಸ್ಸಿನ ಮುಂಬಾಗದ ಕಟ್ಟೆ ಮೇಲೆ ಕೂತು ಕೆಲವರು ನಮ್ಮ ಮೆಸ್ಸಿನ ಗಣಪತಿ ಭಟ್ಟರು ಮಾಡಿದ ರಬ್ಬರ್ಗಿಂತ ತುಸು ಜಿಗಿಯಾದ ಚಪಾತಿ ತಿನ್ನುತಿದ್ದರೆ, ಇನ್ನು ಕೆಲವರು ಮೆಸ್ಸ್ ಮಂಜುನನ್ನು ಒಂದು Extra ಎಗ್ಗಿಗಾಗಿ ಪುಸುಲಾಯಿಸುತಿದ್ದರು. ಹೌದು ನಾವೆಲ್ಲ ಹೆಚ್ಚಾಗಿ ಮೆಸ್ಸಿನ ಕಟ್ಟೆ ಮೇಲೆ ಕೂತು ಊಟ ಮಾಡುತ್ತಿದ್ದಿದ್ದು, ಅದೇಕೋ ಡೈನಿಂಗ್ ಹಾಲ್ ಕೇವಲ ಮೊದಲನೇ ವರ್ಷದ ಕಿರಿಯ ವಿದ್ಯಾರ್ಥಿಗಳಿಗೆ ಮೀಸಲಾಗಿತ್ತು.
ಆ ತಮಿಳ್ ಸಹ-ನಿರ್ದೇಶಕನನ್ನು ಮೆಸ್ಸಿನ ಮುಂಬಾಗಕ್ಕೆ ಕರೆದೊಯಿದ ನಾನು, ಯಾರಾದರು ಸಿನಿಮಾದಲ್ಲೊಂದು ಕಿರು ಪಾತ್ರ ಮಾಡಲಿಚ್ಚಿಸುವರಾ ಎಂದು ಕೇಳುವಷ್ಟರಲ್ಲಿ, ಸಹ-ನಿರ್ದೇಶಕ ಸೆಂಥಿಲ್ ಗೆಳಯ ಕಲ್ಲೇಶ ನುಗ್ಗೇಹಳ್ಳಿ ಕಡೆ ಕೈ ಮಾಡಿ ಅವರಾಗಬಹುದು ಎಂದು ಸೂಚಿಸಿದ. ಕಲ್ಲೇಶ್ ನಮ್ಮದೆ ಕ್ಲಾಸಿನಲ್ಲಿ ಓದುತ್ತಿದ್ದ ದಾವಣಗೆರೆಯ ಹುಡುಗ. ಓದುವುದರಲ್ಲಷ್ಟೇ ಅಲ್ಲ, ಭಾಷೆ, ಸಾಹಿತ್ಯ, ನಾಟಕಗಳಲ್ಲೂ ವಿಶೇಷ ಆಸಕ್ತಿ, ನಮ್ಮ ಕೊನೆಯ ವರ್ಷದಲ್ಲಿ ಮಾಡಿದ ಕೆಲವು ಕಿರು ನಾಟಕಗಳನ್ನು ನಿರ್ದೇಶಿಸಿದ್ದು ಸಹ ಈ ಕಲ್ಲೇಶನೆ. ಅವನನ್ನು ಸಹ-ನಿರ್ದೇಶನಿಗೆ ಪರಿಚಯಿಸಿಕೊಟ್ಟೆ. ಸಿನಿಮಾದ ಬಗ್ಗೆ ಒಂದೆರೆಡು ಪ್ರಶ್ನೆ ಕೇಳಿದ ಕಲ್ಲೇಶ, ರೂಮಿಗೆ ಹೋಗಿ ಪ್ಯಾಂಟ್ ಏರಿಸಿಕೊಂಡು ಸಹ-ನಿರ್ದೇಶಕನ ಜೊತೆ ಹೊರಟು ನಿಂತ. ಇತ್ತ ನಾನು ಕಲ್ಲೇಶನನ್ನು ಬೀಳ್ಕೊಟ್ಟು, ನನ್ನ ತಟ್ಟೆ ಹಿಡಿದು ಚುರುಗುಡುತ್ತಿದ್ದ ಹೊಟ್ಟೆಗೆ ಉಣಬಡಿಸಲು ಹೊರಟೆ.
ಸಂಜೆ ನಾಲ್ಕಾಗಿರಬಹುದು, ರಿಂಗಿಣಿಸಿದ ಮೊಬೈಲ್ ತೆಗೆದು ನೋಡಿದದರೆ ಯಾವುದೋ ಲೋಕಲ್ ಲ್ಯಾಂಡಲೈನ್ ನಂಬರ್. ಕರೆ ಉತ್ತರಿಸಿದಾಗ ಕೇಳಿದ್ದು ಕಲ್ಲೇಶನ ಧ್ವನಿ. “ಶೂಟಿಂಗ್ ಹೇಗೆ ನಡೀತಿದೆ ಕಣೋ.. ಎಲ್ಲಿಂದ ಫೋನ್ ಮಾಡ್ತಾ ಇದ್ದೀಯ?” ಅವನ ಮಾತಿಗೆ ಅವಕಾಶ ಕೊಡದೆ, ಗೆಳೆಯನೊಬ್ಬ actor ಆದ ಎಂಬ ಉತ್ಸುಕತೆಯಲ್ಲಿ ಪ್ರಶ್ನೆ ಮೇಲೆ ಪ್ರಶ್ನೆ ಹಾಕ ತೊಡಗಿದೆ. ಆದರೆ ಅವನು ಕೊಟ್ಟ ಉತ್ತರ ಕೇಳಿ ಒಂದು ಕ್ಷಣ ಸಿಡಿಲು ಬಡೆದಂತಾಯಿತು!!!
ಕಲ್ಲೆಶನನ್ನು ಕರೆದೊಯ್ದ ಸೆಂಥಿಲ್ ಆಟೋ ಹಿಡಿದು ಹೊರಟಿದ್ದು ಜಯನಗರದಲ್ಲಿ ಇದೆ ಎಂದು ಹೇಳಿದ್ದ ಚಿತ್ರೀಕರಣ ಜಾಗಕ್ಕೆ. ಆಗಿನ್ನೂ ಈ ಓಲ, ಊಬರಗಳ ಹಾವಳಿ ಇರಲಿಲ್ಲ, ಆಟೋನೆ ಸುಲಭವಾಗಿ ಸಿಗುತ್ತಿದ್ದ Luxury ಪಬ್ಲಿಕ್ ಟ್ರಾನ್ಸಪೋರ್ಟ್. ಮಾರ್ಗ ಮದ್ಯಯಲ್ಲಿ ಸಿನಿಮಾ ಕಥೆಯನ್ನು, ಅವನ ಪಾತ್ರವನ್ನು ವಿವರಿಸತೊಡಗಿದ. ಸಿನಿಮಾ ನಿರ್ದೇಶಕರಿಗೆ ನಿಮ್ಮನ್ನು ಕರೆ ತರುವುತ್ತಿರುವ ಬಗ್ಗೆ ಹೇಳಬೇಕೆಂದು ಕಿಸೆಯಲ್ಲಿದ್ದ ಮೊಬೈಲ್ ತೆಗಿದು ಕರೆ ಮಾಡಲು ಮುಂದಾದ. ಲೈನ್ ಸಿಗದೇ ಹೋದಾಗ, ಫೋನ್ ಆಫ್ ಮಾಡಿ ಆನ್ ಮಾಡಿ, ಬ್ಯಾಟರಿ ತೆಗೆದು ಹಾಕಿ ಫೋನ್ ಯಾಕೋ ಹೋಗುತ್ತಿಲ್ಲೆಂದು ಪೇಚಾಡತೊಡಗಿದ. ಅಷ್ಟರಲ್ಲೇ ಜಯನಗರದ 4th ಬ್ಲಾಕ್ ಮುಟ್ಟಿದ ಆಟೋಗೆ ನಿಲ್ಲಿಸಲು ಹೇಳಿ, ಮೊದಲೇ ಹೇಳಿದಂತೆ ಮೀಟರ್ ಮೇಲೆ ಇಪ್ಪತ್ತು ರೂಪಾಯಿ ಕೊಟ್ಟು ಕಳಿಸಿದ ಸೆಂಥಿಲ್. ಅಲ್ಲೇ ಇದ್ದ ಒಂದು ಕಟಿಂಗ್ ಶಾಪಿನ ಕಡೆ ಕೈ ತೋರಿಸಿ, ನಿಮಗೆ ಸ್ವಲ್ಪ ಕಟಿಂಗ್, ಶೇವಿಂಗ್, Facial ಮಾಡಿಸಬೇಕೆಂದು ಕಲ್ಲೆಶನನ್ನು ಶಾಪ್ ಒಳಗೆ ಕರೆದೊಯ್ದ.
ಭಾನುವಾರವಾಗಿದ್ದರಿಂದ ಕ್ಷೌರಿಕರೆಲ್ಲ ಸ್ವಲ್ಪ ಬ್ಯುಸಿಯಾಗಿದ್ದರು, ಕೂತ್ಕೊಳ್ಳಿ ಸಾರ್ 10 ನಿಮಿಷ ಅಂತ ಹೇಳಿ ಕೈಗೊಂದು ಪತ್ರಿಕೆ ಕೊಟ್ಟ ಕೆಂಚ ಕೂದಲಿನ ಮಾಲೀಕ. ಮತ್ತೆ ನಾಲ್ಕೈದು ಸಾರಿ ಫೋನ್ ಮಾಡಲು ಪ್ರಯತ್ನಿಸಿ, ಫೋನ್ ಸರಿ ಇಲ್ಲ ನಿರ್ದೇಶಕರು ಕಾಯುತ್ತಿರುತ್ತಾರೆ ಎಂದು ಗೊಣಗಿದ ಸೆಂಥಿಲ್, ನಿಮ್ಮ ಫೋನಿನಿಂದ ನಿರ್ದೇಶಕರಿಗೊಂದು ಕರೆ ಮಾಡಬಹುದಾ? ಎಂದು ಕೇಳಿದಾಗ ಕಲ್ಲೇಶ sure ಎಂದು ತನ್ನ ಮೊಬೈಲನ್ನು ಅವನ ಕೈಯಲ್ಲಿಟ್ಟ. ನಂಬರ್ ಡಯಲ್ ಮಾಡಿದ ಸೆಂಥಿಲ್, ಆ ಕಡೆಯವರ ದ್ವನಿ ಕೆಳುತಿದ್ದಂತೆ ಮುಖದಲ್ಲೊಂದು ಮಂದಹಾಸ ಬೀರುತ್ತ ಮಾತು ಶುರುವಾಯಿತು. ಅಸ್ಟರಲ್ಲೇ ಖಾಲಿಯಾದ ಕುರ್ಚಿ ಮೇಲೆ ಕೂರಲು ಕರೆದ ಕೆಂಚ ಕೂದಲಿನವನ ದ್ವನಿ ಕೇಳಿ, ಫೋನಿನಲ್ಲಿದ್ದ ಸೆಂಥಿಲ್ ನನಗೆ ಬೇಗ ಕಟಿಂಗ್ ಮುಗಿಸಿಕೊಳ್ಳುವಂತೆ ಸನ್ನೆ ಮಾಡಿದ. ಕ್ಷೌರ ಮಾಡಿಸಿಕೊಂಡು ಚೇರಿನಿಂದ ಎದ್ದ ಕಲ್ಲೇಶನಿಗೆ, ಸೆಂಥಿಲ್ ಕಾಣದಿದ್ದಾಗ ದಿಗಿಲುಂಟಾಯಿತು!! ಗಾಬರಿಗೊಂಡ ಹೊರಗಡೆ ಹೋಗಿ ಆಚೀಚೆ ಹುಡುಕಿದರೂ, ಸೆಂಥಿಲ್ ಎಲ್ಲೂ ಕಾಣಲಿಲ್ಲ. ಸೆಂಥಿಲಿನ ಕುತಂತ್ರವರಿತ ಕಲ್ಲೇಶ, ಕೆಂಚ ಕೂದಲಿನವನಿಗೆ ದುಡ್ಡು ಕೊಟ್ಟು ಹಾಸ್ಟೆಲಿನ ಕಡೆ ಬಸ್ ಹತ್ತಿದ.
ಕಲ್ಲೇಶನ ರೂಮಿನಲ್ಲಿ ಕುಳಿತು ಇದೆಲ್ಲಾ ಕೇಳಿದಾಗ, ಆ ವಂಚಕನನ್ನು ಹಾಸ್ಟೆಲಿಗೆ ಯಾಕಲಾದರು ಕರೆ ತಂದೇನೋ, ಅಲ್ಲೇ ಕಾಲೇಜಿನಿಂದ ಕಳಿಸಬಾರದಿತತ್ತಾ? ಅನಿಸಿತು. ಸಹ ನಿರ್ದೆಶಕನೆಂದು ಹೇಳಿ ಬಂದ ಕುಹುಕಿ ಸೆಂಥಿಲ ನನ್ನ ಮತ್ತು ಕಲ್ಲೇಶನ ಕೈಯಲ್ಲಿದ್ದ ಮೊಬೈಲ್ ನೋಡಿಯೇ ಸಿನಿಮಾಗೆ ಆಫರ್ ಮಾಡಿದ್ದೆಂಬುದು ಗೊತ್ತಾದುದ್ದು ಆವಾಗಲೇ!! ಆಗಿನ್ನೂ ಮೊಬೈಲ್ ಹೊಸದಾಗಿ ಕಾಲಿಟ್ಟಿತ್ತು, ಕಲ್ಲೇಶನಿಗೆ ಅವರ ತಂದೆ ಆರು ತಿಂಗಳ ಹಿಂದೆಯಷ್ಟೇ ಆ ನೋಕಿಯಾ ಫೋನನ್ನು ಕೊಡಿಸಿದ್ದರು!ಏನೋ, ಅಷ್ಟಕ್ಕೆ ಮುಗಿಯಿತಲ್ಲ ಅಂದುಕೊಂಡು, ಮೊಬೈಲ್ ಕಳೆದು ಹೋಯಿತೆಂದು ಕಲ್ಲೇಶನ ಮನೆಯೆಲ್ಲು ಮತ್ತು ಹಾಸ್ಟೆಲ್ ಗೆಳೆಯರಿಗೆ ಹೇಳಿ ಮೋಸ ಜಾಲದ ಸಿನಿಮಾ ಕಥೆಗೊಂದು ಇತಿಶ್ರೀ ಇಟ್ಟೆವು.
ಕೊಟ್ರೇಶ್ ಕಾಡಪ್ಪನವರ್
Facebook ಕಾಮೆಂಟ್ಸ್