X
    Categories: ಕಥೆ

ವಿಧಿಯಾಟ   ಭಾಗ-೧

  ಬೆಂಗಳೂರು ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಒಂದನೆ ಮಹಡಿಯ ಮಾನಸಿಕ ರೋಗಿಗಳ ವಿಭಾಗದಲ್ಲಿ ರೂಮ್ ನಂಬರ್ ನಾಲ್ಕರಲ್ಲಿರುವ ಮಾನಸಿಕ ಅಸ್ವಸ್ಥನೊಬ್ಬ ಸುಂದರ ಮಹಿಳೆಯೊಬ್ಬಳ ಚಿತ್ರ ಬರೆಯುತ್ತಿದ್ದಾನೆ..ಕುಂಚ ಕಲೆಯ ಪರಿಣಿತ ಅವನು..ಆ ವ್ಯಕ್ತಿಯ ಹೆಸರನ್ನು “ಸುಶಾಂತ್ “ಎಂದು ಆಸ್ಪತ್ರೆಯಲ್ಲಿ ನಮೂದಿಸಿ ಹೋದ ಒಬ್ಬ ಮನುಷ್ಯ ಮಾತ್ರ ಈ ಕುಂಚ ಕಲೆಯ ಪರಿಣಿತನನ್ನು ವಾರಕ್ಕೆರಡು ಬಾರಿ ನೋಡಲು ಬರುತ್ತಾನೆ..ಅವನೊಡನೆ ಒಂದೆರಡು ಗಂಟೆಗಳ ಕಾಲ ಇರುತ್ತಾನೆ..ಸುಶಾಂತ್ ಬರೀ ಮೌನದ ಜೊತೆಗೆ ಸ್ವಲ್ಪ ಹೊತ್ತು ಬಿಕ್ಕಿ ಅಳುತ್ತಾನೆ. ಆ ವ್ಯಕ್ತಿ ಸುಶಾಂತ್’ನನ್ನು ಸಮಾಧಾನಿಸಿ ಹೊರಡುತ್ತಾನೆ. ಚಿತ್ರ ಬರೆಯಲು ಸುಶಾಂತನಿಗಾಗಿ ಬೇಕಾದಷ್ಟು  ಡ್ರಾಯಿಂಗ್ ಹಾಳೆಗಳನ್ನ, ಕುಂಚಗಳನ್ನ, ಪೆನ್ಸಿಲ್ ಗಳನ್ನು ತಂದುಕೊಡುತ್ತಾನೆ ಆ ವ್ಯಕ್ತಿ. ಆದರೆ ಒಂದು ದಿನವೂ ತಾನು ಬರೆದ ಚಿತ್ರಗಳನ್ನು ಆ ವ್ಯಕ್ತಿಗೆ ತೋರಿಸಿಲ್ಲ ಸುಶಾಂತ್. ಅವನು ತನ್ನ ಚಿತ್ರಗಳನ್ನು ಯಾರಿಗೂ ತೋರಿಸುವುದಿಲ್ಲವೆಂದು ಆ ವ್ಯಕ್ತಿಗೆ ಗೊತ್ತಿರುವುದರಿಂದ ಅವನೂ ಸುಶಾಂತ್’ನನ್ನು ಚಿತ್ರ ತೋರಿಸಲು ಬಲವಂತಪಡಿಸುವುದಿಲ್ಲ. ತನ್ನ ಓದಿಗಾಗಿ ತನಗೆ ಊರುಗೋಲಾಗಿ ನಿಂತ ಸುಶಾಂತ್ ಬಗ್ಗೆ ಅವನಿಗೆ ವಿಪರೀತ ಪ್ರೀತಿಯಿದೆ. ಮನೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಬೇಕೆಂದರೆ ಹೆಂಡತಿಗೆ ಇಷ್ಟವಿಲ್ಲ. ತಾನು ಪ್ರೀತಿಸಿದ ಹುಡುಗಿ ಸಿಗಲಾರದೇ ಮಾನಸಿಕವಾಗಿ ನೊಂದು ಕುಡುಕನಾಗಿ ಒಂಟಿಯಾಗಿದ್ದಾಗ ತನ್ನನ್ನು  ಇನ್ನಿಲ್ಲದಂತೆ ಪ್ರೀತಿಸಿ ಮದುವೆಯಾದವಳಿಗೆ ತನ್ನ ನೋವನ್ನು ಮರೆಯುವಂತೆ ಮಾಡಿದವಳಿಗೆ ಇಷ್ಟವಿರದ ಕೆಲಸ ಮಾಡಲಾರದೇ …..ಇತ್ತ  ಒಂದು ಕಾಲದಲ್ಲಿ ಆಸರೆಯಾಗಿದ್ದ ಗೆಳೆಯನನ್ನು ಬಿಡಲಾಗದೇ ಆ ವ್ಯಕ್ತಿ ಒದ್ದಾಡುತ್ತಾನೆ…..ಆದರೂ ಒಂದಂತೂ ತೃಪ್ತಿಯಿದೆ ಆ ವ್ಯಕ್ತಿಗೆ. ತನ್ನ ಗೆಳೆಯನನ್ನು ತಾನು ಕೈಬಿಟ್ಟಿಲ್ಲ ಎನ್ನುವುದು. ತಾನೇ ಆಸ್ಪತ್ರೆಯ ವೆಚ್ಚಗಳನ್ನು ಭರಿಸಿ ಸುಶಾಂತ್’ನನ್ನು ನೋಡಿಕೊಳ್ಳುತ್ತಿದ್ದಾನೆ ಆ ವ್ಯಕ್ತಿ. ಆ ವ್ಯಕ್ತಿಯ ಹೆಸರು ಜನಾರ್ಧನ..

      ಪಕ್ಕದ ಬೆಡ್’ನಲ್ಲಿಯ ತನ್ನ ಚಿಕ್ಕಪ್ಪ ಸೂರ್ಯನನ್ನು ಆಗಾಗ ನೋಡಲು ಬರುತ್ತಿದ್ದ ವಿಭಾ ಶುಭಾ ಎಂಬ ಅವಳಿಗಳು ಇದನ್ನು ಗಮನಿಸಿದ್ದಾರೆ

ಅದೇ ಆಸ್ಪತ್ರೆಯಲ್ಲಿ ಡಿಪ್ರೆಶನ್’ಗೆ ಒಳಗಾಗಿರುವ  ವಿಭಾ ಚಿಕ್ಕಪ್ಪನನ್ನು  ಅಡ್ಮಿಟ್ ಮಾಡಲಾಗಿದೆ. ಚಿಕ್ಕಪ್ಪ ಎಂದರೆ ಪ್ರಾಣ ವಿಭಾ ಶುಭಾಗೆ. ಇಬ್ಬರೂ ಆಗಾಗ ಅವರ ಚಿಕ್ಕಪ್ಪನನ್ನು ನೋಡಲು ಬರುತ್ತಾರೆ. ವಿಭಾಗೆ ಮಾತ್ರ ತನ್ನ ಚಿಕ್ಕಪ್ಪನ ಬೆಡ್’ನ ಪಕ್ಕದ ಪೇಷೇಂಟ್  ವಿಚಿತ್ರವಾಗಿ ಕಾಣಿತ್ತಾನೆ..”ಮುಖದಲ್ಲಿ ಶೀಮಂತಿಕೆಯ ಕಳೆಯಿದೆ..ಯಾರಿಗೂ ತೊಂದರೆ ಕೊಡುವುದಿಲ್ಲ….ಒಂದು ಮಾತಾಡುವುದಿಲ್ಲ..ಮತ್ತೆ ಚಿತ್ರ ಬರೆಯುವುದನ್ನು ನೋಡಿದರೆ  ಚಿತ್ರಕಲೆಯ ಪರಿಣಿತ ಅನಿಸುತ್ತದೆ…ಇಷ್ಟು ಸುಂದರ ಚಿತ್ರ ಬರೆಯುವ ಇವರೇಕೆ ಮಾನಸಿಕ ರೋಗಿಯಾದರೋ …?”ಎಂದು ತಿಳಿಯುವ ಕುತೂಹಲ ಕೆರಳಿತೆಂದರೆ ಅವನನ್ನು ಮಾತನಾಡಿಸುತ್ತಾಳೆ. ಆದರೆ ಅವನಿಂದ ಉತ್ತರವಿಲ್ಲ..ಬರೀ ಅವಳ ಕಣ್ಣುಗಳನ್ನು ದಿಟ್ಟಿಸುತ್ತಾನೆ..ಅವಳ ಕೆನ್ನೆಯ ಮೇಲಿನ ಕಪ್ಪು ಮಚ್ಚೆಯನ್ನು  ದಿಟ್ಟಿಸುತ್ತಾನೆ..ಇದು ಎಷ್ಟೋ ಬಾರಿ ಆದರೂ ಅವಳ ಪ್ರಯತ್ನ ಬಿಟ್ಟಿಲ್ಲ..ಅವಳಿಗಿಂತ ನಾಲ್ಕು ನಿಮಿಷ ಮೊದಲು ಹುಟ್ಟಿದ ಶುಭಾ ಇಂತಹ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ..ಅವಳ ಚಿಕ್ಕಪ್ಪನನ್ನು ಮಾತನಾಡಿಸಿದರೆ ಆಯಿತಳಿಗೆ. ಮೂರು ತಿಂಗಳಿನಿಂದ ಆಸ್ಪತ್ರೆಗೆ ಬರುತ್ತಿದ್ದಾರೆ ಆದರೆ ಆಸ್ಪತ್ರೆಯವರಿಗೆ ಯಾರು ಶುಭಾ, ಯಾರು ವಿಭಾ ಎಂದು ಗೊತ್ತಾಗುವುದಿಲ್ಲ. ಮನೆಯವರನ್ನು ಬಿಟ್ಟು ಯಾರಿಗೂ ಗೊತ್ತಿಲ್ಲ….ಯಾರು ಶುಭಾ ಯಾರು ವಿಭಾ ಎಂದು..ವಿಭಾ ಸುಶಾಂತ್’ನನ್ನು ಮಾತನಾಡಿಸುತ್ತ ನಿಂತರೆ “ಬಾರೇ ಎಷ್ಟು ಕೇಳಿದರೂ ಅವನು ಬಾಯ್ಬಿಡುವುದಿಲ್ಲ…ನೀನು ಕೇಳುವುದನ್ನು ಬಿಡುವುದಿಲ್ಲ…ನೋಡಿ ನೋಡಿ ಸಾಕಾಗಿದೆ..ಯಾಕೋ ಅವನ ನೋಟವೇ ಸರಿ ಇಲ್ಲ..ನಿನಗೆಷ್ಟು ಹೇಳಿದರೂ ನೀನು ಕೇಳುವುದಿಲ್ಲ..”ಎಂದು ರೇಗಿ ಅವಳನ್ನು ಎಳೆದುಕೊಂಡು ಹೋಗುತ್ತಾಳೆ ಶುಭಾ . ಇದು ಎರಡೂವರೆ ತಿಂಗಳಿನಿಂದ ನಡೆಯುತ್ತಲೇ ಇದೆ. ಆಗೆಲ್ಲ ವಿಭಾ “ಬಿಡೇ ಮಾತನಾಡಿಸಿದರೆ ನಮ್ಮ ಗಂಟೇನು ಹೋಗುತ್ತದೆ?..ಯಾಕೋ ಮಾತನಾಡಿಸಬೇಕೆನಿಸಿತು…ಮಾತನಾಡಿಸಿದೆ..ಬಾಯಿ ಬಿಡಬಹುದೆಂದು…”ಎಂದು ಅವಳಿಗೆ ವಾದಿಸುತ್ತಿದ್ದಳು.

“ಇಷ್ಟು ವರ್ಷಗಳಿಂದ ಇಲ್ಲಿರುವ ಯಾರಿಗೂ ಬಾಯಿ ಬಿಡದವನು ನೀನು ಕೇಳಿದ ಕೂಡಲೇ ಹೇಳಿಬಿಡುತ್ತಾನಾ? ನಡೀ ಹೋಗೋಣ….ಇಲ್ಲಿದ್ದರೆ ಹೀಗೆ ಅವರಿವರ ಬಗ್ಗೆ ತಲೆಕೆಡಿಸಿಕೊಂಡು ನಿನ್ನನ್ನೂ ಅಡ್ಮಿಟ್ ಮಾಡಬೇಕಾಗುತ್ತದೆ…”ಎಂದು ಅವಳನ್ನು ಎಳೆದುಕೊಂಡು ಹೋಗುತ್ತಿದ್ದಳು. ಅದೊಂದು ದಿನ ಸುಶಾಂತ್ ಬರೆಯುತ್ತಿದ್ದ ಚಿತ್ರವನ್ನು ಹಿಂದಿನಿಂದ ಕದ್ದು ನೋಡಿದ ವಿಭಾಗೆ  ದಿನ ಅವನು ಬರೆದ ಕಣ್ಣು ಗಳು ತನ್ನ ಅಮ್ಮನ ಕಣ್ಣುಗಳ ಹಾಗೇ ಇವೆ ಎನಿಸಿತು.. ಪೂರ್ತಿ ಚಿತ್ರ ಬರೆಯುವುದಾಗುವವರೆಗೂ ನೋಡೋಣವೆಂದರೆ ಶುಭಾ ಎಳೆದುಕೊಂಡು ಹೋದಳು. ವಿಭಾ, ಶುಭಾನ ಕಣ್ಣುಗಳೂ ಅವರಮ್ಮನ ಕಣ್ಣುಗಳನ್ನೇ ಹೋಲುತ್ತಿದ್ದವು. ಸುಶಾಂತ್ ಎಂಬ ಆ ವ್ಯಕ್ತಿ ಮಾತ್ರ ತಾನು ಬರೆದ ಚಿತ್ರಗಳನ್ನು ಯಾರಿಗೂ ಕಾಣಿಸದಂತೆ ತನ್ನ ದಿಂಬಿನಡಿ ಮುಚ್ಚಿಡುತ್ತಾನೆ. ತೋರಿಸಲು ಕೇಳಿದರೆ ಕಣ್ಣು ಕೆಂಪಗಾಗಿಸಿಕೊಳ್ಳುತ್ತಾನೆ.

  ಆ ಕಣ್ಣುಗಳ ಚಿತ್ರದ ಬಗ್ಗೆ ಯೋಚಿಸುತ್ತಿದ್ದ ವಿಭಾ ತನಗೆ ಹಾಗೆನಿಸಿತೇನೋ ….ಹೋಗಲಿ ಬಿಡು ….ಎಂದುಕೊಂಡು ಶುಭಾನೊಂದಿಗೆ ಹೆಜ್ಜೆ ಹಾಕಿದಳು. ಮನೆಗೆ ಬಂದವಳು ಅಮ್ಮನ ಸುಂದರ ಕಣ್ಣುಗಳನ್ನು ನೋಡಿದವಳಿಗೆ ಮತ್ತದೇ ವ್ಯಕ್ತಿ ಚಿತ್ರಿಸಿದ ಕಣ್ಣುಗಳು ನೆನಪಾದವು. ವಿಭಾ ತನ್ನ ಅಮ್ಮ ಭಾರತಿಗೆ ಚಿನ್ನುವಾದರೆ ಶುಭಾ ಪಾಪುವಾಗಿದ್ದಳು.. ಅವಳಿ ಮುದ್ದಾದ ಮಕ್ಕಳಿಗೆ ಮುದ್ದಾದ ಪ್ರೀತಿಯ ಹೆಸರುಗಳು.

    ಆ ಕಣ್ಣುಗಳ ಬಗ್ಗೆಯೇ ಚಿಂತಿಸುತ್ತಿದ್ದ ವಿಭಾಳನ್ನು ಯಾಕೋ ಮಂಕಾಗಿದ್ದಾಳೆ ಎನಿಸಿತು ಭಾರತಿಗೆ..”ಚಿನ್ನು ಏನಾಯ್ತೇ? ಯಾಕೇ ಸಪ್ಪಗಿದೀಯಾ? “ಎಂದ ಅಮ್ಮನಿಗೆ “ಹಾಂ….ಏನಿಲ್ಲ ….ಅಮ್ಮ….”ಎಂದು ಮಾತು ಮರೆಸಿದಳು ವಿಭಾ. ಅಷ್ಟರಲ್ಲಿ ಪತಿಯ ಆಗಮನವಾಗಿದ್ದರಿಂದ ಮಾತು ತುಂಡರಿಸಿ ಪತಿಗೆ ಚಹ ತರಲು ಒಳನಡೆದಳು ಭಾರತಿ..ರವಿ ಭಾರತಿಯ ಪತಿ..ತನ್ನದೇ ಸ್ವಂತ ಉದ್ಯಮವನ್ನು ಹೊಂದಿದಾತ. ಭಾರತಿಯಂತೂ ಅವನನ್ನು ದೇವರಂತೆ ಪೂಜಿಸುತ್ತಾಳೆ. ಅವಳ ಪ್ರಕಾರ ಜಗತ್ತಿನಲ್ಲಿ ಒಳ್ಳೆಯ ಪತಿಯಂದರೆ ಅವನು ತನ್ನ ಪತಿಯೇ ಎಂದುಕೊಂಡಿದ್ದಾಳೆ. ಅದು ನಿಜವೂ ಕೂಡಾ. ವಿಶಾಲ ಮನಸಿನ ವ್ಯಕ್ತಿ ರವಿ. ಭಾರತಿಯ ತಂದೆಯ ತಂಗಿಯ ಮಗನೂ ಹೌದು…

    “ಏನು ಅಮ್ಮ ಮಗಳು ಏನೋ ಮಾತುಕತೆ ನಡೆಸಿದ್ರಿ?” ಎಂದು ವಿಭಾಳತ್ತ ತಿರುಗಿ ನುಡಿದ ರವಿ…”ಏನಿಲ್ಲ ಅಪ್ಪಾ ….ನಿನಗೊತ್ತಲ್ವ …ಅಮ್ಮ ಸುಮ್ನೆ ತಲೆ ತಿಂತಾಳೆ” ಅಂದಳು ವಿಭಾ. ಅಷ್ಟೊತ್ತಿಗೆ ಭಾರತಿಯು ಚಹದ ಕಪ್ ಹಿಡಿದು ಅಲ್ಲಿಗೆ ಬಂದಿದ್ದಳು. ಅವಳನ್ನು ರೇಗಿಸಲೆಂದೇ ರವಿ “ಚಿನ್ನು ಇಷ್ಟಕ್ಕೆ ಹೀಗೆಂದರೆ ಹೇಗೆ? ನಾನು ಹತ್ತೊಂಬತ್ತು ವರ್ಷಗಳಿಂದ ಇವಳ ಜೊತೆ ಇದೀನಿ..ನನ್ನ ಗತಿ ಏನಾಗಿರಬೇಡ? ನೀನು ಇನ್ನೂ ಇವಳತ್ರ ಟ್ರೇನಿಂಗ್ ತಗೋಬೇಕು..ಮುಂದೆ ಬರೋ ನನ್ ಅಳಿಯನ ತಲೆ ತಿನ್ನೋದು ಹೇಗೆ ಅಂತ….!” ಎಂದು ಭಾರತಿಯತ್ತ ನೋಡಿದಾಗ ವಿಭಾ ಮುಸಿ ಮುಸಿ ನಗುತ್ತಿದ್ದಳು..ಭಾರತಿ ಚಹದ ಲೋಟ ರವಿಯ ಕೈಗಿತ್ತು ” ನೀವೇಷ್ಟೇ ರೇಗಿಸಿದರೂ ಕೋಪ ಮಾಡಿಕೊಳ್ಳುವುದಿಲ್ಲ  ನಾನು..‌ನಿಮ್ಮ ಜೊತೆ ಮಾತಾಡ್ತಾ ಕೂತ್ರೆ ಕೆಲಸ ಹಾಗೇ ಉಳಿದು ಬಿಡತ್ತೆ..ಇವತ್ತು ಕೆಲಸದವಳೂ ಬಂದಿಲ್ಲ…ಇವರೋ ಮಹಾರಾಣಿರ ತರ ಆಡ್ತಾರೆ…ನೀವೂ ಹಾಗೇ ಮಕ್ಕಳು ಅಂದ್ರೆ ಅದೇನ್ ಪ್ರಾಣಾನೋ…ಒಂದಿನ ಮನೆ ಕೆಲಸ ಮಾಡೋಕೆ ಹೇಳಿಲ್ಲ…ನಾನು ಹೇಳಿದ್ರೆ ನನಗೇ ಬೈತೀರಾ…ನಾಳೆ ಗಂಡನಿಗೆ ಅದ್ಹೇಗೆ ಬೇಯಿಸಿ ಹಾಕ್ತಾರೋ..?ನೀವುಂಟು ನಿಮ್ಮ ಇಬ್ರು ಹೆಣ್ಮಕ್ಕ್ಳುಂಟು..”ಎಂದು ಗೊಣಗುತ್ತ ಒಳನಡೆದಳು ಭಾರತಿ. ಕೋಪ ಮಾಡಿಕೊಳ್ಳುವುದಿಲ್ಲ ಎಂದರೂ ಭಾರತಿ ಮುಖದಲ್ಲಿನ ಹುಸಿಕೋಪ ರವಿಗೆ ಕಂಡಿತ್ತು.

   ಅವರು ಕೇಳಿದ್ದನ್ನ ಯಾವತ್ತೂ ಇಲ್ಲ ಎನ್ನದೇ ಕೊಡಿಸಿದ್ದಾನೆ ರವಿ. ಅದಕ್ಕೆ ಅಮ್ಮನಿಗಿಂತ ಅಪ್ಪ ಅಚ್ಚು ಮೆಚ್ಚು ವಿಭಾ ಶುಭಾಗೆ. ಆ ದಿನ ಭಾರತಿ ಈ ಬಗ್ಗೆ ಆಕ್ಷೇಪಿಸಿದ್ದಳು. ಅದಕ್ಕೆ ರವಿ “ನನ್ ಮಕ್ಕಳು ಏನೂ ಕೊರತೆ ಇಲ್ಲದಿರೋ ಹಾಗೆ ಬೆಳಿಬೇಕು ಕಣೆ… ಇದನ್ನ ನಮ್ಮಪ್ಪ ಕೊಡಿಸಿಲ್ಲ ಅಂತ ಅವರಿಗೆ ಅನ್ನಿಸಬಾರದು..ನಾನು ದುಡಿತಿರೋದು ಅವರಿಗೋಸ್ಕರಾನೇ..” ಎಂದು ಭಾರತಿಯ ಬಾಯ್ಮುಚ್ಚಿಸಿದ್ದ. “ಇವರ ಸ್ವಂತ ಮಕ್ಕಳಾಗಿದ್ದರೆ ಇನ್ನೂ ಅದೇಷ್ಟು  ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಿರೋ ಅವರನ್ನ…ನಾನು ,ನನ್ನ ಮಕ್ಕಳು ಪುಣ್ಯ ಮಾಡಿದ್ದೇವೆ…ಇವರನ್ನು ಪಡೆಯಲು..”ಎಂದುಕೊಂಡಳು ಭಾರತಿ ಮನಸ್ಸಿನಲ್ಲಿ. ಅಷ್ಟು ವರ್ಷಗಳು ಕಳೆದರೂ ಬಾಯ್ಬಿಟ್ಟು ಈ ಮಾತನ್ನು ಹೇಳಲಾಗ್ತಿಲ್ಲ ಅವಳಿಗೆ.

   ಅವಳೆಂದೂ ತನ್ನ ಮೈದುನನ್ನು ನೋಡಲು ಆಸ್ಪತ್ರೆಗೆ ಹೋಗಿಲ್ಲ…ಅವನು ತನ್ನ ಹೆಂಡತಿಯೆಂದು ತಿಳಿದು ಅವಳೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಅವನನ್ನು ಕಂಡರೆ ಭಯಪಡುವಂತಾಗಿತ್ತು ಅವಳಿಗೆ..ಆದರೆ ಅವನು ಡಿಪ್ರೆಶನ್’ಗೆ ಒಳಗಾಗಿ ಹಾಗೆ ಮಾಡಿದ್ದನೇ ಹೊರತು ಬೇಕಂತಲೇ ಅಲ್ಲ. ಸೂರ್ಯ ತುಂಬಾ ಒಳ್ಳೆಯ ವ್ಯಕ್ತಿ..ವಂದನಾಳನ್ನು ಪ್ರೀತಿಸಿ ಮದುವೆಯಾಗಿದ್ದ..ರವಿ ಮತ್ತು ಸೂರ್ಯನದು ಒಂದೇ ಮನೆಯಲ್ಲೇ ವಾಸ…ರಾಮ ಲಕ್ಷ್ಮಣರಂತಿದ್ದರು ಅಣ್ಣ ತಮ್ಮ..ವಂದನಾ ,ಭಾರತಿ ಕೂಡಾ ಸ್ವಂತ ಅಕ್ಕ ತಂಗಿಯರಂತೆ ಹೊಂದಿಕೊಂಡಿದ್ದರು. ಆದರೆ ವಿಧಿಯಾಟ ಬೇರೇಯೇ ಇತ್ತು. ಮದುವೆಯಾಗಿ ಹತ್ತು ವರ್ಷಗಳ ಮೇಲೆ ವಂದನಾ ಗರ್ಭಿಣಿ ಯಾಗಿದ್ದಳು. ಅಲ್ಲಿಯವರೆಗೂ ಮಕ್ಕಳ ಆಸೆಯನ್ನೇ ಬಿಟ್ಟು ವಿಭಾ ಶುಭಾಳನ್ನೇ ತಮ್ಮ ಮಕ್ಕಳು ಎಂದುಕೊಂಡಿದ್ದರು. ವಂದನಾ ಗರ್ಭಿಣಿ ಎಂದು ತಿಳಿದಾಗ ಎಲ್ಲರಿಗೂ ಸಂತೋಷವಾಗಿತ್ತು. ಮೊದಲೇ ಹೆಂಡತಿಯ ನ್ನು ತುಂಬಾ ಪ್ರೀತಿಸಿತ್ತಿದ್ದ ಸೂರ್ಯ ವಂದನಾಳನ್ನು ಇನ್ನೂ ಹೆಚ್ಚು ಪ್ರೀತಿಸತೊಡಗಿದ್ದ. ಎಂತವರಿಗೂ ಹೊಟ್ಟೆ ಕಿಚ್ಚು ಮೂಡಿಸುವಂತಿತ್ತು ಅವರ ಪ್ರೀತಿ. ತಮ್ಮ ಪುಟ್ಟ ಕಂದನ ಆಗಮನಕ್ಕೆ ಇಬ್ಬರೂ ಕಾತರದಿಂದ ಕಾಯುತ್ತಿದ್ದರು. ವಂದನಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು..ಆದರೆ ವಂದನಾಳನ್ನು ಉಳಿಸಿಕೊಳ್ಳುವಲ್ಲಿ ವೈದ್ಯರು ವಿಫಲರಾಗಿದ್ದರು. ತೀವ್ರ ರಕ್ತಸ್ರಾವದಿಂದ ವಂದನಾ ಸಾವನ್ನಪ್ಪಿದ್ದಳು..ಸುದ್ದಿ ತಿಳಿದ ಸೂರ್ಯ ಹುಚ್ಚನಂತೆ ಆಡತೊಡಗಿದ್ದ.  ಎಲ್ಲರೂ ಅವನಿಗೆ ಸಮಾಧಾನ ಹೇಳಿ ವಂದನಾಳ ಅಂತ್ಯಕ್ರಿಯೆಯನ್ನು ಮಾಡಿ ಮುಗಿಸಿದ್ದರು.ಮಗು ಭಾರತಿಯ ಮಡಿಲಲ್ಲಿ ಇದ್ಯಾವುದರ ಪರಿವೆಯೇ ಇಲ್ಲದೇ ಮಲಗಿತ್ತು. ವಿಭಾ ಶುಭಾ ಚಿಕ್ಕಮ್ಮನಿಗಾಗಿ ಕಣ್ಣೀರು ಮಿಡಿದಿದ್ದರು…..

ಮುಂದುವರಿಯುವುದು ……

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post