X
    Categories: ಕಥೆ

ದೇವರ ಹುಟ್ಟು – 1

೩೦೦೦೦೦ ವರ್ಷಗಳ ಹಿಂದೆ ಭೂಮಿಯ ಪಶ್ಚಿಮ ಭಾಗದಲ್ಲಿ ನಿರ್ಜನ ಪ್ರದೇಶ.ದೂರ ದೂರಕ್ಕೆ ಒಂದೇ ಒಂದು ಹುಲ್ಲು ಕಡ್ಡಿ ಕೂಡ ಕಾಣಿಸುತ್ತಿಲ್ಲ. ಬರಡು ಭೂಮಿ.ಬಟಾ ಬಯಲು.ಬಿಸಿಲು ನೆತ್ತಿಗೆ ಚುಚ್ಚುತ್ತಾ ಇದೆ.ಮಳೆ ಬಂದು ಅದೆಷ್ಟು ತಿಂಗಳುಗಳು ಕಳೆದು ಹೋಗಿದೆಯೋ ಲೆಕ್ಕ ಇಲ್ಲ.ಅವನು ಮಾತ್ರ ಅವನ ಸಂಚಾರ ನಿಲ್ಲಿಸಿಲ್ಲ.ತೂಕವಿದ್ದ ದೇಹ ಈಗ ಮೂಳೆಗಳ ಕಟ್ಟಡದಂತೆ ಕಾಣ್ತಿದೆ. ಬೆವರು ಮೈಯಿಂದ ಕಿತ್ತು ಆಚೆ ಧುಮುಕುತ್ತಿದೆ. ತುಟಿ ಒಣಗಿದೆ.ಹಸಿರು ತುಂಬೋ ಭೂಮಿಯನ್ನು ಪೂಜಿಸುತ್ತಿದ್ದ. ಆದರೆ ಇವತ್ತು ಅದೇ ಭೂಮಿ ಬಿರುಕು ಬಿಟ್ಟು ತನ್ನನ್ನೇ ನುಂಗುತ್ತಿದೆ. ಮಳೆ ಸುರಿಸುತ್ತಿದ್ದ ಆಗಸವನ್ನ ಬೇಡುತ್ತಿದ್ದ.ಇಂದು ಅದೇ ಆಗಸ ಸೂರ್ಯನ ಬೆಂಕಿಯಿಂದ ತುಂಬಿ ಉರಿಯುತ್ತಿರುವಂತಿದೆ.ನಂಬಿ ಆರಾಧಿಸುತ್ತಿದ್ದ ಅಗ್ನಿ,ವಾಯು,ಜಲ,ಗಿಡ-ಮರಗಳು,ಸೂರ್ಯ,ಹಣ್ಣು ತರಕಾರಿಗಳು ಎಲ್ಲವೂ ಕೈಕೊಟ್ಟಿದೆ.

ಯಾರಲ್ಲಿ ನಂಬಿಕೆ ಇಡಬೇಕು?ಯಾರನ್ನ ಬೇಡಿದರೆ ಜೀವ ಉಳಿಯುತ್ತದೆ ಅರ್ಥವಾಗುತ್ತಿಲ್ಲ.ಉಟ್ಟಿದ್ದ ಕಚ್ಚೆ ಪಂಚೆ ಹರುಕಲಾಗಿ ಹೋಗಿದೆ. ಹಸಿದಾಗ ಒಂದೊಂದು ತುಂಡನ್ನು ತಿಂದದ್ದೂ ಉಂಟು. ಒಂದು ಹನಿ ನೀರು ಬಾಯಿಗೆ ಬಿದ್ದರು ಬದುಕೇನು ಎಂದು ಮನಸ್ಸಿನಲ್ಲಿ ಮಂಜು ಕವಿದ ಯೋಚನೆ ಬರತೊಡಗಿತು.ತನಗೆ ಕೆಲಸಕ್ಕೆ ಬರುವುದನ್ನೆಲ್ಲಾ ನಂಬಿದ್ದೆ. ಛಳಿಗಾಲದಲ್ಲಿ ಕಲ್ಲುಜ್ಜಿ ಬೆಂಕಿ ಬಂದಾಗ ಕಲ್ಲನ್ನು,ಬೆಂಕಿಯನ್ನು ಪೂಜಿಸಿದ್ದೆ. ನಾಲಿಗೆ ಒಣಗಿದಾಗ ನೀರು ಕುಡಿದು ಬಾಯರಿಕೆ ನೀಗಿದ್ದಾಗ ನೀರನ್ನು ಪೂಜಿಸಿದ್ದೆ.ಹಸುವಿನ ಕೆಚ್ಚಲು ಕಂಡಾಗ ಏನಿರಬಹುದ್ ಎಂದು ಕೈಯಲ್ಲಿ ಎಳೆದಾಗ ಬಂದ ಹಾಲಿಗೆ ಬಾಯಿಟ್ಟಾಗ ಹಸುವನ್ನು ಪೂಜಿಸಿದ್ದೆ.ಬಿಸಿಲಲ್ಲಿ ತಣ್ಣನೆ ಗಾಳಿ ಬೀಸುವ ಗಿಡ ಮರಗಳನ್ನು ಪೂಜಿಸಿದ್ದೆ.ಮತ್ತೆ ಮತ್ತೆ ಅದೇ ಯೋಚನೆಗಳು,ಅದೇ ಆಲೋಚನೆಗಳು ತಲೆಯಲ್ಲಿ ಹೊಕ್ಕುತ್ತಿದೆ.ಕಣ್ಣೆಲ್ಲಾ ಮಂಜು ಮಂಜು.ಜೀವ ಮೈ ಬಿಟ್ಟು ಹೋಗುತ್ತಿದೆಯಾ?ಅಥವ ತ್ರಾಣ ಕಳೆದುಕೊಳ್ಳುತ್ತಿದ್ದೀನ?ಹಣ್ಣಿನ ಬೀಜವನ್ನು ನೆಲಕ್ಕೆ ಅಂಟಿಸಿದ ಕೆಲ ದಿನಗಳಲ್ಲಿ ಇನ್ನಷ್ಟು ಹಣ್ಣು ಬೆಳೆದವು, ಭೂಮಿ ತಾಯಿ ಇದ್ದಂತೆ,ಜನ್ಮ ನೀಡುವಳು ಎಂದು ಅವಳಿಗೆ ಹಣೆ ಒತ್ತಿ ನಮಸ್ಕಾರ ಮಾಡಿದ್ದೆ. ಇನ್ನು ಬದುಕಬೇಕು.ಗುಹೆಗೆ ಹಿಂತಿರುಗಬೇಕು. ನೀರಿಲ್ಲದೆ ಇನ್ನಷ್ಟು ದೂರ ನಡೆದರೂ ಸಾವು ಖಚಿತ. ಅಮ್ಮನ ಹೊಟ್ಟೆಯಲ್ಲಿ ಹುಟ್ಟಿದ ಮತ್ತೊಬ್ಬಳು ಹಾಗೆ ಸತ್ತಳಲ್ಲವೇ? ಆಮೇಲೆ ಕೊಳತು ನಾರುತ್ತಿದ್ದಳು.ಸತ್ತ ಮೇಲೆ ಅವಳ ಮಾತು ಎಲ್ಲಿಗೆ ಹೋಯಿತು?ನಗು ಎಲ್ಲಿಗೆ ಹಾರಿತು?ಯೋಚನೆಗಳು ಯಾರ ತಲೆಯಲ್ಲಿ ಹೊಕ್ಕಿತು?ದೇಹ ಇತ್ತು, ಒಳಗೆ ಪ್ರಾಣ ಇರಲಿಲ್ಲ.ವಾಸನೆ.ನಾನು ಇಲ್ಲಿ ಸತ್ತರೂ ಅದೇ ಗತಿಯಾಗುತ್ತದೆ. ಸೂರ್ಯನ ಈ ವಿಕೋಪಕ್ಕೆ ಸುಟ್ಟು ಕರಕಲಾಗುತ್ತೇನೆ?ನಂತರ ನಾನೆಲ್ಲಿ ಹೋಗುತ್ತೇನೆ?ಎಲ್ಲಿರುತ್ತೇನೆ?

ಈ ಯೋಚನೆಗಳೆಲ್ಲಾ ಮಾಸುತ್ತಿದ್ದಂತೆ ಧೊಪ್ಪೆಂದು ನೆಲಕ್ಕೆ ಕುಸಿದನು ಅವನು. ಏಳಲಾಗ್ತಿಲ್ಲ. ಶಕ್ತಿ ಕುಂದಿದೆ. ಇಂದು ಏನಾದರು ನನ್ನ ಉಳಿಸುತ್ತದೆಯೇ?ಎಂದು ಯೋಚಿಸುತ್ತ ಕಣ್ಣು ಮಿಟುಕಿಸಲು ಶುರು ಮಾಡಿದ.ಕಣ್ಣು ಮುಚ್ಚಿದ.
ಹೆಜ್ಜೆಗಳ ಶಬ್ಧ.ಸಾಮಾನ್ಯ ಪಾದವಲ್ಲ.ಧಾಪುಗಾಲು.ನಿಧಾನವಾಗಿ ಕಣ್ತೆರೆದ.ಸೂರ್ಯನ ಕಿರಣಗಳು ಕಣ್ಣಿನ ನರನಾಡಿಗಳಲ್ಲಿ ನುಗ್ಗಿ ಚುಚ್ಚಿದವು.ಮತ್ತೆ ಕಣ್ಣು ಮುಚ್ಚಿದ.ತಣ್ಣನೆ ನೀರು ಮುಖದ ಮೇಲೆ ಯಾರೋ ಎರಚಿದಂತಾಗಿ ಉಬ್ಬಸದಿಂದ ಉಸಿರೆಳೆದ. ಕಣ್ತೆರೆದ.ಸೂರ್ಯನ ಕಿರಣಗಳನ್ನು ಮುಚ್ಚಿ ಎದುರಿಗೆ ನಿಂತಿದ್ದವ ಆಕಾಶದೆತ್ತರ ಕಾಣುತ್ತಿದ್ದ. ಬಲಶಾಲಿ ಮೈಕಟ್ಟು. ಕಚ್ಚೆಪಂಚೆ ಉಟ್ಟಿದ್ದಾನೆ, ಬೆಳ್ಳಗೆ ಪಳ ಪಳನೆ ಹೊಳೆಯುತ್ತಿದೆ.ಎದೆಯ ಮೇಲೆ ಥರಥರವಾದ ಬಣ್ಣದ ಅಂಗಿ ಧರಿಸಿದ್ದಾನೆ. ಮುಖಕ್ಕೆ ಹುರುಪು-ಕಳೆ ಕೊಡುವ ಕಣ್ಣು ಕಪ್ಪು ಕಣ್ಣಿನ ರೆಪ್ಪೆಯ ಸುತ್ತ ದಟ್ಟವಾಗಿ ಅಂಟಿದೆ.ಆತ ಬೆವತಿಲ್ಲ.ತನ್ನ ಹಾಗೆ ಸೋತಿಲ್ಲ.ಕೈಯಲ್ಲಿ ನೀರು ತುಂಬಿರುವ ಮಡಿಕೆಯೊಂದನ್ನು ಹಿಡಿದಿದ್ದಾನೆ.

“ಯಾರು ನೀನು?” ಎಂದು ಒಡೆದ ಧ್ವನಿಯಲ್ಲಿ ಕೇಳಿದ.

“ನೀರು ಕುಡಿ” ಎಂದು ಮಧುರ ಕಂಠದಿಂದ ಧ್ವನಿ ಹೊರಬಂತು.

ಇವನು ಮಲಗಿದ್ದಲ್ಲೆ ಬಾಯಿಗೆ ನೀರು ಸುರಿದನು.ಸಮುದ್ರವನ್ನೇ ಕುಡಿಯುವ ರಭಸದಲ್ಲಿ ತುಟಿ,ನಾಲಿಗೆ ಎಲ್ಲಾ ಚಾಚಿ ನೀರು ಹೀರಿದನು ಬಿದ್ದ ಮನುಷ್ಯ.ಗಂಟಲಿಗೆ ಸಿಕ್ಕಿತು.ಕೆಮ್ಮಿದನು.ಎದುರಿಗಿದ್ದವನು ಇವನ ತಲೆ ಸವರಿದ.ಆದರು ದಾಹ ತೀರದು.ಮತ್ತಷ್ಟು ನೀರು ಕುಡಿದ. ಮೈ ತಣ್ಣಗಾಯ್ತು.ಎದ್ದು ಕೂತ.ಕೂತೊಡನೆ,ತನ್ನ ಜೀವ ಉಳಿಸಿದ ದೇವದೂತ,ದಾಹ ನೀಗಿಸಿದವನನ್ನು ನೋಡಲು ಯತ್ನಿಸಿದ.ಆತ ಆಗಲೇ ದೂರ ಹೊರಟಿದ್ದ. ಧಗೆಯ ನಡುವೆ,ಧೂಳು ಬಿಸಿಲಿನ ಆಟದಲ್ಲಿ ಇವನ ಪ್ರಾಣ ಉಳಿಸಿದವ ನೀರಿನಲ್ಲಿ ಕಾಣುವ ಬಿಂಬದಂತೆ ದೂರ ಕಾಣುತ್ತಿದ್ದ.ದೂರ ನಡೆದಂತೆ ಮೂರ್ತಿ ಚಿಕ್ಕದಾಗುತ್ತ ಹೋಯಿತು.ಇವನು ಮಾತೇ ಹೊರಡದೆ ಸುಮ್ಮನೆ ಮಂಡಿ ಊರಿ ಕೂತ.ಕಣ್ಣುಜ್ಜಿ ನೋಡಿದ. ಬೆಟ್ಟದ ಮೇಲೆ ಬೆಳಗುವ ಜ್ಯೋತಿಯಂತೆ ಕಾಣುತ್ತಿದ್ದ ನೀರು ನೀಡಿ ತಲೆ ಸವರಿದವ.ದಾಹ ಒಂದು ಚೂರು ಕಡಿಮೆಯಾಗಿ ಒಮ್ಮೆ ನಿಟ್ಟುಸಿರು ಬಿಟ್ಟ.ನೀರು,ಗಾಳಿ,ಅಗ್ನಿ,ಮರ-ಗಿಡಗಳು,ಕಲ್ಲು ಮುಳ್ಳುಗಳನ್ನೆಲ್ಲಾ ಆರಾಧಿಸಿದ್ದೇನೆ,ಅವೆಲ್ಲವೂ ನಾನು ಬದುಕಲು ಸಹಾಯ ಮಾಡಿದ್ದವು.ಇವನು ನನ್ನ ಪ್ರಾಣ ಹೋಗೋ ಸಮಯದಲ್ಲಿ ಬಂದು ದಾಹ ನೀಗಿಸಿ ಜೀವ ಉಳಿಸಿದ್ದಾನೆ.ಇವನು ನನ್ನ ಪಾಲಿಗೆ ದೈವ.ಮಹಾದೈವ.
ನಿಧಾನವಾಗಿ ಎದ್ದುನಿಂತು ಮುನ್ನಡೆದ.

ಅದೇ ಕಾಲಮಾನ,ಪಶ್ಚಿಮಕ್ಕೆ ಅಂಟಿದ್ದ ಪೂರ್ವದಲ್ಲಿ ಕಾಡು ಪ್ರಾಣಿಯೊಂದು ಮಗುವನ್ನು ಕಚ್ಚಿ ಸಣ್ಣ ಮಾಂಸವೊಂದನ್ನು ನುಂಗಿ ಹೋಗಿದೆ.ಕ್ರೂರ ಪ್ರಾಣಿಗಳು.ತಮ್ಮ ಹೊಟ್ಟೆಯ ಹಂಬಲ ನೀಗಿಸಿಕೊಳ್ಳಲು ಪರರನ್ನು ತಿನ್ನುವುದೆಷ್ಟು ಉಚಿತ.ಈ ಮಾತು ಮನದಲ್ಲಿ ಬಂದಾಗ ಬಿಳಿಯ ಅಂಗಿಯನ್ನು ಮಂಡಿಯವರೆಗು ಹಾರುಬಿಟ್ಟಿರುವ ಧಡೂತಿ ಮನುಷ್ಯ ತನ್ನ ತಲೆಯ ಮೇಲೆ ಬಿಳೀ ತೂತು ಟೋಪಿಯನ್ನು ಸರಿಪಡಿಸಿಕೊಂಡು ತನ್ನ ಮಗುವನ್ನು ನೋಡುತ್ತಾ ಕುಳಿತಿದ್ದ.ತಾನು ಕೂಡ ತನಗೆ ಹಸಿವಾದಾಗ ಪರಪ್ರಾಣಿಗಳನ್ನು ಬೇಟೆಯಾಡಿ ತಿಂದಿಲ್ಲವೇ? ಇದು ಸಹಜ ನಿಯಮ. ತಾನು ಕೊಂದದ್ದು ಯಾರ ಮಗುವಾಗಿರತ್ತದೋ? ಆ ಯೋಚನೆ ಈಗೇಕೆ? ತನ್ನ ಮಗುವಿನ ನೋವಿನ ವೇದನೆ ಸಹಿಸಿಕೊಳ್ಳಲಾಗುತ್ತಿಲ್ಲ,ಅದಕ್ಕೆ ಯಾರ ಮೊರೆ ಹೋಗಬೇಕು? ತನ್ನ ಜನರೆಲ್ಲಾ ಇನ್ನು ನಾಲ್ಕೈದು ಹಗಲು ರಾತ್ರಿ ಕಳೆದ ನಂತರ ಸಿಗುವರು.ತನ್ನ ಮಗು ಮೂರ್ಛೆ ಹೋಗಿದೆ. ನೋವಿನ ಉತ್ತುಂಗಕ್ಕೆ ಹೋಗಿದೆ.ಮಾಂಸಖಂಡ ಉದಿರಿದ ಜಾಗದಲ್ಲಿ ಮಬ್ಬು ಕವೆದಿದೆ. ನಿಧಾನವಾಗಿ ಹುಳುಗಳು ಅದನ್ನು ತಿನ್ನಲು ಯತ್ನಿಸುತ್ತಿವೆ.ತಕ್ಷಣ ತನ್ನ ಜೇಬಿನಲ್ಲಿದ್ದ ತುಂಡು ಬಟ್ಟೆಯನ್ನು ತೆಗೆದು ಅದರ ತೊಡೆಗೆ ಕಟ್ಟಿದನು.ಯಾರನ್ನು ಕೇಳಿದರೆ ತನ್ನ ಮಗುವ ನೋವು ಕಮ್ಮಿಯಾಗಬಹುದು ಅನ್ನೋ ಯೋಚನೆ ಕಾಡತೊಡಗಿತು.ಮನದಲ್ಲಿ ದುಗುಡ.ಭಯ.ಕಚ್ಚಿರುವ ಜಾಗ ಕೊಳೆತುಹೋದರೆ ಎಂಬ ಆತಂಕ.ತೋಚದೆ ಪೆಚ್ಚಾಗಿ ಹೋಗ್ತಿದ್ದಾನೆ. ಮಗುವ ಮುದ್ದು ಮುಖವನ್ನು ನೋಡ್ತಾನೆ.ತನ್ನ ವಂಶದ ಕುಡಿ.ಜೊತೆಗಾರ್ತಿಯ ಸಂಘ ಸೇರಿ ಸುಮಾರು ವರ್ಷಗಳ ನಂತರ ಜನ್ಮ ಪಡೆದ ಮಗುವಿದು.ಹೃದಯ ಹಿಂಡಿದಂತಾಯಿತು.ಆಕಾಶ ನೋಡಿದ.ಕಣ್ಣಂಚಿಂದ ಕಂಬನಿ ಜಾರಿತು.ಬಲಕ್ಕೆ ನೋಡಿದ,ಎಡಕ್ಕೆ ನೋಡಿದ. ಕಣ್ಣ ಕಂಬನಿಯನ್ನು ಎರಡು ಕಣ್ಗಳಿಂದ ತಳ್ಳಿದ.ಎದುರಿಗೆ ಮಲಗಿದ್ದ ಮಗುವನ್ನು ನೋಡಿದ.ಹೆಜ್ಜೆಯ ಶಬ್ಧ.ಧಾಪುಗಾಲಿನ ಹೆಜ್ಜೆಗಳು.ಸಂಜೆಯಾಗಿ ಚಂದಿರ ಆಕಾಶವನ್ನ ಆವರಿಸೋ ಸಮಯ.ಚಂದಿರನ ತುಂಡೊಂದು ಭೂಮಿಗೆ ಬಿದ್ದಂತೆ ನಡೆದು ಬರುತ್ತಿದ್ದಾನೆ. ಬಲಶಾಲಿ ಮೈಕಟ್ಟು. ಕಚ್ಚೆಪಂಚೆ ಉಟ್ಟಿದ್ದಾನೆ,ಬೆಳ್ಳಗೆ ಪಳ ಪಳನೆ ಹೊಳೆಯುತ್ತಿದೆ.ಎದೆಯ ಮೇಲೆ ಥರಥರವಾದ ಬಣ್ಣದ ಅಂಗಿ ಧರಿಸಿದ್ದಾನೆ.ಮುಖಕ್ಕೆ ಹುರುಪು-ಖಳೆ ಕೊಡುವ ಕಣ್ಣು ಕಪ್ಪು ಕಣ್ಣಿನ ರೆಪ್ಪೆಯ ಸುತ್ತ ದಟ್ಟವಾಗಿ ಅಂಟಿದೆ.ಆಗ ನೀರು ನೀಡಿ ಜೀವ ಕೊಟ್ಟವನು ಈತನೇ.

“ನನ್ ಮಗು ತೊಡೆಯ ಮಾಂಸವನ್ನ ಕಾಡುಪ್ರಾಣಿ ಕಡ್ಕೊಂಡ್ ಹೋಗಿದೆ ಬುದ್ಧಿ.ಏನು ತೋಚ್ತಿಲ್ಲ.”
ಧಾಪುಗಾಲು ಹಾಕಿ ಬಂದವನು ಕೈಯಲ್ಲಿ ಹಿಡಿದಿದ್ದ ಗಿಡಮೂಲಿಕೆಗಳನ್ನು ನೆಲಕ್ಕೆ ಎಸುಗಿ,ಚಿಕ್ಕ ಕಲ್ಲನ್ನು ಕೈಗೆತ್ತಿಕೊಂಡು,ಎಲ್ಲವನ್ನು,ನೆಲಕ್ಕೆ ಚಪ್ಪಟೆ ಮಾಡಲು ತೊಡಗಿದನು. ಅಪ್ಪ ಆತನ ಕಾರ್ಯವನ್ನೇ ಗಮನಿಸುತ್ತಾ ಕುಳಿತನು.ಮಗುವಿನ ಮುಖ ನೋಡಿ ನೋವು ನರನಾಡಿಗಳಲ್ಲಿ ಉಕ್ಕಿತು.ಬಂದವನು,ತೊಡೆಗೆ ಕಟ್ಟಿದ್ದ ತುಂಡು ಬಟ್ಟೆಯನ್ನು ಬಿಚ್ಚಿ ಔಷಧಿಯನ್ನು ನೇವರಿಸಿದನು.

“ಬೆಳಗಾಗೋ ಅಷ್ಟ್ರಲ್ಲಿ ಗಾಯ ಕಮ್ಮಿ ಆಗೋ ಲಕ್ಷಣಗಳು ಕಾಣುತ್ತಿದೆ.ಗಾಬರಿ ಬೇಡ” ಎಂದು ಮಗುವಿನ ಹಣೆಯ ಮೇಲೆ ತನ್ನ ಕೈ ಸವರಿ ನಿಂತನು ಆ ದೂತ.ಅಪ್ಪನ ಕಣ್ಣೀರಿಗೆ ಕೊನೆಯಿಲ್ಲ.ಸಂತೋಷದ ಕಣ್ಣೀರು.ಇಷ್ಟು ಹೊತ್ತು ಗಟ್ಟಿ ಮನಸ್ಸು ಮಾಡಿಕೊಂಡ ಪರಿಣಾಮ ಅಳು ನಿಲ್ಲಲಿಲ್ಲ.ಕಣ್ಣೀರು ತುಂಬಿ ಕಣ್ಣು ಮಂಜಾಯಿತು.ಹೊಟ್ಟೆಯಲ್ಲಿ ಸಂಕಟವಾದಾಗ ನೆಲದಲ್ಲಿ ಹರಡಿದ್ದ ಕಾಳುಗಳನ್ನು ತಿಂದು ಹೊಟ್ಟೆ ಸಂಕಟ ಕಮ್ಮಿ ಮಾಡಿಕೊಂಡಾಗ ಆ ಆಹಾರವನ್ನು ಆರಾಧಿಸಿದೆ.ತನ್ನ ಮಗುವಿಗೆ ಜನ್ಮ ಕೊಟ್ಟ ಜೊತೆಗಾರ್ತಿಯನ್ನು ಸೃಷ್ಟಿಕರ್ತೆ ಎಂದು ಆರಾಧಿಸಿದೆ.ಬೆಳಕು,ಮಳೆ,ಬಿಸಿಲು,ಗಾಳಿ ಎಲ್ಲವೂ ತನ್ನ ಕೆಲಸಕ್ಕೆ ಬಂದಾಗ ಆರಾಧಿಸಿದ್ದುಂಟು.ಈಗ ಇವನ್ಯಾರೋ ಒಬ್ಬ ದೇವದೂತ ಬಂದಿದ್ದಾನೆ.ಇವನನ್ನು ಪೂಜಿಸಲೇ?ನನ್ನ ಮಗನಿಗೆ ಆರೈಕೆ ಕೊಟ್ಟದ್ದಕೆ ಹೂವುಗಳನ್ನೆರಚಲೇ?ನವಿಲುಗರಿಗಳಿಂದ ಗಾಳಿ ಬೀಸಲೇ? ಯೋಚಿಸುತ್ತಾ ನೆಲಕ್ಕೆ ತಲೆಯಿಟ್ಟ.ಕತ್ತೆತ್ತಿ ನೋಡುವಷ್ಟರಲ್ಲಿ ಆ ದೂತ ಅಲ್ಲಿರಲಿಲ್ಲ.ಹಿಂದೆ ಎಲ್ಲೋ ಒಂದು ತುದಿಯಲ್ಲಿ ಕೊನೆಯಾಗದ ದಾರಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾನೆ.ಕತ್ತಲಾಗುತ್ತಿದೆ. ಇವನು ನನ್ನ ಪಾಲಿಗೆ ದೈವ.ಇವನು ನಮ್ಮ ಕುಟುಂಬದ ಪಾಲಿಗೆ,ನನ್ನ ಜನಾಂಗದ ಪಾಲಿಗೆ ಎಲ್ಲಾ.ಎಲ್ಲಾ ಇವನೇ.ಅಲ್ಲೆಲ್ಲಾ ಇವನೇ.

ಮರುದಿನ ಮಗುವಿನ ನಗು ನೋಡುತ್ತಾ ಕುಳಿತಿದ್ದ ಅಪ್ಪ ಮತ್ತು ಜೊತೆಗಾರ್ತಿ ಕಾಲಿಗೆ ಸೊಪ್ಪು ಹಚ್ಚುತ್ತಿದ್ದರು.
“ಮುಂದಿನ ಬಾರಿ ತೊಂದರೆಯಿದ್ದಲ್ಲಿ ಬಲಕ್ಕೊಮ್ಮೆ.ಎಡಕ್ಕೊಮ್ಮೆ ತಲೆಯಾಡಿಸಿ ಮುಖ ಒರೆಸಿಕೊಳ್ಳೋಣ,ನಮ್ಮ ಕೈ ಹಿಡಿಯಲು ಆತ ಬಂದರೂ ಬರಬಹುದು” ಎಂದಳು ಕಪ್ಪು ಬಟ್ಟೆಯಲ್ಲಿದ್ದ ಜೊತೆಗಾರ್ತಿ.

ಅದೇ ಕಾಲಮಾನ, ಪೂರ್ವ ಪಶ್ಚಿಮ ಅಂಟಿದ್ದ ಸ್ಥಳ ಬೇಟೆಗೆ ನೀರು ಕುಡಿದು ಉಳಿದುಕೊಂಡವನು ಕಚ್ಚೆಯನ್ನು ಗಟ್ಟಿಯಾಗಿ ಕಟ್ಟಿಕೊಂಡು ಕೈಯಲ್ಲಿ ಒಬ್ಬ ಮನುಷ್ಯನನ್ನ ಕೊಲ್ಲುವ ಮೊನಚಾದ ಕಲ್ಲನ್ನು ಮರದ ಮೇಲಿನ ಹಣ್ಣಿಗೆ ಗುರಿ ಇಟ್ಟು ಹಿಡಿದು ನಿಂತಿದ್ದಾನೆ. ಮರದ ಬಾಣವನ್ನು ಹಿಡಿದು ಮಗುವ ಅಪ್ಪನು ನಿಂತಿದ್ದಾನೆ.ಜಿಂಕೆಯನ್ನು ಗುರಿ ಮಾಡಿಕೊಂಡು ಬಾಣ ಬೆರಳ ಸಂದಿಯಲ್ಲಿ ಗಟ್ಟಿ ಮಾಡಿಕೊಳ್ಳುತ್ತಾನೆ.

“ನನ್ನ ದೇವರು ನನಗೆ ಕಂಡನು.ನನ್ನ ಮಗುವಿನ ತೊಡೆಗೆ ಹಚ್ಚಿದ ಔಷಧಿಯಿಂದ ನನ್ನ ಮಗು ಗುಣವಾಯಿತು.ಅಂದಿನಿಂದ ನಮ್ಮ ಪ್ರಾಂತ್ಯದಲ್ಲಿ ಬೆಳೆ ಕೂಡ ಭರ್ಜರಿಯಾಗಿದೆ.ಇನ್ನು ಮುಂದೆ ತೊಂದರೆಯಾದರೆ ನನ್ನ ದೇವರು ಎಲ್ಲರನ್ನು ಕಾಪಾಡ್ತಾನೆ.”

“ನನ್ನ ದೇವರು ನನಗೆ ಕಂಡನು.ನನ್ನ ಜೀವವು ಇನ್ನೆಲ್ಲೋ ಹೋಗುವಾಗ ಹಿಡಿದು ಹಿಂತಿರುಗಿಸಿರೋ ಮಹಾಶೂರ ನನ್ನ ದೈವ.ದಾಹಕ್ಕೆ ಗಂಟಲಿಂದ ರಕ್ತ ಕಕ್ಕೋದು ಬಾಕಿ ಇತ್ತು. ಅಷ್ಟರಲ್ಲಿ ಬರಡು ಭೂಮಿಯಲ್ಲಿ ನೀರು ತಂದು ಕೊಟ್ಟು ನನ್ನನ್ನು ಉಳಿಸಿದ. ನನಗೆ ಸಹಾಯ ಮಾಡುವ ಎಲ್ಲವನ್ನು ಪೂಜಿಸುತ್ತಿದ್ದೆ.ಈಗ ಎಲ್ಲದರಲ್ಲು ಆ ದೇವರನ್ನು ಕಾಣುತ್ತೇನೆ.ಅವನೇ ಇಡೀ ಪ್ರಪಂಚದ ಅಧಿಪತಿ”

ಬಿಳಿ ಟೋಪಿ ಧರಿಸಿದ್ದ ಮಗುವಿನ ಅಪ್ಪನಿಗೆ ರಕ್ತ ಕುದಿಯಿತು. “ಸೊಕ್ಕಿನ ಮಾತು ಬೇಡ.ನನ್ನ ದೇವರನ್ನು ಒಮ್ಮೆ ನೋಡು.ನೀನಾಗಿಯೇ ನನ್ನ ದೇವರನ್ನು ಪೂಜಿಸುತ್ತೀಯ.”

ಕಚ್ಚೆ ಧರಿಸಿದ್ದವನಿಗೆ ಎದೆ ಬಿಗಿಯಾಯಿತು.”ನನ್ನ ನಂಬಿಕೆಯನ್ನು ಪ್ರಶ್ನಿಸಬೇಡ.ನನ್ನ ದೇವರು ನಿನ್ನನ್ನು ಉಳಿಸುತ್ತಾನೆ.ನಿನ್ನ ಮಗುವನ್ನು ಉಳಿಸಿದವನು,ಯಾವುದೋ ಊರಿನ ವೈದ್ಯನಿರಬೇಕು”

“ನನ್ನ ದೇವರ ಬಗ್ಗೆ ಅಪನಂಬಿಕೆಯಿಟ್ಟರೆ ಇದೇ ಬಿಲ್ಲನ್ನ ನಿನ್ನ ಎದೆಯ ಒಳಗೆ ಇರಿಯುತ್ತೇನೆ.ನಿನ್ನ ದೇವರು ಸುಳ್ಳು.ಯಾರೋ ಹಾದಿಯಲಿ ಹೋಗುತ್ತಿದ್ದವ ನೀರು ಕೊಟ್ಟ ಅಂತ ಅವ್ನನ್ನ ದೇವರು ಅಂತೀಯ?”

“ಕಲ್ಲು ಕಣ್ಣು ಕುಕ್ಕೀತು ಹುಷಾರು.ದೇವರ ಬಗ್ಗೆ ನಾಲಿಗೆ ಹಿಡಿತದಲ್ಲಿರಲಿ.”

ಇಷ್ಟೂ ಮಾತು ಕಥೆ ನಡೆಯುತ್ತಿರಬೇಕಾದರೆ ಒಂದಿಷ್ಟು ದೂರದಲ್ಲಿ ಮೊಲಗಳ ನಡುವೆ,ಧಡೂತಿ ಮನುಷ್ಯ ನಿಂತಿದ್ದಾನೆ.ಮುಗ್ಧ ನಗು ಮುಖದಲ್ಲಿ ಅರಳಿದೆ. ಬಲಶಾಲಿ ಮೈಕಟ್ಟು. ಕಚ್ಚೆಪಂಚೆ ಉಟ್ಟಿದ್ದಾನೆ,ಬೆಳ್ಳಗೆ ಪಳ ಪಳನೆ ಹೊಳೆಯುತ್ತಿದೆ.ಎದೆಯ ಮೇಲೆ ಥರಥರವಾದ ಬಣ್ಣದ ಅಂಗಿ ಧರಿಸಿದ್ದಾನೆ.ಮುಖಕ್ಕೆ ಹುರುಪು-ಖಳೆ ಕೊಡುವ ಕಣ್ಣು ಕಪ್ಪು ಕಣ್ಣಿನ ರೆಪ್ಪೆಯ ಸುತ್ತ ದಟ್ಟವಾಗಿ ಅಂಟಿದೆ.ಆಗ ನೀರು ನೀಡಿ ಜೀವ ಕೊಟ್ಟವನು ಈತನೇ.ಮಗುವಿಗೆ ಆರೈಕೆ ಕೊಟ್ಟವನು ಈತನೆ.ಮೊಲಗಳಿಗೆ ತರಕಾರಿ ತಿನ್ನಿಸಲು ಅಲ್ಲೇ ಮರದಡಿಯಲ್ಲಿ ಕೂರುತ್ತಾನೆ.

ಅವನ ಹಿಂದೆ ಕಚ್ಚೆಪಂಚೆ ಕಟ್ಟಿದ್ದವ ಮತ್ತು ಟೋಪಿ ಧರಿಸಿದ್ದವ ಕಲ್ಲು ಬಾಣಗಳಲ್ಲಿ ಇರಿದು ದೇವರು ಯಾರು ಎಂಬುದಕ್ಕಾಗಿ ಹೋರಾಟ ಶುರು ಮಾಡಿದ್ದಾರೆ.

Facebook ಕಾಮೆಂಟ್ಸ್

Rohit Padaki: ಕನ್ನಡದ ಯುವ ಲೇಖಕರಲ್ಲಿ ಒಬ್ಬರು. ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಕಾರ್ಯ ನಿರ್ವಹಿಸಿ ಬಿಗ್ ಬಾಸ್, ವೀಕೆಂಡ್ ವಿತ್ ರಮೇಶ್ ಎಂಬ ಶೋಗಳಿಗೆ ಇವರ ಬರವಣಿಗೆಯಿದೆ. ಇತ್ತೀಚೆಗೆ ಬಿಡುಗಡೆಯಾದ ಆಟಗಾರ ಚಿತ್ರಕ್ಕೆ ಸಂಭಾಷಣೆ ಸಾಹಿತ್ಯ ಇವರದೇ ಆಗಿತ್ತು. ಮೊನಚಾದ ಪದಗಳಿಗೆ ಹೆಸರುವಾಸಿಯಾಗಿರುವ ಇವರ ಬರಹ ಪ್ರಭಾವಶಾಲಿ, ಹಾಗು ಹೊಸತನ ತುಂಬಿರುತ್ತದೆ.
Related Post