X
    Categories: ಕಥೆ

ಪ್ರೀತಿ – 1

ಅವನು ಅವಳ ಕವನಗಳ ಸ್ಪೂರ್ತಿ …ಅವಳ ಕಥೆಗಳ ಪಾತ್ರಗಳ ಸೃಷ್ಟಿ ಕರ್ತ…ಪ್ರೇಮ್ ….ಹೆಸರಿಗೆ ತಕ್ಕಂತೆ ಪ್ರೇಮಮಯಿ..ವಿಪರೀತ ಭಾವಜೀವಿ…ಹಾಗೆಯೇ ಮುಗ್ಧ ಮನದ ಹುಡುಗ …

ಪ್ರೀತಿ……ಹೆಸರಂತೆ ಸಾಧ್ಯವಾದಷ್ಟು ಪ್ರೀತಿ ಹಂಚುವವಳು…..ಬಿಡುವಿದ್ದಾಗ ಅನಾಥ ಮಕ್ಕಳಿಗೋಸ್ಕರ , ವೃದ್ದಾಶ್ರಮಗಳಿಗೋಸ್ಕರ. ಪ್ರವಾಹ ಪೀಡಿತ ಪ್ರದೇಶದ ಜನರಿಗಾಗಿ ,ಪಾರ್ಕ್ ಬಾಗಿಲಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಗೆಳತಿಯರ ಜೊತೆ ನಿಂತು ,ಹುಂಡಿ ಹಿಡಿದು ಹಣ ಸಂಗ್ರಹಿಸುವವಳು.ಆ ಅನಾಥಾಲಯದ ಅನಾಥ ಮಕ್ಕಳ ಪ್ರೀತಿಯ ಅಕ್ಕ, ವೃದ್ದಾಶ್ರಮದ ಹಿರಿಜೀವಗಳಿಗೆ ಮುದ್ದಿನ ಮೊಮ್ಮಗಳು ಅವಳು.ಹುಟ್ಟು ಹಬ್ಬವನ್ನು ಇವರೊಂದಿಗೆ ಆಚರಿಸುವುದರಲ್ಲಿ ಖುಷಿ ಕಂಡವಳು…ಆ ಅನಾಥಾಲಯದ ಒಬ್ಬ ಪುಟ್ಟ ಪೋರ “ನನಗೇಕೆ ಬರ್ತಡೆ ಇಲ್ಲಾ ಅಕ್ಕಾ ?”ಅಂತ ಕೇಳಿದಾಗ “ಇನ್ಮುಂದೆ ನನಗೂ ಹುಟ್ಟು ಹಬ್ಬದ ಆಚರಣೆ ಬೇಡ” ಅಂತ ಅಪ್ಪನ ಮುಂದೆ ಅತ್ತವಳು…ಅಪ್ಪನ ಸಲಹೆಯಂತೆ ಆ ಮಕ್ಕಳೆಲ್ಲರ ಹುಟ್ಟಿದ ದಿನವಾಗಿ ತನ್ನ ಜನ್ಮದಿನದಂದು ಎಲ್ಲ ಮಕ್ಕಳ ಹುಟ್ಟು ಹಬ್ಬವನ್ನು ,ಅವರಿಂದ ಕೇಕ್ ಕತ್ತರಿಸಿ ಆಚರಿಸಿದ್ದಳು.ಇಂತಹ ಮಗಳನ್ನು ಪಡೆದಿದ್ದರ ಬಗ್ಗೆ ಪ್ರೀತಿಯ ಅಪ್ಪನಿಗೆ ಹೆಮ್ಮೆಯಿದೆ. ಮುದ್ದಾದ ಹುಡುಗಿ ಪ್ರೀತಿ….ಕಥೆ ಕವನಗಳ ಬರೆಯುವಿಕೆಯಲ್ಲಿ ಸಂತೋಷ ಕಾಣುವವಳು….ಅಷ್ಟೇ ವಿಪರೀತ ತುಂಟಿ… ಎಲ್ಲರನ್ನೂ ಕಾಡಿಸುವವಳು…ಅವರ ಮುಖ ಪೆಚ್ಚಾದಾಗ ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಡುವಳು. ಆಮೇಲೆ “ಸಾರಿ…..” ಅಂತ ರಾಗ ಎಳೆದು ಕೆನ್ನೆ ಊದಿಸಿಕೊಳ್ಳುವವಳು.ಮಿಕ್ಕಂತೆ ಅವಳು ಹಾಲಿನಂತ ಮನಸ್ಸಿನ ಹುಡುಗಿ…ಅದಕ್ಕೋಸ್ಕರವೇ ಅವಳ ತುಂಟಾಟಗಳು ಅಪ್ಪ, ಅಮ್ಮ,ಅಣ್ಣ, ಫ್ರೆಂಡ್ಸ್ ಗಳಿಗೆ ನೋವು ಮಾಡುವ ಬದಲು ಇಷ್ಟವಾಗುತ್ತಿದ್ದವು…

ಯಾವಾಗಲೂ ಮನೆ ತುಂಬ ಜಿಂಕೆಯಂತೆ ಓಡಾಡಿಕೊಂಡಿರುವ ಮಗಳನ್ನ ಕಂಡರೆ ಅಪ್ಪನಿಗೆ ತುಂಬಾ ಪ್ರೀತಿ….ಇಪ್ಪತ್ತು ವಯಸ್ಸಿನ ಹುಡುಗಿ ಅಮ್ಮನಿಗೆ ಇನ್ನೂ ಪುಟ್ಟ ಹುಡುಗಿ.ಮಧ್ಯಮ ವರ್ಗದ ಕುಟುಂಬ ಅವಳದು.ತಂದೆ ಪ್ರೌಢಶಾಲಾ ಶಿಕ್ಷಕರು..

ಪ್ರೀತಿಗೆ ಕಥೆ ಕವನಗಳನ್ನು ಬರೆಯುವುದೆದಂದರೆ ತುಂಬಾ ಪ್ರೀತಿ.ಅವಳ ಈ ಹವ್ಯಾಸಕ್ಕೆ ಕುಟುಂಬದವರ ಪ್ರೋತ್ಸಾಹವಿತ್ತು. ಅವಳ ಕಥೆ , ಕವನಗಳು ಮಾಸಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತಿದ್ದವು.ಮೊದಲ ಬಾರಿ ಕಥೆ ಬರೆದು ಕಳಿಸಿದಾಗ ಮಾಸಪತ್ರಿಕೆಯವರಿಗೆ ಕಥೆಯ ಅಂತ್ಯದಲ್ಲಿ ಪ್ರೀತಿ ಎಂದು ಬರೆದು ಫೋನ್ ನಂಬರ್ ಬರೆದಿದ್ದಳು ,ಅದೂ ಅವರ ಅಭಿಪ್ರಾಯ ತಿಳಿಸುವುದಕ್ಕಾಗಿ..ಅದೇ ಮಾಸಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ನ ಗೆಳೆಯ ಪ್ರೇಮ್….ಪ್ರೇಮ್ ಸಾಗರ್ ನ ಮನೆಗೆ ಬಂದಾಗ ಸ್ವಲ್ಪ ಕಾಲ ಹರಟೆ ಹೊಡೆದು ಆ ಮಾಸಪತ್ರಿಕೆಯನ್ನು ಓದುವ ರೂಢಿ ಮಾಡಿಕೊಂಡಿದ್ದ..ಓದುತ್ತ ಓದುತ್ತ ಪ್ರೀತಿಯ ಅಭಿಮಾನಿಯಾಗಿದ್ದ ಅವನು ..ಆ ಕಥೆ, ಕವನಕ್ಕೊಂದು ಚಂದದ ಕಮೆಂಟ್ ಕೊಡಬೇಕೆನಿಸುತ್ತಿತ್ತು.. ಆದರೆ ಹೇಗೆ? ನೇರವಾಗಿ ಸಾಗರ್ ನನ್ನ ಕೇಳಿದ್ದಕ್ಕೆ ಕೊಡಬಾರದೆನಿಸಿದರೂ ಅವನ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದಿದ್ದಕ್ಕೆ , ಅವಳ ಮೊಬೈಲ್ ನಂಬರ್ ಹುಡುಕಿ ತೆಗೆದು ಕೊಟ್ಟಿದ್ದ.ಮಾತನಾಡಿ ಹೇಳುವದಕ್ಕಿಂತ ಮೆಸೇಜ್ ಕಳಿಸಿದರಾಯಿತೆಂದುಕೊಂಡ.ಅದೇನೋ ಎಮರ್ಜೆನ್ಸಿ ಎಂದು ತಂಗಿಯ ಮನೆಗೆ ಹೋದವನು ಮೆಸೇಜ್ ಮಾಡುವುದನ್ನು ಮರೆತಿದ್ದ. ತಿಂಗಳ ನಂತರ ಸಾಗರ್ ನ ಮನೆಗೆ ಬಂದು ಆ ಮಾಸಪತ್ರಿಕೆಯನ್ನು ನೋಡಿದಾಗಲೇ ನೆನಪು …ಆ ತಿಂಗಳ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕವನ…..

“ನನ್ನ ಹೃದಯದ
ಸಿಂಹಾಸನದಿ ರಾಜ ನೀನು…

ಎಂಬ ಸಾಲಿನಿಂದ ಪ್ರಾರಂಭವಾದ ಕವನ ನಿಜಕ್ಕೂ ಅವನ ಮನ ತಟ್ಟಿತ್ತು.ಫೋನ್ ನಲ್ಲಿ ಪ್ರೀತಿ ಎಂಬ ಹೆಸರಿನಲ್ಲಿದ್ದ ನಂಬರ್ ತೆಗೆದು “ನಿಮ್ಮ ಕಥೆ ಕವನಗಳ ಅಭಿಮಾನಿ ನಾನು..ತುಂಬಾ ಚೆಂದದ ಕಥೆ ಕವನಗಳನ್ನ ಬರೆಯುತ್ತಿದ್ದೀರಿ.ಇನ್ನೂ ಚೆಂದದ ಕಥೆ ಕವನಗಳು ನಿಮ್ಮಿಂದ ಬರುವಂತಾಗಲಿ…..ಪ್ರೇಮ್ “ಎಂದು ಸಂದೇಶ ರವಾನಿಸಿದ್ದ. ಅದುವರೆಗೂ ಅದು, ಅವಳ ಕಥೆ ಕವನಕ್ಕೆ ಬಂದ ಮೊದಲ ಸಂದೇಶವಾಗಿತ್ತು. “ಥ್ಯಾಂಕ್ಯೂ ” ಎಂದು ಮರು ಸಂದೇಶ ರವಾನಿಸಿದ್ದಳು ಪ್ರೀತಿ. ನಂತರ ಹೀಗೆ ಅವನಿಂದ ಮೆಚ್ಚುಗೆಯ ಸಂದೇಶಗಳು ಬರತೊಡಗಿದವು ಅವನಿಂದ.ನಾಲ್ಕು ತಿಂಗಳಿನಿಂದ ಅವನ ಸಂದೇಶಗಳಿಗೆ “ಥ್ಯಾಂಕ್ಯೂ “ಎಂಬುದಷ್ಟೇ ಅವಳ ಉತ್ತರವಾಗಿತ್ತು.ಅವನೂ ಮೆಸೆಜ್ ಗಳನ್ನ ಅವಳ ಕಥೆ ಕವನಕ್ಕೆ ಸಂಭಂಧಪಟ್ಟಂತೆ ಮಾತ್ರ ಕಳುಹಿಸುತ್ತಿದ್ದ.

ಅವಳ ತುಂಟ ಮನಸು ಜಾಗೃತವಾಗಿತ್ತು. ಅವನನ್ನೂ ಕಾಡಿಸಬೇಕೆನಿಸಿತು ಪ್ರೀತಿಗೆ. ಆ ದಿನ ಅವನಿಗೆ ಕರೆ ಮಾಡಿದ್ದಳು ಪ್ರೀತಿ..ಅವನಿಗೆ ಪ್ರೀತಿ ಎಂದು ತೋರಿಸುತ್ತಿದ್ದ ಆ ಕರೆ ನೋಡಿ ಆಶ್ಚರ್ಯವೆನಿಸಿತ್ತು.”ಹಲೋ”ಎಂದವನಿಗೆ ಪ್ರೀತಿಯ ಪ್ರೀತಿ ತುಂಬಿದ “ಹಲೋ” ಎಂಬ ಮಧುರವಾದ ಧ್ವನಿ ಕೇಳಿಸಿತು. ಅವಳ ಕವನದಂತೆ ಮಧುರವೆನಿಸಿತು.”ಚೆನ್ನಾಗಿದಿಯೇನೋ ಪ್ರೇಮ್? ಒಂದು ಕಾಲ್ ಮಾಡೋಕಾಗಲ್ವಾ? ಬರೀ ಮೆಸೇಜ್ ಮಾಡ್ತೀಯಾ..?” ಅಂದಾಗ ಇವನಿಗೆ ಶಾಕ್. “ನಾನು ಇವಳನ್ನು ನೋಡಿಲ್ಲ, ಇವಳು ಯಾರು ಅಂತಾನೇ ಗೊತ್ತಿಲ್ಲ ..ನನ್ನನ್ನೂ ಇವಳು ನೋಡಿಲ್ಲ,ನಾನು ಯಾರು ಅಂತಾನೂ ಇವಳಿಗೆ ಗೊತ್ತಿಲ್ಲ ,ಹೇಗಪ್ಪ ! ಇವಳು ಎಷ್ಟೋ ವರ್ಷ ಪರಿಚಯ ಇರುವಂತೆ ಮಾತಾಡ್ತಾಳೆ…ಅದೂ ಏಕವಚನದಲ್ಲಿ..”ಎಂದು ಯೋಚಿಸುತ್ತ ಮಾತಾಡದೆ ನಿಂತಿರುವಾಗ …ಅತ್ತಲಿಂದ ಅದೇ ಮಧುರ ಧ್ವನಿ ..”ಹಲೋ ನಾನು ನಿನಗೇ ಕೇಳಿದ್ದು ಕಣೋ …ಒಕೆ ಹೋಗ್ಲಿ ಬಿಡು…ನನ್ನ ಕಥೆ ಕವನಗಳಿಗೆ ಮೊದಲನೆ ಅಭಿಮಾನಿ ನೀನು ….ನಿನಗೊಂದು ಕಾಲ್ ಮಾಡದಿದ್ರೆ ಹೇಗೆ ಅನ್ನಿಸ್ತು ಮಾಡಿದೆ. ನೀನು ನೋಡಿದ್ರೆ ಮಾತಾಡ್ತಾನೇ ಇಲ್ಲ….”ಎಂದಾಗ “ಅದು ಹಾಗಲ್ಲ….ನೀವು ಹೀಗೆ ಮಾತಾಡ್ತಿದ್ರೆ ನಾನು ಏನಂತ ಮಾತಾಡ್ಲಿ….”ಅಂದ.”ಅಯ್ಯೋ ! ನಾನ್ ಏನ್ ತಪ್ಪು ಮಾತಾಡಿದೆ?” ಎಂದಳು ಅವನನ್ನೇ ದಬಾಯಿಸುವಂತೆ. “ಅದು ಅದು ಹಾಗಲ್ಲ…ನೀವು ಯಾರಂತ ಗೊತ್ತಿಲ್ಲ, ನೋಡಿಲ್ಲ, ಬರೀ ನಿಮ್ಮ ಕಥೆ ಕವನ ಓದಿದ್ದೀನಿ…..ಆದ್ರೆ ನೀವು ಇಷ್ಟು ಕ್ಲೋಸ್ ಆಗಿ ಮಾತಾಡ್ತಿದೀರಾ…..ಅದಕ್ಕೆ ಏನು ಮಾತಾಡಬೇಕು ಅಂತ ತಿಳಿದೇ ಸುಮ್ಮನಾದೆ. “ಎಂದ. ಆಗ ಅವನನ್ನು ಕಾಡಿಸಲು ಅವಳಿಗೆ ಮತ್ತೊಂದು ವಿಚಾರ ಹೊಳೆಯಿತು.”ಹೇ ನಾನು ಕಣೋ ಪ್ರೀತಿ.. ಮರೆತುಬಿಟ್ಟಯಾ? ನೀನು ನನ್ನ ನೋಡಿದ್ದಿಯಾ. ನಾನೂ ನಿನ್ನ ನೋಡಿದ್ದೀನಿ. ನಿನ್ನ ನಂಬರ್ ಮೊದಲೇ ನನ್ನ ಹತ್ತಿರ ಇತ್ತು.ನಿನ್ನ ಮೆಸೇಜ್ ನೋಡಿ ಆಶ್ಚರ್ಯ ಆಯ್ತು ..ಆದರೆ ಕಾಲ್ ಮಾಡಬೇಕನ್ನಿಸಲಿಲ್ಲ.ಅದಕ್ಕೆ ಈ ನಾಲ್ಕು ತಿಂಗಳು ಮಾಡಲಿಲ್ಲ….ಕಂಡುಹಿಡಿ ನೋಡೋಣ…ಬೈ “ಎಂದವಳು ತನ್ನ ನಾಟಕಕ್ಕೆ ,ಅವನ ತಲೆಯಲ್ಲಿ ಹುಳ ಬಿಟ್ಟಿದ್ಸಕ್ಕೆ ನಗು ಬಂತವಳಿಗೆ.ಬಾಗಿಲಲ್ಲಿ ನಿಂತಿದ್ದ ಅವಳಣ್ಣ ಆದಿ (ಆದಿತ್ಯ) ಈ ಸಂಭಾಷಣೆಯನ್ನ ಕೇಳಿಸಿಕೊಂಡ….ಅವಳು ಹಾಗೇ ಯಾರು ಕೇಳಿಸ್ಕೊಂಡ್ರು ತುಂಟಾಟ ಮಾತ್ರ ಬಿಡ್ತಿರ್ಲಿಲ್ಲ. ಆದಿ ” ಏನೇ ಪ್ರೀತಿ ನಿನ್ನ ತುಂಟಾಟಕ್ಕೆ ಬಲಿಯಾಗ್ತಿರೋ ಹೊಸ ಬಲಿ ಯಾರು?ಹೀಗೆಲ್ಲಾ ಮಾಡ್ಬಾರ್ದು ಪುಟ್ಟೀ….ಅವರು ಪಾಪ ಒದ್ದಾಡ್ತಿರ್ತಾರೆ ಕಣೆ. ಯಾರು ಈ ಪ್ರೀತಿ ಅಂತ.ಈ ರೀತಿ ಮಾಡೋದು ತಪ್ಪಲ್ವಾ ಚಿನ್ನು? ಅವರನ್ನ ನೋಡಿ ನೀನು ನಕ್ಕರೆ ಅವರಿಗೆ ಹರ್ಟ್ ಆಗಲ್ವೇನೇ? ನಮಗಾದರೆ ನೀನು ತುಂಟಿ ಅಂತ ಗೊತ್ತು ..ಆದರೆ ಪಾಪ ಅವನಿಗೆ ಗೊತ್ತಿಲ್ವಲ್ಲಾ…sorry ಹೇಳಿಬಿಡು ಚಿನ್ನು, ಹಾಗೇ ಅವನಿಗೆ ನಿಜ ಹೇಳು …ಇಲ್ಲಾ ಅಂದ್ರೆ ರಾತ್ರಿ ಪೂರಾ ನಿದ್ದೆ ಮಾಡಲ್ಲ ಅವ್ನು ..”ಅಂತ ಕಿವಿ ಹಿಂಡಿದಾಗ “ಹೋಗೋ ನಾನು ಹೇಳಲ್ಲ …..ಬೇಕಿದ್ರೆ ನಿನ್ ಮಾತಿಗೆ ಬೆಲೆ ಕೊಟ್ಟು ನಾಳೆ ಹೇಳ್ತೀನಿ …ಅಲ್ಲಿವರೆಗೂ ನಾನು ಸ್ವಲ್ಪ ಮಜಾ ತಗೋತಿನಿ “ಅಂತ ಅವನಿಂದ ತಪ್ಪಿಸಿಕೊಂಡು ಓಡಿದ್ದಳು.”ಇವಳಿಗೆ ಹೇಳಿ ಹೇಳಿ ಸಾಕಾಗಿದೆ, ಯಾವಾಗ ಸುಧಾರಿಸುತ್ತಾಳೋ ….ದೇವ್ರೇ ನನಗಿರೋದು ಒಬ್ಬಳೇ ತಂಗಿ …ಅವಳ ತುಂಟತನದಿಂದ ಯಾವುದೇ ಅಪಾಯ ಬರದಿರಲಿ…ಅವಳಿಗೆ ನೀನೇ ಬುದ್ಧಿ ಕೊಡು “ಎನ್ನುತ್ ಅಲ್ಲಿಯೇ ಇದ್ದ ದೇವರ ಭಾವಚಿತ್ರಕ್ಕೆ ಕೈಮುಗಿದು ತನ್ನ ರೂಮಿಗೆ ಹೊರಟವನ್ನು ಬಾಗಿಲಲ್ಲೇ ನಿಂತಿದ್ದ ಪ್ರೀತಿ ತಡೆದು “ಆ ನಿನ್ ದೇವ್ರು ..ನನಗೇನು ಬುಧ್ದಿ ಕೊಡೋದು ಬೇಡ…. ನೀನು ಮನೆಯವರಿಗೆ ಗೊತ್ತಿಲ್ದೇ ಲವ್ ಮಾಡ್ತಿರೋ ಹುಡುಗೀನ ನಿನ್ನ ಹೆಂಡತಿಯಾಗಿ ಕೊಟ್ರೆ ಸಾಕು ಕಣೋ ತರ್ಲೆ….” ಎಂದಳು ಜೋರಾಗಿ ನಗುತ್ತ.ಆದಿ ನಿಂತಲ್ಲೇ ಬೆವರಿ “ಅಯ್ಯೋ ಬಾಯಿ ಮುಚ್ಚೇ ಪಾಪಿ….ಅಪ್ಪ ಕೇಳಿಸ್ಕೊಂಡ್ರೆ ಕಷ್ಟ ….ನಿನಗೆ ಹೇಗೇ ಗೊತ್ತಾಯ್ತು ?…….ಪ್ಲೀಸ್ ನನ್ ಚಿನ್ನು ಅಲ್ವಾ… ಅಪ್ಪಂಗೆ ಹೇಳ್ಬೇಡ್ವೇ….ಪ್ಲೀಸ್ …..”ಅಂತ ಗೋಗರೆದ.ಪ್ರೀತಿ ಮಾತ್ರ ಅವನ ಪೆಚ್ಚಾದ ಮುಖ ನೋಡಿ ಇನ್ನೂ ನಗುತ್ತ “ಅಯ್ಯೋ ಪೆದ್ದೂ ನನ್ನ ಫ್ರೆಂಡ್ ಹೇಳಿದ್ಲು ,ನೀನ್ ಅಣ್ಣ ಯಾವುದೋ ಹುಡುಗಿ ಜೊತೆ ನಿಂತಿದ್ದ ಅಂತ ..ಅದನ್ನೇ ಇಟ್ಕೊಂಡು ಸುಮ್ನೆ ಹೇಳಿದೆ ….ನಿಜ ಒಪ್ಕೊಂಡಬಿಟ್ಟೆ ನೀನು …! “ಅಂದಾಗ ಆದಿಯ ಮುಖ ಪೆಚ್ಚಾಗಿತ್ತು.ಆದಿಗೆ ಸಾಕಪ್ಪ ! ಇವಳ ಸಹವಾಸ ಎನಿಸಿ “ಯಾರನ್ನಾದ್ರೂ ಗೋಳು ಹೊಯ್ಕೋಳೆ ..ನನ್ ಬಿಟ್ ಬಿಡು ತಾಯೀ “ಅಂತ ಬೇಡಿಕೊಂಡ.ಪ್ರೀತಿಗೆ ಕಾಡಿಸಿದ್ದು ಸಾಕು ಎನಿಸಿ” ಹಾಗೆ ಬಾ ದಾರಿಗೆ .ನಿನ್ ಚಾಯ್ಸ್ ಚೆನ್ನಾಗಿರುತ್ತೆ ಬಿಡು…ಅವಳೇ ನನ್ನ ಅತ್ತಿಗೆ ಒಕೆ ನಾ? ..ನಾನಿನ್ನೂ ಹೊಸ ಬಲಿಗೆ ಕಾಡಿಸೋದು ಬಾಕಿ ಇದೆ “ಅಂತ ಮೊಬೈಲ್ ಹಿಡಿದು ಓಡಿ ಬಿಟ್ಟಳು. ಸಧ್ಯ ಬದುಕಿದೆ ! ಅಂತ ಆದಿ ತನ್ನ ರೂಮ್ ಸೇರಿಕೊಂಡ.

ಇತ್ತ ಪ್ರೇಮ್ “ಯಾರು ಈ ಪ್ರೀತಿ? ನಾನೆಲ್ಲಿ ನೋಡಿದ್ದೇನೆ? “ಅಂತ ಯೋಚನೆ ಮಾಡಿ ಮಾಡಿ ತಲೆಯನ್ನ ಕೆರೆದುಕೊಳ್ಳುತ್ತ ನೆನಪು ಮಾಡಿಕೊಳ್ಳುತ್ತಿದ್ದ ….ಊ ಹೂಂ ನೆನಪೇ ಬರ್ಲಿಲ್ಲ…ಕೊನೆಗೆ ರಾತ್ರಿ ಪ್ರೀತಿಗೆ ಕಾಲ್ ಮಾಡಿ “ಇಲ್ಲಾ ರೀ ನಿಮ್ಮನ್ನ ನೋಡಿಲ್ಲ ನಾನು ..ನೀವು ಯಾರಂತ ಗೊತ್ತಾಗ್ತಿಲ್ಲ…”ಅಂದಾಗ “ನಾಳೆವರೆಗೂ ಟೈಮ್ ಕೊಡ್ತೀನಿ ಯೋಚನೆ ಮಾಡಿ. ನಿದ್ದೆ ಬರ್ತಿದೆ ಬೈ ಗುಡ್ ನೈಟ್ “ಅಂತ ಕಾಲ್ ಕಟ್ ಮಾಡಿದಳು ಪ್ರಿತಿ. ಪ್ರೇಮ್ ಗೆ ,ಮಧ್ಯರಾತ್ರಿಯವರೆಗೂ ಯೋಚಿಸಿದರೂ ನೆನಪಾಗಲೇ ಇಲ್ಲ.ನೋಡಿದ್ದರೆ ತಾನೇ ನೆನಪಾಗುವುದು?..ಯಾವಾಗ ನಿದ್ರೆಗೆ ಜಾರಿದನೋ ಗೊತ್ತಿಲ್ಲ…ಎದ್ದಾಗ ಬೆಳಗ್ಗೆ ಎಂಟು ಗಂಟೆ. “ತೊಂದರೆಯಿಲ್ಲ ಇವತ್ತು ಭಾನುವಾರ ಆಫೀಸ್ ಗೆ ರಜೆ.” ಎಂದುಕೊಂಡು ಪ್ರೀತಿಗೆ ಕಾಲ್ ಮಾಡಿದ. ಅವನ ತಲೆಗೆ ಹುಳ ಬಿಟ್ಟು ಇವಳು ಮಾತ್ರ ಸುಖ ನಿದ್ದೆಯಲ್ಲಿದ್ದಳು ..ಕಣ್ಣು ತೆಗೆಯದೇನೇ ಕಾಲ್ ರಿಸೀವ್ ಮಾಡಿ “ಯಾರಪ್ಪಾ ಬೆಳಿಗ್ಗೆ ಬೆಳಿಗ್ಗೆನೇ ತಲೆ ತಿನ್ನೋದು …ನಾನು ನಿದ್ದೆ ಮಾಡಬೇಕು ಅಮೇಲೆ ಕಾಲ್ ಮಾಡಿ” ಅಂತ ಕಾಲ್ ಯಾರದ್ದು ಅಂತಾನೂ ನೋಡದೇ ಕಾಲ್ ಕಟ್ ಮಾಡಿ ಮಲಗಿದಳು ..ಎದ್ದಾಗ ಹತ್ತು ಗಂಟೆ ಅವಳಿಗೂ ಕಾಲೇಜ್ ಗೆ ರಜೆ ..ಪೋನ್ ತೆಗೆದು ನೋಡಿದರೆ ನಿದ್ದೆಗಣ್ಣಲ್ಲಿ ಮಾತಾಡಿದ್ದು ಪ್ರೇಮ್ ಜೊತೆ …ತಕ್ಷಣ ಪ್ರೇಮ್ ಗೆ ಕಾಲ್ ಮಾಡಿ sorry…..ಅಂತ ರಾಗ ಎಳೆದಾಗ ಪ್ರೇಮ್ ಇವಳೇನು ಚಿಕ್ಕ ಹುಡುಗಿಯ ಹಾಗೆ ಆಡುತ್ತಾಳೆ …ಇವಳಾ ಅಷ್ಟೊಂದು ಚೆಂದದ ಕಥೆ ಕವನ ಬರೆಯುವವಳು ಎನಿಸಿತು …”ಇಟ್ಸ್ ಒಕೆ…ಬಟ್ ನಿಮ್ಮನ್ನು ನೋಡಿದ ನೆನಪಿಲ್ಲ ನನಗೆ ….ಪ್ಲೀಸ್ ಹೇಳಿ …ಯಾವಾಗ ಎಲ್ಲಿ ನೋಡಿದ್ದೇನೆ, ಏನಂತ ಮಾತಾಡಿಸಿದ್ದೆ? ” ಎಂದಾಗ ಅಯ್ಯೋ ಪಾಪ ತುಂಬಾ ತಲೆ ಕೆಡಿಸಿಕೊಂಡಿದ್ದಾನೆನಿಸಿ “ಅದೂ…ಅದೂ…ಕ್ಷಮಿಸಿ ನಿಮ್ಮ ತಲೆಗೆ ಹುಳ ಬಿಟ್ಟು ತಮಾಷೆ ಮಾಡೋಣ ಅಂತ ಹಾಗೆ ಮಾಡಿದೆ..ಅದೊಂದೇ ಕೆಟ್ಟ ಗುಣ ನಂದು ….ಏನ್ ಮಾಡ್ಲಿ ರೂಢಿಯಾಗಿಬಿಟ್ಟಿದೆ …..sorry “ಎಂದಾಗ ಪ್ರೇಮ್ ನ ಸಿಟ್ಟು ನೆತ್ತಿಗೇರಿತ್ತು.ರಾತ್ರಿ ಬೇರೆ ನಿದ್ದೆ ಮಾಡಿರಲಿಲ್ಲ ಅವನು ..”ನಿಮಗೆ ಹುಡುಗಾಟ ಆಡೋದಿಕ್ಕೆ ನಾನೇ ಬೇಕಾಗಿತ್ತಾ …ನಿಮ್ಮ ಕಥೆ ಕವನದ ಸಹವಾಸ ನನಗೆ ಬೇಡ..ಮತ್ತೆಂದೂ ನಾನು ನಿಮಗೆ ಕಾಲ್ ಮಾಡುವುದಿಲ್ಲ ..ನೀವೂ ಮಾಡಬೇಡಿ ಗುಡ್ ಬೈ “ಎಂದವನೇ ಕಾಲ್ ಕಟ್ ಮಾಡಿ ಪೋನ್ ಸ್ವಿಚ್ ಆಫ್ ಮಾಡಿದ. ಅವಳೆಷ್ಟೇ ಪ್ರಯತ್ನಿಸಿದರೂ ಆ ದಿನ ಪೂರ್ತಿ ಅವನ ನಂಬರ್ ಸ್ವಿಚ್ ಆಫ್ ಆಗಿಯೇ ಇತ್ತು ..ಛೇ ಎಂತ ಕೆಲಸ ಆಗೋಯ್ತು. ತಮಾಷೆ ಮಾಡಲು ಹೋಗಿ ವಿಷಯ ಇಷ್ಟೊಂದು ಸೀರಿಯಸ್ ಆಗೋಯ್ತು ..ಏನಾದರಾಗಲಿ ಕ್ಷಮೆ ಕೇಳಲೇಬೇಕೆಂದುಕೊಂಡಳು.ಯೋಚಿಸುತ್ತಾ ಮಲಗಿದವಳಿಗೆ ಎಷ್ಟೋ ಹೋತ್ತಿಗೆ ಕಣ್ಣಿಗೆ ನಿದ್ರೆ ಆವರಿಸಿತ್ತು.

ಮರುದಿನ ಕಾಲೇಜ್ ಗೆ ಹೋಗಬೇಕಾದ ಕಾರಣ ಬೇಗ ಎದ್ದಿದ್ದಳು. ಎದ್ದು ತಕ್ಷಣ ಮೊದಲು ಪ್ರೇಮ್ ನ ನಂಬರ್ ಡಯಲ್ ಮಾಡಿದಳು ….ಆಫೀಸ್ ಗೆ ಹೋಗುವ ಆತರದಲ್ಲಿದ್ದ ಪ್ರೇಮ್ ಪೋನ್ ನೋಡಿದಾಗ ಪ್ರೀತಿ ಹೆಸರು ತೋರಿಸುತ್ತಿತ್ತು. “ಇವತ್ತೇನು ತಲೆ ತಿನ್ನುತ್ತಾಳೋ” ಎಂದು ರಿಸೀವ್ ಮಾಡದೇ ಹೊರನಡೆದ..ಅವಳು ಪದೇ ಪದೇ ಕರೆ ಮಾಡುತ್ತಲೇ ಇದ್ದಳು ..ಅವನು ರಿಸೀವ್ ಮಾಡದಿದ್ದಾಗ “ಎಷ್ಟು ಕೊಬ್ಬು ಇವನಿಗೆ ! “ಎಂದುಕೊಂಡು ಮೊಬೈಲ್ ನ್ನು ಹಾಸಿಗೆ ಮೇಲೆಸೆದು ಕಾಲೇಜ್ ಗೆ ಹೋಗಲು ತಯಾರಾಗಿ ಹೊರನಡೆದಳು. ಆಪೀಸ್ ಗೆ ಬಂದು ಮೊಬೈಲ್ ತೆಗೆದು ನೋಡಿದರ ಪ್ರೀತಿಯ ಹೆಸರಿನಲ್ಲಿ ಬರೊಬ್ಬರಿ ಇಪ್ಪತ್ತಾರು ತಪ್ಪಿದ ಕರೆಗಳನ್ನ ಮೊಬೈಲ್ ತೋರಿಸುತ್ತಿತ್ತು.ರಿಸೀವ್ ಮಾಡಬೇಕಿತ್ತು ಅನಿಸಿತವನಿಗೆ. ಇನ್ನೂ ತರಗತಿಗಳು ಆರಂಭವಾಗಿರದ ಕಾರಣ ಪ್ರೇಮ್ ಗೆ ಕ್ಷಮೆ ಕೇಳಲು ಇದೊಂದು ಸಾರಿ ಕರೆ ಮಾಡಿದರಾಯಿತೆಂದು ಕರೆ ಮಾಡಿದಾಗ ಈ ಬಾರಿ ಕರೆ ಸ್ವೀಕರಿಸಿದ್ದ ಪ್ರೇಮ್.ಅದೇ ಮಧುರ ಧ್ವನಿ.. “ಹಲೋ ಸಾರಿ ಪ್ರೇಮ್ ಅವರೇ ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ..ನಾನು ತಮಾಷೆ ಮಾಡಿದ್ದು ನಿಮಗೆ ಇಷ್ಟು ಕೋಪ ತರಿಸುತ್ತದೆಂದುಕೊಂಡಿರಲಿಲ್ಲ.ಪ್ಲೀಸ್ ಒಂದು ಸಾರಿ ಕ್ಷಮಿಸಿದೀನಿ ಅಂತ ಹೇಳಿಬಿಡಿ ನಿಮಗೆ ಮತ್ತೆ ಕಾಲ್ ಮಡುವುದಿಲ್ಲ… “ಎಂದು ಪ್ರೀತಿ ನುಡಿದಾಗ ಪ್ರೇಮ್ ನ ಮನ ಕರಗಿತ್ತು. “ಇನ್ ಮೇಲೆ ಹೀಗೆ ಮಾಡಬೇಡಿ ..ಒಕೆ…ಕ್ಷಮಿಸಿದೀನಿ ..ಹಾಗೇ sorry…ನೀವು ಅಷ್ಟು ಬಾರಿ ಕಾಲ್ ಮಾಡಿದರೂ ರಿಸೀವ್ ಮಾಡದಿದ್ದಕ್ಕೆ ….ಬೈ “ಎಂದು ಕರೆ ನಿಷ್ಕ್ರಿಯಗೊಳಿಸಿದ್ದ..ಆ ದಿನ ರಾತ್ರಿ ಮಲಗಿದಾಗ ಪ್ರೀತಿಯ ಮಧುರ ಧ್ವನಿ ಅವನಿಗೆ ಕಾಡಿತ್ತು.”ಎಷ್ಟು ಮಧುರವಾದ ಧ್ವನಿ ಅವಳದು…ಅವಳು ನೋಡಲು ಅವಳ ಧ್ವನಿಯಷ್ಟೇ ಮುದ್ದಾಗಿರಬಹುದಾ? ಚಿಕ್ಕ ಹುಡುಗಿಯ ತರ ಆಡುತ್ತಾಳೆ …”ಅಂದುಕೊಂಡವನ ಮನಸ್ಸಿಗೆ ಅವಳ ಧ್ವನಿ ಮತ್ತೆ ಕೇಳಬೇಕೆನಿಸಿತು..ಛೇ ಅವಳ್ಯಾರೋ ನಾನ್ಯಾರೋ ನಾನೇಕೆ ಹೀಗೆ ಯೋಚಿಸುತ್ತಿದ್ದೇನೇ……?”ಹೀಗೆ ಯೋಚಿಸುತ್ತ ನಿದ್ದೆಯಿಲ್ಲದೇ ಹೊರಳಾಡಿದ್ದ..ಪ್ರೀತಿ ಮಾತ್ರ ಹಿಂದಿನ ದಿನ ಸರಿಯಾಗಿ ನಿದ್ದೆ ಮಾಡಿರದ ಕಾರಣ ಬೇಗನೇ ನಿದ್ರಾದೇವಿಯ ಮಡಿಲಿಗೆ ಸೇರಿದ್ದಳು.ಮರುದಿನ ಎದ್ದು ಮೊಬೈಲ್ ನೋಡಿದರೆ “ಗುಡ್ ಮಾರ್ನಿಂಗ್….ಪ್ರೀತಿಯವರೇ “ಎಂಬ ಪ್ರೇಮ್ ನ ಸಂದೇಶ ಪ್ರೀತಿಯ ಮೊಬೈಲ್ ಗೆ ಬಂದು ಸೇರಿತ್ತು.”ಇವನಿಗೇನು ತಲೆ ಕೆಟ್ಟಿದೆಯಾ? ನಿನ್ನೆ ನೋಡಿದ್ರೆ ಹಾಗಾಡಿದ.. ಇವತ್ತು ನೋಡಿದ್ರೆ ಗುಡ್ ಮಾರ್ನಿಂಗ್ ಅಂತೆ…ಮಾಡ್ತನಿವನಿಗೆ …”ಎಂದುಕೊಂಡು “ಗುಡ್ ಮಾರ್ನಿಂಗ್ ಡಿಯರ್ . ಏನೋ ಮಾಡ್ತದೀಯಾ…ಈಗ ನನ್ ನೆನಪಾಯ್ತಾ? “ಅಂತ ಅವನ ತಲೆ ಕೆಡುವ ಹಾಗೆ ಸಂದೇಶ ರವಾನಿಸಿದ್ದಳು.”ಅಬ್ಬಾ ! ಇವಳು ಅಸಾದ್ಯದವಳು….”ಅಂದುಕೊಂಡ ಪ್ರೇಮ್.ಅವಳು ಅವನನ್ನು ಕಾಡಿಸುವ ಸಲುವಾಗಿ ಮಾಡಿದ ಸಂದೇಶ ಅವನಿಗೆ ಪ್ರೀಯವೆನಿಸಿ ಹೃದಯದಲ್ಲಿ ಅಚ್ಚೊತ್ತಿತ್ತು..ಹೀಗೆ ಮುನಿಸಿನಿಂದ ಆರಂಭವಾದ ಮೊಬೈಲ್ ಪರಿಚಯದಿಂದ ಅವರಿಬ್ಬರಲ್ಲಿ ಸ್ನೇಹ ಅಂಕುರಿಸಿತ್ತು..ನೋಡದೇಯೇ ಆರಂಭವಾದ ಸ್ನೇಹ ಅವರಿಬ್ಬರದು ….

ಅವರ ಸ್ನೇಹ ಹಾಗೇ ಮುಂದುವರೆಯಿತಾ… ಇಲ್ಲವಾ…..ಅಥವಾ ಅವಳ ಆ ಕಾಡಿಸಿ ಮೋಜು ನೋಡುವ ಗುಣ ಅವಳಿಗೇ ಮುಳ್ಳಾಯಿತಾ?
ಮುಂದಿನ ಭಾಗದಲ್ಲಿ…….

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post