X
    Categories: ಕಥೆ

ನನ್ನ ದೇಶ ನನ್ನ ಜನ – 4 (ಇಕ಼್ಬಾಲ್ ಸಾಬಿಯ ತೋಟಾ ಕೋವಿ )

ನನ್ನ ದೇಶ ನನ್ನ ಜನ –  3 

ನೀವು ಕಾಡನ್ನು, ಜೀವ-ಜಂತುಗಳನ್ನು ಇಷ್ಟಪಡದೇ ಹೋದರೆ ಮಲೆನಾಡು ಎರಡೇ ದಿನಕ್ಕೆ ಬೇಸರ ಮೂಡಿಸುತ್ತದೆ. ಆದರೂ ಈ ಕಾಡು ಪ್ರಾಣಿಗಳಿಂದ ನಾವು ಅನುಭವಿಸುವ ಕಾಟ ಅಷ್ಟಿಷ್ಟಲ್ಲ. ಮಂಗನಿಂದ ಹಿಡಿದು ಕಾಡೆಮ್ಮೆಯವರೆಗೆ ದಿನಾ ಒಂದಲ್ಲ ಒಂದು ಕಾಟ ಇದ್ದೇ ಇರುತ್ತದೆ. ಅಡಿಕೆಯನ್ನು ಮಂಗಗಳಿಂದ ಕಾಪಾಡುವುದೇ ದೊಡ್ಡ ಸಾಹಸ.

ಅಡಿಕೆ ಹುಟ್ಟಿದ್ದು ಮೂಲಾ ನಕ್ಷತ್ರದಲ್ಲಂತೆ, ಅದನ್ನು ಬೆಳೆದವನಿಗೂ, ವ್ಯಾಪಾರ ಮಾಡುವವನಿಗೂ ಅದು ದಕ್ಕುವುದಿಲ್ಲವಂತೆ. ಅದೇನೇ ಇರಲಿ, ಈ ಮಂಗನನ್ನು ಓಡಿಸಲು ನಾನು ಎಲ್ಲವನ್ನೂ ಮಾಡಿ ಸೋತಿದ್ದೆ. ಕೊನೆಗೆ ಹಳೆ ಹೆಂಡತಿಯ ಪಾದವೇ ಗತಿ ಎಂದು ಒಂದು ತೋಟಾ ಕೋವಿಯನ್ನು ಕೊಂಡುತಂದೆ. ನಮ್ಮ ಇಡಿಯ ತಾಲೂಕಿಗೆ ತೋಟಾ ಕೋವಿ ರಿಪೇರಿ ಮಾಡುವವನು ಇಕ಼್ಬಾಲ್ ಸಾಬಿ ಒಬ್ಬನೇ. ಈ ಅಧಿಕ ಪ್ರಸಂಗಿ ನಾಗ ಯಾವಾಗಲೂ ಏನಾದರೊಂದು ಮಾಡಿ ಕೋವಿ ಹಾಳು ಮಾಡಿ ಇಡುತ್ತಿದ್ದ. ಪ್ರತಿ ಸಲ ಅದನ್ನು ಸರಿ ಮಾಡಿಸಿದಾಗಲೂ ಅದರ ರೂಪ ಬದಲಾಗುತ್ತಿತ್ತು. ಅದು ಯಾವ ಮಟ್ಟ ತಲುಪಿತ್ತೆಂದರೆ, ಬಾಯೊಳಗೇ ಇಟ್ಟು ಗುಂಡು ಹಾರಿಸಿದರೂ ಯಾವ ಗಾಯವನ್ನು ಮಾಡಲೂ ಅದು ಸೋಲುತಿತ್ತು. ಆ ಕೋವಿಯಿಂದ ಯಾವ ಪ್ರಾಣಿ ಸತ್ತಿದ್ದೂ ಸಹ ನಾನು ನೋಡಿರಲಿಲ್ಲ. ಸಾಯಿಸುವ ಉದ್ದೇಶವೂ ನನಗೆ ಇರಲಿಲ್ಲ.

ಅವು ನಮ್ಮ ಜಾಗಕ್ಕೆ ಬಂದಿಲ್ಲ, ನಾವೇ ಅವುಗಳ ಜಾಗ ಆಕ್ರಮಿಸಿಕೊಂಡಿದ್ದೇವೆ. ಕಾಡಿನಲ್ಲಿ ಹಣ್ಣು-ಹಂಪಲು ತಿಂದು ಹಾಯಾಗಿ ಇರುತ್ತಿದ್ದ ಮಂಗಗಳ ಊಟಕ್ಕೆ ಕುತ್ತು ತಂದವರೇ ನಾವು. ಮಶಿ ಮಂಗಗಳು (ಅಥವಾ ಕರಿ ಮೂತಿಯ ಮಂಗ) ಕೆಂಪು ಮೂತಿಯ ಮಂಗಗಳನ್ನು ಬೇಟೆ ಆಡಿ ತಿನ್ನುತ್ತಿದ್ದವು. ಆದರೆ ಈ ಮಶಿ ಮಂಗಗಳನ್ನು ಮನುಷ್ಯರು ಬೇಟೆ ಆಡತೊಡಗಿದರು. ಜೀವ ಜಾಲದ ಸಮತೋಲನ ತಪ್ಪತೊಡಗಿತು. ಮಶಿ ಮಂಗಗಳ ಸಂತತಿ ನಶಿಸಿ ಹೋಯಿತು. ಕೆಂಪು ಮೂತಿ ಮಂಗಗಳ ಉಪದ್ರ ಹೆಚ್ಚಾಯಿತು. ಮೂಲ ಸಮಸ್ಯೆ ಹುಟ್ಟಿದ್ದೇ ನಮ್ಮಿಂದ, ಬೇಟೆಯಾಡುವುದು ತಪ್ಪು ಎಂದು ಪ್ರತಿಪಾದಿಸುವವನು ನಾನು.

ಆದರೆ ಈ ನಾಗ ಬಿಡಬೇಕಲ್ಲ. ಎಕಾಲಜಿಯ ಧರ್ಮ ಸೂಕ್ಷ್ಮಗಳನ್ನು ಅವನಿಗೆ ಅರ್ಥ ಮಾಡಿಸುವುದು ನನ್ನಿಂದ ಸಾಧ್ಯವಿಲ್ಲ. ‘ಕೊಂದ ಪಾಪ ತಿಂದರೆ ಹೋಗುತ್ತದೆ’ ಎನ್ನುವುದು ಅವನ ವಾದ. ಕೈಯ್ಯಲ್ಲಿ ಕೋವಿ ಹಿಡಿದು ನಾನು, ನಾಗ ಹಾಗೂ ಮಂಜ ಕಾಡು ಅಲೆಯುವುದು ನಮ್ಮ ನೆಚ್ಚಿನ ಹವ್ಯಾಸ.

“ತೋಟಕ್ಕೆ ಮಂಗ ಬಂದಿದೆ ಕಣೋ ನಾಗ” ಎಂದು ನಾನು ಹೇಳಿ ಬಾಯಿ ಮುಚ್ಚುವುದರೊಳಗೆ ನಾಗ ಕೋವಿ ಹಿಡಿದು ಸಿದ್ಧನಾಗಿದ್ದ. ಮೂರೂ ಜನ ತೋಟ ಇಳಿದೆವು. ನಮ್ಮ ಜೊತೆಗೆ ನಾಗ ಸಾಕಿದ್ದ ಕಂತ್ರಿ ನಾಯಿಯೂ ಸಹ ಬಂದಿತ್ತು. ನಾಗ ಅದಕ್ಕೆ ಒಂದು ದಿನವೂ ಊಟ ಹಾಕಿದ್ದು ನೋಡಿರಲಿಲ್ಲ, ಅದರೂ ಸಹ ಅದು ಅವನ ಹಿಂದೆಯೇ ಬಾಲ ಅಲ್ಲಾಡಿಸುತ್ತಾ ಬರುತಿತ್ತು.

ನಾಗ ಮುಂದೆ ಕೋವಿ ಹಿಡಿದು ನಡೆಯುತ್ತಿದರೆ, ನಾನು ಅವನ ಹಿಂದೆ ಮತ್ತು ಮಂಜ ನನ್ನ ಹಿಂದೆ ಬರುತ್ತಿದ್ದ. ಕೋವಿಯ ಟ್ರಿಗರ್’ಗೆ ಬಳ್ಳಿಯೊಂದು ಸಿಕ್ಕಿತು ನಾಗ ಕೋವಿಯನ್ನು ಮುಂದೆ ಎಳೆದುಕೊಂಡ. ನಳಿಕೆ ನಮ್ಮ ಕಡೆಗೆ ಗುರಿಮಾಡುತಿತ್ತು. ಢಂ ಎಂಬ ಆಸ್ಫೋಟನೆಯೊಂದಿಗೆ ಗುಂಡು ಹಾರಿತು. ಮಂಜನ ಮುಖದ ಪಕ್ಕವೇ ಗುಂಡು ‘ಸುಯ್ಯ್’ ಎಂದು ಸದ್ದು ಮಾಡುತ್ತಾ ಹೋಯಿತು. ಎಂದೂ ಸರಿ ಕೆಲಸ ಮಾಡದ ಇಕ಼್ಬಾಲ್ ಸಾಬಿಯ ಕೋವಿ ಅಂದು ಕೆಲಸ ಮಾಡಿತ್ತು.

ಮಂಜ ನಂತರ ಎರಡು ದಿನ ಜ್ವರ ಬಂದು ಮಲಗಿದ್ದನಂತೆ….

-Gurukiran

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post