X
    Categories: ಕಥೆ

ನನ್ನ ದೇಶ ನನ್ನ ಜನ -3 (ನಾಗ ನೃತ್ಯ )

ನನ್ನ ದೇಶ ನನ್ನ ಜನ – 2 

ಹೇಳಿ ಕಳಿಸಿ ಹದಿನೈದು ದಿನವಾದ ನಂತರ ನಾಗ ಬಂದಿದ್ದ. ನನ್ನನು ನೋಡಿದ ಕೂಡಲೇ ಕಿವಿಯವರೆಗೆ ಹಲ್ಲು ಕಿಸಿದ.

“ಅಯ್ಯೋ ನನ್ನ್ ಕಥೆ ಏನ್ ಕೇಳ್ತಿರ ಸೋಮಿ” ಎಂದು ತನ್ನ ಉದ್ದ ರಾಗ ತೆಗೆದ. ಅವನ ಕಥೆ ಕೇಳಿ ಕೇಳಿ ನನಗೆ ಸಾಕಾಗಿ ಹೋಗಿತ್ತು. ಪ್ರತಿ ಸಲವೂ ತಪ್ಪಿಸಿಕೊಳ್ಳಲು ಒಂದೊಂದು ಕಥೆ ಹೇಳುತ್ತಿದ್ದ.

ಕೆಲ ದಿನಗಳ ಹಿಂದೆ ನಾಗ ಬನದಲ್ಲಿ ಕಳೆ ಸವರುತ್ತಿದ್ದನಂತೆ, ಇವನ ಕತ್ತಿ ಒಂದು ನಾಗರ ಹಾವಿಗೆ ತಾಗಿ ಅದಕ್ಕೆ ಗಾಯವಾಯಿತಂತೆ. ಇವನು ತಕ್ಷಣ ಕೆಲಸ ಖೈದು ಮಾಡಿ ಮನೆಗೆ ಓಡಿ ಬಂದನಂತೆ. ಆ ಹಾವು ಅದಾಗಲೇ ಇವನ ಮನೆ ಮುಂದೆ ಇತ್ತಂತೆ. ಇವನಿಗೆ ಆ ಹಾವು ಎಲ್ಲೆಂದರಲ್ಲಿ ಬಂದು ಕಾಡಲು ಶುರು ಮಾಡಿತಂತೆ. ಯಾವುದೋ ಶಾಸ್ತ್ರಿ ಹಿಡಿದು ಶಾಂತಿ ಎಲ್ಲಾ ಮಾಡಿಸಿದನಂತೆ, ಆದರೆ ಅವನು ಮಾಡಿದ ಶಾಂತಿಯಲ್ಲಿ ಲೋಪವಿತ್ತಂತೆ. ಆ ಹಾವಿಗೆ ಇನ್ನೂ ಕೋಪ ಜಾಸ್ತಿಯಾಯಿತಂತೆ. ನಂತರ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಸರ್ಪ ಶಾಂತಿ ಮಾಡಿ ಬಂದನಂತೆ.

“ನನ್ ಜೀವ ಬಾಯಿಗೆ ಬಂದಿತ್ತು ಸೋಮಿ, ದುಡ್ಡಿನ ಮಖ ನೋಡಕ್ಕೆ ಆಯ್ತದ, ಅದ್ಕೆ ಎಷ್ಟ್ ಖರ್ಚ್ ಆದ್ರು ಸರಿ ಅಂತ ಸುಬ್ರಮಣ್ಯಕ್ಕೆ ಹೋದೆ ಸೋಮಿ” ಎಂದ. ನಾನೇನು ತಾನೇ ಬೈಯ್ಯಲಿ ಅವನಿಗೆ, ಸುಮ್ಮನೆ ತಲೆಯಾಡಿಸುವುದೊಂದೇ ನನಗೆ ಉಳಿದ ಆಯ್ಕೆಯಾಗಿತ್ತು.

ಅದೇ ಹೊತ್ತಿಗೆ ಮಂಜ ನಮ್ಮ ಮನೆಗೆ ಬಂದ. ಮಂಜ ಹಾಗೂ ನಾಗ ಸೇರಿದರೆ ಮುಗಿದೇ ಹೋಯ್ತು. ಅವರ ಪುಂಡಾಟಕ್ಕೆ ಕೊನೆಯೇ ಇಲ್ಲ. ದಿನವಿಡೀ ಹೇಳಿದರೂ ಖಾಲಿಯಾಗದ ಪೋಲಿ ಜೋಕುಗಳ ಮಾಲೀಕರು ಇವರು.

“ಏನೋ ಅವತ್ತು ನನ್ ಕ್ಷೌರ ನಾನೇ ಮಾಡಿಕೊಳ್ಳೋ ಹಾಗೆ ಮಾಡಿದ್ಯಲ್ಲೋ” ಎಂದು ಗದರಿದೆ.

“ಅದು ಹಂಗೆ ಆಗೋಯ್ತು ಸೋಮಿ, ಆ ಫಾತಿಮಂಗು ನಂಗು ಸಂಬಂಧ ಕಟ್ಟಿ ಜನ ಮಾತಾಡ್ತಾ ಇದಾರೆ. ಅವ್ರು ಎಲ್ರಿಗೂ ಬುದ್ಧಿ ಕಲಿಸಿ ಬರೋಕೆ ಹೊತ್ತಾಗೋಯ್ತು ಸೋಮಿ. ಬೇಜಾರ್ ಮಾಡ್ಕ್ಯಬೇಡಿ, ಮುಂದಿನ ಸಲ ನೀವು ಅರ್ಧ ದುಡ್ಡ್ ಕೊಡಿ ಸಾಕು” ಎಂದು ಬಿಟ್ಟಿ ಆಫ಼ರ್ ನೀಡಿದ.

“ಅಲ್ಲ ಸೋಮಿ ನನ್ ತರ ಶ್ರೀರಾಮ್’ಚಂದ್ರನ ಮೇಲೆ ಹಿಂಗೆ ಹೇಳ್ತಾರಲ ಸೋಮಿ ಇವ್ರು. ನನ್ ಜಾತಿ ಯಾವ್ದು, ಅವಳ ಜಾತಿ ಯಾವ್ದು, ಇವ್ರಿಗೆ ಏನು ಬುದ್ಧಿ -ಗಿದ್ಧಿ ಐತ?”

“ಸುಮ್ನೆ ಇರಿ ಸೋಮಿ ಇವ ಏನ್ ಶ್ರೀರಾಮ್’ಚಂದ್ರ ಅಲ್ಲ, ಕೆಸರು ಕಂಡಲ್ಲಿ ತುಳಿತಾನೆ, ನೀರ್ ಕಂಡಲ್ಲಿ ತೊಳಿತಾನೆ. ಇಲ್ಲಿ ಬಂದು ದೊಡ್ಡ ಸಾಚಾ ತರ ಮಾತಾಡ್ತಾನೆ ಅಷ್ಟೆ” ಎಂದು ನಾಗ ಅವನನ್ನು ಕೆಣಕಿದ.

“ಏಯ್ ನಾಗ ಸ್ವಲ್ಪ ನೋಡ್ಕಂಡು ಮಾತಾಡು, ನನ್ನ ಏನು ಕಂಡಕ್ಟರ್ ಗೋಪಾಲ ಅಂದ್’ಕಂಡ್ಯ? ಹೆಂಗಸ್ರು ಮಕ್ಕಳು ಅಂತ  ನೋಡ್ದೆ ಎಲ್ರ ತಿಕ ಮುಟ್ಟಿ ಸ್ವಲ್ಪ ಮುಂದೆ ಹೋಗ್ರಿ ಅಂತ ಹೇಳೋಕೆ”

ಇವರಿಬ್ಬರ ಮಾತು ಹಿಡಿತ ತಪ್ಪುತ್ತಿತ್ತು. ನನ್ನ ಮನೆಯ ಮುಂದೆ ಪಂಚಾಯ್ತಿ ಮಾಡುವುದು ನನಗೆ ಇಷ್ಟವಿರಲಿಲ್ಲ.

“ನಾಗ, ಆ ಮಾವಿನ ಮರದಲ್ಲಿ ಎರಡು ಕಾಯಿ ಕೊಯ್ದು ಕೊಡೊ ಮಾರಾಯ” ಎಂದು ಮಾತು ಬದಲಿಸಿದೆ.

“ಆ ಮರದ್ ಕಾಯಿ ಹುಳಿ, ಅದ್ನ ತಿಂದ್ ಏನ್ ಮಾಡ್ತೀರಾ?”

“ಸುಮ್ನೆ ಹೇಳಿದಷ್ಟು ಮಾಡು” ಎಂದು ಗದರಿದೆ.

ಎರಡು ಮಾರು ಹತ್ತಿದವನೇ, ಅರಚುತ್ತಾ ನೆಲಕ್ಕೆ ಹಾರಿದ. ಹಾರಿದವನೇ ಪಂಚೆ, ಚಡ್ಡಿ ಎಲ್ಲ ತೆಗೆದೊಗೆದು ಓಡತೊಡಗಿದ.

ಚಿಕಳಿಯ (ಒಂದು ಜಾತಿಯ ಇರುವೆ ) ಗೂಡಿನ ಮೇಲೆ ಕಾಲಿಟ್ಟರೆ ಅದು ಸುಮ್ಮನೆ ಬಿಡುತ್ತದೆಯೆ? ನಾನು ಅವನ ನಾಗ ನೃತ್ಯ ನೋಡಲಾಗದೇ ಕಣ್ಣು ಮುಚ್ಚಿಕೊಂಡೆ.

-Gurukiran

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post