X

ಆತ್ಮ ಸಂವೇದನಾ. ಅಧ್ಯಾಯ 32

ಆತ್ಮ ಸಂವೇದನಾ. ಅಧ್ಯಾಯ 31

ಅವೆರಡು ಜೀವಿಗಳ ಜೊತೆ ಮಾತನಾಡುತ್ತಿದ್ದ ಆತ್ಮ. ವರ್ಷಿಯ ಮನಸ್ಸನ್ನು ಮೀರುವುದು ಸಾಧ್ಯವಿರದ ಕೆಲಸ. ಎರಡನೇ ಸೂರ್ಯನ ವಿಷಯ ಪ್ರಾಮುಖ್ಯವಲ್ಲ. ಮೊದಲು ಯುದ್ಧಕ್ಕೆ ಸಿದ್ಧತೆಯಾಗಬೇಕು ಎಂದುಕೊಂಡನು.
ನಕ್ಕಿತು ಕಪ್ಪು ಜೀವಿ. “ಆತ್ಮ ನಿನಗೆ ನಮ್ಮ ಶಕ್ತಿಯ ಬಗ್ಗೆ ಅರಿವಿಲ್ಲ. ಒಂದು ಜೀವಿ ಈ ಭೂಮಿಯ ಮೇಲಿರುವ ಎಲ್ಲ ಮನುಷ್ಯರನ್ನು ನಾಶಪಡಿಸಬಲ್ಲದು ಅಷ್ಟು ವಿಶಿಷ್ಟ ಶಕ್ತಿಯಿದೆ. ಮನುಷ್ಯ ಅಷ್ಟು ದೊಡ್ಡ ಸೈನ್ಯವನ್ನು ಎದುರಿಸಲು ಸಾಧ್ಯವೇ ಇಲ್ಲ. ಯುದ್ಧಕ್ಕೆ ಸಿದ್ಧರಾಗಬೇಕಿರುವುದು ಮನುಷ್ಯರಲ್ಲ ಆತ್ಮ.”
ಸಂದಿಗ್ಧಗೊಂಡ ಆತ್ಮ. ಮನುಷ್ಯನ ಮೇಲೆ ಯುದ್ಧ ನಡೆಯುತ್ತಿದೆ. ಮನುಷ್ಯನೇ ಸಿದ್ಧಗೊಳ್ಳದಿದ್ದರೆ!? ಮನುಕುಲ ಉಳಿಯಲು ಹೇಗೆ ಸಾಧ್ಯ? ಸಂವೇದನಾ ಕೂಡ ಆಶ್ಚರ್ಯಗೊಂಡಳು. “ಮತ್ತೆ ಹೇಗೆ?” ಪ್ರಶ್ನೆಗಳು ಮುಗಿಯುವುದಿಲ್ಲ; ಉತ್ತರಗಳು ಸಿಗುವುದು ಕಷ್ಟವೇ.
“ಇನ್ನು ಉಳಿದಿರುವುದು ಕೇವಲ ಒಂದು ದಿನ ಮಾತ್ರ. ಅಷ್ಟರಲ್ಲಿ ಏನು ಸಿದ್ಧತೆಗಳು ಸಾಧ್ಯ? ಪ್ರಪಂಚದ ಮನುಷ್ಯರೆಲ್ಲರನ್ನು ಒಂದಾಗಿಸಲು ಸಾಧ್ಯವೇ? ಅಷ್ಟಾದರೂ ಆಯುಧಗಳೇನಿವೆ? ಅಣುಬಾಂಬ್ ಸ್ಪೋಟಿಸಿದರೆ ಭೂಮಿಯೇ ಛಿದ್ರ-ವಿಚ್ಛಿದ್ರ. ಬಂದೂಕಿನ ಗುಂಡುಗಳು ಕಪ್ಪು ಜೀವಿಗಳಿಗೆ ಏನನ್ನೂ ಮಾಡಲಾರವು. ಕಟ್ಟಿ-ಗುರಾಣಿಗಳೆಂದರೆ ಆಯುಧಗಳೇ ಅಲ್ಲ.
ಇದ್ಯಾವುದೂ ಆಗದ ಕೆಲಸಗಳು ಆತ್ಮ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇರುವುದು ಒಂದೇ ದಾರಿ. ಕಪ್ಪು ಜೀವಿಗಳು ಹೇಗಿದ್ದರೂ ನಾಶವಾಗುತ್ತವೆ. ಅಷ್ಟಾದರೂ ಮರುಹುಟ್ಟು ಪಡೆಯುತ್ತವೆ. ಅದಕ್ಕೆ ಸತ್ಯ ಹೇಳುತ್ತೇನೆ ಕೇಳು.
ಅವುಗಳನ್ನು ಒಲಿಸಿಕೊಳ್ಳಲು ಎಲ್ಲರ ಬಳಿ ಒಂದೇ ಒಂದು ದಿನದ ಅವಕಾಶವಿದೆ. ಆದರೆ ನೀನು ನನಗೆ ಮಾತು ಕೊಡಬೇಕು. ನೀನೊಬ್ಬನೆ ಅಲ್ಲ, ಪ್ರಪಂಚದ ಪ್ರತಿಯೊಬ್ಬ ಮನುಷ್ಯನೂ ನನಗೆ ಮಾತು ಕೊಡಬೇಕು.”
ಮಧ್ಯದಲ್ಲಿಯೇ ಆತ್ಮ ಕೇಳಿದ ” ಏನು ಮಾತು ಕೊಡಬೇಕು??”
“ಮನುಷ್ಯ ಬದುಕುವ ನೀತಿಗೆ ತಕ್ಕದಾಗಿ ಬದುಕಬೇಕು. ಸಾಯದೇ ನಿಂತಿರುವ ಮನುಷ್ಯ ಪೀಳಿಗೆ ಸಾವಿನ ಕಡೆ ಮುಖ ಹೊರಳಿಸಬೇಕು. ವಿಜ್ಞಾನ ಯಾವುದಕ್ಕೆ ಬೇಕು? ಎಷ್ಟು ಅನಿವಾರ್ಯ? ಅಷ್ಟಕ್ಕೆ ಬಳಕೆಯಾಗಬೇಕು.
ಸೃಷ್ಟಿಗೆ ವಿರುದ್ಧವಾಗಿ ಸೃಷ್ಟಿಯಾಗಬಾರದು.
ಮನುಷ್ಯ ಹುಟ್ಟಬೇಕು, ಸೃಷ್ಟಿಯಲ್ಲ.
ಪ್ರಕೃತಿಯ ವಿರುದ್ಧ ಬದುಕಲೂಬಾರದು. ಸುತ್ತಲಿನ ಪರಿಸರದ ಎಲ್ಲ ಜೀವಿಗಳನ್ನು ಗೌರವಿಸಲು ಕಲಿಯಬೇಕು. ಮನಸು ಬದುಕುವ ನೀತಿಯತ್ತ ಒಲಿಯಬೇಕು. ಬಳಕೆ ಸಹಜ; ಅಸಹಜವೆಂಬುದು ದುರ್ಬಳಕೆ.
ಬಳಕೆ ನ್ಯಾಯದ ರೀತಿಯಲ್ಲಾಗಬೇಕು.
ಈ ಮಾತನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಆಗ ಮಾತ್ರ ಮನುಷ್ಯ ಉಳಿಯುತ್ತಾನೆ. ಇಲ್ಲವಾದಲ್ಲಿ ಸಾವು ಅನಿವಾರ್ಯ.” ಮೌನವಾಯಿತು ಕತ್ತಲ ಜೀವಿ.
ಇದಕ್ಕೆಲ್ಲ ಆತ್ಮನ ಸಮ್ಮತಿಯಿತ್ತು. ಕೇವಲ ಆತ್ಮನ ಮಾತ್ರವಲ್ಲ ಸಕಲ ಚರಾಚರಗಳ ಒಪ್ಪಿಗೆ ಬೇಕಿತ್ತು. ಅದನ್ನು ಹೇಗೆ ಪಡೆಯುವುದು ಎಂದು ತಿಳಿಯದಾಯಿತು. ಅದನ್ನೇ ಕೇಳಿದ ಆತ್ಮ.
ಆ ಜೀವಿ ಆಗಸದ ಕಡೆ ನೋಡಿತು. ಭೂಮಿಯ ಮೇಲಿನ ಅತಿ ದೊಡ್ಡ ಪರದೆ ಹಾಗೆಯೇ ಇತ್ತು. ಅರ್ಥವಾಯಿತು. ಆ ಜೀವಿ ಗಡಿಯಾರವಾಗಿ ನಿಂತ ಪರದೆಯನ್ನು ಖಾಲಿಯಾಗಿಸಿತು.
ಆತ್ಮ ಅವುಗಳ ವಿಜ್ಞಾನಕ್ಕೆ ತಲೆಬಾಗಿದ್ದ;
ತಂತ್ರಜ್ಞಾನದೆದುರು ಶರಣಾಗಿದ್ದ.
ಎರಡೇ ದಿನಗಳಲ್ಲಿ ಭೂಮಿ ಬಹಳ ಬದಲಾಗಿತ್ತು. ಜನಗಳು ಒಂದಾಗಿದ್ದರು. ಸಾವು ನಿಶ್ಚಿತವೆಂದ ಮೇಲೆ ಹೋರಾಡಬೇಕು. ಒಂದಾಗಿ ಹೋರಾಡಬೇಕು. ಆತ್ಮ ಹೇಳುವುದು ಸತ್ಯ. ಸಾವಿನಲ್ಲೂ ಸಾರ್ಥಕತೆ ಕಾಣಬೇಕು. ವಿಮರ್ಶಿಸಿ ಒಂದಾಗಿ ನಿಂತಿದ್ದರು.
ಇಷ್ಟದ ಸಂಗಾತಿಯನ್ನು ಹುಡುಕಿಕೊಂಡಿದ್ದರು. ದೇಹ ಸುಖಕ್ಕಲ್ಲ. ದೇಹ ಸುಖ ಯಾವಾಗಲೂ ಇತ್ತು. ಮಾನಸಿಕ ತೃಪ್ತಿಗೆ.. ಎದೆಯಾಳದ ಲಹರಿಗೆ..
ಇಷ್ಟು ದಿನದ ಕಳೆದ ಕ್ಷಣಗಳನ್ನು ಹಂಚಿಕೊಳ್ಳಲೊಂದು ಜೀವ ಬೇಕಿತ್ತು. ಮತ್ತೆ ಮಾನವರಲ್ಲಿ ಒಂದು ಕೊಂಡಿ ಏರ್ಪಟ್ಟಿತು. ಅದೇ ಬದಲಾವಣೆಯನ್ನು ವಿಶ್ವಾತ್ಮ ಬಯಸಿದ್ದು. ಅಂತಹ ಬಂಧನದ ಸರಪಳಿ ಸೃಷ್ಟಿಯಾದರೆ ಸಂಬಂಧಗಳು ಸ್ಫುರಿಸುತ್ತವೆ ಹೊಸ ಜಲದಂತೆ. ಭಾವನೆಗಳು ಚಿಗುರುತ್ತವೆ ಮೊದಲ ಮಳೆ ಸ್ಪರ್ಶಿಸಿದಂತೆ.
ಅಷ್ಟರಲ್ಲಿ ಪರದೆಯಲ್ಲಿ ಬೆಳಕು ಮೂಡಿ ಮಾತುಗಳು ಕೇಳಿದ್ದರಿಂದ ಎಲ್ಲರೂ ಹೊರಬಂದು ನೋಡತೊಡಗಿದರು. ಎಲ್ಲರೂ ಬುದ್ಧಿವಂತರೇ, ಬಲುಬೇಗ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿತ್ತು. ಮನಸ್ಸು ಮಾಡುತ್ತಿರಲಿಲ್ಲ. ಯುದ್ಧಕ್ಕೆ ಸಿದ್ಧ ಎಂದು ಹೇಳಿದ ಆತ್ಮ ಎಲ್ಲಿ ಹೋಗಿರಬಹುದೆಂದು ಎಲ್ಲರಿಗೂ ಕಾಣತೊಡಗಿತು. ಕೆಟ್ಟ ವಿಚಾರಗಳು ಕಾಡತೊಡಗಿದವು.
ಒಮ್ಮೆಲೇ ಆತ್ಮನನ್ನು ನೋಡಿ ಎಲ್ಲರೂ ಹಿಗ್ಗಿದರು. ಎಲ್ಲರೂ ಯುದ್ಧಕ್ಕೆ ಸಿದ್ಧವೆಂದು ಒಕ್ಕೊರಲಿನಲ್ಲಿ ತಿಳಿಸಬೇಕೆಂದು ನಿಂತಿದ್ದರು. ಆತ್ಮನ ಹಿಂದೆ ನಿಂತ ಕಪ್ಪು ಜೀವಿಗಳೆರಡನ್ನು ನೋಡಿ ಮೌನವಾದರು.    ಅವರ ಗೊಂದಲಗಳ ಅರಿವಾಗಿ ಆತ್ಮ ಸವಿಸ್ತಾರವಾಗಿ ವಿವರಿಸಿದ. ತಲೆಗೊಂದರಂತೆ ಮಾತುಗಳು, ವಿಚಾರಗಳು, ಹಲವಾರು ಗದ್ದಲ ತುಂಬಿ ಹೋಯಿತು. ಆತ್ಮನ ಮಾತನ್ನು ವಿರೋಧಿಸಿದರೆ ಮುಂದಿನ ದಾರಿ ಏನೆಂಬುದು ಯಾರಿಗೂ ತಿಳಿದಿರಲಿಲ್ಲ. ಸಮಸ್ಯೆಗಳಿಂದ ಹೊರಬಂದ ಮೇಲೆ ಏನೆಂದು ಯೋಚಿಸಿದರಾಯಿತು ಎಂಬ ಭಾವ ಎಷ್ಟೋ ಮನಸ್ಸುಗಳಲ್ಲಿ. ಅವೆಲ್ಲವೂ ಕಪ್ಪು ಜೀವಿಗಳಿಗೆ ಬೇಗ ಅರ್ಥವಾಗುತ್ತದೆ. ಅಂತಹ ಮನಸ್ಥಿತಿಗಳು ಏನಾಗುತ್ತವೆ ಎಂಬುದೂ ಅವುಗಳಿಗೆ ತಿಳಿದಿದೆ. ಆದ್ದರಿಂದ ಮಾತಿಲ್ಲದೆ ನಿಂತವು.
ಆತ್ಮ ಮತ್ತೆ ಮುಂದುವರೆಸಿದ. “ನನ್ನ ಬಳಿ ಸಮಯವಿಲ್ಲ. ನಿರ್ಧಾರ ಅನಿವಾರ್ಯ, ತಿಳಿಸಬೇಕು”.
ಸಮಯ ಯಾರ ಸ್ವಂತದ್ದು ಅಲ್ಲ;
ಉಪಯೋಗಿಸಿಕೊಳ್ಳುವುದು ಜಾಣ್ಮೆ.
ಎಲ್ಲರೂ ತಮ್ಮ ಒಪ್ಪಿಗೆಯಿದೆಯೆಂದು ಕೈ ಎತ್ತಿದರು. ಆಗ ಕಪ್ಪು ಜೀವಿಯೊಂದು ಮನುಷ್ಯ ಉಳಿಯಲು ಇರುವ ಒಂದೇ ಒಂದು ಮಾರ್ಗ ಸೂಚಿಸಿತು.
ಆ ಜೀವಿ ಮಾತನಾಡುತ್ತ ಹೋದಂತೆಲ್ಲ ಇದು ಅಸಾಧ್ಯವೆಂದು ಕೆಲವೊಂದಿಷ್ಟು ತಲೆಗಳು ಮಾತನಾಡಿದರೆ ಉಳಿದವು ಇದು ಎಲಿಯನ್ ಗಳದೇ ಷಡ್ಯಂತ್ರ ಎಂದು ಮಾತನಾಡಿಕೊಂಡವು. ಅದೊಂದಿಷ್ಟು ತಲೆಗಳು ಮಾತ್ರ ವಿಚಿತ್ರವಾದರೂ ನಿಜವೇ ಇರಬಹುದು ಎಂದು ಯೋಚಿಸಿದ್ದು.
ಆತ್ಮ ಸಂವೇದನಾ ಕೂಡ ಮೂಕವಿಸ್ಮಿತರಾದರು ಇದೆಲ್ಲ ಹೇಗೆ ಸಾಧ್ಯ ಎಂದು??
ಆ ಜೀವಿಯ ಮಾತುಗಳನ್ನು ನಂಬಿದವರೆಷ್ಟೋ? ನಕ್ಕವರೆಷ್ಟೋ? ಆ ಭೇಟಿ ಅಲ್ಲಿಗೇ ಕೊನೆಯಾಯಿತು. ಒಬ್ಬರೂ ಒಂದೊಂದು ಅಭಿಪ್ರಾಯಗಳಿಗೆ ಜೊತೆಯಾದರು. ಗಡಿಯಾರ ಮತ್ತೆ ಪ್ರಾರಂಭವಾಯಿತು. ಪ್ರತಿಯೊಬ್ಬರಿಗೂ ಮಾಡಲು ಕೆಲಸವಿತ್ತು.
ಯಾವಾಗಲೂ ಇರುತ್ತವೆ ಕೆಲಸ, ಹುಡುಕಿಕೊಳ್ಳಬೇಕು.
ಮತ್ತೆ ಎಲ್ಲರ ಮುಖದಲ್ಲಿ ಸಂದಿಗ್ಧತೆ. ಕಪ್ಪು ಜೀವಿಗಳ ಮಾತು ಕೇಳಿದ ಇತರ ಜೀವಿಗಳು ತಮ್ಮ ಬದುಕೂ ಹಸಿರಾಗಬಹುದು ಎಂದುಕೊಂಡವು. ಜೀವಕಳೆ ಮೂಡಿತು. ಹೊಸ ಬದುಕಿನ ಸಂಧ್ಯಾರಾಗ ಹಾಡಿತು.
ಇದನ್ನೆಲ್ಲ ಕಪ್ಪು ಜೀವಿಗಳ ಮುಖ್ಯಸ್ತನೂ ನೋಡುತ್ತಿದ್ದ. ಕಪ್ಪು ಜೀವಿಗಳೇ ವಿರುದ್ಧ ನಿಂತಿರುವುದು ಸರಿ ಬರಲಿಲ್ಲ. ಮೊದಲು ಮನುಷ್ಯನ ಅಂತ್ಯ, ಕೊನೆಯಲ್ಲಿ ನಿಮ್ಮದು ಎಂದು ನಕ್ಕಿತು ಮನಸ್ಸಿನಲ್ಲಿ.
ಭಯದ ವಾತಾವರಣ ಭೂಮಿಯಲ್ಲಿ. ಎಲ್ಲ ಕಡೆ ಸಾವು, ಎಲ್ಲೆಲ್ಲೂ ನೆತ್ತರು. ಕಂಡ ಕಡೆಯೆಲ್ಲ ಹೆಣಗಳು.. ಅಂತ್ಯದ ಸಂಕೇತ.. ಮುಕ್ತಾಯದ ಸೂಚಕ..
ಕತ್ತಲು ಬೆಳಕಿನ ಯುದ್ಧ. ಒಂದು ಕಡೆ ಕತ್ತಲ ಜಗತ್ತಿನ ಕಪ್ಪು ಜೀವಿಗಳು.. ಇನ್ನೊಂದೆಡೆ ಬೆಳಕಾಗುತ್ತಿರುವ ಎರಡನೇ ಸೂರ್ಯ. ಕಪ್ಪು ಜೀವಿಗಳಿಂದ ಸಾಯುತ್ತಿರುವ ಸಾವಿಲ್ಲದೆ ಬದುಕಿದ ಮನುಷ್ಯರು. ಎರಡನೇ ಸೂರ್ಯನಿಂದ ಸಾಯುತ್ತಿರುವ ಕಪ್ಪು ಜೀವಿಗಳು. ಎಲ್ಲವನ್ನೂ ಅನುಭವಿಸುತ್ತಿರುವ ಭೂಮಿಯ ಇತರ ಜೀವಿಗಳು.
ವಿಶ್ವದ ಅಭೂತ ಚೇತನ ಎಲ್ಲವನ್ನೂ ನೋಡುತ್ತಿತ್ತು.
ಎಲ್ಲರೊಂದಿಗೆ ಓಡಾಡುತ್ತಿತ್ತು.
ಸಮಯ ನಿಲ್ಲಲೇ ಇಲ್ಲ;
ಸಮರವು ಕೂಡಾ…

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post