X

ಆತ್ಮ ಸಂವೇದನಾ-23

ಆತ್ಮ ಸಂವೇದನಾ-22

ಅದೇ ಸಮಯದಲ್ಲಿ ಆತ್ಮ, ಸಂವೇದನಾ ವರ್ಷಿಯ ಪ್ರಯೋಗಾಲಯದತ್ತ ಸಾಗುತ್ತಿದ್ದರು. ಎರಡನೇ ಸೂರ್ಯನನ್ನು ಇಲ್ಲದಂತೆ ಮಾಡಬೇಕೆಂಬುದು ಅವರಂತರಂಗ. ವರ್ಷಿಯನ್ನು ಒಲಿಸಬೇಕು, ಇಲ್ಲವೇ ಒತ್ತಡ ಹೇರಿಯಾದರೂ ಎರಡನೇ ಸೂರ್ಯನನ್ನು ನಾಶವಾಗುವಂತೆ ಮಾಡಬೇಕು ಎಂದು ನಿರ್ಧರಿಸಿದ್ದ ಆತ್ಮ.ಅವರಿಬ್ಬರೂ ಕುಳಿತಿದ್ದ ಕಾರಿನಂಥದೇ ವಾಹನ ಅದರಷ್ಟಕ್ಕೇ ಚಲಿಸುತ್ತಿತ್ತು. ಎಲ್ಲವೂ ಕೃತಕವೇ,ಯಾಂತ್ರಿಕವೇ.

Source ಮತ್ತು Destination ಕೊಟ್ಟರೆ ಕೆಲಸ ಆದಂತೆಯೇ. ಅತ್ಯಂತ ಸಮೀಪದ ದಾರಿಯಿಂದ ಗುರಿ ತಲುಪಿಸುತ್ತವೆ. ಮನುಷ್ಯನಿಗೆ ಕೆಲಸವಿಲ್ಲ ಕುಳಿತರಾಯಿತು ಸುಮ್ಮನೆ. ಅಪಘಾತ, ಅವಘಡಗಳೆಂಬ ಪ್ರಕ್ರಿಯೆಯೇ ಇಲ್ಲ. ಅಷ್ಟು ಪರಿಪೂರ್ಣ ಕ್ರಿಯೆಗಳು. ಎದುರಿನಲ್ಲಿ ಬರುವ ವಸ್ತುಗಳ ನಡುವೆ ಒಂದು ಮೀಟರ್ ನಷ್ಟು ಅಂತರ ನಿರ್ಧರಿಸುವ ಸೆನ್ಸಾರ್ ಗಳು ಇದ್ದವು. ನಿರಾಳವಾಗಿ ಕುಳಿತಿದ್ದರು ಆತ್ಮ ಸಂವೇದನಾ.

ಶಾಶ್ವತ ಬದುಕೇ ಬರ್ಬರವಾಗುತ್ತಿರುವಾಗ ಬದುಕಿನ ಭಾಗದಲ್ಲಿನ ಅವಘಡಗಳೆದುರು ನಿರಾಳವೇ.

ಆತ್ಮನ ಮಡಿಲಲ್ಲಿ ಸಂವೇದನಾ ಮಗುವಾಗಿದ್ದಳು, ಮಲಗಿಕೊಂಡಿದ್ದಳು. ಹೊರಗಡೆ ಪೂರ್ತಿ ಬೆಳಕು, ಉಷ್ಣತೆಯೇನು ಕಡಿಮೆಯಿರಲಿಲ್ಲ. ಒಳಗಿನ ಬಿಸಿಯ ಪ್ರಭಾವಕ್ಕೆ ಯಾವುದು ತಿಳಿಯುತ್ತಿರಲಿಲ್ಲ. ಆತ್ಮ ಅವಳ ಮುಂಗುರುಳನ್ನು ತೀಡುತ್ತಾ ದೂರದಲ್ಲಿ ದೃಷ್ಟಿ ಹಾಯಿಸುತ್ತಿದ್ದ. ಮರಗಿಡಗಳು ಒಣಗಿ ನಿಂತಿದ್ದವು, ನಿಲ್ಲಲು ಶಕ್ತಿಯಿಲ್ಲ. ಹಾದಿಯ ಬದಿಯಲ್ಲಿ ಪ್ರಾಣಿಗಳು ಬಿಸಿಲಿಗೆ ಜೀವ ಕಳೆದುಕೊಂಡಿದ್ದವು. ಎಲ್ಲ ಕಡೆ ಸತ್ತ ಹೆಣಗಳು, ಸಾಯುವ ಕ್ಷಣಗಳು. ಆತ್ಮ ಹೊರಗೆ ನೋಡಲಾರದೆ ಮುಖ ತಿರುಗಿಸಿ ಕುಳಿತ.

ಇದನೆಲ್ಲವನ್ನು ವರ್ಷಿ ನೋಡಿರಬಹುದು, ನೋಡಿದರೂ ಹಾಗೆಯೇ ಇರಬಹುದೇ?ಎಂಥ ಕೆಲಸ ಮಾಡಿದೆ ವರ್ಷಿ ಮರುಗಿದ ಮನದಲ್ಲಿ. ಅಪರೂಪಕ್ಕೆ ಮನುಷ್ಯರು ಕಾಣಿಸುತ್ತಿದ್ದರು. ರೋಬೋಟ್ ಗಳಿಗೂ, ಮನುಷ್ಯರಿಗೂ ವ್ಯತ್ಯಾಸವೇ ಇರದಷ್ಟು ಸಾಮ್ಯ. ಕವಚ ಹೊತ್ತು ಅಂತರಿಕ್ಷಕ್ಕೆ ಹಾರುವವರಂತೆ ಓಡಾಡುತ್ತಿದ್ದರು.

ಹೃದಯ ತುಂಬಿ ಬಂತು, ಕಂಗಳು ನೀರಾಡಿದವು. ಭೂಮಿಯ ಕೊನೆ ಎಂದುಕೊಂಡು ಮೇಲೆ ನೋಡಿದ ಆತ್ಮ, ತನ್ನ ಕಣ್ಣುಗಳನ್ನು ತಾನೇ ನಂಬದಾದ. ವಿಚಿತ್ರವೆನಿಸಿತು. ಅಷ್ಟೊಂದು ಪ್ರಖರ ಬೆಳಕಿನಲ್ಲಿ ಕಪ್ಪಾದ ಬೇರೆ ಬೇರೆ ಆಕಾರದ ವಸ್ತುಗಳು ತೇಲಿಕೊಂಡು ಭೂಮಿಯತ್ತಲೇ ಬರುತ್ತಿವೆ.ಅವು ತೇಲಿಕೊಂಡು ಬರುತ್ತಿವೆಯಾ? ಹಾರುತ್ತಿವೆಯಾ? ಜೀವಿಗಳಾ? ಮೋಡದ ಸಾಲುಗಳಾ? ಏನೊಂದೂ ತಿಳಿಯದೇ ಆತ್ಮ ದಿಟ್ಟಿಸಿ ನೋಡುತ್ತಿದ್ದ. ಒಂದು, ಎರಡು, ಮೂರು ಎಣಿಕೆ ಸಿಗಲಿಲ್ಲ. ಸಾವಿರಾರು ಆಕಾರಗಳು, ಲೆಕ್ಕವಿಲ್ಲದಷ್ಟು ಕಪ್ಪು ಛಾಯೆಗಳು.ಆಗಸದಲ್ಲಿ ಕಣ್ಣು ಹಾಯಿಸಿದಷ್ಟು ದೂರವೂ ಅವುಗಳದೇ ಮಾಯೆ.

“ಸನಾ, ಸನಾ” ಎನ್ನುತ್ತಾ ಅವಳನ್ನು ಎಚ್ಚರಿಸಿದ ಆತ್ಮ.ಯೋಚನೆಗಳೇ ಇಲ್ಲದೇ ಆತ್ಮನ ಮಡಿಲಲ್ಲಿ ಮಲಗಿಕೊಂಡಿದ್ದಳು. ಭೂಮಿಯೆಡೆಗಿನ ಯೋಚನೆಯೊಂದು ಅವಳ ಮನದಲ್ಲಡಗಿತ್ತು. ಉಳಿದೆಲ್ಲವೂ ಸುಪ್ತ, ಸ್ವಚ್ಛ ಶೂನ್ಯ. ಮುಚ್ಚಿದ ಕಂಗಳೊಳಗೆ ಸಂತೃಪ್ತಿಯ ಛಾಯೆ. ಹಾಗೆಯೇ ಮಲಗಿ ಏನೆಂದು ಕೇಳಿದಳು.

“ಎದ್ದೇಳು ಸಂವೇದನಾ, ಆಕಾಶದತ್ತ ಒಮ್ಮೆ ನೋಡು” ಎಂದ ಆತ್ಮ. ಅವನ ಕುತೂಹಲಭರಿತ ಧ್ವನಿ ಕೇಳಿ ಎದ್ದು ಕುಳಿತು ಆಕಾಶದೆಡೆಗೆ ನೋಡಿದಳು.

“ಎಲಿಯನ್ಸ್”ಕೂಗಿದಳು ಸನಾ. ಅತಿಶಯ ಆಶ್ಚರ್ಯ ತುಂಬಿತ್ತು ಧ್ವನಿಯಲ್ಲಿ. “ಎಲಿಯನ್ಸ್?? ಏನು ಹೇಳುತ್ತಿರುವೆ ಸನಾ!!??” ಆತ್ಮ ದಿಗ್ಭ್ರಮೆಗೊಂಡ ಆತ್ಮ. .

“ಹೌದು ಆತ್ಮ, ಸಂಶಯವೇ ಇಲ್ಲ, ಅವು ಎಲಿಯನ್ಸ್ ಗಳೇ” ಮತ್ತೊಮ್ಮೆ ಖಚಿತಪಡಿಸಿದಳು ಸನಾ. ಅಷ್ಟರಲ್ಲಿ ಅವರು ಹೋಗುತ್ತಿದ್ದ ವಾಹನಕ್ಕೆ ಎದುರಿನ ಜೀವಿ ಅಡ್ಡಾಯಿತು, ಕಾರ್ ಅಡ್ಡಾದಿಡ್ಡಿ. ವಿಚಿತ್ರ ಶಬ್ಧದೊಂದಿಗೆ ಎದುರಿನ ಭಾಗವೊಂದು ಕಾರಿನಿಂದ ಬೇರಾಯಿತು, ಚೂರಾಯಿತು. ಆಕಸ್ಮಿಕ ಅಪಘಾತದಿಂದ ಇಬ್ಬರೂ ಕಾರ್ ನ ಒಂದು ಭಾಗದಿಂದ ಮತ್ತೊಂದು ದಿಕ್ಕಿನೆಡೆಗೆ ಬೀಳತೊಡಗಿದರು.

“ಸನಾ” ಎನ್ನುತ್ತಾ ಅವಳನ್ನು ಹಿಡಿದ ಆತ್ಮ. ಅಷ್ಟೇನು ವೇಗವಿರದ ಕಾರಣ ಏಟೇನೂ ಆಗದೇ ಹೋದರೂ ಅಪಘಾತವಾಗಲು ಹೇಗೆ ಸಾಧ್ಯ? ಇಂತಹ ಅವಘಡವಾಗುವುದು ಹೇಗೆ ಸಾಧ್ಯ? ಸೆನ್ಸಾರ್ ಗಳು ಏಕೆ ಕೆಲಸ ಮಾಡಲಿಲ್ಲ? ಆತ್ಮ ಕಾರಿನ ಬಾಗಿಲು ತೆಗೆದು ಹೊರಗಿಳಿದ. ಎದುರಿನಲ್ಲಿ ಕಪ್ಪು ಆಕಾರದ ಜೀವಿಯೊಂದು ಬಿದ್ದಿತ್ತು, ಚಲನಾರಹಿತವಾಗಿ. ಕಾರಿಗೆ ಘರ್ಷಿಸಿದ ವೇಗಕ್ಕೆ ಅದು ಸತ್ತಿರಬೇಕು ಎಂದುಕೊಂಡ ಆತ್ಮ. ಸಂವೇದನಾ ಕೂಡ ಕಾರಿನಿಂದ ಹೊರಬಂದಳು. ಇದೇ ಮೊದಲ ಬಾರಿಗೆ ಆ ರೀತಿಯ ಜೀವಿಯನ್ನು ನೋಡುತ್ತಿದ್ದರು ಇಬ್ಬರು.

ಕಾರ್ ನ ಸೆನ್ಸಾರ್ ಭೂಮಿಯ ಮೇಲಿನ ಎಲ್ಲ ಜೀವಿಗಳೂ, ಪ್ರತಿಯೊಂದು ವಸ್ತುಗಳನ್ನು ಗುರುತಿಸಿ ದೂರಾಗಿಸುವ ಸಾಮರ್ಥ್ಯ ಹೊದಿತ್ತು. ಗುರುತಿಸಲಾಗದ್ದು ಎಂದರೆ ಭೂಮಿಯಿಂದ ಹೊರಗಿನದು ಅದು ನೀನು ಹೇಳಿದಂತೆ ಎಲಿಯನ್ಸ್ ಎಂದ ಆತ್ಮ.

ಸಂವೇದನಾ ನಿಧಾನವಾಗಿ ಆ ಜೀವಿಯ ಹತ್ತಿರ ಹೋಗತೊಡಗಿದಳು. ಆತ್ಮ ಆಗಸದೆಡೆಗೆ ನೋಡಿದಾಗ ಕಪ್ಪು ಛಾಯೆಯೊಂದು ಭೂಮಿಗೆ ಹತ್ತಿರವಾಗುತ್ತಿತ್ತು.

ಎಲ್ಲಿಂದ ಬರುತ್ತಿದೆ? ಯಾವ ಕಾರಣಕ್ಕಾಗಿ ಬರುತ್ತಿದೆ ಬರುತ್ತಿದೆ ಎಂದು ತಿಳಿಯದೆ ಮೂಕನಾಗಿದ್ದ ಆತ್ಮ. ಪ್ರತಿಯೊಂದೂ ವಿಭಿನ್ನ ಆಕಾರದ ಕಪ್ಪು ಕಲ್ಲುಗಳಂತಹ ಜೀವಿಗಳು. ಒಂದೊಂದೇ ಭೂಮಿಯ ಮೇಲೆ ಇಳಿಯತೊಡಗಿದವು.

ಸಂವೇದನಾ ಆ ಜೀವಿಯ ಹತ್ತಿರ ಹೋಗಿ ನಿಂತು ನೋಡತೊಡಗಿದಳು. ಕಣ್ಣು, ಮೂಗು, ಬಾಯಿ ಯಾವ ಅಂಗಗಳು ಇರಲಿಲ್ಲ, ಇರಬಹುದು ಅವಳಿಗೆ ಕಾಣಿಸಲಿಲ್ಲ. ಆ ಜೀವಿಯನ್ನು ಸ್ಪರ್ಶಿಸಬೇಕೆಂದು ಸನಿಹ ಹೋದಳು. ಅದೇ ಸಮಯಕ್ಕೆ ಕಾರ್ ನ ಪಕ್ಕದಲ್ಲಿಯೇ ಅಂಥದೇ ಇನ್ನೊಂದು ಜೀವಿ ಇಳಿದುಬಂತು. ತನ್ನ ಜೋತೆಗಾರನಿಗೆ ಬಂದ ಸ್ಥಿತಿ ನೋಡಿ ರೋಷಗೊಂಡ ಕಪ್ಪು ಜೀವಿ ಕಾರನ್ನು ಎತ್ತಿ ಎಸೆದು ದೇಹದಿಂದ ಬೆಂಕಿಯ ಚೆಂಡನ್ನು ಉಗುಳಿತು. ಬೆಂಕಿಯ ಚೆಂಡು ಬೆಳಕನ್ನಲ್ಲ ಹೊರಡಿಸಿದ್ದು ಕಪ್ಪಾದ ನೆರಳೊಂದು ಹಾದು ಹೋಯಿತು ಅಷ್ಟೇ. ಮಹಾಸ್ಪೋಟ. ಕಾರು ಹತ್ತಿ ಉರಿಯತೊಡಗಿತು.

ಆ ಜೀವಿ ಆತ್ಮನೆಡೆಗೆ ತಿರುಗಿತು. ಆತ್ಮ ಅರ್ಥೈಸಿಕೊಂಡ. ನಿಂತೇ ಇದ್ದಾರೆ ಅದೇ ಕೊನೆ ಎಂದು ಸನಾಳ ಕೈ ಹಿಡಿದು ಅಲ್ಲಿಂದ ಓಡತೊಡಗಿದ. ಆ ಜೀವಿ ಅವರನ್ನೇ ಹಿಂಬಾಲಿಸತೊಡಗಿತು. ಗಾಳಿಯಲ್ಲಿ ಅದು ಸುಲಭವಾಗಿ ಅದು ಹಾರುತ್ತಿತ್ತು. ಭೂಮಿಯ ಗುರುತ್ವ ಅದನ್ನು ಆಕರ್ಷಿಸಲೇ ಇಲ್ಲ. ಭೂಮಿಯ ಗುರುತ್ವ ಅವುಗಳ ಮೇಲೆ ಏಕೆ ಪ್ರಭಾವ ಬೀರುತ್ತಿಲ್ಲ? ಅವುಗಳ ಹುಟ್ಟು ಭೂಮಿಯ ಮೇಲೆ ಅಲ್ಲದ್ದರಿಂದ ಅವುಗಳ ಮೇಲೆ ಭೂಮಿಯ ಗುರುತ್ವ ವರ್ತಿಸುತ್ತಿಲ್ಲವೇ? ಆತ್ಮ ಯೋಚನೆಗಳ ಜೊತೆಯೇ ಓಡುತ್ತಿದ್ದ.

ಇಬ್ಬರನ್ನೂ ಬೆನ್ನಟ್ಟಿ ಬರುತ್ತಿದ್ದ ಜೀವಿಗಳು ಒಂದಕ್ಕೆ ನಾಲ್ಕು, ನಾಲ್ಕಕ್ಕೆ ಹತ್ತಾಗಿ ಒಡೆದುಕೊಳ್ಳುತ್ತ ಹೋದವು. ಅವು ತುಂಬ ಸುಲಭವಾಗಿ ಅವರನ್ನು ಹಿಡಿದುಬಿಡಬಹುದಾಗಿತ್ತು. ಆದರೆ ಹಾಗೆ ಮಾಡುತ್ತಿಲ್ಲ. ಸಂವೇದನಾ ಓಡಿ, ಉಸಿರು ಏದುಸಿರಾಗಿಕೊನೆಗೆ ಕಷ್ಟವೇ ಆಗಿ ಒಂದು ಕಡೆ ನಿಂತುಬಿಟ್ಟಳು. ಆತ್ಮನ ಪರಿಸ್ಥಿತಿಯೂ ಬೇರೆಯಿರಲಿಲ್ಲ. ಜೀವಿಗಳು ಆತ್ಮ ಸಂವೆದನಾರನ್ನು ಸುತ್ತುವರಿದು ನಿಂತು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳತೊಡಗಿದವು. ಇಬ್ಬರೂ ಹೊರಹೋಗಲು ದಾರಿ ನೋಡಿದರು ಅಷ್ಟರಲ್ಲಿ ಉಳಿದ ಜೀವಿಗಳು ಕಂಡದ್ದನ್ನು, ಕೈಗೆ ಸಿಕ್ಕದ್ದನ್ನು ಹಾಳು ಮಾಡತೊಡಗಿದವು. ಮನೆಯ ಒಳಗಿನಿಂದ ಮನುಷ್ಯರು ಒಬ್ಬೊಬ್ಬರಾಗಿ ಹೊರಬರತೊಡಗಿದರು.

ಮೊದಲ ಬಾರಿ ತಮ್ಮದೇ ಸೃಷ್ಟಿಯ ಬೇಲಿಗಳ ಆಚೆ ಎಲ್ಲರೂ. ಪ್ರತಿ ಮನುಷ್ಯನ ಹಿಂದೆಯೂ ಒಂದೆರಡು ಕಪ್ಪು ಜೀವಿಗಳು ನಿಂತವು. ಅವುಗಳು ಯಾರಿಗೂ ಏನೂ ಮಾಡುತ್ತಿಲ್ಲ.

ಆತ್ಮನಿಗೆ ತಿಳಿಯಿತು ಅವರೆಲ್ಲ ಯಾರದೋ ಸೂಚನೆಗೆ ಕಾಯುತ್ತಿದ್ದಾರೆ ಎಂದು. ಮುಗಿಯಿತು ಇದೇ ನಮ್ಮೆಲ್ಲರ ಅಂತ್ಯ ಎಂದುಕೊಂಡ. ಆತ್ಮನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು ಸನಾ.

ಭೂಮಿಯ ಎಲ್ಲ ಕಡೆಯಲ್ಲೂ ಇದೇ ಪರಿಸ್ಥಿತಿ. ದೇಶ, ಭಾಷೆಯ ಪ್ರಶ್ನೆಯಲ್ಲ.

ಮನುಷ್ಯನೇ ಎಲ್ಲವ ಮರೆತಿದ್ದ. ಅನ್ಯ ಗ್ರಹದ ಜೀವಿಗಳ ವಿರುದ್ಧ ಹೋರಾಡಲು ಯಾರೂ ಇರಲಿಲ್ಲ. ಒಂದು ಸಂಘಟನೆ, ಒಂದಿಷ್ಟು ಸಂಬಂಧಗಳು ಯಾಕೆ ಬೇಕು ಎನ್ನುವುದು ಜನರಿಗೆ ನಿಧಾನವಾಗಿ ಅರಿವಾಗತೊಡಗಿತು. ಈಗ ಕಾಲ ಮೀರಿತ್ತು. ಪ್ರತಿ ಮನೆಯೊಳಗೂ ಕಪ್ಪು ಜೀವಿಗಳು ಆಕ್ರಮಿಸಿದ್ದವು; ಮನಸಿನಲ್ಲಿ ಸಾವಿನ ಭಯ ವಿಜೃಂಭಿಸಿತ್ತು.

ಅವರದೇ ವಿಚಿತ್ರ ಸಂಜ್ಞೆಗಳಲ್ಲಿ ಮಾತನಾಡಿಕೊಳ್ಳುತ್ತಿದ್ದವು ಆ ಜೀವಿಗಳು. ಎಲ್ಲ ಕಡೆ ಮನುಷ್ಯನ ಕೂಗು, ಅಳು ಧ್ವನಿಸಿತು; ಪ್ರತಿಧ್ವನಿಸಿತು. ಸಾವೇ ಇರದ ಬದುಕು ಬದುಕಿದ ಮನುಷ್ಯ, ಸಾವಿನ ನೆರಳಲ್ಲೇ ನಿಂತಿದ್ದ. ಎಲ್ಲರದೂ ಇದೇ ಪರಿಸ್ಥಿತಿಯೇ? ಭೂಮಿಯ ಎಲ್ಲ ಕಡೆ ಏನು ನಡೆಯುತ್ತಿದೆ? ಈ ಆಕ್ರಮಣ ಏಕೆ? ಇವರೆಲ್ಲರೂ ಯಾರು? ಮುಂದಿನ ಕ್ಷಣ ಏನಾಗುತ್ತದೆ? ಅರ್ಥವೇ ಆಗದ ಪ್ರಶ್ನೆಗಳ ಜೊತೆ ಭಯವೂ ಕೂತು ಹೊಂಚು ಹಾಕಿತ್ತು.

ಮನುಷ್ಯನ ಸಾವಿನ ಕೇಕೆಯನ್ನು ಕೇಳಿ ಉಳಿದ ಸಾಯುವ ಮುಖಗಳು ಒಮ್ಮೆ ಹಿಗ್ಗಿದವು. ವಿಕೃತ ಖುಷಿ ಅದು. ” ಎಲ್ಲವನ್ನು ಕೊನೆಯಾಗಿಸಲು ಮುಂದಾದ ನಿಮ್ಮೇಲ್ಲರ ಸಾವು ನಮ್ಮ ಮುಂದೆಯೆ” ಎಂದು ಗಹಗಹಿಸಿದವು. ಮನುಷ್ಯನ ಸಾವಿನ ಭೀಕರತೆಯೊಂದಿಗೆ ಉಳಿದವುಗಳ ವಿಕೃತ ಖುಷಿ ಜೊತೆಗೂಡಿ ಇನ್ನೂ ಭಯಾನಕ ವಾತಾವರಣ ಸೃಷ್ಟಿಯಾಯಿತು.

ಹೇಗಾದರೂ ಇವರಿಂದ ಪಾರಾಗಿ ವರ್ಷಿಯ ಪ್ರಯೋಗಾಲಯ ಸೇರಬೇಕು. ಅವನ Virtual Computer ಇದೆಲ್ಲದಕ್ಕೂ ಉತ್ತರ ನೀಡುತ್ತದೆ. ಇದೆಲ್ಲವನ್ನು ವರ್ಷಿ ಗಮನಿಸುತ್ತಿರಬಹುದೇ? ಅದೆಷ್ಟೋ ಪ್ರಶ್ನೆಗಳು ಆತ್ಮನನ್ನು ಮುತ್ತಿಕೊಂಡವು. ಸಂವೇದನಾ ಕೂಡ ಆತ್ಮನಷ್ಟೇ ಬುದ್ಧಿವಂತೆ ಆದರೂ ಅವಳು ಆ ಸಮಯದಲ್ಲಿ ಆತ್ಮನ ಆಶ್ರಯ ಬಯಸುತ್ತಿದ್ದಳು.

ಹೆಣ್ಣು ಅಬಲೆಯಲ್ಲ;

ಪ್ರಕೃತಿ ಸಹಜ ವರ್ತನೆ.

ಒತ್ತಡಗಳಲ್ಲಿ ಪ್ರತಿ ಜೀವಿಯ ಸಹಜ ಪ್ರತಿಕ್ರಿಯೆಗೆ ಅವಕಾಶವಾಗುತ್ತದೆ; ಕೆಲವೊಮ್ಮೆ ಅಸಹಜ ವರ್ತನೆಗಳಿಗೆ ಕೂಡ.

ಹೆಣ್ಣು ಗಂಡಿಗಿಂತ ಹೆಚ್ಚು ಶಕ್ತಿವಂತೆ.ಅವಳು ಮತ್ತೊಂದು ಜೀವಿಯನ್ನೇ ಸೃಷ್ಟಿಸಬಲ್ಲಳು. ತಾಳ್ಮೆ, ಸಂಯಮ ಗಂಡಿಗಿಂತ ಹೆಚ್ಚು ಹೆಣ್ಣಿಗೆ. ಭೂಮಿ ತಾಯಿ ಹೆಣ್ಣು.

ಮನುಷ್ಯನ ಸಾವಿನ ದಿನಗಳ ಎಣಿಕೆ. ಈಗ ಎಲ್ಲರೂ ನೆರೆಹೊರೆಯವರನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬರೂ ಪಕ್ಕದವರಲ್ಲಿ ಮಾತಾಗುತ್ತಿದ್ದಾರೆ. ಏನಾಗುತ್ತಿದೆ? ಯಾರಿವರೆಲ್ಲ? ಮುಂದೇನಾಗುತ್ತದೆ? ಎಲ್ಲರದ್ದೂ ಪ್ರಶ್ನೆಗಳು ಮಾತ್ರ,

ಉತ್ತರಗಳು ಯಾರಿಗೂ ತಿಳಿದಿಲ್ಲ. ನಿಮಿಷಗಳು ಭಾರವಾಗಿ ಉರುಳತೊಡಗಿದವು.

ಮೇಲಿನಿಂದ ಕೆಳಗೆ ಇಳಿಯುತ್ತಿರುವ ಕಪ್ಪು ಜೀವಿಗಳ ಸಂಖ್ಯೆ ಕಡಿಮೆಯಾಗುತ್ತ ಬಂದು ನಿಂತೇ ಹೋಯಿತು. ಮತ್ತೂ ಒಂದು ನಿಮಿಷ, ಯುಗದಂತೆ ಭಾಸ. ಎಲ್ಲ ಜೀವಿಗಳೂ ಏನೋ ಸೂಚನೆ ಬಂದಂತೆ ತಾವು ಹಿಡಿದಿದ್ದ ಮನುಷ್ಯರನ್ನು ಬಿಟ್ಟು ಆಗಸದೆಡೆಗೆ ಕಪ್ಪು ಹೊಗೆಯನ್ನು ಸೂಸಿದವು.

ಹಿಡಿತ ಸಡಿಲವಾದದ್ದೇ ಸಮಯ ಎಲ್ಲರು ಓಡತೊಡಗಿದರು ದಾರಿಯಿರದಿದ್ದಲ್ಲಿಯೂ. ಸಾವಿನ ಭಯ ಅದು; ಬದುಕಿನ ಮೇಲಿನ ಪ್ರೀತಿ. ಆ ಜೀವಿಗಳು ಅದರ ಬಗ್ಗೆ ಯೋಚಿಸಲೇ ಇಲ್ಲ. ಅವುಗಳ ದೇಹದಿಂದ ಹೊರಬಂದ ಕಪ್ಪು ಹೊಗೆ ಸ್ವಲ್ಪ ಮೇಲೆ ಹೋಗಿ ಕರಿ ಮೋಡಗಳ ಛಾಯೆಯಂತಾದವು. ಆಗಸ ಪೂರ್ತಿಯಾಗಿ ಕತ್ತಲಾಯಿತು. ಸೂರ್ಯನ ಬೆಳಕು ಆ ಪರದೆಯನ್ನು ದಾಟಿ ಬರುತ್ತಿರಲಿಲ್ಲ. ಬಹಳ ದಿನಗಳ ನಂತರ ಭೂಮಿಯ ಮೇಲೆ ಕತ್ತಲಾವರಿಸಿದ್ದು. ಆ ಕತ್ತಲಲ್ಲಿ ಎಲ್ಲಿ ಹೋಗಬೇಕೆಂದು ತಿಳಿಯದಾಯಿತು ಮನುಷ್ಯನಿಗೆ. ಎಲ್ಲರೂ ನಿಂತಲ್ಲಿಯೇ ನಿಂತಿದ್ದರು.

ಆತ್ಮ ಕೂಡಾ ಇದೇ ಸಮಯ ಎಂದು ಸಂವೇದನಾಳ ಕೈ ಹಿಡಿದು ಅಲ್ಲಿಂದ ಓಡತೊಡಗಿದ. ತಡವಿದಲ್ಲೆಲ್ಲ ಅದೇ ಜೀವಿಗಳು, ಎಡವಿದಲ್ಲೆಲ್ಲ ಅವುಗಳದೇ ಆಕಾರ. ಸಂಪೂರ್ಣ ಕತ್ತಲು. ಮನುಷ್ಯ ಸಾಯುತ್ತಿದ್ದ, ಆ ಜೀವಿಗಳಿಗೆ ಕತ್ತಲೆಯೇ ಬದುಕು.

ಆಗಸದಲ್ಲಿ ಹರಡಿದ್ದ ಕಪ್ಪು ಪರದೆಯಲ್ಲಿ ಚಿತ್ರಗಳು ಮೂಡಿಬಂದವು. ಧ್ವನಿ ಕೂಡ ಕೇಳತೊಡಗಿತು. ದೂರದರ್ಶನದಂತೆ ಕ್ರಿಯಿಸಿತು ಕಪ್ಪು ಪರದೆ. ಮನುಷ್ಯ ಕಂಡ ದೊಡ್ದ ಚಿತ್ರಪರದೆ. ಸ್ವಲ್ಪ ಬೆಳಕು ಮೂಡಿತು. ಓಡಬೇಕೆಂದುಕೊಂಡ ಮನುಷ್ಯ ಚಿತ್ರಗಳನ್ನು ನೊಡಿ ಬೆರಗಾಗಿ ನಿಂತ. ಆತ್ಮ ಸಂವೇದನಾ ಕೂಡಾ.

ಅಲ್ಲಿ ಮೂಡಿರುವುದು ವರ್ಷಿಯ ಪ್ರಯೋಗಾಲಯದ ದೃಶ್ಯ. ಪೂರ್ತಿಯಾಗಿ ಅಸ್ತವ್ಯಸ್ಥವಾಗಿದೆ. ಅಲ್ಲಿಯೂ ನಾಲ್ಕು ಕಪ್ಪು ಜೀವಿಗಳು ನಿಂತಿವೆ. ಒಂದು ಕಪ್ಪು ಜೀವಿ ವರ್ಷಿಯನ್ನು ಪೂರ್ತಿಯಾಗಿ ಆವರಿಸಿಕೊಂಡಿದೆ. ವರ್ಷಿ ಅದರ ಹಿಡಿತದಿಂದ ಹೊರಬರಲು ಒದ್ದಾಡುತ್ತಿದ್ದ.

ವರ್ಷಿಯನ್ನು ಆವರಿಸಿದ ಜೀವಿ ಅವನನ್ನು ಹಿಂದಿರುವ ಜೀವಿಗಳ ಹಿಡಿತಕ್ಕೆ ವರ್ಗಾಯಿಸಿ ಪರದೆಯ ಎದುರಿರುವಂತೆ ನಿಂತು ಮಾತನಾಡತೊಡಗಿತು. ಅವರೆಲ್ಲರ ಮುಂದಾಳು ಆತ ಎಂದು ಆಗ ತಿಳಿಯಿತು. ಆ ಜೀವಿ ಏನು ಹೇಳಬಹುದು ಎಂದು ಕೇಳಲು ಎಲ್ಲರೂ ಕುತೂಹಲಗೊಂಡರು, ಕಿವಿಯಾದರು. ಒಮ್ಮೆ ಎಲ್ಲರೂ ಭಯಗೊಂಡಿದ್ದರು. ಜೀವ ಭಯವಲ್ಲವೇ? ಕಪ್ಪು ಜೀವಿಗಳ ಹಿಡಿತ ಸಡಿಲವಾದೊಡನೆ ಬದುಕುವ ಪ್ರೀತಿ.

ಅಲ್ಲದೇ ಪೂರ್ತಿ ಆಗಸವೇ ಬೆಳ್ಳಿ ಪರದೆಯಂತಾಗಿದ್ದರಿಂದ ಮನುಷ್ಯನ ಕುತೂಹಲ ಕೆಣಕಿತು. ಎಲ್ಲರೂ ಮುಗಿಲಿನತ್ತ ನೋಡುತ್ತ ನಿಂತರು. ಅವರಲ್ಲನೇಕರು ವರ್ಷಿಯನ್ನು ಚೆನ್ನಾಗಿಯೇ ಬಲ್ಲರು. ವರ್ಷಿಯ ಮೇಲೆ ಏಕೆ ಧಾಳಿ ಮಾಡಿವೆ ಆ ಜೀವಿಗಳು ಎಂದು ಆಶ್ಚರ್ಯಗೊಂಡರು.

ಮುಂದೆ ನಿಂತ ಜೀವಿ ಮನುಷ್ಯರೆಲ್ಲರ ಮರಣ ವಾರ್ತೆ ಮೃದಂಗಿಸಲಿದೆ ಎಂದು ಯಾರೂ ಯೋಚಿಸಿರಲಿಲ್ಲ. ಆತ್ಮ ಮಾತ್ರ ಬಹಳ ವ್ಯಾಕುಲಗೊಂಡಿದ್ದ.

“ಹೇಗಾದರೂ ವರ್ಷಿಯನ್ನು ಉಳಿಸಿಕೊಳ್ಳಬೇಕು ಸನಾ, ಆತ ನನ್ನ ತಂದೆಯಂತೆ, ಅವನೇನು ಮಾಡಿದರೂ ನನಗೆ ತಂದೆಯೇ. ಇದರಲ್ಲಿ ಎಲ್ಲವೂ ಅವನ ತಪ್ಪುಗಳಲ್ಲ. ಪರಿಸ್ಥಿತಿ ಆತನನ್ನು ಹಾಗೆ ಮಾಡುವಂತೆ ಮಾಡಿದೆ. ಸಮಯ ಯಾರನ್ನು ಅವರಷ್ಟಕ್ಕೆ ಬಿಡುತ್ತದೆ? ಇವೆಲ್ಲದಕ್ಕೂ ಕಾರಣ ವಿಶ್ವಾತ್ಮನೇ. ನಾನು ಇಷ್ಟು ದಿನಗಳ ಕಾಲ ವಿಶ್ವಾತ್ಮನ ಇರುವನ್ನು ನಂಬಿರಲಿಲ್ಲ. ಆದರೆ ಇದೆಲ್ಲವನ್ನೂ ನೋಡಿದ ಮೇಲೆ ವರ್ಷಿ ಹೇಳುವುದು ನಿಜವೇ, ಎಲ್ಲವನ್ನೂ ಮಾಡುತ್ತಿರುವುದು, ಆಡಿಸುತ್ತಿರುವುದು ವಿಶ್ವಾತ್ಮನೇ!!

ಎಲ್ಲವನ್ನೂ ಮೊದಲಿನಂತಾಗಿಸಬೇಕೆಂದರೆ ವಿಶ್ವಾತ್ಮನಿಗೆ ಮಾತ್ರ ಸಾಧ್ಯ. ಬೇಗ ಹೋಗಿ ವರ್ಷಿಯನ್ನು ಉಳಿಸಿಕೊಳ್ಳೋಣ” ಎಂದು ಸಂವೇದನಾಳ ಕೈ ಹಿಡಿದು ವರ್ಷಿಯ ಪ್ರಯೋಗಾಲಯದ ದಿಕ್ಕಿಗೆ ಓಡತೊಡಗಿದ.

ಪರದೆಯಾದ ಆಗಸದಲ್ಲಿ ಮುಖ್ಯಸ್ಥನ ನಗು ಪ್ರತಿಧ್ವನಿಸಿತು. ಕತ್ತಲೆಯಲ್ಲೂ ಕಪ್ಪು ಜೀವಿಗಳ ಪ್ರತಿಬಿಂಬ.

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post