X

ಆತ್ಮ ಸಂವೇದನಾ. ಅಧ್ಯಾಯ 21

ಆತ್ಮ ಸಂವೇದನಾ ಅಧ್ಯಾಯ 20

ಅಪರೂಪದ ಸನ್ನಿವೇಶ;
ಮನಸ್ಸೆಂಬ ಮಹಾಕಾಶ.
ಮನಸ್ಸು ಯಾರಿಗಿಲ್ಲ? ಮನಸ್ಸಿಲ್ಲದವಗೂ ಒಂದು ಮನಸ್ಸಿದೆ. ಪ್ರತಿಯೊಂದು ಜೀವಿಯಲ್ಲೂ ಉಸಿರಿರದ ನಿರ್ಜಿವಿಗಳಲ್ಲೂ ಮನಸ್ಸಿದೆ. ಈ ಮನಸ್ಸು ಎಂದರೆ ಏನು? ದೇಹದಲ್ಲಿನ ಪ್ರತಿ ಕ್ರಿಯೆಗಳು ವ್ಯವಸ್ಥಿತ ಪ್ರತಿಕ್ರಿಯೆಯಾಗಲು ಆರೋಗ್ಯವಿರಬೇಕು, ಅದಕ್ಕೆ ಪೂರಕ ಆಹಾರವಿರಬೇಕು. ಆದರೆ ಈ ಮನಸ್ಸು ಎಂಬ Virtual ಸ್ಥಿತಿ ಯಾವುದು? ಮನಸ್ಸೆಂಬುದು ಮೆದುಳಿನಲ್ಲಿದೆಯಾ? ಹೃದಯದಲ್ಲಿ ಹುದುಗಿದೆಯಾ? ಹಾಗಾದರೆ ಹೃದಯ ಮತ್ತು ಮೆದುಳು ಇರದ ಜೀವಿಗಳಿಗೆ ಮನಸ್ಸೇ ಇರುವುದಿಲ್ಲ. ಬರೀ ಜೀವವೆಂಬುದೆ ಮನಸ್ಸೇ? ಸಸ್ಯಗಳಿಗೆ ಜೀವವಿದೆ. ಅವುಗಳಿಗೆ ಮೆದುಳಾಗಲೀ, ಹೃದಯವಾಗಲಿ ಜೊತೆಯಿಲ್ಲ. ಮನಸ್ಸು..??
ಮನವೆಂಬ ಅಂತರಂಗದ ಭಾಷೆ, ಭಾವಲೋಕದ ತುಡಿತ ಒಂದು ಜೀವಿಯನ್ನು ನಿಯಂತ್ರಿಸುತ್ತದೆಯೆಂದಾದರೆ ಈ ಮನಸ್ಸು ಸೃಷ್ಟಿಯಾಗಿದ್ದು ಯಾರಿಂದ? ಜೀವಿಗಳನ್ನು ಜೀವಿಸುವಂತೆ ಮಾಡುವ ಮನಸ್ಸನ್ನು ಮೋಡಿ ಮಾಡಿ ಸಮ್ಮೋಹನಗೊಳಿಸುವ ಶಕ್ತಿ ಇದೆ ಎಂದಾದರೆ ಅದು ಯಾವುದು?
ಜಾಗತಿಕ ಶಕ್ತಿಯೇ ಕಂಡ ಅತಿ ದೊಡ್ಡ ಯುದ್ಧ ಕತ್ತಲು ಮತ್ತು ಬೆಳಕಿನ ಸಮರ. ಅದರ ಹೊರತಾಗಿ ಮನಸೊಳಗಿನ ಸಮರ. ಪ್ರತಿ ಜೀವಿಯೂ ತನ್ನ ಅಂತರಾಳದೊಂದಿಗೆ ಹೋರಾಡುತ್ತಲೇ ಇರುತ್ತದೆ. ಜೀವಿಯು ಹುಟ್ಟಿನಿಂದಲೇ ಅದಕ್ಕೆ ಅರಿವಿರದೆ ಮನಸ್ಸಿನೊಡನೆ ಹೋರಾಡುತ್ತಲೇ ಇರುತ್ತದೆ.
ಮನಸ್ಸಿಗೆ ಎಷ್ಟು ಮುಖಗಳು? ಏಕಿಷ್ಟು ಚಂಚಲ? ಮನಸ್ಸನ್ನು ಸೃಷ್ಟಿಸಿದ ಶಕ್ತಿಗೆ ಸ್ಥಿರವಾಗಿ ಸೃಷ್ಟಿಸಲು ಸಾಧ್ಯವಾಗದೆ ಹೋಯಿತೇ?

ಆ ಶಕ್ತಿಯೂ ಚಂಚಲ;
ಸ್ಥಿರವೆಂಬುದೇ ಅಸ್ಥಿರ.
ಮನಸ್ಸಿಗೊಂದಿಷ್ಟು ಮುಖಗಳು.. ಒಳ್ಳೆಯದು, ಕೆಟ್ಟದ್ದು ಎರಡೇ ಮುಖಗಳಾ? ಇಲ್ಲ ಮನಸ್ಸಿಗೆ ಅಸಂಖ್ಯ ಮುಖಗಳು. ಕೊನೆಯಲ್ಲಿ ಉಳಿಯುವುದು ಕತ್ತಲು ಅಥವಾ ಬೆಳಕು, ಸತ್ಯ ಅಥವಾ ಸುಳ್ಳು. ಮನಸ್ಸಿನ ಎಲ್ಲ ಮುಖಗಳು ನಿಲ್ಲುವುದು ಸುಳ್ಳಿನ ಕಡೆ ಹೊರತಾಗಿ ಸತ್ಯದ ಬದಿ. ಕತ್ತಲು ಇಲ್ಲವೇ ಬೆಳಕು ಕೊನೆಗೆ ಉಳಿಯುವುದು. ಅದೇ ಕತ್ತಲು ಮತ್ತು ಬೆಳಕಿನ ಯುದ್ಧ.

Virtual Battle- ಮನಸುಗಳ ಯುದ್ಧ. ಮನಸ್ಸು ಹೇಗೆ ಬೇಕಾದರೂ ಯೋಚಿಸಬಹುದು. ಏನನ್ನು ಬೇಕಾದರೂ ಯೋಚಿಸಬಹುದು. ಯೋಚನೆಗಳಿಗೆ ಬೇಲಿಯೇ ಇಲ್ಲ.

ಎಲ್ಲಕ್ಕಿಂತ ಶಕ್ತಿಯುತವಾದದ್ದು ಮನಸ್ಸು ಎಂದುಕೊಂಡರೆ ಮನಸ್ಸನ್ನು ಸೃಷ್ಟಿಸಿದ ಶಕ್ತಿ ಯಾವುದು ಎಂಬ ಪ್ರಶ್ನೆ ಎದುರು ನಿಲ್ಲುತ್ತದೆ.
ಕತ್ತಲೆಯೆಂಬುದು ಕೆಟ್ಟದ್ದು, ಬೆಳಕು ಗುಣಾತೀತ. ಯಾರ ತೀರ್ಮಾನಗಳಿಗೂ ನಿಲುಕದ್ದು. ಭ್ರಮೆಗಳಲ್ಲೇ ಸಿಲುಕಬೇಕಷ್ಟೆ.
ಅತಿಯಾದ ಕತ್ತಲನ್ನೂ ನೋಡಬಹುದು ಆದರೆ ಅತಿಯಾದ ಬೆಳಕನ್ನು ನೋಡಲು ಸಾಧ್ಯವಿಲ್ಲ. ಕೆಲವೊಮ್ಮೆ ಅತಿಯಾದ ಬೆಳಕೇ ಕ್ರೂರ ಕತ್ತಲೆಯ ಕ್ರೌರ್ಯತೆಯನ್ನು ಮೀರಿದ ಭಾವ. ಎರಡೂ ಕ್ರಿಯೆಗಳಲ್ಲಿ ಏನೂ ಕಾಣುವುದಿಲ್ಲ.

ಸತ್ಯಗಳು ಸುಳ್ಳಾಗಿಯೇ ಸಿಗುತ್ತವೆ. ನಾವು ನೋಡುವ ಮತ್ತು ಗ್ರಹಿಸುವ ಸಂದರ್ಭದ ಮೇಲೆ ಸತ್ಯ ಸುಳ್ಳುಗಳ ನಿರ್ಧಾರವಾಗುತ್ತದೆ. ಹಾಗೆಂದು ಭ್ರಮೆ ಹುಟ್ಟಿಸುತ್ತದೆ.
ಸತ್ಯ-ಸುಳ್ಳು, ಕತ್ತಲೆ-ಬೆಳಕು, ಜೀವ-ನಿರ್ಜೀವ ಎಲ್ಲದರ ಹೊರನಿಂತು ನೋಡಿದರೆ ಕೊನೆಯಲ್ಲಿ ಉಳಿಯುವುದು ಏನು? ಮನಸ್ಸು? ಆತ್ಮ? ಪರಮಾತ್ಮ?? ಏನು ಕೊನೆಯಲ್ಲಿ ಉಳಿಯುವುದು? “ಬದುಕು… ಕೊನೆಯಲ್ಲಿ ಉಳಿಯುವುದು ಬದುಕು ಮಾತ್ರ. ಉಳಿಯುವುದು ಬದುಕುವ ನೀತಿ, ನೀನು ಬದುಕಿದ ರೀತಿ” ಎಂದಿತು ವಿಶ್ವಾತ್ಮ.

ಮತ್ತದೇ ಸುಂದರ ಸಂಗೀತದ ಅಲೆ ಅಲ್ಲಿ ಹರಡಿತ್ತು. ಮಾತುಗಳ ಮಹಾಪೂರ ಇಳಿದ ಮೇಲೆ ವಿಶ್ವಾತ್ಮನ ಎರಡು ಮನಸ್ಸುಗಳು ಸಂದಿಗ್ಧಕ್ಕೆ ಸಿಲುಕಿದ ಸಮಯ ಅದು. ಒಂದು ಮನಸ್ಸು ಸಂಗೀತವನ್ನು ಬಯಸುತ್ತದೆ, ಇನ್ನೊಂದು ಸಂಗೀತವನ್ನು ಸಹಿಸುವುದು ಇಲ್ಲ. ವರ್ಷಿಯ ಜೊತೆ ನಿಂತು ಭೂಮಿಯನ್ನೇ ಪ್ರಯೋಗಶಾಲೆಯನ್ನಾಗಿಸಿಕೊಂಡ ವಿಶ್ವಾತ್ಮ ಅವನು. ಈಗವನು ನದಿ ಕಿನಾರೆಯಲ್ಲಿ ಕುಳಿತಿದ್ದ. ನೀರವತೆಯ ನದಿಗಳು, ಪ್ರಶಾಂತ ಸರೋವರಗಳು, ಕಡೆಗೆ ನೀರು ಎಂಬುದೇ ಆವಿಯಾಗುತ್ತ ಬಂದಿತ್ತು. ವಿಶ್ವಾತ್ಮ ತನಗೆ ಬೇಕೆಂದರೆ ಸೃಷ್ಟಿಸಿಕೊಳ್ಳಬಲ್ಲ, ಬೇಕಿರುವುದನ್ನು ಇಲ್ಲದಿದ್ದರೂ ಕಲ್ಪಿಸಿಕೊಳ್ಳಬಲ್ಲ. ತನ್ನದೇ ಒಂದಿಷ್ಟು ಕಲ್ಪನೆಗಳ ಜೊತೆ ಇಂಚಿಂಚಾಗಿ ಕಡೆಯಬಲ್ಲ. ಬೇಡವೆಂದರೆ ಕೆಡವಲು ತಿಳಿದವ. ಈ ಭೂಮಿಯನ್ನು ವಿಭಿನ್ನ ವಿಶ್ವವನ್ನೇ ಸೃಷ್ಟಿಸಿದ ವ್ಯಕ್ತಿ ವಿಶ್ವಾತ್ಮ.

” ನನ್ನ ತಲೆ ಸಿಡಿದು ಹೋಗುತ್ತಿದೆ ನಿಲ್ಲಿಸು ನಿನ್ನ ಆಲಾಪ ಪ್ರಲಾಪವನ್ನು” ಸಿಡುಕಿದ ವಿಶ್ವಾತ್ಮ.
ವಿಶ್ವಾತ್ಮನ ಇನ್ನೊಂದು ಮನಸ್ಸು ನಕ್ಕಿತು. ಆ ನಗುವಿನಲ್ಲಿ ಅದೇ ಮುಗ್ಧ ಮಗುವಿನ ಕಳೆ, ಬರಡು ಭೂಮಿಯ ಮೇಲಿನ ತುಂತುರು ಮಳೆ.
” ಪಾಪಪ್ರಜ್ಞೆ ಕಾಡುತ್ತಿದೆಯಾ ಗೆಳೆಯಾ?” ನಗುತ್ತಲೇ ಉಭಯಕುಶಲೋಪರಿಸಿದ.
“ಪಾಪಪ್ರಜ್ಞೆ?ನನಗೇಕೆ ಕಾಡಬೇಕು ಪಾಪಪ್ರಜ್ಞೆ?” ಸ್ವಲ್ಪ ಕಟುವಾಗಿತ್ತು ಮಾತು. ತನ್ನ ಅಹಂಕಾರವನ್ನು ಅಲಂಕರಿಸಿಕೊಂಡೇ ಮಾತಿಗಿಳಿಯುವುದು ಅವನ ರೀತಿ.
“ಮತ್ತೇಕೆ ಹೀಗೆ ಕುಳಿತಿರುವೆ? ವರ್ಷಿಯ ವಿಜ್ಞಾನದ ಮತ್ತೊಂದು ಆವಿಷ್ಕಾರಕ್ಕೆ ಅನುವಾಗಬಹುದಿತ್ತಲ್ಲವೇ” ಎಂದಿತು ಮುಗ್ಧ ಮನಸ್ಸು. ಅಂತರಾಳದಲ್ಲಿ ಭವಿಷ್ಯತ್ತಿನ ಭಯಂಕರ ಕಲ್ಪನೆ ಭೂತಾಕಾರವಾಗಿತ್ತು.
“ಅದನ್ನು ಯೋಚಿಸಲೆಂದೇ ಕುಳಿತಿರುವೆ. ನೀನೇಕೆ ಇಲ್ಲಿ ಬಂದಿರುವುದು? ಯಾರು ಏನಾದರೆ ನಿನಗೇನು?
ನೋಡಿ ತಟಸ್ಥವಾಗಿರುವುದು ನಿನ್ನ ನೀತಿ, ಬದುಕಿಯೂ ಬದುಕಿರದ ರೀತಿ. ನಿರರ್ಥಕ ನಿಷ್ಪ್ರಯೋಜಕ ಬದುಕಿನ ಬೆಲೆ ಏನು? ನಿರ್ವೀರ್ಯತೆಗೆ ಅರ್ಥವೇನು? ನಿನ್ನ ರೀತಿಯಲ್ಲಿ ನಾನು ಯೋಚಿಸಲಾರೆ. ನಿನ್ನ ನೀತಿಗಳಂತೆ ಬದುಕಲು ಸಾಧ್ಯವಿಲ್ಲ. ಜೀವನದಲ್ಲಿ ಉತ್ಸಾಹವಿರಬೇಕು, ಕನಸುಗಳಿರಬೇಕು. ಬದುಕಿಗೊಂದು ಧ್ಯೇಯ ಗುರಿಯಿರಬೇಕು. ನಿನ್ನಂತೆ ಏನೂ ಇಲ್ಲದೆ ಬದುಕಲಾರೆ, ಬದುಕಿದ್ದು ಸಾಯಲಾರೆ.” ಸಿಡಿದೆದ್ದ ವಿಶ್ವಾತ್ಮ.
ಮುಗ್ಧ ಮನಸ್ಸು ಮುಗುಳ್ನಗುತ್ತಲೇ ಇತ್ತು.

“ಬದುಕಿಗೆ ಧ್ಯೇಯ, ಗುರಿ, ಸಿದ್ಧಾಂತಗಳು ಬೇಕು ಗೆಳೆಯಾ, ಅದು ಸುಂದರತೆಯನ್ನು, ಒಂದಿಷ್ಟು ಬದುಕುವ ನೀತಿಯನ್ನು, ಅವೆಷ್ಟೋ ಜೀವಗಳನ್ನು, ಜೀವನವನ್ನು ಅರಳಿಸಬೇಕು. ಮಿಗಿಲಾಗಿ ಕೋಟ್ಯಂತರ ಜೀವಿಗಳ ಬದುಕನ್ನು ಎರಡಾಗಿಸಿದರೆ ಅದು ನಿರ್ವೀರ್ಯತೆ. ಅದೇ ನಿನ್ನ ಬದುಕಿನ ಸಾರ್ಥಕತೆ…!!??
ಸಾಯುತ್ತಿರುವ ಸುಂದರ ಪ್ರಪಂಚವನ್ನು ನೋಡು. ಸಾವು ಸಹಜ; ಆಯಸ್ಸು ತಿರುವುದು ಅದಕ್ಕೊಂದು ನೆಪ ಮಾತ್ರ. ಪ್ರತಿಯೊಂದು ಜೀವಿಯೂ ಸಾಯಬೇಕು.
ನೀನು ಸತ್ತುಹೋಗುವೆ; ನಾನೂ ಬದುಕುವುದಿಲ್ಲ. ಆದರೆ ಒಂದು ಕಾಲವೆಂಬುದೊಂದಿದೆ. ಅದಕ್ಕೊಂದು ರೀತಿಯಿದೆ, ಅವೆಷ್ಟೋ ಬದುಕಿನ ನೀತಿಗಳಿವೆ.
ಒಂದು ಸಾವು ಮತ್ತೊಂದು ಹುಟ್ಟು ನೀಡಬೇಕು. ಒಂದು ಅಂತ್ಯ ಇನ್ನೊಂದರ ಆರಂಭ. ಒಂದು ಸಾವು ಇನ್ನೊಂದರ ಹುಟ್ಟಿನಲ್ಲಿ ಸಂಭ್ರಮಿಸಬೇಕು. ಸಾವಿಗೂ ಕೂಡ ಶೋಕವಿರಬಾರದು.

ನಮ್ಮ ನೀತಿ ಏನಾಗಿತ್ತು ಮರೆತುಬಿಟ್ಟೆಯಾ? ವಿಶ್ವಾತ್ಮ ನೀನು. ನಮಗೆ ಬದುಕುವ ನೀತಿಯನ್ನು ಕಲಿಸುವಾಗ ಹೇಳಿದ ಮಾತುಗಳನ್ನು ಮರೆತುಬಿಟ್ಟೆಯಾ??” ಯೋಚನೆಗಳಿಗೆ ತಳ್ಳಿ ಮೌನವಾಯಿತು ಮುಗ್ಧ ಮನಸು.
ಚಿಕ್ಕ ಮಗುವೂ ಅಷ್ಟೆ ಉತ್ತರವಿರದ ಪ್ರಶ್ನೆಗಳನ್ನು ಕೇಳಿ ಮರೆತುಬಿಡುತ್ತದೆ. ದೊಡ್ದವರೆಂಬುವರು ಹುಡುಕಿದರೂ ಸಿಗುವುದಿಲ್ಲ. ವಿಶ್ವಾತ್ಮ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ತನ್ನಂತರಂಗವ ತಾನೇ ಬಗೆವ ಸ್ಥಿತಿಯದು. ಮತ್ಯಾರು ಅಲ್ಲಿಯವರೆಗೆ ಪ್ರವೇಶಿಸುವುದು ಇಲ್ಲ.
ಬೇರಾದ ಎರಡು ಭಾಗಗಳಲ್ಲಿ ಒಂದು ಮಾತನಾಡುತ್ತಿದ್ದರೆ ಮತ್ತೊಂದು ಕಿವಿಯಾಗಲೇಬೇಕು. ಪ್ರತಿಸಲವೂ ಮುಗ್ಧತೆಯೇ ಮಾತನಾಡುವುದು, ಕ್ರೂರತೆಯೇ ಕಿವಿಯಾಗುವುದು.

ನಂಬಿಕೆ ಇದ್ದವನಿಗೆ ಸುಳ್ಳು ಹೇಳಬಹುದು, ಮೋಸ ಹೋಗುವವನಿಗೆ ವಂಚಿಸಬಹುದು, ಭಯಪಡುವವನನ್ನು ಸಾವಿನಷ್ಟು ಹೆದರಿಸಬಹುದು. ಸ್ವಂತದ ಮನಸ್ಸಿಗೆ ಇದನ್ನೆಲ್ಲವನ್ನೂ ಮಾಡಿಕೊಳ್ಳುವುದು ಕಷ್ಟ ಅಸಾಧ್ಯ ಕೂಡ.

ವಿಶ್ವಾತ್ಮ ಮನಸ್ಸಿನ ಮುಖ ನೋಡಿದ, ಮುದ್ದು ಕಂದಮ್ಮನ ಮುಖ. ಅದೇ ಮುಗ್ಧ ನಗು. ಹಳೆಯ ದಿನಗಳಲ್ಲಿ ನನ್ನದೂ ಇಂಥದೇ ಹೊಳಪು ಕಂಗಳಾಗಿದ್ದವು. ಮುಗ್ಧತೆ ಮನೆ ಮಾಡಿತ್ತು. ಈಗ ಹೊಳಪು ಕಳೆದು ಹೋಗಿದೆ. ಮನೆ ಬಣ್ಣ ಕೆಟ್ಟಿದೆ. ಯಾವುದರಲ್ಲೂ ಖುಷಿಯಿಲ್ಲ. ಯಾಂತ್ರಿಕತೆ ಎನ್ನಿಸಿತು.
ದಾರಿ ಬೇರಾದದ್ದು ಎಲ್ಲಿ? ಒಂದು ಮನಸು ಎರಡಾದದ್ದು ಯಾವಾಗ? ಅದ್ಯಾವ ಕ್ಷಣದಲ್ಲಿ ಅರಿವಿಲ್ಲದೆ ಬದಲಾಗಿ ಹೋದೆ; ಬಯಲು ಸೇರಿದೆ. ಸಿಟ್ಟು, ಅಹಂಕಾರ ಅತಿಯೆಂಬ ಪ್ರಯೋಗಶೀಲತೆ ನನ್ನೊಳಗೆ ಸೇರಿ ಮುಗ್ಧತೆ ಬರಿದಾದದ್ದು ಎಲ್ಲಿ? ನಾನೀಗ ಭೂಮಿಯ ಮೇಲೆ ನಡೆಸುತ್ತಿರುವ ಪ್ರಯೋಗಗಳು ಮನುಷ್ಯನ ಮೇಲಿನ ಕೋಪದಿಂದ ಅಥವಾ ನನ್ನ ಮೋಜಿಗೆ?

ಮನುಷ್ಯನು ಏನು ಮಾಡಿದ್ದ? ತನ್ನ ಪರಿಧಿಯನ್ನು ಮೀರಿ ನಡೆದಿದ್ದ.ಏನಾದರೂ ಮಾಡಿ ಕೊನೆಗೆ ಏನೆಲ್ಲವನ್ನೂ ಮಾಡಿ ಇತರರನ್ನು ಆಳುತ್ತಿದ್ದ, ಅದು ಅವನು ಮಾಡಿದ ತಪ್ಪು. ಮಾಡುತ್ತಿರುವುದು!? ಅದೂ ಸರಿಯಿಲ್ಲ. ಅವನಿಗೆ ಬದುಕುವ ನೀತಿ ತಿಳಿದಿಲ್ಲ. ನಾನು ಬದುಕುವ ನೀತಿಯನ್ನು ಅರಿತವ. ನಾನೇಕೆ ಅವನಂತಾದೆ? ನನ್ನವರೆನ್ನುವವರು ಇದನ್ನು ಸಹಿಸಬಹುದೇ? ನನ್ನ ಮನಸ್ಸೇ ಇದನ್ನು ದೂರುತ್ತಿದೆಯೆಂದಾದರೆ ನನ್ನ ಜೊತೆಯವರು ಏನೆನ್ನಬಹುದು? ಅವರೆದುರು ನಾನು ತಲೆ ತಗ್ಗಿಸಿ ನಿಲ್ಲಬೇಕೆ? ವಿಶ್ವಾತ್ಮ ಯೋಚಿಸುತ್ತಿದ್ದ. ಮುಗ್ಧ ಮನಸ್ಸು ಅವನಿಗೆ ಕೊನೆಯ ಅವಕಾಶವೆಂಬಂತೆ ಪಕ್ಕದಲ್ಲಿ ಕುಳಿತಿತ್ತು. ವಯೊಲಿನ್ ರಾಗವೊಂದನ್ನು ನವಿರಾಗಿ ನುಡಿಸುತ್ತಿತ್ತು. ಅಂತಃಕರಣವನ್ನು ವಿಶ್ಲೇಷಿಸಲು, ಆಂತರ್ಯವನ್ನು ಅಳೆದು ತೂಗಲು ಸಂಗೀತ ಕೊಡುವ ಸಾಂಗತ್ಯವೇ ಹಿತ. ಸಂಗೀತವೊಂದು ಕೇಳುತ್ತಿರುವಾಗ ಕೆಟ್ಟದ್ದನ್ನು ಕಲ್ಪಿಸುವುದು ಕಷ್ಟ. ಇಂಥದಕ್ಕೆ ಸಂಗೀತ ಸೃಷ್ಟಿಯಾದದ್ದು.

ನೋವುಗಳಿಗೆ ನಲಿವಿನ ಸೃಷ್ಟಿಯಾದದ್ದು.
ಈಗ…?? ಸಂಗೀತವೆಂಬುದು ಬರೀ ಸಂಗೀತವಾಗಿ, ಕೃತಿಯಾಗಿ, ಸಂಯಮವಾಗಿ ಉಳಿದಿಲ್ಲ. ವಿಶ್ವಾತ್ಮ ತನ್ನಂತರಂಗದ ಇನ್ನೂ ಆಳಕ್ಕೆ ಇಳಿಯತೊಡಗಿದ. ಮನಸ್ಸು ಪಕ್ಕ ಕುಳಿತು ಸುಮ್ಮನೆ ನೋಡುತ್ತಿತ್ತು.

ಆತ್ಮ ವಿಮರ್ಶೆಯ ಮಹಾಪರ್ವ.
ಬದುಕಿನ ರೀತಿಯ, ಬದುಕಿದ ರೀತಿಯ ಸಾಕ್ಷಾತ್ಕಾರ. ಜೀವನದ ದಾರಿಯುದ್ದಕ್ಕೂ ಮಾಡಿದ್ದೇನೆಂದು ತಿಳಿಯಬೇಕಾದರೆ ಆತ್ಮ ವಿಮರ್ಶೆಯಿಂದ ಮಾತ್ರ ಸಾಧ್ಯ. ಎದುರಿನವರು ಹೊಗಳಿದ್ದರಿಂದ ಅಥವಾ ತೆಗಳಿದ್ದರಿಂದ, ಇನ್ನಾರಿಂದಲೋ ಕೇಳಿದ್ದರಿಂದ ಅಥವಾ ಹೇಳಿದ್ದರಿಂದ “ನನ್ನತನ” ತಿಳಿಯುವುದಿಲ್ಲ. ಏನು ಮಾಡಿದೆ? ಈಗ ಮಾಡುತ್ತಿರುವುದೇನು? ಮುಂದೆ ಏನು ಮಾಡಬಹುದು? ಎಲ್ಲವೂ ತಿಳಿದಿರುವುದು ಅವರವರಿಗೆ ಮಾತ್ರ.
ಹಳೆಯದನ್ನು ನೆನಪುಗಳಲ್ಲಿ ಹಸಿರಾಗಿಸಬಹುದು.
ಭವಿಷ್ಯತ್ತನ್ನು ಕನಸುಗಳಲ್ಲಿ ಬರೆದುಕೊಳ್ಳಬಹುದು.
ಅದಕ್ಕೆ ಆತ್ಮದ ಮಾತು ಕೇಳಬೇಕು. ಎಲ್ಲಕ್ಕೂ ಆತ್ಮದ ವಿಮರ್ಶೆ ಅಗತ್ಯ. ಅದೂ ಒಳ್ಳೆಯ ಮತ್ತು ನಿಜದ ರೂಪದಲ್ಲಿರಬೇಕು.

ಮನಸ್ಸೆಂಬುದು ಚಂಚಲ;
ಮನುಷ್ಯನೂ ಸ್ಥಿರವಲ್ಲ.
ನಿಜವನ್ನು ಸುಳ್ಳಾಗಿಯೂ, ಸುಳ್ಳನ್ನು ನಿಜವೆಂಬಂತೆಯೂ ಬೇಕು ಬೇಡಗಳಿಗನುಸಾರವಾಗಿ ಕಲ್ಪಿಸುವ ಸಾಮರ್ಥ್ಯ ಮನಸ್ಸಿಗೆ, ಮನುಷ್ಯನಿಗೆ.
ಅದೆಲ್ಲವನ್ನು ದಾಟಿದ ಮಹಾಸ್ಥಿತಿಯೇ ಬದುಕುವ ನೀತಿ.
ಬದುಕುವ ನೀತಿ ಕಳಿಸಿ ಬರುವಂಥದ್ದಲ್ಲ;
ಕಂಡು ಕಲಿತುಕೊಳ್ಳುವುದು ಕಷ್ಟವೇ.

ಬದುಕುವ ನೀತಿ ಉಸಿರಿನಿಂದಲೇ ಬರಬೇಕು. ಬದುಕುವ ನೀತಿ ರಕ್ತದಿಂದಲೇ ಬರುತ್ತದೆ. ಪ್ರತಿಯೊಂದು ಜೀವ, ನಿರ್ಜೀವಗಳಲ್ಲೂ ರಕ್ತವಿದೆ. ಹೆಸರಿರುವ ಎಲ್ಲ ಅಸ್ತಿತ್ವಗಳೂ ಉಸಿರಾಡುತ್ತವೆ. ಆದರೆ ರೀತಿ ಬೇರೆಯಷ್ಟೆ. ಸತ್ಯವೆಂದರೆ ವಿಶ್ವದಲ್ಲಿ ನಿರ್ಜೀವಗಳೇ ಇಲ್ಲ.
ವಿಶ್ವಾತ್ಮನ ಸೃಷ್ಟಿ ಎಲ್ಲವೂ ಉಸಿರಾಡುತ್ತದೆ. ಆದರೆ ಎಲ್ಲರೂ ಅದನ್ನು ಗುರುತಿಸಲಾರರು. ಎಲ್ಲರೂ ಬದುಕುತ್ತಾರೆ, ಬದುಕಿನ ಅರ್ಥ ಹೇಳುವುದು ಸುಲಭ, ಅರ್ಥೈಸಿಕೊಳ್ಳುವುದು ಕಷ್ಟ. ಅದಕ್ಕೆ ತೆರೆದ ಕಣ್ಣುಗಳು ಬೇಕು. ತಿಳಿಯಾದ ಮನಸ್ಸು, ವಿಶಾಲ ಹೃದಯ ಬೇಕು ಬದುಕನ್ನು ತಿಳಿಯಲು, ತಿಳಿಯಾಗಿಸಿಕೊಳ್ಳಲು….
ವಿಶ್ವಾತ್ಮನಿಗೆ ತನ್ನ ಪೂರ್ವಜರು ಹೇಳಿದ ನೀತಿಗಳೆಲ್ಲ ನೆನಪಿಗೆ ಬರತೊಡಗಿದವು ಮೊದಲ ಉಸಿರಿನಿಂದ.. ರಕ್ತದ ಕಣ ಕಣಗಳಿಂದ…. ಕಣ್ಣಾಲಿಗಳು ತೇವಗೊಂಡವು.
ಅಷ್ಟು ವರ್ಷ ಜೊತೆಯಿರುವವರನ್ನು ಏಕೆ ದೂರ ಮಾಡಿ ಓಡಿ ಬಂದೆ? ಇಷ್ಟು ದೂರ ಬಂದು ನನ್ನದೆಂಬಂತೆ ಒಂದು ಪ್ರಪಂಚವನ್ನು ಸೃಷ್ಟಿಸಿದೆ, ಭಾವನೆ, ಪ್ರೀತಿ ಸ್ನೇಹದ ಭಾವಗಳನ್ನು ಚಿಗುರಿಸಿದೆ. ಶಾಂತಿ, ಸಹನೆ, ಸಹಬಾಳ್ವೆಯ ನೀತಿ ತುಂಬಿದೆ. ಇಂಥದೇ ಪ್ರಪಂಚ ಬೇಕೆಂದು ಎಲ್ಲವನ್ನೂ ಸೃಷ್ಟಿಸಿದೆ.
ಸೃಷ್ಟಿಸುವುದು ಎಂದರೆ ಏನು? ನಾನೇನು ದೇವರಾ?

ವಿಶ್ವಾತ್ಮನಿಗೇ ನಗು ಬಂತು. ಕಣ್ಣಾಲಿಗಳು ಮತ್ತೂ ತೇವಗೊಂಡವು. ಅದೂ ಸಹ ಒಂದು ಅನಿರ್ವಚನೀಯ ಸ್ಥಿತಿಯೇ. ಅತಿಯಾದ ಹಿಗ್ಗು ಕಂಗಳನ್ನು ತುಂಬಿಸಿಬಿಡುತ್ತದೆ, ಆನಂದ ಭಾಷ್ಪ ಸುರಿಸುತ್ತದೆ. ದುಃಖದ ಪರ್ವದಲ್ಲೂ, ಏನು ಮಾಡಬೇಕೆಂದು ತಿಳಿಯದ ನೋವಿನಲ್ಲೂ ಕಂಗಳು ತುಂಬಿ ಬರುತ್ತವೆ. ಹಿಂದೆಯೇ ಸಣ್ಣದೊಂದು ನಗು, ವಿಷಾದದ ಛಾಯೆ.
ಆತಿಯಾದ ನೋವಿಗೂ ಮತ್ತು ಪರಿಪೂರ್ಣ ಆನಂದಕ್ಕೂ ಜೀವ ಒಂದೇ ರೀತಿ ಪ್ರತಿಕ್ರಿಯಿಸಬೇಕು. ಪ್ರತಿಕ್ರಿಯಿಸಬೇಕೆಂದು ಕ್ರಿಯಿಸುವುದಲ್ಲ. ಜೀವನದ ಸಹಜ ಪ್ರತಿಕ್ರಿಯೆಯೇ ಅದು.
ಅದೇ ಬದುಕುವ ನೀತಿ;
ಭವ್ಯ ಬದುಕಿನ ರೀತಿ.

ದುಃಖಕ್ಕೂ ಸುಖಕ್ಕೂ ಒಂದೇ ತೆರನಾಗಿ ಪ್ರತಿಕ್ರಿಯಿಸುವುದು. ಅದೊಂದು ನೆಮ್ಮದಿಯ ಸ್ಥಿತಿ. ಏನೇ ಆದರೂ ಎಲ್ಲದಕ್ಕೂ ಒಂದೇ ರೀತಿಯಲ್ಲಿ ತೆರೆದುಕೊಳ್ಳುವ ಸ್ಥಿತಿ.
ಎಲ್ಲದರಲ್ಲೂ ಒಂದಾಗುವ ಭಾವ.
ಆತ್ಮದ ಮಹಾಸಮಾಧಿ;
ಮನಸ್ಸಿನ ಸುಪ್ತ ಸನ್ಯಾಸ.
ಜೀವಗಳು ಬದುಕಿರುವಾಗ ಕೂಡ ನಿರ್ಲಿಪ್ತವಾಗಿದ್ದರೆ ಸಾವು ಮತ್ತು ಬದುಕಿನ ನಡುವಿನ ಅಂತರ ಕಡಿಮೆಯಾಗುತ್ತದೆ. ಅಂತರವೇ ಇಲ್ಲವಾಗುತ್ತದೆ.
ಎರಡೂ ಒಂದೇ;
ಎಲ್ಲವೂ ಒಂದೇ.
ಎಲ್ಲವನ್ನೂ ಮೀರಿದ ಸ್ಥಿತಿ ಅದು.
ವಿಶ್ವಾತ್ಮನಿಗೆ ಗುರುವಿನ ಮಾತುಗಳೇ ನೆನಪಾಗುತ್ತಿದ್ದವು. ಮರೆತ ಗುರು ಮತ್ತೆ ನೆನಪಾದ.
ವಿಶ್ವಾತ್ಮನಿಗೆ ಗುರುವಿದ್ದ;
ಅವನ ಗುರುವಿಗೆ ಕೂಡ ಗುರುವಿದ್ದ,
ಪ್ರತಿಯೊಬ್ಬನಿಗೂ ಗುರು ಬೇಕು.

ವಿಶ್ವಾತ್ಮನಿಗೆ ಕೂಡ ಸಂಬಂಧಗಳು, ಬಂಧನಗಳು ಎಲ್ಲ ಇವೆ. ಅವೆಲ್ಲ ಎಲ್ಲಿ ಮೊದಲ್ಗೊಂಡಿದ್ದು? ಎಲ್ಲದಕ್ಕೂ ಉತ್ತರಗಳಿರಬಹುದು, ಇಲ್ಲ ಇವೆ. ಆದರೆ ಅದು ಸಾಮಾನ್ಯನಿಗೆ ತಿಳಿಯುವುದೇ ಇಲ್ಲ. ಆಳಕ್ಕಿಳಿಯಬೇಕು, ಎತ್ತರಕ್ಕೇರಬೇಕು. ಎಷ್ಟೆಂದರೆ ಇಳಿದು ನೋಡು, ಎತ್ತರವ ಮೀರಿ ನೋಡು. ಸಮಸ್ಯೆಗಳು ಎಷ್ಟು ಜಟಿಲವೆಂದರೆ ಅದೇ ಸಮಸ್ಯೆಗಳಲ್ಲಿ ಸಿಲುಕಿ ನೋಡಬೇಕು. ಪ್ರಶ್ನೆ ಎಷ್ಟು ಸುಲಭ ಅಥವ ಅಲ್ಲ ಎನ್ನಲು ಉತ್ತರಿಸಿಯೇ ತಿಳಿಯಬೇಕು…. ಗುರುವಿನ ಮಾತುಗಳು. ನೆನಪಿನ ಮರೆಯಿಂದ ಹೃದಯದ ಕಡೆಗೆ.

ವಿಶ್ವಾತ್ಮ ತಲೆ ಕೊಡವಿದ. ಹಳೆಯ ದಿನಗಳ ಬಗ್ಗೆ ಯೋಚಿಸುವ ಸಮಯವಲ್ಲ ಇದು. ವಿಪರೀತತೆಯ ಪರ್ವದಿಂದ ಕೆಳಗಿಳಿಯಬೇಕು, ಬದುಕುಳಿಯಬೇಕು… ಎಲ್ಲವೂ.. ಎಲ್ಲರೂ… ಹೇಗೆಂದು ಯೋಚಿಸತೊಡಗಿದ ವಿಶ್ವಾತ್ಮ.

ಸಮಸ್ಯೆ ಎಲ್ಲರಿಗೂ ಬರುತ್ತದೆ, ಹೊರಬರಲು ದಾರಿ ಇರುತ್ತದೆ. ಹುಡುಕಿ ಹೊರಟವರು ಕಡಿಮೆ. ವಿಶ್ವಾತ್ಮ ಕೂಡ ಸಮಸ್ಯೆಯಲ್ಲಿ ಸಿಕ್ಕಿಬಿದ್ದ. ಎತ್ತ ನೋಡಿದರೂ ಸಾಯುವ ಮುಖಗಳು, ಅವುಗಳನ್ನು ಕೊಳ್ಳಲು ಬರುತ್ತಿರುವ ಕಪ್ಪುರಂಧ್ರದ ಜೀವಿಗಳು. ಭೂಮಿಯ ಜೀವಿಗಳಲ್ಲಿ ಸಾಮರ್ಥ್ಯ ಉಳಿಸಿಕೊಂಡಿರುವುದು ಮನುಷ್ಯ ಮಾತ್ರ.
ಅವನೂ ಒಬ್ಬಂಟಿ.

ಏಕಾಂಗಿ ಹೋರಾಟಕ್ಕೆ ಅಂತ್ಯ ಬೇಗ.
ಉಳಿದ ಗ್ರಹಗಳ ಜೀವಿಗಳನ್ನು ಎದುರಿಸಿ ನಿಲ್ಲುವುದು ಯಾರು? ಸಾಧ್ಯವಿಲ್ಲ ಭೂಮಿಯ ಅಂತ್ಯವಿದು. ನಾನೇನು ಮಾಡಲಾರೆ.
ಯಾಕೆ? ಯಾರೂ ಏನನ್ನೂ ಮಾಡಲು ಶಕ್ತರಿಲ್ಲ. ಎಲ್ಲವೂ ಮುಗಿಯಿತು. ಯಾರ ಸ್ವಾರ್ಥ? ಯಾವುದಕ್ಕೆ ಪ್ರತಿಫಲ? ಯಾರ ಮೇಲಿನ ನಿಷ್ಠುರ? ಕೊನೆಯಲ್ಲಿ ಉಳಿಯುವುದು ಏನು?

ವಿಶ್ವಾತ್ಮ ದೊಡ್ಡದಾಗಿ ನಗತೊಡಗಿದ. ಅತಿಯಾದ ಒತ್ತಡದಿಂದ ಏನು ಮಾಡಬೇಕೆಂದು ತಿಳಿಯದ ಸ್ಥಿತಿ.
ಎಲ್ಲವನ್ನೂ ತಿಳಿದಿರುವ ವಿಶ್ವಾತ್ಮ, ಎಲ್ಲರನ್ನೂ ಸೃಷ್ಟಿಸಿದ ವಿಶ್ವಾತ್ಮ ಅವನೇ ಏನು ಮಾಡಬೇಕೆಂದು ಅರ್ಥವಾಗದ ಸ್ಥಿತಿಗೆ ಬಂದಿದ್ದ.
ಆತ ನಿರಾಳವಾಗಿ ಯೋಚಿಸಿದರೆ ಸಮಸ್ಯೆಯಿಂದ ಬಲು ಸುಲಭವಾಗಿ ಹೊರಬರಬಹುದಿತ್ತು. ವಿಶ್ವಾತ್ಮ ಹಾಗೆ ಮಾಡಲಿಲ್ಲ. ಸಾವಿರ ಯೋಚನೆಗಳು ಅವನ ತಲೆ ಹೊಕ್ಕಿದ್ದವು. ತಾನು ತಪ್ಪು ಮಾಡಿದೆ ಎಂಬ ಭಾವ, ಇನ್ನೊಮ್ಮೆ ಯಾವುದು ತಪ್ಪು? ಆಗಬೇಕಾದದ್ದೇ ಆಗುತ್ತಿದೆ ಎಂಬ ಆಲೋಚನೆ. ತಾನೇ ಹುಟ್ಟಿಸಿದ ಜೀವಿಗಳನ್ನು ಕೂಡ ಕೊಲ್ಲುವಂತಿಲ್ಲ ಅದೂ ಪಾಪ ಎಂಬ ಕ್ರೋಧ. ತನ್ನವರಿಗೆ ಏನು ಹೇಳಬೇಕೆಂಬ ಮಂದ್ರ ಯೋಚನೆ.

ಮುಗ್ಧ ಮನಸ್ಸಿಗೆ ವಿಶ್ವಾತ್ಮನ ಪರಿಸ್ಥಿತಿ ಅರ್ಥವಾಯಿತು. “ಯೋಚಿಸುವುದನ್ನು ನಿಲ್ಲಿಸು ವಿಶ್ವಾತ್ಮ ಇಲ್ಲವಾದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವೆ ಗೆಳೆಯಾ ಶೂನ್ಯನಾಗು ಒಮ್ಮೆ” ಚೀರಿತು.
ವಿಶ್ವಾತ್ಮ ಅದೆಲ್ಲದರಿಂದ ದೂರ ಸಾಗಿದ್ದ. ವಯೊಲಿನ್ ನಾದ ಕೂಡ ನಿಂತು ಹೋಗಿತ್ತು. ಅವನಿಗೆ ಕೇಳುವುದು ಕೇಳುತ್ತಿಲ್ಲ ಅಷ್ಟೆ. ವಿಶ್ವಾತ್ಮನ ದೇಹದ ಹಾವಭಾವ ಬದಲಾಗುತ್ತ ಹೋಯಿತು.

ಭೂಮಿಯನ್ನು ರಕ್ಷಿಸಿಕೊಳ್ಳಬಲ್ಲ ಒಬ್ಬನೇ ಒಬ್ಬ ಸಮರ್ಥ ಜೀವಿ ತನ್ನದೆಲ್ಲವನ್ನು ಕಳೆದುಕೊಂಡು ಬುದ್ಧಿಯ ಸ್ಥಿಮಿತದ ವೃತ್ತದಾಚೆ ನಿಂತು ಬಡಬಡಿಸುವವನಂತೆ ಕುಸಿದು ಕುಳಿತ. ಕೊನೆಯಲ್ಲಿ ಉಳಿಯುವುದು ಏನು? ಕೊನೆಯಲ್ಲಿ ಉಳಿಯುವುದಾದರೂ ಏನು??
ವಿಶ್ವಾತ್ಮನ ದೇಹದಿಂದ ಬಂದ ಸಣ್ಣನೆಯ ಮುಲುಗುವಿಕೆ “ಬದುಕುವ ನೀತಿ, ಬದುಕುವ ನೀತಿ ಮಾತ್ರ” ಎಂದಿತು ಅಂತರಾಳದಲ್ಲಿನ ಮನಸ್ಸು.
” ಇಲ್ಲ ಕೊನೆಯಲ್ಲಿ ಉಳಿಯುವುದು ಮಹಾಕತ್ತಲು, ಶಾಶ್ವತ ಕತ್ತಲು” ಎನ್ನುತ್ತಾ ವಿಶ್ವಾತ್ಮ ಗಾಢ ನಿಶೆಗೆ ಜಾರಿದ. ಕಂಗಳು ಕೂಡಿಕೊಂಡವು.
ಅಸ್ಪಷ್ಟತೆಯಿಂದ ಅಗೋಚರದೆಡೆಗೆ.

ಭೂಮಿಯ ಮೇಲಿನ ಬೆಳಕು ಪ್ರಕಾಶಿಸುತ್ತಲೇ ಇತ್ತು. ಅರ್ಧ ಜೀವ ಹಿಡಿದ ಸಾಯುತ್ತಿರುವ ಮುಖಗಳು ವಿಶ್ವಾತ್ಮನ ಸ್ಥಿತಿಗೆ ಬೆರಗಾದವು, ಪರಿಸ್ಥಿತಿಗೆ ಮರುಗಿದವು.
ಎಲ್ಲರನ್ನೂ ಸೃಷ್ಟಿಸಿದ ಮಹಾತೇಜಸ್ಸು;
ವಿಶ್ವದ ಕಾರಣೀಭೂತನಾದ ದಿವ್ಯತೇಜಸ್ಸು.

ಸೃಷ್ಟಿಸುವುದು ಎಂದರೆ ಏನು? ಅದೊಂದು ಪವಿತ್ರವಾದ ಪ್ರಚೋದನೆ ಮತ್ತು ಪ್ರತಿಕ್ರಿಯೆ. ಬದುಕಿನಧ್ಯಾಯದ ಮಹತ್ತರ ಕರ್ಮ, ಯಾವುದನ್ನು ಇಲ್ಲವೇ ಎಲ್ಲವನ್ನೂ ಇದ್ದ ಸ್ಥಿತಿಯಲ್ಲಿ ಇಡದೆ ಮತ್ತೊಂದರೆಡೆಗೆ ತುಡಿಯುವಂತೆ ಮಾಡುವ ಪ್ರಚೋದನೆ. ಜನನ, ಮರಣ, ಬದುಕು, ಬದುಕಿನಾಚೆ ಎಲ್ಲವೂ ನಿಂತಿರುವುದು ಪ್ರಚೋದನೆ ಮತ್ತು ಪ್ರತಿಕ್ರಿಯೆಯಿಂದ.

ಅದೇ ಇಲ್ಲವಾದಲ್ಲಿ ಎಲ್ಲವೂ ಮಣ್ಣಾಗಿಬಿಡುತ್ತಿತ್ತೇನೋ?
ಅಲ್ಲೂ ಅದೇ ಪ್ರಚೋದನೆ ಪ್ರತಿಕ್ರಿಯೆಗಳೇ.
ಬದುಕಲ್ಲಿ ನಡೆಯುವ ಪ್ರತೀ ಕ್ರಿಯೆಯು ಯಾವುದೋ ಒಂದಕ್ಕೆ ಪ್ರಚೋದನೆ, ಪ್ರತೀ ಪ್ರಚೋದನೆಯೂ ಪರಿಪೂರ್ಣ ಪ್ರತಿಕ್ರಿಯೆ.
ವಿಶ್ವಾತ್ಮ ಮತ್ತೂ ಆಳಕ್ಕೆ ಜಾರುತ್ತಿದ್ದ;
ಭೂಮಿಯ ಮೇಲಿನ ಬೆಳಕು ಎಲ್ಲವನ್ನೂ ಮೀರುತ್ತಿತ್ತು.
ಸಾಯುವ ಮುಖಗಳು ಬಾಡುತ್ತಲೇ ಇದ್ದವು;
ನಿರಂತರತೆಯ ಅಧ್ಯಾಯ ಸಾಗುತ್ತಲೇ ಇತ್ತು ಅಂತ್ಯದ ಕಡೆಗೆ.
ಎಲ್ಲರ ಮನದಲ್ಲೂ ಒಂದೇ ಪ್ರಶ್ನೆ!!!
ಮುಂದೇನು!!???

ಮುಂದುವರಿಯುವುದು…

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..