ಅದೊಂದು ದಿನ ಬೆಳಿಗ್ಗೆ ಸುಮಾರು ಮೂರು ಗಂಟೆಗೆ ಗಾಢ ನಿದ್ದೆಯಲ್ಲಿದ್ದ ನನ್ನ ಯಾರೋ ಎಬ್ಬಿಸಿದಂತಾಗಿ,ಬೆಚ್ಚಿಬಿದ್ದು ಎದ್ದುಕೂತೆ.ಸುತ್ತ ನೋಡ್ತೀನಿ ಯಾರೂ ಇಲ್ಲ! ಕನಸೋ? ಮಲಗಿದೆ… ಸ್ವಲ್ಪ ಹೊತ್ತಿನಲ್ಲಿ ‘ಪಲ್ಲವೀ’ಎಂದು ಯಾರೋ ಕರೆದಂತಾಯ್ತು, ಭಯವೂ ಆಯ್ತು. ಭೂತ? ಒಬ್ಬಳೇ ಇರುವ ಕೋಣೆಯ ಗೋಡೆಗಳಿಗೆ ಮಾತು? ಉತ್ತರ ಸಿಗದ ಪ್ರಶ್ನೆಯೊಂದಿಗೆ ಬೆಳಕು ಹರಿದಿತ್ತು. ಇನ್ನೂ ಏನೋ ಒಂದು ಮೌನ ನನ್ನ ಕಾಡುತ್ತಲೇ ಇತ್ತು. ಅಸಮಾಧಾನಲ್ಲಿದ್ದ ನನ್ನ ಕೆಣಕಿದ ಕಂಪನಿ ಕ್ಯಾಬ್, ಅಯ್ಯೋ..ಎಂದು ಎದ್ದು ಓಡಿದೆ.. ಬಂದೆ ಮಹಾರಾಯ ಸ್ವಲ್ಪ ನಿಲ್ಲು ,ಅಂತ ಗೊಣಗುತ್ತಾ ಹತ್ತುಕೂತೆ. ಕಿವಿಯಲ್ಲಿ ಹಾಡೇನೋ ಗೊನಗುತ್ತಿತ್ತು.ಸುತ್ತ ನೋಡುತ್ತಿದ್ದ ಕಂಗಳಿಗೆ ಏನೂ ಕಾಣಿಸುತ್ತಿರಲಿಲ್ಲ. ದಾರಿಯ ನಡುವಣ ಉಬ್ಬುಗಳು ಅಲ್ಲಲ್ಲಿ ನನ್ನ ಆತ್ಮವನ್ನ ಎಚ್ಚರಿಸುತ್ತಿತ್ತು.ರಾತ್ರಿ ನಿದ್ದೆಯಿರದ ಕಾರಣ ಅಲ್ಲೇ ಜೀವ ನಿದ್ದೆಗೆ ಜಾರಿತ್ತು.ಅದ್ಯಾವುದೋ ಸಿಗ್ನಲ್ ಹತ್ತಿರ ಬ್ರೇಕ್ ಹಾಕಿದ ಅನುಭವ, ಕಣ್ಣು ಬಿಟ್ಟು ನೋಡಿದರೆ ಬಸ್ಸಿನ ಸುತ್ತ ಗುಳ್ಳೆಗಳು. ಗುಳ್ಳೆ ಕಡ್ಡಿ ಮಾರುವ ಹುಡುಗಿಯೊಬ್ಬಳು ಎಲ್ಲಾ ಗಾಡಿಗಳ ಮುಂದೆ ನಿಂತು ಗುಳ್ಳೆ ಬಿಡುತ್ತಿದ್ದಳು.ನನಗೋ ಒಡೆವ ಗುಳ್ಳೆಗಳೇ ಕಾಣಿಸುತ್ತಿದ್ದವು..ಇಷ್ಟೊಂದು ನಕಾರಾತ್ಮಕ ಮನಸ್ಸು?? ಕೆಲಸದಲ್ಲಿ ತೊಡಗಿದ್ದರೂ ಅದ್ಯಾವುದೋ ಗುಂಗಿನಲ್ಲಿಯೇ ಇದ್ದೆ.ಅದೇ ಗುಂಗಿನಲ್ಲಿ ರಾತ್ರಿ ಹಿಂದಿರುಗಿ ಹೊರಟಾಗ ‘ಒಂದು ಗಳಿಗೆ ನಿಲ್ಲಿ… ಇದೋ ಇಲ್ಲಿ? ಕೇಳಿ ಒಂದೇ ಒಂದು ನಿಮಿಷ…!’ ಯಾರೋ ಕೂಗಿದ, ಬೇಡಿದ ದನಿ, ನನಗೆ ಮಾತ್ರ ಕೇಳಿಸಿತ್ತು.
ಭಯದಲ್ಲೇ ಬಂದು ಹಾಸಿಗೆಗೆ ತಲೆಕೊಟ್ಟೆ..’ಪಲ್ಲವೀ’ ಎಂಬ ಅದೇ ಧ್ವನಿ… ಹುಂ??? ಯಾರು ? ಏನು? ಎಂದೆ. ನಾನು ಕಣೇ ನಿನ್ನ ಹಾಗೇ ಒಂದು ಹೆಣ್ಣು. ಹೆಸರಿನಲ್ಲೇನಿದೆ? ಬೆಳಿಗ್ಗೆಯಿಂದ ನಿನ್ನ ಕಾಡುತ್ತಿರುವ,ನನ್ನ ಮಾತನ್ನ ಕೇಳಿಸಿಕೊಳ್ಳುವವರು ಇಲ್ಲಿ ಯಾರೂ ಇಲ್ಲ. ನಾ ಬಿಡುವ ಗುಳ್ಳೆಯೊಳಗೆ ಕಾಣುವ ಕಾಮನ ಬಿಲ್ಲಿನ ಬಣ್ಣವನ್ನ ನೋಡಿ ಆನಂದಿಸುತ್ತಾರೆ ವಿನಃ ,ನಿನ್ನ ಹಾಗೆ ಒಡೆವ ಗುಳ್ಳೆಯ ನೋಡಿ ,ಮರುಗಿ,ಸ್ಪಂದಿಸುವವರಿಲ್ಲ.ನನ್ನ ಕೂಗಿಗೆ ಹಿಂದಿರುಗಿ ನಿಲ್ಲುವವರೂ ಇಲ್ಲ. ಅದಕ್ಕೇ ನಿನ್ನಲ್ಲಿ ಬಂದೆ ಎಂದಳು… ಹಾಗೇ ಎದ್ದು ಗೋಡೆಗೆ ಬೆನ್ನೊಡ್ಡಿ ಎದುರಿನ ಖಾಲಿ ಗೋಡೆಯೆಡೆಗೆ ನೋಡುತ್ತಾ ಕೂತೆ. ನಮ್ಮಿಬ್ಬರ ನಡುವೆ ಕ್ಷಣದಲ್ಲಿ ಆತ್ಮೀಯತೆ ಚಿಗುರಿತ್ತು. ಅವಳು ನನ್ನ ಕೈ ಹಿಡಿದು,ನನ್ನ ಮಡಿಲಿನಲ್ಲಿ ಮಲಗಿ ಮಾತನ್ನ ಮುಂದುವರೆಸಿದ್ದಳು.. ಹೀಗೆ ಅಮ್ಮನ ಮಡಿಲನ್ನು ಕಾಣುವ ಮೊದಲೇ ನಾನು ಹೆಣ್ಣೆಂದು ತಿಳಿದ ಬಳಗ ನನ್ನ ತೊಟ್ಟಿಗೆ ಎಸೆದು,ಅಮ್ಮನನ್ನ ಚಿತೆಗೆ ಏರಿಸಿದ್ದರು.ಹಸಿದ ಈ ಶಿಶುವಿನ ಕೂಗಿಗೆ ಅಲ್ಲಿ ಯಾರೂ ಕಿವಿಗೊಡಲಿಲ್ಲ, ಅಮ್ಮನ ಕನಸುಗಳಿಗೆ ಯಾರೂ ಕಣ್ಣಾಗಲಿಲ್ಲ… ಯಾವುದೋ ಅಗೋಚರ ಒಲವಿನ ಮರೆಯಲ್ಲಿ ಬೆಳೆಯುತ್ತಿದ್ದೇನೆ. ಸುತ್ತಲೂ ಮುತ್ತಿರುವ ಮುಳ್ಳು ತಂತಿಗಳು ನನ್ನ ಪರಚುತ್ತಿವೆ,ನಾ ಬಿಡುವ ಗುಳ್ಳೆಗಳ ಒಡೆಯುತ್ತಿವೆ.. ಐದನೇ ವಯಸ್ಸಿನಲ್ಲಿದ್ದ ನನ್ನ ಯಾರೋ ಹಾಸಿಗೆಗೆ ಎಳೆದು,ಮೂರು ತಾಸು ಹೊರಳಾಡಿಸಿ ಬಿಟ್ಟನಂತೆ. ಎಚ್ಚರವಿಲ್ಲದ ನಾನು ಆಸ್ಪತ್ರೆಯಲ್ಲಿದ್ದೆ.ಅಳುತ್ತಿದ್ದೆ ಏಕೆಂದರೆ ಅರಿವೇ ಇಲ್ಲದ ನೋವು,ಜೊತೆಗೆ ಪೋಲೀಸರು,ಡಾಕ್ಟರ್ ಕೈಯಲ್ಲಿರುವ ಸೂಜಿ ನನ್ನಲ್ಲೆ ಭಯ ಹುಟ್ಟಿಸಿತ್ತು.. ಅಮ್ಮಾ ಎಂದು ಅಳುತ್ತಿದ್ದರೆ ಬಳಿ ಬಂದು ಬೆಚ್ಚಗಿನ ತೋಳು ನೀಡುವ ಅಮ್ಮನಿರಲಿಲ್ಲ.. ಬಳಗದವರಿಗೆ ಎತ್ತಿಕೊಳ್ಳಲು ಕೈಗಳಿರಲಿಲ್ಲ… ಏನಾಗಿದೆಯೆಂಬ ಪರಿವೇ ಇಲ್ಲದ ಮುಗ್ಧ ಶಿಶು ನಾನು. ಬೆಳೆದು ಜಗತ್ತಿನ ಅರಿವಾದಾಗ,ನನ್ನ ಹೊರಳಾಡಿಸಿದ ಆ ನೆನಪು,ಪರಿವೇ ಇಲ್ಲದ ಬಾಲ್ಯದಲ್ಲಿ ನಡೆದ ಆ ಘಟನೆ ಅತ್ಯಾಚಾರವೆಂದು ತಿಳಿದಾಗ ಮಾತು ಹೊರಡದೆ ,ನನ್ನ ಎಸೆದಿದ್ದ ತೊಟ್ಟಿಯ ಮಡಿಲ ಸೇರಿ ಬಿಕ್ಕೀ ಬಿಕ್ಕಿ ಅಳುತ್ತದ್ದೆ. ಅಮ್ಮಾ ಎಂದಾಗ, ‘ಮಗಳೇ ಕ್ಷಮಿಸು’ ಎಂದು ಅಸಹಾಯಕಳಾಗಿದ್ದಳು.
ನನ್ನಲ್ಲಿರುವ ನೋವು ಕೋಪವಾಗಿ, ಕೈಯಲ್ಲಿ ಕತ್ತಿ ಹಿಡಿದು ಕಂಡ ಕಂಡ ಗಂಡಸರನ್ನೆಲ್ಲಾ ಕಡಿದು ಹಾಕಬೇಕೆಂದು ಹೊರಟಿತ್ತು.. ಮೊದಲೆದುರಾದ ಅವನಲ್ಲಿ ಹುಟ್ಟಿಸಿದ ತಂದೆ ಕಂಡ. ಏನಿಲ್ಲವೆಂದರೂ ಅಪ್ಪನೆಂಬ ಪ್ರೀತಿ ಆವರಿಸಿತ್ತು. ಕತ್ತಿ ಕಡಿಯಲೊಲ್ಲೆ ಎಂದಿತ್ತು.. ಮುಂದೆ ಹೊರಟೆ ಅವನಲ್ಲಿ ಮುದ್ದಾಡಿ ಕಥೆ ಹೇಳುವ ಅಜ್ಜನೊಬ್ಬ ಕಂಡ, ಇನ್ನೊಬ್ಬನಲ್ಲಿ ಬೈಗುಳದಲ್ಲೂ ಪೊರೆದು ಪ್ರೀತಿಸುವ ಅಣ್ಣ, ಮತ್ತೊಬ್ಬನಲ್ಲಿ ಗೋಳಾಡಿಸುವ ತಮ್ಮ, ಇನ್ನೊಬ್ಬನಲ್ಲಿ ಆಪ್ತ ಗೆಳೆಯ…. ಯಾರನ್ನೂ ಕಡಿಯಲೊಲ್ಲೆ ಎಂದ ಕತ್ತಿ ನೆಲವನಪ್ಪಿತ್ತು. ಹೆಣ್ಣೇ ಹೀಗೆ ಕಣೇ ಸಂಬಂಧಗಳನ್ನ ಬೇಡುತ್ತೆ ಮನಸ್ಸು.. ಪ್ರೀತಿಯ ಸಂಗವನ್ನೇ ಬಯಸುತ್ತಾಳೆ. ಆದರೆ? ಎಳೆದಾಡಿ ಹೊರಳಾಡುವ ಆ ಗಂಡಸಿಗೇಕೆ ಹೆಣ್ಣನ್ನು ನೋಡಿದಾಗ, ತನ್ನ ತಾಯಿಯೋ,ಅಕ್ಕ ತಂಗಿಯೋ,ಅಪ್ಪಾ ಎನ್ನುವ ಮಗಳೋ, ಅಜ್ಜಾ ಎನ್ನುವ ಮೊಮ್ಮಗಳೋ, ಗೆಳತಿಯೋ, ನಂಬಿ ಬಂದ ಸಂಗಾತಿಯೋ ಎದುರಾಗುವುದಿಲ್ಲ? ಎಂದ ಅವಳು ನನ್ನಲ್ಲಿ ಸಾವಿರ ಪ್ರಶ್ನೆಗಳನ್ನು ಸುರಿಸಿ ನನ್ನ ಮಡಿಲಿನಲ್ಲೇ ನಿದ್ದೆಗೆ ಜಾರಿದ್ದಳು. ಗೋಡೆಗೆ ಬೆನ್ನೊಡ್ಡಿದ್ದ ನಾನು ಹೆಣ್ತನಕ್ಕೆ ಧಿಕ್ಕರಿಸುವುದೋ? ಗಂಡಸರನ್ನು ಧಿಕ್ಕರಿಸುವುದೋ? ಗೊಂದಲದಲ್ಲಿ ಬೆಳಕಿಗಾಗಿ ಕಾಯುತ್ತಿದ್ದೆ.
-ಪಲ್ಲವಿ ಹೆಗಡೆ
Facebook ಕಾಮೆಂಟ್ಸ್