ಅದು ಹಳೆಯದಾದ ಈಗಲೋ ಆಗಲೋ ಕುಸಿಯುವ ಸ್ಥಿತಿಯಲ್ಲಿರುವ ಮನೆ.. ಅಲ್ಲಿ ಒಂದಿಷ್ಟು ಜನ ಗುಂಪು ಗುಂಪಾಗಿ ನಿಂತುಕೊಂಡು ಗೌರಿಯ ಕಡೆ ಅನುಕಂಪದಿಂದ ನೋಡುತ್ತಿದ್ದಾರೆ. ತಲೆಗೆ ಏಟು ಬಿದ್ದು ತುಂಬಾ ರಕ್ತಸ್ರಾವವಾಗಿ, ಕೊನೆಯುಸಿರೆಳೆಯುವ ಹಂತದಲ್ಲಿದ್ದಾಳೆ ಗೌರಿ. ಅವಳನ್ನು ಬದುಕಿಸಿಕೊಳ್ಳುವ ಸಲುವಾಗಿ ಇಬ್ಬರು ಮಹಿಳೆಯರು ಅವಳನ್ನು ಎಚ್ಚರತಪ್ಪಂದತೆ ಅವಾಗವಾಗ ಮಾತಾಡಿಸುತ್ತಿದ್ದಾರೆ. ಆಂಬುಲೆನ್ಸ್ ಗೆ ಪೋನ್ ಮಾಡಿ 1/2ಗಂಟೆಯಾದ್ರೂ ಯಾರೂ ಪತ್ತೆಯಿಲ್ಲ.. ಅಲ್ಲೇ ಪಕ್ಕದಲ್ಲಿ ಗೌರಿಯ ಮಗ ಮಂಜು ಕುಡಿತದಮಲಿನಲ್ಲಿ ತೂರಾಡುತ್ತಿದ್ದಾನೆ. ಅವನನ್ನು ಒಂದಿಬ್ಬರು ಹಿಡಿದುಕೊಂಡಿದ್ದಾರೆ. ಈ ಗೌರಿಗೆ ಈ ಸ್ಥಿತಿ ಬರಲು ಅವನೇ ಕಾರಣವೆಂದು ಮಹಿಳೆಯೆಲ್ಲರೂ ಅವನಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹೌದು, ಹೆಂಡ ಕುಡಿಯಲು ಹಣ ಕೊಡಲಿಲ್ಲವೆಂದು ಅಮಲಿನಲ್ಲಿ ಕಬ್ಬಿಣದ ಸಲಾಕೆಯಲ್ಲಿ ಮಂಜುವೇ ಗೌರಿಯ ತಲೆಗೆ ಬಲವಾಗಿ ಹೊಡೆದ ಪರಿಣಾಮ ಗೌರಿ ಸಾಯುವ ಹಂತದಲ್ಲಿದ್ದಾಳೆ. ಇತ್ತ ಗೌರಿ ಅಷ್ಟು ಪೆಟ್ಟಾದರೂ ತನ್ನ ಮಗನಿಗೆ ಏನೂ ಮಾಡಬೇಡಿ ಎಂದು ಕ್ಷೀಣ ಧ್ವನಿಯಲ್ಲಿ ಹೇಳುತ್ತಿದ್ದಾಳೆ.. ಗೌರಿಯ ಕಣ್ಗಳು ನಿಧಾನವಾಗಿ ಮಂಜಾಗುತ್ತಾ ಬಂತು. ಎದುರಿಗಿದ್ದವರೆಲ್ಲಾ ಮಸುಕಾಗಿ ಕಾಣುತ್ತಿತ್ತು. ಆದರೂ ಕಣ್ತೆರೆಯಲು ಯತ್ನಿಸುತ್ತಿದ್ದಳು. ಪಕ್ಕದಲ್ಲೇ ಇದ್ದ ಮಹಿಳೆ ಜೋರಾಗಿ ಕಿರುಚಿತ್ತಿದ್ದರೂ ಎಲ್ಲೋ ದೂರದಲ್ಲಿ ನಿಂತು ಏನೋ ಹೇಳುತ್ತಿರುವಂತೆ ಕೇಳಿಸುತ್ತಿತ್ತು. ಆಗ ಅವಳು ತನ್ನ ಸಾವು ಸಮೀಪಿಸಿತೆಂದು ತಿಳಿದು, ಆ ಸಾಯುವ ಗಳಿಗೆಯಲ್ಲಿ ತನ್ನ ಹಿಂದಿನ ಜೀವನದ ಕ್ಷಣಗಳನೆಲ್ಲಾ ನೆನಪಿಸಿಕೊಳ್ಳತೊಡಗಿದಳು…
ಬಾಲ್ಯ..
ವೆಂಕಯ್ಯ ಹೆಗಡೆ ಹಾಗು ನಾಗವೇಣಿ ದಂಪತಿಗಳಿಗೆ ನಾಲ್ಕನೆಯವಳಾಗಿ ಹುಟ್ಟಿದವಳು ಈ ಗೌರಿ.ಮೊದಲ ಮೂರು ಹೆಣ್ಣು ಆದರೂ ನಾಲ್ಕನೇಯದಾದ್ರೂ ಗಂಡಾಗ್ಲಿ ಎಂದು ಆಶಿಸಿದ್ದ ವೆಂಕಯ್ಯ ಹೆಗಡೆಯವರಿಗೆ ಮತ್ತೆ ನಿರಾಸೆಯಾಯ್ತು.. ಆದ್ರೆ ವೆಂಕಯ್ಯ ಹೆಗ್ಡೇರು ಹೆಣ್ಣು ಮಕ್ಕಳೆಂದು ಅವರನ್ನು ಕಡೆಗಣಿಸದೇ ತಾನು ಮಾಡುವ ಶಿಕ್ಷಕ ವೃತ್ತಿಯಲ್ಲಿ ಬರುವ ವೇತನದಲ್ಲೇ ಆದಷ್ಟು ಚೆನ್ನಾಗಿ ನೋಡುಕೊಳ್ಳುತ್ತಿದ್ದರು. ಆಗಿನ ಕಾಲದಲ್ಲಿ ಕುಟುಂಬ ಯೋಜನೆಗಳು ಇರ್ಲಿಲ್ವೋ ಅಥವಾ ಜನಸಾಮಾನ್ಯರು ಅದನ್ನು ಪಾಲಿಸುತ್ತಿರಲಿಲ್ವೊ ಗೊತ್ತಿಲ್ಲಾ, ಗೌರಿ ಹುಟ್ಟಿದ ಮೇಲೆ ಮತ್ತೆರಡು ಗಂಡುಮಕ್ಕಳಿಗೆ ತಂದೆತಾಯಿಯಾಗಿದ್ದರು ಈ ವೆಂಕಯ್ಯ ಹೆಗಡೆ ದಂಪತಿಗಳು.! ಗೌರಿ ಹುಟ್ಟಿದ ಮೇಲೆ ತಮಗೆ ಗಂಡು ಸಂತಾನ ಪ್ರಾಪ್ತಿಯಾಯ್ತೆಂದು ವೆಂಕಯ್ಯ ಹೆಗ್ಡೇರಿಗೆ ಗೌರಿಯ ಮೇಲೆ ವಿಶೇಷವಾದ ಪ್ರೀತಿಯಿತ್ತು
ಹೀಗೇ ಕಷ್ಟದಲ್ಲೇ ಅವರ ಜೀವನ ಸಾಗುತ್ತಿತ್ತು. ತಂದೆ ಶಿಕ್ಷಕರಾದ್ರೂ ಒಬ್ಬ ಮಕ್ಕಳಿಗೂ ವಿದ್ಯೆ ತಲೆಗೆ ಹತ್ತಲಿಲ್ಲ. ಇದ್ದುದ್ದರಲ್ಲಿ ಐದನೇವ ಅಂದ್ರೆ ಗಣೇಶ ಮಾತ್ರ ಕಾಲೇಜ್ ಮೆಟ್ಟಿಲು ಹತ್ತಿದ್ದು, ಇಲ್ಲಿ ಗಣೇಶನದ್ದೇ ಒಂದು ಆಸಕ್ತಿಯುಳ್ಳ ವಿಷಯ, ಗಣೇಶ ರಜನಿಕಾಂತ್ ಅವ್ರ ಅಭಿಮಾನಿ, ಅವರ ಮೇಲಿನ ಅಭಿಮಾನದ ಕಾರಣಕ್ಕೇ ಬಸ್ ಕಂಡಕ್ಟರ್ ಆಗಬೇಕೆಂದು ಕನಸು ಕಂಡಿದ್ದ, ಅದಕ್ಕಾಗಿಯೇ ಅರ್ಜೀಯನ್ನು ಕಳುಹಿಸಿದ್ದ, ಕೊನೆ ವೇಳೆಗೆ ಏನೋ ತೊಂದರೆಯಾಗಿ ಆವನ ಕನಸು ಕನಸಾಗಿಯೇ ಉಳಿಯಿತು. ರಜನಿಕಾಂತ್ ಅವರ ಥರ ಶಿಳ್ಳೆ ಹಾಕುವುದು, ಅದ್ಯಾವ್ದೋ ಕಾರಣಕ್ಕೆ ಬಲಗೈಗೆ ವಾಚ್ ಕಟ್ಟುವುದನ್ನು ಅಭ್ಯಾಸ ಮಾಡಿಕೊಂಡಿದ್ದ..!! ಹೆಗ್ಡೇರ ಮನೆಲಿ ವಾರಕೊಮ್ಮೆ ಮಾತ್ರ ಬೆಳಗ್ಗಿನ ತಿಂಡಿಗೆ ದೋಸೆ ಮಾಡುತ್ತಿದ್ದರು.
ಅದೂ ಪ್ರತಿಯೊಬ್ಬರಿಗೂ ಒಂದುವರೆ ದೋಸೆ ಮಾತ್ರ,!! ಬೆಟ್ಟಕ್ಕೆ ಹೋಗಿ ಸೊಪ್ಪಿನ ಹೊರೆಯನ್ನು ಯಾರು ಜಾಸ್ತಿ ತರುತ್ತಾರೋ ಅವ್ರಿಗೆ ಅರ್ಧ ದೋಸೆ ಜಾಸ್ತಿ.! ಆ ಅರ್ಧ ದೋಸೆಗಾಗಿ ಕಲ್ಲುಮುಳ್ಳು ಲೆಕ್ಕಿಸದೇ ಮೈಕೈಯೆಲ್ಲಾ ತರಚಿಕೊಂಡು ತಾ ಮುಂದು ನಾ ಮುಂದು ಎನ್ನುತ್ತಾ 2-3ಸೊಪ್ಪಿನ ಹೊರೆ ತರುತ್ತಿದ್ದರು. ಅದರಲ್ಲಿ ವಿಜಯಿಯಾಗುತ್ತಿದ್ದದ್ದು ಗೌರಿ ಮಾತ್ರ… ಅವಳು ವಿದ್ಯಾಭ್ಯಾಸದಲ್ಲಿ ಹಿಂದಿದ್ದರೂ ಕೆಲಸದಲ್ಲಿ ಮುಂದಿದ್ದಳು. ಅಡಿಗೆ ಮಾಡುವುದು, ಕೊಟ್ಟಿಗೆ ಕೆಲ್ಸ, ಅಡಿಕೆ ಸುಲಿಯುವುದು, ಕಟ್ಟಿಗೆ, ಸೊಪ್ಪು ತರುವುದು ಹೀಗೆ ಯಾವ ಕೆಲಸವೂ ಗೊತ್ತಿಲ್ಲ ಎನ್ನುವಂತಿರಲಿಲ್ಲ.
ಹೀಗೇ ಒಂದು ದಿನ ಮಕ್ಕಳೆಲ್ಲಾ ಸೇರಿಕೊಂಡು ಗಣೇಶನ ಒತ್ತಾಯದ ಮಣಿದು ಅಪ್ಪ ಅಮ್ಮಂಗೆ ವಿಷ್ಯ ತಿಳಿಸದೇ 8ಕಿಮಿ ದೂರದಲ್ಲಿದ್ದ ಟೆಂಟ್ ಒಂದರಲ್ಲಿ ಬಂದಿದ್ದ ರಜನಿಕಾಂತ್ ಫಿಲ್ಮ್ ನೋಡಲು ಹೋಗಿದ್ದರು, ಅಪ್ಪ ಶಾಲೆಯಿಂದ ಬರುವುದ್ರೊಳಗೆ ಮನೆಗೆ ಬಂದು ಮುಟ್ಟುವ ಯೋಜನೆ ಅವರದಾಗಿತ್ತು, ಆದ್ರೆ ಅವರ ಗ್ರಹಚಾರಕ್ಕೆ ಆವತ್ತು ಹೆಗ್ಡೇರು ಬೇಗ ಬಂದಿದ್ದರು, ಮಕ್ಕಳು ಮಾಡಿದ ಸಾಹಸ ತಿಳಿಯುತ್ತಿದ್ದಂತೆ ಅವರು ಬರುವುದನ್ನೇ ಕಾಯುತ್ತಿದ್ದರು. ಮಕ್ಕಳು ಓಡೋಡಿ ಬಂದಾಗ ಮನೆ ಬಾಗಿಲಲ್ಲಿ ಅಪ್ಪನ ಸೈಕಲ್ ಕಂಡು ಎಲ್ಲರೂ ಒಮ್ಮೆ ದಂಗಾಗಿ ಬೆವತು ಹೋಗಿದ್ದರು. ಅಷ್ಟರಲ್ಲಿ ಹೆಗ್ಡೇರು ಬಂದು ಎಲ್ರಿಗೂ ಬಾರ್ಕೋಲಿನಲ್ಲಿ ಭಾರಿಸತೊಡಗಿದರು, ಅಷ್ಟು ಸಾಲದೆಂಬಂತೆ ಎಲ್ಲರನ್ನೂ ಎಳೆದುಕೊಂಡು ಹೋಗಿ ಮರಕ್ಕೆ ಕಟ್ಟಿಹಾಕಲು ಯತ್ನಿಸಿದಾಗ, ಗಣೆಶ ಅವರನ್ನು ತಡೆದು ತಾನು ಹೇಳಿದಕ್ಕೆ ಅವ್ರು ಬಂದಿದ್ದೆಂದು ಹೇಳಿದಾಗ ಅವನಿಗೆ ಮತ್ತೆರಡು ಹೊಡೆದು, ಅವನೊಬ್ಬನನ್ನೇ ಮರಕ್ಕೆ ಕಟ್ಟಿಹಾಕಿ ಬೆಲ್ಲದ ನೀರನ್ನು ಅವನ ಮೈಮೇಲೆಲ್ಲಾ ಸಿಂಪಡಿಸಿ ಚಗಳಿ ಗೂಡನ್ನು ಅವನ ಮೇಲೆ ಕೊಡವಿದರು.
ಆಗ ಅದನ್ನು ನೋಡಲಾಗದೇ ಗೌರಿ ಅಳುತ್ತಾ ಅಪ್ಪನ ಕಾಲಿಗೆ ಬಿದ್ದು ಇನ್ಮೇಲೆ ಈಥರ ತಪ್ಪು ಮಾಡುವಿದಿಲ್ಲವೆಂದು ಗೋಗೆರೆದಾಗ ಹೆಗ್ಡೇರು ಶಾಂತರಾಗಿ ಅವನನ್ನು ಬಿಟ್ಟರು, ಅದೇ ಕೊನೆ ಗೌರಿ ಟೆಂಟಲ್ಲಿ ಸಿನೆಮಾ ನೋಡಿದ್ದು.. ಹೀಗಿರುವಾಗ ಹೆಗ್ಡೇರು ಹಿರಿಯ ಮಗಳು ಸವಿತಾಳನ್ನು ಹಾಗೋ ಹೀಗೋ ಸಾಲ ಶೂಲ ಮಾಡಿ ಮದುವೆ ಮಾಡಿಕೊಟ್ಟರು, ಆಗ ಕಿರಿಯವಳಾದ ಗೌರಿ ಅಕ್ಕನ ಮನೆಯಲ್ಲೇ ಜಾಸ್ತಿ ದಿನ ಕಳೆಯುತ್ತಿದ್ದಳು. ಅಕ್ಕ ಗರ್ಭಿಣಿಯಾದಗ ಅಕ್ಕನ ಆರೈಕೆ, ಮಕ್ಕಳ ಆರೈಕೆ ಎಲ್ಲಾ ಇವಳೇ ನೋಡುಕೊಂಡಿದ್ದಳು. ಹಾಗೇ ಸವಿತಾ ತನ್ನ ಮೂರನೇ ಮಗುವಿಗೆ ತಾಯಿಯಾಗಿ ಸ್ವಲ್ಪದಿನದಲ್ಲೇ ಏನೋ ಖಾಯಿಲೆ ಬಂದು ತೀರಿಹೋದಳು. ಆ ನಂತರ ಆ ಮಕ್ಕಳ ಸಂಪೂರ್ಣ ಜವಬ್ದಾರಿಯನ್ನು ಇವಳೇ ವಹಿಸಿಕೊಂಡಂತಾಗಿತ್ತು.ಹೀಗೇ ಮೂರ್ನಾಲ್ಕು ವರ್ಷ ಕಳೆಉವುದೊರಳಗೆ ಗೌರಿಯ ಇನ್ನಿಬ್ಬರು ಅಕ್ಕಂದೀರ ಮದುವೆಯೂ ಆಯ್ತು.ಇನ್ನು ಗೌರಿಯ ಸರದಿ, ಗೌರಿ ಆಗ ಮಾತ್ರ 19ಮೆಟ್ಟಿ 20ನೇ ವಯಸ್ಸಿಗೆ ಕಾಲಿಟ್ಟಿದ್ದಳು.
ಆ ವಯಸ್ಸಿನಲ್ಲಿ ಎಲ್ಲಾ ಹುಡುಗಿಯರಿಗೂ ಇರುವಂತೆ ಅವಳಿಗೂ ಅನೇಕ ಆಸೆ ಕನಸುಗಳಿದ್ದವು. ತಾನು ಮದುವೆಯಾಗೋ ಹುಡುಗ ನೋಡೋಕೆ ಚೆನ್ನಾಗಿರ್ಬೇಕು, ಹಣವಂತನಾಗಿಲ್ಲದಿದ್ರೂ ಪರ್ವಾಗಿಲ್ಲ ಗುಣವಂತನಾಗಿರ್ಬೇಕು. ತನ್ನನ್ನು ಚೆನ್ನಾಗಿ ನೋಡಿಕೊಳ್ಬೇಕು, ಅದು ಇದು ಅಂತ ಸುಮಾರು ಕನಸುಗಳನ್ನು ಕಂಡಿದ್ದಳು. ವೆಂಕಯ್ಯ ಹೆಗ್ಡೇರೂ ತನ್ನ ಮುದ್ದಿನ ಮಗಳಿಗೆ ಒಳ್ಳೇ ಗಂಡು ಹುಡುಕಬೇಕೆಂದು ಶತಪ್ರಯತ್ನ ಮಾಡುತ್ತಿದ್ದಾಗ, ಅವರ ಪರಿಚಯದವರೊಬ್ಬರು, ಒಬ್ಬ ಹುಡುಗನಿದ್ದಾನೆ, ಪ್ರೈಮರಿ ಸ್ಕೂಲ್ ಟೀಚರ್ ಆಗಿ ಕೆಲ್ಸ ಮಾಡ್ತಿದ್ದಾನೆ ಅಂತ ಹೇಳಿದ ಕೂಡಲೇ ಹೆಗ್ಡೇರು ತನ್ನ ಮಗಳ ಜಾತಕ ಆತನ ಜಾತಕ ಪರಿಶೀಲಿಸಿ ಜಾತಕ ಕೂಡಿಬಂದ ಸುದ್ದಿ ತಿಳಿದಾಕ್ಷಣ ಆ ಹುಡುಗನನ್ನು ತಂದೆ ತಾಯಿಯೊಂದಿಗೆ ಬರಲು ಹೇಳಿ ಕಳಿಸಿದರು.ಒಂದು ಶುಭದಿನದಲ್ಲಿ ಆ ಹುಡುಗ ಗೌರಿಯನ್ನು ನೋಡಲು ಬಂದ, ಜೊತೆಗೆ ತನ್ನ ಚಿಕ್ಕಪ್ಪ ಚಿಕ್ಕಮ್ಮನನ್ನು ಕರೆತಂದಿದ್ದ, ತಂದೆಯಿಲ್ಲದ ಕಾರಣ ತಾಯಿ ಶುಭ ಕಾರ್ಯಕ್ಕೆ ತಾನು ಬರುವುದಿಲ್ಲವೆಂದು ಹೇಳಿದ್ದರು, ಹೆಗ್ಡೇರ ಮನೆಯವರಿಗೆಲ್ಲರಿಗೂ ಗಂಡು ಒಪ್ಪಿಗೆಯಾಗಿತ್ತು, ಗೌರಿಯೂ ಸಹ ಒಪ್ಪಿದ್ದಳು, ಹೆಗ್ಡೇರು, ಹುಡುಗ ಟೀಚರ್ ಅಂತ ಗೊತ್ತಾದಾಗ ಹುಡುಗ ಒಳ್ಳೆಯವನೇ ಆಗಿರುತ್ತಾನೆ ಅಂತಾ ಜಾಸ್ತಿ ಹುಡುಗನ ಬಗ್ಗೆ ವಿಚಾರಿಸುವುದಕ್ಕೆ ಹೋಗ್ಲಿಲ್ಲ. ಮತ್ತೊಂದು ದಿನ ನಿಶ್ಚಿತಾರ್ಥ ಮುಗಿಸಿ, ಚೈತ್ರ ಮಾಸದಲ್ಲಿ ಮದುವೆ ದಿನಾಂಕ ಗೊತ್ತು ಮಾಡಿದಾಗ ಹೆಗ್ಡೇರ ಮುಖದಲ್ಲಿ ವಿಶ್ವ ಮಹಾಯುದ್ಧ ಗೆದ್ದ ಸಂತಸ ಕಾಣುತ್ತಿತ್ತು. ತಮ್ಮ ಪ್ರೀತಿಯ ಮಗಳ ಮದುವೆಯನ್ನು ಆಗಿನ ಕಾಲಕ್ಕೆ ಅದ್ಧೂರಿ ಎನ್ನುವಂತೆ ಮಾಡಿಕೊಟ್ಟರು..ಆದ್ರೆ ವಿಧಿಯಾಟ ಬೇರೇಯೇ ಇತ್ತು…!
ಗೌರಿಯ ವೈವಾಹಿಕ ಜೀವನ.
ಗೌರಿ ಮದುವೆಯಾಗಿ ತನ್ನ ಮನಸಿನಲ್ಲಿ ನೂರಾರು ಕನಸುಗಳನ್ನಿಟ್ಟುಕೊಂಡು ತವರುಮನೆ ಬಿಟ್ಟು ಗಂಡನೆ ಮನೆಗೆ ಬಂದಳು.ಆದ್ರೆ ಅದೇ ದಿನ ರಾತ್ರಿಯೇ ಗೌರಿ ಕಂಡ ಕನಸೆಲ್ಲವೂ ನುಚ್ಚುನೂರಾಗಿ ಹೋಯ್ತು.ಹಾಲಿನ ಲೋಟ ಹಿಡಿದುಕೊಂಡು ತುಸು ನಾಚಿಕೆಯಿಂದ ಗಂಡನ ಕೋಣೆಗೆ ಬಂದಾಗ ಏನೋ ಕೆಟ್ಟ ವಾಸನೆ ಬರುತ್ತಿತ್ತು, ಆ ವಾಸನೆಗೆ ಗೌರಿಗೆ ತಲೆಸುತ್ತಿದಂತಾಗುತ್ತಿತ್ತು.ಆದ್ರೂ ಧೈರ್ಯ ಮಾಡಿ ಒಳಗೆ ಬಂದಾಗ ಗೌರಿಯ ಗಂಡ ಶಂಕರ ಸರಾಯಿ ಕುಡಿದುಕೊಂಡು ಇವಳು ಬರುವಷ್ಟರಲ್ಲಿ ಲೋಕದ ಪರಿವೆಯಿಲ್ಲದಂತೆ ಮಲಗಿಕೊಂಡಾಗಿತ್ತು.ಗೌರಿ ಹಾಲನ್ನು ಪಕ್ಕಕ್ಕಿಟ್ಟು ಗಂಡನನ್ನು ಎಬ್ಬಿಸಲು ಪ್ರಯತ್ನಿಸಿದಳು.ಆದ್ರೆ ಶಂಕರ ಅಮಲಿನಲ್ಲೇ ತೊದಲು ನುಡಿಯಲ್ಲಿ ಏನೇನೋ ಹೇಳುತ್ತಾ ಗೌರಿಯನ್ನು ದೂರಕ್ಕೆ ತಳ್ಳಿದ, ಮಂಚದಿಂದ ಕೆಳಕ್ಕೆ ಬಿದ್ದ ಗೌರಿ ತನ್ನ ಬಾಳು ಹೀಗಾಯ್ತಲ್ಲಾ ಎಂದು ಕಣ್ಣೀರಿಡುತ್ತಾ, ಅಲ್ಲೇ ಕೆಳಗೆ ಚಾಪೆ ಹಾಕಿಕೊಂಡು ಮಲಗಿಕೊಂಡಳು.ಈಗಿನ ಕಾಲದಲ್ಲಾಗಿದ್ರೆ ಎರಡೇ ದಿನದಲ್ಲಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸುತ್ತಿದ್ದಳೇನೋ ಗೌರಿ, ಆದ್ರೆ ಈ ಘಟನೆ ನೆಡೆದಿದ್ದು ಸುಮಾರು 25ವರ್ಷಗಳ ಹಿಂದೆ .ಅದಲ್ಲದೇ ಪಾಪ ಗೌರಿ ಅಷ್ಟೋಂದು ಧೈರ್ಯವಂತೆಯಲ್ಲ, ಮುಗ್ಧ ಸ್ವಭಾವದವಳು, ಮೇಲಾಗಿ ಸಂಸ್ಕಾರವಂತಳು..ಹೀಗೇ ಕುಡಿತ ಬಿಡಿಸುವ ಪ್ರಯತ್ನದಲ್ಲಿ ಬೇಕು ಬೇಡಗಳ ಜಗಳ ನೆಡೆಯುತ್ತಿತ್ತು,ಈ ನಡುವೆ ಇಲ್ಲೆ ನೆಡೆಯುತ್ತಿರುವ ವಿದ್ಯಮಾನಗಳೆಲ್ಲವನ್ನೂ ಗೌರಿ ತಮ್ಮ ಗಣೇಶನಿಗೆ ಪತ್ರದ ಮೂಲಕ ತಿಳಿಸುತ್ತಿದ್ದಳು, ಗಣೇಶ ಎಷ್ಟೋ ಸಲ ಅಕ್ಕನನ್ನು ಮನೆಗೆ ಬಂದುಬಿಡು ಎಂದು ಪತ್ರ ಬರೆದಿದ್ದ, ಆದ್ರೆ ಗೌರಿ ಹಾಗೆ ಮಾಡದೇ ತನ್ನ ಗಂಡನನ್ನು ಹೇಗಾದ್ರೂ ಮಾಡಿ ಬದಲಿಸುವ ಪ್ರಯತ್ನದಲ್ಲಿದ್ದಳು.ಹೀಗಿರುವಾಗ ಗೌರಿಗೆ ತನ್ನ ಗಂಡ ಶಂಕರನ ಬಗ್ಗೆ ಎರಡು ವಿಚಾರಗಳು ತಿಳಿದು ತನ್ನ ಹಣೆಬರಹಕ್ಕೆ ದೇವರನ್ನು ಶಪಿಸುತ್ತಾ ದಿನ ಕಳೆಯುತ್ತಿದ್ದಳು,ಅವಳ ಪುಣ್ಯವೋ ಏನೋ ಆಕೆಯ ಅತ್ತೆ ತುಂಬಾ ಒಳ್ಳೆಯವರಾಗಿದ್ದರು, ಆಕೆಯೊಡನೆ ತನ್ನ ಕಷ್ಟಸುಖಗಳನೆಲ್ಲಾ ಹಂಚಿಕೊಳ್ಳುತ್ತಿದ್ದಳು.ಶಂಕರ ಸ್ಕೂಲ್ ಟೀಚರ್ ಎನ್ನುವುದು ಬರೀ ಕಟ್ಟುಕಥೆಯಾಗಿತ್ತು, ಮತ್ತು,ಹಿಂದೊಮ್ಮೆ ಕುಡಿತದಮಲಿನಲ್ಲಿ ರಸ್ತೆಯ ಪಕ್ಕದಲ್ಲಿದ್ದ ಆಳವಾದ ಹಳ್ಳಕ್ಕೆ ಬಿದ್ದು ಅವನ ಮರ್ಮಾಂಗಕ್ಕೆ ಪೆಟ್ಟು ಬಿದ್ದು ಜೀವನದಲ್ಲಿ ಎಂದೂ ಸ್ತ್ರೀ ಸುಖ ಅನುಭವಿಸಂದಂತಾಗಿದ್ದ…!!!
ಒಂದುದಿನ ಶಂಕರ ಮನೆಗೆ ಬಂದ ಹೆಂಡದ ವಾಸನೆ ಗೌರಿಗೆ ಉಸಿರುಕಟ್ಟುವಂತೆ ಮಾಡುತ್ತಿತ್ತು,ಶಂಕರನ ಜೊತೆ ಬಂದಿದ್ದ ಇನ್ನೊಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಸಿ, ಆತನಿಗೆ ತೆಂಗಿನಕಾಯಿ ಬೇಕು ತಂದುಕೊಡು ಎಂದೆನ್ನುತ್ತಾ ಆಕೆಯನ್ನು ಕಾಯಿ ರಾಶಿ ಹಾಕಿಟ್ಟ ಕೋಣೆಗೆ ಕಳುಹಿಸಿದ, ಅವಳು ಹೋದಕೂಡಲೇ ಇವರಿಬ್ಬರು ಅವಳ ಹಿಂದೇ ಹೋಗಿ ಶಂಕರ ತನ್ನ ಜೊತೆಯಲ್ಲಿ ಬಂದಿದ್ದ ವ್ಯಕ್ತಿಯನ್ನು ಆ ಕೋಣೆಗೆ ತಳ್ಳಿ ಹೊರಗಿನಿಂದ ಚಿಲಕ ಹಾಕಿಕೊಂಡು ಮತ್ತೆ ಬಾಟಲೇರಿಸುತ್ತಾ ಕುಳಿತ,ಹೆಂಡದ ಆಸೆಗೆ ಸ್ವಂತ ಹೆಂಡತಿಯನ್ನೇ ಬೇರೆಯವರು ಸುಖಿಸುವಂತೆ ಮಾಡಿದ್ದ.. ಗೌರಿಯ ಗ್ರಹಚಾರವೆಂಬಂತೆ ಆದಿನ ಆಕೆಯ ಅತ್ತೆಯೂ ಇರಲಿಲ್ಲ. ಗೌರಿ ಕೂಗಿಕೊಂಡಳು, ಕಿರುಚಿದಳು, ಬಾಗಿಲನ್ನು ಪದೆ ಪದೆ ಬಡಿಯುತ್ತಿದ್ದಳು,ಆದ್ರೂ ಅದ್ಯಾ ದೂ ತನಗೆ ಕೇಳಿಸುತ್ತಿಲ್ಲವೆಂಬಂತೆ ಕೂತಿದ್ದ ಶಂಕರ, ಸ್ವಲ್ಪ ಹೊತ್ತಿನ ಬಳಿಕ ಆ ವ್ಯಕ್ತಿ ಶಂಕರನನ್ನು ಕರೆದು ಹೊರಗೆ ಬಂದು ಬಾಕಿ ಉಳಿದ ಹಣವನ್ನು ಕೊಟ್ಟು ಹೋದ..ಆ ಬಳಿಕ ಗೌರಿ, ಮೈಮೇಲೆಲ್ಲಾ ತರಚಿದ, ಗಿಬರಿದ, ಕಚ್ಚಿದ ಗಾಯಗಳೊಂದಿಗೆ ಸೀರೆಯನ್ನು ಸರಿಮಾಡಿಕೊಳ್ಳುವಷ್ಟು ತ್ರಾಣವಿಲ್ಲದೇ ನಿಧಾನವಾಗಿ ಹೊರಬಂದು ಗಂಡನ ಮುಖ ನೋಡಿದಳು,ಶಂಕರ ದುಡ್ಡು ಎಣಿಸುತ್ತಾ ಹೇಗಿತ್ತು ಎಂಬಂತೆ ಸನ್ನೆ ಮಾಡಿದ.ಅವಳು ದುಃಖ ಉಮ್ಮಳಿಸಿ ಬಂದು ಅಳುತ್ತಾ ಮನೆಯೊಳಗೆ ಹೋದಳು.ಈ ವಿಷಯವನ್ನು ಬೇರೆ ಯಾರಲ್ಲೂ ಹೇಳೋಕೆ ಹೋಗ್ಲಿಲ್ಲ ಗೌರಿ.ಗೌರಿ ಎಷ್ಟೇ ಪ್ರಯತ್ನ ಪಟ್ಟರೂ ಶಂಕರನನ್ನು ತಿದ್ದಲು ಆಗಲೇ ಇಲ್ಲ..
ಈ ನಡುವೆ ಗರ್ಭಿಣಿಯಾದ ಅವಳು ತನ್ನ ತವರು ಮನೆಗೆ ಬಂದಳು.ಅಮ್ಮನ ನೋಡಿದೊಡನೇ ತನ್ನೆಲ್ಲಾ ಕಷ್ಟಗಳನ್ನು ಹೇಳಿಕೊಂಡು ಮನಸಾರೆ ಅತ್ತುಬಿಡುವ ಮನಸಾದರೂ ಗೌರಿ ತಡೆದುಕೊಂಡು ಸುಮ್ಮನಿದ್ದಳು.ಅವಳ ಕಷ್ಟಗಳೆಲ್ಲವೂ ಗೊತ್ತಿದ್ದ ಗಣೇಶ ಮಾತ್ರ ಅವಳನ್ನು ನೋಡಿದೊಡನೆ ಅವಳ ಕೈ ಹಿಡಿದುಕೊಂಡು ಚಿಕ್ಕ ಮಕ್ಕಳ ಹಾಗೆ ಅಳಲಾರಂಭಿಸಿದ..ಗಂಡನ ಮನೆಯಲ್ಲಿ ಸುಮ್ಮನಿದ್ದ ಗೌರಿ ತವರು ಮನೆಯಲ್ಲಿ ತನ್ನ ಹೊಟ್ಟೆಯಲ್ಲಿರುವ ಮಗು ಬೇಡವೆಂದು ಅದನ್ನು ನಾಶಪಡಿಸಲು ಸುಮಾರು ಪ್ರಯತ್ನ ಮಾಡಿದ್ದಳು.3-4 ಸಲ ಆತ್ಮಹತ್ಯೆಗೂ ಯತ್ನಿಸಿದ್ದಳು.ಒಮ್ಮೆ ಹೀಗೇ ಮನೆ ಎದುರಿಗಿರುವ ಬಾವಿಯಲ್ಲಿ ಹಾರಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಕುದ್ದು ವೆಂಕಯ್ಯ ಹೆಗ್ಡೇರೇ ಬಂದು ಅವಳನ್ನು ಬಾವಿಗೆ ತಳ್ಳಿದ್ದರು.!! ಆಗ ಗಣೇಶ ಬಾವಿಗೆ ಹಾರಿ ಗೌರಿಯನ್ನು ರಕ್ಷಿಸಿದ್ದ.. ಅಂತೂ ಇಂತೂ ಎಷ್ಟೇ ಪ್ರಯತ್ನಿಸಿದರೂ ವಿಫಲಳಾದ ಗೌರಿ ಮಗುವನ್ನು ಹೆರುವ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದಳು. ಹೊಟ್ಟೆಗೆ ತುಂಬಾನೇ ಪೆಟ್ಟು ಮಾಡಿಕೊಂಡ ಕಾರಣ ಮಗು ಜನನ ಕಾಲದಲ್ಲಿ ಬಹಳ ನೋವನ್ನನುಭವಿಸಿದಳು. ಹೆಚ್ಚುಕಮ್ಮಿ ಒಂದು ತಿಂಗಳು ಗೌರಿ ಆಸ್ಪತ್ರೆಯಲ್ಲೇ ಇದ್ದಳು. ಅದೇ ಸಮಯದಲ್ಲಿ ಗಣೇಶ ತನ್ನ ಓದನ್ನು ನಿಲ್ಲಿಸಿ ಹಗಲಿರುಳು ಅಕ್ಕನ ಸೇವೆ ಮಾಡಿದ್ದ ,ಕೆಲವೊಮ್ಮೆ ಅವಳ ಒಳಉಡುಪನ್ನು ತೊಳೆಯಲೂ ಹಿಂಜರಿಯಲ್ಲಿಲ್ಲ. ಇತ್ತ ಮಗುವಿಗೆ ಹಾಲುಣಿಸದಷ್ಟು ಗೌರಿ ನಿಶ್ಯಕ್ತಳಾಗಿದ್ದರಿಂದ ಅವಳಮ್ಮ ನಾಗವೇಣಿ ಬಾಟಲಿಯಲ್ಲಿ ಹಾಲು ತುಂಬಿಸಿ ಸೆರಗಿನಲ್ಲಿಟ್ಟುಕೊಂಡು ಮಗುವಿಗೆ ಕುಡಿಸುತ್ತಿದ್ದಳು.
ಗಂಡ ಎನಿಸಿಕೊಂಡ ಶಂಕರ ತನ್ನದಲ್ಲದ ಮಗುವನ್ನು ಮುದ್ದಾಡಿ’ನಂಗೆ ಮಾಣಿ ಹುಟ್ಟಿದ್ದ’ ಎಂದು ಖುಷಿ ಪಡುತ್ತಿದ್ದ..! ಒಂದು ದಿನ ವೆಂಕಯ್ಯ ಹೆಗ್ಡೆರ ಬಳಿ ಬೇರೆಯವರ ಕುತಂತ್ರದಿಂದ ತನ್ನ ಕೆಲ್ಸ ಹೋಯ್ತೆಂದು ಸುಳ್ಳು ಹೇಳಿ ಕನಿಕರ ಗಿಟ್ಟಿಸಿ ಜೊತೆಗೊಂದಿಷ್ಟು ಹಣವನ್ನು ಪಡೆದುಕೊಂಡು ಬಂದಿದ್ದ, ಇದೆಲ್ಲಾ ಗೊತ್ತಿದ್ದರೂ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ ಗೌರಿ..ಹೀಗೇ ದಿನ ಸಾಗುತ್ತಿತ್ತು, ಶಂಕರನ ಬೇಜವಾಬ್ದಾರಿಯಿಂದ ಕುಟುಂಬ ನೆಡೆಸುವುದು ಬಹಳ ಕಷ್ಟವಾಗಿತ್ತು,ಗಣೇಶ ಅವಾಗವಾಗ ಬಂದು ಭಾವನಿಗೆ ಒಂದಿಷ್ಟು ಬುದ್ಧಿ ಹೇಳಿ ಅಕ್ಕನಿಗೆ ಹಣವನ್ನು ಕೊಟ್ಟು ಹೋಗುತ್ತಿದ್ದ,ಅವನು ಆಕಡೆ ಹೋಗುತ್ತಿದ್ದಂತೆ ಇಲ್ಲಿ ಆ ಹಣವೆಲ್ಲವೂ ಶಂಕರನ ಪಾಲಾಗುತ್ತಿತ್ತು,ಗೌರಿ ಧೈರ್ಯ ಮಾಡಿ ಕೆಲಸಕ್ಕೆ ಹೋಗಲು ಶುರುಮಾಡಿದಳು.ಈ ನಡುವೆ ಶಂಕರ ಕುಡಿತದಮಲಿನಲ್ಲಿ ವೇಗವಾಗಿ ಹೋಗುತ್ತಿದ್ದ ಲಾರಿಯಡಿಯಲ್ಲಿ ಸಿಕ್ಕಿ ಸಾವನ್ನಪ್ಪಿದ.ಆತ ಸತ್ತಮೇಲೆ ಅಂತ್ಯಸಂಸ್ಕಾರಕ್ಕೂ ದುಡ್ಡಿಲ್ಲದೇ ಗೌರಿ ಪಟ್ಟ ಪಾಡು ಅಷ್ಟಿಷ್ಟಲ್ಲ..ಶಂಕರನ ಸಾವಿಗೆ ಕಾರಣ ತಿಳಿದ ವೆಂಕಯ್ಯ ಹೆಗ್ಡೇರು ತಮ್ಮ ಕೈಯಾರೇ ಮಗಳ ಬಾಳು ಹಾಳುಮಾಡಿದೆನೆಂಬ ಕೊರಗಿನಲ್ಲಿ ಹಾಸಿಗೆ ಹಿಡಿದು ಒಂದಿನ ಅವರೂ ಕೊನೆಯುಸಿರೆಳೆದರು.ಗಣೇಶ ಮೊದಲಿನಂತಿರಲಿಲ್ಲ, ಮದುವೆಯಾಗಿತ್ತು, ಪೂರ್ತಿಯಾಗಿ ಬದಲಾಗಿದ್ದ, ಮೊದಲೆಲ್ಲಾ ಅಕ್ಕನನ್ನು ಗೌರವಿಸುತ್ತಿದ್ದ ಆತ ತನ್ನ ಹೆಂಡತಿ ಮಾತು ಕೇಳಿ ಆಕೆಯ ಹೆಸರಿನಲ್ಲಿ ಹೆಗ್ಡೇರು ಇರಿಸಿದ್ದ ಹಣವನ್ನೂ ಆಕೆಗೆ ಗೊತ್ತಿಲ್ಲದೇ ನುಂಗಿ ಹಾಕಿದ್ದ.ಗೌರಿ ಕಂಡ ಕಂಡಲ್ಲಿ ಕೆಲಸ ಮಾಡಿ ತಾನು ಹೊಟ್ಟೆಬಟ್ಟೆ ಕಟ್ಟಿಕೊಂಡು ಮಗನನ್ನು ಚೆನ್ನಾಗಿ ಸಾಕುತ್ತಿದ್ದಳು…
ಗೌರಿ ಹಾಗೋ ಹೀಗೋ ಜೀವನ ಸಾಗಿಸುತ್ತಿದ್ದರೆ, ಆಕೆಯ ಮಗ ಮಂಜ ಆಕೆಯ ಗಂಡ ಶಂಕರನಿಗಿಂತ ಒಂದು ಕೈ ಜೋರಾಗೇ ಇದ್ದ..ಶಾಲೆಯಲ್ಲಿ ಅವರಿವರ ಪೆನ್ನು ಪೆನ್ಸಿಲ್ ಕದಿಯುವುದು, ದುಡ್ಡನ್ನು ಕದಿಯುವುದು ಶುರುಮಾಡಿದ್ದ ಒಂದೆರ್ಡು ಸಲ ಸಿಕ್ಕಿಬಿದ್ದು ಅಮ್ಮನ ಹತ್ರ ಒದೆಗಳನ್ನು ತಿಂದಿದ್ದ.ಆದ್ರೂ ತನ್ನ ಬುದ್ಧಿ ಬಿಡಲಿಲ್ಲ, ತಿಳಿ ಹೇಳಿದರೆ ಅಮ್ಮನ ಬಳಿ ಮೊಂಡು ವಾದ ಮಾಡಿ ಗಲಾಟೆ ಮಾಡುತ್ತಿದ್ದ.. ಏಳನೇ ಕ್ಲಾಸಲ್ಲೇ ಯಾರೋ ಕೊಡಿಸಿದರೆಂದು ಒಂದೇ ಸಲ 3ಪ್ಯಾಕೆಟ್ ಸರಾಯಿ ಕುಡಿದು 3ದಿನ ಎದ್ದಿರಲಿಲ್ಲ.ಇಲ್ಲೇ ಇದ್ದರೆ ಹಾಳಾಗೋದು ಗ್ಯಾರಂಟಿಯೆಂದು ತಿಳಿದು ಗೌರಿ ಅವರಿವರ ಬಳಿ ಸಹಾಯ ಪಡೆದು ಮಂಜನನ್ನು ಹಾಸ್ಟೇಲ್ ಗೆ ಸೇರಿಸಿದಳು.ಅಲ್ಲಿಯೂ ತನ್ನ ಕಿತಾಪತಿ ಮುಂದುವರೆಸಿದ ಮಂಜ ಕ್ಲಾಸ್ಮೇಟ್ ಒಬ್ಬನ ತಲೆಗೆ ಕಲ್ಲಿನಿಂದ ಹೊಡೆದು ಹಾಸ್ಟೇಲಿಂದ ಡಿಬಾರಾಗಿ ಮತ್ತೆ ಮನೆಗೇ ಬಂದ.ಎಂಟನೇ ಕ್ಲಾಸಿಗೇ ವಿದ್ಯಾಭ್ಯಾಸಕ್ಕೆತಿಲಾಂಜಲಿಯಿಟ್ಟು ಪಡ್ಡೆ ಹುಡುಗರೊಂದಿಗೆ ಏನೂ ಕೆಲಸವೂ ಮಾಡದೇ ಅವರಿವರಿಗೆ ತೊಂದರೆ ಕೊಡುತ್ತಾ ಸಣ್ಣ ಪ್ರಮಾಣದಲ್ಲಿ ರೌಡಿ ಎನಿಸಿಕೊಂಡಿದ್ದ, ಮಂಜ ಶಂಕರನ ಹಾಗೆ ಪುಕ್ಕಲನಲ್ಲ, ಯಾರಾದ್ರೂ ಎನಾದ್ರೂ ಹೇಳಿದ್ರೆ ಮೊದಲು ಹೊಡೆದಾಡಿಕೊಂಡು ಆಮೇಲೆ ಮಾತುಕತೆಯಾಗಿತ್ತು. ಹೀಗೇ ಊರಿನವರೆಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಮಂಜನ ಬಗ್ಗೆ ದೂರು ಬರದ ದಿನವಿರಲಿಲ್ಲ, ಆದ್ರೆ ಮಂಜ ಈಗ ಬೆಳೆದಿದ್ದ, ಗೌರಿ ಏನಾದ್ರು ಹೇಳಿದ್ರೆ ಗೌರಿಗೇ ಹೊಡೆಯಲು ಹೋಗುತ್ತಿದ್ದ.ಒಮ್ಮೆ ಊರಿನ ಪುಡಾರಿಯೊಬ್ಬ ಶಂಕರನ ಕಥೆ ಹೇಳಿ ನಿನಗೂ ಕಾಸು ಕೊಡ್ತಿನಿ ನನ್ನ ಬಳಿ ಕಳಿಸು ಎಂದು ಹೇಳಿದಾಗ ಆತನಿಗೆಮಾರಣಾಂತಿಕ ಹಲ್ಲೆ ಮಾಡಿ ಬಂದಿದ್ದ.ಅದಕ್ಕೆ ಸಾಕ್ಷಿ ಇಲ್ಲದ ಕಾರಣ ಅದು ಕೇಸ್ ಆಗಿರಲಿಲ್ಲ.ಆದಿನದ ಬಳಿಕ ಚೂರುಪಾರು ಗೌರವಿಸುತ್ತಿದ್ದ ಅಮ್ಮನನ್ನು ಅವಳ ಆಗಿನ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳದೇ ದ್ವೇಷಿಸಲಾರಂಭಿಸಿದ. ಗೌರಿ ಮಾತಾಡಿದ್ರೆ ಸಾಕು ಉರಿದು ಬೀಳುತ್ತಿದ್ದ, ಮಾತುಮಾತಿಗೆ ಆ ಘಟನೆ ನೆನಪಿಸಿ ಅವಳಿಗೆ ಮಾನಸಿಕವಾಗಿ ಹಿಂಸಿಸುತ್ತಿದ್ದ.ಜೀವನದಲ್ಲಿ ಸಾಕಷ್ಟು ಬೇಸತ್ತಿದ್ದ ಗೌರಿ,ಒಂದು ಅಗರಬತ್ತಿ ಪ್ಯಾಕ್ಟರಿಗೆ ಸೇರಿಕೊಂಡಳು..ಅಲ್ಲಿದ್ದಷ್ಟೊತ್ತು ಉಳಿದ ಕೆಲಸದವರ ಜೊತೆ ಸೇರಿ ತನ್ನ ಕಷ್ಟಗಳನ್ನು ಮರೆಯುತ್ತಿದ್ದಳು.ಮನೆಗೆ ಬಂದ ಕೂಡಲೇ ಕುಡಿಯಲು ಹಣ ಕೊಡುವಂತೆ ಮಗನ ಆದೇಶ, ಜಗಳ, ಬೈಗುಳದಿಂದ ತಪ್ಪಿಸಿಕೊಳ್ಳಲು ಗೌರಿ ಓವರ್ ಟೈಮ್ ಡ್ಯೂಟಿ ಮಾಡುತ್ತಿದ್ದಳು.ಮನೆಗೆ ಬರುವಷ್ಟರಲ್ಲಿ ಮಗ ಕುಡಿದು ಬಿದ್ದುಕೊಂಡಿರುತ್ತಿದ್ದ.ಎಷ್ಟೋ ಸಲ ಮಗನಿಗೆ ಮದ್ವೆಯಾದ್ರೆ ಸರಿಯಾಗಬಹುದೇನೋ ಅಂತ ಆಸೆ ಪಟ್ಟರೂ ತನ್ನಂತೆ ಇನ್ನೊಂದು ಹೆಣ್ಣಿನ ಬಾಳು ಹಾಳಾಗೋದು ಬೇಡವೆಂದು ಸುಮ್ಮನಾಗುತ್ತಿದ್ದಳು.
ತವರು ಮನೆಯಲ್ಲಿ ಯಾರೂ ಇವಳನ್ನು ಕೇಳುವವರ್ಲಿಲ್ಲ, ವರ್ಷಕೊಮ್ಮೆ ಹೋದರೂ ಸರಿಯಾಗಿ ಮಾತಾಡಿಸದೇ ಹಾಗೇ ಕಳುಹಿಸುತ್ತಿದ್ದರು. ತನ್ನ ಮಕ್ಕಳಂತೆ ಸಾಕಿದ್ದ ಅಕ್ಕನ ಮಕ್ಕಳೂ ಕೂಡ ಇವಳ ಸಹಾಯಕ್ಕೆ ಬರುತ್ತಿರಲಿಲ್ಲ. ಇಂಥವರಿಗೋಸ್ಕರ ನಾನು ಕಷ್ಟಪಡಬೇಕಿತ್ತಾ ಅಂತ ಗೌರಿ ಹಲವು ಬಾರಿ ಅನ್ನಿಸಿದುಂಟು..ಇತ್ತ ಪ್ಯಾಕ್ಟರಿಯಲ್ಲಿ ಸ್ವಲ್ಪ ನೆಮ್ಮದಿ ಕಂಡುಕೊಂಡಿದ್ದ ಗೌರಿ ಅಲ್ಲಿಯೂ ಕೂಡ ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯಕ್ಕೊಳಗಾಗಿದ್ದಳು. ಜೊತೆಗಾತಿಯರ ಬಳಿ ಹೇಳಿಕೊಂಡರೆ ಇದೆಲ್ಲಾ ಸಹಜ ಅನ್ನುವ ರೀತಿಯಲ್ಲಿತ್ತು ಅವರ ವರ್ತನೆ.ಸ್ವಲ್ಪ ದಿನದ ಬಳಿಕ ಆ ಕೆಲಸ ಬಿಟ್ಟು ಊರಿನಲ್ಲಿಯೇ ಬೇರೆಯವ್ರ ಮನೆಗೆ ಸೊಪ್ಪು ತಂದು ಹಾಕಲು, ಅಡಿಕೆ ಸುಲಿಯಲು ಹೋಗುತ್ತಿದ್ದಳು.ಈಗೀಗ ಆರೋಗ್ಯವೂ ಕೆಡಲಾರಂಭಿಸಿತ್ತು.ಸರಕಾರಿ ಆಸ್ಪತ್ರೆಯಲ್ಲಿ ಹೋಗಿ ಪರಿಕ್ಷಿಸಿದರೆ ಅಲ್ಲಿ ಕೆಲವೊಂದು ಔಷಧಿಗಳನ್ನು ಮಾತ್ರ ಕೊಡುತ್ತಿದ್ದರು. ಇನ್ನುಳಿದ ದುಬಾರಿಯಾದುದ್ದನ್ನು ಚೀಟಿಯಲ್ಲಿ ಬರೆದುಕೊಡುತ್ತಿದ್ರು, ಅದನ್ನು ತೆಗೆದುಕೊಳ್ಳಲೇ ಬೇಕಾದ ಅಗತ್ಯವಿದ್ದರೂ ಅಷ್ಟೋಂದು ಹಣ ಅವಳಲ್ಲಿರುತ್ತಿರಲಿಲ್ಲ.ಕೊನೆಗೆ ತನಗಿದ್ದ ಚೂರುಪಾರು ಆಸ್ತಿ ಹರಕಲು ಮನೆಯನ್ನು ಮಗನ ಹೆಸರಿಗೆ ಬರೆದು ತಾನು ಸತ್ತನಂತರ ಅವನಿಗೆ ಸೇರುವಂತೆಮಾಡಿ ವೃದ್ಧಾಶ್ರಮ ಸೇರಲು ನಿರ್ಧರಿಸಿ ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಳು.ಮುಂದಿನ ಎರಡು ದಿನದೊಳಗೆ ಎಲ್ಲಾ ಕೆಲಸ ಮುಗಿಸಿ ಆಶ್ರಮಕ್ಕೆ ತೆರಳಬೇಕೆಂದು ಮನೆಯ ಎಲ್ಲ ಕೆಲಸ ಮುಗಿಸಿ ಅಡಿಕೆ ಸುಲಿಯಲು ಹೊರಟಳು.ಅದು ಆಕೆಯ ಕೊನೆಯ ಎರಡು ಗಂಟೆಯೆಂದು ಪಾಪ ಅವಳಿಗೆ ಹೇಗೆ ತಾನೇ ಗೊತ್ತಿರಲು ಸಾಧ್ಯ.?ಆಗ ಅಲ್ಲಿಗೆ ಬಂದ ಮಂಜ ದುಡ್ಡು ಕೊಡುವಂತೆ ಗಲಾಟೆ ಮಾಡಿದ, ಗೌರಿ ತನ್ನಲ್ಲಿ ದುಡ್ಡಿಲ್ಲವೆಂದು ಎಷ್ಟೇ ಹೇಳಿದರೂ ಅವಳ ಮಾತನ್ನು ಕೇಳುವ ಸ್ಥಿತಿಯಲ್ಲಿರದ ಮಂಜ ಸ್ವಂತ ತಾಯಿಯೆಂದು ನೋಡದೇ ಅವಾಚ್ಯ ಶಬ್ಧಗಳಿಂದ ಬಯ್ಯುತ್ತಿದ್ದ.ಅವನನ್ನು ತಡೆಯಲು ಬಂದವರಿಗೂ ಅದೇ ರೀತಿಯ ಬೈಗುಳವಾಗಿತ್ತು.ಕೊನೆಗೆ ಸಿಟ್ಟು ನೆತ್ತಿಗೇರಿ ಅಲ್ಲೇ ಪಕ್ಕದಲ್ಲಿದ್ದ ಕಬ್ಬಿಣದ ಸಲಾಕೆಯಿಂದ ಅಮ್ಮನ ತಲೆಗೆ ಹೊಡೆದೇಬಿಟ್ಟ..ಇಷ್ಟುದಿನ ತಾನು ಹೊಟ್ಟೆಬಟ್ಟೆ ಕಟ್ಟಿಕೊಂಡು ಇವನನ್ನು ಸಾಕಿ ಬೆಳೆಸಿದಕ್ಕೆ ಸಾರ್ಥಕವಾಯ್ತೆಂದುಕೊಂಡು ಗೌರಿ ಅಲ್ಲೇ ಕುಸಿದು ಬಿದ್ದಳು.ಇದನ್ನೆಲ್ಲಾ ನೋಡುತ್ತಿದ್ದವರು ಬೇಗ ಓಡಿಬಂದು ಅವಳನ್ನು ಎತ್ತಿ ಹಾಸಿಗೆಯ ಮೇಲೆ ಮಲಗಿಸಿದರು. ಯಾರೋ ಒಬ್ಬರು ಆಂಬುಲೆನ್ಸ್ ಹಾಗು ಪೋಲಿಸ್ ಸ್ಟೇಶನ್ ಗೆ ಪೋನ್ ಮಾಡಿ ವಿಷಯ ತಿಳಿಸಿದರು.ಮೂರ್ನಾಲ್ಕು ಜನ ಓಡಿಬಂದು ಮಂಜನನ್ನು ಎಲ್ಲಿಯೂ ಓಡಿಹೋಗದ ಹಾಗೇ ಹಿಡಿದುಕೊಂಡು ನಾಲ್ಕೈದು ಹೊಡೆತ ಹೊಡೆದು ಕೈಕಾಲಿಗೆ ಹಗ್ಗ ಕಟ್ಟಿ ಹಿಡಿದುಕೊಂಡಿದ್ದರು..
ಸ್ವಲ್ಪ ಹೊತ್ತಿನ ಬಳಿಕ ಗೌರಿಯ ಪ್ರಾಣ ಅವಳ ದೇಹವನ್ನು ಬಿಟ್ಟು ಪಂಚಭೂತಗಳಲ್ಲಿ ಲೀನವಾಯ್ತು…ಗೌರಿಯ ಗಂಡ ಹಾಗು ಮಗ ಆ ಊರಲ್ಲಿ ಹೆಸರು ಕೆಡಿಸಿಕೊಂಡಿದ್ದರೂ ಗೌರಿ ಮಾತ್ರ ಒಬ್ಬರಲ್ಲೂ ಹಾಳು ಎನಿಸಿಕೊಂಡಿರಲಿಲ್ಲ..ಅದೇ ಕಾರಣಕ್ಕೆ ಅವಳ ಅಂತ್ಯಕ್ರಿಯೆಗೆ ಇಡೀ ಊರಿನ ಮಂದಿ ಒಂದಾಗಿದ್ದರು.ಅವಳು ಕೆಲಸಕ್ಕೆ ಹೋಗುತ್ತಿದ್ದ ನಾಲ್ಕೈದು ಮನೆಯವರು ಸೇರಿ ಅವಳ ಅಂತ್ಯಕ್ರಿಯೆ ಹಾಗು ಇನ್ನಿತರ ಕಾರ್ಯಗಳ ಕರ್ಚುವೆಚ್ಚವನ್ನುನೋಡಿಕೊಂಡಿದ್ದರು..ಗೌರಿ ಸತ್ತು ತಿಂಗಳಾದರೂ ಅವಳ ತವರು ಮನೆಗೆ ವಿಷಯವೇ ಗೊತ್ತಾಗಲಿಲ್ಲ.ಕೊನೆಗೊಮ್ಮೆ ಗೊತ್ತಾದರೂ ಯಾರೂ ಜಾಸ್ತಿ ತಲೆಕೆಡಿಸಿಕೊಳ್ಳದೇ ಸತ್ತಿದ್ದು ಯಾರೋ ಎಂಬಂತೆ ಆ ವಿಚಾರವನ್ನು ಅಲ್ಲಿಗೇ ಮರೆತುಬಿಟ್ಟರು.ಇತ್ತ ಮಂಜ ಜೈಲುವಾಸ ಅನುಭವಿಸುತ್ತಿದ್ದಾನೆ.ಅತ್ತ ಪುಂಡು ಪೋಕರಿಗಳ, ಹೆಂಡಗುಡುಕರ ತಾಣವಾಗಿ ಬದಲಾಗಿದ್ದ ಆ ಹರಕಲು ಮನೆ ಗೌರಿಯ ನೆನಪನ್ನು ಮೆಲುಕು ಹಾಕುತ್ತಾ ತನ್ನ ಅಂತೀಮ ದಿನಕ್ಕೆ ಕಾಯುತ್ತಿದೆ….
ಈ ಗೌರಿಗೆ ಕೇವಲ ಸ್ತ್ರೀ ಅಂದರೆ ಸಾಕೇ…??
ಪ್ರದೀಪ್ ಹೆಗಡೆ
Facebook ಕಾಮೆಂಟ್ಸ್