“ಸೀತಾರಾಮೂ.. ಸೀತಾರಾಮೂ..” ಏದುಸಿರು ಬಿಡುತ್ತಾ ಕರೆದಳು ರಂಗಿ. ಏನೇ ಎನ್ನುತ್ತಾ ಒಳಮನೆಯಿಂದ ಹೊರಗಡಿಯಿಟ್ಟ ಸೀತಾರಾಮ.. ಮನಸ್ಸಿನಲ್ಲಿರುವ ತಾತ್ಸಾರ ಮುಖದಲ್ಲೆದ್ದು ಕಾಣುತ್ತಿತ್ತು.. ಯಾಕಾದ್ರೂ ಈ ಮುದುಕಿ ಸಾಯುವುದಿಲ್ಲವೋ ಎಂಬ ತಾತ್ಸಾರವದು, ತನ್ನನ್ನು ಹೆತ್ತ ತಾಯಿ ಎಂಬ ತಾತ್ಸಾರ.. ಆಕೆ ಮಾಡಿದ ಪಾಪಕ್ಕೆ ಆಕೆ ಅನುಭವಿಸುತ್ತಿರುವುದು ಮತ್ತು ಅವಳಿಗೆ ನಾನು ಈ ರೀತಿಯ ತಾತ್ಸಾರ, ನಿರ್ಲಕ್ಷ್ಯ ತೋರುವುದರಲ್ಲಿ ತಪ್ಪಿಲ್ಲ ಎಂಬುದು ಅವನ ಧೋರಣೆ..ಅದಕ್ಕೆ ತಕ್ಕಂತೆ ಆತನ ಅರ್ಧಾಂಗಿ ಪಾರ್ವತಿ.. ಆಕೆ ಅತ್ತೆಯ ಮುಖವನ್ನೂ ನೋಡಲಾರಳು, ಮಾತನಾಡುವುದು ಆಮೇಲಿನದು.. ಸೇವೆಯಂತೂ ವರ್ಜ್ಯ..ಆಕೆಯ ಸಿದ್ಧಾಂತ ಒಂದೇ.. ಬೀದಿ ಸೂಳೆಗೆಂತ ಸೇವೆ..! ಹೊರಗಡೆ ಬಂದ ಸೀತಾರಾಮು ವನ್ನು ಒಂದು ಕ್ಷಣ ದಿಟ್ಟಿಸಿದಳು ರಂಗಿ.. ಹೊರಬಂದವನೇ ಏನು ಎಂದ.. ಹಸಿವಾಯ್ತು ಕಣೋ ಎಂದಳು.. ಮನಸ್ಸಿನ ಸಿಟ್ಟು ಮಾತಲ್ಲಿ ಹೊರಬಂತು.. “ನೀನು ಕೇಳಿದಾಗೆಲ್ಲ ಕೊಡೊಕೆ ಇದು ಹೋಟೇಲೂ ಅಲ್ಲ.. ನಾವು ನಿನ್ನ ಗಿರಾಕಿಗಳೂ ಅಲ್ಲ.. ಇದು ಮನೆ ಮತ್ತು ನಾನು ನಿನ್ನ ಪಾಪಕ್ಕೆ ಹುಟ್ಟಿದ ಮಗ.. ಅದು ನೆನಪಿರಲಿ” ಎಂದ.. ಒಂದು ಕ್ಷಣ ಅಬ್ಬ ಅನ್ನಿಸಿತು ರಂಗಿಗೆ… ಕೊಳಗಳಾದ ಕಣ್ಣಿನಿಂದ ಧುಮು ಧುಮು ಅನ್ನುತ್ತ ಹೋದ ಸೀತಾರಾಮನನ್ನೇ ನೋಡುತ್ತಾ ಕುಳಿತಳು…
ದೈವ ಆಕೆಗೆ ನೆಮ್ಮದಿಯ ಸಾವೊಂದನ್ನು ಕರುಣಿಸಿತ್ತು.. ನಿದ್ದೆಯಲ್ಲಿರುವಾಗಲೇ ಚಿರನಿದ್ರೆಗೆ ಜಾರಿದ್ದಳು ರಂಗಿ.. ರಾತ್ರಿ ಮಲಗಿದವಳಿಗೆ ಎಂದು ಸಾವು ಬಂದು ಅಪ್ಪಿತ್ತು ಎಂಬುದರ ಪರಿವೆಯೇ ಇರಲಿಲ್ಲವೇನೋ.. ಅಂತ ಸಾವನ್ನು ಸಾರ್ಥಕ ಸಾವು ಎನ್ನುತ್ತಾರಂತೆ.. ಆಕೆ ಸತ್ತದ್ದನ್ನು ಊರ ಕೇಳಿದರಾದರೂ ಹೆಚ್ಚಿನವರು ಅಂತ್ಯ ಸಂಸ್ಕಾರಕ್ಕೆ ಬರಲಿಲ್ಲ… ಹೊರಲು ನಾಲ್ಕು ಜನರಿದ್ದಾರಲ್ಲ ಅಷ್ಟು ಸಾಕು ಎಂದುಕೊಂಡ ಸೀತಾರಾಮ ರಂಗಿಯ ಅಪರಕರ್ಮಗಳನ್ನು ತನ್ನ ಕರ್ಮವೆಂಬಂತೆ ಮಾಡಿ ಮುಗಿಸಿದ್ದ.. ಮನೆಗೆ ಬಂದವನೇ ತಾಯಿಯ ಜಾಗದಲ್ಲಿದ್ದ ಅಳಿದುಳಿದ ವಸ್ತುಗಳನ್ನು ಸ್ವಚ್ಛ ಮಾಡಿ ಸಂಪೂರ್ಣ ಪೀಡೆ ತೊಲಗಿಸಿಕೊಳ್ಳೋಣ ಎಂದುಕೊಂಡು ಆ ಕಾರ್ಯಕ್ಕೆ ತೊಡಗಿದ.. ರಂಗಿಯ ಹಾಸಿಗೆಯನ್ನು ತೆಗೆಯುತ್ತಿದ್ದವನಿಗೆ ತಲೆದಿಂಬಿನ ಅಡಿಯಲ್ಲಿ ಕಂಡಿತ್ತು ಒಂದು ಕಾಗದ… ಏನೆಂಬಂತೆ ನೋಡಿದ.. ಒಂದು ಮೂರು ಪುಟಗಳ ಸುದೀರ್ಘ ಪತ್ರ… ಸಮಾಜದ ಎದುರು, ಮಗನೆದುರು,ಅತಿ ಕೆಟ್ಟ ಹುಳುವಾಗಿ ಸಾವನ್ನು ಅಪ್ಪುವದನ್ನು ಒಪ್ಪಿಕೊಳ್ಳಲಾರದ ಜೀವವೊಂದು ಜೀವನದ ಗುಟ್ಟನ್ನು ತನ್ನೊಳಗೆ ಸಮಾಧಿ ಮಾಡಿಕೊಳ್ಳಲಾರದೆ ಬರೆದಿಟ್ಟ ಚರಮ ಚರಿತ್ರೆ ಅದು.. ರಂಗಿಯ ಬದುಕಿನ ಹಾದಿ ಬದಲಾದ ಭಾವಗೀತೆಯನ್ನು ಸೀತಾರಾಮು ಅಲ್ಲಿಯೇ ಕುಳಿತು ಓದತೊಡಗಿದ…
ಸೀತಾರಾಮು..
“ನನಗೆ ಗೊತ್ತು ಮಗು ನಿನ್ನ ಮನಸ್ಸಿನ ಆಲೋಚನೆ, ನೀನು ಅನುಭವಿಸುತ್ತಿರುವ ಕಷ್ಟ, ನಿನ್ನಲ್ಲಿನ ದುಃಖ ಎಲ್ಲವೂ ನನಗೆ ಗೊತ್ತು.. ಸಮಾಜ ನಿನ್ನನ್ನು ನೋಡುತ್ತಿರುವ ರೀತಿ ನಿನ್ನ ಮನಸ್ಸನ್ನು ಸಾಯಿಸಿದೆ… ಒಬ್ಬ ವೇಶ್ಯೆಯ ಮಗ ಎಂಬ ಮಾತು ನಿನ್ನನ್ನು ಕೋಪಕ್ಕೆ ಈಡು ಮಾಡಿದೆ.. ಅದಕ್ಕಾಗೇ ಅದನ್ನೆಲ್ಲ ನನ್ನ ಮೇಲೆ ತೀರಿಸಿಕೊಂಡೆ.. ನನ್ನ ಈ ಬದುಕಿನ ಹಿನ್ನಲೆ ಮತ್ತು ಕಾರಣಗಳನ್ನು ತಿಳಿದುಕೊಳ್ಳುವ ಸಣ್ಣ ಪ್ರಯತ್ನವನ್ನು ಸಹ ಮಾಡದೆ ನನ್ನ ಮೇಲೆ ನಿನ್ನ ಆಕ್ರೋಶವನ್ನೆಲ್ಲ ಸುರಿದೆ.. ನನ್ನ ಜೀವನದ ಪ್ರತೀ ಹೆಜ್ಜೆಯಲ್ಲೂ ನನ್ನ ಆಕಾಂಕ್ಷೆಗಳನ್ನು ಸಾಯಿಸಿ ನೀನು ಬೆಳೆಯಬೇಕು ಎಂದು ಆಸೆಪಟ್ಟ ನನ್ನ ಕನಸುಗಳನ್ನೆಲ್ಲ ದಾಟಿ ನೀನು ನನ್ನನ್ನು ದ್ವೇಷಿಸಿದೆ.. ಆದರೆ ಮಗು ಒಂದು ಮಾತು ಮಾತ್ರ ಸತ್ಯ.. ನಾನು ನನ್ನ ಜೀವನದಲ್ಲಿ ಎಲ್ಲರೂ ಹೊಲಸು ಎಂಬ ಕಾರ್ಯ ಮಾಡಿರಬಹುದು.. ಆದರೆ ನನ್ನ ದೃಷ್ಟಿಯಲ್ಲಿ ಅದು ತಪ್ಪಲ್ಲ.. ತಪ್ಪು ಎಂದು ಹೇಳಿದವರಿಲ್ಲ.. ತಪ್ಪು ಎಂದು ತಿಳಿದ ನಂತರ ವಿಧಿ ಇರಲಿಲ್ಲ.. ಅದೆಲ್ಲಕಿಂತ ಹೆಚ್ಚಾಗಿ ಇದು ನಾನು ಮಾಡಿದ ತಪ್ಪೇ ಅಲ್ಲ… ನನ್ನಿಂದ ಮಾಡಿಸಿದ್ದು… “
“ನಾನು ಹುಟ್ಟಿ ಇವಳೇ ನನ್ನ ಅಮ್ಮ ಎಂದು ತಿಳಿಯುವ ಹೊತ್ತಿಗೆ ಅಮ್ಮನ ಶ್ರಾದ್ಧವಾಗುತ್ತಿತ್ತು.. ಆದರೂ ಅಪ್ಪ ಮರು ಮದುವೆ ಆಗಿರಲಿಲ್ಲ.. ನನ್ನನ್ನು ಅತೀ ಪ್ರೀತಿಯಿಂದ ಬೆಳೆಸಿದ.. ಯಾವುದಕ್ಕೂ ಕಡಿಮೆ ಆಗದಂತೆ ನೋಡಿಕೊಂಡ.. ತಾನು ಉಪವಾಸ ಇದ್ದು ನನ್ನ ಹೊಟ್ಟೆ ತುಂಬಿಸಿದ.. ತಾನು ಸಾಲ ಮಾಡಿ ನನ್ನ ಓದಿಸಿದ.. ಅಂತೂ ಇಂತೂ ಏಳನೇ ತರಗತಿ ಮುಗಿಸಿ ಮುಂದೆ ಓದಬೇಕು ಎನ್ನುವ ಹೊತ್ತಿಗೆ ಅಪ್ಪನೂ ಅಮ್ಮನಲ್ಲಿಗೆ ಹೊರಟಿದ್ದ.. ಅಪಘಾತವೊಂದರಲ್ಲಿ ಮರಣವನ್ನಪ್ಪಿದ್ದ ಅಪ್ಪ ನನ್ನನ್ನು ಅನಾಥಳನ್ನಾಗಿಸಿದ್ದ.. ಜೀವನ ಒಮ್ಮೆಲೇ ಕತ್ತಲಾಗಿಬಿಟ್ಟಿತ್ತು.. ಅಪ್ಪ ಮಾಡಿದ ಸಾಲಕ್ಕಾಗಿ ಕೆಲವರು ಬಂದಾಗ ಊರಿನ ಸಾಹುಕಾರ ಶಾಂತಪ್ಪ ಅಪ್ಪ-ಅಮ್ಮ ಇಲ್ಲದ ಅನಾಥೆ ನೀನಲ್ಲ ಎನ್ನುತ್ತಾ ಎಲ್ಲರ ಸಾಲ ತೀರಿಸಿದ.. ಆತನ ಮನೆಯಲ್ಲೇ ಇರಲು ಹೇಳಿದ.. ನಾನು ಅವರ ಮನೆಯಲ್ಲೇ ಬೆಳೆಯತೊಡಗಿದೆ.. ಆದರೆ ನನ್ನಲ್ಲಿ ನನ್ನ ಬದುಕನ್ನು ನಾನೇ ಕಟ್ಟಿಕೊಳ್ಳಬೇಕು ಎಂಬ ನಿರ್ಧಾರವಿತ್ತು.. ಅವರು ಬೇಡವೆಂದರೂ ಅವರ ಮನೆಯ ಕೆಲಸದವಳಾದೆ…”
“ಶಾಂತಪ್ಪನ ಮನೆಗೆ ಬಂದ ನಂತರ ಬದುಕು ಬದಲಾಯಿತು ಅಂದುಕೊಂಡೆ.. ಆತನಿಗೆ ಸಹ ಯಾರು ಇಲ್ಲ.. ಹೆಂಡತಿ ತೀರಿ ಹೋಗಿದ್ದಳು, ಮಕ್ಕಳೂ ಇರಲಿಲ್ಲ.. ಮಗಳಂತೆ ಸೇವೆ ಮಾಡಲು ನಿಂತೆ.. ಆದರೆ ಹಣೆಬರಹವೇ ಬೇರೆ ಇತ್ತು.. ತಂದೆ ಎಂದು ತಿಳಿದ ಶಾಂತಪ್ಪನೆ ನನ್ನನ್ನು ಬಲಾತ್ಕಾರ ಮಾಡಿದ.. ಎಲ್ಲರನ್ನು ಕಳೆದುಕೊಂಡ ಮುದುಕನ ದೇಹದ ಹಸಿವಿಗೆ ನಾನು ಆಹಾರವಗಿದ್ದೆ.. ಅಲ್ಲಿಂದ ಹೊರಬರುವ ಹಾಗೂ ಇರಲಿಲ್ಲ.. ಯಾರಲ್ಲಿ ಹೇಳಿದರೂ ನನ್ನ ಮಾತನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ.. ಬದುಕು ಅರಳುವ ಮೊದಲೇ ಬಾಡಿತ್ತು.. ಆತ ಬಯಸಿದಾಗ ಆತನ ಹಾಸಿಗೆಯಲ್ಲಿ ಉರುಳಾಡಬೆಕಿತ್ತು.. ನಿಧಾನವಾಗಿ ಆತನ ಗೆಳೆಯರಿಗೂ ಆಹಾರವಾದೆ.. ನನ್ನ ಬದುಕಿನ ಮೇಲೆ ನನಗೇ ಅಸಹ್ಯವಾಗುತ್ತಿತ್ತು.. ಆದರೆ ನನ್ನ ಬದುಕನ್ನು ಮುಗಿಸಲು ಧೈರ್ಯ ಇರಲಿಲ್ಲ.. ಸಾವಿಗೆ ಹೆದರಿದ್ದೆ ನಾನು.. ಆದರೆ ಬದುಕುವುದಾದರೂ ಹೇಗೆ..?? ಎಂಬ ಪ್ರಶ್ನೆ ಸಹ ನನ್ನನ್ನು ಕಾಡಿತ್ತು.. ಕನಸುಗಳನ್ನು ಕಟ್ಟಿಕೊಳ್ಳುವ ವಯಸ್ಸು ನನ್ನದು, ಆದರೆ ಎಲ್ಲವನ್ನು ಕೊಂದುಕೊಳ್ಳುವಂತಾಗಿತ್ತು.. ಆದರೆ ಬದುಕುವ ಹಠ ಮಾತ್ರ ಹಾಗೆಯೇ ಇತ್ತು,.. ಅದಕ್ಕಾಗಿಯೇ ಬದುಕಿದೆ.. ನಿಧಾನವಾಗಿ ನನಗೇ ತಿಳಿಯದಂತೆ ಸಮಾಜ ಥೂ ಎಂದು ಉಗಿಯುವ ವೇಶ್ಯೆಯ ಬದುಕಿಗೆ ಹದಿನೆಂಟನೆ ವಯಸ್ಸಿಗೆ ಬರುವದರಲ್ಲಿ ನನಗೇ ತಿಳಿಯದೇ ಹೊಂದಿಕೊಂಡುಬಿಟ್ಟಿದ್ದೆ.. “
“ನಾ ನಗುವ ಮೊದಲೇ ಬದುಕು ಅಳುವನ್ನು ಉಡುಗೊರೆಯಾಗಿ ನೀಡಿತ್ತು.. ಹಸಿದು ಬಂದವರಿಗೆ ಹೊಟ್ಟೆ ತುಂಬಿಸಬೇಕಿತ್ತು, ಅವರ ಹಣದಲ್ಲಿ ನನ್ನ ಹೊಟ್ಟೆ ತುಂಬುತ್ತಿತ್ತು.. ಅದಕ್ಕಾಗಿ ಅವರು ಕೊಡುವ ಎಲ್ಲ ಹಿಂಸೆಯನ್ನು ತುಟಿ ಕಚ್ಚಿ ಸಹಿಸಿದೆ.. ಆದರೆ ಮನಸ್ಸಿನಲ್ಲಿ ಅನಾಥಪ್ರಜ್ಞೆ, ಒಂಟಿತನ ನನ್ನನ್ನು ಕಾಡುತ್ತಿತ್ತು..ಮಾಡುವೆ ಎಂಬುದು ಕನಸಿನ ಮಾತು… ಆದರೆ ತಾಯ್ತನದ ಹಂಬಲ…?? ಅದು ನನ್ನನ್ನು ಕಾಡುತ್ತಿತ್ತು… ಅದನ್ನಾದರೂ ಕೊಡು ಎಂಬಂತೆ ಬೇಡುತ್ತಿದ್ದೆ.. ನಾಲ್ಕಾರು ಜನ ಓಡಾಡುವ ದಾರಿಯಲ್ಲಿ ಹೇಗೆ ಹುಲ್ಲು ಬೆಳೆಯಲಾರದೊ ಹಾಗೆ ನನಗೆ ತಾಯ್ತನ ಎಲ್ಲಿಯದು ಹೇಳು..?? ಆ ಬಯಕೆಯೂ ಸಾಯುತ್ತಿತ್ತು.. ಆದರೆ ಒಂದು ದಿನ ಊರಿನಾಚೆ ಒಂದು ಶವ ಬಿದ್ದಿತ್ತು.. ಏನು ತಿಳಿಯದ ಹದಿನೈದರ ಬಾಲೆಯದು.. ಆ ವಯಸ್ಸಿಗೇ ಗರ್ಭ ತುಂಬಿತ್ತು.. ಹೆರಿಗೆಯ ನೋವನ್ನು ತಾಳಲಾರದೆ, ಯಾರ ಸಹಾಯವೂ ಇರದೇ ಇದ್ದುದದಿಂದ ಮಗುವನ್ನು ಹೆತ್ತು ಸತ್ತಿದ್ದಳು.. ಆ ಮಗುವನ್ನು ಅನಾಥ ಮಾಡಬಾರದೆಂದು ನಾನು ತಂದೆ.. ಅದರ ಆರೈಕೆಗೆ ನಿಂತೇ.. ಅದನ್ನು ಪ್ರೀತಿಯಿಂದ ಕೂಗಲೊಂದು ಹೆಸರಿಟ್ಟೆ.. ಸೀತಾರಾಮೂ ಎಂದು…”
“ಹೌದು ಅದೇ ಸೀತಾರಾಮು ನೀನು.. ನೀನು ವೇಶ್ಯೆಯ ಮಗ ಅಲ್ಲ… ನನಗೆ ಗೊತ್ತು ಇದು ನಿನಗೆ ಸಂತೋಷ ಕೊಡುವ ವಿಷಯ ಎಂದು.. ಆದರೆ ನಾ ಹೆತ್ತ ಮಗನಂತೆ ನಿನ್ನನ್ನು ನೋಡಿದೆ… ನಿನ್ನನ್ನು ಜಗತ್ತು ಕೆಟ್ಟ ದೃಷ್ಟಿಯಿಂದ ನೋಡಬಾರದು ಎಂದು ಈ ವೇಶ್ಯೆಯ ವೃತ್ತಿ ಬಿಟ್ಟೆ.. ಆದರೆ ಬೇರೆ ಕೆಲಸ ಕೊಡುವವರು ಯಾರೂ ಇರಲಿಲ್ಲ.. ಕೈ ನಲ್ಲಿ ಇದ್ದ ಹಣವೆಲ್ಲ ಖಾಲಿ ಆಗುತ್ತಿತ್ತು… ನಾನೊಬ್ಬನೇ ಆದರೆ ಹೇಗೊ ಬದುಕು ಸಾಗುತ್ತಿತ್ತು.. ಆದರೆ ನಿನ್ನ ಗತಿ..?? ಏನು ಮಾಡಬೇಕೆಂದು ತಿಳಿಯದೇ ಮತ್ತದೇ ವೃತ್ತಿಗಿಳಿದೆ.. ನನ್ನ ನೋವುಗಳು ನಿನ್ನ ನಗುವಿನಿಂದ ಮರೆಯಾಗುತ್ತಿದ್ದವು..ಹೊಸ ಆಸೆಗಳು ಚಿಗುರತೊಡಗಿದ್ದವು.. ಹೊಸ ಕನಸಿತ್ತು.. ನಾ ಕಾಣದ ಬದುಕಿನ ಖುಷಿಯನ್ನು ನಿನ್ನಲ್ಲಿ ಕಾಣುವ ಬಯಕೆ ಬೆಳೆಯುತ್ತಿತ್ತು… ಶಾಲೆಗೇ ಸೇರಿಸಿದೆ… ನಿನಗೆ ತೊಂದರೆಯಾಗಬಾರದೆಂದು ಆಸೆಪಟ್ಟೆ.. ಅದರಂತೆಯೇ ನೀನು ಕಲಿಯುತ್ತಿದ್ದೆ.. ಆದರೆ ನನ್ನ ಕನಸಿನ ಗುಂಗಲ್ಲಿ ನಿನ್ನ ಮನಸಲ್ಲಿ ನನ್ನ ಮೇಲೆ ಬೆಳೆಯುತ್ತಿದ್ದ ಕೋಪ, ದ್ವೇಷಗಳನ್ನು ಕಾಣದಾದೆ… ಸಮಾಜ ನಿನ್ನನ್ನು ನೋಡುತ್ತಿದ್ದ ರೀತಿಯೇ ಬೇರೆಯಾಗಿತ್ತು… ಅದು ನನಗೆ ತಿಳಿಯುವಾಗ ಬಹಳ ತಡವಾಗಿತ್ತು… ನಿನ್ನ ದೃಷ್ಟಿಯಲ್ಲಿ ನಾನು ಬೀದಿ ಸೂಳೆಯಾಗಿದ್ದೆ.. ನನ್ನ ಕನಸು ಸಾಕರಗೊಳ್ಳುತ್ತಿತ್ತು ಆದರೆ ಮತ್ತೊಮ್ಮೆ ಬದುಕು ಸತ್ತಿತ್ತು.. ಮತ್ತೆ ಅನಾಥವಾಗಿದ್ದೆ.. ಆದರೆ ಎಲ್ಲವನ್ನು ಹೇಳುವ ಧೈರ್ಯ ನನ್ನಲ್ಲಿ ಇರಲಿಲ್ಲ. ಹಾಗಾಗಿ ಅದು ನನ್ನ ಹೊಟ್ಟೆಯೊಳಗಿನ ಗುಟ್ಟಾಗಿ ಉಳಿಯಿತು…”
“ಸೀತಾರಾಮು ನನಗೆ ಗೊತ್ತು ನಾನು ನಡೆದ ಹಾದಿ ತಪ್ಪು.. ಆದರೆ ನಾ ಯಾವುದನ್ನೂ ಬೇಕು ಎಂದು ಮಾಡಿಲ್ಲ.. ನಾನು ಪ್ರೀತಿಯಿಂದ ಬಯಸಿದ್ದು ನಿನ್ನನ್ನು… ಬದುಕಿನ ಆಶಾಕಿರಣವಾಗಿದ್ದೆ.. ನನ್ನ ಆಸೆಯನ್ನು ನೀನು ಈಡೇರಿಸಿದೆ.. ಅಷ್ಟು ಸಾಕು.. ಉಳಿದದ್ದು ಸಮಾಜ ಕೊಟ್ಟಿದ್ದು.. ಈ ಸಮಾಜವೇ ನನ್ನನ್ನು ಕೆಟ್ಟ ಬದುಕಿಗೆ ದೂದಿದ್ದು, ಮತ್ತು ಅದೇ ಸಮಾಜ ಕೆಟ್ಟು ನಿಂತವಳೆಂದು ದೂರಿದ್ದು.. ವೇಶ್ಯೆ ಎಂದು ಹಂಗಿಸಿದ್ದು… ನಾನು ಯಾರನ್ನು ದೂರಲಿ..?? ಒಂದು ನಿಶ್ಚಿಂತೆ ಸಾವಿಗಾಗಿ ಕಾಯುತ್ತಿದ್ದೇನೆ ಸೀತರಾಮೂ.. ಸಿಗಬಹುದಾ…??? “
ಪತ್ರ ಮುಗಿದಿತ್ತು.. ಸೀತಾರಾಮನ ಕಣ್ಣಲ್ಲಿ ನೀರಾಡಿತ್ತು.. ಪಶ್ಚಾತಾಪದ ಸೆಲೆಯೊಂದು ಮನಸ್ಸಿನಲ್ಲಿ ಚಿಮ್ಮುತ್ತಿತ್ತು… ಮನಸೋ ಇಚ್ಛೆ ಅತ್ತುಬಿಟ್ಟ… ಸಮಾಧಾನವಾಗಲಿಲ್ಲ.. ಕುಳಿತಿದ್ದ ಹಾಸಿಗೆಯ ಮೇಲೆ ಮಲಗಿದ, ತಾಯಿಯ ಮಡಿಲಲ್ಲಿ ಮಲಗಿದ ಅನುಭವ.. ಮುದುಡಿ ಮಲಗಿದ, ಅಮ್ಮನ ಬಿಸಿಯಪ್ಪುಗೆ ಬಳಸಿದೆಯೇನೋ ಎಂದು ಅನ್ನಿಸುತ್ತಿತ್ತು.. ಅಲ್ಲೇ ಕಣ್ಮುಚ್ಚಿದ, ರಂಗಿಯ ಮುಖ ತೇಲುತ್ತಿತ್ತು… ಇದನ್ನೆಲ್ಲಾ ರಂಗಿಯ ಆತ್ಮ ನೋಡುತ್ತಿತ್ತಾ..?? ಗೊತ್ತಿಲ್ಲ… ನೋಡಿದರೆ ಒಂದು ಜೋಗುಳ ಹಾಡುತ್ತಿತ್ತೇನೋ… ಆದರೆ ದಿನನಿತ್ಯ ಇಂಥ ಸಾವಿರಾರು ದೃಶ್ಯವನ್ನು ನೋಡುವ ಸೂರ್ಯ ಹಾಗೆಯೇ ಕೆಂಪಾಗಿ ಮರೆಯಾಗುತ್ತಿದ್ದ, ಒಂದು ಸಣ್ಣ ಮುಗುಳ್ನಗೆಯೊಂದಿಗೆ..
-ಮಂಜುನಾಥ ಹೆಗಡೆ
Facebook ಕಾಮೆಂಟ್ಸ್