“ ಹುಹ್… ಈ ಕಾಮುಕನಿಗೆ ಸನ್ಮಾನ ಬೇರೆ ಕೇಡು” ಅಂತ ಹೇಳುವಾಗ ಅವಳ ಮುಖದಲ್ಲಿ ರೋಷ ಉಕ್ಕಿ ಬರುತ್ತಿತ್ತು. ಊರಿಗೆ ಊರೇ ಅವರನ್ನು ‘ಅಣ್ಣೆರೆ’ ಎಂದು ಸಂಭೋದಿಸಿ ಗೌರವಿಸುತ್ತಿರುವಾಗ ಇವಳ್ಯಾಕೆ ಇಷ್ಟು ದ್ವೇಷಿಸುತ್ತಾಳೆ? ಅದೂ ಕೂಡಾ ಹಲವು ಸಂಘ ಸಂಸ್ಥೆಗಳಲ್ಲಿ ಮುಖಂಡನಾಗಿರುವವರನ್ನು ಕಾಮುಕನೆಂದು ಹೇಳುತ್ತಿರುವುದೇಕೆ? ಎಂಬ ಪ್ರಶ್ನೆ ನನ್ನಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿತು. ಅದರ ಜಾಡು ಹಿಡಿದು ಹೊರಟಾಗ ನನಗೆ ಸಿಕ್ಕಿದ್ದು ಶಾಕ್’ಗಳ ಮೇಲೆ ಶಾಕ್.
ಅವರು ಬಿ.ಕೆ ಭಟ್ ಅಂತ.. ಆ ಇಡೀಯ ಊರಿಗೆ ಧಾರ್ಮಿಕ, ಸಾಮಾಜಿಕ ಮುಂದಾಳು, ದಾನ ಶೂರ ಕರ್ಣ. ಅವರದ್ದು ಹಿಂದಿನಿಂದಲೇ ಊರಿನ ಮುಖಂಡತ್ವ ವಹಿಸಿಕೊಂಡು ಬಂದಿದ್ದ ಕುಟುಂಬದವರಾಗಿದ್ದರಿಂದ ಜನ ಅವರನ್ನು ಬಹಳವಾಗೇ ಗೌರವಿಸುತ್ತಿದ್ದರು. ಕೆಲವರು ಪ್ರೀತಿಯಿಂದ ಅಣ್ಣೆರೇ ಎಂದು ಕರೆಯುತ್ತಿದ್ದರೆ ಮತ್ತೆ ಕೆಲವರು ಗೌರವದಿಂದ ಧಣಿ ಎನ್ನುತ್ತಿದ್ದರು. ಆದರೆ ನಿಜವಾಗಿಯೂ ಆ ವ್ಯಕ್ತಿ ಜನರ ಅಷ್ಟೂ ಗೌರವಕ್ಕೆ ಯೋಗ್ಯನೇ ಎನ್ನುವ ಪ್ರಶ್ನೆ, ಆ ಹೆಂಗಸಿನ ಆಕ್ರೋಶದ ಹಿಂದಿರುವ ಗುಟ್ಟನ್ನು ಬಿಡಿಸಲು ಹೊರಟ ನನ್ನಲ್ಲಿ ಮೂಡತೊಡಗೊತ್ತು. ನನಗೂ ಅವರ ಮೇಲೆ ಗೌರವ ಇದ್ದಿದ್ದರಿಂದ ’ಛೇ ಇಷ್ಟೆಲ್ಲಾ ಗೌರವಾದಾರಗಳಿಗೆ ಪಾತ್ರವಾಗಿರುವ ಈ ವ್ಯಕ್ತಿ ಹೀಗೇನಾ?’ ಎಂದು ನಂಬಲಸಾಧ್ಯವಾದ ಆಶ್ಚರ್ಯ ನನ್ನಲ್ಲುಂಟುಮಾಡಿತ್ತು..
ಅರ್ರೇ…. ಅವರು ಮಾಡಿದ್ದಾದರೂ ಏನು? ಎಲ್ಲವನ್ನೂ ಹೇಳುತ್ತೇನೆ ಕೇಳಿ……
“ಮೊದಲೇ ಹೇಳಿದಂತೆ ಅವರದ್ದು ನಾಲ್ಕೈದು ಅಣ್ಣ ತಮ್ಮಂದಿರಿರುವ ಪ್ರತಿಷ್ಟಿತ ಕುಟುಂಬ, ಅವರೆಂದರೆ ಊರಿಗೆಲ್ಲಾ ಭಯ. ಉದ್ದದ ಕೋವಿ ಹಿಡಿದುಕೊಂಡು ಇವರಪ್ಪ ಸಂಜೆಯ ಹೊತ್ತಿಗೆ ವಾಕಿಂಗ್ ಬರುತ್ತಿದ್ದರೆ ಊರವರೆಲ್ಲಾ ಮನೆ ಸೇರುತ್ತಿದ್ದರು. ನೂರಾರು ಎಕರೆ ಅಡಕೆ ತೋಟ. ದಿನಕ್ಕೆ ಕಡಿಮೆಯೆಂದರೂ ಹತ್ತು ಜನ ಕೂಲಿ ಕೆಲಸಗಾರರು, ಈ ಅಣ್ಣ ತಮ್ಮಂದಿರೆಲ್ಲರೂ ವಯಸ್ಸಿಗೆ ಬಂದಿದ್ದರೂ ಮದುವೆಯಾಗಿರಲಿಲ್ಲ. ಕಾಮವೆಂಬುದು ಉಕ್ಕಿ ಹರಿಯುತ್ತಿದ್ದ ಪ್ರಾಯ ಅವರದ್ದು. ಆದರೆ ಆ ಕಾಮಪ್ರವಾಹವನ್ನು ತಡೆಹಿಡಿಯಲು ಸ್ತ್ರೀ ಎಂಬ ವಸ್ತು ಬೇಕಲ್ಲಾ? ಆವಾಗ ಅವರುಗಳ ಕಣ್ಣಿಗೆ ಬಿದ್ದಿದ್ದು ಮನೆ ಕೆಲಸದಕ್ಕೆ ಬರುತ್ತಿದ್ದ ಆಳುಗಳ ಪತ್ನಿಯರು!
ಈಚೆಗೆ ಹತ್ತಿಪ್ಪತ್ತು ವರ್ಷಗಳ ಹಿಂದೆಯೂ ನಮ್ಮಲ್ಲಿ ಹುಡುಗಿಯರಿಗೆ ಬೇಗ ಮದುವೆ ಮಾಡಿಸಲಾಗುತ್ತಿತ್ತು (ಈಗಲೂ ಕೆಲವೆಡೆ ಜಾರಿಯಲ್ಲಿದೆ) ಹಾಗೆಯೇ ಅವರ ಮನೆಯ ಕೆಲಸದಾಳುಗಳಿಗೂ ಸಣ್ಣ ಪ್ರಾಯದ ಹುಡುಗಿಯರ ಜೊತೆ ಮದುವೆಯಾಗಿತ್ತು. ಆದರೆ ಆ ಆಳುಗಳ ದುರಾದೃಷ್ಟ ನೋಡಿ, ತನಗೆಂದ ಸಿಕ್ಕಿದ್ದ ನೈವೇದ್ಯ ಧಣಿಯವರ ಪಾಲಾಗುತ್ತಿತ್ತು. ಯಾರ ಹೂವು ಯಾರ ಮುಡಿಗೋ… ತನ್ನ ಮನೆಯಲ್ಲಿ ಕೆಲಸಕ್ಕಿರುವವ ನೀನು, ನಿನ್ನ ಮನೆಯಲ್ಲಿ ನಾನು ಏನು ಬೇಕಾದರೂ ಮಾಡಬಹುದೆಂದು ಈ ಧಣಿಯವರು ಆಳುಗಳ ಮನೆಯಲ್ಲಿ ಹಾಡುಹಗಲೇ ರಾಸಲೀಲೆಯಾಡುತ್ತಿದ್ದರು. ಆಳುಗಳಿಗೋ ಮಾತನಾಡಲು ಹೆದರಿಕೆ, ಎಷ್ಟಾದರೂ ಹಣವಿರುವವರು, ಕೆಲಸ ಕೊಟ್ಟವರು, ಅವರ ತೋಟದ ಬದಿಯಲ್ಲೇ ಮುಳಿ ಹುಲ್ಲಿನ ಮನೆ ಕಟ್ಟಿಸಿಕೊಟ್ಟಿದ್ದಾರೆ. ವಿರೋಧ ವ್ಯಕ್ತಪಡಿಸಿದರೆ ಎಲ್ಲಿ ಕೆಲಸದಿಂದ ಕಿತ್ತೆಸೆಯುತ್ತಾರೋ ಎನ್ನುವ ಆತಂಕ, ಮನದೊಳಗೆ ಬೆಂಕಿಯಂತಹ ಆಕ್ರೋಶ ಕುದಿಯುತ್ತಿದ್ದರೂ ಏನೂ ಮಾಡುವ ಸ್ಥಿತಿಯಲ್ಲಿ ಆ ಗಂಡಸರಿರಲಿಲ್ಲ. ಉಫ್…. ತಮ್ಮ ಕಣ್ಣ ಮುಂದೆಯೇ ಧಣಿಯವರು ತನ್ನ ಮನೆಗೆ ನುಗ್ಗುವಾಗ ಅಥವಾ ಹೆಂಡತಿಯನ್ನು ಮನೆಗೆ ಕರೆಸಿಕೊಳ್ಳುವಾಗ ಆ ಗಂಡಸಿನ ಗಂಡಸುತನಕ್ಕೆ ಅದೆಂತಹಾ ಸವಾಲು ಬಂದಿರಬಹುದು? ಪಾಪ…. ಏನೂ ಅರಿಯದ ವಯಸ್ಸಿನಲ್ಲಿ ಮದುವೆಯಾಗಿ ಬಂದು ಈಗ ಇನ್ನಾರಿಗೋ ಆಹಾರವಾಗುತ್ತಿರುವಾಗ ಆ ಹುಡುಗಿಗೆ ಹೇಗನಿಸಿರಬಹುದು? ಕಾಮದ ನೆಪದಲ್ಲಿ ಈ ಧಣಿ ಇನ್ನಿಲ್ಲದ ನೋವು ಕೊಡುವಾಗ ಆಕೆ ಅದೆಷ್ಟು ನೊಂದಿರಬಹುದು? ನೆನೆದರೆ ಕೋಪ ನೆತ್ತಿಗೇರುತ್ತದೆ ನನಗೆ…
ಹೌದು… ಈ ಸಹೋದರರು ಅದೆಂತಾ ನಾಚಿಕೆಯಿಲ್ಲದವರೆಂದರೆ ಅಡಕೆ ಮರದ ಹಿಂದೆ ನಿಂತು ಹೊಂಚು ಹಾಕಿ ಸಾಲು ಸಾಲಾಗಿ ಆಳುಗಳ ಮನೆಗೆ ಬರುತ್ತಿದ್ದರಂತೆ. ಮತ್ತೊಬ್ಬ ಆಳಿನ ಮನೆಯಲ್ಲಿ ಇಬ್ಬರು ಅವಳಿ ಮಕ್ಕಳಿದ್ದಾರೆ. ಆ ಧಣಿ ಸಹೋದರರಲ್ಲಿ ಒಬ್ಬನ ಮುಖ ಆ ಅವಳಿಗಳ ಮುಖಕ್ಕೆ ಮ್ಯಾಚ್ ಆಗುತ್ತದೆ. ಅದರ ಹಿಂದಿನ ರಹಸ್ಯ ಕೆದಕಿದಾಗ ನನಗೆ ತಿಳಿದ ಕ್ರೂರ ಸತ್ಯ “ಇದು ದೊಡ್ಡ ಧಣಿಯವರ ಕೃಪೆ ಎಂದು. ಪ್ರಾಯದಲ್ಲಿ ಅತ್ಯಂತ ಹಿರಿಯರಾದ ದೊಡ್ಡ ಧಣಿಯವರೂ ಕೂಡಾ ಮತ್ತೊಬ್ಬ ಕೆಲಸದಾಕೆಯನ್ನು ಬಳಸಿಕೊಂಡಿದ್ದಾರೆಂದರೆ ಇದು ವಂಶಪಾರಂಪರ್ಯವಾಗಿಯೇ ಬಂದಿದೆ ಎಂದು ನನಗನಿಸಿತು.
ಕೆಲವರಿಗೆ ಈ ಸತ್ಯ ಗೊತ್ತಿದೆ. ಮತ್ತೆ ಕೆಲವರಿಗೆ ಗೊತ್ತಿಲ್ಲ. ಆದರೆ ಜಗತ್ತು ಈಗಲೂ ಅವರೆಲ್ಲರನ್ನೂ ಗೌರವಿಸುತ್ತಿದೆ. ಅದೇ ಹಳೇ ಗೌರವಾದಾರಗಳಿಂದ ನೋಡುತ್ತಿದೆ…. ಯಾಕೆಂದರೆ ಅವರ ಬಳಿ ನೂರಾರು ಎಕರೆ ಜಮೀನಿದೆ, ಹಣ ಬಲವಿದೆ, ಜನ ಬಲವಿದೆ, ಎಷ್ಟಾದರೂ ಅವರು ಧಣಿಗಳು…”
ಇದನ್ನೆಲ್ಲ ಕೇಳಿದ ನನಗಂತೂ ರೋಷ ಉಕ್ಕೇರಿತು. ಅಲ್ಲಾ, ಕೆಲಸ ಕೊಟ್ಟ ಮಾತ್ರಕ್ಕೆ ಕೆಲಸದವನ ಹೆಂಡತಿಯರನ್ನು ಮನಸೋ ಇಚ್ಛೆ ಬಳಸಿಕೊಳ್ಳುತ್ತಾರಲ್ಲಾ…ಥೂ ನಾಚಿಕೆಯಾಗುವುದಿಲ್ಲವೇ? ಬಡವರ ವೀಕ್ನೆಸ್ಸನ್ನು ತಮ್ಮ ಬಂಡವಾಳ ಮಾಡಿಕೊಳ್ಳಲು ಮನಸ್ಸಾದರೂ ಹೇಗೆ ಬರುತ್ತದೆ? ಇದು ಬರೀ ಈ ಒಂದು ಕುಟುಂಬದಲ್ಲಿ ಅಲ್ಲ, ಹಿಂದಿನಿಂದಲೂ ಪಾಳೇಗಾರರೂ ಜಮೀನ್ದಾರರು ಎಲ್ಲರೂ ಇದನ್ನು ಪಾಲಿಸಿಸಿಕೊಂಡು ಬಂದವರೇ… ಛೇ…
ಅನಷ್ಕು
Bhavataranga.rk@gmail.com
Facebook ಕಾಮೆಂಟ್ಸ್