ಆತ್ಮ ವರ್ಷಿ ಸೃಷ್ಟಿಸಿದ ಮನುಷ್ಯ. ಕಲಿಯುವಿಕೆಯಿಂದಲೇ ಜ್ಞಾನ ಪಡೆಯುವುದು ಕಳೆದ ಕಾಲ; ಈಗ ಜ್ಞಾನ ಕೂಡ ಹುಟ್ಟುತ್ತಲೇ ಬಂದಿರುತ್ತದೆ. ಆದ್ದರಿಂದಲೇ ಆತ್ಮ ಕೂಡ ವರ್ಷಿಯಷ್ಟೇ ಚುರುಕಾಗಿದ್ದ. ವರ್ಷಿ ತಿಳಿದಿರುವ ಪ್ರತಿಯೊಂದೂ ವಿದ್ಯೆಯೂ ಆತ್ಮನಿಗೆ ಗೊತ್ತು. ಆದರೆ ಒಂದು ವಿಷಯದಲ್ಲಿ ಮಾತ್ರ ವರ್ಷಿ ಆತ್ಮನಿಗಿಂತ ಶಕ್ತಿವಂತ, ಆತ ವಿಶ್ವಾತ್ಮನನ್ನು ನೋಡಬಲ್ಲ. ವಿಶ್ವದ ಅತ್ಯಂತ ದೊಡ್ಡ ಹಾಗೂ ಪ್ರಭಾವಶಾಲಿ ಶಕ್ತಿ ವರ್ಷಿಯ ಜೊತೆ ಇತ್ತು. ವರ್ಷಿ ಬಯಸಿದ್ದನ್ನೆಲ್ಲ ವಿಶ್ವಾತ್ಮನ ನೆರವಿನಿಂದ ರೂಪಿಸಿದ, ಇಲ್ಲ; ವಿಶ್ವಾತ್ಮ ಬಯಸಿದ್ದನ್ನು ವರ್ಷಿ ಬದಲಾಯಿಸಿದ ಅಷ್ಟೆ.
ತನ್ನ ಪ್ರಯೋಗದಲ್ಲಿ ಮಗ್ನನಾಗಿದ್ದ ಆತ್ಮ. ಮನಸ್ಸು “ನನಗೊಂದು ಸಂಗಾತಿ ಬೇಕು, ಕಷ್ಟವೆಂದಲ್ಲ ಆದರೂ ಹಂಚಿಕೊಳ್ಳಲೊಂದು ಸಂಗಾತಿ ಬೇಕು, ಆನಂದವನ್ನು ಹಂಚಿಕೊಳ್ಳಬಹುದಲ್ಲವೇ? ಅದಕ್ಕಾಗಿಯಾದರೂ ಜೊತೆ ಬೇಕು. ನಿನಗಾಗಿ ನಾನು ಬದುಕುತ್ತೇನೆ ಎಂದು ಮುಗುಳ್ನಗುವ ಸಾಂಗತ್ಯವಿರಬೇಕು. ಇಲ್ಲವೇ ನಾನೇ ನಿನಗಾಗಿ ಬದುಕುವೆ ಎಂದು ಕರಗುವ ಸಹವಾಸದ ಅನುಭೂತಿ ಬೇಕು,ಅವಳೆದುರು ಕರಗಬೇಕು,ಅವಳು ನನಗೆಂಬಂತೆ ಹರಿಯಬೇಕು; ಭೋರ್ಗರೆಯಬೇಕು.” ಎಂದೆಲ್ಲ ಕನಸು ಕಟ್ಟತೊಡಗಿತ್ತು.
ಬೇರೆ ಬೇರೆ ಪ್ರನಾಳದಲ್ಲಿ ಬೇರೆ ಬೇರೆ ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸಿಟ್ಟಿದ್ದ ಕೆಮಿಕಲ್ ಗಳನ್ನು ಒಂದೇ ದೊಡ್ಡದಾದ ಗಾಜಿನ ಬೀಕರಿನಲ್ಲಿ ಬೆರೆಸಿದ. ಅವೆಲ್ಲವೂ ಸೇರಿ ವಾತಾವರಣದಲ್ಲಿ ವಿಚಿತ್ರ ವಾಸನೆ ಸೇರಿಕೊಂಡಿತು. ಗಾಜಿನ ಬೀಕರಿನೊಳಗಡೆ ಕೆಮಿಕಲ್ ರಿಯಾಕ್ಷನ್ ನಡೆಯಲು ಪ್ರಾರಂಭವಾದಂತೆಯೇ ಕಂಪ್ಯೂಟರ್ ನಲ್ಲಿ ನಿಗದಿತ ಪ್ರಮಾಣದ temperature ಮತ್ತು ನಿರ್ದಿಷ್ಟ Time ನಿಗದಿಪಡಿಸಿದ ಆತ್ಮ.
ಎದೆ ಹೊಡೆದುಕೊಳ್ಳುತ್ತಿತ್ತು. ಬಹಳ excitement ನಲ್ಲಿ ಕುಳಿತಿದ್ದ ಆತ್ಮ. ಯೋಚನೆಗಳ ಮೆರವಣಿಗೆ… ಇದು ನನ್ನ ಮೊದಲ ಸೃಷ್ಟಿ, ಹೊಸ ಆವಿಷ್ಕಾರ. ಫಲಿತಾಂಶ ಏನೆಂದು ಕಾದು ಕೂರಬೇಕು. ಅದಕ್ಕಿನ್ನೂ ಆರು ಘಂಟೆ. ಸುದೀರ್ಘ ೩೬೦ ನಿಮಿಷಗಳು, ಯುಗಗಳಾಗುವ ೨೧೬೦೦ ಸೆಕೆಂಡ್ ಗಳು.
ಅಷ್ಟು ಹೊತ್ತಿನಲ್ಲಿ ಸದೃಢ ಮೈಕಟ್ಟಿನ ಬುದ್ಧಿ ತುಂಬಿದ ಜೀವವೊಂದು ತಯಾರಾಗಿ ಬಿಡುತ್ತದೆ. ನನಗಾಗಿ ಮಿಡಿಯುವ ಜೀವ ಅದು. ಎಲ್ಲ ಕೆಲಸಕ್ಕೂ ಅದು ಸಿದ್ಧ. ದೇವರ ವಿಶ್ವಾತ್ಮನ ಸೃಷ್ಟಿಯಲ್ಲಿ ಅದ್ಯಾವುದೋ ಕ್ರಿಯೆಯ ಪರಿಪೂರ್ಣ ಪ್ರತಿಕ್ರಿಯೆಯ ನಂತರವೂ ಒಂಬತ್ತು ತಿಂಗಳು ಕಾಯಬೇಕು. ಹುಟ್ಟಿದ ಮೇಲೂ ಮಾತು ಕಲಿಯಬೇಕು, ಬುದ್ಧಿ ಬಲಿಯಬೇಕು, ಮನಸು ಹದವಾಗಬೇಕು, ಕಾಲೆಡವಿದರೂ ನಡೆಯಬೇಕು. ಅವೆಷ್ಟೋ ಅನಿಶ್ಚಿತ ಅವಧಿಯ ವ್ಯರ್ಥ ಕಾರ್ಯಕಲಾಪ.
ಇಲ್ಲಿ ಅಂತಹದೇನೂ ಇಲ್ಲ. ಕೇವಲ ೬ಘಂಟೆಯಲ್ಲಿ ಬುದ್ಧಿವಂತ, ಯೌವನ ತುಂಬಿದ ಜೀವ ಸೃಷ್ಟಿಯಾಗುತ್ತದೆ; ಹೆಣ್ಣು ಗಂಡು ಯಾರಾದರೂ ಸರಿಯೇ. ದೇವರಿಗಿಂತ ನಾವೇ ಶಕ್ತಿವಂತರಲ್ಲವೇ? ಯೋಚನೆಗಳಿಗೆ ಕಡಿವಾಣ ಹಾಕಿ ಗಡಿಯಾರ ನೋಡಿಕೊಂಡ. ಒಂದು ನಿಮಿಷ ಮುಂದೆ ನಿಂತಿತ್ತು ಕೆಂಪು ಕಡ್ಡಿ.
ಅದೇ ಆರು ಘಂಟೆ ಕಾಯಲೇ ಬೇಕು. ಎದ್ದು ಹೋಗಲು ಮನಸ್ಸಾಗಲಿಲ್ಲ. ಕುಳಿತಲ್ಲೇ ಮನಸ್ಸು ಮಾತನಾಡತೊಡಗಿತ್ತು. ” ದೇವರ ಸೃಷ್ಟಿಯಲ್ಲಿ ಗಂಡು ಮತ್ತು ಹೆಣ್ಣಿನ ಮಿಲನ ಬೇಕು, ಅದಾದ ನಂತರ ಸತ್ವ ದೇವತೆ ಹೆಣ್ಣು ಅವೆಷ್ಟೋ ಕಷ್ಟಗಳ ಕಳೆದು ತಾನೇ ಸತ್ತಾದರೂ ಹೊಸ ಉಸಿರಿಗೆ ಜೀವ ಕೊಡಬೇಕು. ಗಂಡಿಗಿಲ್ಲದ ಕಷ್ಟವನ್ನು ಹೆಣ್ಣಿಗೇಕೆ ಕೊಟ್ಟ?
ಎಲ್ಲರಿಗಿಂತ ಬುದ್ಧಿವಂತನಾದ ದೇವರು ಸಮಾನತೆಯನ್ನು ಏಕೆ ಇಡಲಿಲ್ಲ? ಪ್ರಶ್ನೆಗಳ ಹಿಂದೋಡಲು ಮನಸ್ಸಾಗಲಿಲ್ಲ. ಅದನ್ನೂ ತಿಳಿದಿರಬೇಕು, ಪಂಜರದ ಬೆಕ್ಕು ಅತ್ತಿಂದ ಇತ್ತ ಓಡಾಡಿ ಅರಚಿಕೊಂಡಿತು. ಅದರ ಸ್ವರ ಅಲ್ಲಿನ ಇತರ ಜೀವಿಗಳಿಗೂ ಚೈತನ್ಯ ತುಂಬಿರಬೇಕು, ಎಲ್ಲವೂ ತಮ್ಮದೇ ಭಾಷೆಯಲ್ಲಿ ಮಾತನಾಡಿಕೊಂಡವು; ಬೇರಾರಿಗೂ ಅರ್ಥವಾಗದಂತೆ. ಆತ್ಮ ಏನೇನೋ ಯೋಚಿಸುತ್ತಲೇ ನಿದ್ರೆಯ ಗುಂಗಿಗೆ ಜಾರತೊಡಗಿದ. ಟೆನ್ಸನ್ ನಲ್ಲೂ ಅಷ್ಟು ನಿದ್ರೆ ಬರುತ್ತಿರುವುದು ಹೇಗೆಂದು ಅರ್ಥವಾಗಲಿಲ್ಲ ಆತ್ಮನಿಗೆ. ಕಣ್ಣುಗಳು ಮತ್ತೂ ಗಾಢವಾಗಿ ಸೇರಿಕೊಂಡವು. ಅಗೋಚರ ಶಕ್ತಿಯೊಂದು ಕಂಗಳ ಮೇಲೆ ಒತ್ತಡ ಹಾಕಿದಂತೆ, ಪ್ರಾಣಿಗಳ ಅರಚುವಿಕೆ, ಓಡಾಟ ತೀವ್ರವಾಯಿತು. ಕಣ್ಣೆದುರು ಯಾರದೋ ಕೈ ತಡೆದಂತೆ ಬಿಡಲಾಗುತ್ತಿಲ್ಲ. ಪೂರ್ತಿ ಕತ್ತಲು ಅಷ್ಟೆ. ಆಳವಾದ ನಿದ್ರೆಗೆ ಜಾರಿದ ಆತ್ಮ.
” ಹುಟ್ಟುವುದು ಮತ್ತು ಸಾಯುವುದು ಒಂದು ಪವಿತ್ರವಾದ ಅಷ್ಟೇ ತೀವ್ರವಾದ ಉನ್ಮಾದತೆ. ಹುಟ್ಟು ಉತ್ಸಾಹದ ಸಂಕೇತ, ಸಾವು ನಿರುತ್ಸಾಹದ್ದು. ಸಾವು ಕತ್ತಲಿನಷ್ಟೇ ವಿಚಿತ್ರ ಸತ್ಯ. ಜಗತ್ತಿನ ಕೊನೆಯ ಸತ್ಯ ಕೂಡ. ಹುಟ್ಟು ಸಾವಿನ ನಡುವಿನ ಬದುಕು ದಿವ್ಯ ತಪಸ್ಸು, ಸುಪ್ತ ಸನ್ಯಾಸ; ಅಂತ್ಯವಿಲ್ಲದ ಮಹಾಕಾವ್ಯ. ಮನುಷ್ಯ ಬುದ್ಧಿವಂತ ಜೀವಿಯನ್ನೇ ಸೃಷ್ಟಿಸಬಹುದು, ಸೃಷ್ಟಿಸುವ ಮುನ್ನವೇ ಕೃತಕ ಬುದ್ಧಿಯನ್ನೂ ತುಂಬಬಹುದು. ಆದರೆ ಬದುಕುವ ನೀತಿ ಕಲಿಸಲಾರ, ಅವನೊಳಗೆ ಅಳವಡಿಸಲಾರ.
ಹೆಣ್ಣು ಮತ್ತು ಗಂಡು ಮಿಲನವಾದಾಗ ಹೆಣ್ಣಿನಲ್ಲಿ ಸೇರುವ ಗಂಡಿನ ತೇಜಸ್ಸು ಎಲ್ಲವೂ ಜೀವ ಹಿಡಿಯುತ್ತದೆಯೆಂಬ ನಿಯಮವಿಲ್ಲ. ಇದು ಮನುಷ್ಯನಿಗೆ ಮಾತ್ರ ಸೀಮಿತವಲ್ಲ. ಭೂಮಿಯ ಮೇಲಿನ ಸಕಲ ಜೀವಿಗಳೂ, ಗಿಡ ಮರಗಳಲ್ಲೂ ಇದೇ ನಡೆಯುತ್ತಿರುತ್ತದೆ. ಅಲ್ಲಿಂದಲೇ ಪ್ರಬಲತೆ ಮತ್ತು ದುರ್ಬಲತೆಯ ನಡುವೆ ಪೈಪೋಟಿ ಪ್ರಾರಂಭವಾಗುವುದು. ಜೀವಿಯ ಮೊದಲ ಹಂತದಲ್ಲಿಯೇ ಬದುಕುವ ನೀತಿಯ ಪಾಠ ಪ್ರಾರಂಭವಾಗುತ್ತದೆ.
ಅತ್ಯಂತ ಪ್ರಬಲರು, ಅತ್ಯಂತ ದುರ್ಬಲರು ಎಲ್ಲರೂ ವಿಶ್ವಾತ್ಮನಿಂದಲೇ ನಾಶವಾಗುತ್ತಾರೆ. ಇಂಥ ಹೋರಾಟದಲ್ಲೂ ಕೊನೆಯಲ್ಲಿ ಉಳಿಯುವ ಒಂದು ತೇಜಸ್ಸು ಮಾತ್ರ ಮೊಳಕೆಯೊಡೆದು ಫಲ ಕೊಡುತ್ತದೆ. ವಿಶ್ವಾತ್ಮ ಕೂಡ ೬ಗಂಟೆಗಳಲ್ಲಿ ಸೃಷ್ಟಿಸಬಲ್ಲ, ಸೃಷ್ಟಿಸುತ್ತಾನೆ, ಸೃಷ್ಟಿಸುತ್ತಲೇ ಇರುತ್ತಾನೆ ಕೂಡ. ಎಷ್ಟೋ ಬ್ಯಾಕ್ಟೀರಿಯಾಗಳು, ಅಮೀಬಾಗಳಂತ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು ವಿಶ್ವಾತ್ಮನಿಂದ ಪ್ರತಿ ಕ್ಷಣವೂ ಹುಟ್ಟಿ ಸಾಯುತ್ತಿರುತ್ತವೆ. ಒಂಬತ್ತು ತಿಂಗಳು ತಾಯಿಯ ಹೊಟ್ಟೆಯಲ್ಲಿನ ಪ್ರತಿ ಜೀವವೂ ಬದುಕುವ ನೀತಿಯನ್ನು ಕಲಿಯುತ್ತಿರುತ್ತದೆ. ತಾಯಿ ತೆಗೆದುಕೊಳ್ಳುವ ಆಹಾರ ರಕ್ತವಾಗಿ ಅದು ಹೊಸ ಜೀವಿಗೆ ಆಹಾರವಾಗುತ್ತದೆ. ಭ್ರೂಣದೊಳಗಡೆ ಮೆಲ್ಲನೆ ಉಸಿರಾಡುತ್ತಿರುವ ಹೊಸ ಸೃಷ್ಟಿಗೆ ಒಂಬತ್ತು ತಿಂಗಳು ಹೇಳುವುದು ” ನೀನು ಭೂಮಿಯ ಮೇಲಿನ ಪ್ರಬಲ ಜೀವಿ, ನಿನ್ನ ತಾಯಿ ಸೇವಿಸುತ್ತಿರುವುದು ಈ ವಿಶ್ವದ ಚೇತನವನ್ನೆ, ಅದೇ ಚೇತನ ರಕ್ತವಾದಾಗ ನೀನು ಆಹಾರ ಪಡೆಯುವುದು. ನೀನು ತಿನ್ನುತ್ತಿರುವುದು ಈ ವಿಶ್ವಾತ್ಮನ ಋಣವನ್ನೇ. ಭೂಮಿಗೆ ನೀನು ಬಂದ ಕ್ಷಣದಿಂದ ಈ ವಿಶ್ವಾತ್ಮನ ಬದುಕುವ ನೀತಿಗೆ ತಕ್ಕನಾಗಿ ಬದುಕು, ” ವಿಶ್ವಾತ್ಮನೇ ಎಲ್ಲವನ್ನೂ ಕಲಿಸಿ, ತಿಳಿಸಿ ಕೊನೆಯಲ್ಲಿ ಕೇಳುತ್ತಾನೆ ” ಈ ಬದುಕುವ ನೀತಿಯನ್ನು ನೀನೆತಕ್ಕೆ ಬಳಸುವೆ?” ಮುಗ್ಧ ಜೀವವೂ ಅಹಂಕಾರಕ್ಕೆ ಕಡಿಮೆಯಿಲ್ಲದೆ ” ನಾನು ಬದುಕಲು, ನನ್ನ ಸ್ವಾರ್ಥಕ್ಕೆ, ಅದಕ್ಕೂ ಮೀರಿ ಎಲ್ಲರನ್ನು ಆಳಲು ಈ ಬುದ್ಧಿಯನ್ನು ಉಪಯೋಗಿಸುತ್ತೇನೆ” ಎಂದು ಸೆಟೆಯುತ್ತದೆ.
ಇದೇ ಕಾರಣದಿಂದ ವಿಶ್ವಾತ್ಮ ಜೀವಿಗೆ ಬೋಧಿಸಿದ ಎಲ್ಲವನ್ನು ಮರೆಯುವಂತೆ ಮಾಡಿ ತಾಯಿಯ ಹೊಟ್ಟೆಯಿಂದ ಹೊರಗಿನ ಪ್ರಪಂಚಕ್ಕೆ ತಳ್ಳುತ್ತಾನೆ. ಎಲ್ಲವನ್ನೂ ಕಲಿತುಕೊಂಡು ತನ್ನ ದುರಾಸೆಯಿಂದ ಎಲ್ಲವನ್ನೂ ಕಳೆದುಕೊಂಡು ಮೊದಲಿನಂತಾಗುವ ಮಗು ಬಿಕ್ಕಿ ಬಿಕ್ಕಿ ಅಳುತ್ತದೆ. ಹುಟ್ಟಿದ ಯಾವ ಪ್ರಾಣಿಗಳು ಅಳುವುದಿಲ್ಲ, ಮನುಷ್ಯನ ಹೊರತಾಗಿ. ಅದಕ್ಕೆ ಇದೇ ಕಾರಣ. ಅವುಗಳಿಗೆ ಬದುಕುವ ನೀತಿ ತಿಳಿದಿದೆ. ಮನುಷ್ಯನೊಂದು ಬಿಟ್ಟು ಉಳಿದ ಯಾವ ಪ್ರಾಣಿಗಳೂ ಸಾವಿಗೆ ಭಯಪಡಲಾರವು. ಅವು ಸ್ವಚ್ಛಂದವಾಗಿ ಬದುಕುತ್ತವೆ. ವಿಶ್ವದಿಂದ ಏನೇನನ್ನು ಪಡೆಯುತ್ತವೆಯೋ ಅದಕ್ಕೆ ಸರಿಸಮನಾಗಿ ಎಲ್ಲವನ್ನೂ ಮರಳಿ ಕೊಡುತ್ತವೆ. ಮನುಷ್ಯನ ಹಸ್ತಕ್ಷೇಪವಿಲ್ಲದಿದ್ದರೆ ಎಲ್ಲವೂ ಸುಂದರವೇ.
ಏನಾದರೂ ಸರಿ ಬದುಕುವ ನೀತಿಯಿಂದ ಹೊರಬಿದ್ದ ಮನುಷ್ಯ ಎಲ್ಲವನ್ನೂ ಕಲಿಯುತ್ತಾನೆ.ಅವನ ಸುತ್ತಲಿನ ಪರಿಸರಕ್ಕೆ ಸಮನಾಗಿ ಅವನ ಆತ್ಮ ರೂಪುಗೊಳ್ಳುತ್ತದೆ. ಸುತ್ತಮುತ್ತ ಎಂತಹ ಜನರಿರುವರೋ ಅಂತಹುದೇ ಬುದ್ಧಿ ಕಲಿಯುತ್ತಾನೆ. ಬದುಕುವ ನೀತಿಗೆ ವಿರುದ್ಧವಾಗಿ ಬದುಕುತ್ತಾನೆ ಮನುಷ್ಯ.
ಹೆಣ್ಣು ಏಕೆ ಹೆರಬೇಕು? ಸಮಾನತೆ ಇಲ್ಲ ಎಂಬ ತಿಳುವಳಿಕೆಯೇ ಸುಳ್ಳು, ನೀನು ಒಂದೇ ಜನ್ಮದ ಬಗ್ಗೆ ಯೋಚಿಸುತ್ತಿದ್ದೀಯಾ, ವಿಶ್ವದ ಶಕ್ತಿಯು ಮುಗಿಯುವುದೇ ಇಲ್ಲ. ಒಂದು ಸಲ ಗಂಡಾದರೆ, ಮತ್ತೊಮ್ಮೆ ಹೆಣ್ಣಾಗಿಯೋ, ಇನ್ನೊಮ್ಮೆ ಇನ್ಯಾವುದೋ ಜೀವಿಯಾಗಿಯೋ ಅದನ್ನೂ ಹೊರತುಪಡಿಸಿ ಕೆಲವೊಮ್ಮೆ ನಿರ್ಜೀವವಾಗಿಯಾದರೂ ಆತ್ಮ ತನ್ನ ಕ್ರಿಯೆಯನ್ನು ಮುಂದುವರೆಸುತ್ತಲೇ ಇರುತ್ತದೆ. ಎಲ್ಲಿಯವರೆಗೆ ಆತ್ಮವು ವಿಶ್ವಾತ್ಮನಲ್ಲಿ ಒಂದಾಗುವುದಿಲ್ಲವೋ ಅಲ್ಲಿಯವರೆಗೂ ಬದುಕುವ ನೀತಿ ತಿಳಿಯದ ಯಾರನ್ನು ನೀನು ಸೃಷ್ಟಿಸಿದರೂ ಅದು ಪ್ರಯೋಜನವಿಲ್ಲದ್ದು. ವಿಶ್ವದಿಂದ ನೀನು ಏನನ್ನು ತೆಗೆದುಕೊಂಡಿರುವೆಯೋ ಅದನ್ನು, ಅದಕ್ಕೆ ಸಮನಾದ ಇನ್ನಾವುದನ್ನೋ ಮರಳಿ ಕೊಡಲು ನಿನಗೆ ತಿಳಿಯದಿದ್ದರೆ ಯಾವ ಬುದ್ಧಿಯೂ ಅಗತ್ಯವಿಲ್ಲ ಬದುಕಿಗೆ. ಅಂತಹವರಿಂದ ಅಂತ್ಯವೇ ಹೊರತು ಆರಂಭವಿಲ್ಲ. ಈಗ ನಡೆಯುತ್ತಿರುವು ಅದೇ ಅಂತ್ಯ… ಭೂಮಿಯ ಅಂತ್ಯ…”
ಪ್ರಾಣಿಗಳು ಮತ್ತೂ ಗಟ್ಟಿಯಾಗಿ ಚೀರಿದವು. ಪ್ರಕಾಶಮಾನವೊಂದು ಅಲ್ಲಿಂದ ಹೋದಂತೆ ಭಾಸವಾಯಿತು ಆತ್ಮನಿಗೆ. ತಣ್ಣನೆ ಗಾಳಿ ಬೀಸಿದಂತಾಯಿತು. ಒಮ್ಮಿಂದೊಮ್ಮೆಲೆ ಎಚ್ಚರಾಗಿ ಕುಳಿತ ಆತ್ಮ.
” ನನಗೆ ಭ್ರಮಿಸಿದ್ದು ಕನಸಾ? ಈ ಗಳಿಗೆಯಲ್ಲಿ ಅರಿವಿಲ್ಲದ ನಿದ್ರೆ ಏಕೆ? ಕನಸುಗಳೇ ನನ್ನ ಪ್ರಶ್ನೆಗೆ ಉತ್ತರವಿರಬೇಕು. ಮಾತನಾಡಿದ್ದು ವಿಶ್ವಾತ್ಮನಿರಬೇಕು. “
ಯಾವುದೂ ತಿಳಿಯಲಿಲ್ಲ,ಏನೊಂದೂ ಅರ್ಥವಾಗಲಿಲ್ಲ ಆತ್ಮನಿಗೆ. ಎದುರಿನ ಬಿಕರಿನಲ್ಲಿದ್ದ ದ್ರಾವಣಗಳು ಕ್ರಮೇಣ ಗಟ್ಟಿಯಾಗುತ್ತಿದ್ದವು. ನನ್ನ ಸೃಷ್ಟಿಗೆ ಬದುಕುವ ನೀತಿ ತಿಳಿದಿಲ್ಲವೇ? ಹೇಗೆ..? ಹೇಗೆ ನಾನು ಬದುಕುವ ನೀತಿ ಹೇಳಲಿ…? ನನಗೆ ಗೊತ್ತಿದ್ದರೆ ತಾನೇ, ಎಂದು ಗೊಂದಲದಲ್ಲೂ ನಿರಾಳವಾದ ಆತ್ಮ.
ಆತ್ಮನ ಹೊಸ ಸೃಷ್ಟಿ ಮೊಳಕೆಯೊಡೆಯಿತು……
Facebook ಕಾಮೆಂಟ್ಸ್