ಬಹುಶಃ ನನ್ನ ಶಕ್ತಿ ಯಾವ ಕ್ರೂರ ಮೃಗಗಳಿಗೂ ಕಡಿಮೆ ಇಲ್ಲ ಅನ್ನಿಸುವಂತೆ ವರ್ತಿಸುತ್ತಿದ್ದೆ. ಕಾಡುಹಂದಿಗಳ ಜೊತೆ ಕಾದಾಟ, ನರಿಯ ಬಾಯಿ ಸಿಗಿದದ್ದು ಒಂದೇ ಎರಡೇ ಎಷ್ಟೋ ಬಾರಿ ನನ್ನ ಮೇಲೆ ಆಕ್ರಮಣ ಮಾಡಿದ ಪ್ರಾಣಿಗಳನ್ನು ಕೊಂದು ಅವನ್ನೇ ತಿಂದೆ. ಒಮ್ಮೆ ಒಂದು ನರಿಯ ಜೊತೆ ಕಾದಾಡುವಾಗ ಬೆನ್ನು, ತೊಡೆ ಮತ್ತು ತೋಳುಗಳಮೇಲೆ ಆದ ಪಂಜಿನ ಗೀರುಗಳಿಂದ ಅಧಿಕ ರಕ್ತಸ್ರಾವವಾಗಿ ಜ್ವರಬಂದು ಬಹಳದಿನಗಳ ವರೆಗೆ ನರಳಿದ್ದೆ, ಅದೇ ಕಡೆ ಮುದೆ ಯಾವತ್ತೂ ಯಾವ ಪ್ರಾಣಿಯೊಡನೆಯೂ ಕಾದಾಟವಾಗಲಿಲ್ಲ. ಏಕೆಂದರೆ ಅದು ಯಾವುದೋ ಶಕ್ತಿ ನನಗೆ ಮುನ್ಸೂಚನೆ ಕೊಟ್ಟುಬಿಡುತ್ತಿತ್ತು. ಆಕ್ರಮಣಕ್ಕೆ ಯಾವುದೇ ಪ್ರಾಣಿ ಬರುತ್ತಿದೆ ಇಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಮತ್ತು ನನಗೆ ಪ್ರಾಣಿಗಳ ಕೂಗಾಟ ಹಾಗೂ ಬೀಸುವ ಗಾಳಿಯಲ್ಲಿನ ವಾಸನೆಯ ವ್ಯತ್ಯಾಸವೂ ತಿಳಿಯುತ್ತಿತ್ತು. ಹೀಗೇ ಅಲೆಯುತ್ತಾ ಕಾಡುಮನುಷ್ಯನ ರೀತಿ ಜೀವನ ಸಾಗಿಸುತ್ತಿದ್ದೆ.
ಮೊದಮೊದಲು ಮನೆಯವರನ್ನು ನೆನೆದು ಅಳುತ್ತಿದ್ದೆ. ಅವರ ನೆನಪು ಬಂದು ಕಾಡಿನಿಂದ ಓಡಿಹೋಗಲು ಪ್ರಯತ್ನವೂ ಪಟ್ಟೆ ಆದರೆ ಪ್ರತಿ ಪ್ರಯತ್ನದಿಂದ ಹೊಸ ವಿಚಾರಗಳು ಹೊಳೆದು ಆ ಕಾಡಲ್ಲಿ ನಾನು ಉಳಿಯುವಂತೆ ಮಾಡಿದವು. ನಾನು ಕಾಡಿಗೆ ಬಂದು ಸುಮಾರು ವರ್ಷಗಳು ಕಳೆದಿದ್ದವು ಎನ್ನಬಹುದು. ಆಗ ಕಾಡಿನಲ್ಲಿದ್ದ ಅಲೆಯುವಾಗ ಯಾವುದೋ ದೇವಿಯ ದೇವಸ್ಥಾನ ಕಾಣಿಸಿತು. ಅಲ್ಲಿ ಯಾರೋ ಮನುಷ್ಯ ವಾಸಿಸುತ್ತಿರುವ ಹಾಗೆ ಕಂಡಿತು. ಗುಡಿಯ ಹತ್ತಿರದಲ್ಲಿ ಕಟ್ಟಿಗೆ ಮತ್ತು ಹುಲ್ಲಿನಿಂದ ಕಟ್ಟಿದ ಗುಡಿಸಲಿತ್ತು. ಅಲ್ಲಿ ಒಬ್ಬ ಮುದಿ ಸ್ವಾಮೀಜೀ ವಾಸಿಸುತ್ತಿದ್ದ. ಮರೆಯಲ್ಲಿ ನಿಂತು ನಾಲ್ಕೈದು ದಿನ ಅವನ ಓಡಾಟವನ್ನು ಗಮನಿಸಿದೆ. ಅವನು ನೀರಿನಿಂದ ದೇವಿ ಮೂರ್ತಿಯನ್ನು ತೊಳೆದು ಹೂಗಳಿಂದ ಪೂಜೆ ಮಾಡಿ. ಹಣ್ಣುಗಳನ್ನು ಎಡೆ ಇಡುತ್ತಿದ್ದ. ಅವನು ಗುಡಿಯಿಂದ ತನ್ನ ಬಿಡಾರಕ್ಕೆ ಹೋಗಿ ಧ್ಯಾನ ಮಗ್ನನಾಗಿ ಕುಳಿತುಕೊಳ್ಳುತ್ತಿದ್ದ. ಆಗ ದೇವಿಗೆ ಇಟ್ಟಿದ್ದ ಹಣ್ಣುಗಳನ್ನು ನಾನು ತಿನ್ನುತ್ತಿದ್ದೆ. ಬರುಬರುತ್ತಾ ಆ ಸ್ವಾಮೀಜಿಗೆ ಅನುಮಾನ ಪ್ರಾರಂಭಿಸಿತು. ಅವನು ಒಂದು ದಿನ ಹಣ್ಣುಗಳನ್ನು ಇಡಲಿಲ್ಲ. ನಾನು ಅವನ ಬಿಡಾರದ ಹತ್ತಿರ ಹೋದೆ. ಯಾರು ಇಲ್ಲವೆಂದು ಭಾವಿಸಿ ಗುಡಿಸಲ ಒಳಗೆ ಹೋದೆ, ಧ್ಯಾನಮುದ್ರೆಯಲ್ಲಿ ಕುಳಿತ ಅವನು ನನ್ನನ್ನು ನೋಡಿದೊಡನೆಯೇ ಬೆಚ್ಚಿಬಿದ್ದ. ನಾನು ಮೂಲೆಯಲ್ಲಿಟ್ಟಿದ್ದ ಹಣ್ಣಿನ ಬುಟ್ಟಿಯನ್ನು ಹಿಡಿದು ಹೊರಗಡೆ ಓಡಿಬಂದು ಗುಡಿಯ ಎದುರಿಗಿನ ಕಲ್ಲುಬಂಡೆಯ ಮೇಲೆ ಕುಳಿತು ತಿನ್ನುತ್ತಿದ್ದೆ. ಅವನು ನನ್ನೊಡನೆ ಸ್ನೇಹಮಾಡಬಯಸಿದ್ದನು ಎಂದು ಅರಿವಾಯ್ತು ಅವನ ಗುಡಿಸಲಲ್ಲೇ ವಾಸಮಾಡಲಾರಂಭಿಸಿದೆ. ಅವನು ನನಗೆ ಸ್ನಾನ ಮಾಡಿಸಿ ತನ್ನ ಬಟ್ಟೆಗಳನ್ನು ಉಡಿಸಿದ. ಅವನ ಮಾತುಗಳು ನನಗೆ ಅರ್ಥವಾಗುತ್ತಿದ್ದವು ಆದರೆ ಉತ್ತರಿಸಲು ನನಗೆ ಭಾಷೆ ಮರೆತುಹೋಗಿತ್ತು. ಅವನು ನನಗೆ ಮತ್ತೆ ಭಾಷೆ ಕಲಿಸಿದ. ನಾನು ನನ್ನ ಹಿಂದಿನ ಜೀವನವನ್ನು ಹೇಳಿದೆ.
ಅವನ ಜೀವನವನ್ನೂ ಕೇಳಿದೆ ಅವನ ಹೆಸರು ಆತ್ಮಾನಂದ ಹಾಗೂ ಅವನು ಸುಮಾರು ನೂರು ವರ್ಷಕ್ಕೂ ಹೆಚ್ಚಿನ ವಯಸ್ಸಾದವನು ಎಂದು ಹೇಳಿಕೊಂಡಿದ್ದ. ತಾನು ಸಾಯುವ ಮೊದಲು ಇಲ್ಲಿಗೆ ಯಾರೋ ಬರುತ್ತಾರೆ ಎಂದು ದೇವಿಯ ಸಂದೇಶವಿತ್ತು ಎಂದು ಹೇಳಿದ. ಸುಮಾರು ಒಂದು ವರ್ಷ ನಾನು ಅವನೂ ಒಟ್ಟಿಗೇ ಜೀವನ ಮಾಡಿದೆವು. ಅವನಿಂದ ನನಗೆ ಮರುಜನ್ಮವಾದಂತಾಯಿತು. ನಾನು ಮರೆತ ಭಾಷೆ ನೆನಪುಗಳನ್ನು ಮರಳಿ ನನಗೆ ತಂದುಕೊಟ್ಟವನು ಎಂದು ನನಗೆ ಅವನಲ್ಲಿ ಗೌರವ ಮತ್ತು ಅಭಿಮಾನವಿತ್ತು. ನನಗೆ ತಿಳಿಯುತ್ತಿದ್ದ ಶಕುನಗಳನ್ನು ಅವನಿಗೆ ಹೇಳುವ ಮುನ್ನ ಅವನು ಅರ್ಥವನ್ನು ಬಿಡಿಹೇಳುತ್ತಿದ್ದ. ಒಂದು ದಿನ ಮುಂಜಾನೆ ಅವನನ್ನು ನನ್ನಿಂದ ಎಬ್ಬಿಸಲು ಆಗಲಿಲ್ಲಾ ತೀರಿಕೊಂಡಿದ್ದ. ಅವನನ್ನು ಗುಂಡಿತೋಡಿ ಮುಚ್ಚಿ ಅಂತ್ಯಸಂಸ್ಕಾರ ಮಾಡುತ್ತಿದ್ದಂತೆ ನನಗೆ ಬೇಸರ ಕಾಡಿತು. ಒಂದು ವರ್ಷ ಮಾನವನ ಜೊತೆಗಿದ್ದ ಒಡನಾಟ ಸುಮಾರು ಏಳು ವರ್ಷಗಳು ಪ್ರಾಣಿಗಳೊಡನೆ ಇದ್ದ ಸಂಬಂಧಗಳನ್ನು ಅಳಸಿಹಾಕಿತ್ತು. ಕಾಡಿನಲ್ಲಿ ಏಕಾಂಗಿಯಾದಂತೆ ಅನ್ನಿಸಿತು. ಹೆಚ್ಚೆಂದರೆ ಒಂದು ತಿಂಗಳೂ ನಾನು ಆ ಕಾಡಿನಲ್ಲಿ ಇರಲು ಸಾಧ್ಯವವಾಗಲಿಲ್ಲ. ಅವನ ಬಟ್ಟೆ ಬರೆಗಳನ್ನು ಒಂದು ಚೀಲದೊಳಕ್ಕೆ ಹಾಕಿಕೊಂಡು ಗುಡಿಸಲು ಖಾಲಿಮಾಡಿ ಒಂದೇ ದಿಕ್ಕಿನಲ್ಲಿ ಪ್ರಯಾಣ ಮಾಡಲಾರಂಭಿಸಿದೆ.
ಹತ್ತು ಹದಿನೈದುದಿನಗಳಲ್ಲೇ ನಾನು ಕಾಡಿನಲ್ಲಿ ಬರುವಾಗ ಎದುರಾದ ಗುರುತುಗಳು ಕಂಡವು. ನಾನು ಸರಿದಾರಿಯಲ್ಲಿ ಹೋಗುತ್ತಿದ್ದೇನೆ ಎಂದು ಇನ್ನೂ ಜೋರಾಗಿ ಹೆಜ್ಜೆಇಟ್ಟು ಸಾಗಿದೆ. ಒಂದು ನಡುರಾತ್ರಿ ತಂತಿಯ ಬೇಲಿ ಜಿಗಿದು ಒಂದು ದೊಡ್ಡ ರಸ್ತೆಯಮೇಲೆ ನಡೆದುಕೊಂಡು ಹೋಗುತ್ತಿದ್ದೆ. ಯಾವುದೋ ವಾಹನದ ಸದ್ದು ಕೇಳಿಸಿತು. ಹೆದರಿ ಬಚ್ಚಿಟ್ಟುಕೊಂಡೆ ನಂತರ ಅದೇ ರಸ್ತೆಯಲ್ಲಿ ಸಾಗಿದೆ. ಮತ್ತೊಂದು ವಾಹನ ಬಂತು ಈ ಬಾರಿ ಹೆದರಬಾರದೆಂದು ನಿಶ್ಚಯಿಸಿ ಹಾಗೆಯೇ ನಡೆದೆ.
ಯಾವುದೋ ಕೇಸರಿ ಬಣ್ಣದ ಮಠದ ದೊಡ್ಡ ಕಾರು ನನ್ನ ಪಕ್ಕದಲ್ಲಿ ಬಂದು ನಿಂತಿತು. ಕಾರಿನಿಂದ ಯಾವುದೋ ಸ್ವಾಮಿ ಇಳಿದು ನನ್ನನ್ನು ಯಾವ ಊರಿಗೆ ಹೊರಟಿದ್ದೀರಿ? ಎಂದು ಪ್ರಶ್ನಿಸಿದರು. ನನಗೆ ಗೊತ್ತಿದ್ದ ಊರು ಒಂದೇ ಶಾಹಪುರ ಎಂದೆ. ನಾವು ಅದೇ ದಾರಿಯಲ್ಲಿ ಹೋಗುತ್ತಿದ್ದೇವೆ ತಾವು ಬರಬಹುದು ಎಂದು ಕಾರಿನಲ್ಲಿ ಕೂರಿಸಿಕೊಂಡು ಹೊರಟರು. ಕಾರಿನ ವೇಗ ಅತಿಯಾಗಿದ್ದರಿಂದ ನನಗೆ ಹೆದರಿಕೆಯಾಯಿತು. ಬಹಳ ವರ್ಷಗಳ ಬಳಿಕ ವಾಹನದಲ್ಲಿ ಚಲಿಸುತ್ತಿರುವುದರಿಂದ ಉಬ್ಬಳಿಕೆ ಬರುತ್ತಿತ್ತು, ಅದಕ್ಕೆ ಸ್ವಾಮೀಜಿಯವರು ನಿಂಬೆಹಣ್ಣನ್ನು ಕೊಟ್ಟು ಅದರ ವಾಸನೆ ನೋಡುವಂತೆ ಹೇಳಿದರು. ಕಾರಿನ ವೇಗ ಜಾಸ್ತಿ ಇದ್ದುದರಿಂದ ಕಾರನ್ನು ಮೆಲ್ಲಗೆ ಓಡಿಸಲು ಕೇಳಿಕೊಂಡೆ. ಅದಕ್ಕೆಸ್ವಾಮೀಜಿಗಳು ಮೆಲ್ಲಗೆ ಹೋದ್ರೆ ಊರು ಯಾವಾಗ ಮುಟ್ಟಬೇಕು? ಅಂದು ನನ್ನನ್ನು ಸುಮ್ಮನಿರಿಸಿದರು. ಕಾರಿನ ವೇಗಕ್ಕೆ ಸರಿಯಾಗಿ ಯಾವುದೋ ಹಕ್ಕಿ, ಬಹುಶಃ ಶಕುನದ ಹಕ್ಕಿ ಕೂಗತೊಡಗಿತು. ಈ ಕಾರಿಗೆ ಕಾಡುಬೆಕ್ಕು ನನ್ನನ್ನು ಏರಿಸಿಕೊಳ್ಳುವ ಸ್ವಲ್ಪ ಹಿಂದೆಯೇ ಎದುರಾಗಿತ್ತು ಎಂದು ಅವರು ಮಾತನಾಡಿಕೊಳ್ಳುತ್ತಿದ್ದಂತೆ ನನ್ನ ಕಿವಿಯಲ್ಲಿ ಶಕುನವೊಂದು ಪಿಸುಗುಟ್ಟಿತು. ತಕ್ಷಣ ನಾನು ನನ್ನ ಕರ್ಕಶ ಧ್ವನಿಯಲ್ಲಿ ನಿಲ್ಸಿ ನಿಲ್ಸಿ ಎಂದು ಜೋರಾಗಿ ಕಿರುಚಿದೆ. ಒಂದು ತಿರುವಿನನಲ್ಲಿ ಕಾರನ್ನು ನಿಲ್ಲಿಸಿದರು. ನಾನು ಕಾರಿನಿಂದ ಇಳಿದು ಆಕಡೆ ಈಕಡೆ ನೋಡುತ್ತಿದ್ದಂತೆ ಧಬ್ ಎಂದು ಸಿಡಿಲಿನಂತೆ ಯಾವುದೋ ಶಬ್ದ ಕೇಳಿಸಿತು. ಶಬ್ದ ಬಂದ ದಿಕ್ಕಿನಲ್ಲೇ ಓಡಿದೆವು ತಿರುವು ಮುಗಿಯುತ್ತಿದ್ದಂತೆ ಎರಡು ಭಾರೀ ಲಾರಿಗಳು ಒಂದನ್ನೊಂದು ಗುದ್ದಿಕೊಂಡು ರೋಡಿಗೆ ಅಡ್ಡಲಾಗಿ ನಿಂತಿದ್ದವು. ನಾವೇನಾದ್ರೂ ನಿಲ್ಲಿಸಿಲ್ಲಾ ಅಂದ್ರೆ ಯಾರು ಉಳಿತಿದ್ದಿಲ್ಲಾ ಅಂತ ಡ್ರೈವರ್ ಹೇಳಿದ ಕೂಡಲೇ ಸ್ವಾಮೀಜಿಯವರು ನನ್ನನ್ನು ತಬ್ಬಿಕೊಂಡು ಯಾರು ನೀನು ಎಂದು ಪ್ರಶ್ನಿಸಿದರು. ನನಗೆ ನನ್ನ ಹೆಸರೂ ತಕ್ಷಣ ಜ್ಞಾಪಕಕ್ಕೆ ಬರದೆ ಆತ್ಮಾನಂದ ಎಂದೊಡನೆ ಸ್ವಾಮೀಜಿಗಳು ನನ್ನ ಕಾಲಿಗೆ ಬಿದ್ದು ತಮ್ಮನ್ನು ಗುರುತಿಸಲು ಆಗಲಿಲ್ಲಾ ಕ್ಷಮಿಸಿ. ತಮ್ಮ ತೇಜಸ್ಸು ಕಂಡಾಗಲೇ ಅಂದುಕೊಂಡೆ ತಾವುಗಳು ಮಹಾಯೋಗಿಗಳು ಎಂದು. ದಯವಿಟ್ಟು ಕ್ಷಮಿಸಿ. ಎಂದು ಮತ್ತೆ ಕಾರನ್ನು ನಾವಿದ್ದಲ್ಲಿಗೆ ತರೆಸಿ ಬೇರೇ ದಾರಿಯಾಗಿ ಹೊರಟರು.
ಮುಂಜಾನೆಯ ಇಬ್ಬನಿ ಕರಗುವಷ್ಟರಲ್ಲಿ ಸುಖ ನಿದ್ರೆಯೂ ಆಗಿತ್ತು. ಊರು ತಲುಪುವಷ್ಟರಲ್ಲಿ ಊರಿನ ವಾತಾವರಣಕ್ಕೆ ದೇಹ ಒಗ್ಗಿಕೊಂಡಿತ್ತು. ನಾನು ಹೇಳಿದ ವಿಳಾಸದಲ್ಲಿ ನನ್ನನ್ನು ಇಳಿಸಿ ನನಗೆ ವಿದಾಯ ಹೇಳಿ ಹೊರಟರು. ಕಾರು ದೂರವಾಗುತ್ತಿದ್ದಂತೆ ಮನಸ್ಸಿನಲ್ಲಿ ಒಂದು ಹೊಸರೀತಿಯ ಸಂತೋಷ ಪ್ರಾರಂಭವಾಯ್ತು. ಸಂಸಾರದ ಪರಿವಿಲ್ಲದೇ, ತಂದೆತಾಯಿ, ಅಣ್ಣ ಅಕ್ಕಂದಿರ ಪ್ರೀತಿ ಕಾಣದೇ ಸುಮಾರು ಹೆಚ್ಚುಕಡಿಮೆ ಒಂದು ದಶಕಕ್ಕಿಂತ ಹೆಚ್ಚಿನ ಸಮಯ ಒಂಟಿ ಜೀವನ ನಡೆಸಿದ್ದೇನೆ. ಹೇಳಲಾರದಷ್ಟುಸಂತೋಷ ಮನಸ್ಸಿನಿಂದ ಮುಗುಳ್ನಗೆಯಾಗಿ ಉಕ್ಕುತ್ತಿತ್ತು. ಅಲ್ಪಸ್ವಲ್ಪ ನೆನಪಿನಲ್ಲಿದ್ದ ವಿಳಾಸವನ್ನು ಕೇಳುತ್ತಾ ಗುರುತುಗಳ ಜಾಡುಹಿಡಿಯುತ್ತಾ ನಾನು ನನ್ನ ಕುಟುಂಬವಿದ್ದ ಮನೆಯ ಕಡೆ ಹೊರಟೆ. ಮೆದುಳಿನ ಯಾವುದೋ ಗೂಡಲ್ಲಿ ಜೇಡರ ಬಲೆಯಹಿಂದೆ ಧೂಳುಹಿಡಿದು ಬಿದ್ದಿದ್ದ ಅಪ್ಪ-ಅಮ್ಮ ಹಾಗೂ ಅಣ್ಣ-ಅತ್ತಿಗೆ ಮತ್ತು ಅವರ ಮಕ್ಕಳ ಮುಖಗಳನ್ನು ನೆನಪು ಮಾಡಿಕೊಳ್ಳುತ್ತಾ ಹೊರಟೆ. ಊರು ಬಹಳ ಬದಲಾಗಿ ಬೆಳೆದು ದೊಡ್ಡ ನಗರವಾಗಿತ್ತು. ಗುರುತುಗಳನ್ನು ಅಳಸಿ ಕಾಲೂರಿ ನಿಂತ ದೊಡ್ಡ ದೊಡ್ಡ ಕಟ್ಟಡಗಳು ಆಕಾಶಕ್ಕೆ ಅಡ್ಡವಾಗಿ ನಿಂತುಕೊಂಡಿದ್ದವು. ಕೊನೆಗೆ ಪೂರ್ವಕ್ಕೆ ಮುಖಮಾಡಿದ್ದ ನನ್ನ ಕುಟುಂಬ ವಾಸಿಸಿದ್ದ ಮನೆ ನನ್ನಕಣ್ಣಿಗೆ ಬಿದ್ದು ಮನೆಯ ಚಿತ್ರ ಅಳಸಿ ದೊಡ್ಡ ಕಟ್ಟಡ ಕಂಡಿತು. ಆ ಕಟ್ಟಡಕ್ಕೆ ಸುಮಾರು 50 ಹೆಜ್ಜೆ ದೂರದಲ್ಲಿದ್ದೆ. ಸಂತೋಷದಲ್ಲಿ ಮುಳುಗಿದ್ದೆ. ಕಟ್ಟಡದಲ್ಲಿ ಅನೇಕ ಕುಟುಂಬಗಳು ವಾಸವಿದ್ದುದು ಕಾಣುತ್ತಿತ್ತು. ಕಟ್ಟಡಕ್ಕೆ ಹತ್ತಿರವಾಗುತ್ತಿದ್ದಂತೆ ಮತ್ತೇ ಆ ಶಕುನ ಕಿವಿಯಲ್ಲಿ ಪಿಸುಗುಡಲು ಪ್ರಾರಂಭಿಸಿತು. ಕಟ್ಟಡದ ಮೇಲ್ಛಾವಣಿಯಿಂದ ಕಾಗೆಗಳು ದೂರ ಚದುರಿದವು. ಗಾಳಿಯ ಬೀಸುವಿಕೆಯಲ್ಲಿ ಏರುಪೇರಾಯಿತು. ನಾಯಿಗಳು ಜೋರಾಗಿ ಬೊಗಳಲು ಪ್ರಾರಂಭಿಸಿದವು. ಮೂರನೇ ಮಹಡಿಯಿಂದ ಜೋರಾಗಿ ಬೊಗಳುತ್ತಾ ಬಂದ ನಾಯಿ ಕಟ್ಟಡವನ್ನು ನೋಡುತ್ತಾ ಬೊಗಳಲು ಪ್ರಾರಂಭಿಸಿತು. ಕಟ್ಟಡದ ಕೋಣೆಗಳಿಂದ ಪಾತ್ರೆಗಳು ಬಿದ್ದ ಸದ್ದು ಕೇಳಿಸುತ್ತಿದ್ದಂತೆ, ಯಾವುದೋ ಕಾಡು ಪ್ರಾಣಿಯಂತೆ ದೂರದವರೆಗೆ ಕೇಳಿಸುವಂತೆ ಎಲ್ಲರೂ ಹೊರಗಡೆ ಓಡಿ ಕೆಳಗೆ ಬನ್ನಿ ಎಂದು ನಿಂಬೆಹಣ್ಣು ಹಿಡಿದ ಮುಷ್ಠಿಯನ್ನು ಎತ್ತಿ ಜೋರಾಗಿ ಕಿರುಚಿದೆ. ಕೇಳಿಸಿದವರು ತಕ್ಷಣ ಓಡಿಬಂದರು, ಕೇಳಿಸದವರು ಓಡಿಹೋಗುತ್ತಿರುವವರನ್ನು ನೋಡಿ ಕಟ್ಟಡದ ಎಲ್ಲಾ ಮನೆಗಳಿಂದ ಹೊರಬಂದು ನನ್ನ ಹಿಂದೆ ಗುಂಪಾಗಿ ನಿಂತರು. ಕೆಲವೇ ಕ್ಷಣಗಳಲ್ಲಿ ಕಣ್ಣೆದುರೇ ಧಪ್ ಎಂದು ಆ ಭಾರೀ ಕಟ್ಟಡ ಕುಸಿದುಬಿತ್ತು. ಕಿಟಕಿ ಬಾಗಿಲ ಕನ್ನಡಿಗಳು ಸೂರ್ಯನ ಬೆಳಕನ್ನು ನನ್ನ ಕಣ್ಣಿಗೆ ಬಿಟ್ಟು ಕಣ್ಣು ಮುಚ್ಚುವಂತೆ ಮಾಡುತ್ತಿದ್ದವು. ಕಣ್ಣು ಮುಚ್ಚಿದರೆ ಮತ್ತೇ ಅದೇ ಶಕುನದ ಕನಸು ತುಂಡು ತುಂಡಾಗಿ ಕಾಣಿಸತೊಡಗಿತು. ಆ ಪ್ರಖರ ಬೆಳಕಿಗೆ ಒಂದು ಕ್ಷಣವೂ ಕಣ್ಣು ಮುಚ್ಚದೇ ಕಣ್ಣುಗಳನ್ನು ಇನ್ನೂ ದೊಡ್ಡದಾಗಿ ಬಿಟ್ಟು ನೋಡುತ್ತಾ ನಿಂತೆ. ಸಿಡಿಲಿನಂತೆ ಘರ್ಜಿಸಿ, ಜ್ವಾಲಾಮುಖಿಯಂತೆ ಧೂಳನ್ನು ಉಗುಳುತ್ತಾ ನೆಲಸಮವಾದ ಕಟ್ಟಡದ ಮುಂದೆ ಕಿಟಕಿ, ಬಾಗಿಲ ಗಾಜುಗಳು ಕನ್ನಡಿಯಂತೆ ನನ್ನೆದುರು ಪ್ರತಿರೂಪವನ್ನು ತೋರುತ್ತಾ ನಿಂತವು. ಆ ಕನಸಿನ ವಿರುದ್ಧ ಆವೇಶಗೊಂಡಿದ್ದ ನನ್ನ ಎದೆಯುಸಿರು ನಿಧಾನವಾಗಿ ಶಾಂತವಾಗುತ್ತಿದ್ದಂತೆ ಕನ್ನಡಿಯಲ್ಲಿ ನನ್ನ ಪ್ರತಿರೂಪ ನನ್ನನ್ನು ಹೊಗಳಿ, ದೊಡ್ಡಸ್ಥಾನಕ್ಕೇರಿಸಿ ಸನ್ಮಾನವನ್ನು ಮಾಡಿದಂತೆ ಕಂಡಿತು. ಕನ್ನಡಿಯಲ್ಲಿ ನಾನು ನನ್ನನ್ನೇ ನೋಡಿ ನಂಬಲಾಗಲಿಲ್ಲ. ಜಡೆಗಟ್ಟಿದ ಉದ್ದನೆಯ ಕೂದಲು, ಗಡ್ಡ, ಮೀಸೆ. ಕೊರಳಲ್ಲಿ ದೊಡ್ಡ ದೊಡ್ಡ ತುಳಸಿ ಮಾಲೆ, ಕೈಗೆ ಸುತ್ತಿದ ರುದ್ರಾಕ್ಷಿ ಮಾಲೆ. ಹಣೆಯನ್ನು ಮುಚ್ಚಿದ ವಿಭೂತಿ. ಮೈಬಣ್ಣಕ್ಕೊಪ್ಪುವ ಕಾಶಾಯ ಬಟ್ಟೆ. ಬೆನ್ನಹಿಂದ ಪೂರ್ವದಿಕ್ಕಿನಲ್ಲಿ ಉದಯಿಸಿ ಸಾಗುತ್ತಿದ್ದ ಸೂರ್ಯನ ಪ್ರಭಾವಳಿ. ಭಕ್ತಿಯಿಂದ ಕೈಮುಗಿದು ಧನ್ಯವಾದಗಳನ್ನು ಹೇಳುವ ಜನರ ಗುಂಪುಗಳು ಎಲ್ಲವೂ ನನಗೆ ಹೊಸ ಅನುಭವವನ್ನು ಕೊಟ್ಟವು. ತಕ್ಷಣ ಮಾಧ್ಯಮದವರು ಧಾವಿಸಿ ಎಲ್ಲರನ್ನೂ ವಿಚಾರಿಸಿದರು.
ಮಾಧ್ಯಮದವರಿಗೆ ಜನರು ಸ್ವಾಮಿಗಳು ಎಲ್ಲಿಂದ ಬಂದ್ರೋ ಏನೋ ಗೊತ್ತಿಲ್ಲ. ಇವರು ಹೇಳಲಿಲ್ಲಾ ಅಂದ್ರೆ ನಾವೆಲ್ಲಾ ಬಿಲ್ಡಿಂಗ್ನಲ್ಲೇ ಸಮಾಧಿ ಆಗಿರ್ತಿದ್ವಿ. ಎಂದು ತಿಳಿಸಿದರು. ನನ್ನ ಸಂದರ್ಶನವನ್ನೂ ಮಾಡಿದರು. ನಾನು ಸತ್ಯಹೇಳಲು ಹಿಂದೇಟು ಹಾಕಿದೆ ಅಥವಾ ಆ ಶಕುನವೇ ಆ ರೀತಿ ನನ್ನಿಂದ ಆಡಿಸಿತೇ? ಎಂದು ಇಂದಿಗೂ ತಿಳಿದಿಲ್ಲ. ಹೆಸರು ಆತ್ಮಾನಂದ, ಊರು ಎಲ್ಲಿರುತ್ತೇನೋ ಅದೇ ನನ್ನೂರು. ತಂದೆ ತಾಯಿಗಳು ಇಲ್ಲೇ ಇದ್ದರು ಆದರೆ ಎಲ್ಲಿಹೋದರೋ ಗೊತ್ತಿಲ್ಲ ಎಂಬ ನನ್ನ ಉತ್ತರಗಳು ಬಹುಶಃ ಊರ್ಧ್ವಲೋಕದಿಂದ ಇಳಿದುಬಂದ ಆಧ್ಯಾತ್ಮ ಗುರುವನ್ನಾಗಿಸಿದವು. ಆ ದಿನ ಕಳೆಯುವಷ್ಟರಲ್ಲಿ ರಾಜಕಾರಣಿಗಳು, ಉದ್ಯೋಗಸ್ತರು, ಸನ್ಯಾಸಿಗಳು, ಮಠದ ಸ್ವಾಮಿಗಳು ಅನೇಕರು ಬಂದು ನನ್ನನ್ನು ಕಂಡು ಮಾತಾಡಿಸಿ ಹೊದರು. ಅನೇಕರು ನಮ್ಮ ತಂದೆ ಹೇಳಿದ ರೀತಿಯೇ ಇದ್ದೀರಿ, ನಮ್ಮ ತಾತನವರು ಹೇಳುತ್ತಿದ್ದರು ಹಾಗೆಯೇ ಇದ್ದೀರಿ ಎಂದು ಗುಣಗಾನ ಮಾಡಿ ಹೋದರು. ಕೊನೆಗೆ ಇದೇ ಮಠದಿಂದ ಭಾರಿ ವಾಹನವೊಂದು ಬಂದು ನನ್ನ ಸ್ಥಾನ ಇಂದಿಗೂ ಖಾಲಿ ಬಿದ್ದಿದೆ ದಯವಿಟ್ಟು ಬಂದು ಮಠದ ಅಧಿಪತ್ಯ ಸ್ವೀಕರಿಸಬೇಕೆಂದು ಕೇಳಿಕೊಂಡರು. ಅಂಧಶ್ರದ್ಧೆ ತುಂಬಿದ ಸಮಾಜವನ್ನು ತಿದ್ದಲು ಒಂದು ಅವಕಾಶ ಎಂದು ಯಾವುದೋ ಲೆಕ್ಕಾಚಾರ ಮಾಡಿ ಮರುಮಾತಾಡದೇ ಇಲ್ಲಿಗೆ ಬಂದು ಮಠದ ಅಧಿಪತ್ಯ ಸ್ವೀಕರಿಸಿದೆ. ಒಮ್ಮೆ ನೀನು ಭಿಕ್ಷೆಬೇಡುವುದನ್ನು ಕಂಡು ಯಾಕೋ ಮರುಕವುಂಟಾಗಿ ನಿನ್ನನ್ನು ಮಠಕ್ಕೆ ತಂದೆ. ಈಗ ನೀನು ನನ್ನನ್ನೇ ಪ್ರಶ್ನೆಮಾಡುವ ಇಪ್ಪತ್ತು ವರ್ಷದ ದೊಡ್ಡಮನುಷ್ಯ” ಎಂದು ಮೋಕ್ಷಾನಂದನ ತೋಳು ತಟ್ಟಿದರು.
ಇದು ನನ್ನ ಕಥೆ. ಇಲ್ಲಿಂದ ಮುಂದೆ ಎಲ್ಲಿಗೂ ಓಡೋ ಆಸೆನೂ ಇಲ್ಲ, ಶಕ್ತಿನೂ ಇಲ್ಲ. ಈ ಮಠನಾ ಅಭಿವೃದ್ಧಿ ಮಾಡೋದೇ ನನ್ ಕೆಲ್ಸಾ ಅಷ್ಟೇ. ಸರಿ ನಡಿ ಹೋಗೋಣ, ಮಠದ ಲೆಕ್ಕಪತ್ರಗಳನ್ನ ನೋಡಿ ಬಹಳ ದಿನ ಆಯ್ತು ಸ್ವಲ್ಪ ನೋಡೋದ್ರಲ್ಲಿ ಸಹಾಯ ಮಾಡು ಬಾ, ನನಗೂ ಕಣ್ಣು ಮಂದ ಆಗಿವೆ ಎಂದು ಒಣಗಿದ ಮಡಿಯನ್ನು ಜಾಡಿಸಿಕೊಳ್ಳುತ್ತಾ ನೆಲನೋಡುತ್ತಾ ಕೈಬೀಸುತ್ತಾ ಮಠದ ಕಡೆ ಹೊರಟರು. ಗುರುಗಳ ನೆರಳನ್ನು ಹಿಂಬಾಲಿಸಿಕೊಂಡು ನಡೆದ ಮೋಕ್ಷಾನಂದ ಮಠ ಸಮೀಪಿಸುತ್ತಿದ್ದಂತೆ “ಇಷ್ಟಕ್ಕೂ ನಿಮ್ಮ ನಿಜವಾದ ಹೆಸರೇನು ಸ್ವಾಮೀಜಿ.?”
ಕಮಲನಾಭ ಇರಬಹುದು !
-ಗೌತಮ್ ಪಿ ರಾಠಿ
gouthamrati@gmail.com
Facebook ಕಾಮೆಂಟ್ಸ್