X
    Categories: ಕಥೆ

“ರಾಮಾಯಣ ಬರೆದವರು ಯಾರು? “

ರಾಮಾಯಣ ಬರೆದವರು ಯಾರು? ” ಮೇಷ್ಟರ ಪ್ರಶ್ನೆಗೆ “ವೇದವ್ಯಾಸ” ಎಂದುತ್ತರ ಕೊಟ್ಟು ಬೆನ್ನಿಗೆ ಛಡಿಯೇಟಿನ ಆಹ್ವಾನ ನೀಡಿದ ಪುರುಷೋತ್ತಮ. “ಥೂ,ನಾಚಿಕೆ ಆಗ್ಬೇಕು ನಿಮ್ಗೆಲ್ಲಾ.ಇಂಥ ಸುಲಭ ಪ್ರಶ್ನೆಗೂ ಉತ್ತರ ಗೊತ್ತಿಲ್ವಲ್ಲ.ಕರ್ಮ ಕರ್ಮ!”, ತಲೆ ಚಚ್ಚಿಕೊಂಡರು ನಾರಾಯಣ ಮೇಷ್ಟ್ರು. “ಪುರುಷೋತ್ತಮ ಅಂತ ಹೆಸರು ಬೇರೆ ಇಟ್ಕೊಂಡಿದೀಯಲ್ಲಾ,ಯಾವ ದಂಡಕ್ಕೆ? ” ಮೇಷ್ಟ್ರು ಅಂದಾಗ “ಹೆಸರು ನಾ ಇಟ್ಕೊಂಡಿದ್ದಲ್ಲಾ ಸಾ,ನಮ್ಮಪ್ಪ ಇಟ್ಟಿದ್ದು ” ಎಂದು ನಾಲಿಗೆಯ ತುದಿಯವರೆಗೆ ಬಂದದ್ದನ್ನು ಕಷ್ಟಪಟ್ಟು ಉಗುಳು ನುಂಗಿದ ಪುರುಷೋತ್ತಮ.

ಮದುಮಗಳಾರೆಂಬ ಗೊಂದಲವುಂಟಾಗುವಷ್ಟು ಸಿಂಗರಿಸಿಕೊಂಡು ನಿಂತಿತ್ತು ನಾರಾಯಣ ಮೇಷ್ಟರ ಮನೆ. ಅವರ ಏಕಮಾತ್ರ ಪುತ್ರಿ ಅಂಬಿಕಳ ಮದುವೆ.ಒಬ್ಬಳೇ ಮಗಳೆಂದ ಮೇಲೆ ಕೇಳಬೇಕೆ? ಊರಿನ ಸಾಹುಕಾರರ ಮಗಳ ಮದುವೆಗೇ ಸೆಡ್ಡು ಹೊಡೆಯುವಂತೆ ಮದುವೆ ಮಾಡಿಕೊಡುತ್ತಿದ್ದಾರೆಂದು ಊರಿಗೆ ಊರೇ ಮಾತಾಡಿಕೊಳ್ಳುತ್ತಿತ್ತು.ಸಾವಿರ ರೂಪಾಯಿ ಬೆಲೆಬಾಳುವ ಜರತಾರಿ ಸೀರೆಗಳ ಮಧ್ಯೆ ಮಸುಕಲು ಬಟ್ಟೆಯುಟ್ಟ ಪುರುಷೋತ್ತಮ ನುಸುಳಿಕೊಂಡು ಮಂಟಪದ ಬಳಿ ಬಂದ. ಮೇಷ್ಟರು ಪತ್ನೀಸಮೇತರಾಗಿ ಮಂಟಪದಲ್ಲಿ ಕೂತಿದ್ದಾರೆ. ಆರತಿ ಭಾಗ್ಯ ದೊರೆಯುತ್ತಿರುವ ಸಂತಸ,ತೃಪ್ತಿ ಅವರ ಮುಖದಲ್ಲಿದೆ. ಇನ್ನೇನು ಶಾಸ್ತ್ರಗಳು ಪ್ರಾರಂಭವಾಗಬೇಕು,ಸಾಧಾರಣ ಸೀರೆಯುಟ್ಟ ಹೆಂಗುಸೊಬ್ಬಳು ಮಂಟಪದ ಮಧ್ಯೆ ಬಂದು ನಿಂತುಬಿಟ್ಟಳು. ಪುರೋಹಿತರು ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದರೆ,ಮೇಷ್ಟರ ಮುಖ ಬಿಳಿಚಿಕೊಂಡಿತ್ತು.ಆ ಹೆಂಗುಸು ಏರು ದನಿಯಲ್ಲಿ ಮಾತನಾಡುತ್ತಿದ್ದಂತೆ ಪುರುಷೋತ್ತಮನಿಗೆ ನಿಧಾನವಾಗಿ ಪರಿಸ್ಥಿತಿಯ ತಿಳಿವುಂಟಾಯಿತು. ಆಕೆ ಮೇಷ್ಟರ ಎರಡನೇ ಪತ್ನಿ. ಮೊದಲ ಹೆಂಡತಿಗೆ ಮಕ್ಕಳಾಗಿಲ್ಲವೆಂದು ಆದ ಮದುವೆ ಅದು. ತನ್ನ ಮಗಳ ಮದುವೆಯಲ್ಲಿ ತಾನೇ ಅನಾಮಧೇಯಳಾದ ಸಂಕಟ ಆಕೆಯದು.ತನ್ನ ಮಗಳ ಮದುವೆಯಲ್ಲಿ ತಾನೇಕೆ ಮಂಟಪದಲ್ಲಿ ಕೂರಬಾರದೆಂದು ಆಕೆ ವಾದಿಸುತ್ತಿದ್ದಂತೆ ಮೇಷ್ಟರು ಇಷ್ಟು ದಿನ ಬಚ್ಚಿಟ್ಟಿದ್ದ ಗುಟ್ಟು ರಟ್ಟಾಯಿತು.ವಾಗ್ವಾದ ವಿಕೋಪಕ್ಕೆ ತಿರುಗುತ್ತಿದ್ದಂತೆ ಮದುವೆಗೆ ಜಮಾಯಿಸಿದ್ದ ಜನ ಬರಿದಾಗಿ ಮದುವೆ ಮನೆ ಬಿಕೋ ಎನ್ನತೊಡಗಿತು. ಪುರುಷೋತ್ತಮನೂ ಹೊರಟ.ಹೊರಡುವ ಮುನ್ನ ಮೇಷ್ಟರ ಬಳಿ ಹೋಗಿ, “ಸಾ, ರಾಮಾಯಣ ಬರೆದವ ಯಾರು ಅನ್ನೂದು ಗೊತ್ತಿದ್ದರೆ ಸಾಲ್ದು.ಅದರೊಳಗೆ ಏನಿದೆ ಅನ್ನೂದನ್ನೂ ತಿಳಿಕ್ಕಳಿ” ಎಂದು ಹಿಂತಿರುಗಿ ನೋಡದಂತೆ ಹೊರಗೆ ಬಂದ.

Facebook ಕಾಮೆಂಟ್ಸ್

Deepthi Delampady: Currently studying Information Science and Engineering (6th semester) at SJCE, Mysore.
Related Post