X
    Categories: ಕಥೆ

ನಾನೊಬ್ಬ ಕನಸುಗಾರ

ಲೋಕವನ್ನೇ ನುಂಗಿ ಹಾಕಿರುವ ಕತ್ತಲಲ್ಲಿ ಮರದ ಕೊಂಬೆಗಳು ಗಾಳಿಗೆ ಚಲಿಸುವುದು ದೆವ್ವಗಳಿದ್ದಾವೇನೋ ಎನ್ನುವಂತಿತ್ತು. ಭಾವಾಂತರಂಗದ ಶಿಖರದ ತುದಿಯಲ್ಲಿ ಕುಳಿತಂತೆ ತನ್ಮಯತೆಯಿಂದ ಆ ಮರದಡಿ ತನ್ನದೇ ಕೆಲಸದಲ್ಲಿ ಮುಳುಗಿದ್ದನಾತ; ಸುತ್ತಲಿನ ಜನರ ಗದ್ದಲದ ಅರಿವಿಲ್ಲದೇ. ತಲೆಗೊಂದರಂತೆ ಜನರು ಆತನ ಬಗೆಗೆ ಕತೆ ಹೇಳುತ್ತಿದ್ದಾರೆ. ಅದ್ಯಾವುದರ ಪರಿವೆಯೇ ಇಲ್ಲದ ಬಡಪಾಯಿ ತನ್ನ ಕೆಲಸದಲ್ಲಿ ಮಗ್ನನಾಗಿದ್ದಾನೆ. ಆತ ಬೇರಾರೂ ಅಲ್ಲ, ಪ್ರಸಿದ್ದ ಸಂಗೀತ ಸಂಯೋಜಕ-ಗಾಯಕ ಎಂದು ಅಲ್ಲಿದ್ದ ಯಾರಿಗೂ ತಿಳಿಯುವ ಸ್ಥಿತಿಯಲ್ಲಿ ಆತ ಕಂಡುಬರುತ್ತಿರಲಿಲ್ಲ. ಆತ ತನ್ನದೇ ಉನ್ಮಾದಕತೆಯಲ್ಲಿ ಹಾಡು ಹಾಡುತ್ತಿದ್ದಾನೆ. “ಎದೆ ತುಂಬಿ ಹಾಡಿದೆನು…..”  ಅದೊಂದು ದೊಡ್ಡ ಸಭೆ, ಬಹುತಾರೆಗಳು ಸೇರಿದ್ದರು. ಅವರನ್ನೆಲ್ಲ ನೋಡಲು ಬಂದ ಅಭಿಮಾನಿಗಳು ಮಾಡುತ್ತಿರುವ ಗದ್ದಲಕ್ಕೆ ಧ್ವನಿವರ್ಧಕದ ಶಬ್ದ ಕೂಡ ಕೇಳುತ್ತಿರಲಿಲ್ಲ. ಸ್ವರ್ಗವನ್ನೇ ನಾಚಿಸುವಂತಹ ಬೆಳಕಿನ ವ್ಯವಸ್ಥೆಯಿದ್ದರೂ ಪರದೆಯ ಹಿಂದೆ ಕತ್ತಲು ತುಂಬಿ ದೀಪದ ಬುಡ ಕತ್ತಲೆನ್ನುವಂತೆ ತೋರಿಸುತ್ತಿತ್ತು. ಅಷ್ಟರಲ್ಲೇ ಜೊತೆಯಾಗಿ ಬಂದ ಇಬ್ಬರು ವೇದಿಕಯನ್ನೇರಿ ಮಾತನಾಡಲು ಶುರುವಿಟ್ಟುಕೊಂಡರು. ಒಬ್ಬ ಸಂಗೀತ ಸಾಧಕನಿಗೆ ಸನ್ಮಾನ ಸಮಾರಂಭವದಾಗಿತ್ತು. ಅಪ್ಪಯ್ಯನವರೇ….ಯಾರೋ ಕೂಗಿಕೊಂಡರು. ಅಡಿಯಿಂದ ಮುಡಿವರೆಗೆ ಆತನೊಬ್ಬ ಸಂಗೀತ ಸಾಮ್ರಾಜ್ಞಿ ಎನ್ನುವುದನ್ನು ತೋರಿಸಿತ್ತಿತ್ತು ಆತನ ಉಡುಪುಗಳು. ಆ ವ್ಯಕ್ತಿ ಹೊರಗೆ ಬಂದು, ಬಂದವನನ್ನು ಕುಳ್ಳಿರಿಸಿ ಮಾತನಾಡತೊಡಗಿದ. ಕಾಫಿ ಲೋಟಗಳು ಬಂದವು, ‘ಸುರ್ರ್..ಸದ್ದು ಅವರ ಮಾತಿಗೆ ಲಯ ಹೊಂದಿಸಲು ತಿಣುಕಾಡುತ್ತಿತ್ತು. ಒಂದಷ್ಟು ಹೊತ್ತಿನ ನಂತರ ಗೇಟುಗಳು ಕಿರ್ರ್ಎಂದವು. ಸಂಗೀತಲೋಲ ಮನೆಯ ಒಳಗೆ ಬಂದ. ಅವನ ಒಳ ಸಾಮ್ರಾಜ್ಯಕ್ಕೂ ಹೊರ ಸಾಮ್ರಾಜ್ಯಕ್ಕೂ ವ್ಯತ್ಯಾಸವಿದ್ದುದನ್ನು ಆತನ ಮುಖಚಹರೆ ತೋರುತ್ತಿತ್ತು. ಕಾಲ ದಿನದಿಂದ ದಿನಕ್ಕೆ ಬದಲಾಗತೊಡಗಿತ್ತು. ಅಂದಿನ ಸಖತ್ ಹಾಡುಗಳನ್ನ ಇಂದು ಯಾರೂ ಕೇಳುವವರಿರಲಿಲ್ಲ. ವೇಗದ ಸಂಗೀತಕ್ಕೆ ವೇಗದ ಜಗತ್ತು ಶರಣಾಗಿತ್ತು. ಅಂದಿನ ಇತಿಮಿತಿ, ಲಯ ಮಾಧುರ್ಯಗಳನ್ನ ದಾಟಿ ಜಗತ್ತು ನಿಂತಿತ್ತು. ಈ ಜಗತ್ತಿಗೆ ಅಂದು ಬೆಳಿಗ್ಗೆ ಕೇಳುವ ಸಂಗೀತ ಅಂದು ಸಂಜೆಗೇ ಹಳೆಯದಾಗಿಬಿಡುತ್ತಿತ್ತು. ಇವುಗಳ ನಡುವೆ ಆ ವ್ಯಕ್ತಿಗೆ ಇರಲಾರದೇ ಕಾಲಕ್ಕೆ ಕೈ ಮುಗಿದು ನಿಂತಿದ್ದ.

ಸಮಾರಂಭದಲ್ಲಿ ಆ ವ್ಯಕ್ತಿಗೆ ಭರ್ಜರಿ ಸನ್ಮಾನವೂ ಆಗಿತ್ತು. ತಾರೆಗಳೆಲ್ಲರೂ ಆತನ ಕಾಲಿಗೆರಗಿ ನಮಸ್ಕರಿಸುತ್ತಿದ್ದುದು ಆತನಿಗೆ ಮುಜುಗರವುಂಟು ಮಾಡಿತ್ತು. ಆದರೂ ಕೈ ಎತ್ತಿ ಹರಸುವ ಮನೋಭಾವ ಆತನದು. ಅದೆಷ್ಟೋ ಜನರಿಗೆ ಹಸ್ತಾಕ್ಷರ ನೀಡಿದ ನಂತರ ಆತ ತನ್ನ ರೋಲ್ಸ್ ರಾಯ್ಸ್ ಕಾರು ಹತ್ತಿ ಹೊರಟುಹೋದ. ಭರ್ಜರಿ ಕಾರ್ಯಕ್ರಮವೊಂದು ಅಲ್ಲಿಗೆ ಮುಕ್ತಾಯವಾಗಿತ್ತು. ದಾಯಾದಿಗಳ ಕೈ ನಡುವೆ ಸಿಕ್ಕಿಬಿದ್ದಿದ್ದ ಆತ. ಸಂದರ್ಭದ ದುರ್ನಡತೆಗೋ, ಅವನ ಅಸಹಾಯಕತೆಗೋ ದಾಯಾದಿಗಳ ನಡುವೆ ಚಿವುಟಿದ ಹೂವು ಆತ. ದುಡಿದದ್ದನ್ನೆಲ್ಲ ಅವರಿಗೇ ನೀಡಬೇಕಾಗಿತ್ತು. ಆದರೆ, ಎಲ್ಲಿಂದಲೋ ಬಂದ ವ್ಯಕ್ತಿ ತರಬೇತಿ ಕಛೇರಿಆರಂಭ ಮಾಡುವಂತೆ ಉಪಾಯ ಸೂಚಿಸಿದ್ದ. ಯಾರಿಲ್ಲದಿದ್ದರೂ ಜೀವನ ನಡೆಸಬೇಕೆನ್ನುವವ ಆತ. ಅದಕ್ಕೆ ಮದುವೆಯೂ ಮಾಡಿಕೊಂಡಿರಲಿಲ್ಲ. ತರಬೇತಿ ಕಛೇರಿ ಆರಂಬವಾಗಿ ಆತ ಚಿತ್ರಗಳಿಗೆ ಹಾಡುವುದನ್ನ ನಿಲ್ಲಿಸಿದ. ನೆಲೆಗೊಟ್ಟ ನೆಲವನ್ನು ತೊರೆಯಲಿಷ್ಟವಿಲ್ಲದಿದ್ದರೂ ತನ್ನ ನೆಮ್ಮದಿಗೆ ಆತ ಹಾಗೆ ಮಾಡಲೇ ಬೇಕಿತ್ತು. ಆತನಲ್ಲಿ ಕಲಿಯಬೇಕೆನ್ನುವವರು ಸಾಕಷ್ಟಿದ್ದುದರಿಂದ ತರಬೇತಿ ಕಛೇರಿ ಆರಾಮವಾಗಿ ನಡೆಯುತ್ತಿತ್ತು. ಆದರೆ ಆದಾಯವಷ್ಟೂ ಮನೆಯೊಳಗಿನ ಹೆಗ್ಗಣಗಳ ಪಾಲಾಗುತ್ತಿತ್ತು. ಆದರೆ ತನ್ನದನ್ನು ಇನ್ನೊಬ್ಬರಿಗೆ ನೀಡಬೇಕೆನ್ನುವುದು ಆತನ ಕನಸಾಗಿತ್ತು. ಆಚೀಚೆ ಬಿದ್ದ ಚಿಲ್ಲರೆಗಳನ್ನು ಆರಿಸಿ ಜೀವನ ಸಾಗಿಸುವುದು ಅಭ್ಯಾಸವಾಗಿಬಿಟ್ಟಿತ್ತು. ಬೀದಿ ದೀಪಗಳೆಲ್ಲವೂ ಆರಿ ಹೋಗಿದ್ದರೂ ಆತನ ಬಳಿ ಚಿಕ್ಕ ಟಾರ್ಚ್ ಇತ್ತು. ಅದರ ಸಹಾಯದಿಂದ ಅವನ ಹಾಡಿಗೋ, ಅವನ ಮೇಲೆ ಮರುಕವೋ ಜನ ಹಾಕಿ ಹಾಕಿದ್ದ ಚಿಲ್ಲರೆಯನ್ನ ಆರಿಸಿ ಎಣಿಸಿದ. ನಾಳೆ ಸಂಜೆವರೆಗೂ ಸಾಕಾಗುವಷ್ಟಾಗಿತ್ತು. ತೃಪ್ತಿಯಿಂದ ಅಲ್ಲಿಂದ ಹೊರಟು ಹೋದ. ಅವನ ಸಂಗೀತದ ಲಯದಲ್ಲೇ ಆ ಮರದ ಕೊಂಬೆಗಳು ತಂಗಾಳಿಗೆ ಆಡತೊಡಗಿದವು. ಕುರುಡನಂತೆ ಕಲ್ಲನ್ನೆಲ್ಲ ಎಡವಿ ಹೋಗುತ್ತಿದ್ದವನನ್ನ ನೋಡಿ ನಿಂತ ಮರವೂ ಒಮ್ಮೆ ಮರುಗಿತು.

ಕಾರಿದ್ದರೂ, ಬಂಗಲೆಯಿದ್ದರೂ ನೆಮ್ಮದಿಯಿಲ್ಲದ ಬದುಕು. ಹಣ ಸಂಪಾದನೆ ಅವನ ಕೆಲಸವಲ್ಲ, ಹಣ ಜೋಪಾನ ಮಾಡಲು ಆತನಿಗೆ ಸಂಸಾರವೇ ಇರಲಿಲ್ಲ. ತಾನು ಕಲಿತದ್ದನ್ನು ಕಲಿತಂತೆ ಅರುಹಿದ್ದಕ್ಕೆ ಬಂದ ಕಾಣಿಕೆಗಳನ್ನ ಕೆಲಸ ಮಾಡದಿರುವವರು ಮೋಜು ಮಾಡುವುದನ್ನ ಆತನಿಂದ ಸಹಿಸಿಕೊಳ್ಳಲಾಗಲಿಲ್ಲ. ಆದರೆ, ವಿರೋಧಿಸುವಂತೆಯೂ ಇಲ್ಲ. ಕಾಲ ಇವನ ಕಾಲಿಗೆ ಬಳ್ಳಿಯಾಗಿ ಸುತ್ತಿಕೊಂಡು ಸತ್ತಿತ್ತು. ಪ್ರಶ್ನೆಗಳಿಗೆಲ್ಲ ಉತ್ತರವಿರಲಿಲ್ಲ, ಹುಡುಕುವ ತ್ರಾಣ ಸಮಯವೂ ಇರಲಿಲ್ಲ. ದಾಯಾದಿಗಳ ಹಾವಳಿ ಜೋರಾಗಿತ್ತು. ಚಿತ್ರಗಳಿಗೆ ಆತ ಹಾಡುವುದನ್ನ ಬಿಟ್ಟ ನಂತರ ತರಭೇತಿ ಕಛೇರಿಯೇ ಅವರಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಾಯಿತು. ಸಂಬಂಧಗಳ ಆಪ್ತ ಸಿಂಚನ ಅವರಿಗಿರಲಿಲ್ಲ. ಬದಲಾಗಿ ಹಣವೊಂದೇ ಅವರ ಗುರಿಯಾಗಿತ್ತು. ಕಾಲಕ್ರಮೇಣ ಆತನ್ನನ್ನು ಕಛೇರಿಗೆ ಹೋಗದಂತೆ ತಡೆದರು. ರೋಗವಿದೆಯೆಂದು ನಂಬಿಸಿ, ಹಾಡಿದರೆ ಉಲ್ಬಣವಾದುವುದೆಂದು ಸುಳ್ಳು ಭಾವನೆಯನ್ನು ತೋರಿ ಆತನನ್ನು ಮನೆಯಲ್ಲಿಯೇ ಕುಳ್ಳಿರಿಸಿದರು. ತರಬೇತಿ ಕಛೇರಿಯೂ ಈಗ ಅವರದಾಗಿ ಹೋಗಿತ್ತು. ಹಸಿದ ಹೊಟ್ಟೆಯಲ್ಲೇ ಮಲಗಿದ್ದರಿಂದ ಬೆಳಿಗ್ಗೆ ಬೇಗನೆ ಎಚ್ಚರವಾಗಿತ್ತು. ರವಿಕಿರಣ ಸೋಕುವ ಮೊದಲೇ ಚಿಕ್ಕ ಡಾಬಾಗೆ ಹೋಗಿ ಆತ ತಿಂಡಿ ತಿಂದ. ಮಧ್ಯಾಹ್ನದ ಊಟದ ಸಮಯದವರೆಗೂ ಕೆಲಸವಿರಲಿಲ್ಲ. ಸೂರ್ಯನ ಬೆಳಕಿಗೆ ತನ್ನ ಟಾರ್ಚಿನ ಬೆಳಕು ಸರಿಸಾಟಿಸಾಗಿ ನಿಲ್ಲದಾಗ ಆತ ತನ್ನ ಬದುಕಿನ ಬಗ್ಗೆ ಯೋಚಿಸಿದ. ಮತ್ತೆ ಕತ್ತಲಾವರಿಸಿದಂತಾಯ್ತು. ಅವರೆಲ್ಲರೂ ತಾವು ಬದುಕಲು ಸಾಕಷ್ಟು ವ್ಯವಸ್ಥೆ ಮಾಡಿಕೊಂಡಿದ್ದರು. ಸಾಲದ್ದಕ್ಕೆ ಕಛೇರಿಯೂ ಅವರದಾಗಿತ್ತು. ವ್ಯವಸ್ಥಿತವಾಗಿ ಪಿತೂರಿ ನಡೆಸಿ ಆತನನ್ನು ಮನೆಯಿಂದಲೇ ಹೊರದಬ್ಬಿದರು. ಆದರಾತ ಸೋಲಲಿಲ್ಲ. ಚಿತ್ರಗಳಿಗೆ ಹಾಡಲು ಮತ್ತೆ ಹೋದ. ಆದರೆ ಹೊಸ ಜಮಾನದ ವೇಗದ ಸಂಗೀತಕ್ಕೆ ಆತನಿಗೆ ಹೊಂದಿಕೊಳ್ಳಲಾಗಲಿಲ್ಲ. ಬದುಕಿನ ಸೋಲಿನೊಂದಿಗೆ ಹೊಟ್ಟೆಪಾಡೂ ಸೋತಿತ್ತು. ಹೊಟ್ಟೆಪಾಡೇ ಬದುಕೋ, ಅಥವಾ ಬದುಕಿಗಾಗಿ ಹೊಟ್ಟೆಪಾಡೋ.. ಯೋಚಿಸದಂತಾದನಾತ. ವಿಧಿಯೇ ಹಾಗೆ, ಇನ್ನೇನು ಮೇಲೇಳುತ್ತಿದ್ದೇನೆ ಎಂದುಕೊಳ್ಳುವಾಗ ಕೆಳಗೆ ದೂಕುತ್ತದೆ. ಕಿಡಿಗೇಡಿಗಳು ಆತನಲ್ಲಿದ್ದ ನಾಲ್ಕು ಕಾಸನ್ನು ಹಾಡಹಗಲೇ ದೋಚಿದರು. ಶಕ್ತಿಯಿಲ್ಲದ ಮನುಜ ಅವರನ್ನು ತಡೆಯಲಾಗಲಿಲ್ಲ. ನೆತ್ತಿಯ ಮೇಲೆ ಸೂರ್ಯ ನಗುತ್ತಿದ್ದ. ದೊಡ್ಡ ರಸ್ತೆಯ ಮೇಲೆ ಖಾಲಿ ಕೈಯಲ್ಲಿ ಒಂಟಿಯಾಗಿ ಸಾಗುತ್ತಿದ್ದ. ಮಾಡಲು ಏನೂ ಕೆಲಸವಿರಲಿಲ್ಲ. ಚಿತ್ರಸಂಗೀತದಿಂದಲೂ ದೂರವಾದ. ಊಟ ಮಾಡದೇ ಬಡವಾಗಿದ್ದ. ಏನಾದರೊಂದು ಮಾಡಲೇ ಬೇಕಿತ್ತು. ಹಾಡೊದನ್ನ ಬಿಟ್ಟು ಏತೂ ಗೊತ್ತಿಲ್ಲದ ಆತ ಏನುತಾನೇ ಮಾಡಬಲ್ಲ. ಜನಜಂಗುಳಿಯ ಬೀದಿಯ ಮೂಲೆಯಲ್ಲಿ ಮರವೊಂದರ ಕೆಳಗೆ ಹಾಡತೊಡಗಿದ. ಎದೆ ತುಂಬಿ ಹಾಡಿದೆನು….‘  ಜೋರಾಗಿ ಅವನ ಸುತ್ತ ಗಾಡಿಗಳು ತಿರುಗುತ್ತಿದ್ದವು. ಬದುಕೇ ಸಾಕೆನುವ ಹಾಗೆ ನಡೆಯುತ್ತಿದ್ದವನನ್ನು ಲಾರಿಯೊಂದು ಬಂದು ಅಪ್ಪಳಿಸಿತು. ನಡೆದಾಡುವ ಹೆಣದಂತಿದ್ದವ ನೇರವಾಗಿ ಸ್ವರ್ಗಸ್ಥನಾದ. ತಟ್ಟನೇ ಜನರೆಲ್ಲ ಸೇರಿದರು. ಆಗ ಅವರಿಗೆಲ್ಲ ಆತನ ಗುರುತು ಹತ್ತಿತು. ಅವರೆಲ್ಲೆಲ್ಲರೂ ಒಂದಲ್ಲಾ ಒಂದು ದಿನ ಆತನಿಗೆ ಚಿಲ್ಲರೆ ಎಸೆದವರೇ. ಅವರೆಲ್ಲ ಆತನ ಶವವನ್ನು ಮಣ್ಣು ಮಾಡಲನುವು ಮಾಡಿದರು. ಸರ್ಕಾರಿ ಗೌರವಗಳೊಂದಿಗೆ ಆತನ ಶವಕ್ಕೆ ಬೆಂಕಿಯಿಡಲಾಯಿತು. ಸತ್ತವನು ಕೇಳುವನೋ ಇಲ್ಲವೋ… ಎಲ್ಲರ ಕಣ್ಣಲ್ಲಿ ನೀರು ತುಂಬಿತ್ತು. ಎಲ್ಲರೂ ಹಾಡತೊಡಗಿದ್ದರು. ಎದೆ ತುಂಬಿ ಹಾಡಿದೆನು….ಆತ ಕೊನೆಯವರೆಗೂ ಹಾಡನ್ನೇ ಆಶ್ರಯಿಸಿದ್ದ. ಎದೆ ತುಂಬಿ ಭಾವಪೂರ್ಣವಾಗಿ ಹಾಡುತ್ತಲೇ ಇದ್ದ. ಕೇಳುಗರು ಕೇಳುತ್ತಲೇ ಉಳಿದರು. ಆತನಿಗೆ ಬಿರುದು ಬಾವಲಿಗಳ ಅವಶ್ಯಕತೆಯಿರಲಿಲ್ಲ. ಕೇಳುಗರೇ ಜೀವವೆಂದುಕೊಂಡಿದ್ದ. ಅನಿವಾರ್ಯವೋಅನಿರೀಕ್ಷಿತವೋ ಹಾಡುವುದೇ ತನ ಕರ್ಮವಾಗಿ ಹೋಯಿತು. ಯಾರು ಕಿವಿ ಮುಚ್ಚಿದರೂ ಹಾಡನ್ನ ನಿಲ್ಲಿಸದ ಹಾಡುಗಾರನೊಬ್ಬ ಕಣ್ಮುಚ್ಚಿದ್ದ. ಜನರೆಲ್ಲ ಸತ್ತವನ ಹೊಗಳುವ ಕಾಯಕವನ್ನು ಮುಂದುರೆಸಿದ್ದರು.

ಗಿರೀಶ್ ಭಟ್ ಬಿ.ಕೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post