X
    Categories: ಕಥೆ

ಉಳ್ಳ: ಭಾಗ-೨

ಉಳ್ಳ ( ಭಾಗ-೧)

ಆಗಷ್ಟೇ ಆಗಸ ಗುಡುಗಿ, ಭಿರ್ರೆಂದು ಸುರಿದು ತಣ್ಣಾಗಾಗಿದ್ದರೂ, ಯೌವ್ವನದ ಹೆಣ್ಣಿನ ಕೇಶರಾಶಿಯಷ್ಟು ಕಪ್ಪನೆಯ ಮೋಡಗಳು, ಪರಸ್ಪರ ಚುಂಬಿಸಲು ಶುರುಮಾಡಿದ್ದವು. ಮತ್ತೆ ಮಳೆಸುರಿಯುವುದು ಖಾತ್ರಿಯಾಗಿತ್ತು. ಊಟಮಾಡಿದ ಬಟ್ಟಲುಗಳನ್ನು ತೊಳೆದು, ಜಾಗವನ್ನು ಸಾರಿಸಿ, ಒರೆಸಿ, ಬಟ್ಟೆಯನ್ನು ಅಂಗಳಕ್ಕೆ ಹರಡಲು ಬಂದ ಆಯಿ, “ಮತ್ತ್ ಜೊರ್ಗುಡ್ತು ಅನ್ಸ್ತು. ಈ ಮಳೆ ಕಾಟದಿಂದ ಸಾಕಾತಪಾ.” ಉಸ್ಸೆಂದು ನಿಟ್ಟುಸಿರು ಬಿಟ್ಟಳು. ಮಟಮಟ ಮಧ್ಯಾಹ್ನದಲ್ಲೂ ಬಿಸಿಲಿನ ರೇಖೆಗಳನ್ನು ಕಾಣದೇ ಬಹುಶಃ ವಾರವಾಗಿದ್ದಿರಬಹುದು. ಚಿರ್ರನೆ ಚೀರುವ ಸಹಸ್ರ ಮರಗಪ್ಪೆಗಳಿಂದಲೂ, ಜೀರ್ದುಂಬಿಗಳಿಂದಲೂ ವಾತಾವರಣ ಯಾವತ್ತೂ ಶಾಂತತೆಯಿಂದ ಕೂಡಿರುತ್ತಲೇ ಇರಲಿಲ್ಲ. ಅಂಗಳದ ಮುಂಭಾಗದಲ್ಲಿ ಬೆಳೆದಿದ್ದ ಲಂಟಾನಾ ಪೊದೆಗಳ ನಡುವಿದ್ದ ಮುಳ್ಳುಕಾರೆಗಿಡದ ಸಹಿತವಾಗಿ ಎಲ್ಲವೂ ಅಪ್ಪಯ್ಯನ ಹೊಸಕತ್ತಿಯ ಹೊಡೆತಕ್ಕೆ ತುತ್ತಾಗಿದ್ದುದರ ಪರಿಣಾಮವಾಗಿ, ಮನೆಯೊಳಗಿದ್ದ ಕತ್ತಲೆಯ ಮುಸುಕು ಹೊರಗಿಲ್ಲದೇ, ಬೆಳರುಬೆಳರಾಗಿ ಮಂದಪ್ರಕಾಶ ಹರಡಿತ್ತು. ಅಂಗಳದಲ್ಲಿ ಅರ್ಧಪಾದ ಮುಳುಗುವಷ್ಟು ನಿಂತಿದ್ದ ನೀರು, ಹಂಚಿನಿಂದಿಳಿದು ಬೀಳುವೆಡೆಯಲ್ಲೆಲ್ಲಾ ಆಗಿದ್ದ ಹೊಂಡಗಳು ಮಳೆಗಾಲದ ಶಕ್ತಿಸಾಮರ್ಥ್ಯಗಳಿಗೆ ಸಾಕ್ಷಿಯಾಗಿದ್ದವು. ನೊಣವೊಂದು ಮುಚ್ಚಿದ್ದ ಕಣ್ಣು ರೆಪ್ಪೆಯಮೇಲೆ ಕೂತಿದ್ದರಿಂದ ಅರೆನಿದ್ದೆಗಣ್ಣಲ್ಲಿ ಎದೆಯಮೇಲಿದ್ದ ಕೈಯನ್ನೆತ್ತಿ “ಶ್ ಶ್ ಶ್ ಶ್” ಎನ್ನುತ್ತಾ ಮುಖದ ಮೇಲೆ ಗಾಳಿಯಲ್ಲಾಡಿಸಿದ ಅಪ್ಪಯ್ಯ. ಎಲ್ಲ ನೊಣಗಳೂ ತನ್ನ ದೇಹವನ್ನು ಬಿಟ್ಟುಹೋಗುತ್ತಿವೆಯೇನೋ ಎಂಬಂತೆ. ಒಮ್ಮೆ ರೆಪ್ಪೆಯ ಜಾಗವನ್ನು ಬಿಟ್ಟುಹಾರಿದ ನೊಣ, ಗಾಳಿಯಲ್ಲಿಯೇ ನಾಲ್ಕು ಸುತ್ತು ಹೊಡೆದು, ಮತ್ತದೇ ಜಾಗಕ್ಕೆ ಬಂದು ಪ್ರತಿಷ್ಠಾಪನೆಗೊಂಡಿತು.

“ಥೋ….., ಸಾಯ್ತು ಈ ನೆಳ. ಒಂಚೂರು ವರ್ಗೂಲು ಕೊಡ್ತಿಲ್ಲೆ.” ಎನ್ನುತ್ತಾ ಎದ್ದು ಕುಳಿತ. ಅದೇ ಸಮಯಕ್ಕೆ ಸರಿಯಾಗಿ ದೊಡ್ಡದೊಡ್ಡ ಬಿಂಬಲಕಾಯಿಯಂತಹ ಮಳೆಹನಿಗಳು ಬೀಳತೊಡಗಿದ್ದವು. ಅವು ಬೀಳುವ ರಭಸಕ್ಕೆ, ತಲೆಯ ಮೇಲೆ ಕೂದಲಿಲ್ಲದೇ ಮರಳುಗಾಡಾಗಿರುವವರು ಒಮ್ಮೆ ಬೆಚ್ಚಿಬೀಳುತ್ತಾರೆ. ಹಾಗಿತ್ತು ಮಳೆಹನಿಗಳ ಹೊಡೆತ. ಇಂತಿಪ್ಪ ವರ್ಷದಿಂದ ತಪ್ಪಿಸಿಕೊಳ್ಳಬೇಕೆಂಬ ಯಾವ ಪೂರ್ವನಿಯೋಜಿತ ಯೋಚನೆಗಳೂ ಇಲ್ಲದೇ, ಹಾಗೊಮ್ಮೆ ತಪ್ಪಿಸಿಕೊಂಡರೂ ಅಥವಾ ನೆನೆದರೂ, ಅದರಿಂದ ಏನೂ ವ್ಯತ್ಯಾಸವನ್ನನುಭವಿಸದ ಎಲ್ಲ ಹಳ್ಳಿಗಾಡಿನ ಜನರಂತೆ ರಾಮಯ್ಯನೂ ಗದ್ದೆಯ ತುದಿಯಲ್ಲಿ ದಪ್ಪದಪ್ಪನೆ ಹೆಜ್ಜೆಯನ್ನಿಡುತ್ತಾ, ಆಕಡೆ ನಡೆಯುವ ಕ್ರಿಯೆಯೂ ಈಕಡೆ ಓಡುವ ಕ್ರಿಯೆಯೂ ಅಲ್ಲದ ಮಧ್ಯಮವಾದ ’ನಡೆದೋಟ’ ದೊಂದಿಗೆ ದೌಡಾಯಿಸುತ್ತಿರುವುದು, ನನ್ನ ಮತ್ತು ಅಪ್ಪಯ್ಯನ ಕಣ್ಣಿಗೆ ಬಿತ್ತು.

“ಬರಬ್ಬರಿ ಸಮಾರಾಧ್ನೆ ಆಯ್ದು ಅನ್ಸ್ತು ಹಂದಿದು. ಒಳ್ಳೆ ಮಜಬೂತ್ ಹಂದಿನೇಯಾ” ಅಪ್ಪಯ್ಯ ಉಸುರಿದ.
“ನಮ್ಮನೆ ತೋಟಕ್ ಬತ್ತಿತ್ತಲ, ಅದೇ ಅಪ್ಪುಲೂ ಸಾಕು”, ಕುರ್ಚಿಯಮೇಲೆ ಕುಕ್ಕುರುಗಾಲಲ್ಲಿ ಕುಳಿತು, ಮೊಣಕಾಲಿನಮೇಲೆ ಗಲ್ಲವನ್ನಿಟ್ಟು ಹೇಳಿದೆ.
“ಅದೇ ಆಯ್ಕು. ನಾ ಅಲ್ ಹೊಳೆ ಕಡು ಬಳಿಗ್ ಸೊಪ್ಪು ಕೊಯ್ಯಕರ್ ನೋಡ್ದೆ.”

ರಾಮಯ್ಯ ಗದ್ದೆಯಂಚಿಗೆ ಬಂದಿದ್ದ. ಆತ ಕಾಲಿಡುತ್ತಿದ್ದ ರಭಸಕ್ಕೆ ಎರಡೂಕಡೆ ಹಾರುತ್ತಿದ್ದ ಕೆಸರು ನೀರು, ಮೊಣಕಾಲಿನ ಮೇಲೆಳೆದು ಕಟ್ಟಿದ್ದ, ಕೆಂಪುಬಣ್ಣಕ್ಕೆ ತಿರುಗಿದ್ದ ಬಿಳಿಪಂಚೆಯನ್ನು ಸಂಪೂರ್ಣ ಕೆಂಪಾಗಿಸಿದ್ದವು. ಆತನ ಬಾಟಾಚಪ್ಪಲಿಯೂ ತಾನೇನೂ ಕಮ್ಮಿಯಿಲ್ಲವೆನ್ನುವಂತೆ ಹಿಂದಿನಿಂದ ’ಸರಕ್ ಚರಕ್ ಸರಕ್’ ಎಂದು ಎರಚಲು ಹೊಡೆದು, ಹಾಕಿದ್ದ ಅಂಗಿಯ ಬೆನ್ನಹಿಂದಿನ ಅರ್ಧಭಾಗವನ್ನು ಕೆಸರುಮಯವಾಗಿಸಿತ್ತು.
“ಮಂಗ ಅಂದ್ರೆ ತನ್ನ್ ಬಿಟ್ರೆ ಬೇರೆ ಯಾರು ಇಲ್ಲೆ ಅಂಬ. ಅದೆಂಥಕ್ ಓಡ್ತಿದ್ನೋ ಗುತ್ತಿಲ್ಲೆ. ಮಳೆಗಿಂತ ಕೆಳಗಿದ್ದ್ ನೀರೇ ಸಮಾ ಒದ್ದೆ ಮಾಡ್ತಿದ್ದು” ನಾನೆಂದೆ. ಅಪ್ಪಯ್ಯ ಒಮ್ಮೆ ಮುಗುಳ್ನಕ್ಕ. ಮೊದಲಿನಂತೇ ಸಂಕದ ಮೇಲೆ ಗಡಿಬಿಡಿಯಿಂದ ಓಡಿಬಂದ ರಾಮಯ್ಯ, ಬಾಗಿಲಿಗೆದುರಾಗಿ ಅಂಗಳದ ಅಂಚಲ್ಲಿ ಚಪ್ಪಲಿಯನ್ನೆಸೆದು ಒಳಗೆ ನುಗ್ಗಿದವ, ಹೊಕ್ಕುತ್ತಿರುವಾಗಲೇ ಕೂಗಿದ.
“ಅಮ್ಮೋ….., ಚಾ ಗೀ ಏನಾರೂ ಅದ್ಯಾ?”
“ಕೂರೂದಿಲ್ವ ನೀನು? ಚಾ ಕೊಟ್ರೆ ಹಂಗೇ ಹೋಗ್ತ್ಯಾ ಹೇಳು?” ಒಳಗಿನಿಂದಲೇ ತೂರಿಬಂದ ಆಯಿಯ ಪ್ರಶ್ನೆಗೆ ಉತ್ತರವೆಂಬಂತೆ ಜಗುಲಿಯ ಮೂಲೆಯೊಂದರಲ್ಲಿ, ಮೇಲಕ್ಕೆ ಕಟ್ಟಿದ್ದ ಲುಂಗಿಯನ್ನು ನಿಡಿದಾಗಿ ಇಳಿಬಿಟ್ಟು ಕುಳಿತ.
“ಏನಂತದೆ ಹಂದಿ?” ಅಪ್ಪಯ್ಯನ ಪ್ರಶ್ನೆ.
“ಮಸ್ತ್ ಹಂದಿ ಅಯ್ಯಾ….., ಇತ್ಲ ಬದಿ ತ್ವಾಟದಾಗೆಲ್ಲಾ ಬಳಚೀಬಳಚೀ ಡುಮ್ಮಗಾಗಿತ್ತೆ. ಪಾಪ, ಆ ಕರಿಗೊಂಡರ ಮನೆ ಸ್ವಾಮಯ್ಯ ಬಿದ್ದಿ ತೊಡೆ ಸಿಗ್ದ್ಕಂಡನೆ. ಆರ್ರೂ ಬಿಡ್ಲಿಲ್ಲೆ, ಇವತ್ ಬೆಳ್ಗಾಗೂದ್ರೊಳ್ಗೆ ಹಂದಿ ಹರೂಕ್ ಹಾಜಿರ್ರು, ಕ್ಕಿ…ಕ್ಕಿ….ಕ್ಕಿ….ಕ್ಕಿ…”, ಎಂದು ನಕ್ಕ.
ಸೋಮಯ್ಯ ಹಂದಿಬೇಟೆಯ ನಡುವೆ ಬಿದ್ದು, ಬೆತ್ತದ ಹಿಂಡಿನಲ್ಲಿ ಹೊರಳಿಹೋಗಿ, ಮೈಯೆಲ್ಲಾ ಗಾಯಮಾಡಿಕೊಂಡು, ತೊಡೆ ಸಿಗಿಸಿಕೊಂಡ ವಿಷಯ ಮುಂಜಾನೆಯೇ ತಿಳಿದಿತ್ತು.
“ಚೋದಿಮಗಂದು ಹಂದಿ….., ನಮ್ ಬಾಳಿತೋಟ ಎಲ್ಲಾ ಸತ್ಯನಾಶ ಮಾಡ್ಹಾಕಿತ್ತು. ಬೇಲಿ ಹಾಕ್ ಹಾಕ್ ನನ್ ರಟ್ಟೆ ಎಲ್ಲಾ ಸೋತ್ ಹೋಗಿತ್ತು ಮಾರಾಯಾ”, ಅಪ್ಪಯ್ಯನ ದನಿಯಲ್ಲಿ ಹತಾಶೆಯೊಂದಿಗೆ ಧನ್ಯವಾದದ ಸುಳಿಯೊಂದು ತಿರುಗುತ್ತಿತ್ತು.

ರಾಮಯ್ಯ ಮನೆಯೊಳಕ್ಕೆ ಹೊಕ್ಕುವುದನ್ನೇ ಕಾಯುತ್ತಿತ್ತೊ ಎಂಬಂತೆ ಭೋರ್ರೆಂದು ಶುರುವಾದ ಮಳೆ, ಕುಳಿರ್ಗಾಳಿಯೊಂದಿಗೆ ಎರಚಲನ್ನು ಕಿಟಕಿ ಮತ್ತು ಬಾಗಿಲುಗಳ ಮೂಲಕ ತಂದೆರಚಿತು. ಕಿಟಕಿಯಿಂದ ಮಾರುದೂರವೇ ಕುಳಿತಿದ್ದ ನನಗೆ ಮತ್ತು ಅಪ್ಪಯ್ಯನಿಗೆ ತಾಕಲಿಲ್ಲವಾದರೂ, ಅದರ ಬುಡದಲ್ಲೇ ಕುಳಿತಿದ್ದ ರಾಮಯ್ಯ, ಒಮ್ಮೆ ಚಳಿಯಿಂದ ನಡುಗಿ ಮುದುರಿದ. ವಾಯುವಿಹಾರಕ್ಕೆಂದೋ, ಸಂಗಾತಿಯನ್ನು ಹುಡುಕುತ್ತಲೋ ಅಥವಾ ಎಳೆದೂರ್ವೆಯನ್ನು ತಿಂದು ಕಕ್ಕಲೋ ಹೊರಗೆಹೋಗಿದ್ದ ಬೆಕ್ಕು ಧುತ್ತನೆ ಬಾಗಿಲ ಮೂಲಕವಾಗಿ ಒಳಗೆ ಬಂದು, ಜಗುಲಿಯಲ್ಲೊಮ್ಮೆ ನಿಂತು, ಪ್ರೇಕ್ಷಕರಾಗಿ ಕುಳಿತಿದ್ದ ಸಮಸ್ತ ಜನರನ್ನೊಮ್ಮೆ ನೋಡಿ, ಮೀಸೆಯಲ್ಲಾಡಿಸಿ, “ಆ…..,” ಎಂದು ಬಾಯಿತೆರೆದು, ಬಿರಬಿರನೆ ಮೈಕುಡುಗಿದುದರಿಂದ ತುಪ್ಪಳದ ಮೇಲಿದ್ದ ಮಳೆಹನಿಗಳು, ಕೆಲವು ಕೂದಲುಗಳ ಸಮೇತ ಸುತ್ತೆಲ್ಲಾ ದಿಕ್ಕಿಗೆ ಪಸರಿಸಿದವು. ಮುಂಗಾಲನ್ನೊಮ್ಮೆ ನೆಕ್ಕಿ, ಮತ್ತೆ ಎಲ್ಲರತ್ತ ಕೊಂಕುನೋಟದಿಂದ ನೋಡಿ, “ಮಿಯ್ಯಾಂವ್….., ಕುರ್ರ್ ರ್ರ್ ರ್ರ್…..,” ಎನ್ನುತ್ತಾ ತನ್ನೊಡತಿಯೆಡೆಗೆ ಸೊಂಟತಿರುಗಿಸುತ್ತಾ ಹೊರಟುಹೋಯಿತು.

ಈ ಮಾರ್ಜಾಲವ್ಯಾಪಾರ ನಡೆದ ಕೆಲವು ಸಮಯದ ನಂತರದವರೆಗೂ ಜಗಲಿಯಲ್ಲಿ ನೀರವ ಮೌನ ಆವರಿಸಿತ್ತು. ಅಡುಗೆ ಮನೆಯೊಳಗಾಗುತ್ತಿದ್ದ ಸಣ್ಣ ಪ್ರಮಾಣದ ಶಬ್ದಗಳೂ ಹೊರಗೆ ಬರಲಾರದಷ್ಟು ದೊಡ್ಡ ಶಬ್ದವನ್ನು ’ಜಿಟಿ ಜಿಟಿ’ ಸುರಿಯುತ್ತಿದ್ದ ಮಳೆ ಹೊರಡಿಸುತ್ತಿತ್ತು. ಇ೦ಥ ಸಂದರ್ಭದಲ್ಲಿ ಮಳೆಯ ಶಬ್ದವನ್ನಲ್ಲದೇ ಬೇರೇನನ್ನೂ ಕೇಳದ ಕಿವಿ, ನಗರದ ಬಗೆಬಗೆ ವಾಸನಾರೂಪಗಳಿಂದ ಮುಕ್ತವಾದ ಹಳ್ಳಿಯ ನಿರ್ವಾಸನಾ ಪರಿಸರದಲ್ಲಿದ್ದ ನಾಸಿಕ, ಹಿತವಾದ ಚಳಿರ್ಗಾಳಿಯನ್ನನುಭವಿಸುತ್ತಿದ್ದ ಚರ್ಮರಂಧ್ರಗಳು, ಮಂಜನ್ನೊಡಗೂಡಿ ಸುರಿಯುವ ಹನಿಯನ್ನು ಮಾತ್ರವೇ ಕಾಣಬಲ್ಲ ನೇತ್ರದ್ವಯಗಳು……. ಹೀಗೆ ಮುಂತಾಗಿ ಮಾನವನ ನವರಂಧ್ರಗಳೂ ತಮ್ಮ ಕಾರ್ಯವ್ಯಾಪ್ತಿಯಲ್ಲೊಮ್ಮೆ ವಿಶ್ರಾಂತಿಪಡೆದಾಗ, ಯೋಚಿಸಲು ಯಾವ ಕಾರ್ಯಕಾರಣ ಸಂಬ೦ಧಗಳೂ ಇಲ್ಲದ ಮನಸ್ಸು ಸ್ಥಗಿತಗೊಂಡು, ಹಳೆಯ ಹತ್ತುಹಲವು ಜನ್ಮಗಳ ಪುಣ್ಯಾವಷೇಶವೇನಾದರೂ ಉಳಿದಿದ್ದಲ್ಲಿ, ಅವರವರ ಪಾಲಿಗೆ ತಕ್ಕುದಾಗಿ ಪ್ರತಿಯೊಬ್ಬರೂ ಆ ಭೂಮವ್ಯೂಹದಲ್ಲೊಂದಾಗಿ ನಿರ್ವಿಕಲ್ಪ ಸಮಾಧಿಯ ಹನಿಯೊಂದರ ಅಣುವನ್ನನುಭವಿಸಿ, ಮುಖದ ಮೇಲೊಂದು ಸಂತೃಪ್ತ ನಗೆ ಸೂಸುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ.

ಆದರೀ ತನು, ಮನ ಕಾರ್ಯಕಾರಣ ಸಂಬಂಧ, ಭೂಮಾನುಭೂತಿ, ಸಮಾಧಿ ಮುಂತಾದವುಗಳೊಮ್ಮೆಯೂ ಚಿತ್ತವೃತ್ತಿಯಲ್ಲಿ ಸುಳಿಯದ, ಅವುಗಳ ನಾಮಾರ್ಥ-ಭಾವಾರ್ಥಗಳೂ ಗೊತ್ತಿಲ್ಲದ ರಾಮಯ್ಯನೆಂಬೋ ವ್ಯಕ್ತಿಯೂ ಸಹ ಅರಿವಿಲ್ಲದೇ ತನ್ನ ತಾನು ಮರೆಯಬೇಕಾದ ಆ ಕ್ಷಣದಲ್ಲಿ……, ಅದೋ….., ಆತನೇನು ಮಾಡುತ್ತಿದ್ದಾನೆ!!? ಇವ್ಯಾವುಗಳ ಹಂಗಿಲ್ಲದೇ ಮುದುರುಕುಳಿತಿದ್ದವ, ಒಳಗಿನಿಂದ ಲೋಟ ತುಂಬಿ ಬರಬಹುದಾದ ಬಿಸಿ ಹಬೆಯಾಡುವ ಚಹಕ್ಕಾಗಿ ಬಗ್ಗಿ ಬಗ್ಗಿ, ಒಂಟೆಯ ಕತ್ತನ್ನೆತ್ತರಿಸಿ ನೋಡುತ್ತಾ, ಆಗಾಗ ನೊಣಗಳನ್ನೋಡಿಸುತ್ತಾ ಕಾಲಕಳೆಯುತ್ತಿದ್ದಾನೆ. ಕೊನೆಗೂ ಆತನ ಮನದಲ್ಲಿ ಆಸ್ಥೆಯ ಗೋಪುರಗಳನ್ನೆಬ್ಬಿಸಿದ ಆ ಕಾರಣವಸ್ತುವಿನ ಆಗಮನವಾಯಿತು. ಬಟ್ಟಲಿನಲ್ಲಿ ಎರಡು ಲೋಟ ಚಹಾ ತಂದ ಆಯಿ, ಒಂದನ್ನು ಅಪ್ಪಯ್ಯನಿಗೂ ಇನ್ನೊಂದನ್ನು ರಾಮಯ್ಯನಿಗೂ ಕೊಟ್ಟಳು.
“ಮಾಣಿ….., ನೀ ಒಳ್ಗ್ ಬಾರ” ಎಂದಾಗಲೇ ಅರಿವಾಗಿತ್ತು, ನಿನ್ನೆಮಾಡಿದ ಶಿರ ಕಪಾಟಿನ ಡಬ್ಬಿಯ ಸಮೂಹದಲ್ಲೆಲ್ಲೋ ಅಡಗಿ ಕುಳಿತಿದೆಯೆಂದು.

ಈ ಚಹಾಕುಡಿಯುವಿಕೆಯ ನಡುವೆಯೊಂದಿಷ್ಟು ಮಳೆ-ಬೆಳೆ ಸಂಬಂಧೀ ಮಾತುಕತೆಗಳಾಗುತ್ತಿರುವಾಗಲೇ, ಕರಿಗೊಂಡರ ಮನೆಯಿಂದ ಕುಂಟುತ್ತಿದ್ದ ಸೋಮಯ್ಯ ಮತ್ತು ಹನುಮಂತನಾಯ್ಕನ ಮಗ ಲಕ್ಷ್ಮಣನಾಯ್ಕನ ಸವಾರಿ ನಿಧಾನಕ್ಕೆ ಕಂಬಳಿಕೊಪ್ಪೆಯನ್ನು ಹೊದ್ದು ಆಗಮಿಸಿತ್ತು. ಸೊಂಟದಲ್ಲಿ ‘ಖಣ್ ಖಣ್’ ಎಂದು ಸದ್ದನ್ನೊರಡಿಸುತ್ತಾ ಕತ್ತಿಯೊಂದಿಗೆ ನೇತಾಡುತ್ತಿದ್ದ ಕತ್ತಿಕೊಕ್ಕೆ, ಯಾವುದೋ ಕೆಲಸ ಮುಗಿಸಿಯೋ ಅಥವಾ ಶುರುಮಾಡಲೋ ಹೊರಟಿರುವರೆಂಬುದನ್ನು ಸೂಚಿಸುತ್ತಿತ್ತು. ಅವರೀರ್ವರಿಗೂ ಲೋಟ ಭರ್ತಿ ಚಾ ಹಸ್ತಾಂತರವಾಗಿ, ತನ್ಮೂಲಕ ಜಿಹ್ವಾಚಾಪಲ್ಯ ಮತ್ತು ’ಬಾಯಾಸರಿಕೆ’ ತಣಿಸಲ್ಪಟ್ಟು, ತೊಳೆದ ಲೋಟಗಳು ತಿರುಗಿ ಅಡುಗೆಮನೆಯೊಳಗೆ ಆಗಮಿಸಿದವು.

ಸೋಮಯ್ಯ ದನಿಯೆಳೆದ,”ಅಯ್ಯಾ….., ಬಾಯ್ಗೆ ಏನಾರೂ?”
“ಏ….., ಕೇಳ್ತನೆ? ಮೂರ್ ಕವಳ ರೆಡಿಮಾಡೆ.” ಅಪ್ಪಯ್ಯ ಕುಳಿತಿದ್ದವನು ಕದಲದೇ ಹೇಳಿದ.
“ಅಯ್ಯೋ, ಸುಮ್ನೆ ಕೂತ್ಕಂಡ್ ಇದ್ರಲಿ. ನಿಮ್ಗೇ ಕೊಡುಲ್ ಆಗ್ತಿಲ್ಯಾ? ನಂಗ್ ಈಗ ಪಾತ್ರೆ ತೊಳ್ದಿ ದನುಗೆಲ್ಲಾ ಅಕ್ಕಚ್ಚ್ ಕೊಡ” ಆಯಿಯ ಕೆಲಸಗಳ ಪಟ್ಟಿ ಮುಂದುವರೆದಿತ್ತು.
“ಆತು, ಕೊಡ್ತೆ.” ಎಂದವನು ಎದ್ದುಹೋಗಿ ಎರಡು ಹಣ್ಣಡಿಕೆ ಆರಿಸಿತಂದು ನನಗೆ ಕೊಟ್ಟ. ಮೋಟು ಕತ್ತಿಯಿಂದ ನಿಧಾನಕ್ಕೆ ಅಡಿಕೆ ಕೆರೆದಾದ ಮೇಲೆ, ಭಾಗಮಾಡಿ ಎಲೆಯೊಂದಿಗೆ ಮೂವರಿಗೂ ಕೊಡಲಾಯಿತು.
“ಮಾಣಿ….., ಹೊಗೆಸಪ್ಪು?” ರಾಗವೆಳೆಯುವ ಸರದಿ ಲಕ್ಷ್ಮಣ ನಾಯ್ಕನದು.
“ನಮ್ಮನೀಲ್ ಕವಳ ಹಾಕ್ವರು ಯಾರೂ ಇಲ್ವಲ. ನಿಂಗೇ ಗೊತ್ತದೆ, ಹೊಗೆಸಪ್ಪೆಲ್ಲಾ ಇರೂದಿಲ್ಲ ಹೇಳಿ” ಅಪ್ಪಯ್ಯನ ಮಾತು ಮುಗಿಯುವ ಮುನ್ನವೇ ರಾಮಯ್ಯನ ಲುಂಗಿಯ ಗಂಟಿನಲ್ಲಿ ಮುದುರಿ ಮಲಗಿದ್ದ ಹೊಗೆಸೊಪ್ಪಿನ ಎಳೆಯೊಂದು ಹೊರಬಂದು ಮೂರು ತುಂಡಾಗಲ್ಪಟ್ಟು ಎಲ್ಲರ ಕೈಸೇರಿತು.
’ಛಟ್’ ಎಂದು ತೊಡೆಯ ಮೇಲಿದ್ದ ಸೊಳ್ಳೆಯನ್ನು ಹೊಡೆದ ಲಕ್ಷ್ಮಣ ನಾಯ್ಕನ ಅಂಗೈಯೆಲ್ಲಾ ರಕ್ತಮಯವಾಗಿತ್ತು. ಮೊಣಕಾಲಿಗೆ ಒರೆಸಿಕೊಂಡವನೇ, ಹೊಗೆಸೊಪ್ಪನ್ನು ಅದೇ ಕೈಯ್ಯಲ್ಲಿ ಮುದ್ದೆಮಾಡಿ, ಆಗಲೇ ಬಾಯಿಸೇರಿದ್ದ ಎಲೆಯ ಜೊತೆ ಸೇರಿಸಿದ.

ವರಾಹದೇಹದ ಬಾಡೂಟ, ನೆರೆದಿದ್ದ ಮೂವರಲ್ಲೂ ತನ್ನ ವರ್ಚಸ್ಸನ್ನು ತೋರಿಸುತ್ತಿದ್ದುದರಿಂದ ಅವರ್ಯಾರ ಮನಸ್ಸೂ ವಿಷಯದ ಗಂಭೀರತೆಯೆಡೆಗೆ ಹೊರಳದೇ ವಾತಾವರಣ ಲಘುವಾಗಿತ್ತು.

ಸನ್ನಿವೇಶವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಹೊರಳಿಬಂತು ಅಪ್ಪಯ್ಯನ ಸ್ವರ, “ಎಂಥಾ ಮಾಡೂದಾ ಈಗ?” ಏಕವಚನದಲ್ಲಿ ಸಂಭೋದಿಸಿದ್ದರೂ ಪ್ರಶ್ನೆ ಮೂವರಿಗೂ ಅನ್ವಯವಾಗುತ್ತಿತ್ತು.
“ಇದುವರೆಗೂ ಇಲ್ಲದ ರೋಷವನ್ನು ಆಹ್ವಾನಿಸಿಕೊಂಡ ಸೋಮಯ್ಯ, “ಅಯ್ಯಾ…., ಆ ಸೂಳೆಮಕ್ಳಿಗೆ ನಾಕು ಬಿಟ್ರೆ ಸರಿ ಆಯ್ತರೆ” ಎಂದ.
“ಹೌದ್ ಮಾರ್ರೆ…., ಅವ್ರ್ ಮತ್ತ್ ಇತ್ಲಬದಿಗ್ ಕಾಲ್ ಇಡೂಕಾಗ.” ಲಕ್ಷ್ಮಣನಾಯ್ಕನ ದನಿಯೆತ್ತರಿಸಿತ್ತು.
“ಅಲ್ಲಾ…, ಹೊಡುದ್ ದೊಡ್ಡ್ ಮಾತಲ್ಲ. ನಾಳೆ ಕೇಸ್-ಗೀಸ್ ಆದ್ರೆ ಎಂತಾ ಮಾಡ್ತ್ರಿ?”
“ಅಯ್ಯಾ…., ಹಂಗರೆ ನಾಳಿ ನನ್ ಮಗ್ಳ್ ಮಾನ ಹೋದ್ರೆ ಯಂಥಾ ಮಾಡೂದು, ಹೇಳಿ ಕಾಂಬ?” ಕೃದ್ಧನಾದ ರಾಮಯ್ಯ, ಅಪ್ಪಯ್ಯನೇ ಅಪರಾಧಿಯೆಂಬಂತೆ ಮಾತನಾಡಿದ್ದ.
“ಹಂಗಲ್ವಾ ಹ್ವಾ…., ಅವ್ರು ಹೇಳೂದ್ರಗೆ ಎಂಥ ತಪ್ಪದೆ? ಇವತ್ ಹೊಡ್ದ್ ಕಳ್ಸದ್ರೆ, ಕಡೀಗ್ ನಮ್ನೇ ಒಳಗ್ ಹಾಕ್ರೆ ಮಾಡೂದೆಂಥದ? ಬಗೀಲ್ ಮಂಡಿ ಓಡ್ಸು.” ಲಕ್ಷ್ಮಣನಾಯ್ಕನ ಕಳಕಳಿಯ, ದೂರಾಲೋಚನಾ ಬುದ್ಧಿಯ ಪ್ರದರ್ಶನವಾಗತೊಡಗಿತ್ತು.
“ನೀವ್ ಯಂಥಾ ಮಾಡೂಕ್ ಹಣ್ಕೀರೋ ನಾಕಾಣೆ, ನಮ್ಮನೀಲ್ ಒಂದ್ ಕೇಪಿನ್ ಕೋವಿ ಅದೆ. ಇವತ್ತಲ್ಲ ನಾಳೆ ಹೊಡ್ದ್ ಹಾಕ್ತೆ ಆ ಬೋಳಿಮಕ್ಳನ್ನ.”
ರಾಮಯ್ಯನ ಕಣ್ಣಿನಲ್ಲಾಗಲೇ ಶರಾವತಿ ನದಿಯ ಅಣೆಕಟ್ಟಿನಂತೆ ನೀರುಕಟ್ಟಿ, ಇಳಿಯಲು ಶುರುವಾಗಿತ್ತು. ಮೂಗಂತೂ ಭೋರ್ಗರೆಯುತ್ತಿದ್ದ ರಭಸಕ್ಕೆ, ಕೆಂಬಣ್ಣ ಹೊಂದಿದ ಲುಂಗಿಯ ತುದಿಯಿಂದ ಒರೆಸಲ್ಪಟ್ಟು, ತಾನೂ ಸಹ ಅದೇ ಬಣ್ಣಕ್ಕೆ ಪರಿವರ್ತನೆಗೊಂಡಿತು.
“ನೀಯೆಂಥದ ಮಾರಾಯಾ…., ಗಂಡಸಾಗಿ ಹಿಂಗೆಲ್ಲಾ ಮರಕುದಾ? ನಾವೆಲ್ಲಾ ಇಲ್ವಾ ಇಲ್ಲಿ? ಯಂಥದಾರೂ ಉತ್ತರ ಕಂಡ್ ಹಿಡ್ವ ಬಿಡು” ಅಪ್ಪಯ್ಯನ ಸಮಾಧಾನದ ಮಾತುಗಳೇನೂ ಆತನಿಗೆ ಸಾಂತ್ವನವನ್ನೀಯಲಿಲ್ಲವಾದರೂ ಒಂದ್ಹತ್ತು ಸೆಕೆಂಡ್ಗಳ ತರುವಾಯ ಸುಮ್ಮನಾದ. ಎಲ್ಲರನಡುವೆಯೂ ಕೆಲವು ನಿಮಿಷಗಳ ಕಾಲ, ಮೌನವೆಂಬುದು ಸತ್ತ ದೇಹದಂತೆ ದಿಂಡುಗಡೆದು ಬಿದ್ದಿತ್ತು. ಯಾರೊಬ್ಬರೂ ಮಾತನಾಡುತ್ತಿರಲಿಲ್ಲ. ಕೇವಲ ನೀಳ ಉಸಿರಾಟದ ’ಸುಸ್ಸ್ ಸುಸ್ಸ್’ ಎಂಬ ಸ್ವರ ಕೇಳಿಬರುತ್ತಿತ್ತು. ಕುಳಿತಿದ್ದವರ ಉದರಬಂಡೆಗಳೆಲ್ಲವೂ ಮೇಲಕ್ಕೂ ಕೆಳಕ್ಕೂ, ಗಾಳಿಬೀಸಿದ ಬಾಳೆ ಅಲ್ಲಾಡುವಂತೆ, ಏರಿಳಿಯುತ್ತಿದ್ದವು. ಅಂಗಣದಲ್ಲಿ ಉದ್ದಕ್ಕೆ ಹರಡಿದ್ದ ಸಂಕದ ಅಗ್ರಭಾಗದಲ್ಲಿ ಹುಲುಸಾಗಿ ಬೆಳೆದಿದ್ದ ಕೋಟೆಹೂವಿನ ಗಿಡದಿಂದೊಂದು ಹೂವು ಆಗಸಕ್ಕೆದುರಾಗಿ ಮುಖಮಾಡಿ ಅರಳಿನಿಂತಿತ್ತು. ಮಳೆಹನಿಗಳ ನೀರು, ಅದರ ಕೊಳವೆಯಂತಹ ಭಾಗದಲ್ಲಿ ತುಂಬಿದಾಗ ತೂಕ ಹೆಚ್ಚಿ ಕೆಳಕ್ಕೆ ಬಾಗಿ ತನ್ನೊಡಲಲ್ಲಿರುವ ನೀರನ್ನೆಲ್ಲಾ ವಮನಿಸಿ, ಮತ್ತೆ ತನ್ನ ಸಹಜಾವಸ್ಥೆಗೆ ಜಿಗಿಯುತ್ತಿತ್ತು. ಅಪ್ಪಯ್ಯ ನಿಧಾನಕ್ಕೆ ಕೆಮ್ಮಿ, ಮಾತಿಗೆ ಮೊದಲಾದ.
“ಸೋಮಯ್ಯಾ….., ನಿಮ್ಮನೆ ರವಿ ಬರಲಿಲ್ವಾ ಇನ್ನೂ ಮನೆಗೆ?” ಯುವಕರೀರ್ವರ ಪೂರ್ವಾಪರತೆಯನ್ನೂ, ಕೌಟುಂಬಿಕ ಹಿನ್ನೆಲೆಯನ್ನೂ, ಹಣಬಲವನ್ನೂ ತಿಳಿಯಲು ರವಿಯನ್ನು ಹಿಂದಿನದಿನ ರಾತ್ರಿಯೇ ನೇಮಿಸಲಾಗಿತ್ತು. ಆತ, ಮುಂಜಾನೆಯೇ ಭಟ್ಕಳಕ್ಕೆ ಹೋಗಿದ್ದವ ಇನ್ನೂ ಬಂದಿರಲಿಲ್ಲ.
“ನಾ ಇತ್ಲಗ್ ಬರ್ಬೇಕಿರೆ ಅಂವ ಮನೀ ಹೊಕ್ದ. ಊಟ ಗೀಟ ಮಾಡ್ಕಂಡ್ ಬರ್ವ. ಇಷ್ಟೊತ್ತಿಗ್ ಬರ್ಬೇಕಾಗಿತ್ತಪ.” ಮಾತನಾಡುತ್ತಲೇ ಬಗ್ಗಿ, ಬಾಗಿಲೆಡೆಯಿಂದ ಗದ್ದೆಯ ಬದುವಿನ ದಾರಿಯತ್ತ ವೀಕ್ಷಿಸಿದ ಸೋಮಯ್ಯ.
“ಹಾ….., ಬಂದ ನೋಡಿ. ನಾ ಹೇಳಿದ್ದು ಸಮಾ ಆತು” ದೂರದಲ್ಲೇ ಕಂಡಿತ್ತು ರವಿಯ ಮಬ್ಬು ದೇಹ. ಆತನೊಂದಿಗೆ ನಿಧಾನಕ್ಕೆ ಅಣ್ಣಪ್ಪನೂ ನಡೆದುಬಂದ. ಆಧುನಿಕತೆಯ ಪ್ರಭಾವ ಎಲ್ಲ ಯುವಕರಂತೇ ರವಿಯ ಮೆಲೂ ಆಗಿತ್ತು. ಲುಂಗಿಯ ಜಾಗವನ್ನು ಬರ್ಮಾಚಡ್ಡಿಯೂ, ಕಂಬಳಿಕೊಪ್ಪೆಯ ಜಾಗವನ್ನು ಕೊಡೆಯೂ ಆಕ್ರಮಿಸಿದ್ದವು. ಎಲ್ಲರಂತೆ “ಅಯ್ಯಾ” ಎಂದು ಸಂಭೋಧಿಸದೇ “ಭಟ್ರೇ” ಎನ್ನುತ್ತಿದ್ದನಾತ. ಅವನೊಂದಿಗಿದ್ದ ಅಣ್ಣಪ್ಪನೆಂಬಾಕೃತಿ, ಪಕ್ಕಾ ಹಳ್ಳಿಗನದ್ದೆಂದು ನೋಡಿದವರಾರಾದರೂ ಹೇಳಬಹುದು.

ಅವರಿಬ್ಬರೂ ಬಂದು ಪ್ರತಿಷ್ಟಾಪಿತರಾದಾಗ “ಬೇಡ, ಬೇಡ”ವೆಂದರೂ ಬಂದ ಚಹಾವನ್ನು “ಬೇಡಾಗಿತ್ತು, ಬೇಡಾಗಿತ್ತು” ಎನ್ನುತ್ತಲೇಕುಡಿದು ಮುಗಿಸಿದರು. ದೇವಕೈಂಕರ್ಯಗಳನ್ನೆಲ್ಲಾ ಮುಗಿಸಿ ಗರ್ಭಗುಡಿಯಿಂದ ನಿಧಾನಕ್ಕೆ ಭಕ್ತರೆಡೆಗೆ ಚಿತ್ತೈಸುವ ಅರ್ಚಕರಂತೆ ಎಲ್ಲರೆಡೆಗೊಮ್ಮೆ ನೋಡಿ ಮುಗುಳ್ನಕ್ಕು ಸುಮ್ಮನೆ ಕುಳಿತ ರವಿ, ಬೇಕಾದವರೇ ತನ್ನನ್ನು ಕೇಳಲಿ ಎಂಬಂತೆ.
“ಪಾರ್ಟಿ ಹೆಂಗೆ?” ಅಪ್ಪಯ್ಯನೇ ಮುಹೂರ್ತವಿಟ್ಟ.
“ಬಿಗಿ ಅದೆ ಭಟ್ರೆ” ಉತ್ತರ ನಿಗೂಢವಾಗಿತ್ತು.
“ಯಂಥ ಬೊಗಳ ಬೇಗೆ. ಅಧಿಕ್ಷಣಿ ಕಾಣು….., ನಾವ್ ಸಾಯ್ತೇ ಕೂತ್ಕಂಡವೆ ಇಲ್ಲಿ. ಇವಂಗ್ ಮಸ್ಗಿರಿ.” ಲಕ್ಷ್ಮಣನಾಯ್ಕ ಒದರಿದ. ಮಹತ್ತನ್ನು ವರ್ಣಿಸುತ್ತಿರುವೆನೆಂಬಂತೆ ದೀರ್ಘವಾಗಿ ಉಸಿರನ್ನೆಳೆದು, ಒಮ್ಮೆ ಎಡಗೈಯಿಂದ ಹಿಂತಲೆ ಕೆರೆದುಕೊಂಡು ಮೊದಲಿಟ್ಟ ರವಿ.

“ಒಬ್ಬ ಸಬ್ ಇನ್ಸ್ಪೆಕ್ಟರ್ ಮಗ, ಮತ್ತೊಬ್ಬ ಅವ್ನ್ ಬಾವ, ಅತ್ತಿ ಮಗ. ಅವ್ನ್ ಅತ್ತಿ ಅಂದ್ರೆ ಆ ಮತ್ತೊಬ್ಬ್ ಹುಡುಗ್ನ ಅಬ್ಬಿ ಇರೂದ್ ಎಲ್ಲಿ ಮಾಡೀರಿ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೇಲಿ, ಅದೂ ಡಿಸ್ಟ್ರಿಕ್ಟ್ ಆಫೀಸರ್ ಅಂಬ್ರು” ಆತನ ಸುದ್ದಿಕೋಶದ ಚೂರುಪಾರುಗಳೂ ಕೂಡ ಮುಗಿದಿದ್ದವು. ಎಲ್ಲರ ಮುಖದಲ್ಲಿ ಚಿಂತೆಯ ಮಾಯಾಮುಸುಗು ಆವರಿಸಿತ್ತು. ರಾಮಯ್ಯ ಮತ್ತೆ ಹನಿಗಣ್ಣಾಗಿದ್ದ. ಉಳಿದಿಬ್ಬರ ದೇಹದಲ್ಲಿ ಭೀತಿಯೂ ಸಹ ಬಾಯ್ಕೆಳೆದುಕೊಂಡು ಕುಳಿತಿತ್ತು. ಆಯಿ, ಒಳಗಿದ್ದವಳು ಪಾಕಶಾಲೆಯ ಬಾಗಿಲ ಮೆಟ್ಟಿಲಮೇಲೆ ನಿಂತು ಇಣುಕುತ್ತಿದ್ದಳು.
ಮುಂದೇನು ಮಾಡುವುದು?
ಮುಂದೇನು ಮಾಡುವುದು?
ಮುಂದೇನು ಮಾಡುವುದು?
ಅಪ್ಪಯ್ಯನೇನೋ ದೀರ್ಘಾವಲೋಕನೆಯ ಸಾಗರದಿಂದ ಮುತ್ತೊಂದನ್ನು ಹೆಕ್ಕಿತೆಗೆದಂತೆ ಸಣ್ಣದಾಗಿ ಉಸುರಿದ.
“ಉಳ್ಳ ಹಾಕ್ವನಾ?”
“ಆಂ!!!!??” ಎಲ್ಲರೂ ಒಟ್ಟಿಗೇ ಕೂಗಿದ್ದರು. ನನಗೂ ಮಹದಾಶ್ಚರ್ಯವಾಗಿತ್ತು. ನಿಧಾನವಾಗಿ ಉಪಾಯದ ರೂಪುರೇಷೆಯೆಲ್ಲವೂ ಹೊರಬಿತ್ತು. ಎಲ್ಲರೂ ಬೇರೆದಾರಿಯಿಲ್ಲವೆಂಬಂತೆ ತಲೆದೂಗಿದರು. ಕುಸುಮಳನ್ನು ಕರೆದು, ಅವಳೇನು ಮಾಡಬೇಕೆಂದು ವಿವರಿಸಲಾಯಿತು. ಭಯಮಿಶ್ರಿತ ಅನಿವಾರ್ಯತೆಯಿಂದವಳು ಒಪ್ಪಿದಳು. ಮುಂದಿನದು ಕೇವಲ ಕಾರ್ಯಾಚರಣಾ ಭಾಗವಾಗಿತ್ತು. ಹಾವೂ ಸಾಯಬಾರದು, ಕೋಲೂ ಮುರಿಯಬಾರದು. ಅಸಲಿಗೆ ಹಾವು ಮತ್ತು ಸರ್ಪಬಳಗಕ್ಕೆ ಕೋಲು ಯಾವುದೆಂಬುದೇ ಗೊತ್ತಾಗಬಾರದು……

Sandeep Hedge
hegdesandeep10@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post