ಯಜ್ಞಾ ಭಟ್ಟರು ಕೊನೆಯುಸಿರೆಳೆದು ತಿಂಗಳುಗಳೇ ಕಳೆದಿದ್ದವು. ಮತ್ತೆ ಒಂಟಿತನದ ಕತ್ತಲಿನ ರಾತ್ರಿಗಳೇ ವರ್ಷಿಗೆ ಶಾಶ್ವತವಾಯಿತು. ವರ್ಷಿಯ ಜೀವನ ಏರಿಳಿತಗಳಿಲ್ಲದೆ ನಡೆಯುತ್ತಲೇ ಇತ್ತು. ಪ್ರತಿದಿನದ ಕೆಲಸಗಳು, Routine ಬದುಕಿಗೆ ಒಗ್ಗಿ ಹೋಗಿದ್ದ. ಕೆಲ ಹೊತ್ತು ಸಾಕು ದೈನಂದಿನ ದಿನಚರಿಗೆ. ಇನ್ನುಳಿದ ಸಮಯ ತಂದೆಯ ಮಮತೆಯ ನೆನಪಿನಲ್ಲಿ, ಕಳೆದು ಹೋದ ಗೆಳತಿಯ ಪ್ರೀತಿಯ ಜೊತೆಯಲ್ಲಿ ವಿಶ್ವಾತ್ಮನೆಂಬ ತಂದೆಯ ಬಗ್ಗೆ ಯೋಚಿಸುವುದರಲ್ಲಿ ಕಾಲ ಕಳೆಯುತ್ತಿದ್ದ.
ಹೊಟ್ಟೆಪಾಡಿಗಾಗಿ ಮಾಡುತ್ತಿರುವ ಪ್ರತಿ ದಿನದ ದೇವರ ಕೆಲಸ ಅಡೆತಡೆಯಿಲ್ಲದೆ ಸಾಗುತ್ತಿತ್ತು. ದೇಹ ಒಂದು ಕೆಲಸದಲ್ಲಿ ನಿರತವಾಗಿದ್ದರೆ, ಮನಸು ತನ್ನದೇ ಯೋಚನೆಗಳಲ್ಲಿ ಮಗ್ನ. ಚಂಚಲತೆಯ ಸಂಕೇತ ಅದು. ಬದುಕುವ ನೀತಿಯೇ ತಿಳಿದಿಲ್ಲ ಎಂದರೆ ಚಂಚಲತೆ ಸಹಜ. ಮಾಡುವ ಕೆಲಸದಲ್ಲಿ ಪ್ರೀತಿ ಇರಬೇಕು. ಮಾಡುತ್ತಿರುವ ಕರ್ಮಗಳಲ್ಲಿ ಹಿಗ್ಗಿಲ್ಲದಿದ್ದರೆ ಮಾಡಿದ ಪ್ರಯೋಜನ ಶೂನ್ಯವೇ.
ಮನಸು ಬಯಸುವ ಕೆಲಸ ಮಾಡಬೇಕು. ಪ್ರತಿಯೊಬ್ಬರಿಗೂ ಇಂಥದೇ ಕೆಲಸವೆಂದು ಕ್ರಿಯೆಗಳೆಂದು ಮೊದಲೇ ನಿರ್ಧಾರವಾಗಿರುತ್ತದೆ, ಅದನ್ನು ಹುಡುಕಿಕೊಳ್ಳಬೇಕಷ್ಟೆ. ಆಗ ಮನಸ್ಸಿಗೂ ದೇಹಕ್ಕೂ ವಿಶ್ವಾತ್ಮನಿಗೂ ಮಿಲನವಾಗುತ್ತದೆ, ಅದರಲ್ಲಿ ತೃಪ್ತಿಯಿರುತ್ತದೆ.
ವರ್ಷಿ ಯೋಚಿಸುತ್ತ ಕುಳಿತಿದ್ದ. ಪ್ರಪಂಚದ ಬಗ್ಗೆ ಯೋಚಿಸುವುದಾಗಲೀ, ಏನೋ ದೊಡ್ಡ ಸಾಧನೆಗಳನ್ನು ಮಾಡಬೇಕೆಂಬುದಾಗಲೀ ಅವನ ಯೋಚನೆಗೂ ನಿಲುಕದ ವಿಷಯಗಳು. ಅವನ ಪರಿಧಿ ಸೀಮಿತ. ಅವನೊಬ್ಬ ಸಾಮಾನ್ಯ ಪೂಜಾರಿ. ಒಂಟಿತನದ ಪರಮಾವಧಿ, ಕಳಚಿ ಹೋಗುತ್ತಿರುವ ಸಂಬಂಧಗಳ ಕೊಂಡಿಗಳಿಂದಾಗಿ ದೇವಸ್ಥಾನಕ್ಕೆ ಬರುವ ಜನರ ಸಂಖ್ಯೆಯೂ ಕ್ಷೀಣವಾಗಿತ್ತು. ಮುಂದೇನು ಎಂಬ ಪ್ರಶ್ನೆ ಆಗಾಗ ವರ್ಷಿಯನ್ನು ಗಾಢವಾಗಿಯೇ ಕಾಡಿಸಿದ್ದು ಇದೆ.
ಮುಸ್ಸಂಜೆಯ ಹೊತ್ತು ಪಡುವಣ ಸೂರ್ಯ ಕೆಂಪಾಗುತ್ತಿದ್ದರೆ ಹಕ್ಕಿ ಪಕ್ಷಿಗಳು ಗೂಡು ಸೇರುವ ಹಿಗ್ಗಿನಲ್ಲಿ ದಿಗಂತ ಪೂರ್ತಿ ಬಣ್ಣದ ಹಾಳೆಯಂತಿತ್ತು. ವರ್ಷಿ ದೇವಸ್ಥಾನದ ಕೊಳದ ಸಮೀಪವೇ ನಿಂತಿದ್ದ. ನೀರಿನಲ್ಲೂ ಆಗಸದ ಬಣ್ಣಗಳ ಚಿತ್ತಾರದ ಪ್ರತಿಬಿಂಬ. ಒಮ್ಮೊಮ್ಮೆ ಕಲ್ಲೆಸೆದಂತೆ ತರಂಗಗಳೇಳುತ್ತಿದ್ದವು. ನೀರಿನಾಳದ ಜೀವಿಗಳ ಬಿಸಿಯುಸಿರಿರಬೇಕು. ಶಾಂತ ಸಿಹಿ ನೀರಿನ ಕೊಳವದು. ಅವನೇನು ಯೋಚಿಸುತ್ತಿದ್ದನೋ ಕೊಳದ ನೀರಿನಂತೆ ಮನಸ್ಸು ಶಾಂತವಾಗಿತ್ತು, ನಿರ್ಲಿಪ್ತವಾಗಿಯೂ.
ಅದೇಕೋ ಒಮ್ಮೆಲೇ ಕರಿ ಮೋಡಗಳೆಲ್ಲ ಒಂದೇ ಕಡೆ ಸೇರಿ ದಟ್ಟ ಕತ್ತಲು ಎದ್ದು ನಿಂತಿತು. ಧರಿತ್ರಿಯ ಎದುರು ದರಣಿ ಕೂರುವಂತೆ ಒಂದೆಡೆ ಕೂಡಿ ಗುಡುಗಿನಬ್ಬರದಿಂದ ಘರ್ಜಿಸತೊಡಗಿದವು. ಮಳೆ ಬರುವ ವಾತಾವರಣ. ಎಷ್ಟು ಸುಂದರ ಸೃಷ್ಟಿ. ಮನದಲ್ಲಿಯೇ ಮುಗುಳ್ನಕ್ಕ ವರ್ಷಿ. ಎಲ್ಲಿಯೋ ಹುಟ್ಟುವ ಮೋಡಗಳು ಇನ್ನೆಲ್ಲೋ ಹೋಗಿ ಮಳೆಗರೆಯುತ್ತವೆ. ಯಾವ ಪ್ರೀತಿ ಒಂದೆಡೆಯಿಂದ ಇನ್ನೊಂದೆಡೆಗೆ ಸೆಳೆದುಕೊಳ್ಳುತ್ತದೆ? ಹರೆಯ ತುಂಬಿ ನಿಂತ ಮೇಘ ಮಂದಾರಕ್ಕೆ ಯಾವ ಸ್ಪರ್ಶ ಹನಿಯಾಗಿ ಸುರಿಯಲು ಪ್ರೇರೇಪಿಸುತ್ತದೆ? ಬಿಸಿಲ ಝಳಕ್ಕೆ ಭೂಮಿಯೊಳಗೆ ಸೇರಿದ ನಿರ್ಜೀವ ಕಣಗಳು ಯಾವ ಸ್ಪಂದನಕ್ಕೆ ಚಿಗುರಾಗಿ ಒಡೆಯುತ್ತವೆ?
ಅದ್ಭುತ ಎಂದುಕೊಂಡ ವರ್ಷಿ. ಅದೇಕೋ ಬಿಟ್ಟು ಹೋದ ಗೆಳತಿ ನೆನಪಾದಳು. ಯಾವ ಪ್ರೀತಿ ಒಂದೆಡೆಗಿನಿಂದ ಇನ್ನೊಂದೆಡೆ ಬರಸೆಳೆದಿದ್ದು ಅರ್ಥವಾಗಲಿಲ್ಲ; ಮೂಕ ವೇದನೆ ಯಾರಿಗೂ ಕೇಳಲಿಲ್ಲ.
ದಿನವೂ ಇದೇ ಸಮಯದಲ್ಲಿ ಮನೆಯ ನಂದಾದೀಪದೆದುರು ಕುಳಿತಿರುತ್ತಿದ್ದ ವರ್ಷಿ ಇಂದೇಕೋ ದೇವಸ್ಥಾನದಲ್ಲಿ ಪೀಠವಾಗಿದ್ದ. ಮುಸ್ಸಂಜೆಯ ಮೇಲೆ ಮುಂಜಾನೆಯವರೆಗೆ ಅಲ್ಲಿ ಯಾರೂ ಇರುವುದಿಲ್ಲ, ಬರುವುದು ಕಷ್ಟವೇ. ದೇವರೆದುರಿನ ಪುಟ್ಟ ದೀಪ ಏರುತ್ತಿರುವ ಕತ್ತಲೆಯನ್ನು ಕರಗಿಸಿಕೊಳ್ಳಲು ಹರಸಾಹಸ ಮಾಡುತ್ತಿತ್ತು. ಮೋಡದ ಗುಂಪುಗಳೇ ಅಲ್ಲಿ ಬಂದು ಸೇರಿದ್ದವು. ಒಂದನ್ನೊಂದು ಸೇರುವ ಮೋಡಗಳ ಮಿಲನಕ್ಕೆ ಕೋಲ್ಮಿಂಚು ಮುಗಿಲಿಗೆ ಹಿಗ್ಗಿನ ರಂಗೋಲಿ ಹಾಕುತ್ತಿದ್ದವು. ಅದರ ಹಿಂದೆಯ ಬರಸೆಳೆವ ಸದ್ದು, ಮೋಡಗಳ ಬಿಸಿಯುಸಿರು ಕೇಳುತ್ತಿತ್ತು ಗುಡುಗಿನ ರೂಪದಲ್ಲಿ.
ಮೋಡವೆಂಬುದು ದ್ರವವೋ? ಅನಿಲವೋ? ಘನವೋ? ಅನಿಲವಾಗಿದ್ದರೆ ಒಂದನ್ನೊಂದು ಸ್ಪರ್ಶಿಸಲು ಹೇಗೆ ಸಾಧ್ಯ? ಘನವಾದರೆ ಭೂಮಿಯ ಪ್ರೀತಿಯನ್ನು ತೊರೆದು, ಗುರುತ್ವ ಮರೆತು ತೇಲಲು ಹೇಗೆ ಸಾಧ್ಯ? ದ್ರವವೆಂಬುದಾದರೆ ಭೂಮಿಯ ಮೇಲೆ ಭೋರ್ಘರೆಯಬೇಕಿತ್ತಲ್ಲವೇ? ಎಂದುಕೊಂಡ ವರ್ಷಿ.
ನೀರ ಹನಿಯೊಂದು ವರ್ಶಿಯ ಮುಖದ ಮೇಲೆ ಪವಡಿಸಿತು. ವರ್ಷಿ ಮುಖವೆತ್ತಿ ಆಗಸದೆಡೆಗೆ ದೃಷ್ಟಿ ಹಾಯಿಸಿದ. ಅದರ ಹಿಂದೆಯೇ ಮತ್ತೊಂದು ಹನಿ… ಒಂದರ ಹಿಂದೆ ಒಂದು… ಲೆಕ್ಕವಿಲ್ಲದಷ್ಟು.
ತನ್ನಲ್ಲಿರುವ ತಂಪನ್ನು ವಿಶ್ವ ನನಗೆ ಬದಲಾಯಿಸಿಕೊಂಡಿತೆ? ಯೋಚನೆ ಬಂತು. ಇದೇಕೆ ಹೀಗೆಲ್ಲ ಕಲ್ಪಿಸಿಕೊಳ್ಳುತ್ತಿದ್ದೇನೆ? ಎಂದು ತನಗೆ ತಾನೇ ಪ್ರಶ್ನಿಸಿಕೊಂಡ ವರ್ಷಿ.
ಮಳೆ ಮತ್ತೂ ಜೋರಾಗುತ್ತಲೇ ಇತ್ತು. ಎದ್ದು ಹೋಗಬೇಕು ಎಂದುಕೊಳ್ಳುವಷ್ಟರಲ್ಲೇ ಪೂರ್ತಿಯಾಗಿ ನೆನೆದು ಹೋಗಿದ್ದ. ಎಷ್ಟೋ ದಿನಗಳಿಂದ ಮೈಯಲ್ಲಿ ತುಂಬಿಕೊಂಡಿದ್ದ ಕೊಳೆ ಮಳೆಯಲ್ಲಿ ತೋಯ್ದು ಹೋಗುತ್ತಿದೆಯೇನೋ ಎಂಬ ಭಾವ. ಬೀಳುತ್ತಿರುವ ಮಳೆಯ ರಭಸಕ್ಕೆ ಮರುಳಾಗಿ ಆಗಸಕ್ಕೆ ಮುಖ ಮಾಡಿದ. ಆಗಾಗ ಮೂಡುವ ಕೋಲ್ಮಿಂಚು ಅಲ್ಲಿ ಬೆಳಕನ್ನು ಚೆಲ್ಲುತ್ತಿತ್ತು. ಮಳೆ ಇನ್ನೂ ಬಿರುಸಾಯಿತು.
ವರ್ಷಿ ಒಮ್ಮೆ ಕೊಳದತ್ತ ಕಣ್ಣು ಹಾಯಿಸಿದ. ಆಗಸದ ನೀರು ಕೊಳಕ್ಕೆ ಬೀಳುತ್ತಿದೆಯೋ, ಕೊಳದ ನೀರು ಆಗಸದೆತ್ತರಕ್ಕೆ ಸಾಗುತ್ತಿದೆಯೋ ತಿಳಿಯದಷ್ಟು ಆರ್ಭಟ ಮಳೆಗೆ. ಅಷ್ಟರಲ್ಲೇ ಆಗಸದಲ್ಲಿ ಬಳ್ಳಿಯ ಕೋಲ್ಮಿಂಚು ಮೂಡಿತು. ಎಲ್ಲಕ್ಕಿಂತ ಹೊಸದರಂತೆ, ಬೆಳ್ಳನೆ ಬೆಳಕು. ಸೂರ್ಯನ ಬೆಳಕಿಗಿಂತ ಹೆಚ್ಚು ಬೆಳಕು ಮೂಡಿಸಿದ ಕೋಲ್ಮಿಂಚು ಮಿಂಚಾಗಲೇ ಇಲ್ಲ, ಬೆಳಕಾಗಿಬಿಟ್ಟಿತು. ವರ್ಷಿ ಆಶ್ಚರ್ಯಗೊಂಡ. ಏನಾಗುತ್ತಿದೆ? ಮಿಂಚು ಎಂದರೆ ಕಣ್ಮುಚ್ಚಿ ಬಿಡುವಷ್ಟು ಹೊತ್ತು ಮಾತ್ರ. ಮಿಂಚಲ್ಲದ ಬೆಳಕೇನಿದು? ಎಂದು ನಿಬ್ಬೆರಗಾದ. ಮಳೆಯ ನೀರು ಕೊಳದ ನೀರು ಸೇರುವ ಜಾಗದಿಂದ ಆರಡಿ ಎತ್ತರದ ಸುಂದರ ಆಕಾರವೊಂದು ಸೃಷ್ಟಿಯಾಯಿತು. ನೀರಿನಿಂದಲೇ ರೂಪುಗೊಂಡಿದ್ದ ಆಕೃತಿ ಅದು. ವರ್ಷಿ ಯಾವತ್ತೂ ಕೇಳಿರದ ಸಂಗೀತದ ಅಲೆಯೊಂದು ಕೇಳಿಬಂತು. ಜಲತರಂಗ.. ಗಾಳಿಯ ಹಿನ್ನೆಲೆಯ ಜೊತೆ.. !! ಎಷ್ಟೋ ಕಾಲದ ಮೇಲೆ ವರ್ಷಿ ಮೊದಲಿನ ಹಿಗ್ಗು ಕಂಡಿದ್ದ. ಮನಸ್ಸು ಸೂರೆಯಾಗಿತ್ತು, ಸಂಗೀತದ Rhythm ಅವನ ಆಳಕ್ಕಿಳಿಯಿತು. ಸಂಗೀತದ ಅರ್ಥ ಈಗ ತಿಳಿಯಿತು. ಮನುಷ್ಯ ಹುಟ್ಟು ಹಾಕಿದ್ದು ಸಂಗೀತವೇ ಅಲ್ಲ, ಬರೀ ಧಾಮ್ ಧೂಮ್ ಮ್ಯೂಸಿಕ್ ಗಳಿಗಷ್ಟೇ ಸೀಮಿತ, ಅರ್ಥವಿರದ ಪದಗಳ, ಅಪಾರ್ಥ ಸಾಲುಗಳ ಕವಿತೆ ಎಂದುಕೊಂಡ. ಸಂಗೀತ ಅಂತರಂಗವನ್ನು ತಟ್ಟುತ್ತದೆ, ಎಲ್ಲವನ್ನು ಮರೆಸುತ್ತದೆ, ಎಲ್ಲವನ್ನು ನೆನಪಿಸುತ್ತದೆ ಕೂಡ. ಸಂಗೀತ ಅಲೆಅಲೆಯಾಗಿ ಪ್ರವಹಿಸುತ್ತಿತ್ತು. ಮಳೆಯ ಬಿರುಸು ಅದಕ್ಕೆ ಜುಗಲ್ ಬಂದಿಯಂತೆ. ಕೋಲ್ಮಿಂಚು ಮುಗಿದಂತೆ ಬೆಳಕು ಮತ್ತೆ ಕತ್ತಲಿಗೆ ಜಾಗ ನೀಡಿತು.
ವರ್ಷಿ ಸಂಗೀತದ ಅಲೆಯಿಂದ ಹೊರಬರಲು ಪ್ರಯತ್ನಿಸಿದ. ನೀರಿನಿಂದಲೇ ಉಂಟಾದ ಆಕೃತಿ ಏನಾಯಿತು? ಎಲ್ಲಿ ಹೋಯಿತು? ಎಂಬ ಕುತೂಹಲ ವರ್ಷಿಗೆ. ದೇವರೆದುರು ಉರಿಯುತ್ತಿದ್ದ ಪುಟ್ಟ ದೀಪವೂ ಆರಿ ಹೋಯಿತು; ಕತ್ತಲೆದುರು ಸೋತು ಹೋಯಿತು. ವರ್ಷಿಯ ಉಸಿರು ಸಹ ಅವನಿಗೆ ಕೇಳಿಸುವ ಅನುಭೂತಿ, ಇದು ಮೊದಲೇ ಏನಲ್ಲ ಆದರೂ ವಿಚಿತ್ರ ಅನುಭೂತಿ. ಕತ್ತಲನ್ನು ದಿಟ್ಟಿಸಿ ನೋಡಿದ, ಆಶ್ಚರ್ಯವೆಂದರೆ ಕೆಲವೊಮ್ಮೆ ಪೂರ್ತಿ ಕತ್ತಲಿನಲ್ಲೂ ಕಾಣಿಸುವುದುಂಟು. ವರ್ಷಿ ಅಂಥ ಕತ್ತಲಿನಲ್ಲಿಯೇ ನೀರಿನ ಆಕೃತಿ ಹುಡುಕುತ್ತಲಿದ್ದ.
ಸಂಗೀತದ ಇಂಪು ಹೆಚ್ಚುತ್ತಲೇ ಹೋಯಿತು. ಯಾರದೋ ಹೆಜ್ಜೆಯ ಸದ್ದು, ಮತ್ತು ಮತ್ತೂ ಹತ್ತಿರ ಬಂದಂತೆ. ಎದ್ದು ಓಡಿ ಬಿಡಲೇ ಎಂದುಕೊಂಡ. ಅದ್ಯಾವುದೋ ಶಕ್ತಿ ಹಿಡಿದು ನಿಲ್ಲಿಸಿತ್ತು ವರ್ಷಿಯನ್ನು, ಆಲಿಸುತ್ತಿರುವ ಸಂಗೀತ, ಮನಸೂರೆಗೊಂಡ Rhythm. ಕೆಲವೇ ಕ್ಷಣಗಳಲ್ಲಿ ಪಕ್ಕದಲ್ಲಿ ಯಾರೋ ಕುಳಿತಂತೆ ಭಾಸ. ಅದೇನೋ ಭರವಸೆ ಮೂಡಿಸಿತು ಅವನಿಗೆ ಅರಿವಿಲ್ಲದಂತೆ.
ಆದರೂ “ಯಾರು?” ಎಂದ ವರ್ಷಿ ಭಯಮಿಶ್ರಿತ ಧ್ವನಿಯಲ್ಲಿ. ಯಾವುದೇ ಪ್ರತಿಕ್ರಿಯೆಯಿರಲಿಲ್ಲ. “ಯಾರದು?” ಎಂದು ಸ್ವಲ್ಪ ದೊಡ್ಡದಾಗಿಯೇ ಎನ್ನುವಂತೆ ಕೇಳಿದ, ಕೂಗಿದ. ಅವನ ಮನಸ್ಸಿನ ಭಯ ಸ್ಪಷ್ಟವಾಗಿ ಕಂಡುಬಂತು. ಪಕ್ಕದಲ್ಲಿ ಕೈಯಾಡಿಸಿದ, ಯಾರು ಇದ್ದಂತೆ ಅನ್ನಿಸಲಿಲ್ಲ. ಸಣ್ಣ ನಗು ಕೇಳಿಸಿತು. ಮಗುವಿನಂಥದೇ ಮುಗ್ಧ ನಗು.
” ನಿನ್ನ ತಂದೆಯನ್ನು ನೋಡಬೇಕು, ಮಾತನಾಡಬೇಕು ಎಂದು ಬಯಸುತ್ತಿದ್ದೆಯಲ್ಲ, ಭಯವೇಕೆ?” ಎಂದಿತು ಧ್ವನಿ.
ಮತ್ತೊಮ್ಮೆ ಕೋಲ್ಮಿಂಚು. ವರ್ಷಿಯ ಪಕ್ಕದಲ್ಲಿಯೇ ಕುಳಿತಿದೆ ಆ ಆಕೃತಿ. ಸ್ವಲ್ಪ ದಢೂತಿ, ಉದ್ದನೆಯ ಗಡ್ಡ, ಅಷ್ಟೆ ಉದ್ದದ ತಲೆ ಕೂದಲು, ಕುತ್ತಿಗೆಯಲ್ಲಿ ವಿಶೇಷ ಸರಗಳು, ಕೈಯಲ್ಲೊಂದು ಉದ್ದನೆಯ ದಂಡ, ಬೆನ್ನ ಮೇಲೊಂದು ಬಿದಿರಿನ ವಯೊಲಿನ್, ಹೆಗಲಿಗೊಂದು ಚೀಲ, ಅದಕ್ಕಿಂತ ಜೋಳಿಗೆಯೆಂಬುದೇ ಸೂಕ್ತ. ಅವೆಲ್ಲವೂ ನೀರಿನಿಂದಲೇ ರೂಪುಗೊಂಡಿತ್ತು. ಬೀಳುತ್ತಿರುವ ಮಳೆಹನಿಗಳು ಒಂದೊಂದು ಆಕೃತಿ ಪಡೆದು ಕೊನೆಯಲ್ಲಿ ಇಂಥದ್ದೊಂದು ರೂಪ ಶಾಶ್ವತವಾಯಿತು. ಮುಖದ ಮೇಲೆ ಮಂದಹಾಸ, ಅದೇ ಶಾಂತಚಿತ್ತ.
“ಅರ್ಥವಾಗಿಲ್ಲ” ಎಂದ ವರ್ಷಿ.
” ಮರೆತಂತಿದೆ ನೀನು, ನಿನ್ನ ತಂದೆ ವಿಶ್ವಾತ್ಮ” ಎಂದಿತು ಅದೇ ಮೃದು ಮಧುರ ಧ್ವನಿ, ಸಂಗೀತದಲೆಯ ಹಿನ್ನೆಲೆಯಲ್ಲಿ. ಏನು ಹೇಳಬೇಕೆಂದು ತಿಳಿಯುತ್ತಿಲ್ಲ ವರ್ಷಿಗೆ. ವಿಷಾದವೋ? ಉತ್ಸಾಹವೋ? ಅರಿವಾಗುತ್ತಿಲ್ಲ. ಸುಮ್ಮನೆ ಕುಳಿತಿದ್ದ. ” ಮಾತನಾಡಲು ಭಯವೇ ಅಥವಾ ಇಷ್ಟವಿಲ್ಲವೇ?” ಮತ್ತದೇ ಧ್ವನಿ ಉಲಿಯಿತು.
ವರ್ಷಿ ಮೌನ ಮುರಿದ.
” ಏನು ಮಾತನಾಡಬೇಕು? ಏಕೆ ಮಾತನಾಡಬೇಕು? ನಾನೊಬ್ಬ ಮನುಷ್ಯ. ನನಗೆ ದೇಹವಿದೆ, ಅದಕ್ಕೆ ನೋವು ನಲಿವುಗಳಿವೆ. ನೀನು..? ನೀನು ನನ್ನ ತಂದೆ ಹೇಗಾಗಲು ಸಾಧ್ಯ? ದೇಹವೇ ಇಲ್ಲದ ನೀನು ನೋವು ನಲಿವುಗಳಿಂದ ವಂಚಿತ. ದೇವರಾ? ದೆವ್ವವೇ? ನೀನ್ಯಾರು?” ಚೀರಿದ ವರ್ಷಿ.
” ನೀನು ಹೇಳಿದ ಎಲ್ಲರ ತಂದೆ, ವಿಶ್ವದ ಆತ್ಮ, ಸರ್ವ ಜೀವಿಗಳ ಸೃಷ್ಟಿಕರ್ತ, ನಿರ್ಜೀವಿಗಳ ಕೂಡಾ.” ನಕ್ಕು ನುಡಿಯಿತು ಧ್ವನಿ.
” ಈಗ ಬರಲು ಕಾರಣ?” ಸ್ವಲ್ಪ ಒರಟಾದ ವರ್ಷಿ.
” ನಾನು ಈಗ ಬಂದಿಲ್ಲ, ಯಾವಾಗಲೂ ನಿನ್ನ ಜೊತೆಯಲ್ಲಿಯೇ ಇದ್ದೆ, ನೀನೊಬ್ಬನೇ ಅಲ್ಲ ಎಲ್ಲರ ಜೊತೆಯಲ್ಲಿಯೂ ಇದ್ದೇನೆ. ಯಾರೂ ಗಮನಿಸುವುದಿಲ್ಲ. ನೀನು ಈಗ ಗಮನಿಸಿದೆ. ನೀನು ನಿನ್ನ ಪರಿಧಿಯಲ್ಲೇ ಬದುಕಿದವ, ಅಲ್ಲಿಂದ ಹೊರಬರುವವನೂ ಅಲ್ಲ. ಆದರೆ ನನಗೆ ನೀನು ಬೇಕು, ಈ ಭೂಮಿಯನ್ನು, ಈ ವಿಶ್ವವನ್ನು ಮತ್ತೆ ಪ್ರೀತಿಯೆಡೆಗೆ, ಬದುಕುವ ನೀತಿಯೆಡೆಗೆ ಸೆಳೆದೊಯ್ಯಲು ನೀನು ಬೇಕು.” ಎಂದು ಹಟ ಹಿಡಿದ ವಿಶ್ವಾತ್ಮ.
” ಎಲ್ಲರ ತಂದೆಯಾದ ನೀನೆ ಎಲ್ಲವನ್ನೂ ಮಾಡಬಹುದಲ್ಲ, ಮತ್ತೆ ನನ್ನನ್ನೇಕೆ ಕೇಳುತ್ತಿರುವೆ?” ಎಂದು ಮತ್ತೂ ಸ್ವಲ್ಪ ಹೆಚ್ಚೇ ಒರಟಾದ ವರ್ಷಿ.
ಗಾಢವಾದ ನಿಟ್ಟುಸಿರು ಬಿಟ್ಟ ವಿಶ್ವಾತ್ಮ ” ಕೆಲವೊಂದಕ್ಕೆ ಕಾರಣಗಳೇ ಇರುವುದಿಲ್ಲ. ಕಾರಣಗಳಿರುವುದನ್ನೆಲ್ಲ ಹೇಳಲೇಬೇಕೆಂಬ ನಿಯಮಗಳು ಇಲ್ಲ, ನೀನು ಸಮ್ಮತಿಸದಿದ್ದರೂ ನಡೆಯುವುದು ನಡೆದೇ ಸಿದ್ಧ” ಎಂದ ವಿಶ್ವಾತ್ಮ. ಧ್ವನಿ ಕಟುವಾದರು ಮೃದುವಾಗಿತ್ತು. ನಾನು ಯಾರಿಗೂ ಹೆದರುವುದಿಲ್ಲ ನೀನೇನು ಮಹಾ ಎಂಬಂತೆ ಎದ್ದು ನಿಂತು ಹೊರಡಲನುವಾದ ವರ್ಷಿ.
” ವರ್ಷಿ” ಎಂದಿತು ಧ್ವನಿ. ” ಒಮ್ಮೆ ಈ ಪ್ರಪಂಚ ನೋಡು ವರ್ಷಿ ಎಷ್ಟು ಹೊಲಸು ತುಂಬಿದೆ. ಮನುಷ್ಯ ಏನು ಮಾಡುತ್ತಿದ್ದಾನೆ? ಅವನೂ ಆನಂದ ಹೊಂದುತ್ತಿಲ್ಲ, ಜೊತೆಗಿರುವವರ ಹಿಗ್ಗಿಗೂ ಕಲ್ಲು ಹಾಕುತ್ತಿದ್ದಾನೆ. ಕೇವಲ ದುಡ್ಡಿನ ಮೋಹಕ್ಕೆ ಬಿದ್ದು ಏನೆಲ್ಲವನ್ನೂ ಮಾಡುತ್ತಿದ್ದಾನೆ… ಎಲ್ಲವನ್ನೂ.. ಮಾಡಲು ಯೋಗ್ಯವಿರದ ಎಲ್ಲವುಗಳನ್ನು…
ಇದು ಸರಿಯೆಂದು ಯೋಚಿಸುತ್ತಿರುವೆಯಾ? ದುಡ್ಡಿರುವವರು ಮತ್ತು ದುಡ್ಡಿಲ್ಲದವರ ನಡುವಿನ ಅಸಂಬದ್ಧತೆಯನ್ನು ನೋಡು. ಎಲ್ಲವೂ ಸರಿಯಿದ್ದ ಹಾಗೆ ಕಾಣಬಹುದು, ಯಾವುದೂ ಸರಿಯಿಲ್ಲ. ಪ್ರೀತಿ, ಪ್ರೇಮ ಹೋಗಿ ಸ್ವಾರ್ಥ, ಸೇಡುಗಳಿಂದ ತುಂಬಿದ ಜಗತ್ತನ್ನು ಬದಲಾಯಿಸಲು ನಿನಗಿಷ್ಟವಿಲ್ಲವೇ?”
ಮೌನವಾದ ವಿಶ್ವಾತ್ಮ. ಅವರ ಮಾತುಕತೆಗೆ ತಕ್ಕಂತೆ ಹಿಂದಿನ ಸಂಗೀತ ಕೂಡ ಲಯ ಬದಲಾಯಿಸುತ್ತಿತ್ತು. ಸಂಶಯದಿಂದ ವಿಶ್ವಾತ್ಮನೆಡೆಗೆ ನೋಡಿದ ವರ್ಷಿ. ಆ ಆರಡಿಯ ಆಕೃತಿ ಮಾತ್ರ ಅಮೋಘ ತೇಜಸ್ಸು ಪಡೆದು ಕತ್ತಲೆಯಲ್ಲಿಯೂ ಪ್ರಕಾಶಿಸುತ್ತಿತ್ತು ವಜ್ರದ ಚೂರೆಂಬಂತೆ.
” ಬಾ ಕೈ ಜೋಡಿಸು ವರ್ಷಿ ನಾನು ನಿನ್ನ ಜೊತೆ ಇರುತ್ತೇನೆ” ಮತ್ತೆ ಪುಸಲಾಯಿಸಿದ ವಿಶ್ವಾತ್ಮ. ವರ್ಷಿಯ ತಲೆಯಲ್ಲಿ ಮಂಥನ ನಡೆಯುತ್ತಿತ್ತು. ” ನಾನು ಯೋಚಿಸಬೇಕು ” ಎಂದ ವರ್ಷಿ. ” ಯೋಚಿಸು ಮತ್ತೆ ಸಿಗುವೆ” ಹೊರಟು ನಿಂತ ವಿಶ್ವಾತ್ಮ.
ಸಂಗೀತ ಮತ್ತೆ ಜೋರಾಯಿತು. ಬರುತ್ತಿರುವ ಮಳೆಯ ರಭಸ ಕಡಿಮೆಯಾಗತೊಡಗಿತು. ವಿಶ್ವಾತ್ಮ ನೀರಿನ ಕೊಳದಲ್ಲಿ ನಡೆಯುತ್ತಾ ಕೊನೆಯಲ್ಲಿ ಕಾಣೆಯಾದ. ಹಿನ್ನೆಲೆ ಸಂಗೀತ ಒಮ್ಮಿಂದೊಮ್ಮೆಲೆ ನಿಂತು ಹೋಯಿತು. ಸುರಿಯುತ್ತಿರುವ ಮಳೆಯೂ ನಿಂತಿತು.
ಒಮ್ಮೆಲೇ ವರ್ಷಿಗೆ ಯಾವುದೋ ಬೇರೆಯ ಪ್ರಪಂಚದಿಂದ ಹೊರ ತಳ್ಳಿದಂತಾಯಿತು. ಕೇಳಿದ್ದೇನು, ನೋಡಿದ್ದೇನು ಎಂದು ಅರ್ಥವಾಗದೆ ಎದ್ದು ನಡೆಯತೊಡಗಿದ.
ನಾನು ವಿಶ್ವವನ್ನೇ ಬದಲಾಯಿಸುತ್ತೇನೆ. ನಾನು ಜಗತ್ತನ್ನೇ ಇಡೀ ಭೂಮಂಡಲವನ್ನೇ ಬದಲಾಯಿಸುತ್ತೇನೆ ಎಂದು ಜೋರಾಗಿ ನಕ್ಕ. ವಿಶ್ವಾತ್ಮನ ಮೊದಲ ಗೆಲುವು ಅದು. ವರ್ಷಿಯ ಸಮ್ಮತಿ ತಿಳಿದು ವಿಶ್ವಾತ್ಮನೂ ನಕ್ಕ. ಅಂಥ ನಗುವಿನಲ್ಲೂ ಮಗುವಿನ ಮುಗ್ಧತೆ ನಲಿಯುತ್ತಿತ್ತು.
Facebook ಕಾಮೆಂಟ್ಸ್