“ನೀನಿಲ್ಲದೇ….. ನನಗೇನಿದೆ….” ಭಾವ ತುಂಬಿ ಹಾಡುತ್ತಿದ್ದ ಆ ಗೀತೆ ಬೆಳಿಗ್ಗೆ ಪೇಪರ್ ಓದುತ್ತಿದ್ದ ನನಗೆ ಅದೆಂತದೋ ಉಲ್ಲಾಸ ನೀಡಿತ್ತು..!! ಆದರೆ ಆ ಉಲ್ಲಾಸ ಹೆಚ್ಚು ಹೊತ್ತು ಉಳಿಯಲಿಲ್ಲ. ಪೇಪರ್ ನಲ್ಲಿ ಪ್ರಕಟವಾಗಿದ್ದ ಅವಳ “ಆಘಾತಕಾರಿ” ಸುದ್ದಿ ನೋಡಿ ಬೆಳ್ಳಂ ಬೆಳಗ್ಗೆಯೇ ನನ್ನ ಹೃದಯಕ್ಕೆ “ಶಾಕ್” ಹೊಡೆದಿತ್ತು.. !!
ಹೌದು., ಅವಳೆಂದರೆ ನನ್ನ ದೃಷ್ಟಿಯಲ್ಲಿ ಜಗತ್ತಿಗೇ ಜೀವ ತುಂಬುವ ದಿವ್ಯ ಮಾಯೆ..! ಕುಂತರೂ ನಿಂತರೂ, ಊಟ, ತಿಂಡಿ.. ಹೀಗೆ ಪ್ರತಿ ದಿನ, ಪ್ರತಿ ಕ್ಷಣ ಕೂಡ ಅವಳ ನೆನಪಿನ ಹಂಗಿನಲ್ಲೇ ಕಳೆಯುತ್ತಿತ್ತು. ಕೈಯ್ಯಲಿ ಹಿಡಿದ ಮೊಬೈಲ್ ನಿಂದ ಹಿಡಿದು ಟೀ. ವಿ. ನೋಡುವಾಗಲೂ ಅವಳ ಒಲವಿನ ಸಾಕ್ಷಾತ್ಕಾರ…!
ನನಗಷ್ಟೇ ಅಲ್ಲ.. ನಮ್ಮ ಮನೆಯ ಅಪ್ಪ ಅಮ್ಮನ ಸುಖ ದುಃಖಗಳಲ್ಲೂ ಅವಳ ಪ್ರತ್ಯಕ್ಷ ಪರೋಕ್ಷ ಸಹಕಾರ ಅನವರತ. ಅಮ್ಮನಂತೂ ಅವಳನ್ನು ಜಾಸ್ತಿ ಹಚ್ಚಿಕೊಂಡು ಬಿಟ್ಟಿದ್ದಳು..!ಈಗ ಅವಳು ಕೋಮಾ ಸ್ತಿತಿಯಲ್ಲಿದ್ಡಾಳೆಂದು ಹೇಗೆ ಹೇಳುವುದು..? ಹೇಗೆ ನಂಬುವುದು..??!!
ಒಡೆದು ಬರುತ್ತಿದ್ದ ಕಣ್ಣೀರ ಕಟ್ಟೆಯನ್ನೇ ಆಣೇಕಟ್ಟಾಗಿಸಿಯಾದರೂ ಅವಳನ್ನು ಉಳಿಸಿಕೊಳ್ಳುವ ತವಕ. “ನಿಶೆಯೊಂದೇ ನನ್ನಲ್ಲಿ ನೀ ತುಂಬಿದೆ…ಬೆಳಕೊಂದೇ ನಿನ್ನಲ್ಲಿ ನಾ ಬಯಸಿದೆ..!” ಈ ಸಾಲುಗಳನ್ನು ಆಲಿಸುವಾಗ ಅವಳ ಬಗ್ಗೆಯೇ ಈ ಹಾಡು ಬರೆದದ್ದಾ ?? ಎಂಬಷ್ಟು ಆತಂಕ. ನಿಜ., ಬದುಕಿಗೆ ಭರವಸೆಯ ಕಿರಣವಾಗಿದ್ದ ಅವಳಿರದ ಬಾಳು ನನ್ನ ಪಾಲಿಗೆ ಡಜ್ಯನ್ ವ್ಯಾಟಿನ ಕತ್ತಲು… ಕಗ್ಗತ್ತಲು…ಬರೀ ಕತ್ತಲು..!!
ಹೀಗೆ ಯೋಚಿಸುತ್ತ ಇರುವಾಗ ಅಮ್ಮ ಅಡಿಗೆಮನೆಯಿಂದ ಕೂಗಿದಳು..”ತಮಾ,ಕರೆಂಟ್ ಬಂತಕು..ಪಂಪ್ ಸ್ವಿಚ್ ಹಾಕೋ..”.
ದಡಕ್ಕನೆ ಎದ್ದು ಕುಣಿದಾಡಿದೆ..! ಕೊನೆಗೂ ಅವಳು ಬಂದೇ ಬಿಟ್ಟಳು. ನನಗೂ ಗೊತ್ತಿತ್ತು..ಅವಳು ನನ್ನ ಕೈ ಬಿಡುವುದಿಲ್ಲ ಎಂದು….!!
ಅಂದ ಹಾಗೇ ಅವಳ ಹೆಸರು……ಏನು ಗೊತ್ತಾ..!!?? …….
“ವಿದ್ಯುತ್” …!!
–ರಾಘವೇಂದ್ರ ಗಜಾನನ ಹೆಗಡೆ ಚಪ್ಪರಮನೆ
Facebook ಕಾಮೆಂಟ್ಸ್