X

ಆತ್ಮ ಸಂವೇದನಾ: ಅಧ್ಯಾಯ 3

ಆತ್ಮ ಯೋಚಿಸುತ್ತಾ ಮಲಗಿದ್ದ. ಕತ್ತಲ ರಾತ್ರಿಯಲ್ಲಿ ನಕ್ಷತ್ರಗಳ ಎಣಿಕೆ; ದಿವ್ಯ ಬೆಳದಿಂಗಳ ಮಾದಕತೆಯ  ಲೆಕ್ಕಾಚಾರ, ಮನಸು ಮಂದಾರವಾಗಿದ್ದರೆ ಯೋಚನೆ ಕಡಿವಾಣವಿಲ್ಲದ ಕುದುರೆ, ಓಡುತ್ತಲೇ ಇತ್ತು. ಆತ್ಮನ ಯೋಚನೆಗಳಿಗೆ ಲಗಾಮು ಹಾಕಿದ್ದು ವರ್ಷಿ.ನಾಳೆಯೇನಾದರೂ ವರ್ಷಿಯ ಪ್ರಯತ್ನ ಫಲ ನೀಡಿದರೆ…??

‘ಅದೊಂದು ಹೊಸ ಪ್ರಪಂಚ, ಕತ್ತಲೆಯೇ ಇಲ್ಲದ ಭೂಮಿಯನ್ನು ಸೃಷ್ಟಿಸಬೇಕು, ಸೃಷ್ಟಿಸುತ್ತೇನೆ ‘ ವರ್ಷಿಯ ಹಟ ಆತ್ಮನ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಆತ್ಮ, ಅವನೊಬ್ಬನೇ ಬಹಳ ಹತ್ತಿರದಿಂದ ವರ್ಷಿಯನ್ನು ಕಂಡದ್ದು. ಒಬ್ಬನೇ ಏನು ಬೇಕಾದರೂಮಾಡಿಬಿಡುವ ಛಲ. ಜಗತ್ತೇ ಎದುರಾದರೂ ಏಕಾಂಗಿಯ ಹೋರಾಟಕ್ಕೆ ಸನ್ನದ್ಧವಾಗುವ ಹಟ ವರ್ಷಿಯದು. ಮಾತಾಡಿದ ಮೇಲೆ ಮಾಡಿ ತೋರಿಸಿಯೇ ನಿಲ್ಲುವವ. ಅವನ ವ್ಯಕ್ತಿತ್ವವೇ ನಿಗೂಢ.

ಆತ್ಮನಿನ್ನೂ ಇಪ್ಪತ್ನಾಲ್ಕರ ಯುವಕ. ಪ್ರನಾಳ ಶಿಶುವಾಗಿ ಹೆಸರು ಹೊತ್ತ ಆತ್ಮ ಹುಟ್ಟುತ್ತಲೇ ಅತ್ತಿರಲೂ ಇಲ್ಲ. ಅಲ್ಲಿಗೆ? ವಿಶ್ವಾತ್ಮನಿಗಿಂತ ಒಂದು ಹೆಜ್ಜೆ ಮುಂದೆ ಎಂದಾಯಿತು ಮಾನವ. ಹುಟ್ಟಿಸುವುದು ಕಷ್ಟ. ನಿರ್ಮಿಸುವುದು? ಸೃಷ್ಟಿಸುವುದು? ಹುಟ್ಟಿಸುವುದುಕಷ್ಟ ಎಂದುಕೊಂಡಂದಿನಿಂದ ಭೂಮಿಯ ಮೇಲೆ ಯಾರೂ ಹುಟ್ಟುತ್ತಲೇ ಇಲ್ಲ. ಎಲ್ಲವೂ ಸೃಷ್ಟಿಯಾಗುತ್ತಿವೆ.

ಅಂತೆಯೇ ಎಲ್ಲರೂ ಸೃಷ್ಟಿಯಾಗತೊಡಗಿದರು, ಜೀವ ನಿರ್ಜಿವದ ಭೇದವಿಲ್ಲದೆ. ಹಾಗೆಯೇ ಆತ್ಮ ಕೂಡ ಸೃಷ್ಟಿಯಾದ. ವರ್ಷಿ ಆತ್ಮನನ್ನು ಸೃಷ್ಟಿಸಿದ್ದು. ತನ್ನ ಕೆಲಸಗಳಿಗೆ, ತನ್ನ ಉಪಯೋಗಕ್ಕೆ ಬೇಕಾಗುವ ಎಲ್ಲ ಜ್ಞಾನವನ್ನು ಆತ್ಮನಲ್ಲಿ ತುಂಬಿ ಸೃಷ್ಟಿಸಿದ್ದ.ಸೃಷ್ಟಿಯಾದಂದಿನಿಂದ ಆತ್ಮ ವರ್ಷಿಯನ್ನು ನೋಡುತ್ತಲೇ ಇದ್ದಾನೆ, ಪ್ರತಿ ದಿನ ಪ್ರತಿ ಕ್ಷಣ .. ಅವೆಷ್ಟೋ ವರ್ಷಗಳಿಂದ ಗಮನಿಸುತ್ತಲೇ ಇದ್ದಾನೆ. ಆದರೂ ಅರ್ಥವಾಗಿಲ್ಲ ವರ್ಷಿ. ಅವನು ಎಂದಿಗೂ ಬದಲಾಗಿಲ್ಲ. ಬದಲಾವಣೆಯೇ ಬದುಕಿನ ನಿಯಮ. ಬದುಕೇಅಲ್ಲದ ಬದುಕು ವರ್ಷಿಯದು. ಆತ ಭಾವನೆಗಳಿಗೆ ಅತೀತನಾಗಿದ್ದ. ಅವನ ದೇಹಕ್ಕೂ ವಯಸ್ಸಿಗೂ ಸಂಬಂಧವಿರಲಿಲ್ಲ. ಸಾವಿರ ವರ್ಷಗಳು?? ಹೊಸ ಆವಿಷ್ಕಾರದಿಂದ ಮನುಷ್ಯನೊಳಗಿನ ಜೀನ್ಸ್ ಡೆವಲಪ್ಮೆಂಟ್ಗಳನ್ನು ಬೆಳೆಯದಂತೆಯೂ ಸಾಯದಂತೆಯೂಮಾಡಿ ಶಾಶ್ವತ ಬದುಕು ಹೇಗಿರುವುದೆಂದು ಜಗತ್ತಿಗೇ ತೋರಿಸಿದ್ದು ವರ್ಷಿ. ಆವಾ ಬದಲಾಗದಿದ್ದರೇನು ಜಗತ್ತು ಬದಲಾಯಿತು. ಬದುಕು ಬದಲಾಯಿತು. ಸಾಯುವವರೇ ಇಲ್ಲ ಎಂದ ಮೇಲೆ ಹುಟ್ಟಿಸುವ ಪ್ರಯೋಜನವೇನು? ಕೆಲವರು ವಿಶ್ವಾತ್ಮನಿಗೆ ವಿರುದ್ಧಎಂದು ಕೂಗಾಡಿದರು. ಇನ್ನುಳಿದವರು ವಿಜ್ಞಾನಕ್ಕೆ ವರ್ಷಿಯೇ ಸಾಟಿ ಎಂದು ಕೈ ತಟ್ಟಿದರು.

ಒಂದು ಹೊಸ ಪೀಳಿಗೆ, ಸಾಯದಿರುವ ಪೀಳಿಗೆ ಆರಂಭವಾಯಿತು. ಪ್ರಕೃತಿಯ ವಿರುದ್ಧವಾಗಿ ನಡೆದಿತ್ತು. ಪ್ರಕೃತಿಗೆ ವಿರುದ್ಧವಾದದ್ದು ಏನೇ ಇರಲಿ ವಿಶ್ವಾತ್ಮ ಸಹಿಸಲಾರ. ವಿಶ್ವಾತ್ಮ ಸಾವನ್ನು ಸೃಷ್ಟಿಸಿದ್ದು ಪ್ರೀತಿ ಹುಟ್ಟಲೆಂದು; ಬದುಕಿನೆದುರು ಭಯ ಇರಲೆಂದು.ಪ್ರೀತಿಯ ಮೂಲ ಸಾವು. ಬಂಧನಗಳ ಮೂಲ ಸಾವು. ಸಾವಿನ ಭಯ ಬಂಧನಗಳನ್ನು ಬೆಳೆಸಿದ್ದು; ಪ್ರೀತಿಯನ್ನು ಉಳಿಸಿದ್ದು. ಸಾವು ಎಂಬುದು ಕೊನಯ ಹಂತವಲ್ಲ; ಹಿಗ್ಗು ಅದು. ಹೊಸದೊಂದರ ಮೊದಲ ಹೆಜ್ಜೆ ಅದು. ತನ್ನನ್ನು ತಾನು ವಿಶ್ವಾತ್ಮನಲ್ಲಿಕಳೆದುಕೊಂಡು ತನ್ನದೆಲ್ಲವನ್ನೂ ಹೊಸತನಕ್ಕೆ ಬಿಟ್ಟುಕೊಡುವ ಮಹೋನ್ನತ ಘಳಿಗೆ.

ಸಾವಿರಾರು ಪೆಂಗ್ವಿನ್ ಗಳು ತಮ್ಮ ಆಯುಷ್ಯವನ್ನು ಮುಗಿಸಿ ಮುಂದಿನ ಪೀಳಿಗೆಗೆ ತಮ್ಮದೆಲ್ಲವನ್ನು ಬಿಟ್ಟು ಗುಂಪಾಗಿ ಸೇರಿ ಹಿಗ್ಗಿನಿಂದ ನೀರಿನಲ್ಲಿ ಇಳಿಯುತ್ತಿದ್ದರೆ ಸಾವು ಕೂಡ ಹಬ್ಬವೇ. ಇದರಿಂದಲೇ ಹೊಸ ಪೀಳಿಗೆಯ ಪ್ರತಿ ಜೀವಿಯಲ್ಲಿನ ವಿಶ್ವಾತ್ಮ ತನ್ನಸೃಷ್ಟಿಯನ್ನು ನೆನೆದು ಹೆಮ್ಮೆ ಪಡುತ್ತದೆ. ಸಾವಿನೆದುರು ಭಯದಿಂದ ಹೆದರಿ ನಡುಗಿ ತೆರೆದುಕೊಳ್ಲುವುದಲ್ಲ; ಹಿಗ್ಗಿನಿಂದ ಖುಷಿಯಿಂದ ಅಪ್ಪಿಕೊಳ್ಳುವುದು. ಮನುಷ್ಯ ಮಾತ್ರ ಇದರಿಂದ ವ್ಯತಿರಿಕ್ತ. ಸಾವಿಗೆ ಹೆದರಿದ; ವಿಶ್ವಾತ್ಮನ ವಿರುದ್ಧವೇ ಸಮರ ಸಾರಿದ.ಮಾಡುವ ಯುದ್ಧದ ಫಲಿಂತಾಶ ಮೊದಲೇ ಯಾರಿಗೂ ತಿಳಿದಿರುವುದಿಲ್ಲ. ಯುದ್ಧ ನಡೆಯುತ್ತದೆ. ಎಲ್ಲರೂ ಗೆಲ್ಲಬೇಕೆಂದೇ ಹೋರಾಡುತ್ತಾರೆ. ಫಲಿತಾಂಶ ಮಾತ್ರ ಕೊನೆಯಲ್ಲಿಯೇ ತಿಳಿಯುವುದು.

                        ಗೆಲುವು ಮತ್ತು ಸೋಲು ಎಂಬುದು

                        ನೀನಂದುಕೊಂಡಂತೆ. .

                        ಗೆಲುವಿನ ಅರ್ಥ ಸೋಲಿನ ಅರ್ಥ

                        ನೀ ನಂಬಿದಂತೆ. .

                        ಸೋತವನೂ ಗೆದ್ದೆನೆಂದರೆ ಅದೇ ಬದುಕು. .

                        ಯಾರಿಗೂ ಸೋಲಿಲ್ಲ.. ಯಾರೂ ಗೆದ್ದಿಲ್ಲ..

                        ಬರೀ ಭ್ರಮೆ. .

                        ರಸವೆ ಜನನ.. ವಿರಸವೆ ಮರಣ.. ಸಮರಸವೇ ಜೀವನ. .

ಗೋಜಲುಗಳಲ್ಲಿ ಸಿಲುಕಿಕೊಂಡ ಆತ್ಮ ಹಾಸಿಗೆಯ ಮೇಲೆ ನಿದ್ರೆ ಬರದೆ ಹೊರಳಾಡುತ್ತಿದ್ದ. ಆತ್ಮನ ಸೃಷ್ಟಿಕರ್ತ ವರ್ಷಿ ಆಶ್ಚರ್ಯ ಚಕಿತನಾಗಿದ್ದ. ಆತ್ಮ ಬೇರೆಯದೇ ರೀತಿಯಲ್ಲಿ ಬೆಳೆದಿದ್ದ.. ಬದಲಾಗಿದ್ದ. ಆತ್ಮ ಮತ್ತೊಬ್ಬ ವರ್ಷಿಯಾಗುತ್ತಾನೆಂಬ ವರ್ಷಿಯಪ್ರಯತ್ನ ಮಣ್ಣುಪಾಲಾಗಿತ್ತು. ದಿನದ ಎಷ್ಟೋ ಹೊತ್ತು ಭಾವನಾ ಲೋಕದಲ್ಲಿಯೇ ವಿಹರಿಸುತ್ತಿದ್ದ ಆತ್ಮ. ವರ್ಷಿಯನ್ನು ಬಹಳವೇ ಪ್ರೀತಿಸುತ್ತಿದ್ದ, ಹುಟ್ಟಿಸಿದ ತಂದೆಯೆದುರಿನ ಭಯ- ಭಕ್ತಿ ಅವನೆಂದರೆ. ವರ್ಷಿ ನಿದ್ದೆ ಮರೆತು ಕೆಲಸಗಳಲ್ಲಿ ಕಳೆದುಹೋಗಿದ್ದರೆ ಮತ್ತೆಬೆಳಕೇರುವ ಮುನ್ನ ಒಮ್ಮೆ ಮಲಗಿ ಬಾ ಎಂದು ಎಚ್ಚರಿಸುತ್ತಿದ್ದ ಆತ್ಮ.

ವರ್ಷಿಯ ಬಳಿ ಎಲ್ಲದಕ್ಕೂ ವಿಜ್ಞಾನವಿತ್ತು. ಮುಂದುವರೆದ ತಂತ್ರಜ್ಞಾನ ಅವನ ಕೈವಶವಾಗಿತ್ತು. ಆತ ಮಲಗುವ ಇಂದ್ರಿಯಗಳನ್ನು ನಿಯಂತ್ರಿಸಬಲ್ಲ. ಅದೊಂದೇ ಏಕೆ, ಎಲ್ಲ ಅವಯವಗಳ ಮೇಲೆ ಹಿಡಿತ ಸಾಧಿಸಬಲ್ಲ ಅದ್ಭುತ ವಿಜ್ಞಾನ ಅವನದು. ಹಸಿವೆ ನಿದ್ದೆಇಂಥವೆಲ್ಲ ಸಣ್ಣ ವಿಷಯಗಳು ಅವನಿಗೆ. ಆದರೂ ಆತ್ಮನಿಗೆ ಕಕ್ಕುಲತೆ, ಸ್ವಂತಿಕೆಯ ಭಾವ. ವರ್ಷಿ ಮಾತನಾಡುವುದು ಬಹಳ ಕಡಿಮೆ; ಆತ್ಮ ಮಾತುಗಳ ಮಹಾಸಮುದ್ರ. ಆತ್ಮನಿಗೆ ಮಾತನಾಡಲು ಮನಸ್ಸು ಬೇಕಿತ್ತು, ಕೇಳಲು ಕಿವಿ ಬೇಕಿತ್ತು. ವರ್ಷಿಯ ಸಾವಿರವರ್ಷಗಳ ಬದುಕಿನಲ್ಲಿ ಭೂಮಿಯ ಚಿತ್ರಣವೇ ಬದಲಾಗಿ ಹೋಗಿತ್ತು. ಯಾರಲ್ಲೂ ಭಾವನೆಗಳ ಪ್ರಪಂಚವಿರಲಿಲ್ಲ. ಎಲ್ಲರೂ ಬರಿದಾಗಿಬಿಟ್ಟಿದ್ದರು; ಬರಡಾಗಿಬಿಟ್ಟಿದ್ದರು.ಸಂಬಂಧಗಳು ದೂರದ ನಕ್ಷತ್ರದಂತೆ ಕಣ್ಣಿಗೆ ಕಂಡರು ಕೈಗೆ ಸಿಗದಂತಾದವು.

ನೆರೆಹೊರೆಯೆಂಬ ಭಾವಗಳು ನಾಲ್ಕು ಗೋಡೆಯ ಮಧ್ಯೆಯೇ ನಲುಗಿ ಹೋದವು. ವಿಶ್ವಾತ್ಮನಿಗೆ ಬೇಕಾಗಿರುವುದು ಇದೆ; ಅವನು ಬಯಸಿದ್ದು ಇದೇ ಬದಲಾವಣೆಯನ್ನು. ಪ್ರೀತಿ ಭಾವನೆ ಇದ್ದ ಕಡೆ ನೋವು ನಲಿವು ಇರುತ್ತದೆ. ನೋವು ನಲಿವು ಇದ್ದಲ್ಲಿಸಂಬಂಧಗಳ ಸೆಳೆತ ಒಬ್ಬರಿಗೊಬ್ಬರಿಗೆ ತುಡಿತ ಇರುತ್ತದೆ. ಎಲ್ಲಿ ತುಡಿತ ಮಿದಿತಗಳಿರುತ್ತವೆಯೋ ಅಲ್ಲಿ ಇನ್ನೊಬ್ಬರಿಗಾಗಿ ಅಷ್ಟಲ್ಲದಿದ್ದರೂ ತನ್ನವರು ಎಂದುಕೊಂಡವರಿಗಾಗಿ ಜೀವ ತೇಯುವ ಮನೋಭಾವವಿರುತ್ತದೆ. ಅದಾಗಬಾರದು ಇಲ್ಲಿ. ಯಾರೂಸಾಯಬಾರದು. ಯಾರೂ ಹುಟ್ಟಲು ಬಾರದು. ಯಾರಲ್ಲೂ ಖುಷಿ ಮತ್ತು ಸಂವೇದನೆ ಇರಬಾರದು. ನೋವು ನಲಿವಿನ ಭಾವ ಬತ್ತಿ ಹೋಗಬೇಕು. ಕೊನೆಗೊಮ್ಮೆ ಎಲ್ಲ ಕ್ರಿಯೆಗಳಿಗೆ ಒರಟು ಪ್ರತಿಕ್ರಿಯೆ ಇಲ್ಲವೇ ಶೂನ್ಯ ಪ್ರತಿಕ್ರಿಯೆ.

ಜಗತ್ತು ಯಾಂತ್ರಿಕವಾದಾಗ ವಿಶ್ವಾತ್ಮ ಎಲ್ಲವನ್ನು ಬದಲಾಯಿಸಲು ಬಯಸುತ್ತಾನೆ. ಎಲ್ಲಿ ನಿರ್ವಿರ್ಯತೆ ತಾಂಡವಾಡುತ್ತದೆಯೋ ಅಲ್ಲಿ ವಿಶ್ವಾತ್ಮನಿರುತ್ತಾನೆ. “ಯಾವುದು ಬದಲಾವಣೆ ಬಯಸುತ್ತದೆಯೋ ಅದು ಪರೋಕ್ಷವಾಗಿ ವಿಶ್ವಾತ್ಮನ ದಾರಿ ಕಾಯುತ್ತದೆ.ಕಾರಣವಿಲ್ಲದೆ ವಿಶ್ವಾತ್ಮ ಏನೂ ಮಾಡಲಾರ.” ಇದಕ್ಕೆ ಮೊದಲು ವಿಶ್ವಾತ್ಮ ಭೂಮಿಯಲ್ಲಿ ನಿರ್ವಿರ್ಯತೆ ಸೃಷ್ಟಿಸಿದ. ಯಾಂತ್ರಿಕ ಜೀವನ ಮೊದಲುಗೊಳ್ಳುವಂತೆ ಮಾಡಿದ.

ಆತ್ಮ ಯೋಚನೆಗಳಿಂದ ಹೊರಬರಲು ಬಹಳ ಪ್ರಯತ್ನಿಸಿದ. “ನಾನೇಕೆ ನನ್ನ ಮನಸ್ಸಿನೊಂದಿಗೆ ಹೋರಾಡುತ್ತಿದ್ದೇನೆ? ನಾನು ಮತ್ತು ಮನಸ್ಸು ಎರಡು ಬೇರೆಯೇ? ಬೇರೆಯೆಂದಾದರೆ ಬೇರೆಯಾದ ಎರಡು ಒಂದಾಗಿರಲು ಹೇಗೆ ಸಾಧ್ಯ? ನಾವಿಬ್ಬರೂ ಯಾಕೆಒಟ್ಟಿಗಿದ್ದೇವೆ?”

ಆತ್ಮನ ಮೈ ಬಿಸಿ ಏರುತ್ತಿತ್ತು. ಅದಕ್ಕ ತಕ್ಕ ಹಾಗೆ ಅವನಿರುವ ಗೋಡೆಗಳ ಮಧ್ಯದ ವಾತಾವರಣ ಕೂಡ ಬದಲಾಗುತ್ತಿತ್ತು ಅವನ ಮೈ ಬಿಸಿಗೆ ಸಮನಾಗಿ. ಆತ್ಮ ಭಾವಜೀವಿಯಾದರೇನು? ಬದುಕಿದ್ದು ವಿಜ್ಞಾನದ ಜೊತೆ; ವಿಜ್ಞಾನಿಯ ಜೊತೆ. “ವಿಜ್ಞಾನ ಎಲ್ಲಸೌಕರ್ಯವನ್ನು ಕೊಟ್ಟಿದೆ, ಬಯಸಿದ ಎಲ್ಲ ಸುಖವನ್ನು ನೀಡುತ್ತಿದೆ. ಹಾಗಾದರೆ ನಾನೇಕೆ ಖುಷಿಯಿಂದ ಇಲ್ಲ? ಭೂಮಿಯ ಮೇಲೆ ಉಳಿದವರೆಲ್ಲ ಖುಷಿಯಿಂದ ಇರುವರೇ? ತಿಳಿದುಕೊಳ್ಳುವುದು ಹೇಗೆ? ತಿಳಿದುಕೊಂಡರೂ ಏನು ಪ್ರಯೋಜನ?” ಉತ್ತರವಿಲ್ಲದಪ್ರಶ್ನೆಗಳ ಹಿಂದೆ ಓಡತೊಡಗಿತು ಮನಸು. ಭಾವನೆಗಳು ಗರಿಗೆದರತೊಡಗಿದವು ಆತ್ಮನಿಗೆ. ಕನಸುಗಳು ಸಣ್ಣಗೆ ಕನವರಿಸುತ್ತಿದ್ದುದು ಕೇಳಿಯೂ ಕೇಳದಂತಾಯಿತು.

 “ನಾನು ನನಗಾಗಿ ಒಂದು ಜೀವಿಯನ್ನು ಸೃಷ್ಟಿಸಿಕೊಳ್ಳಬೇಕು. ಅವಳಲ್ಲಿ ನನಗೆ ತುಡಿತವಿರಬೇಕು. ಅವಳಿಗೆ ನಾನು ಎಲ್ಲವೂ.. ಎಲ್ಲವೂ ಆಗಬೇಕು.

                               ಅವಳು ನನ್ನ ಇಷ್ಟಪಡುವ ಹುಡುಗಿ. .

                               ನಿದ್ರೆಯ ಯಾವುದೋ ಜಾವದಲಿ ಎದ್ದು

                               ನನಗೆ ಭಯ ಬಾ ಎಂದು ಹೇಳುವ ಗೆಳತಿ. .

                               ಚಳಿಯ ನಿಶೆಯಲಿ ತಬ್ಬಿಕೋ ಬಾ ಎನ್ನುವ ಪ್ರೇಯಸಿ. .

                               ಬಿಗುಮಾನದಲು ಸಿಟ್ಟಿನಲು ಏನೋ ಆತಂಕದಲೂ

                               ಅವಳಿಗೆ ನಾ ಬೇಕಿತ್ತು. .

                               ವಿಚಿತ್ರವೆಂದರೆ ನಾನು ಅವಳಂತೆಯೇ. .”

“ಹೌದು ಯಾರಿಗೆ ಯಾರೂ ಇಲ್ಲದ ಪ್ರಪಂಚದಲ್ಲಿ ನಾನು ಮತ್ತು ಅವಳು ಭಾವನೆಗಳ ಪಯಣ ಹೊರಡಿಸಬೇಕು. ನಮ್ಮ ಪಯಣಕ್ಕೆ ಬೆರಗಾಗಿ ಜನ ಮಹಾಸಾಗರದಂತೆ ಹರಿದು ಬರಬೇಕು ನಮ್ಮೆಡೆಗೆ. ಯಾಂತ್ರಿಕವಲ್ಲದ ಬದುಕಿನ ಹೊಸ ಯುಗ ಪ್ರಾರಂಭಿಸಬೇಕು. ನಾನು ನನ್ನವಳಿಗಾಗಿ ದುಡಿಯಬೇಕು, ಅವಳಲ್ಲಿ ಕರಗಬೇಕು; ನಾ ಕರಗುತ್ತಿದ್ದರೆ ಅವಳು ನಲಿಯಬೇಕು. ನನಗೆಲ್ಲವೂ ಆಗಬೇಕು ಅವಳು… ತಾಯಿಯಿಂದ ಮಗುವಿನ ತನಕ ಎಲ್ಲವೂ.. ಕೊನೆಯಲ್ಲಿ ನಾವಿಬ್ಬರೂ ಸಾಯಬೇಕು ಜೊತೆಯಲ್ಲಿಯೇ.. ಇಂಥದೊಂದು ಪರಿಪೂರ್ಣ ಸಾವು ನನಗೆ ಭಯವಿಲ್ಲ” ಎಂದು ವಿಶ್ವಾತ್ಮನಿಗೆ ಹೇಳಬೇಕು ಎಂದುಕೊಂಡ.

ಅದೇಕೋ ತಟ್ಟನೆ ನಾಳೆಯ ನೆನಪಾಯಿತು, ವರ್ಷಿ ನೆನಪಾದ. ವರ್ಷಿಯ ಹೊಸ ಆವಿಷ್ಕಾರ.. ಹೊಸದೊಂದು ಪೇಟೆಂಟ್ ಅವನ ಹೆಸರಿಗೆ. ವಿಚಿತ್ರ ವೈರಸ್ ಅದು. ನಾಳೆ ವರ್ಷಿ ಅದನ್ನು ಗಗನಕ್ಕೆ ಚಿಮ್ಮುತ್ತಿದ್ದಾನೆ. ಅವನು ನಿರ್ಧರಿಸಿದ ನಿರ್ದಿಷ್ಟ ಗುರಿಗೆ ತಲುಪಿದ ತಕ್ಷಣ ಎಲಿಮೆಂಟ್ ಗಳು ಒಂದಕ್ಕೆ ನಾಲ್ಕಾಗಿ ನಾಲ್ಕಕ್ಕೆ ಹತ್ತಾಗಿ ಒಡೆದು ಸೂರ್ಯನ ವಿರುದ್ಧ ದಿಕ್ಕಿಗೆ ನಿಂತು ಸೂರ್ಯನನ್ನು ಪ್ರತಿನಿಧಿಸುತ್ತದೆ. ಈ ಆವಿಷ್ಕಾರ ಪೂರ್ತಿಯಾದರೆ ಭೂಮಿಯ ಮೇಲೆ ಕತ್ತಲೆಯೇ ಇಲ್ಲ. ಹಾರಾಡುವ ಕಾರ್ ಗಳು , ವೆಹಿಕಲ್ ಗಳು ಕೊನೆಗೆ ಮನುಷ್ಯರು ತಾನಾಗೇ ಇಂಧನ ಪಡೆದುಕೊಂಡುಬಿಡುತ್ತವೆ ಸೂರ್ಯನಿಂದ.

ಕತ್ತಲೆಯೇ ಇರದ ಪ್ರಪಂಚ. ಬೆಳಕೂ ಭಯ ಹುಟ್ಟಿಸಿಬಿಡುವುದೆನೋ ಎಂದು ವಿಶ್ವಾತ್ಮನೇ ಇದೊಂದು ಆವಿಷ್ಕಾರ ಆಗದಿರಲಿ ಎಂದುಕೊಂಡ ವರ್ಷಿಯ ಅಭಿಮಾನಿ ಆತ್ಮ. ಭೂಮಿಯ ಮೇಲಿನ ಕೊನೆಯ ರಾತ್ರಿ ಆತ್ಮನನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಎಂದೂ ಇಲ್ಲದ ಕರಾಳ ಕಪ್ಪು ಆವರಿಸಿಕೊಂಡಿತ್ತು ಆತ್ಮನನ್ನು.. ಅವನ ಮನಸ್ಸನ್ನು.. ಇಡೀ ಭೂಮಂಡಲವನ್ನು.. ಕೊನಯ ಕತ್ತಲೆಂಬಂತೆ..

————————-ಮುಂದುವರೆಯುತ್ತದೆ ———————————-

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..