X
    Categories: ಕಥೆ

ಮಾಯಾಮೃಗ

ಥೂ ದರಿದ್ರ ಬೆಕ್ಕು “, ಶಾಂತಜ್ಜಿ ಸಹಸ್ರ ನಾಮಾರ್ಚನೆಗಿಳಿಯುತ್ತಿದ್ದಂತೆ ರಾಮು ಸದ್ದು ಮಾಡದೇ ಬೆಕ್ಕನ್ನು ಹಿತ್ತಲ ಬಾಗಿಲಿನಿಂದಾಗಿ ಹೊರ ಒಯ್ದ. ಅದ್ಯಾವುದೋ ಕಪ್ಪು ಬಿಳಿ ಬಣ್ಣದ ಬೆಕ್ಕು ಮೂರ್ನಾಲ್ಕು ದಿನಗಳಿಂದ ಶಾಂತಜ್ಜಿಯ ಮನೆಯಲ್ಲಿ ಬೀಡು ಬಿಟ್ಟಿತ್ತು. ಅದೇನು ಮರಿಬೆಕ್ಕಲ್ಲ. ಅದಕ್ಕೆ ತನ್ನ ಮನೆ ಬಗೆಗೆ ಕನ್‌ಫ್ಯೂಷನ್ನೋ, ಅಥವಾ ಈ ಹೊಸ ಮನೆಯನ್ನೇ ತನ್ನದಾಗಿಸಿಕೊಳ್ಳುವ ಹಂಬಲವೋ ತಿಳಿಯದು, ಶಾಂತಜ್ಜಿ ಗಳಿಗೆಗೊಮ್ಮೆ ಪೊರಕೆ ಸೇವೆ ಮಾಡಿದರೂ ಸಹಿಸಿಕೊಂಡು ಮನೆಯ ಬಳಿಯೇ ಅಡ್ಡಾಡುತ್ತಿತ್ತು. ಸ್ವಭಾವತಃ ಪ್ರಾಣಿಪ್ರಿಯನಾದ ರಾಮುವಿಗೆ ಪಾಪದ ಬೆಕ್ಕಿನ ಮೇಲೆ ಅಜ್ಜಿಯ ದಬ್ಬಾಳಿಕೆ ಕಂಡ ಮೇಲಂತೂ ಪ್ರೀತಿ ಸ್ವಲ್ಪ ಹೆಚ್ಚಾಗಿರುವುದು ಸುಳ್ಳಲ್ಲ.

ಇಂದು ಬೆಳಗ್ಗೆ ಬೆಕ್ಕು ಎರಡು ಮರಿಗಳನ್ನಿಟ್ಟಿದೆ,ಅಟ್ಟದ ಮೇಲೆ. ಅಮ್ಮ ಬೆಕ್ಕು ಗುಂಡಿಯಂತೆಯೇ ಮರಿಗಳೆರಡಕ್ಕೂ ಕಪ್ಪು ಬಿಳುಪು ಚುಕ್ಕೆಗಳು.  ಚದುರಂಗದ ಹಾಸಿನಂತಿರುವ ಮರಿಗಳನ್ನು ನೋಡುತ್ತಾ ಮೈ ಮರೆತ ರಾಮುವನ್ನು ನೋಡಿ ಶಾಂತಜ್ಜಿಯ ಪಿತ್ತ ನೆತ್ತಿಗೇರಿತು. ಒಂದು ಬೆಕ್ಕಿನ ಉಪಟಳ ಸಾಲದ್ದಕ್ಕೆ ಇನ್ನೆರಡು ಬಂದಿವೆ. ರಾಮುವಂತೂ ಅವು ಕಣ್ಣೊಡೆಯುವವರೆಗೆ ಅವುಗಳ ಕಾವಲಿಗೆ ಕೂತು ಶಾಲೆಯನ್ನೂ ತಪ್ಪಿಸಿಕೊಳ್ಳುತ್ತಾನೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಬೆಕ್ಕಿಗೂ ಅದರ ಮರಿಗಳಿಗೂ ತಿನ್ನಲು ಎಲ್ಲಿಂದ ತರುವುದು,ಈ ಮನೆಯಲ್ಲಿರುವ ಮನುಷ್ಯರ ಹೊಟ್ಟೆಗಳು ತುಂಬುವುದೇ ಕಷ್ಟವಾಗಿರುವಾಗ? ಇಂತು ತಲೆಯೆಲ್ಲಾ ಕೆಡಿಸಿಕೊಂಡ ಶಾಂತಜ್ಜಿ ಉಪಾಯವೊಂದಕ್ಕೆ ಬಂದಳು. ರಾಮುವನ್ನು  ಶಾಲೆಗೆ ಕಳಿಸಿಅವನಿಲ್ಲದಿರುವಾಗ ಬೆಕ್ಕುಗಳನ್ನು ಸಾಗಹಾಕುವುದೇ ಅವಳ ಉಪಾಯ. “ನೀನು ಶಾಲೆಗೆ ಹೋಗದಿದ್ದರೆ ಗೋಪಾಲ ಶೆಟ್ಟರ ಮನೆಗೆ ಅಡಿಕೆ ಸುಲಿಯಲು ಕಳಿಸ್ತೇನೆ ನೋಡು “, ಅಜ್ಜಿಯ ಧಮಕಿಗೆ ಹೆದರಿ ರಾಮು ಶಾಲೆಗೆ ಹೊರಟ. ಹಿಂದಿನಿಂದ ಬೆಕ್ಕು ಗುಂಡಿಯೂ ಹೊರಟಿತು. “ಗುಂಡಿ, ನೀನು ಯಾಕೆ ಬರ್ತಿದ್ದೀಯಾ? ಹೋಗು. ನಂಗೇ ಶಾಲೆಗೆ ಹೋಗ್ಲಿಕೆ ಇಷ್ಟ ಇಲ್ಲ, ನಿಂಗೆ ಹೋಗ್ಬೇಕಾ?” ಎನ್ನುತ್ತಾ ರಾಮು ಅದನ್ನು ಓಡಿಸುತ್ತಿದ್ದರೂ ಬಿಡದೆ ಹಿಂಬಾಲಿಸುತ್ತಾ ಬಂತು.  ಇತ್ತ ಕಡೆ ಶಾಂತಜ್ಜಿ ಮರಿಗಳನ್ನು ಹಿಡಿದು ಗೋಣಿ ಚೀಲದೊಳಗೆ ಹಾಕಿ ತಾಯಿ ಬೆಕ್ಕಿನ ಹಾದಿ ನೋಡುತ್ತಾ ಕುಳಿತಳು.ಈ ತಾಯಿ ಬೆಕ್ಕೋ, ಮರಿಗಳನ್ನೂ ಬಿಟ್ಟು ರಾಮುವನ್ನು ಹಿಂಬಾಲಿಸುತ್ತಿತ್ತಷ್ಟೇ, ಅದೇನಾಯಿತೋ ಏನೋ, ವಾಹನಗಳನ್ನೂ ಲೆಕ್ಕಿಸದೆ ರಸ್ತೆಗೆ ಜಿಗಿದು ದಾಟತೊಡಗಿತು.ರಾಮುವೂ ಗಾಬರಿಗೊಂಡು ಗುಂಡಿಯನ್ನು ಹಿಡಿಯಲು ರಸ್ತೆಗೆ ಹಾರಿದ. ವೇಗವಾಗಿ ಬರುತ್ತಿದ್ದ ಜೀಪೊಂದು ಅವನಿಗೆ ಹೊಡೆಯಿತು.

ಅತ್ತ ಅಜ್ಜಿ ಬೆಕ್ಕುಗಳನ್ನಟ್ಟುವ ಸಾಹಸ ಮಾಡುತ್ತಿದ್ದರೆ ಇತ್ತ ಬೆಕ್ಕೇ ರಾಮುವನ್ನು ಪರಲೋಕಕ್ಕಟ್ಟಿತ್ತು.

Facebook ಕಾಮೆಂಟ್ಸ್

Deepthi Delampady: Currently studying Information Science and Engineering (6th semester) at SJCE, Mysore.
Related Post