X

ಆತ್ಮ ಸಂವೇದನಾ: ಅಧ್ಯಾಯ 6

ಭೂಮಿಯಿಂದ ಸುಮಾರು ಜ್ಯೋತಿವರ್ಷಗಳ ದೂರದಲ್ಲಿ ಕತ್ತಲು. ಬೆಳಕೆ ಇಲ್ಲದ ಕತ್ತಲು. ಸಾವಿರಾರು ವರ್ಷಗಳಿಂದ ಅಲ್ಲಿ ಬೆಳಕು ಕಂಡೇ ಇಲ್ಲ. ಕತ್ತಲಲ್ಲಿಏನೂ ಕಾಣುವುದಿಲ್ಲ. ನಕ್ಷತ್ರವೊಂದು ಸತ್ತು ಕಪ್ಪು ವಲಯದಲ್ಲಿ ಸೇರಿದ ಜಾಗ. ಸ್ಮಶಾನ ಬೆಂಕಿಯಂತೆ ಸುಡುತ್ತಿದ್ದ ಬೆಂಕಿಯ ಚೆಂಡೊಂದು ತನ್ನ ಜೀವನಮುಗಿಸಿ ವಿಶ್ವಾತ್ಮನಲ್ಲಿ ಲೀನವಾಗಿ ಅದೆಷ್ಟು ಕಾಲವಾಯಿತೋ, ಆ ದಿನದಿಂದ ಆ ಪ್ರದೇಶ ಬೆಳಕನ್ನೇ ಕಂಡಿಲ್ಲ. ಮಹಾಕತ್ತಲು. ಭೂಮಿಯಲ್ಲಿಬೆಳಕಿರುವುದರಿಂದ ಕತ್ತಲು ಬೆಳಕಿನ ವ್ಯತ್ಯಾಸ ಗೊತ್ತು ಮನುಷ್ಯನಿಗೆ.

ಆ ಪ್ರಪಂಚದಲ್ಲಿ ಶಾಶ್ವತ ಕತ್ತಲು. ಬೆಳಕೇ ಇರದ ಜಾಗದಲ್ಲಿ ಬೆಳಕನ್ನೇ ಕಂಡಿರದ ಜೀವಿಗಳು ಮಾತ್ರ ಬದುಕುತ್ತವೆ. ಅವುಗಳಿಗೆ ನೋಡಲು ಬೆಳಕುಬೇಡ. ಕತ್ತಲಿನಲ್ಲಿಯೇ ಅವು ತಮ್ಮದೆಲ್ಲವ ಕೆಲಸಗಳನ್ನು ನಿರ್ವಹಿಸಬಲ್ಲವು. ಓಡಾಡಲು ಕಾರು ಬೈಕುಗಳೆಂದು ವಾಹನಗಳು ಬೇಡ. ಅಲ್ಲಿನಪ್ರತಿಯೊಂದು ಜೀವಿಯೂ ಹಾರಬಲ್ಲವು. ಹಾಗೆಂದು ಅವು ಹಕ್ಕಿಗಳಲ್ಲ. ಭೂಮಿಯ ಮೇಲಿನ ವಿಜ್ಞಾನಕ್ಕಿಂತ ನೂರು, ಸಾವಿರ ಪಟ್ಟು ಮುಂದಿರುವಟೆಕ್ನಾಲಜಿಗಳ ಪ್ರಪಂಚ ಅದು. ಬೆಳಕಿಲ್ಲ, ನೀರಿಲ್ಲ, ಗಾಳಿಯೂ ಇಲ್ಲ. ಆದರೂ ಅವುಗಳು ಬದುಕುತ್ತಿವೆ.

ಉಸಿರಾಡದೆ ಬದುಕುವ ಜೀವಿಗಳು. ಇಂತಹ ಸೃಷ್ಟಿ ವಿಶ್ವಾತ್ಮನಿಗೆ ಮಾತ್ರ ಸಾಧ್ಯ. ಆತ ಬೆಳಕಿನಲ್ಲಿ ಬದುಕುವ ಜೀವಿಗಳನ್ನು ಸೃಷ್ಟಿಸಬಲ್ಲ; ಕತ್ತಲೆಯಲ್ಲೇಕಳೆಯುವ ಜೀವಿಗಳನ್ನೂ ಹುಟ್ಟಿಸಬಲ್ಲ. ಭೂಮಿಗಿಂತಲೂ ಎರಡು ಪಟ್ಟು ದೊಡ್ಡದಿರುವ ಆ ಕತ್ತಲಿನ ಪ್ರಪಂಚದಲ್ಲಿ ಜೀವಿಗಳ ಹುಟ್ಟು ವಿಚಿತ್ರವಾದುದು.ಅವರ ಸಾವು ಕೂಡ. ಅಲ್ಲಿನ ಜೀವಿಗಳು ಮಣ್ಣಿನಿಂದ ಹುಟ್ಟುತ್ತವೆ, ಹಾಗೆಯೇ ಕೊನೆಯಲ್ಲಿ ಮಣ್ಣಿಗೆ ಸೇರುತ್ತವೆ.

ಹೆಣ್ಣು ಗಂಡೆಂಬ ಭೇದಗಳಿಲ್ಲ. ಆದರೂ ದೈಹಿಕ ಸುಖ ಪಡೆಯಬಲ್ಲವು. ಯೌವ್ವನದ ಕಾಲ ಬಂದಾಗ, ಹರೆಯ ಉಕ್ಕಿ ಹರಿವಾಗ ಅಲ್ಲಿನ ಜೀವಿಗಳುದೇಹವನ್ನು ಎರಡಾಗಿ ಒಡೆದುಕೊಳ್ಳುತ್ತವೆ. ಅದರಲ್ಲಿ ಒಂದು ಗಂಡಂತೆಯೂ ಇನ್ನೊಂದು ಹೆಣ್ಣಂತೆಯೂ ಕ್ರಿಯಿಸುತ್ತವೆ; ಪ್ರತಿಕ್ರಿಯಿಸುತ್ತವೆ. ಒಮ್ಮೆಅವುಗಳ ದೇಹ ಸಂತೃಪ್ತಿ ಹೊಂದಿತೆಂದರೆ ಭಾಗಗಳು ಒಂದಾಗುತ್ತವೆ. ಎಷ್ಟು ವರ್ಷ ಜೀವಿಗೆ ದೇಹವನ್ನು ಎರಡಾಗಿಸುವ ಸಾಮರ್ಥ್ಯವಿರುತ್ತದೆಯೋಅಲ್ಲಿಯವರೆಗೆ ಅವು ಬದುಕಿರುತ್ತವೆ. ಆ ಶಕ್ತಿ ಕಡಿಮೆ ಆದಾಗ ಜೀವಿ ಮಣ್ಣಿನಲ್ಲಿ ಒಂದಾಗಿ ಮತ್ತೆ ಶಕ್ತಿ ಪಡೆಯುವವರೆಗೂ ನಿರ್ಜಿವವಾಗಿರುತ್ತದೆ.

ಎಷ್ಟು ದೊಡ್ದದೆಂದೇ ನೋಡಲಸಾಧ್ಯವಾದ ಕತ್ತಲೆಯ ಪ್ರಪಂಚ ಅವೆಷ್ಟೋ ಇಂತಹ ಜೀವಿಗಳಿಗೆ ಜೀವ ಕೊಡುತ್ತಿತ್ತು. ಆ ಜೀವಿಗಳದ್ದು ಅತ್ಯಂತ ಶಾಂತಜೀವನ. ಅವುಗಳಿಗೆ ಆಹಾರ ಬೇಕಿಲ್ಲ; ನಿದ್ರೆ ಬರುವುದಿಲ್ಲ. ಬದುಕಿನ ಬಹುತೇಕ ಸಮಯವನ್ನು ಅವು ಪ್ರಪಂಚ ಸುತ್ತುವುದರಲ್ಲೇ ಕಳೆಯುತ್ತಿದ್ದವು.ಬೆಳಕಿನಲ್ಲಿದ್ದರೂ ಕೊಳೆಯುವ ಜೀವಿ ಮನುಷ್ಯ. ತಮಗೆ ಬೇಕಾದ ಗಾತ್ರ, ಆಕಾರ ಪಡೆಯಬಲ್ಲ ಜೀವಿಗಳೆಂದರೆ ಅಲ್ಲಿಯವು ಮಾತ್ರ. ಕತ್ತಲೆಯಲ್ಲಿ ಅವುಗಳಬಣ್ಣ ಕಾಣುವುದೇ ಇಲ್ಲ. ಭೂಮಿಯ ಮೇಲಿನ ಮನುಷ್ಯನಿಗೆ ಇಂಥದೊಂದು ಜೀವಿಯ ಬದುಕಿನ ಬಗ್ಗೆ ಕಲ್ಪನೆಯಿದೆಯೋ? ಯೋಚನೆಗೂ ಮೀರಿದವಿಷಯವೋ? ಅವುಗಳಿಗೆ ಎಲ್ಲ ಕಡೆಯ ಪರಿಸ್ಥಿತಿಗಳು ಅರಿವಿಗೆ ಬರುತ್ತಿತ್ತು. ಕತ್ತಲೆಯಲ್ಲಿದ್ದರೂ ಬೆಳಕಿರುವ ಪ್ರಪಂಚ ಕಾಣಿಸುತ್ತಿತ್ತು.

ಮಣ್ಣಿನಲ್ಲಿ ಕರಗಿ ನಿರ್ಜಿವ ವಸ್ತುಗಳಾದಾಗ ಅವು ಕನಸು ಕಾಣುತ್ತವೆ., ಬೇರೆ ಕಡೆಯ ದೃಶ್ಯಗಳನ್ನು ನೋಡುತ್ತವೆ. ನಿರ್ಜೀವತೆಯಲ್ಲೂ ಜೀವಂತಿಕೆಯಲಕ್ಷಣಗಳಾದ ಕನಸುಗಳು, ಯೋಚನೆಗಳು ಅವುಗಳಿಗೆ ಸುಲಭ. ಒಂದು ಮಿಲಿಸೆಕೆಂಡ್ ಬೆಳಕಿಗೆ ಸರಿದರೂ ಮತ್ತೆ ಅವು ಎರಡಾಗಿ ಒಡೆಯಲಾರವು, ಅವುಸತ್ತಂತೆ. ಸತ್ತರೂ ಬದುಕಿದಂತೆ… ಅಭೂತಪೂರ್ವ ಜೀವಿಗಳು.

ಅವುಗಳೂ ಯುದ್ಧ ಮಾಡುತ್ತವೆ. ಕತ್ತಲಿನಲ್ಲಿಯೇ ಬದುಕುವ ಬೇರೆ ಬೇರೆ ಕಡೆಯ ಜೀವಿಗಳೊಂದಿಗೆ, ಅವುಗಳು ಆಕ್ರಮಣ ಮಾಡಿದರೆ ಮಾತ್ರ.ಅವುಗಳಿಗೆ ಆಯುಧಗಳನ್ನು ಸೃಷ್ಟಿಸುವುದು ಬೇಡ. ಒಂದೊಂದು ಜೀವಿಯೂ ಒಂದೊಂದು ಆಯುಧ. ಅವುಗಳ ಮತ್ತೊಂದು ವಿಶೇಷತೆಯೆಂದರೆ ಒಂದುಜೀವಿ ಎರಡಾಗಿ ಒಡೆಯಿತೆಂದರೆ ಮತ್ತವು ಎರಡಾಗಿ ಒಡೆದುಕೊಳ್ಳಬಹುದಿತ್ತು. ಒಂದು ಜೀವಿ ನೂರು ಸಾವಿರವಾಗಿ ಒಡೆದುಕೊಂಡು ಆಕ್ರಮಣಮಾಡಬಹುದಿತ್ತು. ಆದರೆ ಪ್ರತಿಯೊಂದು ಸಲ ಅವು ಒಡೆದುಕೊಂಡಾಗಲೂ ಅವುಗಳ ಶಕ್ತಿ ಸ್ವಲ್ಪ ಸ್ವಲ್ಪವಾಗಿ ಇಳಿಮುಖವಾಗುತ್ತಿತ್ತು.

ಕತ್ತಲೆಯಲ್ಲೇ ಬದುಕುವ ಜೀವಿಗಳಿಗೆ ಕತ್ತಲೆ ಬೆಳಕಿದ್ದಂತೆ. ಅವರ ಬದುಕಿನ ಪ್ರತೀ ಕ್ಷಣವೂ ಕತ್ತಲೆಯೇ. ಕತ್ತಲೆಯಲ್ಲೂ ಜೀವಕಳೆಯನ್ನು ತುಂಬಿದ್ದವಿಶ್ವಾತ್ಮ. ಅವು ಹೇಗೆ ನೋಡುತ್ತವೆ? ವಿಚಿತ್ರ ಸಂಗತಿಯೆಂದರೆ ಮನುಷ್ಯ ಕತ್ತಲೆಯಲ್ಲಿ ನೋಡಲಾರ. ಆತನಿಗೆ ಬೆಳಕು ಬೇಕು. ಕೆಲವು ಪ್ರಾಣಿ ಪಕ್ಷಿಗಳುಕತ್ತಲೆಯಲ್ಲೂ ಕಾಣಬಲ್ಲವು. ಬಾವಲಿಗಳು ನಿಶಾಚರಿಗಳು. ಮಂಗಗಳು ರಾತ್ರಿಯಲ್ಲಿ ನೋಡುತ್ತವೆ. ಮನುಷ್ಯನೂ ನೋಡುತ್ತಾನೆ; ಏನೂಕಾಣಿಸುವುದಿಲ್ಲವಷ್ಟೆ.

ಮನುಷ್ಯ ಏಕೆ ನೋಡಲಾರ? ವಿಶ್ವಾತ್ಮ ಮನುಷ್ಯನಿಗೆ ರಾತ್ರಿಯಲ್ಲಿ ಕಾಣದಂತೆ ಏಕೆ ಮಾಡಿದ? ಅವೆಷ್ಟೋ ಉತ್ತರವಿರದ ಪ್ರಶ್ನೆಗಳ ಸಾಲಿಗೆಹೊಸದೊಂದು ಸೇರ್ಪಡೆ. ಕತ್ತಲೆಯಲ್ಲಿ ಬದುಕುವ ಜೀವಿಗಳು ಬೆಳಕಿನೆಡೆಗೆ ಬರಲು ಬಯಸುತ್ತಿರಲಿಲ್ಲ. ವಿಶ್ವಾತ್ಮ ಅವುಗಳನ್ನು ಕೂಡ ಬದುಕುವನೀತಿಯಿಂದಲೇ ಸೃಷ್ಟಿಸಿದ್ದ, ಅಲ್ಲಿನ ಪ್ರತಿಯೊಂದೂ ಜೀವಿಗಳನ್ನು ಕೂಡಾ..

ಬದುಕುವ ನೀತಿ ಬದುಕುವ ನೀತಿ ಎನ್ನುತ್ತಾ ನಿದ್ರೆಯಲ್ಲಿ ಕನವರಿಸಿದ ಆತ್ಮ. ಕನಸು ಪೂರ್ತಿಯಾಗದೇ ಎಚ್ಚೆತ್ತ………

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..