‘” ಅಯ್ಯೋ , ಯಾರಿಂದ ಏನನ್ನೂ ಬಯಸದೆ ಸತ್ತಳಲ್ಲಪ್ಪ …” ಅಮ್ಮ ನರಳಿದಳು.” ಯಾಕೆ ಅಳತೀರಿ. ಸಂತೋಷಪಡಿ . ದೇವರು ಅವಳಿಗೆ ಸುಖ ಸಾವು ಕೊಟ್ಟಿದ್ದಾನೆ . ಅಂತ ಸಾವು ಎಲ್ಲರಿಗೂ ಬರುತ್ತದಾ …? “ರಾಮಯ್ಯ ಅಮ್ಮನಿಗೆ ಸಮಾಧಾನ ಹೇಳಿದ.” ನೀನು ಹೇಳೋದು ನಿಜ ರಾಮಯ್ಯ. ಏನಾದರೂ ಅವರು ನರಳುತ್ತಾ ಮಲಗಿದ್ದರೆ ಯಾರು ನೋಡುತ್ತಿದ್ದರು …? ಈ ಗಂಡು ಮಕ್ಕಳನ್ನು ನಂಬಲಿಕ್ಕೆ ಆಗುತ್ತದಾ ..?” ತಂದೆಯವರು ಎಂದರು. ರಾಮಯ್ಯ ನಕ್ಕ .
” ಸರಿ ನೀನು ಹೋಗು ರಾಮಯ್ಯ. ನಾವು ಹಿಂದಿನಿಂದ ಬರುತ್ತೇವೆ.” ರಾಮಯ್ಯ ಹೋದ. ಅಮ್ಮ ಅವನು ಹೋಗುವುದನ್ನೇ ಕಾಯುತ್ತಿದ್ದವಳಂತೆ ರೋಧಿಸ ಹತ್ತಿದಳು. ರಾಮಯ್ಯನನ್ನು ಕಳುಹಿಸಲಿಕ್ಕೆ ಹೊರಗೆ ಹೋದ ತಂದೆ ಬಂದರು್. ಹೊರಗೆ ಜಡಿ ಮಳೆ ಸುರಿಯುತ್ತಿತ್ತು . ” ಮಾಬ್ಲಾ ” ತಂದೆಯವರು ನನ್ನನ್ನು ಕರೆದರು. “ಆಂ …?” “ಎಚ್ಚರ ಇದೆಯೇನ ?” “ಹು” “ಎಲ್ಲ ಕೇಳಿಸಿಕೊಂಡಿದಿಯೇನೋ ?” “ಹೂಂ” “ಅಳಬೇಡ ಸುಮ್ಮನಿರು. ನಿನ್ನಮ್ಮನ್ನ ಕರಕೊಂಡು ಅಜ್ಜಿಮನೆಗೆ ನೀನು ಮುಂದೆ ಹೋಗು. ನಾನು ನಿನ್ನ ಅಣ್ನನ್ನ, ನಿನ್ನ ತಂಗೀನ ಕರಕೊಂಡು ಹಿಂದಿನಿಂದ ಬರತೀನಿ. ಸುಶೀಲ ಒಬ್ಬಳೇ ಮಕ್ಕಳನ್ನು ಕಟ್ಟಿಕೊಂಡು ರಾತ್ರಿಯಿಂದ ಹೆಣವನ್ನು ಕಾಯ್ತಾ ಕೂತಿದ್ದಾಳೆ. “ನಾನೆದ್ದು ಮುಖ ತೊಳೆದುಕೊಳ್ಳುವ ಹೊತ್ತಿಗೆ ತಂದೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಚಿಕ್ಕ ಮಾವನಿಗೆ ಸುದ್ದಿ ಮುಟ್ಟಿಸಿದರು .. ಮಾವ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಒಳಗೋಡಿ ಬಂದು ಅಕ್ಕನೆದುರಿಗೆ ನಿಂತು ಬೊಬ್ಬೆ ಹೊಡೆಯುತ್ತಿದ್ದ.
ತಾಯಿಯನ್ನು ಎಂದೂ ಪ್ರೀತಿಯಿಂದ ಮಾತನಾಡಿಸದವರಿಗೆ ಈ ರೀತಿಯ ದುಃಖ ಹೇಗೆ ಬರುತ್ತದೆ? ಈತ ವರ್ಷಕ್ಕೊಮ್ಮೆ ಎರಡುಮೂರು ತಿಂಗಳುಕಾಯಿಲೆಯಿಂದ ಮಲಗುತ್ತಿದ್ದ . ಅಕ್ಕ ಭಾವನೇ ತಂದೆ ತಾಯಿಯಂತೆ ಆರೈಕೆ ನಡೆಸುತ್ತಿದ್ದರು.. ಕಾಯಿಲೆ ಗುಣವಾದ ಕೂಡಲೇ ತಾಯಿಯನ್ನು ಶತ್ರುಗಳನ್ನು ನೋಡುವಂತೆ ನೋಡುತ್ತಿದ್ದ. ಅವನು ಕಾಯಿಲೆಯಲ್ಲಿ ಮಲಗಿದಾಗ ಅಣ್ಣ ಅತ್ತಿಗೆಯಿಂದ ಮೊಸಳೆ ಕಣ್ಣೀರಿನ ಕಾಗದ ಬರುತ್ತಿತ್ತೇ ಹೊರತು ಅವರೆಂದೂ ನೋಡಲು ಬಂದಿರಲಿಲ್ಲ. ವೈದ್ಯಕೀಯ ಖರ್ಚು ಕೊಟ್ಟವರಲ್ಲ.
“ಈಗ ಕಣ್ಣೀರು ಹಾಕಿದರೆ ಪ್ರಯೋಜನವಿಲ್ಲ. ಜನ ನಗಾಡಲಿಕ್ಕೆ ಏನು ಬೇಕೋ ಅಷ್ಟು ಮಾಡಿದಿರಿ. ಅವನಂತೂ ಮದುವೆಯಾದ ಮೇಲೆ ಕಾಗದ ಬರೆಯೋದೇ ನಿಲ್ಲಿಸಿಬಿಟ್ಟ. ಈಗ ಹೊರಡಿ. ನಾನು ಗೋವಿಂದನನ್ನು ಕರಕೊಂಡು ಬರಲಿಕ್ಕೆ ಶಿವಮೊಗ್ಗಕ್ಕೆ ಕಾರಿನ ವ್ಯವಸ್ಥೆ ಮಾಡಿ ಬರ್ತೇನೆ?” ತಂದೆಯವರೆಂದರು. ಜಡಿ ಮಳೆಯಲ್ಲಿ ಅಮ್ಮನನ್ನು ಕರೆದುಕೊಂಡು ಹೊರಟೆ.” ನಿನ್ನ ಮಾವನಿಗೆ ಅಕ್ಕ ಸತ್ತಿದ್ದು ಗೊತ್ತಿದೆಯೋ, ಇಲ್ಲವೋ.? ದಾರೀಲಿ ಹೋಗ್ತಾ ಅವರಿಗೆ ಹೇಳಿ ಹೋಗು” ತಂದೆಯವರು ಅಮ್ಮನಿಗೆ ಹೇಳಿದರು. “ಅವರಿಗೇನು ಹೇಳೋದು..?” ಅಮ್ಮ ರೇಗಿದಳು.
ಅಮ್ಮನನ್ನು ಒಬ್ಬ ಮುದುಕನಿಗೆ ಕೊಟ್ಟು ಮದುವೆ ಮಾಡಲು ಅವಳ ಸೋದರ ಮಾವ ಪ್ರಯತ್ನಿಸಿದ್ದರು. ಆ ಸಂಬಂಧವಾಗಿ ಅವನಿಗೂ ಮನಸ್ತಾಪವಾಗಿತ್ತು. ಆ ಕಾರಣಕ್ಕಾಗಿ ಅಮ್ಮ ಅವರ ಮನೆಗೆ ಹೋಗುತ್ತಿರಲಿಲ್ಲ. ಅವರ ಮಾವನೂ ನಮ್ಮ ಮನೆಗೆ ಬರುತ್ತಿರಲಿಲ್ಲ. ಹಬ್ಬ ಹುಣ್ಣಿಮೆಯಲ್ಲಿ ದೊಡ್ಡ ಮಾವ ಊರಿಗೆ ಬಂದಾಗ ಅವನನ್ನು ಊಟಕ್ಕೆ ಕರೆಯುತ್ತಿದ್ದರು. ನನ್ನ ಕಂಡರೆ ಅವರಿಗೆ ತುಂಬಾ ಪ್ರೀತಿ ಇದ್ದುದರಿಂದ ನಾನೂ ಮಾವನೊಂದಿಗೆ ಅವರ ಮನೆಗೆ ಹೋಗುತ್ತಿದ್ದೆ. “ಈ ಸಮಯದಲ್ಲಿ ಏನೂ ಮನಸ್ಸಲ್ಲಿ ಇಟ್ಟುಕೊಳ್ಳಬಾರದು” ತಂದೆಯವರು ಎಂದರು.
“ಅವರು ಅಪ್ಪಯ್ಯ ಸತ್ತಮೇಲೆ ನಮ್ಮ ತಂದೆ ತಾಯಿಯನ್ನು ಮನೆಯಿಂದ ಹೊರ ಹಾಕಿದ್ದರು. ನಾನು ಅದನ್ನು ಮರೆತಿಲ್ಲ ….” ಅಮ್ಮ ಮುನಿಸಿಕೊಂಡು ಹೇಳಿದಳು.” ಅದನ್ನೆಲ್ಲ ಮನಸ್ಸಲ್ಲಿ ಇಟ್ಟುಕೊಳ್ಳಬಾರದು ಅಂತ ಹೇಳಲಿಲ್ಲವಾ? ವಿಷ ಗಳಿಗೇಲಿ ಏನೇನೋ ನಡೆಯುತ್ತೆ. ಅದನ್ನೆಲ್ಲ ಮರೆತು ಬಿಡಬೇಕು. ನಾಕು ದಿನ ಬದುಕಲಿಕ್ಕೆ ಯಾಕೆ ದ್ವೇಷ ಅಸೂಯೆ …?” ತಂದೆ ರೇಗಿದರು.
ಅಜ್ಜಿ ಅವರ ತಂದೆಗೆ ಪ್ರೀತಿಯ ಮಗಳಾಗಿದ್ದಳು. ಆ ಕಾರಣಕ್ಕೆ ಅಜ್ಜಿಗೆ ಮದುವೆ ಮಾಡಿ ಹೊರಗೆ ಕಳುಹಿಸಲಿಕ್ಕೆ ಇಷ್ಟ ಪಡದೇ ಅವರು ಮಗಳು ಅಳಿಯನನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದರು. ಅಪ್ಪ ಸತ್ತ ಮೇಲೆ ಅಜ್ಜಿಯ ತಮ್ಮ ಅಕ್ಕ ಭಾವನನ್ನು ಹೊರಕ್ಕೆ ಹಾಕಿದ್ದರು. ಹೆಂಡತಿ, ಮಕ್ಕಳನ್ನು ಕಟ್ಟಿಕೊಂಡು ಅಜ್ಜ ಊರ ಹೊರಗೆ ಗುಡಿಸಲು ಹಾಕಿಕೊಂಡು ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಅಮ್ಮ, ಅಜ್ಜ , ಮಕ್ಕಳನ್ನು ಸಾಕಲಿಕ್ಕೆ ಕಷ್ಟಪಟ್ಟುದುದನ್ನು ನಮಗೆ ಬಿಡುವಾದಾಗ ಹೇಳುತ್ತಿದ್ದಳು. ಅದರಿಂದಾಗಿ ನಮಗೆ ಮಕ್ಕಳಿಗೆ ಅಮ್ಮನ ಸೋದರ ಮಾವನ ಮೇಲೆ ದ್ವೇಷ ,ಅಸೂಯೆ ಬೆಳೆದಿತ್ತು. ಅವರನ್ನು ನಾವು ಅಜ್ಜ ಎಂದು ಕರೆಯುತ್ತಿದ್ದೆವು. ಅವರಿಗೆ ಮಕ್ಕಳಿರಲಿಲ್ಲ. ಗಂಡ ಹೆಂಡತಿ ಇಬ್ಬರೇ. ದೊಡ್ಡ ಮನೆಯಲ್ಲಿ ಹೆಂಡ ಕುಡಿದುಕೊಂಡು ಬದುಕಿ ಬಾಳುತ್ತಿದ್ದರು ..
ದೊಡ್ಡ ಮಾವ ಓದುವ ದಿನಗಳಲ್ಲಿ ಅವರು ಕರೆಯದಿದ್ದರೂ ಏನಾದರೂ ಸಹಾಯ ಮಾಡಬಹುದೇನೋ ಎಂಬಾಸೆಯಿಂದ ಅವರ ಮನೆಗೆ ಆಗಾಗ ಹೋಗುತ್ತಿದ್ದ. ಅಜ್ಜ ಅವನಿಗೆ ಐದೋ, ಹತ್ತೋ ರೂಪಾಯಿ ಕೊಡುತ್ತಿದ್ದರು. ಮಾವ ಕೆಲಸ ಸಿಕ್ಕಿದ ಮೇಲೆ ಅವರ ಮನೆ ಕಡೆ ಹೋಗುವುದನ್ನು ನಿಲ್ಲಿಸಿದ್ದ.
ನಾವು ಅಜ್ಜನ ಮನೆ ತಲುಪಿದೆವು. ಅಜ್ಜ ಜಗುಲಿಯಲ್ಲಿ ಶರಾಬಿನ ಬಾಟಲಿ ಇಟ್ಟುಕೊಂಡು ಕುಡಿಯುತ್ತಾ ಕೂತಿದ್ದರು. ನನ್ನನ್ನು ನೋಡಿದವರೇ, “ಏನೋ ಮಾಬ್ಲಾ?” ಎಂದರು ಅಮ್ಮ ಮನೆಯೊಳಕ್ಕೆ ಬಾರದೆ ಹೊರಗೆ ನಿಂತಿದ್ದಳು. “ಅಜ್ಜಿ ಸತ್ತೋಯಿತಂತೆ.” “ಏನು.?” ಅಜ್ಜ ಗಾಬರಿಯಿಂದ ಕೇಳಿದರು .. ” ಅಜ್ಜಿ ಸತ್ತೋಯಿತಂತೆ.” “ಯಾವಾಗ? ಎಲ್ಲಿ ?” ಮನೇಲಿ ಮಲಗಿದ್ದಲ್ಲೇ ಸತ್ತೋಯಿತಂತೆ. ಬೆಳಿಗ್ಗೆ ರಾಮಯ್ಯ ಬಂದು ನಮ್ಮ ಮನೆಗೆ ತಿಳಿಸಿದ.” “ಅಯ್ಯೋ ಶಿವನೇ, ಮೊನ್ನೆ ಇಲ್ಲಿಬಂದು ನನ್ನ ಹತ್ರ ಜಗಳ ಮಾಡಿಕೊಂಡು ಹೋಗಿದ್ದಳು. ಇನ್ನು ನಿನ್ನ ಮನೆ ಮೆಟ್ಲು ಹತ್ತೋದಿಲ್ಲಾಂತ ಹೇಳಿದ್ದಳು. ಹಾಗೇ ಆಯ್ತಲ್ಲಪ್ಪ…” ಅಜ್ಜ ದುಃಖದಿಂದ ನರಳಿದರು .
Facebook ಕಾಮೆಂಟ್ಸ್