X

ಆತ್ಮ ಸಂವೇದನಾ: ಅಧ್ಯಾಯ ೧

ಆತ್ಮ ಸಂವೇದನಾ

ಕಾರ್ಗತ್ತಲ ನೀರವ ನಿಶೆ. .

ಆಕಾರವಿಲ್ಲದ ಮನಸೆಂಬ ನೆರಳ ಬಿಂಬದ ಸಜೆ. .

ಕಲ್ಪನೆಗಳ ಮಾಯೆ. .

ಕಾಡುತಿದೆ ಭಾವನೆಗಳ ಜಟಕಾ ಬಂಡಿ. .

ದೂರದವರೆಗೆ ಸಾಗುತಿದೆ ಕಣ್ಣಿನ ನೋಟ. . ದೃಷ್ಟಿಯ ಅಂತ್ಯ. .

ಆಕಾಶ ಭೂಮಿಗೆ ಸೇರಿದ ಪರಿಧಿಯ ಜಾಗ. .

ಮತ್ತದೇ ಮುಸ್ಸಂಜೆ. . ಮತ್ತದೇ ಮುಂಜಾನೆ. .

ಸಾಗುತಿದೆ ಮುಗ್ಧ ಬದುಕಿನ ಜೀವನದ ಚರಮಗೀತೆ. .

ಗೀತೆಯಲೂ ಇಲ್ಲದ ಅಂತ್ಯ. .

ದಿನಾ ಕಾಣುವುದೆ ಅರಿವು. .

ಎಲ್ಲೇ ಇಲ್ಲದ ತಿರುವು. .

ಬಾಳು ನೀ ಖುಷಿಯಲಿ. .

ಬದುಕು ನೀ ನೋವಿನ ತಿಳಿಯಲಿ. .

ತೆರೆಗಳ ಅಂತರ ನಿರಂತರ ನಿರಂತರ. ಕಣ್ಣಿನ ದೃಷ್ಟಿಯ ಕೊನೆಯ ತುದಿಯವರೆಗೂ ನೀಲಿ ಸಮುದ್ರ! ಶುಭ್ರ ಆಗಸ! ಸಾಗರ ಇಳಿದಷ್ಟೂ ಆಳ, ಆಗಸ ನೋಡಿದಷ್ಟೂ ದೂರ. ಎರಡೂ ವಿಶಾಲತೆಯ ಪ್ರತಿನಿಧಿಗಳು, ಅನಂತದ ಪ್ರತಿಬಿಂಬಗಳು. ಆಗಸ ಮತ್ತುಸಮುದ್ರದ ಪರಿಧಿಗಳು ಒಂದನ್ನೊಂದು ಸೆಳೆದಪ್ಪುವ ಜಾಗವನ್ನೇ ನಿಟ್ಟಿಸಿ ನೋಡುತ್ತ ಕುಳಿತದ್ದ ಆತ್ಮ.

ಆತ್ಮ , ಮುಕ್ತ ಆತ್ಮ. ಸ್ವಚ್ಛ ಭಾವುಕನೂ ಅಲ್ಲದ ಶುಧ್ಹ ಯಾಂತ್ರಿಕನೂ ಅಲ್ಲದ ವಿಚಿತ್ರ ಆತ್ಮ. ಮೊಣಕಾಲುಗಳ ಮಧ್ಯ ಮುಖವಿಟ್ಟು ಪುಟ್ಟ ಮಗುವಿನಂತೆ ಕುತೂಹಲ ತುಂಬಿ ದಿಟ್ಟಿಸುತ್ತಿದ್ದ ಬಂದು ಬಡಿಯುವ ಅಲೆಗಳನ್ನು, ಬರಿದಾಗುವ ತೀರವನ್ನು. ದಡಗಳಿಗೆಮುತ್ತಿಕ್ಕಿ ಅಲೆಗಳು ಹಿಂದೆ ಸರಿಯುತ್ತಿದ್ದವು.

“ಅಲೆಗಳಿಗೆ ದಡದ ಮೇಲೆ ದ್ವೇಷವಾ? ಅಗಾಧ ಜಲರಾಶಿಗೆ ಭೂಮಿಯ ಮೇಲೆ ದ್ವೇಷವಾ? ನೀ ಇಡುವ ಸಿಹಿ ಮುತ್ತೇ ನನ್ನನ್ನು ಕೊಲ್ಲುವ ವಿಷವಾದರೆ? ಕಾಲ ತಾಕುವ ನೀರಿನಲೆಗಳೇ ಬಿರುಗಾಳಿ ಎಬ್ಬಿಸಿದರೆ?” ಸುಮ್ಮನೆ ಯೋಚಿಸುತ್ತ ಕುಳಿತಿದ್ದ ಆತ್ಮ.

ಸಮುದ್ರದಲೆಗಳು ಅವನನ್ನು ಸುತ್ತುವರೆದು ಒಮ್ಮೊಮ್ಮೆ ಬಲವಾಗಿ ಬಡಿದು ಹಿಂದೆ ಸರಿಯುತ್ತಿದ್ದವು. ಯಾವುದೂ ಅವನಿಗೆ ಭಂಗ ತರುತ್ತಿರಲಿಲ್ಲ. ಮುಳುಗುತ್ತಿದ್ದ ಸೂರ್ಯನನ್ನೇ ಕಣ್ತುಂಬಿಕೊಳ್ಳುತ್ತಿದ್ದ. ಪಡುವಣ ಕೆಂಪೇರಿದಷ್ಟೂ ಹಕ್ಕಿಗಳ ಚಿಲಿಪಿಲಿಜೋರಾಗುತ್ತಿತ್ತು. ಮರಳಿ ಗೂಡಿಗೆ ಸೇರುವ ಸಂಭ್ರಮವಲ್ಲವೇ?

ಕತ್ತಲೆಂಬುದು ಮಹಾ ಉತ್ಕರ್ಷೆ. ಬೆಳಕೆಂಬುದು ಮಹಾ ಶ್ವೇತೆ. ಬದುಕು ಅಷ್ಟೆ, ಕತ್ತಲು ಬೆಳಕಿನ ಆಟ. ಕತ್ತಲು ಮತ್ತು ಬೆಳಕು ನಡೆಸಿದ ಮಹಾ ಯುದ್ಧದಲ್ಲಿ ಯಾರು ಗೆದ್ದಿಲ್ಲ, ಯಾರಿಗೂ ಸೋಲಿಲ್ಲ. ಅವೆಷ್ಟೊ ಕೋಟಿ ವರ್ಷಗಳಿಂದ ಈ ಮಹಾಸಮರನಡೆಯುತ್ತಲೇ ಇದೆ.

ಒಮ್ಮೆ ಬೆಳಕಾದರೆ ಇನ್ನೊಮ್ಮೆ ಕತ್ತಲು. ಸೂರ್ಯನೆಂಬ ಸೂರ್ಯನನ್ನೇ ನುಂಗಲು ಕತ್ತಲು ಹವಣಿಸುತ್ತಿದ್ದರೆ, ” ನಿನ್ನ ನಿರಂತರ ಅಸ್ತಿತ್ವಕ್ಕೆ ನಾ ಅಡ್ಡಿಯಾಗುವೆ ” ಎಂದು ಸೂರ್ಯ ಬೆಳಕಿನ ಕುದುರೆಗೆ ರಥ ಕಟ್ಟಿ ಓಡುತ್ತಲೇ ಇದ್ದ. ಒಮ್ಮೆ ಕತ್ತಲಿನಲ್ಲಿ ಕಳೆದುಹೋದರೆ ಇನ್ನೊಮ್ಮೆ ಕತ್ತಲನ್ನೇ ನುಂಗಿ ಬಿಡುತ್ತಿದ್ದ. ಒಮ್ಮೆ ಯೌವ್ವನದಲ್ಲಿ ಬೆಳ್ಳನೆ ಬೆಳಕಾದರೆ ಇನ್ನೊಮ್ಮೆ ಕೋಪದಲಿ ಕೆಂಪಾಗುತ್ತಿದ್ದ.

ಭೂಮಂಡಲದ ಸಕಲ ಜೀವಿಗಳು ನೋಡುತ್ತಿರುವ ನಿರಂತರ ಸಮರ, ಕಟ್ಟಲು ಬೆಳಕಿನ ಆಟ. ಮಹಾ ಹೋರಾಟ. ಭೂಮಿಯ ಮೇಲಷ್ಟೆ ಅಲ್ಲ ವಿಶ್ವಕ್ಕೆ ವಿಶ್ವವೇ ಕತ್ತಲಿಗೆ ಎದುರಾಗಿ ನಿಂತಿದೆ. ಕೋಟಿ ಕೋಟಿ ನಕ್ಷತ್ರಗಳು ಬೆಳಗಿ ಬೆಳಕಾಗಿ ಕೊನೆಗೊಮ್ಮೆಅಸ್ತಿತ್ವವೇ ಇಲ್ಲದಂತೆ ಕಪ್ಪು ವಲಯದಲ್ಲಿ ಸೇರುತ್ತಿವೆ. ಕಟ್ಟಲು ನಗುತ್ತಿದೆ; ತನ್ನ ದಿನ ದೂರವಿಲ್ಲವೆಂಬಂತೆ ಗಹಗಹಿಸುತ್ತಿದೆ. ಆಗಸದ ಎಲ್ಲ ನಕ್ಷತ್ರಗಳು ಉರಿದು ಬರಿದಾದಾಗ ಕೊನೆಯಲ್ಲಿ ಉಳಿಯುವುದು ಏನು. . ?? ಮಹಾ ಕತ್ತಲು. ಸಂಪೂರ್ಣ ಶೂನ್ಯ.ಭೂಮಿಯೊಂದೇ ಅಲ್ಲ ಜಗತ್ತೆಂಬ ಜಗತ್ತೇ ಕತ್ತಲು. ಶಾಶ್ವತ ಕತ್ತಲು.

” ಯಾಕೀ ಹೋರಾಟ??” ಆಕಾಶದತ್ತ ಶೂನ್ಯ ದೃಷ್ಟಿ ಬೀರಿದ ಆತ್ಮ. ಅವನ ಮನ ಹೊಯ್ದಾಡುತ್ತಿತ್ತು. ಸ್ವಾಗತದ ಮಾತುಗಳು ಪ್ರತಿಧ್ವನಿಯಂತೆ ಕಿವಿಯನಪ್ಪಳಿಸುತ್ತಿತ್ತು.

” ಓ ಶಕ್ತಿವಂತ ವಿಶ್ವೇ ಉತ್ತರಿಸು, ಏಕೆ ಸೃಷ್ಟಿಸಿದೆ ಕತ್ತಲನ್ನು? ಕೊನೆಯಲ್ಲಿ ಕತ್ತಲೆ ಶಾಶ್ವತವಾದರೆ ಬೆಳಕನ್ನು ಏಕೆ ಸೃಷ್ಟಿಸಿದೆ?”

ಮನಸ್ಸು ರಚ್ಚೆ ಹಿಡಿದು ಕೂಗುತ್ತಿತ್ತು. ಅರ್ಥವಿಲ್ಲದ ಪ್ರಶ್ನೆಗಳು ಕಣ್ಣೆದುರು ಹಾದು ಹೋಗುತ್ತಿದ್ದರೆ ಆತ್ಮ ಮೌನ ತೀರವ ಸೇರಿದ್ದ. ಅಸ್ಪಷ್ಟ ಮಾತುಗಳು. ಮರೆಯಬೇಕೆಂದರೂ ಕಾಡುವ ಮಾತುಗಳು.

” ನೀನು ಅಷ್ಟೇಕೆ ಯೋಚಿಸುತ್ತಿರುವೆ? ಅದಾವುದನ್ನೂ ನೋಡಲು ನೀನಿರುವುದಿಲ್ಲ. ಚಿರಂಜೀವಿಯಾಗಿ ಭೂಮಿಯ ಮೇಲೆ ಬದುಕುತ್ತಿರುವ ನಿಮ್ಮೆಲ್ಲರ ವಿರುದ್ಧ ವಿಶ್ವ ಯುದ್ಧ ಸಾರುತ್ತಿದೆ. ರಣಕಹಳೆ ಪ್ರಾರಂಭವಾದಂತೆ. ಪ್ರಕೃತಿಯ ವಿರುದ್ಧದ ನಿನ್ನ ಗುದ್ದಾಟವಾಸ್ತವದೆದುರು ನಡೆಸುತ್ತಿರುವ ವ್ಯರ್ಥ ಹೊಡೆದಾಟ. ಇನ್ನು ಕೆಲವೇ ದಿನಗಳಲ್ಲಿ ಅಂತ್ಯ ಕಾಣಲಿದೆ ಕತ್ತಲು ಬೆಳಕಿನ ನಡುವಿನ ಮಹಾಯುದ್ಧ; ಅಲೆಗಳ ದಡಗಳ ಮಧ್ಯದ ಮಹಾಸಮರ.

ನಿನ್ನ ಹುಚ್ಚು ಕಲ್ಪನೆಗಳು, ಅತಿ ಆಸೆಯ ಹುಂಬತನಗಳು, ಮೇರೆ ಮೀರಿ ವಿಶ್ವದ ವಿರುದ್ಧ ನಡೆಸುತ್ತಿರುವ ನಿನ್ನ ಪ್ರತಿ ಕ್ಷಣದ ಹೋರಾಟದ ವಿರುದ್ಧ ಪ್ರಕೃತಿಯು ತನ್ನ ಮಹಾ ಸೈನ್ಯ ಸಿದ್ಧಗೊಳಿಸುತ್ತಿದೆ. ಎಲ್ಲರ ಅಂತ್ಯ ಸಮೀಪಿಸುತ್ತಿದೆ. ಪ್ರತಿಯೊಬ್ಬರೂಸಾಯುತ್ತಾರೆ. ಪ್ರತಿಯೊಂದೂ ನಾಶವಾಗುತ್ತದೆ. ಎಲ್ಲವೂ ಕತ್ತಲೆಯಲ್ಲಿ ಕರಗಿ ಹೋಗುತ್ತದೆ. ರಕ್ತದೋಕುಳಿಗೆ ವೇದಿಕೆ ವಿಧಿವತ್ತಾಗಿ ಸಿದ್ಧವಾಗುತ್ತಿದೆ. ಕಡೆಗೆ..?? ಏನೂ ಉಳಿಯುವುದಿಲ್ಲ. ಕತ್ತಲು, ಬರೀ ಕತ್ತಲು.

ನಿನ್ನ ಅಂತ್ಯ, ಭೂಮಿಯ ಅಂತ್ಯ; ಮತ್ತೇನೂ ಇಲ್ಲದಂತೆ ಶಾಶ್ವತ ಅಂತ್ಯ.” ವಿಶ್ವವು ಕೂಗಿ ಹೇಳಿತು. ” ನಾನು ಸಾಯುವುದಾದರೆ ನಿನ್ನ ಬದುಕೂ ಮುಗಿಯಲೇ ಬೇಕು. ನಿನ್ನ ಕೊನೆಯಾಗುವಿಕೆಯೊಂದಿಗೆ ನನ್ನ ಆರಂಭ ಮತ್ತೆ.”

ನಾಭಿಯಾಳದ ನೋವೊಂದು ಹೊರಬಂದಿತ್ತು ಧ್ವನಿ. ಕಿತ್ತುಹೋದ ವೀಣೆಯ ತಂತಿಯಂತೆ ಕಂಪಿಸಿತ್ತು. ರಕ್ತವರ್ಣದ ಕೆಂಪು ಬಾನು ತನ್ನ ಸಮ್ಮತಿ ಸೂಚಿಸಿತ್ತು. ಜೋರಾದ ಅಲೆಯೊಂದು ಆತ್ಮನನ್ನು ಬಡಿದು ಸ್ವಲ್ಪ ಹಿಂದಕ್ಕೆ ತಳ್ಳಿತು. ಕುಳಿರ್ಗಾಳಿ ಮತ್ತೂಜೋರಾಯಿತು. ಗಾಳಿಯೊಂದಿಗೆ ತೆರೆಗಳಾಟ ಮೊದಲ ಬಾರಿ ಆತ್ಮನನ್ನು ದಂಗು ಬಡಿಸಿತ್ತು.

ಆತ್ಮನ ಮನಸ್ಸೇಕೋ ಕೆಟ್ಟದ್ದನ್ನೇ ಆಲೋಚಿಸುತ್ತಿತ್ತು. ಮನಸ್ಸಲ್ಲೇ ಮಾತಾಡಿಕೊಂಡ ಆತ್ಮ ” ಇದು ನಾ ನೋಡುತ್ತಿರುವ ಕೊನೆಯ ಸಂಜೆ, ಅಂತಿಮ ಬೆಳಕು. ನಾಳೆಯಿಂದ…?? ಬೆಳಕೇ ಇಲ್ಲದ ಪ್ರಪಂಚ; ಬೆಳಕೇ ಇಲ್ಲದ ವಿಶ್ವ. ನಾನು..?? ನನ್ನದು ಕತ್ತಲೆಇಲ್ಲದ ಪ್ರಪಂಚ; ಕತ್ತಲೆ ಇಲ್ಲದ ವಿಶ್ವ.”

ನಿರಂತರತೆಯ ಅಧ್ಯಾಯ

ಸುಳಿದು ಹೋಗುವ ಸುಳಿ ಗಾಳಿಯ ಭರವಸೆಯಿಲ್ಲದ ಭಾವಾಂತರ ಸಾಗುತ್ತಲೇ ಇದೆ.

ಎಲ್ಲವೂ ಮುಗಿದಿದೆ ಎಂದಾಗ ಮತ್ತೇನೋ

ಪ್ರಾರಂಭವಾದಂತಿದೆ. .

ಪ್ರಾರಂಭವಾಗಿದೆಯೇ ಎಂಬ ಅನುಮಾನದಲ್ಲಿರುವಾಗಲೇ

ಎಲ್ಲವೂ ಮುಗಿದು ಹೋಗುತ್ತಿದೆ. .

ಕಾರ್ಮೋಡ ಕರಗಿದಂತೆ. .

ಕಾರ್ಮೋಡ ಕರಗಿದರೂ ಇರುಳ ಕತ್ತಲು ಎಲ್ಲವನ್ನೂ ತನ್ನೊಳಗೆ ಕರಗಿಸಿಕೊಂಡು ಬಿಡುತ್ತದೆ. ಕತ್ತಲ ಕರಾಳತೆ ಅವನಿಗೆ ತಾಯಿಯ ಮಡಿಲಂತೆ ನಿರಾಳವಾಗಿಸಿತ್ತು. ಮುಗ್ಧ ಮನಸಿನ ಜೋಗುಳವಾಗಿತ್ತು. ಅವನ ಮೊಗದಲ್ಲೊಂದು ಮಂದಹಾಸ. ಶಾಶ್ವತ’ಏಕಾಂತ’ ಒಂಟಿತನ ಇನ್ನು. ಎಲ್ಲವೂ ಮುಗಿಯಿತು ಎಂದುಕೊಂಡು ತನ್ನನ್ನು ತಾನೇ ಸಂತೈಸಿಕೊಂಡು ವಿಶ್ವದ ಕೊನೆಯ ಭಾವಜೀವಿ ಅಲ್ಲಿಂದ ಅದೃಶ್ಯನಾದ.

ಪಡುವಣದ ಆಗಸದಲ್ಲಿ ಮಿಂಚೊಂದು ಮಿಂಚಿ , ನಕ್ಕಂತಾಯಿತು. ವಿಶ್ವದ ಹರಿತವಾದ ಕತ್ತಿಯ ಹೊಳಪು. ಗೆಲುವಿನ ಅಟ್ಟಹಾಸದ ಝಳಪು.

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..