X

ಸಿಂಹದ ಪಕ್ಕದಲ್ಲೊಂದು ನಾಯಿ

ಸಿಂಹದ ಪಕ್ಕದಲ್ಲೊಂದು ನಾಯಿ.

ಮೆಜೆಸ್ಟಿಕ್ಕಿಂದ ಹೊರಟ್ರೆ ಒಂದು ಕಿಲೋಮೀಟರ್ ದೂರದಲ್ಲಿರುವ ಸಂಪಿಗೆ ರಸ್ತೆಯಲ್ಲಿ ನಮ್ಮ ಮೆಟ್ರೋ ಕೆಲಸ ನಡೆಯುತ್ತಿತ್ತು. ಎತ್ತರದ ಕಂಬದ ಮೇಲೆ ವ್ಯಕ್ತಿಯೊಬ್ಬ ತನ್ನ ಸೊಂಟಕ್ಕೊಂದು ಬೆಲ್ಟ್ ಕಟ್ಟಿಕೊಂಡು ಆ ಬೆಲ್ಟನ್ನು ಅದೇ ಕಂಬದ ಒಂದು ಕೊಕ್ಕೆಗೆ ಸಿಕ್ಕಿಸಿ ನೇತಾಡಿಕೊಂಡು ಕೆಲಸ ಮಾಡುತ್ತಿದ್ದ. ನಾನು ಅದನ್ನು ಫೋಟೋ ತೆಗಿತಾ ಇದ್ದೆ. ಅಷ್ಟರಲ್ಲೆ ಕೇಳಿದ್ದು?…! ಅಮ್ಮಾ ಚಂಡಿ ಚಾಮುಂಡೇಶ್ವರೀ ಕಾಪಾಡಮ್ಮ ಎಂದು. ಸ್ವರ ಬಂದ ಕಡೆ ತಿರುಗಿ ನೋಡಿದೆ. ಅಲ್ಲೇ ರಸ್ತೆಗಂಟಿಕೊಂಡೇ ಒಂದು ಚಿಕ್ಕ ದೇವರ ಗುಡಿ….! ಅಂದರೆ ದೇವರು ಚಿಕ್ಕದೆಂದೇನು ಅಲ್ಲ ಗುಡಿ ಚಿಕ್ಕದು ಅಷ್ಟೇ. ಗುಡಿ ಚಿಕ್ಕದೇ ಆದರೂ ದೇವರು ದೊಡ್ದದೇ. ನನಗೆ ಆ ದೇವರ ಗುಡಿಯ ಗೋಡೆಯಲ್ಲಿರುವ ದೇವರ ಚಿತ್ರ ಸೆಳೆದು ಬಿಟ್ಟಿತು. ಕ್ಯಾಮರಾ ತಿರುಗಿತು. ಕಂಬದಲ್ಲಿ ನೇತಾಡಿಕೊಂಡು ಕೆಲಸ ಮಾಡುತ್ತಿದ್ದಾತ ಕಂಬದಿಂದ ಇಳಿದನೋ ಅಥವಾ ಇನ್ನೂ ನೇತಾಡಿಕೊಂಡೇ ಕೆಲಸ ಮಾಡುತ್ತಿದ್ದಾನೋ ಗೊತ್ತಿಲ್ಲ. ನನ್ನ ಕ್ಯಾಮರಾ ದೇವರ ಗುಡಿಯ ಗೋಡೆಯ ಕಡೆ ತಿರುಗಿ ಆಗಿತ್ತು. ಕ್ಯಾಮರಾ ತಿರುಗುವುದಕ್ಕೆ ಬಲವಾದ ಕಾರಣ ಚಾಮುಂಡಿ ದೇವಿಯು ಏರಿ ಕೂತಿರುವ ಸಿಂಹ ಮತ್ತು ಆ ಸಿಂಹವನ್ನೇ ಹೋಲುವ ಜಾತಿಯ ಜೀವಂತ ನಾಯಿಯೊಂದು ಸಿಂಹದ ಚಿತ್ರದ ಪಕ್ಕದಲ್ಲೇ ಇರುವ ದೇವರ ಗುಡಿಯೊಳಗಿಂದ ಬಾಗಿಲಲ್ಲಿ ನಿಂತುಕೊಂಡಿತ್ತು. ನಿಂತ ನಾಯಿ ತಾನು ಅಲ್ಲಾಡಿ ತನ್ನ ಬಾಲ ಅಲ್ಲಾಡಿಸುವ ಮುನ್ನ ಎರಡು ಫೋಟೋ ತಗೊಂಡೆ ಅಲ್ಲಿಂದ ಹೊರಟೆ.

ಆಫೀಸ್ ಗೆ ಹೋದವನೇ ಕಾರ್ಡಲ್ಲಿದ್ದ ಫೋಟೋಗಳನ್ನ ಕಂಪ್ಯೂಟರಿಗೆ ಸೇವ್ ಮಾಡಿದೆ. ಎಡಿಟರ್ ಅದರಲ್ಲಿ ಒಂದು ಫೋಟೋ ಸೆಲೆಕ್ಟ್ ಮಾಡಿದ್ರು.  ವೆಬ್ ಸೈಟಿಗೆ ಅಪ್ ಲೋಡ್ ಮಾಡುವುದಕ್ಕೆ ಫೋಟೋ ಸೈಜ್ ಕಮ್ಮಿ ಮಾಡಿ ಅಪ್ ಲೋಡ್ ಮಾಡಿಯೂ ಆಯ್ತು. ಎರಡು ದಿನ ಬಿಟ್ಟು ಹಿರಿಯರೊಬ್ಬರು ಫೋನ್ ಮಾಡಿ ಹೇಳಿದರು ಆ ಫೋಟೋ ತುಂಬಾ ಚೆನ್ನಾಗಿದೆ ನನಗೆ ಅದರದೊಂದು ದೊಡ್ಡ ಸೈಜ್ ನ ಪ್ರಿಂಟ್ ಬೇಕು ಎಂದು.
ತಾಯಿಯೋರ್ವಳಿಗೆ ತನ್ನ ಮಗುವಿನ ಬಗ್ಗೆ ಯಾರಾದರು ಒಂದೆರಡು ಒಳ್ಳೆಯ ಮಾತನ್ನಾಡಿದರೆ ಆಗುವ ಪರಮಾನಂದವೇ ಬೇರೆ.

ಹುಡುಕಲಾರಂಭಿಸಿದೆ ಎರಡು ದಿನ ಹಿಂದೆ ಸೇವ್ ಮಾಡಿದ ಫೋಟೋಗಳನ್ನು. ಮತ್ತೆ ಮತ್ತೆ ಹುಡುಕಬೇಕಾಯ್ತು….! ಸೈಜ್ ಚಿಕ್ಕದಾಗಿಸಿ ವೆಬ್ ಸೈಟಿಗೆ ಅಪ್ಲೋಡ್ ಮಾಡಿದ ಒಂದು ಫೋಟೋ ಬಿಟ್ಟರೆ ಬೇರೆಲ್ಲಾ ಡಿಲೀಟ್ ಆಗಿತ್ತು.

ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಇಬ್ಬರು ಒಂದೇ ಕಂಪ್ಯೂಟರ್ ಬಳಕೆ ಮಾಡ್ತಾ ಇದ್ದೆವು. ಇನ್ನೊಬ್ಬರ ಫೋಟೋ ಸೇವ್ ಮಾಡಲು ಜಾಗ ಇಲ್ಲದಾಗ ನಾನು ತೆಗೆದ ಫೋಟೋಗಳು ಬಲಿಯಾಗಿದ್ದವು. ಇಳಿದ ಕಣ್ಣೀರನ್ನು ಒರೆಸಲಿಲ್ಲ. ಬಾತ್ ರೂಂಗೆ ಹೋಗಿ ಟ್ಯಾಪ್ ಆನ್ ಮಾಡಿ ಅಂಗೈ ಬೊಗಸೆಯಲ್ಲಿ ನೀರ ಹಿಡಿದು ಕಣ್ಣೀರ ಜೊತೆ ಬೆರೆಸಿ ಇಡೀ ಮುಖ ತಿಕ್ಕಿದೆ. ತಪ್ಪು ನನ್ನದೆ ಬೇಜವಾಬ್ದಾರಿ ನನ್ನದೆ. ಕನ್ನಡಿಯಲ್ಲಿ ಕಂಡ ನನ್ನದೇ ಮುಖಕ್ಕೆ ನಗುಮುಖದಿಂದ ಕೇಳದಂತೆ ಬೈದೆ. ಕನ್ನಡಿಯಲ್ಲಿ ಕಾಣುವ ನನ್ನದೇ ಮುಖವನ್ನು ನೋಡಲಾರದೆ ಕನ್ನಡಿಯಿಂದ ದೂರ ಸರಿದೆ.

ಅಲ್ಲಿ ಗೋಡೆಗಂಟಿದ್ದ ಸಿಂಹದ ಮೇಲೇರಿ ಸವಾರಿ ಹೊರಟಿದ್ದ ಚಿತ್ರದ ಚಂಡಿ ಚಂಡಿ ಚಾಮುಂಡಿ ಕರೆದ ಹಾಗಾಯ್ತು?..! ಬಾ ಮಗನೇ ಬಾ…., ತಡ ಮಾಡಲಿಲ್ಲ ತಕ್ಷಣ ಹೊರಟೆ. ಹತ್ತಿರ ತಲುಪಿದೆ ಆದರೆ ಆ ನಿರ್ದಿಷ್ಠ ಜಾಗ ಗೊತ್ತಾಗುತ್ತಿಲ್ಲ. ಮೊದಲು ನೇತಾಡಿಕೊಂಡು ಕೆಲಸ ಮಾಡುತ್ತಿದ್ದ ಆ ಕಂಬ ಹುಡುಕಿದೆ. ಒಂದಿದ್ದ ಕಂಬದ ಜಾಗದಲ್ಲಿ ನಾಲಕ್ಕು ನಾಲಕ್ಕು ಕಂಬ ಕಾಣುತಿದೆ. ಕಾಣುತಿದೆ ಅಲ್ಲ ಇದೆ. ಎಲ್ಲಿಂದ ನೋಡಿದರೂ ದೇವಸ್ಥಾನ ಕಾಣುತ್ತಿಲ್ಲ. ಕೊನೆಗೆ ಅಲ್ಲೇ ಇದ್ದ ಟ್ರಾಫಿಕ್ ಪೊಲೀಸ್ ರವರಲ್ಲಿ ಕೇಳಿದೆ. ಇಲ್ಲೇ ಹತ್ತಿರದಲ್ಲೆ ಒಂದು ದೇವಸ್ಥಾನ ಇತ್ತಲ್ಲ ಸರ್ ಎಲ್ಲಿ ಸರ್ ಎಂದು ಕೇಳಿದಾಗ ಅಲ್ಲೇ ಪಕ್ಕದಲ್ಲಿ ಇದ್ದ ರಾಶಿ ಮಣ್ಣನ್ನು ತೋರಿಸಿದರು….!

ನಮ್ಮ ಮೆಟ್ರೋ ರಸ್ತೆಗೆ ಅಡ್ಡವಾಗಿದ್ದ ಆ ದೇವಸ್ಥಾನವನ್ನು ಡೆಮೋಲಿಶ್ ಮಾಡಿದ್ದರು.

ಎರಡು ದಿನಗಳ ಹಿಂದೆ ದೇವಸ್ಥಾನದ ಗೋಡೆಗಂಟಿಕೊಂಡಿದ್ದ ಸಿಂಹದ ಪಕ್ಕದಲ್ಲಿ ನಿಂತಿದ್ದ ನಾಯಿ ಇಂದು ಅದೇ ದೇವಸ್ಥಾನದ ರಾಶಿ ಮಣ್ಣಿನ ಮೇಲೆ ಮಲಗಿತ್ತು.

ಬಾಬು ಕಡಂಬ ಹೊಸಬೆಟ್ಟು ಗುತ್ತು.

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.