X
    Categories: ಕಥೆ

ಅಡಿಕೆಗೆ ಹೋದ ಮಾನ

(ಸ್ನೇಹಿತರೇ ಇದು ಎಲ್ಲ ಇದ್ದೂ ಇಲ್ಲದಂತೆ ಬದುಕಬೇಕಾದ ಅನಿವಾರ್ಯತೆಯ ಕೂಪಕ್ಕೆ ಬಿದ್ದ ಮಲೆನಾಡಿನ ಮೂಲೆಯ ಒಂದು ಚಿಕ್ಕ ಕುಟುಂಬದ ಕಥೆ.ಆದರೆ ಈ ಕಥೆ ಆ ಮನೆಯ ಒಬ್ಬನೇ ಮಗ ಅಪ್ಪನಿಗೆ ಕೊಡಬೇಕೆಂದು ಬರೆದಿಟ್ಟುಕೊಂಡ ಪತ್ರದ ಮೂಲಕ ವ್ಯಕ್ತಗೊಂಡಿದೆ.ಇದು ಕಾಲ್ಪನಿಕವೋ ಅಥವಾ ವಾಸ್ತವವೋ ಎನ್ನುವುದನ್ನು ಅರಿಯುವ ಪ್ರಯತ್ನವನ್ನು ಓದುಗರಾದ ನಿಮಗೇ ಬಿಟ್ಟಿದ್ದೇನೆ.):

ಪ್ರೀತಿಯ ಅಪ್ಪಯ್ಯ,

ಯಾಕೋ ಗೊತ್ತಿಲ್ಲ ೫ ವರ್ಷದ ಹಿಂದೆ ರಂಗು ರಂಗಾಗಿ ಕಂಡಿದ್ದ ಈ ಬೆಂದಕಾಳೂರಿನ ಉಸಾಬರಿಯೇ ಸಾಕು ಸಾಕಾಗಿ ಹೋಗಿದೆ.ಸುತ್ತಲೂ ಕಾಣುವ ಈ ಕಾಂಕ್ರಿಟ್ ಕಾಡಿನಲ್ಲಿ ಮನತುಂಬಿ ಮಾತನಾಡುವವರೇ ಇಲ್ಲವಲ್ಲ, ಎಲ್ಲಿ ನೋಡಿದರೂ ಜನ ಮಾತ್ರ ಕಾಣ್ತಾರೆ ಆದರೆ ನಾನು ನಿರೀಕ್ಷಿಸುವ ನನ್ನ ಭಾವನೆಗಳಿಗೆ ಸ್ಪಂದಿಸುವರ್ಯಾರನ್ನೂ ನಾನು ನೋಡಲೇ ಇಲ್ಲವಲ್ಲ. ಇದು ನನ್ನ ಪಾಲಿಗೆ ದುರಂತವೇ ಸರಿ. ಅದೇಕೊ ನನ್ನೂರು ನನ್ನನ್ನ ವಿಪರೀತವಾಗಿ ಸೆಳೆಯುತ್ತಿದೆಯಲ್ಲ. ಆ ಕನ್ನಡ ಶಾಲೆ,ಹಸಿರಾದ ಕಾಡು, ಹನಿಮಳೆಯನ್ನೂ ಬಿಡದೆ ಅನುಭವಿಸುವ ನನ್ನ ಶಾಲೆ ಹುಡುಗ್ರು,ಮಳೆಗಾಲದಲ್ಲಿ ಅಲ್ಲಲ್ಲಿ ಕಾಣುವ ಕಂಬಳಿ ಕೊಪ್ಪೆಗಳು,ಅಮ್ಮನ ಊಟ ಇದೆಲ್ಲಾ ಅದ್ಯಾಕೋ ತುಂಬಾ ನೆನಪಾಗ್ತಿದೆ. ಇನ್ನೂ ಒಂದ್ವರ್ಷ ನನ್ನ ಓದೇ ಇದೆ ಅದಲ್ಲದೆ ಅದಾದ್ಮೇಲೆ ನಂಗೆ ಕೆಲ್ಸಾನೂ ಸಿಗ್ಬೇಕು. ಇದೆಲ್ಲದರ ನಡುವೆ ನನಗೆ ನನ್ನ ಮನೆ,ನನ್ನ ಊರೇ ಸರಿ ಅನ್ನಿಸುತ್ತಿದೆ ಅಪ್ಪಾ. ಆದರೆ ನಂಗೊತ್ತು ಅಲ್ಲಿ ವಾಸ್ತವವನ್ನ ಎದುರಿಸಲು ನೀ ಪಡುತ್ತಿರುವ ಶ್ರಮ ನೋಡಿದರೆ ಮೂರೇ ದಿನಕ್ಕೆ ಉರಿಂದ ಹೊರಟುಬಿಡೋಣ ಎನ್ನಿಸುತ್ತೆ. ಹೀಗಿರುವಾಗ ನನಗೆ ಅದೇಕೊ ಒಂದಿಷ್ಟು ಪ್ರಶ್ನೆಗಳು ಸುಳಿಯ ತೊಡಗಿದೆ.ಅದು ಪ್ರಶ್ನೆಯೋ ಅಥವಾ ವಾಸ್ತವವೋ ಅದು ಗೊತ್ತಾಗುತ್ತಿಲ್ಲ. PLD ಬ್ಯಾಂಕ್ ನ ಯಾವುದೋ ಸೂಟ್ ಬೂಟ್ ಅಧಿಕಾರಿ ಸಾಲ ವಸೂಲಾತಿಗೆ ಮನೆಗೆ ಬಂದಾಗ ಅವನ ಗಾಡಿ ಸೌಂಡ್ ಕೆಳುತ್ತಿದ್ದಂತೆ ನಮ್ಮನೆ ಕೊಟ್ಟಗೆ ಅಟ್ಟದ ಕಡೆ ಓಡುತ್ತ ನೀನು ತಮಾ ‘ಅವಾ ಬಂದಾಗ ಅಪ್ಪಯ್ಯ ಇಲ್ಲೆ ಅವ ತಿರಗಾಟಕ್ಕ ಹೋಜಾ ಹೇಳಿ ಹೇಳು ‘ಎಂದು  ನೀನು ಹೇಳಿಕೊಟ್ಟಾಗ ಬಾಲ್ಯದಲ್ಲಿ ಅದು ಒಂಥರಾ ಕಳ್ಳಾ ಪೋಲೀಸ್ ಆಟದ ಥರಾ ಮಜಾ ಅನ್ಸಿತ್ತು ಆದರೆ ಇದೇ ಸನ್ನಿವೇಶ ಕಳೆದ ಸಲ ನಾನು ಊರಿಗೆ ಬಂದಾಗ ನಡೀತಲ್ಲಾ ಆಗ ನನ್ನ ಕಣ್ಣಂಚು ನಂಗೊತ್ತಿಲ್ದೆ ಒದ್ದೆ ಆಗಿತ್ತು.ಅದಕ್ಕಿಂತಲೂ ನಾನು ಮಾನಸಿಕವಾಗಿ ಕುಗ್ಗಿಹೋಗಿದ್ದು ಮಾರನೇ ದಿನ ಬೆಳಿಗ್ಗೆ  ಒಲೆ ಮುಂದೆ ನೀನು ತಲೆಗೆ ಕೈ ಕೊಟ್ಟು ಕೂತಾಗ ನನಗೆ ಹೇಗೆ ನಿನ್ನ ಸಮಾದಾನ ಮಾಡಲಿ ಎಂದೇ ತಿಳಿಯಲಿಲ್ಲ. ಆ ಕ್ಷಣದಲ್ಲಿ ನಿನ್ನ ಮಾತಾಡಿಸಬೆಕೋ ಬೆಡವೋಎಂದು ಹೊಳೆಯಲಿಲ್ಲ.ಅದೆಷ್ಟು ವರ್ಷ ಈ ಅವಮಾನ ಅನುಭವಿಸಿದೆ ನೀನು.

ಇರೋ ಒಂದೂವರೆ ಎಕರೆ ಅಡಕೆ ತೋಟದಲ್ಲಿ ಜೀವನ ಮಾಡೋದು ಕಷ್ಟವೇನಲ್ಲ ಆದರೆ ನನ್ನೂರಿನ ಅದೆಷ್ಟೋ ಜನ ಅದ್ಯಾವಗಲೋ ಸಾಲದ ಕೂಪದಲ್ಲಿ ಬಿದ್ದರು ಅದು ಆ ಸಮಯಕ್ಕೆ ಅನಿವಾರ್ಯ ಕೂಡ ಅಗಿತ್ತು ಕಾರಣ ಬದುಕ ಬೇಕಿತ್ತು ಅದಲ್ಲದೆ ಅದೆಷ್ಟೋ ಜನ ತನ್ನ ಮಗ ಅಥವಾ  ಮಗಳನ್ನ ಹೆಂಗಾದರೂ ಓದಿಸಿ ಭವಿಷ್ಯದಲ್ಲಿ ಈ ಕೂಪದಿಂದ ಪಾರಾಗೋಣ ಎಂದುಕೊಂಡು ಗೊತ್ತೋ ಗೊತ್ತಿಲ್ಲದೆಯೋ ಸಾಲದ ಸುಳಿಯಲ್ಲಿ ಸಿಲುಕಿದರು.ನಂಗೊತ್ತು ಅಪ್ಪ ನೀನೂ ಹಿಂಗೇ ಯೋಚಿಸಿ ನನ್ನ ಓದಿಸುತ್ತಿರುವುದು ಆದರೆ ನಂಗೇಕೋ ಈಗೀಗ ಭಯ ಆಗುತ್ತಿದೆ.ನಾನೇನಾದರು ಎಡವಿಹೋದರೆ? ? ನಿಂಗ್ಯಾರಪ್ಪ ಸಮಾಧಾನ ಮಾಡೋರು?? ಅಮ್ಮನೋ ಗೇರು ಬೀಜ,ಹಲಸಿನ ಹಪ್ಪಳ,ಸಂಡಿಗೆ,ಸುರಗೀ ಮೊಗ್ಗೆ ಮಾರಿ ಬಂದ ಹಣವನ್ನೆಲ್ಲ ನಂಗೆ Laptop ತೆಗೆದುಕೊಳ್ಳಲು ಕೊಟ್ಟಳಲ್ಲ ಅವಳೆದುರು ನಾನು ಸೋತೋದೆ ಅಮ್ಮ ಅಂದ್ರೆ ಅದೆಂಗೆ ಅವಳು ಅರಗಿಸಿಕೊಳ್ಳುತ್ತಾಳೆ?

ಒಂದ್ಸಲಾ ನಾನು ನಿನ್ನ ಕೇಳಿದ್ದೆ ‘ಅಪ್ಪಾ ಈ ಸಲಾ ಎಷ್ಟು ಅಡಕೆ ಆತೋ,ನನ್ನ hostel ರೂಮ್ ಮೇಟ್ ನ ಮನೆಲಿ ಭರ್ಜರಿ ಬೆಳೆನಡ ೧೫ ಕ್ವಿಂಟಲ್ ಒಂದು ಎಕರೆಗೆ ಆಜಡಾ’ ಎಂದು ಬಹಳ ಹುಮ್ಮಸ್ಸಿನಿಂದ ಕೇಳಿದ್ದೆ ಆಗ ನೀನು ನಿಂಗೆ ಗೊತ್ತಿದ್ದೋ ಗೊತ್ತಿಲ್ದೇನೋ ವಾಸ್ತವ ಬಿಚ್ಚಿಟ್ಟಿದ್ದೆ ‘ತಮಾ ನಮ್ಮನೆ ಪರಿಸ್ಥಿತಿ ಹಂಗಿಲ್ಯೋ ನಮಗಿರೋ ಒಂದುವರೆ ಎಕರೆ ತೋಟದಲ್ಲಿ ಮುಕ್ಕಾಲು ಎಕರೆಗೆ ಬೇರುಹುಳಾ ಅಟ್ಯಾಕ್ ಆಜು ಸರಿ ಇರೊ ಇನ್ ಅರ್ದಾ ಎಕರೆಗೆ ಮಳೆಗಾಲದಲ್ಲಿ ಕೊಳೆ ಬಂತೂ ಅಂದ್ರೆ ವರ್ಷಕ್ಕೆ ೭ ಕ್ವಿಂಟಲ್ ಅಡಿಕೆ ಆದರೆ ಅದೇ ದೊಡ್ಡದು ಅದೂ ಅಲ್ದೆ ಸಮಯಕ್ಕೆ ಸರಿಯಾಗಿ ಅಡಕೆ ಕೊಯ್ಯಲೆ ಆಳ್ಗ ಇರ್ತ್ವಿಲ್ಲೆ,ಹೆಂಗೋ ಅಡಕೆ ಕೊಯ್ದರೆ ಅದರಾ ಸೊಲಿಯವೂ ಇರ್ತ್ವಿಲ್ಲೆ,ಅಷ್ಟರೊಳಗೆ ಸೊಸೈಟಿಯವು ಮೂರು ಸಲ ಅಡಕೆ ತಯಾರಾತ ಬೇಗ ಹಾಕದ್ರೆ ಈ ಸಲ ಬೆಳೆ ಸಾಲ,ಖಾತೆ ಸಾಲ ಸಿಗ್ತಿಲ್ಲೆ ಹೇಳಿ ಪದೇ ಪದೇ ಬಂದು ಹೆದರಿಸಿ ಹೋಗ್ತ. ಕೊನೆಗೆ ನಾನು ಅಮ್ಮನೆ ಸೊಲದು ಮುಗಿಸ ತನಕಾ ಇಡೀ ಜೀವಾ ಹಣ್ಣಾಗಿರ್ತು ತಮಾ,ನಿಂಗೆಂತಕ್ಕೆ ಅದರ ಚಿಂತೆ ನೀನು ಓದದರ ಕಡೆ ಗಮನ ಕೊಡು ಕೈಲಾದಷ್ಟ ದಿನ ನಾನು ಅಮ್ಮ ಮಾಡ್ತ್ಯ ನೀ ಓದು ತಲೆ ಕೆಡ್ಸ್ಕಳಡ ‘ ಎಂದು ಪೋನ್ ಇಟ್ಟಾಗ ನನ್ನ ಮನಸ್ಸೇಕೋ ಭಾರವಾಗಿತ್ತು.ಮೊದಲ ಬಾರಿಗೆ ನೀನು ನಿನ್ನ ಕಷ್ಟವನ್ನು ನನ್ನ ಹತ್ತಿರ ಹೇಳ್ಕೊಂಡಿದ್ದೆ.ಅದಕ್ಕೆ ಕಾರಣ ಮಗ ದೊಡ್ಡವನಾದ ಸಂಸಾರದ ಕಷ್ಟ ಗೊತ್ತಾಗಲಿ ಎನ್ನುವುದು ಆಗಿರಬಹುದು ಅಥವಾ ನಿನಗೆ ಗೊತ್ತಿಲ್ಲದೇ ನೀನು ಮನದಾಳದ ಮಾತನ್ನ ಹೇಳಿದ್ದೇಯೇನೋ.ಆದರೆ ನಿಂಗೊತ್ತಿಲ್ಲ ಇದನ್ನೆಲ್ಲ ನಾನೂ ಬಲ್ಲೆ.ನೀ ನನ್ನಿಂದ ಮುಚ್ಚಿಡಲು ಪ್ರಯತ್ನಸುತ್ತಿರುವ ಈ ವಿಷಯಗಳೆಲ್ಲ ನನ್ನ ಮನಸ್ಸಿನಲ್ಲಿ ಪ್ರತೀ ಕ್ಷಣ ಸುತ್ತುತ್ತಲೇ ಇವೆ.

ಅಡಿಕೆ ವರ್ಷಕ್ಕೊಂದೇ ಬೆಳೆ,ಮಳೆಗಾಲದಲ್ಲಿ ವಿಪರೀತ ಮಳೆ ಹೊಯ್ದರೆ ಕೊಳೆ ಸಮಸ್ಯೆ,ಮದ್ದು ಹೊಡ್ಸೋಕೆ ಕೂಲಿಗಳ ಸಮಸ್ಯೆ,ಹಾಗೂ ಯಾವ ಮದ್ದು ಹೊಡಿಬೇಕು ಎನ್ನೋ ಪ್ರಯೋಗದ ಪ್ರಶ್ನೆ,ಸಂಪೂರ್ಣವಾಗಿ ಹವಾಮಾನದ ಮೇಲೆ ಅವಲಂಬಿತರಾಗಿ ಉಸಿರು ಬಿಗಿಹಿಡಿದು ಜೀವನ ಸಲ್ಲಿಸಬೇಕಾದ ಅನಿವಾರ್ಯತೆ,ಹೆಂಗೋ ಕಷ್ಟ ಪಟ್ಟು ರಕ್ಷಿಸಿಕೊಂಡ ಬೆಳೆನ ಕೊಯ್ಯೋಣ ಅಂದರೆ ಮತ್ತೆ ಕೂಲಿ ಆಳುಗಳ ಸಮಸ್ಯೆ,ಕೊಯ್ದಾದ ಮೇಲೆ ಅದನ್ನ ಸೊಲಿಯುವ ಚಿಂತೆ,ಇನ್ನೇನು ಸೊಲಿದಾಯ್ತು ಒಣಗಿಸೋಣ ಅಂದರೆ ಆಗಲೇ ಬರೋ ಅಕಾಲಿಕ ಮಳೆ.ಇಷ್ಟೆಲ್ಲ ಗುದ್ದಾಡಿ ಆಗೋ ೭ ಕ್ವಿಂಟಲ್ ಅಡಿಕೇಲಿ ಇಡೀ ಕುಟುಂಬ ಸಾಗಿಸಬೇಕು ಜೊತೆಗೆ engineering ಅಥವಾ Medical ಓದ್ತಿರೋ ಮಕ್ಕಳಿಗೆ ಕರ್ಚಿಗೆ ಅಂತ ಅಲ್ಪ ಸಲ್ಪ ಹಣ ಕಳಿಸಲೇ ಬೇಕಲ್ಲ.ಗೊತ್ತಿದ್ದೋ ಗೊತ್ತಿಲ್ಲದೆನೋ ಸೊಸೈಟೀಲಿ ಮಾಡಿದ್ದ ಒಂದು ಲಕ್ಷ ರೂಪಾಯಿ ಸಾಲ ಈಗ ಐದು ಲಕ್ಷ ಆಗಿದೆ.ಅವರೋ ಬೆಳೆ ಬರೋ ಸಮಯಕ್ಕೆ ಕಾಯ್ತಾ ಇರ್ತಾರೆ,ಈ ಬೆಳೆ ಬಡ್ಡಿ ಹಣ ತುಂಬೋಕು ಸಾಲಲ್ಲ ಅನ್ನೋ ಅವಹೇಳನಕಾರಿ ಮಾತಾಡ್ತಾರೆ.ಅದೇನೋ ವರ್ಷಕ್ಕೊಂದ್ಸಲಾ Renewal ಮಾಡ್ತಾರಂತೆ.ಅದೆಷ್ಟು ಪರ್ಸೆಂಟ್ ಬಡ್ಡಿ ಹಾಕ್ತಾರೋ ದೇವರೇ ಬಲ್ಲ. ಅಪ್ಪ ನಿಂಗೆ ಗೊತ್ತು ಅವರು ನಿಂಗೆ ಮೋಸ  ಮಾಡ್ತಿದಾರೆ ಅಂತ ಆದರೆ ನಿಂಗೊತ್ತು ನೀನು ಬೀಸೋ ದೊಣ್ಣೆ ಇಂದ ತಪ್ಪಿಸ್ಕೋಬೇಕು ಅಂದ್ರೆ  ಇದನ್ನೆಲ್ಲ ಅನುಭವಿಸಬೇಕು ಅನ್ನೋದು.ಆದರೆ ಸಣ್ಣ ರೈತನಿಗೆ ಹೆಂಗೆ ಉಂಡೇನಾಮ ಹಾಕಬೇಕು ಅನ್ನುವುದನ್ನ ಮಾತ್ರ ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ ಈ ಅಧಿಕಾರಿಗಳು. ಒಂದು ಸಾತ್ವಿಕವಾದ ಸಿಟ್ಟು ಮಾತ್ರ ನಿನ್ನ ಮೇಲೆ ಇದೆ ಅಪ್ಪ ಯಾಕೆ ನೀನು ಅವರನ್ನ ಪ್ರಶ್ನಿಸೊಲ್ಲ?

ಕಳೆದ ವರ್ಷ ಒಂದು ಕ್ವಿಂಟಾಲ್ ಕೆಂಪಡಿಕೆಗೆ ೨೦,೦೦೦ ಇತ್ತು ಈ ವರ್ಷ ೪೦,೦೦೦ಕ್ಕೆ ಹೋಯ್ತು ಆದರೆ ಅಷ್ಟು ಬೆಲೆ ನಮ್ಮಂತ ಸಣ್ಣ ಬೆಳೆಗಾರರಿಗೆ ಸಿಕ್ಕಲೇ ಇಲ್ಲವಲ್ಲ. ೨೮,೦೦೦ ಸಿಕ್ಕರ ಅದೇ ದೊಡ್ಡದಾಗಿತ್ತು.ಅಪ್ಪಾ ಅದೆಂಗಪ್ಪಾ ಜೀವನ ಮಾಡ್ತಿದೀಯಾ? ಅಲ್ಲಿ ಮೋದಿ ಜಗತ್ತನ್ನ ಗೆಲ್ಲುತ್ತಿದ್ದರೆ ನಿನಗೆ ಅದರ ಕಡೆ ಗಮನ ಹರಿಸಲೂ ಸಮಯ ಇಲ್ಲದಾಂಗಾಯ್ತಲ್ಲ. ಬೆಳಿಗ್ಗೆ ಎದ್ದಾಗಿನಿಂದ ಸಂಜೆಯವರೆಗೂ ಬಿಡುವಿಲ್ಲದ ಕೆಲಸದಲಿ ನಿನ್ನ ನೀನು ಪ್ರೀತಿಸುವುದನ್ನು ಮರೆತು ಬಿಟ್ಟೆಯೇನೋ? ನಿಂಗಾಗಿ ನೀನೊಂದು ಚಪ್ಪಲ್ಲಿಯನ್ನು ತೆಗೆದುಕೊಂಡಿಲ್ಲವಲ್ಲ ಅಪ್ಪ. ಕಠಿಣ ಸಮಯದ ಸೆರೆಯಿಂದ ನಾವೆಲ್ಲ ಬಚಾವಾಗೋದು ಯಾವಾಗಲಪ್ಪ?.ಯಾವುದೋ ಪದವಿ ಮಾಡಿ ಮೀಸಲಾತಿಯ ಆಧಾರದ ಮೇಲೆ ಕೆಲಸ ಗಿಟ್ಟಿಸಿಕೊಳ್ಳಲು ನಾವೋ ಬಡ ಬ್ರಾಹ್ಮಣರು. ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಮಾತಾನಾಡುವವರ ಪಾಲಿಗೆ ನಾವು ದಲಿತರನ್ನ ತುಳಿದವರು,ಆದರೆ ನಮ್ಮಂತಹ ಅದೆಷ್ಟೋ ಬಡ ಬ್ರಾಹ್ಮಣರು ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರಲ್ಲ ನಮ್ಮನ್ನು ಮಾತನಾಡಿಸುವವರು ಯಾರೂ ಇಲ್ಲವಲ್ಲ. ಜಗತ್ತಿಗೆ ಅಡಕೆ ಬೆಳೆಯುವವರು ಶ್ರೀಮಂತರು ಆದರೆ ವಾಸ್ತವದ ಚಕ್ರಕ್ಕೆ ಸಿಲುಕಿ ಹಣ್ಣಾಗುತ್ತಿರುವವರೂ ನಾವೆ. ಸಾಲವೆಂಬ ಕೂಪದಲ್ಲಿ ಬಿದ್ದಾಗಿನಿಂದ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಅನ್ನುವ ತರದ ಜೀವನ ನಮ್ಮದಾಗಿದೆಯಲ್ಲ. ಮತ್ತೆ ಮತ್ತೆ ಸೋಲಬೆಕಿರುವುದು ಈ ಸಮಾಜದ ಕುರುಡು ವ್ಯವಸ್ಥೆಗೆ ಅಲ್ಲವಾ ಅಪ್ಪ??.

ನಿಮ್ಮ ಸಾಲವನ್ನೆಲ್ಲ ಮನ್ನ ಮಾಡಿಸಿಬಿಡುತ್ತೇವೆ ಎಂದು ಉದ್ದುದ್ದ ಬಾಷಣ ಬಿಗಿದ ಜನಪ್ರತಿನಿಧಿಗಳೆಲ್ಲ ಎಲ್ಲೋದರಪ್ಪ??ಅವರೋ ಮನೆ ಮೇಲೆ ಮನೆ ಕಟ್ಟಿದರೋ ಹೊರತು ನಿಮ್ಮ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವಲ್ಲ.೭೦೦ ಕೋಟಿಯಷ್ಟು ದೊಡ್ಡ ಮೊತ್ತದ ಕಾಫಿಬೆಳೆಗಾರರ ಸಾಲವನ್ನ ಪದೆ ಪದೆ ಮನ್ನ ಮಡುತ್ತಾರೆ ಆದರೆ ೩೫೦ ಕೋಟಿ ಇರುವ ಅಡಕೆ ಬೆಳೆಗಾರರ ಸಾಲವನ್ನ ಮನ್ನ ಮಾಡುವುದಿಲ್ಲವಲ್ಲ ಯಾಕಪ್ಪ??ಬಿರು ಬೇಸಿಗೆಯಲ್ಲಿ ಗೂಡುಬೆನ್ನಿನ ರೈತನೊಬ್ಬ ಬಿರುಸಾದ ಮಳೆಯನ್ನ ನಿರೀಕ್ಷಿಸುವಂತೆ ನಿನ್ನಂತಹ ಅದೆಷ್ಟೋ ಸಣ್ಣ ರೈತರು ಸಾಲ ಮನ್ನ ಆಗುತ್ತದೆ ಎಂದು ಕಾದು ಕುಳಿತಿದ್ದೀರಲ್ಲಪ್ಪ.ಅದು ಆಗುತ್ತದೆಯೇ?? ಬದಲಾವಣೆಯ ಪರ್ವಕಾಲದಲ್ಲೂ ನಿಂತ ನೀರಾಗಿ ಹೋಗಿದ್ದೇವಲ್ಲ ಇದಕ್ಕೆ ಕೊನೆಯೇ ಇಲ್ಲವೇನಪ್ಪ? ಇಷ್ಟೊಂದು ಕಷ್ಟಗಳ ನಡುವೆ ನೀವಿಬ್ಬರು ನನ್ನಲ್ಲಿ ಭವಿಷ್ಯ ಕಾಣುತ್ತಿದ್ದೀರಿ ಆದರೆ ನನಗೇಕೋ ನನ್ನೂರೆ ಚಂದ ಅನ್ನಿಸುತ್ತಿದೆ ಆದರೆ ಮರುಕ್ಷಣವೆ ವಾಸ್ತವದ ಚಕ್ರ ಸುತ್ತಲು ಶುರು ಮಾಡಿದಾಗ ಪರಿಸ್ಥಿತಿಯ ಎದುರು ಸೋಲಲೇಬೇಕು ಅದು ಅನಿವಾರ್ಯ ಅನ್ನಿಸುತ್ತಿದೆ.

ಇಷ್ಟೆಲ್ಲದರ ನಡುವೆ ಮಳೆಗಾಲ ಸಮೀಪಿಸುತ್ತಿರುವಾಗ ನಾನು ಅನುಭವಿಸಿದ ನನ್ನೂರಿನ ಆ ಸಮಯಗಳು ನೆನಪಿನ ಬುತ್ತಿಯಿಂದ ಪ್ರಸ್ತುತಕ್ಕೆ ಹಾದು ಹೊದವು ಅಪ್ಪಾ.ಅದೇಕೊ ಆ ಸಮಯ ಬಿಡದೇ ಕಾಡುತ್ತಿದೆ ಮಳೆಗೊಂದು ಸ್ವಾಗತನ್ನು ಮಡಿಬಿಡುತ್ತೇನೆ ಅಪ್ಪಾ..”ಎಂಥ ಸುಂದರ ಮಳೆಯೇ ನಿನ್ನ ಕಾಲ,ನಿನ್ನ ಆಗಮನ ಕೃಷಿಗೆ ಚೈತನ್ಯ ಕೊಡುವ ಸ್ಪಷ್ಟ ಕಾಲ. ಮಲೆನಾಡ ಮಳೆಗಾಲ ಅದೆಷ್ಟು ಸುಂದರ,ಹನಿ ಹನಿಯಲ್ಲೂ ಒಂದೊಂದು ಕಹಾನಿ.ಕಂಬಳಿ ಕೊಪ್ಪೆ,ಕರಿದ ಹಲಸಿನ ಹಪ್ಪಳ,ಸಂಡಿಗೆ,ಹಲಸಿನ ಕಡುಬು,ಬೆಚ್ಚನೆಯ ಹಾಸಿಗೆ,ತಣ್ಣನೆಯ ಮಾತುಕತೆ ವಾವ್ ! ನಿರೀಕ್ಷಿದರೂ,ನಿರೀಕ್ಷೆಗೊಂದು ಸಕಾರಾತ್ಮಕ ಉತ್ತರವಿಡುವ ಕಾಲ.ಪರಿಚಿತ ಮಲೆನಾಡ ಕೃಷಿಕರು ಅಪರಿಮಿತವಾಗಿ ನಿರೀಕ್ಷಿಸುತ್ತಿರುವ ಸುಂದರ ಕಾಲ.ಶಾಲಾ ಮಕ್ಕಳು ಕೈಲೋನೊಂದು ಕೊಡೆ ಹಿಡಿದು ಧೂ ಎಂದು ಸುರಿಯುತ್ತಿರುವ ಮಳೆಯಲ್ಲಿ ದೂರ ದೂರದಿಂದ ಶಾಲೆಗೆ ಖುಷಿಯಿಂದ ಬರುತ್ತಿರುವ ದೃಶ್ಯವನ್ನು ನೋಡಲು ಕಾತರ .ಅನುಭವಿಸಿದ ಆ ಕನ್ನಡ ಶಾಲೆಯ ಸುಂದರ ದಿನಗಳ ನೆನಪಿನ ಬುತ್ತಿ ತೆರೆದುಕೊಂಡರೆ ಕಣ್ಣಂಚಲ್ಲಿ ಹನಿ ನೀರು.ನಿನ್ನ ಬರುವಿಕೆ ನನ್ನ ನೆನಪಿನ ಬುತ್ತಿಯನ್ನು ತೆರೆದಿಟ್ಟಿದೆ.ಬಚ್ಚಿಟ್ಟ ನೆನಪು,ಬರೆದಿಟ್ಟ ಕವನ ನಿನ್ನ ಆಗಮನದಿಂದ ಮತ್ತೆ ತೆರೆದುಕೊಂಡಿದೆ.

ಹಂಚಿನ ಗಟ್ಟು ಮುಟ್ಟಾದ ಮನೆಯಲ್ಲಿ ತೊಟ್ಟಿಕ್ಕುವ ನಿನ್ನ ಹನಿ ನೀರಿಗೆ ಅದೆಷ್ಟು ಶಕ್ತಿ?ಕೆರೆ,ಬಾವಿಗಳನ್ನು ತುಂಬಿ ತುಳುಕಿಸಿ ಉಕ್ಕಿಸುವ ನಿನ್ನ ಆ ಶಕ್ತಿ ಇನ್ಯಾರಿಗೆದೆ?ಹೊಸ ಕೊಡೆಗಳು,ರೈನ್ ಕೋಟುಗಳು,ಮಳೆಗಾಲದ ಚಪ್ಪಲ್ಲಿಗಳು ಎಲ್ಲವು ಹೊಸತು.ಮಾವಿನ ಹಣ್ಣಿನ ರಸಾಯನ,ಹಲಸಿನ ಹಪ್ಪಳ,ಕಡುಬು,ಹಿತವಾದ ಚಳಿಗೆ ತಾಸಿಗೊಂದು ಚಾ,ಮನೆಯ ಹೆಂಗಸರಿಗೆ ಕೆಲಸವೋ ಕೆಲಸ, ಎಲ್ಲರು ನಿನ್ನನ್ನು ಬಯ್ಯುವರೆ.ಆದರೆ ನಿಂಗೊತ್ತು ಅದು ಪ್ರೀತಿಯ,ಸಾಮಾನ್ಯ ಬೈಗುಳ.ಎಷ್ಟು ಸುಂದರ ನಿನ್ನ ಆ ದಿನಗಳು.ಕರೆಂಟ್ ಇಲ್ಲದ ವಾರದ ದಿನಗಳನ್ನು ಪರಿಚಯಿಸಿರುವುದು ನೀನೆ ಅಲ್ಲವೇ? ಕೆ ಇ ಬಿ ಯ ಹೊಸಯುವಕರಿಗೆ ಜೋರು ಕೆಲಸ ನೀಡಿರುವುದು ನೀನೆ ಅಲ್ಲವೇ?ಶಾಲೆಗೇ ರಜಾ ಕೊಡಿಸಿ ಆ ಮಕ್ಕಳ ಮುಖದಲ್ಲಿ ಮುಗ್ಧ ನಗುವನ್ನು ನೋಡಲು ಬಯಸುತ್ತಿಯಾ ಅಲ್ಲವ ನೀನು?ನಿನ್ನ ಬರುವಿಕೆಗೆ ನಾನು ಕಾದಿರುವುದು ಇದನ್ನೆಲ್ಲಾ ನೋಡಲು. ನನ್ನ ಹಳೆಯ ನೆನಪಿಗೊಂದು ಸವಿ ಕ್ಷಣವ ಸೇರಿಸಲು…..

ನಿನ್ನ ಕಾಲದಲ್ಲಿ ಕೊನೆ ಗೌಡರಿಗೆ ಬಹಳ ಡಿಮ್ಯಾಂಡ್.ಅಡಿಕೆ ಬೆಲೆಯೇ ನಮ್ಮ ಜೀವ,ನಮಗು ಅಡಿಕೆಗೂ ತಾಯಿ ಮಗುವಿನ ಸಂಬಂಧ ಅದನ್ನು ನಾವು ಪ್ರೀತಿಸುತ್ತೇವೆ,ಪೂಜಿಸುತ್ತೇವೆ.ಒಂದು ವೇಳೆ ನಿನ್ನ ಪರ್ವ ಜೋರಾದರೆ ಮನೆಯ ಒಲೆಯ ಬಳಿ ಕುಳಿತ ಅಪ್ಪನ ಕೈ ತಲೆಯ ಮೇಲೆ……ಏಕೆ ಹೀಗಪ್ಪ ಎಂಬ ನಮ್ಮ ಪ್ರಶ್ನೆಗೆ ಅಪ್ಪನ ಉತ್ತರ ‘ಅಡಿಕೆ ಕೊಳೆ ರೋಗ’…ಆಗ ನಿನ್ನ ಮೇಲೆ ಹುಸಿ ಕೋಪ…ಲೆಕ್ಕ ತಪ್ಪಿ  ಸುರಿಯಬೇಡ ಪ್ಲೀಸ್.ಜೋಡೆತ್ತುಗಳಿಗೆ ಭಾರಿ ಕೆಲಸ ನಿನ್ನ ಕಾಲದಲ್ಲಿ..ಅವಕ್ಕೆಷ್ಟು ಹೊಡೆತ ಹಾಕಿಸಿದೆ ನೀನು?? ನೀರು ತುಂಬಿದ ಗದ್ದೆಗಳಲ್ಲಿ ಕೊಪ್ಪೆ ಸೂಡಿದವರ ಕೆಲಸ ಜೋರು…ಈಗೀಗ ಪವರ  ಟಿಲ್ಲರ್ ಗಳ ಸದ್ದು…ನೀರಾಟ,ಕೆಸರಾಟ, ದನ ಕಾಯುವಾಟ ಇದನ್ನೆಲ್ಲಾ ಮಲೆನಾಡ ಹುಡುಗರಿಗೆ ಕಲಿ,ಸಿದ್ದು ನೀನೆ ಅಲ್ಲವ? ಚೆಂದದ ನಿನ್ನ ಹನಿ ಕೆಸುವಿನೆಲೆಯ ನಿಲ್ಲುವುದೇ ಇಲ್ಲ , ನಿನ್ನ ಅದರ ಕಾಳಗ ನೋಡಲೆಷ್ಟು ಚೆಂದ……..

ನಿನ್ನ ಸುಂದರ ಹನಿಗಳ ಮಾಲೆ ನನ್ನ ನೆನಪಿನ ಕೊರಳಿಗೆ ಬಿದ್ದಿದೆ. ಮನಸ್ಸು ನಿನ್ನ ಆಗಮನಕ್ಕೆ ಹಾತೊರೆದಿದೆ,ಸ್ವಾಗತಿಸಿದೆ.ಒಂದಿಷ್ಟು ಸುಂದರ  ಈ ಭಾರಿಯೂ ನನ್ನದಾಗಿಸಿ ಹೋಗುತ್ತಿಯಾ ಬಿಡು ನೀನು…ಅಪ್ಪಿಕೊಳ್ಳಲು ಅಪ್ಪುಗೆಗು ಸಿಗಲ್ಲ ನೀನು…..ಕಾದಿರುವ ಭೂಮಿಗೊಂದು ತಮ್ಪೆರಗುವ ಶಸ್ತ್ರ ಮಾಡಿದ್ದೀಯ.ಮುಂದುವರೆಸು ನಿನ್ನ ಕೆಲಸವನ್ನು.ಮರಿಬೇಡ ನಮ್ಮನೆಗೂ ಬಾ.” ಕನಸುಗಳ ಅರಸಿ ಹೊರಡುವ ಪ್ರಯತ್ನ ನಡದೇ ಇದೆ ಅಪ್ಪ.ನೀನಗೊಂದು ಸಮಾದಾನ ಹೇಳುವ ಕಾಲ ನನಗೆ ಬೇಗ ಬರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.ಮೇಲಾಡಿರುವ ಮಾತುಗಳು ನನ್ನೊಡಲೊಳಗೆ ಹುದುಗಿಸಿಕೊಂಡಿದ್ದು.ಅನ್ಯತಾ ಭಾವಿಸಬೇಡ ಅಪ್ಪಾ.

ಇಂತಿ ನಿನ್ನ ಕನಸು

Facebook ಕಾಮೆಂಟ್ಸ್

Prasanna Hegde: ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ
Related Post