ಬೆಂಗಳೂರಿನ ಒಂದು ಐ.ಟಿ ಕಂಪನಿಯಲ್ಲಿ ರಶ್ಮಿ ಕೆಲಸ ಮಾಡುತ್ತಿದ್ದಳು. ಮನೆಯ ಹತ್ತಿರವೇ ಅವಳ ಆಫೀಸು ಇರುವುದರಿಂದ ಅವಳಿಗೆ ಬಸ್ಸಿನ ಅವಶ್ಯಕತೆಯಾಗಲಿ, ಸ್ವಂತ ವಾಹನದ ಅವಶ್ಯಕತೆಯಾಗಲಿ ಇರಲಿಲ್ಲ . ಪ್ರತಿದಿನವೂ ನಡೆದುಕೊಂಡೇ ಆಫೀಸಿಗೆ ಹೋಗುತ್ತಿದ್ದಳು. ಅವಳ ಆಫೀಸು ಹೆದ್ದಾರಿಯ ಆಬದಿಯಲ್ಲಿರುವದರಿಂದ ಹೆದ್ದಾರಿಯನ್ನು ಅವಳು ದಾಟಿ ಹೋಗಬೇಕಿತ್ತು. ದಿನವೂ ರಸ್ತೆ ದಾಟುವಷ್ಟರಲ್ಲಿ ಅವಳಿಗೆ ಸಾಕುಸಾಕಾಗುತ್ತಿತ್ತು ಅಷ್ಟೊಂದು ವಾಹನ ಸಂಚಾರ ಆ ರಸ್ತೆಯಲ್ಲಿ ಇರುತಿತ್ತು.
ಹೀಗೆ ಒಂದು ದಿನ ರಶ್ಮಿ ರಸ್ತೆ ದಾಟಲು ನಿಂತಾಗ ಅವಳ ಸಮೀಪದಲ್ಲಿ ಒಬ್ಬ ಅಂಧ ನಿಂತಿದ್ದ. ಅವನಿಗೆ ೨೦ರಹರೆಯವಿರಬಹುದು ಕೈಯಲ್ಲಿ ಕೋಲು ಹಿಡಿದು ರಸ್ತೆ ದಾಟುಲು ಸಿದ್ಧನಾಗುತ್ತಿದ್ದ. ವಾಹನ ಸಂಚಾರದ ಶಬ್ದವನ್ನು ತನ್ನ ಕಿವಿಗಳಿಂದ ಆಲಿಸುತ್ತಿದ್ದ. ಇದನ್ನು ಕಂಡ ರಶ್ಮಿ ಅವನಿಗೆ ಸಹಾಯ ಮಾಡಲು ನಿಶ್ಚಯಸಿ ಅವನ ಬಳಿಗೆ ಬಂದು ” ರಸ್ತೆ ದಾಟಲು ನಿಮಗೆ ನಾನು ಸಹಾಯ ಮಾಡುತ್ತೇನೆ” ಎಂದು ಅವನ ಕೈ ಹಿಡಿದು ರಸ್ತೆ ದಾಟಲು ಮುಂದಾದಳು.
ವಾಹನ ಸಂಚಾರ ದಟ್ಟವಾಗಿದ್ದ ಕಾರಣ ರಸ್ತೆ ದಾಟಲು ಕೆಲ ಸಮಯ ಬೇಕಾಯಿತು. ರಸ್ತೆ ದಾಟಿದ ನಂತರ ರಶ್ಮಿ ಆ ಅಂಧನಿಗೆ ಅವನೆಲ್ಲಿಗೆ ತಲುಪಬೇಕು ಎಂದು ಕೇಳಲು ಅವನು ” ನಾನು ಹತ್ತಿರದ ಅಂಧ ಮಕ್ಕಳ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಪ್ರತಿದಿನವೂ ಯಾರೋ ಒಬ್ಬರು ರಸ್ತೆದಾಟಲು ಸಹಾಯ ಮಾಡುತ್ತಾರೆ.ಇಂದು ನೀವು ಮಾಡಿದಿರಿ ಧನ್ಯವಾದಗಳು. ಇಲ್ಲಿಂದ ನಾನು ಆರಾಮಾಗಿ ಹೋಗಬಲ್ಲೆ ” ಎಂದು ನಗುತ್ತಲೇ ಹೇಳಿದನು.ರಶ್ಮಿ ಕೂಡ ಅವನನ್ನು ರಸ್ತೆ ದಾಟಿಸಿದ ತೃಪ್ತಿಯಿಂದ ಆಫೀಸಿಗೆ ಹೊರಟಳು..
ರಶ್ಮಿ ದಿನವೂ ಅವನನ್ನು ರಸ್ತೆ ದಾಟಲು ಸಹಾಯ ಮಾಡುತ್ತಿದ್ದಳು. ಅವರಿಬ್ಬರ ಸ್ನೇಹ ಎಷ್ಟು ಬೆಳಿತೆಂದರೆ ಕೆಲವೊಮ್ಮೆ ರಶ್ಮಿ ಅವನಿಗಾಗಿ ಕಾದು ಅವನು ಬಂದ ಮೇಲೆ ಅವನನ್ನು ರಸ್ತೆ ದಾಟಿಸಿ ಆಫೀಸಿಗೆ ಹೋಗುತ್ತಿದ್ದಳು. ಹೀಗೆ ೨ ತಿಂಗಳು ಕಳೆಯಿತು..
ಅದೊಂದು ದಿನ ರಶ್ಮಿ ಆಫೀಸಿಗೆ ಹೊರಡುವಾಗ ಆ ಅಂಧ ಯುವಕ ಬರಲೇ ಇಲ್ಲ. ಅವನಿಗಾಗಿ ತುಂಬಾ ಹೊತ್ತು ಕಾದು ಆಫೀಸಿಗೆ ಹೋಗಿದ್ದಳು. ಮರುದಿನ ಮತ್ತೇ ಅವನು ಬಾರದ ಕಾರಣ ಅವಳಿಗೆ ಕೊಂಚ ಗಾಬರಿಯಾಯಿತು. ಅಂದು ಆಫೀಸಿಗೆ ರಜ ಹಾಕಿ ಅವನನ್ನು ಹುಡುಕಲು ಹತ್ತಿರದ ಅಂಧರ ಶಾಲೆಗೆ ತೆರಳಿದಳು.
ಶಾಲೆಯಲ್ಲಿ ಅವನ ಬಗ್ಗೆ ವಿಚಾರಿಸಿದಾಗ ಶಾಲೆಯ ಒಬ್ಬ ಸಿಬ್ಬಂದಿ ” ಅವನ ಹೆಸರು ರಾಮು. ಅವನು ಕಡುಬಡತನದಿಂದ ಬಂದ ಹುಡುಗ. ಅವನ ಅಮ್ಮ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಎರಡು ದಿನದ ಕೆಳಗೆ ಅವನ ಅಮ್ಮನಿಗೆ ತೀರಾ ಹುಷಾರಿಲ್ಲದ ಕಾರಣ ಕೆಲಸ ಬಿಟ್ಟು ಅವಳನ್ನು ನೋಡಿಕೊಳ್ಳಲು ಹೋಗಿದ್ದಾನೆ.” ಎಂದು ವಿವರಿಸಿದನು. ಇದನ್ನು ಕೇಳಿದ ರಶ್ಮಿಗೆ ತುಂಬಾ ದುಃಖವಾಯಿತು, ಅಷ್ಟೊಂದು ನೋವಿದ್ದರೂ ಅವನು ತನ್ನೊಂದಿಗೆ ನಗುನಗುತ್ತಲೇ ಮಾತಾಡಿದ್ದು ನೆನಪಾಗಿ ಅವಳ ಕಣ್ಣು ಒದ್ದೆಯಾಯಿತು.
ವಾಪಸ್ಸು ಬರುತ್ತಿರುವಾಗ ಶಾಲೆಯ ಸಿಬ್ಬಂದಿ ಒಂದು ಕವರ್ ಕೊಟ್ಟು ” ನನ್ನ ಕೇಳಿ ಒಬ್ಬಳು ಯುವತಿ ಬಂದರೆ ಈ ಕವರನ್ನು ಕೊಡು ಅಂತ ಹೇಳಿದ್ದ ಮೇಡಂ ” ಎಂದು ಅವಳ ಕೈಗೆ ಒಂದು ನೀಲಿ ಬಣ್ಣದ ಪ್ಯಾಕೆಟ್ ಕೊಟ್ಟನು.
ರಶ್ಮಿಗೆ ಒಂದು ಕ್ಷಣ ಕುತೂಹಲ ಉಂಟಾಯಿತು. ಕೂಡಲೇ ಆ ಪ್ಯಾಕೆಟ್ ತೆಗೆದು ನೋಡುತ್ತಾಳೆ. ಅದರಲ್ಲಿ ಒಂದು ಗ್ರೀಟಿಂಗ್ ಕಾರ್ಡ್ ಇತ್ತು . ಅದರ ಮೇಲೆ ” ದಿನವೂ ನೀವು ನನ್ನ ಕೈ ಹಿಡಿದು ರಸ್ತೆ ದಾಟಿಸುವಾಗ ನಿಮ್ಮ ಸ್ಪರ್ಶ, ತೀರಿ ಹೋದ ನನ್ನ ‘ಅಕ್ಕನ ‘ ನೆನಪು ತರುತ್ತಿತ್ತು. ಚಿಕ್ಕ ವಯಸ್ಸಿನಲ್ಲಿ ಅವಳೇ ನನಗೆ ರಸ್ತೆ ದಾಟಲು ಸಹಾಯ ಮಾಡುತ್ತಿದ್ದಳು. ನಿಮ್ಮಲ್ಲಿ ನನ್ನ ಅಕ್ಕನ ‘ಕಂಡೆ’. ನಿಮಗೆ ತುಂಬಾ ಧನ್ಯವಾದಗಳು ” ಎಂದು ಬರೆದಿತ್ತು. ಇದನ್ನು ಓದಿದ ರಶ್ಮಿಗೆ. ಮಾತೇ ಹೊರಡಲಿಲ್ಲ. ಅವಳ ಕಣ್ಣಿನಲ್ಲಿ ಅದಾಗಲೇ ನೀರಾಡಿತ್ತು. ಅಕಸ್ಮಾತಾಗಿ ಸಿಕ್ಕ ಒಬ್ಬ ಅಂಧನಿಗೆ ಅಕ್ಕನ ಪ್ರೀತಿ ತೋರಿದ ಸಾರ್ಥಕತೆಯೂ ಅವಳದ್ದಾಗಿತ್ತು.
ನಮ್ಮ ಬದುಕಿನಲ್ಲೂ ಹೀಗೆ ಆಕಸ್ಮಾತಾಗಿ ಯಾರೋ ಸಿಗುತ್ತಾರೆ. ಪರಿಚಯವಿರದಿದ್ದರೂ ,ಸಂಬಂಧವಿರದಿದ್ದರೂ ನಮಗೆ ಸಹಾಯ ಮಾಡಿ ಹೋಗಿರುತ್ತಾರೆ. ಅವರ ಮುಖ ಪರಿಚಯವೂ ಕೂಡ ನಮಗೆ ನೆನಪಿಗೆ ಬರುವುದಿಲ್ಲ. ನಮ್ಮ ಅನಿರೀಕ್ಷಿತ ಬದುಕಿನಲ್ಲಿ ಅಕಸ್ಮಾತಾಗಿ ಬಂದು ನಮ್ಮ ಬದುಕಿಗೆ ಅವರ ಒಂದಿಷ್ಟು ನೆನಪು ಕೊಟ್ಟು ಹೋಗಿರುತ್ತಾರೆ.
ಅಂತಹ ಅನಿರೀಕ್ಷಿತ ತಿರುವುಗಳಿಂದಲೇ ನಮ್ಮ ಬದುಕು ಸುಂದರವಾಗುತ್ತ ಹೋಗುತ್ತದೆ.
ಲೈಫ್ ಇಸ್ ಬ್ಯೂಟಿಫುಲ್ !
Facebook ಕಾಮೆಂಟ್ಸ್